Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಆತುರದ ನಿರ್ಧಾರಗಳು ಮಾರಕ

Wednesday, 14.03.2018, 3:05 AM       No Comments

ರಾಜ್ಯ ಶಿಕ್ಷಣ ಇಲಾಖೆ ಸುಧಾರಣೆ, ಸಕಾರಾತ್ಮಕ ಬದಲಾವಣೆಗಳಿಗಿಂತ ಹೆಚ್ಚಾಗಿ ಆತುರದ ಮತ್ತು ಅಪ್ರಾಯೋಗಿಕ ನಿರ್ಧಾರಗಳಿಂದಲೇ ಹೆಚ್ಚು ಸುದ್ದಿಗೆ ಬರುತ್ತಿದ್ದು, ಇದು ಉತ್ತಮ ನಡೆಯಲ್ಲ. ಕಾಲಕ್ಕೆ ತಕ್ಕಂತೆ ಶಿಕ್ಷಣ ರಂಗದಲ್ಲೂ ಮಾರ್ಪಾಡುಗಳು, ಬದಲಾವಣೆಗಳು ಅನಿವಾರ್ಯ ಎಂಬುದು ನಿಜವಾದರೂ ಅವು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾರಕವಾಗಿ ಪರಿಣಮಿಸಬಾರದು. ವಿದ್ಯಾರ್ಥಿಗಳು ಮತ್ತು ಪಾಲಕರ ಮಾಹಿತಿ ಹೊಂದಿದ ಆಪ್ ರೂಪಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದ್ದ ಶಿಕ್ಷಣ ಇಲಾಖೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಒಪ್ಪಂದವನ್ನು ರದ್ದು ಮಾಡಿತು. ಈ ಪ್ರಕರಣ ಇನ್ನು ತಾಜಾ ಆಗಿರುವಾಗಲೇ ಆರ್​ಟಿಇ ಮಾಹಿತಿಗಳು ಬಿಕರಿಯಾಗುತ್ತಿರುವ ಆಘಾತಕಾರಿ ಸಂಗತಿ ಹೊರಬಿದ್ದಿದೆ.

ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಅನ್ವಯ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ನಮೂದಾಗಿರುವ ಪಾಲಕರು ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಒಪ್ಪಂದ ನಡೆದಿದ್ದನ್ನು ‘ವಿಜಯವಾಣಿ’ ತನಿಖೆಯಿಂದ ಬಯಲುಗೊಳಿಸಿತ್ತು. ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು 64 ರೂಪಾಯಿಯಂತೆ ಮಾರಾಟ ಮಾಡಲು ದೆಹಲಿಯ ಇಂಡಸ್ ಆಕ್ಷನ್ ಕಂಪನಿ ಹಾಗೂ ಆರ್​ಟಿಇ ವಿದ್ಯಾರ್ಥಿಗಳು ಮತ್ತು ಪಾಲಕರ ಸಂಘದ ನಡುವೆ ಒಪ್ಪಂದವಾಗಿತ್ತು. ಮಾಧ್ಯಮಗಳಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಂಬಂಧಿತ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಸಂಘ ತಿಳಿಸಿದೆ.

ಒಪ್ಪಂದ ರದ್ದಾಗಿರುವುದು ಸಮಾಧಾನಕರ ಬೆಳವಣಿಗೆಯಾದರೂ, ಮತ್ತೆ ಮತ್ತೆ ಇಂಥ ಅಪಸವ್ಯಗಳೇಕೆ ಘಟಿಸುತ್ತಿವೆ ಎಂಬುದಕ್ಕೆ ಉತ್ತರ ದೊರೆಯುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಪಾಲಕರ ವೈಯಕ್ತಿಕ ಮಾಹಿತಿ ಖಾಸಗಿತನಕ್ಕೆ ಸಂಬಂಧಿಸಿದ್ದು. ಅದನ್ನು ಯಾವುದೋ ಸಂಸ್ಥೆಗೋ, ಆಪ್​ಗೋ ನೀಡಲು ಹೇಗೆ ಸಾಧ್ಯ? ಇಂಥ ನಿರ್ಧಾರಗಳನ್ನು ಕೈಗೊಳ್ಳುವ ಮುಂಚೆ ಅಧಿಕಾರಿಗಳು ಒಂದಿಷ್ಟಾದರೂ ವಿವೇಚನೆ ತೋರಬೇಕಲ್ಲವೇ? ನಿರ್ಧಾರದ ಸಾಧಕ-ಬಾಧಕಗಳನ್ನು ಗಮನಿಸಿ ಮುಂದುವರಿಯಬೇಕೆ ಹೊರತು ಆತುರದಲ್ಲಿ ಏಕಾಏಕಿ ಇಂಥ ಕ್ರಮಗಳಿಗೆ ಮುಂದಾಗುವುದು ಸೂಕ್ತವಲ್ಲ. ಆರ್​ಟಿಇ ಮಾಹಿತಿ ಬಿಕರಿ ಹಿಂದೆ ದೊಡ್ಡ ಮಾರುಕಟ್ಟೆ ಜಾಲದ ಕೈವಾಡ ಇರುವ ಸಂಶಯ ವ್ಯಕ್ತವಾಗಿದ್ದು, ಇದರಲ್ಲಿ ಕೆಲ ಸರ್ಕಾರಿ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದೂ ಹೇಳಲಾಗಿದೆ. ಈ ಎಲ್ಲ ಸಂಗತಿಗಳ ಬಗ್ಗೆ ಸರ್ಕಾರ ಸೂಕ್ತ ವಿಚಾರಣೆ ನಡೆಸಿ ಸತ್ಯಾಸತ್ಯತೆ ಬಹಿರಂಗ ಪಡಿಸಬೇಕು.

ಶಿಕ್ಷಣ ಸೇರಿದಂತೆ ಯಾವುದೇ ರಂಗದಲ್ಲಿ ಮಾಹಿತಿ-ತಂತ್ರಜ್ಞಾನದ ಅಳವಡಿಕೆ, ಅದರ ವ್ಯಾಪಕ ಬಳಕೆ ತಪ್ಪೇನಲ್ಲ. ಇದರಿಂದ ನಿರ್ವಹಣೆ ಕೆಲಸ ಸುಗಮವಾಗಿ ಸಮಯ, ಶ್ರಮ ಎರಡರ ಉಳಿತಾಯವಾಗುವುದರ ಜತೆಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸಹಾಯವಾಗುತ್ತದೆ ಎಂಬುದೇನೋ ನಿಜ. ಆದರೆ, ಅವುಗಳಿಂದ ಖಾಸಗಿತನಕ್ಕೆ ಧಕ್ಕೆಯಾಗದ ಹಾಗೆ, ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾಗದೆ ಹಾಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈಗಾಗಲೇ ಆಪ್ ಅಧ್ವಾನ ಮತ್ತು ಆರ್​ಟಿಇ ವಿವರಗಳ ಮಾರಾಟದಂಥ ಘಟನೆಗಳು ಪಾಲಕರನ್ನು ಆತಂಕಕ್ಕೆ ದೂಡಿವೆ. ಇದು ಪರೀಕ್ಷಾ ಸಮಯ ಬೇರೆ. ಇಂಥ ಹೊತ್ತಲ್ಲಿ ನಡೆಯುವ ಅಪಸವ್ಯಗಳು ಮತ್ತಷ್ಟು ಒತ್ತಡ, ಗೊಂದಲವನ್ನು ಸೃಷ್ಟಿಸುತ್ತವೆ. ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಲಿ.

Leave a Reply

Your email address will not be published. Required fields are marked *

Back To Top