Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಆದ್ರೆ ಆರಿದ್ರ, ಆಗದೇ ಹೋದ್ರೆ ದರಿದ್ರ…!

Sunday, 23.07.2017, 3:03 AM       No Comments

| ಪ್ರೋ. ಎಂ ಕೃಷ್ಣೇಗೌಡ

ಹುಯ್ಯೋ ಹುಯ್ಯೋ ಮಳೆರಾಯ

ಹೂವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ

ಬಾಳೆ ತೋಟಕೆ ನೀರಿಲ್ಲ

ಸುರಿಯೋ ಸುರಿಯೋ ಮಳೆರಾಯ

ಸಂಪಿಗೆ ಮರಕೆ ನೀರಿಲ್ಲ

ಹಾಗಂತ ನಾವೊಂದಿಷ್ಟು ಹುಡುಗರು ಕೋರಸ್ಸಾಗಿ ತಾರಸ್ವರದಲ್ಲಿ ಕೂಗಿಕೂಗಿ ಕರೆಯುತ್ತಿದ್ದೊ. ಆಗ ಆಕಾಶಮಾರ್ಗದಲ್ಲಿ ತನ್ನ ಏಳುಕುದುರೆ ರಥವನ್ನೋಡಿಸಿಕೊಂಡು ಹೋಗುತ್ತಿರುವ ಮಳೆರಾಯ ತನ್ನ ಕುದುರೆಗಳ ಲಗಾಮನ್ನು ಎಳೆದು ‘ಓಪ…. ಓಪ….ಒವ್…!’ ಎಂದು ರಥವನ್ನು ಹಂಗೇ ಆತುಕೊಂಡು ಒಂದರಗಳಿಗೆ ನಿಲ್ಲಿಸಿ ಇತ್ತ ಭೂಲೋಕದ ಕಡೆ, ಅದರಲ್ಲೂ ನಮ್ಮೂರ ಕಡೆ, ಅದರಲ್ಲೂ ನಾವು ಕೋರಸ್ಸಿನಲ್ಲಿ ಕರೆಯುತ್ತ ನಿಂತಿದ್ದ ಮಾರೀಗುಡಿಯ ಅಂಗಳದ ಕಡೆ ನೋಡೋನು. ನೋಡಿ, ‘ಎಲ ಎಲಾ, ವರುಷೊಂಬತ್ತು ಕಾಲವೂ ನಾನು ಲೋಕ ಲೋಕಾಂತರಗಳನ್ನು ತಿರುಗಿದ್ದೇ ಆಯ್ತು. ಈ ಊರು, ಈ ಸೀಮೆಯ ಕಡೆ ನಾನು ತಿರುಗಿ ನೋಡಲಿಲ್ಲ. ಪಾಪ, ಈ ಹುಡುಗರು ಕೂಗ್ತಾ ಇರುವ ಸ್ವರ ಬಂದು ನನ್ನ ಕರುಳಿಗೇ ತಾಕ್ತಾ ಇದೆ. ಈ ಮಕ್ಕಳೇ ಇಷ್ಟು ಕಕ್ಕುಲಾತಿಯಿಂದ ನನ್ನನ್ನು ಕರೆಯುತ್ತಾ ಇದ್ದಾರೆಂದರೆ ಅವರ ಅಪ್ಪ-ಅವ್ವಂದಿರ ಬೇಗುದಿ ಎಷ್ಟಿರಬೇಡ. ಇಲ್ಲಿ ನಾನೊಂದಿಷ್ಟು ಹೊತ್ತು ಇಳಿಯಬೇಕು, ಕಾಲೂರಿಕೊಂಡು ನಿಲ್ಲಬೇಕು, ಕೆರೆಕಟ್ಟೆಗಳಿಗೆಲ್ಲ ಚಕ್ಕಳಗುಳಿ (ಕಚಗುಳಿ) ಕೊಟ್ಟು ನಗಿಸಿ ಬರಬೇಕು. ನಾಳೆ ದಿನವೇ ಆ ಕೆಲಸ ಮಾಡ್ತೀನಿ’ ಅಂತ ತನ್ನ ಚಾವಟಿಯನ್ನು ಸೆಳೆದು ‘ಛಳ್!’ ಅಂತ ರಥದ ಕುದುರೆಗಳಿಗೆ ಬಾರಿಸೋನು. ಮಳೆರಾಯನ ಚಾವಟಿಯ ಕುಡಿ ಇಲ್ಲಿ, ನಮ್ಮೂರಿನ ಮಾರೀಗುಡಿ ಅಂಗಳದಲ್ಲಿ ನಿಂತು ಕಿರುಚಾಡುತ್ತಿರುವ ನಮಗೆ ಮೋಡಗಳ ಮೇಲೆ ‘ಫಳ್’ ಅಂತ ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಡೋದು. ಚಾವಟಿಯ ಕುಡಿಯೇ ಕಂಡಮೇಲೆ ಮಳೆರಾಯನ ರಥ ಓಡುವ ಸದ್ದು ಕೇಳಿಸೋದಿಲ್ಲವಾ? ಅದೂ ಕೇಳಿಸೋದು, ಗುಂಡಿಗೆ ಅಲ್ಲಾಡಿಹೋಗುವಷ್ಟು ಜೋರಾಗಿ ಗುಡುಗುಡು, ಗುಡುಗುಡು ಅಂತ ಗುಡುಗುತ್ತಾ…!

ಆವತ್ತು ಮಳೆರಾಯ ಮನೆಯ ಕಡೆ ಹೋದಮೇಲೆ ಇಲ್ಲಿ ಆಕಾಶದಲ್ಲಿ ಸೋಮಾರಿಯಾಗಿ ಬಿದ್ದುಕೊಂಡಿದ್ದ ಆನೆಗಾತ್ರದ ಮುಗಿಲುಗಳು ಮೆಲ್ಲಗೆ ಮೈಮುರಿಯೋವು, ಹಂಗೇ ಹೊಳ್ಳಾಡೋವು! ಆಗ ಆ ದಾರಿಯಲ್ಲಿ ಬಂದ ನಮ್ಮೂರ ಚೆನ್ನಪ್ಪ ಅಂತುಕೊಂಡು ಆಕಾಶನೋಡಿ, ‘ಅಲೆಲೆಲೆಲೆಲೆ, ನಮ್ಮೂರ ಈಸಾನ್ಯ ಮೂಲೇಲಿ ಈವತ್ತು ಮ್ವಾಡ ಮೈಮುರೀತಾವೆ, ಅಗ್ಗಣಿ (ಅಗ್ನಿ) ದಿಕ್ಕಿಂದ ಗಾಳಿ ಏಳದೇ ಇದ್ರೆ ನಾಳೆ ನಮ್ಮೂರಿಗೆ ಮಳೆ ಕುರ್ತೆಟು!’ ಅಂತ ಹವಾಮಾನ ಮುನ್ಸೂಚನೆ ನುಡಿಯೋನು. ಚೆನ್ನಪ್ಪನ ಮುನ್ಸೂಚನೆ ಹುಸಿಯಾಗುತ್ತಿರಲಿಲ್ಲ. ಮಾರನೆಯ ಸಂಜೆ ಊರಿಗೆ ಒಳ್ಳೆ ಮಳೆಯಾಗೋದು!

ಆಗೆಲ್ಲ ಈಗಿನ ಹಂಗಲ್ಲ. ಮಳೆಗೂ ನಿಯತ್ತಿತ್ತು. ಒಂದೋ ಎರಡೋ ದಿನ ಅಲ್ಲೊಂದಿಷ್ಟು ಗುಡುಗಿ, ಇಲ್ಲೊಂದಿಷ್ಟು ಮಿಂಚಿ ಕಣ್ಸನ್ನೆ ಮಾಡಿ ಹೋದಮೇಲೆ ಮೂರನೇ ದಿನ ಮುಸ್ಸಂಜೆ ಕಟಕಟಕಟ ಹನಿಯಾಡಿಕೊಂಡು ಬಂದು, ರಾತ್ರೆ ‘ಧೋ…’ ಅಂತ ಸುರಿದುಬಿಡೋದು, ಬೆಳಗಿನ ಜಾವದಲ್ಲಿ ಕೊಸರಿಗೆ ಅಂತ ಇನ್ನೂ ಒಂದಿಷ್ಟು ತುಂತುರು. ಹೊತ್ತಾರೆ ಕಣ್ಣುಬಿಟ್ಟು ನೋಡಿದರೆ ಹಾದಿಬೀದಿಯೆಲ್ಲ ಕೆಸರು! ಕಣ್ಣುಚಾಚಿದ ಕಡೆಯೆಲ್ಲ ಹಸಿರು, ಬೇಲಿಯ ಸಾಲುಗಳಲ್ಲಿ ಜೀರುಂಬೆಗಳ ಜಾತ್ರೆ, ಚಿಟ್ಟೆಗಳ ಮೇಳ!

ಆಗೆಲ್ಲ ಮಳೆಯೂ ನಿಯತ್ತಾಗಿ ಬರ್ತಾ ಇತ್ತು ಅಂದೆ. ಹಾಗಂದ್ರೆ ಒಂದು ಬಾರಿಯೂ ತಪ್ಪಿಸಿಕೊಳ್ತಲೇ ಇರಲಿಲ್ಲ ಅಂತಲ್ಲ. ಆಗಾಗ ತಪ್ಪಿಸಿಕೊಂಡು ನಮ್ಮ ರೈತಾಪಿ ಜನರನ್ನ ಕಂಗೆಡಿಸಿಬಿಡೋದು. ಆಗ ಯಾವನಾದ್ರೂ ‘ಯಾಕೋ ಮಳ್ರಾಯ ಕ್ವಾಪಸ್ಕೋಬುಟ್ಟಂಗೆ ಕಾಣುಸ್ತಾ ಅದಲ್ಲ?! ಇಷ್ಟೊತ್ತಿಗೆ ಎಲ್ಡ್ ಹದಾ ಹೊಡೀಬೇಕಾಗಿತ್ತು. ನಿಯತ್ತಿಲ್ಲ ಬುಡು ಈಗ ಮಳೆಗೆ!’ ಅಂದರೆ, ನಮ್ಮೂರ ಯಜಮಾನ ಹೊನ್ನಯ್ಯ ಮೊಕದ ಮ್ಯಾಲೆ ಹೊಡೆದಂಗೆ ಹೇಳೋನು- ‘ಮನಸನಿಗೆ ನಿಯತ್ತಿದ್ರಲ್ಲವಾ ಮಳೆಗೂ ನಿಯತ್ತಿರೋದು, ಅಲ್ಲಾಡಿದ ಮಾತು ಇಲ್ಲಿಲ್ಲ, ನಾಲಿಗೆಗೆ ಎಲುಬಿಲ್ಲ! ಇನ್ನು ಮಳೆ, ಮುಗಿಲಿಗೆ ಮಾತ್ರಾ ನಿಯತ್ತಿರಬೇಕು ಅಂದ್ರೆ ಎಂಗೆ? ಎಲ್ಲಾ ಕಲೀಗ (ಕಲಿಯುಗ) ಕಲೀಗ ಬಂದು ಕೂತದೆ, ಹೆತ್ತ ಅಪ್ಪ-ಅವ್ವಂದೀರಿಗೆ ಎರಡು ತುತ್ತು ಅನ್ನ ಹಾಕದೆ ಇರೋ ದರವೇಸಿ ನನ್ ಮಕ್ಳು ಹುಟ್ಟುಬುಟ್ರು ಈ ಪ್ರಪಂಚದ ಮ್ಯಾಲೆ. ಬೆಳಿಯೋ ಭೂಮಿ ಮ್ಯಾಲೆ ಎಕ್ಕಡ ಮೆಟ್ಕಂಡು ಓಡಾಡ್ತವೆ ಈ ಕಾಲದೋವು, ಇನ್ನು ಮಳೆ ಹುಯ್ಯಿ ಅಂದ್ರೆ ಅದೆಲ್ಲಿಂದ ಹುಯ್ಬೇಕು? ಇಷ್ಟೇ ಅಲ್ಲ ನೋಡ್ತಿರಿ ನನ್ ಮಕ್ಳಾ, ಈ ನರಮನಸ ಹಿಂಗೇ ನವರಂಗಿ ಆಟ ಆಡ್ತಾ ಇದ್ರೆ ಮಳೆ ಓಗಿ ಮೂಲೆ ಸೇರ್​ಕೊತದೆ. ತುತ್ತು ತುತ್ತಿಗೆ ತತ್ವಾರ ಆಯ್ತದೆ ಮುಂದೆ, ನೋಡ್ತಾ ಇರ್ರಿ’.

ನಮಗೆಲ್ಲ ಈ ಮಳೆ ಅನ್ನೋದು ಬಾಲ್ಯಕಾಲದ ಬಹುದೊಡ್ಡ ಅಚ್ಚರಿ, ಸಂಭ್ರಮ. ಒಂದೊಂದು ಸರತಿ ಮಾತ್ರ ಆ ದಯ್ಯಗಾಳಿ, ಗುಡುಗು-ಸಿಡಿಲು-ಮಿಂಚು ನಮ್ಮನ್ನು ಹೆದರಿಸಿಬಿಡೋವು ನಿಜ. ಅದರಲ್ಲೂ ಈ ಸಿಡಿಲು ಅನ್ನೋದೊಂದು ದೊಡ್ಡ ಕೌತುಕ ನನಗೆ. ಕಿವಿತಮಟೆ ಒಡೆದುಹೋಗುವಂಥ ಆ ದೊಡ್ಡ ಸದ್ದು ಆಕಾಶದ ಹೊಟ್ಟೆಯಲ್ಲಿ ಅದೆಲ್ಲಿಂದ ಬರುತ್ತೆ? ಈ ಭೂಮಿಯ ಮೇಲೆ ಬಾನಿಗೆ ಅದೆಷ್ಟೇ ಕೋಪವಿರಬಹುದು, ಅದಕ್ಕೆ ಇಷ್ಟು ಆರ್ಭಟವೇಕೆ? ಅವ್ವನನ್ನು ಒಮ್ಮೆ ಕೇಳಿದ್ದೆ- ‘ಅವ್ವ, ಸಿಡ್ಲು ಅಂದ್ರೆ ಏನವ್ವ?’. ಅದಕ್ಕೆ ಅವ್ವ ಹೇಳಿದ ಉತ್ತರ- ‘‘ಆಕಾಶದಲ್ಲಿ ಅರ್ಜುನ ರಥ ಓಡುಸ್ತಾ ಇರ್ತಾನಂತೆ. ಆಗ ಕುದುರೆಗಳು ಒಂದಿಷ್ಟು ನಿಧಾನ ಆದ್ರೆ ಬಾರುಕೋಲು ತಕಂಡು ಹೊಡೀತಾನಂತೆ, ಆಗ ತಾಯಿ ಕುಂತಮ್ಮ ಮಗನಿಗೆ ‘ಬ್ಯಾಡ ಕಣಪ್ಪಾ ಮಗನೇ ಅರ್ಜುನ, ಭೂಲೋಕದಲ್ಲಿ ಅಸುಮಕ್ಕಳಿರ್ತವೆ, ಹಾಲುಕುಡಿಯೋ ಮಕ್ಕಳಿರ್ತವೆ, ತಾಯಿ ಎದೆಕಚ್ಚಿಕೊಂಡು ಹಾಲು ಕುಡೀತಾ ಇರೋ ಕಂದಮ್ಮಗಳು ನಿನ್ನ ಚಾವಟಿಸದ್ದಿಗೆ ಬೆಚ್ಚಿ ಬಡಕೋತವೆ ಕಣೋ, ಬ್ಯಾಡ ಕಣಪ್ಪಾ…!’ ಅಂತ ಕೇಳಕೋತಾಳಂತೆ. ಆಗ ಅವನು ಹುಸಿನಗ ನಕ್ಕೊಂಡು ‘ಆಯ್ತು ಬುಡವ್ವ’ ಅಂತ ಸುಮ್ಮನಾಗ್ತಾನಂತೆ. ಅರ್ಜುನನ ಬಾರುಕೋಲು ಸದ್ದೇ ಈ ಸಿಡ್ಲು ಅನ್ನೋದು. ಅವನ ರಥ ಓಡಾಡೋ ಸದ್ದೇ ಈ ಗುಡುಗು’- ಅವ್ವ ಆ ಕಾಲಕ್ಕೆ ಏಳನೇ ಕ್ಲಾಸು ಓದಿದ್ದರೂ ಇದಿಷ್ಟು ಸೈನ್ಸನ್ನೂ ಯಾರೂ ಹೇಳಿಕೊಟ್ಟಿರಲಿಲ್ಲ. ಆದ್ದರಿಂದ ಅವ್ವ ಪ್ರಾಮಾಣಿಕವಾಗಿ ತಿಳಿದುಕೊಂಡಿದ್ದ ಸೈನ್ಸು ಅದೇ, ಇರಲಿ.

ನಮ್ಮದು ಬಯಲುಸೀಮೆ. ಆದರೂ ಆ ಕಾಲದಲ್ಲಿ ಮಳೆಸಮೃದ್ಧಿ ಚೆನ್ನಾಗಿಯೇ ಆಗೋದು. ಆ ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಮಳೆ ಅನ್ನೋದು ದಿನಗಟ್ಟಲೆ ಸುರಿಯುತ್ತೆ ಅಂತ ನಮ್ಮ ಸ್ಕೂಲಿನ ಮೇಷ್ಟ್ರುಗಳು ಹೇಳ್ತಾ ಇದ್ದರು. ‘ಆ ಕಡೆಯೆಲ್ಲ ಮಳೆ, ಶೀತ ಎಷ್ಟೂ ಅಂದ್ರೆ ತಂದೆ-ತಾಯ್ಗಳು ಮಳೆ ಅಂತ ಮಕ್ಕಳನ್ನ ಶಾಲೆಗೆ ಕಳಿಸದೆ ಒಂದೆರಡು ದಿನ ಮನೆಯಲ್ಲೆ ಕೂರಿಸಿಕೊಂಡುಬಿಟ್ಟರೆ ಆ ಮಕ್ಕಳು ಆ ಮಳೆಗೆ, ಶೀತಕ್ಕೆ ಕೂತಲ್ಲೇ ಬೇರುಬಿಟ್ಟು ತಲೆಯಲ್ಲಿ ಮೊಳಕೆಯೊಡೆದುಬಿಡ್ತಾರಂತೆ’ ಅಂತ ಜೋಕು ಮಾಡುತ್ತಿದ್ದರು. ಆಗ ಅದು ಜೋಕು ಅಂತ ತಿಳಿದಿರಲಿಲ್ಲ. ನಿಜ ಅಂತಲೇ ಭಾವಿಸಿ ನಾವು ಕರಾವಳಿ ಅಥವಾ ಮಲೆನಾಡಿನಲ್ಲಿ ಹುಟ್ಟದೇಹೋದುದಕ್ಕೆ ಸಮಾಧಾನಪಟ್ಟುಕೊಳ್ಳುತ್ತಿದ್ದೊ.

ಮಳೆ ಅಂದ್ರೆ ಈ ದಯ್ಯಮಳೆ, ದಡಿಮಳೆ ಮಾತ್ರ ಅಲ್ಲ. ಸ್ವಾನೆಮಳೆ, ಸಿಬರುಮಳೆ, ಹೂಮಳೆ, ಜಡಿಮಳೆ ಅಂತ ಹಲವಾರು ಬಗೆಗಳಲ್ಲಿ ಈ ಮಳೆ ಬರುತ್ತಿತ್ತು. ಈಗಲಾದರೆ ಎಷ್ಟು ಮಳೆ ಬಂತು ಅಂತ ಮಳೆಯ ಪರಿಮಾಣ ಅಳೆಯುವುದಕ್ಕೆ ಮಿಲಿಮೀಟರು, ಸೆಂಟಿಮೀಟರು, ಇಂಚು-ಗಿಂಚು ಎಲ್ಲ ಹೇಳ್ತಾರೆ. ನನಗಂತೂ ಈಗಲೂ ಆ ಪರಿಮಾಣದ ಅಂದಾಜು ಸಿಗುವುದಿಲ್ಲ. ನಮ್ಮ ಹಿಂದಿನವರು ಹೇಳೋರು, ಅದೇ ನನಗೆ ಅರ್ಥವಾಗೋದು. ಗುಬ್ಬಿ ತಲೆ ನೆನೆಯುವಷ್ಟು, ಕಾಗೆ ಪುಕ್ಕ ತೇವ ಆಗುವಷ್ಟು, ಕಂಬಳಿ ನೆನೆಯುವಷ್ಟು, ಮುಂಬಾಗಿಲಿಗೆ ನೀರು ಹಾಕಿದಷ್ಟು, ಸೂರಿನ ನೀರು ಬೀಳೋವಷ್ಟು, ನೆಲತುಂಬಿ ಹರಿಯೋವಷ್ಟು, ಕೆರೆಕಟ್ಟೆ ಎಲ್ಲ ಒಂದಾಗೋವಷ್ಟು- ಅಂತ ಹೀಗೆ ಹೇಳಿದರೇ ನನಗೆ ಎಷ್ಟು ಮಳೆ ಬಿದ್ದಿರಬಹುದು ಅಂತ ಅಂದಾಜಾಗೋದು.

ಮಳೆ ಅಂದ್ರೆ ಆಗ ಸಂಭ್ರಮ ಅಂದೆ. ಹೌದು, ಸೋನೆಮಳೆಯಲ್ಲಿ ಹೆಣ್ಣುಮಕ್ಕಳು ಲಂಗಗಳನ್ನು ಅಗಲ ಹಿಡಿದುಕೊಂಡು ‘ಚಿಟ್ಟೆ ಮಳೆ, ಗುಡುಗುಡು ಮಳೆ, ಚಿಟ್ಟೆ ಮಳೆ, ಗುಡುಗುಡು ಮಳೆ’ ಅಂತ ಬುಗುರಿಯ ಹಾಗೆ ತಿರುಗುತ್ತಿದ್ದರೆ ನಾವೂ ಹುಡುಗರು ಅವರ ಜತೆ ಸೇರಿಕೊಂಡು ‘ಚಿಟ್ಟೆ ಮಳೆ’ಯಾಡುತ್ತಿದ್ದೆವು. ಅತ್ತಲಿಂದ ಇತ್ತಲಿಂದ ಮಳೆ ಒಂದಿಷ್ಟು ಜೋರಾಗಿ ಬಂದರೆ-

ಅತ್ಲಿಂದ್ ಇತ್ಲಿಂದ್ ಮಳೆ ಬಂತು |

ಚಪ್ಡಿ ಕಲ್ಲು ತ್ಯಾವಾಯ್ತು |

ಬನ್ನೂರು ಹುಡುಗಿ ಬಂದಾಯ್ತು |

ಹೊಂಗೆಮರಕೆ ತಾಲಿ ಕಟ್ಟಿ ತಿಂಗಳಾಯ್ತು |

ಎಂದು ಹಾಡುತ್ತಿದ್ದೆವು. ಮಕ್ಕಳ ಸಾಹಿತ್ಯ, ನಾವು ಒಲಿದಂತೆ ಹಾಡಿದ್ದು; ಇಲ್ಲಿ ಬನ್ನೂರು ಹುಡುಗಿ ಯಾಕೆ ಬಂದಳು, ಹೊಂಗೆಮರಕ್ಕೆ ತಾಲಿ ಕಟ್ಟಿದವರು ಯಾರು? ಯಾಕೆ? ಅಂತೆಲ್ಲ ತಲೆಕೆಡಿಸಿಕೊಳ್ಳಬೇಡಿ. ತಲೆ ಕೆಟ್ಟೇಹೋಗುವ ಸಾಧ್ಯತೆ ಇರುತ್ತೆ.

ನಮ್ಮ ಹಿಂದೂ ಕ್ಯಾಲೆಂಡರಿನಲ್ಲಿ ಇಪ್ಪತ್ತೇಳು ನಕ್ಷತ್ರಗಳು ಅಂತ ಇವೆ. ನಮ್ಮ ರೈತರಿಗೆ ಅವೆಲ್ಲ ಮಳೆ ನಕ್ಷತ್ರಗಳು. ಮಳೆಯೊಂದಿಗೆ ರೈತರ ನಂಟು-ನಡವಳಿಕೆ ಸಹಜವಾದದ್ದೇ. ಹಾಗಾಗಿ ನಮ್ಮ ಒಕ್ಕಲುಮಕ್ಕಳಿಗೆ ಪ್ರತಿಮಳೆಯ ಸ್ವರೂಪ, ಲಕ್ಷಣಗಳೆಲ್ಲ ಗೊತ್ತು. ಅದನ್ನೆಲ್ಲ ಗಾದೆಗಳಲ್ಲಿ ಕಟ್ಟಿ ಸಾರ್ವತ್ರಿಕಗೊಳಿಸಿದ್ದಾರೆ. ಕೆಲವನ್ನು ನೋಡಿ-

್ಝ ಮಕೆ (ಮಖಾ) ಮಳೆ ಬಂದಷ್ಟೂ ಒಳ್ಳೇದು, ಮನೆಮಗ ಉಂಡಷ್ಟೂ ಒಳ್ಳೇದು; ್ಝ ರೋಣಿ (ರೋಹಿಣಿ) ಮಳೆ ಬಂದ್ರೆ ಓಣಿಯೆಲ್ಲಾ ಕೆಸರು; ್ಝ ಭರಣಿ ಆದರೆ ಧರಣಿ ತುಂಬಾ ಬೆಳೆ; ್ಝ ಕುಂಟು ಚಿಟ್ಟೆ (ಚಿತ್ತಾ) ಮಳೆ, ಕುಂತಲ್ಲೇ ಸುರಕೊಳ್ತದೆ; ್ಝ ಆದ್ರೆ ಆರಿದ್ರ, ಆಗದೇ ಹೋದ್ರೆ ದರಿದ್ರ; ್ಝ ವಿಸಾತಿ (ವಿಶಾಖ) ಮಳೆ ಪಿಚಾತಿ (ಪಿಶಾಚಿ) ಹಿಡಿದಂಗೆ; ್ಝ ಆದರೆ ಹಸ್ತ, ಆಗದಿದ್ರೆ ಒಕ್ಕಲಿಗ ಹಲ್ಲು ಕಿಸ್ದ!; ್ಝ ಆಸಲೆ (ಆಶ್ಲೇಷ) ಮಳೆ ಬಿದ್ದು ಸಸಿಲೆ (ಸಣ್ಣಮೀನು) ಬೆಟ್ಟ ಹತ್ತಿತು; ್ಝ ಹುಬ್ಬೆ (ಪುಬ್ಬ) ಮಳೆ ಬಂದ್ರೆ ಗುಬ್ಬಿ ತಲೆಯೂ ನೆನೀದು; ್ಝ (ಬೆಳೆಗೆ) ಹಾಯಿಸಿದ ನೀರು ಹಸೂನ ಹಾಲು, ಮಳೆನೀರು ತಾಯಿಹಾಲು; ್ಝ ಹುಬ್ಬೆ (ಪುಬ್ಬ) ಮಳೆ, ಹುಬ್ಬೆತ್ತೋಕೂ ಬುಡಲ್ಲ;

ಈ ಗಾದೆಗಳಿಗೆ ವಿವರಣೆ ಬೇಕಿಲ್ಲ.

‘ಮಳೆಬರುವ ಕಾಲಕ್ಕೆ ಒಳಗ್ಯಾಕ ಕುಂತೇವು, ಇಳೆಯೊಡನೆ ಜಳಕವಾಡೋಣು ನಾವೂನು, ಮೋಡಗಳ ಆಟ ನೋಡೋಣು’- ಹೀಗೆ ಹಾಡಿದವರು ಕವಿ ಬೇಂದ್ರೆ. ನಾವು ನಾಗರಿಕರು, ಮಳೆಯನ್ನು ಮನೆಯೊಳಕ್ಕೆ ಬಿಟ್ಟುಕೊಂಡವರಲ್ಲ, ಕಿಟಕಿ ಬಾಗಿಲುಗಳನ್ನೆಲ್ಲ ಭದ್ರವಾಗಿ ಬಡಿದು ಬೀದಿಗೆ ಬಂದ ಮಳೆ ಬೀದಿಯಲ್ಲೇ ಹೋಗಿಬಿಡುವಂತೆ ಮಾಡುತ್ತೇವೆ. ನಮ್ಮ ಹಳ್ಳಿಯಲ್ಲಿ ಮಳೆನೀರು ನಮ್ಮ ಮನೆಯೊಳಗಿನ ತೊಟ್ಟಿಯೊಳಗಷ್ಟೇ ಧಾರೆಧಾರೆಯಾಗಿ ಇಳಿದುಬರುತ್ತಿತ್ತು. ಆಗೀಗೊಮ್ಮೆ ಆಲಿಕಲ್ಲುಗಳು ಬೀಳುವಾಗಲೂ ಮನೆಯ ಹಜಾರದ ತುಂಬಾ ಎರಚಾಡಿಹೋಗುತ್ತಿದ್ದೊ. ಹಳ್ಳಿಯ ಹೈಕಳಾದ ನಮಗೆ ಮಳೆ ಯಲ್ಲಿ ನೆನೆಯುವುದು ಅಪರೂಪದ ವಿಷಯವೇನಲ್ಲ. ಗದ್ದೆ ಬಯಲಲ್ಲೋ, ತೋಟದಲ್ಲೋ ಇದ್ದಾಗ ಮಳೆ ಬಂದರೆ ಒಂದಿಷ್ಟೂ ಬೇಜಾರಿಲ್ಲದೆ ತೋಯ್ದು ತೊಪ್ಪೆಯಾಗುತ್ತಿದ್ದೊ.

ಮಳೆ ಅಂದರೆ ಈಗ ನನಗೆ ಥಟ್ಟನೆ ನೆನಪಾಗುವುದು ಮಲೇಷ್ಯಾ. ಒಂದೆರಡು ವರ್ಷಗಳ ಹಿಂದೆ ನಾನು ಮಲೇಷ್ಯಾಕ್ಕೆ ಹೋಗಿದ್ದೆ. ಅಲ್ಲಿ ವರ್ಷದ ಮುನ್ನೂರ ಅರವತೆôದು ದಿನಗಳಲ್ಲಿ ಏನಿಲ್ಲವೆಂದರೂ ಇನ್ನೂರ ಅರವತ್ತು-ಎಪ್ಪತ್ತು ದಿನ ದಿನ ಮಳೆಯಾಗುತ್ತದೆಯಂತೆ. ವರ್ಷಕ್ಕೆ ಮುನ್ನೂರು ದಿನ ಮಳೆಯಾಗಿದ್ದೂ ಉಂಟಂತೆ. ಶಹಬ್ಬಾಸ್! ಅಂತೂ ನೀವು ಮಲೇಷ್ಯಾಕ್ಕೆ ಹೋಗಿ ಒಂದು ವಾರ ಇದ್ದು ಬಂದರೆ, ಮೂರ್ನಾಲ್ಕು ಮಳೆಗಳನ್ನಾದರೂ ನೋಡುವುದು ನಿಶ್ಚಿತ. ಅದರಲ್ಲೂ ಮಲೇಷ್ಯಾದ ಮಳೆಯದ್ದು ತೀರಾ ಗಲಾಟೆ! ನಿರಭ್ರವಾದ ಆಕಾಶದಲ್ಲಿ ಇದ್ದಕ್ಕಿದ್ದಂತೇ ಮೋಡಗಳು ಓಡಿಬಂದು ಸಂತೆ ನೆರೆಯುತ್ತದೆ. ಛಟ್, ಛಟೀಲ್! ಧಡ್, ಧಡಾಲ್! ಅಂತ ಜೋರುಗಲಾಟೆ ಮಾಡಿಕೊಂಡು ಒಂದೋ ಎರಡೋ ಗಂಟೆಯಲ್ಲಿ ಮಳೆ ಬಂದ ಸುಳಿವೇ ಇಲ್ಲದಂತೆ ರಸ್ತೆಗಳೆಲ್ಲ ನೀರು ಬಸಿದುಕೊಂಡು ಒಣಗಿಬಿಡುತ್ತವೆ. ಹೀಗೆ ಮಳೆ ಸುರಿಯುವುದರಿಂದಲೇ ಮಲೇಷ್ಯಾ ದೇಶದಲ್ಲಿ ಕಣ್ಣುಬಿಟ್ಟ ಕಡೆಯೆಲ್ಲ ಹಸಿರೇ ಹಸಿರು! ನೀರೇ ನೀರು! ಅದಕ್ಕೇ ನಾನು ಇದನ್ನು ಮಲೇಷ್ಯಾ ಅನ್ನೋದಕ್ಕೆ ಬದಲು ‘ಮಳೇಷ್ಯಾ’ ಅನ್ನಬೇಕಿತ್ತು ಅಂತ ಹೇಳುತ್ತಿದ್ದೆ.

ನಮ್ಮ ಕನ್ನಡದ ಕವಿಗಳಿಗೆ ಮಳೆ ಅನ್ನುವುದು ಒಂದು ದೊಡ್ಡ ಸ್ಪೂರ್ತಿಯ ವಿಷಯ. ಪಂಜೆಯವರ ‘ಕಾರ್ಗಾಲದ ವೈಭವ’ದಿಂದ ಜಯಂತ ಕಾಯ್ಕಿಣಿಯವರ ‘ಮುಂಗಾರು ಮಳೆ’ ಸಿನಿಮಾ ಹಾಡುಗಳವರೆಗೆ ಅಧ್ಯಯನ ಮಾಡಿ ಒಂದು ದೊಡ್ಡ ಪ್ರಬಂಧವನ್ನೇ ಬರೆದುಬಿಡಬಹುದು.

ನನ್ನ ಪ್ರತಿಭಾಶಾಲಿ ಕವಿಮಿತ್ರ ಜಯಪ್ಪ ಹೊನ್ನಾಳಿ ಮಳೆಯ ಬಗ್ಗೆ ಚಂದಚಂದದ ಹಾಯ್ಕುಗಳನ್ನು ಬರೆದಿದ್ದಾರೆ. ಹಾಯ್ಕುಗಳು ಅಂದರೆ ಅವೆಲ್ಲ ಕಾವ್ಯದ ಕಣ್ಮಿಟುಕುಗಳೇ. ಅಂಥ ಹಾಯ್ಕುಗಳನ್ನು ಬರೆಯುವುದರಲ್ಲಿ ಜಯಪ್ಪ ಸಿದ್ಧಹಸ್ತರು. ಇಲ್ಲಿ ಅವರ ಕೆಲವು ಹಾಯ್ಕುಗಳನ್ನು ಉದಾಹರಿಸುತ್ತೇನೆ. ನನ್ನ ಈ ದೊಡ್ಡ ಲೇಖನ ಹೇಳಲಾಗದ್ದೆಷ್ಟನ್ನೋ ಅವರ ಮೂರು ಸಾಲಿನ ಹಾಯ್ಕುಗಳು ಹೇಳುತ್ತವೆ. ಈ ಹಾಯ್ಕುಗಳನ್ನು ಓದಿದ ಮೇಲೆ ಮಳೆ ನಮಗೆ ಮತ್ತಷ್ಟು ಇಷ್ಟವಾಗುತ್ತ ಹೋಗುತ್ತದೆ.

ಕರಗುತ್ತಿಹ ಕೃಷ್ಣ ಮೇಘ…

ತಂಪಾಗುತ್ತಿಹ ಭೂ ರಾಧೆ…

ಬೃಂದಾವನದಲ್ಲಿನ್ನು ಹಸಿರು ಹಾಲು ಮೊಸರು…!

ಶಬ್ದವಾಗುತ್ತಿದೆ ಮೋಡ

ನಿಶ್ಶಬ್ದ ನಿಗೂಢದಲ್ಲೂ ಮಿಂಚು

ಬಿದ್ದಿದ್ದ ಬೀಜದಲ್ಲೆದ್ದ ಜೀವದುದ್ಘಾಟನೆ!

ಮೋಡದಾನೆ ಘೀಳಿಡುತ್ತಿದೆ…

ಮಿಂಚ ಕೋರೆ ತೋರುತ್ತ…

ಇಳೆಗಿಳಿದರೆ ಹೊಳೆ ತುಳುಕಬಹುದು!

ಬರದ ಬುವಿಗೀಗ ಸನ್ಮಾನ

ಮೋಡ ನೀರ್ಮಣಿಯ ಪೇಟ

ಹಸಿರು ಶಾಲು ನಾಳೆ ಬರಬಹುದು!

ಒಬ್ಬನೇ ಓದುತ್ತಿದ್ದೇನೆ

ಮಳೆಯೆಂಬ ಜೀವರಸ ಕಾವ್ಯ!

ಹಸಿರ ಹೂ ಹಣ್ಣು ಬಣ್ಣಗಳ ಮಿಂಚ ಸಾಲು!

ಈ ಅಂಕಣ ಬರೆಯಲು ಕಾಗದ ಕೈಗೆತ್ತಿಕೊಂಡಾಗ ಹೊರಗೆ ಒಂದೇ ಶ್ರುತಿಯಲ್ಲಿ ಮಳೆ ಸುರಿಯುತ್ತಿತ್ತು. ನಾನೂ ಒಂದು ಹಾಯ್ಕು ಬರೆದೆ-

ಧೋ ಎಂದು ಸುರಿವ ಮಳೆ

ರೈತನ ಮುಖದಲ್ಲಿ ಜೀವಕಳೆ

ತೋಯ್ದು ತೆರೆದಿಟ್ಟ ನಟಿಗೆ ಹಣದ ಹೊಳೆ!

ಆಷಾಢ ಮುಗಿದು ಶ್ರಾವಣಕ್ಕೆ ಹೊರಳಿಕೊಳ್ಳುತ್ತಿದೆ ನಾಡು. ಆಕಾಶದ ಮೋಡ ಆಸೆ ಹುಟ್ಟಿಸುತ್ತಿವೆ. ಅಲ್ಲಿ ಹೋಗುವ ಮೋಡಗಳು ಇಲ್ಲೊಂದಿಷ್ಟು ಜೀವರಸವನ್ನು ಚೆಲ್ಲಿಹೋಗಲಿ.

Leave a Reply

Your email address will not be published. Required fields are marked *

Back To Top