Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಆನಂದದಿಂದ ಬದುಕುವ ಕಲೆ ಅರಿತುಕೊಳ್ಳದಿದ್ದರೆ…

Friday, 13.10.2017, 3:03 AM       No Comments

ಹಾಡುವ ವಿಷಯದಲ್ಲಿ, ಕುಣಿಯುವುದರಲ್ಲಿ, ಶಿಖರವನ್ನು ಹತ್ತುವುದರಲ್ಲಿ ಅಥವಾ ಹಣ ಮಾಡುವುದರಲ್ಲಿ ನಿಶ್ಚಿತತೆ ಇಲ್ಲ. ಆದರೆ ಆನಂದಮಯವಾಗಿದ್ದರೆ ಜೀವನದ ಪ್ರಯಾಣವು ಸಂಪೂರ್ಣ ಅನಾಯಾಸವಾಗಿ ಯಾವುದೇ ಒತ್ತಡ ಅಥವಾ ಆಯಾಸ ಇಲ್ಲದಂತೆ ಸಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

‘ಯೋಗ’ ವೈದ್ಯಕೀಯ ಫಿಜಿಯಾಲಜಿ ಇದ್ದಂತೆ. ಯೋಗ ಸಂಬಂಧಿತ ಫಿಜಿಯಾಲಜಿ ಇದೆ. ಯೋಗದಲ್ಲಿ ನಾವು ದೇಹವನ್ನು ಐದು ಪದರಗಳಲ್ಲಿ ನೋಡುತ್ತೇವೆ. ಮೊದಲ ಪದರವಾದ ಅನ್ನಮಯ ಕೋಶವು ಆಹಾರ-ದೇಹವೆನ್ನಿಸಿಕೊಳ್ಳುತ್ತದೆ. ನೀವು ಈಗ ‘ದೇಹ’ ಎನ್ನುವುದು ಕೇವಲ ಆಹಾರದ ಒಂದು ಮೂಟೆ.

ಎರಡನೆಯ ಪದರವು ಮನೋಮಯ ಕೋಶ. ಅದು ಮಾನಸಿಕ ದೇಹ. ಈಗೆಲ್ಲ ವೈದ್ಯರುಗಳು ನೀವೊಬ್ಬರು ‘ಸೈಕೋ-ಸೋಮಾ (ಮನಃಶರೀರಿ)’ ಎನ್ನುತ್ತಾರೆ. ಹಾಗೆಂದರೆ ನಿಮ್ಮ ಮನಸ್ಸಿಗೆ ಏನಾಗುವುದೋ ಅವೆಲ್ಲವೂ ದೇಹಕ್ಕೂ ಆಗುವುದೆಂದರ್ಥ. ಏಕೆಂದರೆ ನೀವು ಯಾವುದನ್ನು ‘ಮನಸ್ಸು’ ಎಂದು ಕರೆಯುವಿರೋ ಅದು ಕೇವಲ ಒಂದು ಜಾಗವಲ್ಲ; ಪ್ರತಿ ಜೀವಕೋಶವೂ ಅದರದೇ ಆದ ಬುದ್ಧಿಶಕ್ತಿ ಹೊಂದಿದೆ, ಆದ್ದರಿಂದ ಇಲ್ಲೊಂದು ಸಂಪೂರ್ಣ ಮಾನಸಿಕ ದೇಹವಿದೆ. ಮಾನಸಿಕ ದೇಹಕ್ಕೆ ಏನಾದರೂ, ಅದೇ ಭೌತಿಕ ದೇಹಕ್ಕೂ ಘಟಿಸುತ್ತದೆ. ಅದೇ ರೀತಿ ಭೌತಿಕ ದೇಹಕ್ಕೆ ನಡೆದಿದ್ದೆಲ್ಲ ಮಾನಸಿಕ ದೇಹಕ್ಕೂ ನಡೆಯುತ್ತದೆ. ಮನಸ್ಸಿನ ಮಟ್ಟದಲ್ಲಿನ ಪ್ರತಿಯೊಂದು ಏರಿಳಿತಕ್ಕೆ ಒಂದು ರಾಸಾಯನಿಕ ಪ್ರತಿಕ್ರಿಯೆ ಇರುತ್ತದೆ. ಹಾಗೆಯೇ ಪ್ರತಿ ರಾಸಾಯನಿಕ ಕ್ರಿಯೆಯೂ ಒಂದು ಏರಿಳಿತವನ್ನು ಮನಸ್ಸಿನ ಸ್ತರದ ಮೇಲೆ ಹುಟ್ಟಿಸುತ್ತದೆ. ಇದರಿಂದ ಮನಃಶರೀರಿ ರೋಗಗಳ ಒಂದು ವ್ಯಾಪಕ ಋಜುವಾತು ಆಗಿದೆ.

ಭೌತಿಕ ದೇಹ ಮತ್ತು ಮಾನಸಿಕ ದೇಹ ಎರಡೂ ನಿಮ್ಮ ಹಾರ್ಡ್​ವೇರ್ ಮತ್ತು ಸಾಫ್ಟ್​ವೇರ್. ಹಾರ್ಡ್​ವೇರ್ ಮತ್ತು ಸಾಫ್ಟ್​ವೇರ್​ಗಳನ್ನು ಒಳ್ಳೆಯ ಗುಣಮಟ್ಟದ ವಿದ್ಯುಚ್ಛಕ್ತಿಯ ಮೂಲಕ್ಕೆ ಪ್ಲಗ್ ಮಾಡದಿದ್ದರೆ ಅವು ಯಾವ ಕೆಲಸವನ್ನೂ ಮಾಡುವುದಿಲ್ಲ. ಅಲ್ಲವೇ? ಆದ್ದರಿಂದ ದೇಹದ ಮೂರನೆಯ ಪದರವು ಪ್ರಾಣಮಯ ಕೋಶ ಅಥವಾ ಚೈತನ್ಯ ದೇಹ. ಚೈತನ್ಯ ದೇಹವನ್ನು ಸರಿಯಾದ ಸಮತೋಲನದಲ್ಲಿಟ್ಟರೆ, ಪೂರ್ತಿಯಾಗಿ ಚಟುವಟಿಕೆಯಿಂದ ಇಟ್ಟರೆ, ಭೌತಿಕ ದೇಹದಲ್ಲಾಗಲೀ, ಮಾನಸಿಕ ದೇಹದಲ್ಲಾಗಲೀ ರೋಗವೆನ್ನುವುದೇ ಇರುವುದಿಲ್ಲ.

‘ರೋಗ’ ಎಂದಾಗ ನಾನು ಮಾತಾಡುತ್ತಿರುವುದು ದೀರ್ಘಕಾಲದ ಕಾಯಿಲೆಗಳ ಬಗ್ಗೆಯೇ ಹೊರತು ಸಾಂಕ್ರಾಮಿಕ ರೋಗಗಳ ಬಗ್ಗೆ ಅಲ್ಲ. ಸಾಂಕ್ರಾಮಿಕ ರೋಗಗಳು ಹೊರಗಿನ ಜೀವಿಗಳಿಂದಾಗಿ ಉಂಟಾಗುತ್ತವೆ. ಆದರೆ ಮನುಷ್ಯರು ಪ್ರತಿದಿನ ಅವರದೇ ರೋಗಗಳನ್ನು ಉತ್ಪಾದಿಸಿಕೊಳ್ಳುತ್ತಾರೆ. ಚೈತನ್ಯ ದೇಹವು ಸಂಪೂರ್ಣ ಸ್ಪಂದನ ಮತ್ತು ಸರಿಯಾದ ಸಮತೋಲನದಲ್ಲಿದ್ದರೆ, ರೋಗವು ಭೌತಿಕ ದೇಹದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಅಲ್ಲಿ ಏನೇ ರೋಗವಿದ್ದರೂ, ಅದಾಗಿಯೇ ಪ್ರತ್ಯಕ್ಷವಾಗುವುದು. ಏಕೆಂದರೆ ಯಾವುದೋ ಕಾರಣಕ್ಕಾಗಿ ಚೇತನವು ಕೆಲಸ ಮಾಡಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲವಾದ್ದರಿಂದ.

ದೈಹಿಕ ರೋಗಗಳನ್ನೂ, ಕೆಲ ಮಾನಸಿಕ ರೋಗಗಳನ್ನೂ ಕೇವಲ ಕೆಲವು ಸರಳ ಯೋಗಾಭ್ಯಾಸಗಳಿಂದ ದೂರ ಮಾಡಿಕೊಂಡ ಸಾವಿರಾರು ಜನರನ್ನು ನಾನು ತೋರಿಸಬಲ್ಲೆ. ಆದರೆ ಈ ಯೋಗಾಭ್ಯಾಸಗಳು ರೋಗದತ್ತ ಗುರಿ ಮಾಡಿಲ್ಲ. ಈ ಅಭ್ಯಾಸವು ಸರಿಯಾದ ಸ್ಪಂದನ ಮತ್ತು ಸಮತೋಲನವನ್ನು ಚೈತನ್ಯದೇಹದಲ್ಲಿ ತರಲೆಂದು ಮಾತ್ರ. ಪ್ರಾಣಮಯ ಕೋಶವನ್ನು ಸರಿಯಾಗಿ ನೋಡಿಕೊಂಡರೆ, ದೈಹಿಕ ಯೋಗಕ್ಷೇಮವು ಸ್ವಾಭಾವಿಕವಾಗಿ ಚೆನ್ನಾಗಿರುತ್ತದೆ. ಉಳಿದ ಆಯಾಮಗಳು ಕೂಡ ನಿಮಗೆ ಸಿಗುತ್ತವೆ. ಏಕೆಂದರೆ ಪ್ರಾಣಮಯಕೋಶವು ಹೆಚ್ಚು ಸೂಕ್ಷ್ಮ ಮತ್ತು ಸುಲಭಲಭ್ಯವಾಗುತ್ತದೆ. ಚೈತನ್ಯದೇಹವನ್ನು ಬಳಸಲು ಅನೇಕ ಯೋಗದ ಕಾರ್ಯವಿಧಾನಗಳಿವೆ.

ಈ ಮೂರು ದೇಹದ ಆಯಾಮಗಳು-ಅನ್ನಮಯ ಕೋಶ, ಮನೋಮಯ ಕೋಶ ಮತ್ತು ಪ್ರಾಣಮಯ ಕೋಶ ಇವು ಅವುಗಳ ಭೌತಿಕ ಅಸ್ತಿತ್ವಗಳು. ಉದಾಹರಣೆಗೆ, ಒಂದು ಲೈಟ್ ಬಲ್ಬ್; ಅದು ಭೌತಿಕ. ಅದರ ಹಿಂದಿನ ವಿದ್ಯುಚ್ಛಕ್ತಿ ಕೂಡ ಭೌತಿಕ, ಆದರೆ ಹೆಚ್ಚು ಸೂಕ್ಷ್ಮವಾದದ್ದು. ಬಲ್ಬ್​ನಿಂದ ಹೊಮ್ಮುವ ಬೆಳಕು ಕೂಡ ಭೌತಿಕವಾದರೂ ಅದು ಇನ್ನೂ ಹೆಚ್ಚು ಸೂಕ್ಷ್ಮ. ಬಲ್ಬ್, ವಿದ್ಯುಚ್ಛಕ್ತಿ, ಬೆಳಕು- ಈ ಮೂರು ಭೌತಿಕವಾದವುಗಳೇ. ಒಂದನ್ನು ನೀವು ಕೈಯಲ್ಲಿ ಹಿಡಿಯಬಹುದು; ಮತ್ತೊಂದನ್ನು ಅರಿಯಬಹುದು; ಮತ್ತೆ ಮೂರನೆಯದಂತೂ ಇನ್ನೂ ಹೆಚ್ಚಿನ ಸೂಕ್ಷ್ಮ ಗ್ರಹಿಕೆಯನ್ನು ಬೇಡುತ್ತದೆ, ಉದಾಹರಣೆಗೆ, ಕಣ್ಣು ಅದನ್ನು ಅರಿಯುತ್ತದೆ. ನೀವು ಇವೆಲ್ಲವನ್ನೂ ಅನುಭವಿಸಲು ಸಾಧ್ಯ, ಏಕೆಂದರೆ ಇವನ್ನು ಅನುಭವಿಸಲು ನಿಮಗೆ ಗ್ರಹಣ ಪ್ರಜ್ಞೆ ಇದೆ. ಆದರೆ ಭೌತಿಕವಾದುದರ ಹೊರತು ನಿಮಗೆ ಬೇರೆ ಯಾವುದೇ ಗ್ರಹಿಕೆ ಇಲ್ಲ.

ನಾಲ್ಕನೆಯ ಪದರವು ವಿಜ್ಞಾನಮಯ ಕೋಶ ಅಥವಾ ಸಂಪೂರ್ಣ ಅವಿಚ್ಛಿನ್ನ ದೇಹ. ವಿಜ್ಞಾನಮಯವು ಅತೀತವಾದ ಸ್ಥಿತಿ. ಅದು ಭೌತಿಕವೂ ಅಲ್ಲ, ಅಭೌತಿಕವೂ ಅಲ್ಲ; ಅದು ಈ ಎರಡರ ನಡುವಿನ ಕೊಂಡಿ. ಇದು ನಿಮ್ಮ ಈಗಿನ ಅನುಭವದ ಮಟ್ಟದಲ್ಲಿ ಇಲ್ಲ. ಏಕೆಂದರೆ ನಿಮ್ಮ ಅನುಭವಗಳು ನಿಮ್ಮ ಪಂಚೇಂದ್ರಿಯಗಳಿಗೆ ಸೀಮಿತವಾಗಿವೆ.

ಐದನೆಯ ಪದರವೇ ಆನಂದಮಯ ಕೋಶ. ಅದು ಭೌತಿಕಕ್ಕೆ ಆಚೆಯದು. ಆನಂದ ಎಂದರೆ ತಿಳಿದಿದೆ. ಅದು ನಮ್ಮ ಭೌತಿಕ ಸಾಮ್ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಈ ಆಯಾಮವು ಭೌತಿಕಕ್ಕೆ ಹೊರಗಿರುವ ಇದನ್ನು ವಿವರಿಸಲಾಗಲೀ, ರೂಪಿಸಲಾಗಲೀ ಸಾಧ್ಯವಿಲ್ಲ. ಅದರಿಂದ ನಾವು ಕೇವಲ ಅನುಭವದ ಬಗ್ಗೆ ಮಾತ್ರ ಮಾತಾಡುವೆವು. ನಮ್ಮ ಎಲ್ಲದಕ್ಕೂ ಮೂಲವಾದದ್ದು ಭೌತಿಕ. ಆದರೆ ಭೌತಿಕಕ್ಕೆ ಆಚೆಗಿನ ಈ ಅಂಶದೊಂದಿಗೆ ಸಂಪರ್ಕವಿಟ್ಟುಕೊಂಡಾಗ ನಾವು ಆನಂದಭರಿತರಾಗುವೆವು. ನಮ್ಮ ಅನುಭವಕ್ಕೆ ಉಲ್ಲೇಖವಾಗಿ ಇದನ್ನು ನಾವು ಆನಂದಮಯ ದೇಹ ಎಂದು ಕರೆಯುವೆವು. ವಿವರಿಸಲಾಗದ, ನಿರೂಪಣೆ ನೀಡಲಾಗದ ಈ ಅಭೌತಿಕ ಸ್ವಭಾವದ ಈ ಆಯಾಮವನ್ನು ನೀವು ರ್ಸ³ಸಿದರೆ ಅದು ಒಂದು ಅಗಾಧ ಆನಂದಮಯದ ಪ್ರಜ್ಞೆಯನ್ನು ಹುಟ್ಟಿಸುತ್ತದೆ. ಅದಕ್ಕೇ ಇದನ್ನು ಆನಂದಮಯ ದೇಹ ಎನ್ನುತ್ತಾರೆ.

ದೇಹದ ಈ ಐದು ಪದರಗಳು- ದೈಹಿಕ, ಮಾನಸಿಕ ಮತ್ತು ಚೈತನ್ಯವಂತ ದೇಹಗಳು ಪರಿಪೂರ್ಣವಾಗಿ ಸಾಲಾಗಿದ್ದರೆ, ನೀವು ಆನಂದಮಯ ದೇಹಕ್ಕೆ ಸಂಪರ್ಕ ಪಡೆಯುವಿರಿ. ಬಹಳ ಒಳಗಿನ ಅಭೌತಿಕ ಸ್ವಭಾವವು ತನ್ನ ಅಭಿವ್ಯಕ್ತಿಯನ್ನು ಈ ಮೂರು ಮೇಲ್ಪದರಗಳನ್ನು ಆವರಿಸಿ ಕಂಡುಕೊಳ್ಳುತ್ತದೆ.

ಬಾಹ್ಯ ಯಥಾರ್ಥಗಳ ವಿಷಯಕ್ಕೆ ಬಂದರೆ ನಮ್ಮಲ್ಲಿ ಪ್ರತಿಯೊಬ್ಬರೂ ಒಂದೊಂದರಲ್ಲಿ ಸಮರ್ಥರು. ಒಬ್ಬರು ಮಾಡುವುದನ್ನು ಮತ್ತೊಬ್ಬರು ಮಾಡಲು ಸಮರ್ಥರಿಲ್ಲದಿರಬಹುದು. ಆದರೆ ಆಂತರಂಗಿಕ ಯಥಾರ್ಥಗಳಿಗೆ ಬಂದರೆ ನಾವೆಲ್ಲರೂ ಸಮಾನ ಸಮರ್ಥರು. ಪ್ರತಿ ಮನುಷ್ಯನೂ ಆನಂದಮಯ ರೀತಿಯಲ್ಲಿ ಜೀವನವನ್ನು ಅನುಭವಿಸಲು ಸಮರ್ಥ. ಹಾಡುವ ವಿಷಯದಲ್ಲಿ, ಕುಣಿಯುವುದರಲ್ಲಿ, ಶಿಖರವನ್ನು ಹತ್ತುವುದರಲ್ಲಿ ಅಥವಾ ಹಣ ಮಾಡುವುದರಲ್ಲಿ ನಿಶ್ಚಿತತೆ ಇಲ್ಲ. ಆದರೆ ಜೀವನದ ಅನುಭವವನ್ನು ನಿಮಗೆ ಇಲ್ಲವೆನ್ನಲಾಗದ ಒಂದು ಪರಮಾವಧಿಯ ಆಹ್ಲಾದತೆ ಮತ್ತು ಸಾಮರಸ್ಯದ ಆನಂದಮಯ ಅನುಭವವಾಗಿ ಮಾಡಬಹುದು, ನಿಮಗೆ ಇಷ್ಟವಿದ್ದರೆ. ಜೀವನದ ಪ್ರಯಾಣವು ಸಂಪೂರ್ಣ ಅನಾಯಾಸವಾಗಿ, ಸಂಪೂರ್ಣ ಸಂಭಾವ್ಯ ಶಕ್ತಿಯಲ್ಲಿ, ಯಾವುದೇ ಒತ್ತಡ ಅಥವಾ ಆಯಾಸ ಇಲ್ಲದಂತೆ ಸಾಗುತ್ತದೆ. ನೀವು ನಿಮ್ಮ ಜೀವನದೊಂದಿಗೆ ನಿಮಗೆ ಬೇಕಾದ ಹಾಗೆ ಆಡಿಕೊಳ್ಳಬಹುದು. ಆದರೆ ಜೀವನವು ನಿಮ್ಮ ಮೇಲೆ ಒಂದು ಗೀರು ಗೆರೆ ಕೂಡ ಬಿಡುವಂತಿಲ್ಲ.

ಅಗಸ್ತ್ಯರು ಸಪ್ತ ಋಷಿಗಳಲ್ಲಿ ಅಗ್ರಗಣ್ಯರು. ಅವರು ಇಡೀ ಭಾರತವನ್ನು ಸಂದರ್ಶಿಸಿದರು. ಹಾಗಾಗಿ ನೀವು ಈ ದೇಶದ ಯಾವುದೇ ಭಾಗಕ್ಕೆ ಹೋದರೂ ಅಗಸ್ಱರ ಬಗ್ಗೆ ಐತಿಹ್ಯಗಳು ಸಿಗುತ್ತವೆ. ಅವರು ಮಾಡಿರುವ ಕೆಲಸದ ಮೊತ್ತವನ್ನು ನೋಡುವುದಾದರೆ, ಅವರು ನಡೆದಿರುವ ದೂರವನ್ನು ಗ್ರಹಿಸುವುದಾದರೆ, ಅಗಸ್ಱ ಋಷಿಗಳು ಒಂದು ವಿಶಿಷ್ಟ ಸಮಯದ ವ್ಯಾಪ್ತಿಯಲ್ಲಿ ಜೀವಿಸಿದ್ದಿರಬೇಕು. ಜನರ ಪ್ರಕಾರ, ಅಗಸ್ಱರು ಇವೆಲ್ಲವನ್ನೂ ಸಾಧಿಸಲು ನಾಲ್ಕು ಸಾವಿರ ವರ್ಷಗಳನ್ನು ತೆಗೆದುಕೊಂಡರಂತೆ!! ನಮಗೆ ಅದು ನಾಲ್ಕು ಸಾವಿರವೋ, ನಾನ್ನೂರೋ ತಿಳಿಯದು. ಆದರೆ ಅವರು ಖಂಡಿತವಾಗಿ ದೀರ್ಘಾಯುಷಿಗಳಾಗಿ ಜೀವಿಸಿದ್ದಿರಬೇಕು.

ಅಗಸ್ತ್ಯರ ಮತ್ತು ಇತರ ವ್ಯವಸ್ಥೆಗಳ ನಡುವಿನ ಒಂದು ಗಮನಾರ್ಹ ವ್ಯತ್ಯಾಸವೆಂದರೆ, ಇತರ ವ್ಯವಸ್ಥೆಗಳು ತಮ್ಮ ಅಧ್ಯಾತ್ಮವನ್ನು ಬೆಳೆಸಲು ಅನೇಕ ವಸ್ತುಗಳು ಮತ್ತು ಮತಕ್ರಿಯಾವಿಧಾನಗಳನ್ನು ಬಳಸುತ್ತವೆ. ಆದರೆ ಅಗಸ್ತ್ಯರು ದೇಹ, ಉಸಿರು ಮತ್ತು ಚೇತನಗಳ ಹೊರತಾಗಿ ಬೇರೆ ಯಾವ ವಸ್ತುವನ್ನೂ ಆಧ್ಯಾತ್ಮಿಕ ಸಲಕರಣೆಗಳನ್ನಾಗಿ ಬಳಸಲಿಲ್ಲ. ಅವರು ಜೀವನದ ಈ ತುಣುಕನ್ನು ಉಪಯೋಗಿಸಿ ಕೆಲಸ ಮಾಡಿದರು. ಇದು ಅನನ್ಯವಾದದ್ದು.

ಕ್ರಿಯಾಯೋಗ ರೀತಿಗಳ ಮೇಲೆ ಅಗಸ್ತ್ಯರು ಪ್ರಭುತ್ವ ಸಾಧಿಸಿದರು. ಅವರು ಎಲ್ಲಿಗೆ ಹೋದರೂ ಅಲ್ಲಿ ಈ ಅತ್ಯಂತ ಶಕ್ತಿಯುತ ಯೋಗದ ವಿಧಾನವನ್ನು ಸ್ಥಾಪಿಸಿದರು. ಕ್ರಿಯಾ ಎಂದರೆ ಒಂದು ಆಂತರಂಗಿಕ ಚಟುವಟಿಕೆ. ಇದರಿಂದ ನೀವು ಈ ಜೀವನವನ್ನು ಸಂಪೂರ್ಣವಾಗಿ ಬಿಡಿಬಿಡಿ ಭಾಗ ಮಾಡಿ ಮತ್ತೆ ಒಟ್ಟಿಗೆ ಸೇರಿಸಿ ಜೋಡಿಸಬಹುದು. ಇಂದು ಯಾರಾದರೂ ಈ ರೀತಿಯ ಕ್ರಿಯಾದ ಸಂಪ್ರದಾಯಕ್ಕೆ ಸೇರಿದ್ದರೆ ಅವರು ಅಗಸ್ತ್ಯ ಮುನಿಯನ್ನು ಅದರ ಸರ್ವಶ್ರೇಷ್ಠ ಪ್ರತಿಪಾದಕರು ಎಂದು ಗುರುತಿಸುತ್ತಾರೆ.

ಆಧ್ಯಾತ್ಮಿಕ ಕಾರ್ಯವಿಧಾನವನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರುವ ವಿಷಯದಲ್ಲಿ, ಪಾಠದಂತಲ್ಲದೇ, ತತ್ವಶಾಸ್ತ್ರದಂತಲ್ಲದೇ, ಅಥವಾ ಒಂದು ಅಭ್ಯಾಸದಂತಲ್ಲದೇ, ಆದರೆ ಜೀವನವೇ ಅದೆಂಬಂತೆ ಮಾಡುವ ವಿಷಯದಲ್ಲಿ, ಕೇವಲ ಕೆಲವು ಯೋಗಿಗಳು ಮಾತ್ರವೇ ಸಂಭಾಳಿಸಿದರು. ಅವರು ಭೂಪ್ರದೇಶವನ್ನು ಪರಿವರ್ತಿಸಿದರು. ಅವರಲ್ಲಿ ಅಗಸ್ತ್ಯ ಮುನಿ ಅತ್ಯಂತ ಪರಿಣಾಮಕಾರಿ.

ನೀವು ನಿಮ್ಮ ಜೀವನದೊಂದಿಗೆ ನಿಮಗೆ ಬೇಕಾದಂತೆ ಆಡಿಕೊಳ್ಳಬಹುದು, ಆದರೆ ಜೀವನಕ್ಕೆ ನಿಮ್ಮ ಮೇಲೆ ಒಂದು ಗೀರು ಗುರುತನ್ನೂ ಬಿಡಲಾಗದು. ಪ್ರತಿ ಮನುಷ್ಯನೂ ಹೀಗೆ ಬದುಕಲು ಸಮರ್ಥನಿದ್ದಾನೆ.

– ಸದ್ಗುರು

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂರ್ಪಸಿ- [email protected])

Leave a Reply

Your email address will not be published. Required fields are marked *

Back To Top