Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಆತ್ಮಗೌರವದ ಪ್ರತೀಕ ವಾಸವಾಂಬೆ

Friday, 05.05.2017, 3:05 AM       No Comments

| ಪ್ರಭಾಸ್ ಶರ್ಮ

ಪ್ರತಿಯೊಬ್ಬರಿಗೂ ಆತ್ಮಗೌರವ ಬಹಳ ಮುಖ್ಯ. ಅದನ್ನು ಸಂರಕ್ಷಿಸಿಕೊಳ್ಳಲು ಪ್ರಾಣಾರ್ಪಣೆ ಮಾಡಿದವರೂ ಇದ್ದಾರೆ. ಸಮಸ್ತ ಜಗತ್ತಿಗೂ ಆತ್ಮಗೌರವದ ಸಂಕೇತವಾಗಿರುವ ದೇವಿ ವಾಸವಾಂಬಾ. ಆತ್ಮಗೌರವಕ್ಕಾಗಿ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಬಲಿದಾನಗೈದ ವೀರಕನ್ಯೆ ಎಂದು ಇಂದಿಗೂ ವಾಸವಾಂಬೆಗೆ ಪೂಜೆ ಸಲ್ಲುತ್ತದೆ. ಕನ್ಯಕಾಪರಮೇಶ್ವರಿ ಎಂಬುದು ವಾಸವಾಂಬೆಯ ಮತ್ತೊಂದು ಹೆಸರು. ಒಮ್ಮೆ ಬ್ರಹ್ಮನು ಶತಜಿಹ್ವನೆಂಬ ರಾಕ್ಷಸನನ್ನು ಕೊಲ್ಲುವಂತೆ ಇಂದ್ರನ ಮಗನಾದ ಜಯಂತನಿಗೆ ಆಜ್ಞೆ ಮಾಡಿದನು. ಆಗ ಶಚೀದೇವಿ ಮಗನನ್ನು ತಡೆದಳು. ಈ ಕಾರಣಕ್ಕಾಗಿ ಭೂಲೋಕದಲ್ಲಿ ಜನಿಸುವಂತೆ ಬ್ರಹ್ಮಶಾಪಕ್ಕೆ ಒಳಗಾದಳು. ಪವಿತ್ರವಾದ ಗೌತಮಿ ನದಿತಟದಲ್ಲಿದ್ದ ಪೆನುಗೊಂಡ ಎಂಬ ರಾಜ್ಯವನ್ನು ಕುಸುಮಶ್ರೇಷ್ಠಿ ಎಂಬ ರಾಜ ಆಳುತ್ತಿದ್ದ. ಕುಸುಮಶ್ರೇಷ್ಠಿ ಹಾಗೂ ಕುಸುಮಾಂಬೆ ದಂಪತಿಯ ಮಗಳಾಗಿ ಶಚೀದೇವಿ ಜನಿಸಿದಳು. ವಾಸವ ಮತ್ತು ಕಾವೇರಿ ಎಂಬ ಹೆಸರುಳ್ಳ ಇವರು ಅನನ್ಯ ಶಿವಭಕ್ತರು. ಶಿವಪೂಜೆಗಾಗಿಯೇ ವಿಶೇಷ ಉದ್ಯಾನ ನಿರ್ವಿುಸಿ ತಾವೇ ಹೂವುಗಳನ್ನು ಸಂಗ್ರಹಿಸಿ ಪೂಜಿಸುತ್ತಿದ್ದರು. ಹೀಗಾಗಿ ಅವರಿಗೆ ಕುಸುಮಶ್ರೇಷ್ಠಿ ಮತ್ತು ಕುಸುಮಾಂಬೆ ಎಂಬ ಹೆಸರು ಬಂದಿತ್ತು. ಈ ದಂಪತಿಯ ಮಗಳಾದ ವಾಸವಿಯೂ ಶಿವಭಕ್ತೆ. ಶಿವನೇ ತನ್ನ ಪತಿಯೆಂದು ಆರಾಧಿಸುತ್ತಿದ್ದ ಅವಳಿಗಾಗಿ ನಗರದ ಹೊರವಲಯದಲ್ಲಿ ದೇವಸ್ಥಾನ ನಿರ್ವಿುಸಿಕೊಟ್ಟರು. ಜೈತ್ರಯಾತ್ರೆಯನ್ನು ಕೈಗೊಂಡಿದ್ದ ವಿಷ್ಣುವರ್ಧನನೆಂಬ ರಾಜನು ಪೆನುಗೊಂಡದ ಹೊರವಲಯದಲ್ಲಿ ವಾಸವಿಯನ್ನು ಕಂಡು ಮೋಹಗೊಂಡು ಅವಳನ್ನೇ ಮದುವೆಯಾಗುವುದಾಗಿ ಹಠಹಿಡಿದ. ಅದಕ್ಕೆ ಕುಸುಮಶ್ರೇಷ್ಠಿಯ ಕುಲದ ಕೆಲವರಿಂದ ವಿರೋಧ ಬಂದಿದ್ದನ್ನು ತಿಳಿದ ರಾಜನು ಪೆನುಗೊಂಡದ ಮೇಲೆ ದಾಳಿಮಾಡಿ ವಾಸವಿಯನ್ನು ಪಡೆಯಲು ಬಯಸಿದನು. ಕುಸುಮಶ್ರೇಷ್ಠಿ ಮತ್ತು ವಿಷ್ಣುವರ್ಧನನ ಮಧ್ಯೆ ಭಾರಿ ಸಮರವೇ ನಡೆಯಿತು. ಈ ಸಂದರ್ಭದಲ್ಲಿ ವಾಸವಿಯು ಅರಮನೆಯ ಮುಂದೆ ಅಗ್ನಿಕುಂಡವನ್ನು ಸ್ಥಾಪಿಸಿದಳು. ತನಗೆ ಬಂದ ಶಾಪಾದಿಗಳನ್ನು ತಿಳಿಸಿ ದಿವ್ಯರೂಪ ತೋರಿಸಿ, ನಿಜಸ್ವರೂಪವನ್ನು ಪಡೆಯಲು ಎಲ್ಲರೆದುರು ಅಗ್ನಿಗೆ ಧುಮುಕಿ ಪ್ರಾಣತ್ಯಾಗ ಮಾಡಿದಳು. ಇದೇ ವೇಳೆಗೆ ಜಯಶಾಲಿಯಾಗಿ ಅರಮನೆಗೆ ಬಂದ ಕುಸುಮಶ್ರೇಷ್ಠಿಯು ಈ ವಿಷಯವನ್ನು ತಿಳಿದು ದುಃಖಿತನಾಗಿ ಪತ್ನಿ ಹಾಗೂ ಕುಲದ ಕೆಲವರೊಂದಿಗೆ ಅಗ್ನಿಪ್ರವೇಶ ಮಾಡಿದನು. ಅಂದಿನಿಂದ ವೈಶ್ಯರು ವಾಸವಾಂಬೆಯನ್ನು ತಮ್ಮ ಕುಲದೇವತೆ ಎಂದು ಭಾವಿಸಿ ಕನ್ಯಕಾಪರಮೇಶ್ವರಿ ಎಂಬ ಹೆಸರಿನಿಂದ ಪೂಜಿಸುತ್ತಾರೆ. ತನ್ನ ಕುಲದ ಗೌರವಕ್ಕಾಗಿ ಬಲಿದಾನ ಮಾಡಿದ ವಾಸವಾಂಬೆಯ ಸ್ಮರಣೆಯಲ್ಲಿ ಪ್ರತಿವರ್ಷ ವಾಸವಾಂಬಾ ಜಯಂತಿಯನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ವಾಸವಾಂಬೆಯ ಹೆಸರಿನಲ್ಲಿ ಹಲವಾರು ದೇವಾಲಯಗಳೂ ಕಲ್ಯಾಣಮಂಟಪಗಳೂ ಸ್ಥಾಪಿಸಲ್ಪಟ್ಟಿವೆ.

Leave a Reply

Your email address will not be published. Required fields are marked *

Back To Top