Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಆತಂಕಕಾರಿ ಬೆಳವಣಿಗೆ

Saturday, 21.10.2017, 3:00 AM       No Comments

ವಾಮಾನ ವೈಪರೀತ್ಯ, ಅದರಿಂದಾಗಿ ಹಿಮನದಿಗಳ ಕರಗುವಿಕೆ, ಅಂಟಾರ್ಕ್ಟಿಕ ಹಿಮಖಂಡದಲ್ಲಿ ಒಡಕು ಮೂಡಿರುವಿಕೆ ಹೀಗೆ ಒದಗಬಹುದಾದ ಸಂಭಾವ್ಯ ಆತಂಕಗಳನ್ನು ಎದುರಿಸಬೇಕಾದ ಒತ್ತಡದಲ್ಲಿಂದು ನಾವೆಲ್ಲ ಸಿಲುಕಿದ್ದೇವೆ. ಈ ಯಾದಿಗೆ ನಿಸ್ಸಂಶಯವಾಗಿ ಸೇರುವಂಥದ್ದು ಪರಿಸರ ಮಾಲಿನ್ಯ. ಭಾರತದಲ್ಲಿ ವಿವಿಧ ಮಾಲಿನ್ಯಗಳಿಂದಾಗಿಯೇ 2015ರಲ್ಲಿ 25 ಲಕ್ಷಕ್ಕೂ ಹೆಚ್ಚು ಜನ ಅಕಾಲಿಕ ಸಾವಿಗೀಡಾಗಿದ್ದಾರೆ ಎಂಬುದು ಬ್ರಿಟನ್ ಮೂಲದ ವೈದ್ಯಕೀಯ ನಿಯತಕಾಲಿಕವೊಂದು ಹೊರಹಾಕಿರುವ ಆಘಾತಕಾರಿ ಸಂಗತಿ. ಇದು ನಮ್ಮ ಮುಂದಿನ ನಡೆ ಹೇಗಿರಬೇಕು ಎಂಬುದರ ಕುರಿತಾದ ಎಚ್ಚರಿಕೆಯ ಗಂಟೆಯೂ ಹೌದು. ದಶಕಗಳ ಹಿಂದೆ ಕಾಲರಾ, ಪ್ಲೇಗು ಮುಂತಾದ ಕಾಯಿಲೆಗಳು ಅಪ್ಪಳಿಸಿದಾಗ ಅಧಿಕ ಸಂಖ್ಯೆಯ ಜನರು ಅಸುನೀಗುತ್ತಿದ್ದುದರ ಮಾಹಿತಿಗಳಿವೆ. ಆದರೀಗ ಆ ಭಯವಿಲ್ಲವಾದರೂ, ಮಾಲಿನ್ಯ ಸಂಬಂಧಿ ರೋಗಗಳಿಂದ ಸಾವನ್ನಪು್ಪತ್ತಿರುವವರ ಜಾಗತಿಕ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂಬುದು ಅವಲೋಕನಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಹುಟ್ಟುಹಾಕಿದೆ. ಅತಿರೇಕದ ವಾಯುಮಾಲಿನ್ಯದ ಪರಿಣಾಮ ಉಸಿರಾಟದ ತೊಂದರೆ, ಶ್ವಾಸಕೋಶದ ಉರಿಯೂತ ಮತ್ತು ಕ್ಯಾನ್ಸರ್, ಹೃದಯರೋಗ, ಪಾರ್ಶ್ವವಾಯು ಮೊದಲಾದ ಸಮಸ್ಯೆಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತದೆ ಎಂಬ ತಜ್ಞಾಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಜಲಮಾಲಿನ್ಯ ಮತ್ತು ವಾಯುಮಾಲಿನ್ಯ ಪ್ರಮಾಣ ಭಾರತದಲ್ಲಿ ತೀವ್ರವಾಗಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಾರ್ವಜನಿಕ ಸಾರಿಗೆಯನ್ನು ಹೊರತುಪಡಿಸಿದ ವಾಹನಗಳ ಸಂಖ್ಯೆ ಮತ್ತು ಅವು ಪರಿಸರಕ್ಕೆ ಬಿಡುತ್ತಿರುವ ವಿಷಕಾರಿ ಹೊಗೆಯ ಪ್ರಮಾಣ ಹೆಚ್ಚುತ್ತಿದ್ದು, ಅದು ಸಾರ್ವಜನಿಕರ ಆರೋಗ್ಯಕ್ಕೆ ಸಂಕಷ್ಟ ತಂದೊಡ್ಡಿರುವುದನ್ನು ತಳ್ಳಿಹಾಕುವಂತಿಲ್ಲ. ಇನ್ನು ಕೈಗಾರಿಕೀಕರಣಕ್ಕೆ ದೇಶ ಒಡ್ಡಿಕೊಂಡ ಬಳಿಕವಂತೂ ಜಲ ಹಾಗೂ ವಾಯುಮಾಲಿನ್ಯ ಪ್ರಮಾಣದಲ್ಲಿ ಅತಿರೇಕದ ಹೆಚ್ಚಳವಾಗಿರುವುದು ಖರೆ. ಹಾಗಂತ ಕೈಗಾರಿಕೆ/ಉದ್ಯಮಗಳು ಬೆಳೆಯದೆ ಹೋದಲ್ಲಿ ಆರ್ಥಿಕತೆ ಬೆಳೆಯದು, ನಿರುದ್ಯೋಗ ಸಮಸ್ಯೆಗೆ ಪರಿಹಾರೋಪಾಯ ದಕ್ಕದು. ಹೀಗಾಗಿ ಕೈಗಾರಿಕಾ ವಲಯದ ಸಂವರ್ಧನೆ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಪರಿಸರ ಮಾಲಿನ್ಯಕ್ಕೆ, ವಿವೇಚನೆಯಿಲ್ಲದೆ ಪಟಾಕಿ ಸುಡುವಂಥ, ಕಾಲ್ನಡಿಗೆಯಲ್ಲೇ ತೆರಳಬಲ್ಲ ತಾಣಕ್ಕೂ ವಾಹನಗಳನ್ನು ಬಳಸುವಂಥ, ಅವು ಪರಿಸರಕ್ಕೆ ಮಿತಿಮೀರಿ ಹೊಗೆಯುಗುಳುವಂಥ ‘ಸ್ವಯಂಕೃತಾಪರಾಧ’ ಸ್ವರೂಪದ ಕೊಡುಗೆಯೂ ಇದೆ ಎಂಬುದನ್ನು ಮರೆಯಲಾಗದು. ದೀಪಾವಳಿ ಸಂದರ್ಭದ ಪಟಾಕಿ ಆರ್ಭಟದಿಂದಾಗಿಯೇ ಚೆನ್ನೈ, ದೆಹಲಿ ಮತ್ತು ಮುಂಬೈನಂಥ ನಗರಗಳಲ್ಲಿ ತೀವ್ರ ವಾಯುಮಾಲಿನ್ಯವಾಗುವ ಮಾಹಿತಿಗಳಿವೆ. ಆದ್ದರಿಂದ ಕುಟುಂಬದ ಮಟ್ಟದಲ್ಲಿ, ಸಮಾಜದ ವಿವಿಧ ಸ್ತರಗಳಲ್ಲಿ ಈ ಕುರಿತು ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ. ‘ಸ್ವಚ್ಛಭಾರತ‘ದಂಥ ಉಪಕ್ರಮದ ಘೋಷಣೆಯಾದಾಗ ರಾಷ್ಟ್ರಕ್ಕೆ ರಾಷ್ಟ್ರವೇ ಸ್ಪಂದಿಸಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದನ್ನು ಕಂಡಿದ್ದೇವೆ. ಆದ್ದರಿಂದ, ಆಯಾ ರಾಜ್ಯಗಳು ಕೈಗೊಳ್ಳುವ ಪರಿಹಾರೋಪಾಯಗಳು ಮಾತ್ರವಲ್ಲದೆ, ಭಾರತದಂಥ ಒಕ್ಕೂಟ ವ್ಯವಸ್ಥೆಗೆ ಹೊಂದಿಕೊಳ್ಳುವಂಥ, ಸರ್ವಾನ್ವಯವಾಗುವಂಥ ಕಾರ್ಯನೀತಿಯೊಂದನ್ನು ಕೇಂದ್ರ ಸರ್ಕಾರ ರೂಪಿಸಬೇಕಿದೆ. ‘ಇರುವುದೊಂದೇ ಭೂಮಿ, ಕುಡಿವುದೊಂದೇ ನೀರು, ಸೇವಿಸುವುದೊಂದೇ ಗಾಳಿ’ ಎಂಬುದು ದಾರ್ಶನಿಕರ ಒಳನೋಟ ಮಾತ್ರವೇ ಅಲ್ಲ, ನಮ್ಮ ನೆಲ-ಜಲ-ಗಾಳಿಯನ್ನು ನಿರಂತರವಾಗಿ ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕಾಗಿರುವುದರ ಅನಿವಾರ್ಯತೆಯನ್ನು ಒತ್ತಿಹೇಳುವ ಸುವರ್ಣಸೂತ್ರವೂ ಹೌದು. ಆದ್ದರಿಂದ ಪರಿಸರ ಮಾಲಿನ್ಯದಂಥ ಗಂಭೀರ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಮಗ್ರ ಕಾರ್ಯಸೂಚಿಯೊಂದನ್ನು ರೂಪಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.

Leave a Reply

Your email address will not be published. Required fields are marked *

Back To Top