Friday, 21st September 2018  

Vijayavani

Breaking News

ಆಂತರ್ಯದಿಂದಲೇ ಬದಲಾದ ಸಾಣೇಹಳ್ಳಿ

Saturday, 11.11.2017, 3:03 AM       No Comments

| ನರೇಂದ್ರ ರೈ ದೇರ್ಲ

ಕೆಲವೊಂದು ಮಠಾಧಿಪತಿಗಳ ಬಾಯಿಂದ ಕೊಳಕು, ಅಸಹನೀಯ ಮಾತುಗಳು ಹುಟ್ಟುತ್ತಿರುವ ಹೊತ್ತು ಅದೊಂದು ಮಠದ ಅಂಗಳದಲ್ಲಿ ನಾಟಕ-ಭಾಷಣ ಕೇಳಲು ಹತ್ತಾರು ಸಾವಿರ ಜನ ಮಧ್ಯರಾತ್ರಿಯವರೆಗೆ ಅಲುಗಾಡದೆ ಕೂರುತ್ತಾರೆಂದರೆ ನಂಬಲಾಗಲಿಲ್ಲ. ಬರೀ ಮುನ್ನೂರು ಮನೆಗಳ, ಅಬ್ಬಬ್ಬಾ ಅಂದ್ರೆ ಸಾವಿರದೈನೂರು ಮಂದಿ ಬದುಕುವ ಈ ಊರಕೇಂದ್ರಕ್ಕೆ ಹತ್ತಾರು ಗ್ರಾಮಗಳ, ಅಲ್ಲ ಬಿಡಿ, ಇಡೀ ರಾಜ್ಯದ ಬೇರೆ ಬೇರೆ ಊರುಗಳ ಕಲಾಸಕ್ತರು ಗಾಡಿ ಕಟ್ಟಿಕೊಂಡು ಬಂದು ಬೀಡು ಬಿಡುತ್ತಿರುವ ರೀತಿಗೆ ಬೆಚ್ಚಿಬಿದ್ದೆ. ಅಲ್ಲಿ ಅಷ್ಟೊಂದು ಮಂದಿಗೆ ಮಲಗಲು ವಸತಿಯಿಲ್ಲ. ತಿರುಗಿ ಊರು ಸೇರಲು ಉಚಿತ ವಾಹನಗಳಿಲ್ಲ. ತೀರಾ ನಾಗರಿಕ ಜಗತ್ತಿನಿಂದ ಬಹುದೂರ ಉಳಿದ ಹಳ್ಳಿಯದು. ಇವರೆಲ್ಲಾ ತಿರುಗಿ ನೂರಾರು ಮೈಲು ಅಂತರದ ಮನೆ ಸೇರುವುದಾದರೂ ಹೇಗೆ? ಎರಡು-ಮೂರು ಗಂಟೆಯ ನಾಟಕ, ಒಂದೂವರೆ ಗಂಟೆಯ ಸಭೆ, ಉಪನ್ಯಾಸ, ಸ್ವಾಮೀಜಿಯ ಸಂದೇಶ- ಇವರನ್ನೆಲ್ಲಾ ಏನು ಮಾಡುತ್ತೆ? ಸಾಣೇಹಳ್ಳಿಯ ಬಯಲುರಂಗದಲ್ಲಿ ಕೂತವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು.

ಹೆಗ್ಗೋಡು, ನಾಗತಿಹಳ್ಳಿ, ಸಾಣೇಹಳ್ಳಿ- ಕರ್ನಾಟಕದ ಗ್ರಾಮಚರಿತ್ರೆ ನಕ್ಷೆಯಲ್ಲಿ ಮುಖ್ಯವಾಗುವುದು ಇದೇ ಕಾರಣಕ್ಕೆ. ಈ ಊರುಗಳ ಗ್ರಾಮ್ಯರ ರಕ್ತವನ್ನೊಮ್ಮೆ ಪರೀಕ್ಷೆ ಮಾಡಬೇಕು. ಬೇರುಮೂಲದ ಆ ರೈತಾಪಿಗಳಲ್ಲಿ ಕಲೆ ತುಂಬುವ, ವರ್ಷಕ್ಕೊಮ್ಮೆ ನೆಲದವರನ್ನು ತಮ್ಮ ಸಾಲಸೋಲುಗಳಿಂದ ವಿಮುಖರನ್ನಾಗಿ ಮಾಡಿ ಸಾಂಸ್ಕೃತಿಕ ಚೈತನ್ಯ ತುಂಬುವ, ಗ್ರಾಮಗಳನ್ನು ನಿಜವಾಗಿ ಬೆಳಗುವ ಈ ಪರಿ ಅಸಾಧಾರಣವಾದುದು.

ಬಿತ್ತಿದ ಬೀಜ ಮೊಳೆತಿದೆಯಾ? ಹೊಲ-ಗದ್ದೆಗೆ ನಾಲೆಯ ನೀರು ಹರಿದಿದೆಯಾ? ತೋಟದ ಪಂಪು ಚಾಲೂ ಇದೆಯಾ? ಅಡಕೆ ರೇಟು ಏರಿದೆಯಾ? ಕೊಯ್ಲು, ಒಕ್ಕಣೆ, ಸಂಗ್ರಹ, ಬೆಳೆ-ಬೆಲೆ ಹೀಗೆ ನಿತ್ಯದ ನೋವುನುರಿಗಳನ್ನು ಮರೆತು ಚೋರ ಚರಣದಾಸನ ಮುಂದೆ, ಜಾನಪದ ಸಿರಿಜಾತ್ರೆಯ ಮುಂದೆ, ಕೃಷ್ಣೇಗೌಡರ ನುಡಿತೋರಣದ ಮುಂದೆ ಜಮಾಯಿಸಿ ಧ್ಯಾನಸ್ಥರಾಗುವುದೆಂದರೆ ಒಂದು ಸುಖವೇ. ಹಾಗೇ ನೋಡಿದ್ರೆ ಈ ಚರಣದಾಸ, ಈ ಜನಪದ ಸಿರಿಸಂಪದ, ಈ ಕೃಷ್ಣೇಗೌಡರು, ಈ ಸ್ವಾಮೀಜಿ ಎಲ್ಲರೂ ಎಲ್ಲವೂ ಹುಟ್ಟಿಕೊಂಡದ್ದು ಈ ದೇಶದ ಇಂಥದ್ದೇ ಹಳ್ಳಿಗಳಲ್ಲಿ. ಭಾರತವೇಕೆ? ಈ ಜಗತ್ತಿನ ಯಾವುದೇ ಕಲೆ ಇರಲಿ, ಅವುಗಳೆಲ್ಲವುಗಳಿಗೆ ನೆಲಮೂಲದ ಸಂಬಂಧ ಇದ್ದೇ ಇದೆ. ಅವು ಹುಟ್ಟಿಕೊಂಡ ನೆಲದಲ್ಲೇ ಕೂತು ಅವುಗಳಿಂದ ಆಚೆ-ಈಚೆ ಸರಿದ ಮನಸ್ಸುಗಳು ಒಟ್ಟಾಗಿ ಮತ್ತೆ ಮುಖಾಮುಖಿಯಾಗುವುದು, ಅನುಭವಿಸುವುದು- ಆ ಸುಖವೇ ಬೇರೆ.

ಆದರೆ ಅದನ್ನೆಲ್ಲಾ ಹಳ್ಳಿನೆಲದಲ್ಲಿ ಕಟ್ಟಿಕೊಡುವವರು ಬೇಕಲ್ಲ? ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಇದೊಂದು ಹುಚ್ಚು. ಭಕ್ತರು ಕೊಡುವ ದಾನಗಳನ್ನು ಜೋಡಿಸಿ ಅವರಿಗೊಂದು ಮೆಡಿಕಲ್ ಕಾಲೇಜೋ, ಇಂಜಿನಿಯರಿಂಗ್ ಕಾಲೇಜೋ ಕಟ್ಟಬಹುದಿತ್ತು. ಬಹುಪಾಲು ನಮ್ಮ ಮಠಗಳು ಬೆಳೆಯುವುದೇ ಹೀಗೆ. ಈ ಸ್ವಾಮೀಜಿ ಹಾಗೆ ಮಾಡಲಿಲ್ಲ. ಕಾರಣಗಳು ಮೂರು. ಒಂದು, ಸಿರಿಗೆರೆ ಮಠದ ಸ್ವಾಮಿ ಪರಂಪರೆ. ಎರಡು, ಸ್ವಾಮೀಜಿಯೊಳಗೆ ಸ್ಥಾಯಿಯಾಗಿರುವ ಸಾಹಿತ್ಯ-ಸಾಂಸ್ಕೃತಿಕ ಆಸಕ್ತಿ. ಮೂರು, ಸಿಜಿಕೆಯಂಥ ಮಾರ್ಗದರ್ಶಕರ ಸಂಬಂಧ ಮತ್ತು ಚೋದನೆ.

ಈ ದೇಶದ ಯಾವುದೇ ಕಲೆ ಇರಲಿ, ಅದು ಶಿಷ್ಟವೋ ಜಾನಪದವೋ ಅದಕ್ಕೊಂದು ಸಹವಾಸದ ಪಾಯವಿರುತ್ತದೆ. ರಂಗದ ಮೇಲೆ ಒಬ್ಬನೇ ಕೂತು ಹಾಡುವ, ನುಡಿಸುವ, ಬಾರಿಸುವ ಎಷ್ಟೋ ಕಲೆಗಳಿರಬಹುದು. ಹಾಗಂತ ಅವನು ಏಕಾಂಗಿಯೂ ಅಲ್ಲ, ಅದು ಏಕಾಂಕವೂ ಅಲ್ಲ. ನಮ್ಮ ಗ್ರಾಮಗಳು ಹೀಗೆಯೇ. ನೆಲದವರೊಂದಿಗೆ ಕಾಣದ, ಎಲ್ಲೋ ಕೋದುಕೊಂಡ ಇನ್ನೊಬ್ಬನ ಸಂಬಂಧ, ಸಹವಾಸ ಇದ್ದೇ ಇರುತ್ತದೆ.

ಕೃಷಿ ಮತ್ತು ರಂಗಭೂಮಿ, ಕೃಷಿ ಮತ್ತು ಜನಪದ, ಕೃಷಿ ಮತ್ತು ಸಂಸ್ಕೃತಿ- ಇಂಥ ಸಹವಾಸ ಸಂಬಂಧಗಳ ಅಭಿವ್ಯಕ್ತಿಗಳೇ. ಹಳ್ಳಿಯ ಹಾದಿಯ ನೆರಳುಮರ ಇರಬಹುದು, ಅರಳಿಕಟ್ಟೆ ಇರಬಹುದು, ಹಳ್ಳಿಯ ಸಾವು, ಮದುವೆ, ಮುಂಜಿ ಇರಬಹುದು, ಜಗಲಿ-ತಾಂಬೂಲ ಎಲ್ಲವೂ ಜನರನ್ನು ಜೋಡಿಸುತ್ತವೆ. ಗ್ರಾಮಗಳ ಹೊಲ-ಗದ್ದೆಗಳಲ್ಲಿ ನಮ್ಮ ಹೊಟ್ಟೆತುಂಬುವ ಯಾವುದೇ ನವಧಾನ್ಯಗಳಿರಲಿ, ಅವು ತೆನೆಬಿಚ್ಚಿ ಹೊಲ ತುಂಬಾ ಬೆಳೆಯಲಿ ಅವುಗಳ ನಡುವೆ ಒಮ್ಮೆ ನಿಂತು ನೋಡಿ. ನಿಂತ ನೀವು ಇನ್ನೊಬ್ಬರಿಗೆ ಕಾಣಿಸುತ್ತೀರಿ. ಆದರೆ ಅದೇ ಜಾಗದಲ್ಲಿ ಅಡಕೆ, ಕಾಫಿ, ರಬ್ಬರ್ ಬೆಳೆದಾಗ, ದುಡ್ಡಿನ ಗಿಡಗಳು ಬೆಳೆದಾಗ ನಿಂತ ನಾವು ಇನ್ನೊಬ್ಬರಿಗೆ ಕಾಣಿಸಲಾರೆವು. ಕಿಸೆ ತುಂಬುವ ಹಣ, ತಲೆ ತುಂಬುವ ಅಕ್ಷರ ಇಂದು ಗ್ರಾಮಗಳೊಳಗೆ ಬೇಲಿ-ಗೋಡೆಗಳನ್ನು ಸೃಷ್ಟಿಸುತ್ತಿವೆ. ಹಾಗೆಯೇ ಸ್ಥಳೀಯ ಆಡಳಿತಾಂಗ, ಅಧಿಕಾರ ವಿಕೇಂದ್ರೀಕರಣ ಹಳ್ಳಿಮನೆಗಳಲ್ಲೂ ರಾಜಕೀಯ ತುಂಬಿತು. ಅಪ್ಪ-ಮಗ, ತಾಯಿ-ಮಗಳು ಬೇರೆ ಬೇರೆ ಪಕ್ಷಗಳಿಗೆ ಜೋತುಬಿದ್ದದ್ದು, ಊರ ಮಕ್ಕಳು ಓದಿ ಊರು ಬಿಟ್ಟದ್ದು, ಹಳ್ಳಿಗಳು ಮೊಬೈಲ್ ರೇಂಜ್​ಗೆ ಒಳಪಟ್ಟಿದ್ದು, ಮಹಾನಗರ ಸೇರುವ ಟಾರುರಸ್ತೆಗಳು, ನಗರದ ಶಿಕ್ಷಣದಂಗಡಿಯ ಮುಂದೆ ರಾಶಿ ಸುರಿಯುವ ಹಳದಿ ಬಸ್ಸುಗಳು- ಎಲ್ಲವೂ ಇಂದು ಹಳ್ಳಿಗಳನ್ನು ಹಳ್ಳಿಗಳಾಗಲು ಬಿಡಲೇ ಇಲ್ಲ. ಕೆಸರಲ್ಲಿ ದೇಹಗಳನ್ನಿಟ್ಟುಕೊಂಡು ಮನಸ್ಸನ್ನು ಮಹಾನಗರಗಳೊಂದಿಗೆ ಬೆಸೆದುಕೊಂಡ ಈ ಪರಕಾಯ ಪ್ರವೇಶದ ಹುಚ್ಚು ಬೆಂತರಗಳಿಂದ ಸಾಣೇಹಳ್ಳಿಯನ್ನು ಪಾರುಮಾಡಿದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರಿಗೆ ನೂರು ಪ್ರಣಾಮಗಳು.

ಈ ಸಾಣೇಹಳ್ಳಿಯಲ್ಲಿ ಬರೀ ಒಂದಲ್ಲ, ಒಟ್ಟು ಐದು ರಂಗಮಂದಿರಗಳಿವೆ. ಭಾರತ ಬಿಡಿ, ಈ ಜಗತ್ತಿನ ಯಾವ ಗ್ರಾಮಗಳಲ್ಲೂ ಬಹುಶಃ ಇಷ್ಟೊಂದು ರಂಗಮಂದಿರಗಳಿಲ್ಲ. ಹೇಳಿಕೇಳಿ ಮಠ, ದೇವಸ್ಥಾನ ಇದ್ದೀತು ಎಂದು ಹುಡುಕಾಡಿದೆ. ಎಲ್ಲೂ ಸಿಗಲಿಲ್ಲ. ಈ ಊರಲ್ಲಿ ಭಕ್ತಿ, ಆರಾಧನೆ, ನಂಬಿಕೆ, ಉಸಿರು ಎಲ್ಲವೂ ಬರೀ ನಾಟಕ, ಕಲೆ, ಸಂಗೀತ, ಶಿಕ್ಷಣಕ್ಕೇ ಇರಬೇಕು. ಒಂದು ಕಡೆ ಶಿವಕುಮಾರ ಬಯಲು ರಂಗಮಂದಿರ, ಹುಣಿಸೆಮರದ ಬಯಲು ರಂಗಮಂದಿರ, ಶಿವಶಂಕರಪ್ಪ ಒಳಾಂಗಣ ರಂಗಮಂದಿರ, ಗ್ರೀಕ್ ಮಾದರಿಯ ಬಯಲು ರಂಗಮಂದಿರ, ರಂಗಶಾಲೆ, ಜಲರಂಗ- ಇನ್ನೇನೋ.

ಶ್ರೀ ಪಂಡಿತಾರಾಧ್ಯರು ಸಾಣೇಹಳ್ಳಿಗೆ ಸ್ವಾಮೀಜಿಗಳಾಗಿ ಬಂದಾಗ ಇಲ್ಲೇನಿತ್ತು ಎಂದು ತಿಳಿಯಲು ತುಂಬಾ ವಯಸ್ಸಾದವರನ್ನೇ ಕೇಳಬೇಕಾಗಿಲ್ಲ. ಹಾಗೆಯೇ ಹೊರಗಡೆಯಿಂದ ಹೋದ ಯಾರನ್ನೇ ಆಗಲಿ ಇಲ್ಲಿಯ ಜನ ಒಳಗಿನವರೆಂದೇ ನೋಡುತ್ತಾರೆ. ಹಳ್ಳಿಗಳ ಉದ್ಧಾರವೆಂದರೆ ಅದು ಬರೀ ಧರ್ಮಪೀಠ, ರಾಜಕಾರಣ, ನಾಲೆ ಕಾಲುವೆ, ಕಾಲೇಜುಗಳಿಂದ ಮಾತ್ರ ಸಾಧ್ಯ ಎಂಬುದು ಸುಳ್ಳು. ಕಿಸೆಗೆ ದುಡ್ಡು ತುಂಬುವುದಷ್ಟೇ ಸುಧಾರಣೆ-ಅಭಿವೃದ್ಧಿಯಲ್ಲ. ಇವೆಲ್ಲವುಗಳಿಂದ ಆಗುವ ಅವಾಂತರ ನಮ್ಮ ಕಣ್ಣಮುಂದೆ ರಾಚುವ

ಹೊತ್ತಿಗೆ ಶ್ರೀ ಪಂಡಿತಾರಾಧ್ಯರು ಬೇರೆ ಬಗೆಯಲ್ಲಿ, ದಾರಿಯಲ್ಲಿ ಯೋಚಿಸಿದವರು. ಸಿರಿಗೆರೆ ಶಕ್ತಿಕೇಂದ್ರದ ಹಿರಿಯ ಸ್ವಾಮೀಜಿಗಳ ಸಿದ್ಧಾಂತವೂ ಇದೇ ಬಗೆಯದು. ಬರೀ ರಂಗಭಾಷೆಯೊಂದೇ ಅಲ್ಲ. ಪರಿಸರಮಾಲಿನ್ಯ, ಜಲಕೊಯ್ಲು, ರೈತಸಮಸ್ಯೆ, ಮಾಧ್ಯಮ, ಧರ್ಮ, ಶಿಕ್ಷಣದ ಕುರಿತೂ ಇಲ್ಲಿ ಗಂಭೀರ ಚರ್ಚೆಗಳಾಗುತ್ತವೆ.

ಭಾರತದ ಗ್ರಾಮಗಳು ಹೇಗೆ ಚಲಿಸುತ್ತಿರಬೇಕು ಮತ್ತು ಎಲ್ಲಿಗೆ ಚಲಿಸುತ್ತಿರಬೇಕು ಎಂಬುದಕ್ಕೆ ಸಾಣೇಹಳ್ಳಿ ಒಂದು ಸೊಗಸಾದ ಮಾದರಿ. ಬಡತನ, ಹಸಿವು, ಜಾತೀಯತೆ, ಮೌಢ್ಯ, ಮೂಢನಂಬಿಕೆ, ಸೋಮಾರಿತನ, ರಾಜಕಾರಣ, ವಯಸ್ಸು- ಹೀಗೆ ಬೇರೆ ಬೇರೆ ಕಾರಣಗಳಿಗೆ ನರಳುತ್ತಿರುವ ಗ್ರಾಮಗಳ ಕಾಯಿಲೆಗಳು, ಗಾಯಗಳು ಉಲ್ಬಣಗೊಳ್ಳದಂತೆ ಎಚ್ಚರದಿಂದ ಕಾಯಬೇಕಾದ ಅಗತ್ಯವಿದೆ. ಗ್ರಾಮಗಳ ನೆನಪಿನಲ್ಲೇ ಇರುವ, ಆದರೆ ಮತ್ತೆ ಹಳ್ಳಿಗೆ ಹೋಗಲಾಗದ ಧರ್ಮಸಂಕಟದಲ್ಲಿರುವ ಎಷ್ಟೋ ಶ್ರೀಮಂತ ನಗರವಾಸಿಗಳಿದ್ದಾರೆ. ಉದ್ಯಮ-ಉದ್ಯಮಿಗಳಿದ್ದಾರೆ. ಮಠಮಾನ್ಯಗಳ ಹೆಚ್ಚಿನ ಭಕ್ತರು ಇಂಥವರೇ. ತಮ್ಮನ್ನು ಹುಟ್ಟಿಸಿ ರೂಪಿಸಿದ ಹಳ್ಳಿಗಳಿಗೆ ಇಂಥವರು ಕೈತುಂಬಾ ಕೊಡಲು ಸಿದ್ಧರಿರುತ್ತಾರೆ. ಇವರಿಂದ ಪಡೆದು ಬರೀ ಸ್ಥಾವರಗಳನ್ನೇ ರೂಪಿಸಿ ಮತ್ತಷ್ಟು ಹಳ್ಳಿಗಳ ಪಾಯ ಕೆಡಿಸುವುದಲ್ಲ. ಅಳಿದುಳಿದ ಹಳ್ಳಿಗಳ ಮನವನ್ನು ಕೆಡದಂತೆ ಕಾಪಾಡಿ ವಲಸೆ ತಡೆಯಬೇಕು.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top