Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಆಂತರಿಕವಾಗಿಯೂ ಬಲಗೊಳ್ಳಬೇಕು ಭಾರತ

Tuesday, 06.06.2017, 3:00 AM       No Comments

ಭಾರತ ಅಭಿವೃದ್ಧಿಯೆಡೆಗೆ ವೇಗವಾದ ಹೆಜ್ಜೆ ಇಡುತ್ತಿದೆ ಎಂಬ ಹೆಗ್ಗಳಿಕೆಯ ಹೊರತಾಗಿಯೂ ಹಲವು ಕೊರತೆಗಳನ್ನು ಎದುರಿಸುತ್ತಿದೆ. ಹೊರಗಡೆ ಸುಂದರವಾಗಿ ಗೋಚರಿಸುವ ಈ ದೇಶ ಆಂತರಿಕವಾಗಿ ಜಝುರಿತವಾಗುತ್ತಿದೆ. ಇದನ್ನು ಗಮನಿಸಿ ಪರಿಹಾರ ಕಂಡುಕೊಳ್ಳದ ಹೊರತು ಸರ್ವತೋಮುಖ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲು ಸಾಧ್ಯವಿಲ್ಲ.

ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿ. ವಿಶ್ವದಲ್ಲಿ ಭಾರತ ಚಿನ್ನದ ಹಕ್ಕಿ ಎಂದೇ ಖ್ಯಾತಿ ಪಡೆದ ರಾಷ್ಟ್ರವಾಗಿತ್ತು. ಅಗೆದಷ್ಟೂ ಮುಗಿಯದ ಸಂಪತ್ತು ಈ ದೇಶದಾಗಿತ್ತು. ಹೀಗಾಗಿ ಬ್ರಿಟಿಷರು ನೂರಾರು ವರ್ಷಗಳ ಕಾಲ ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಇಲ್ಲಿನ ಸಂಪತ್ತನ್ನು ಕೊಳ್ಳೆಹೊಡೆದರು. ಹಲವು ವಿದೇಶಿಯರು ದಂಡೆತ್ತಿ ಬಂದರು. ಅವರೂ ತಮಗೆ ಸಿಕ್ಕಿದ್ದಷ್ಟನ್ನೆಲ್ಲ ದೋಚಿಕೊಂಡು ಹೋದರು. ಇದು ಸ್ವಾತಂತ್ರ್ಯೂರ್ವದ ಕಥೆ-ವ್ಯಥೆ. ಇಂದು ಭಾರತದ ಪರಿಸ್ಥಿತಿ ಪೂರ್ತಿ ಬದಲಾಗಿದೆ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ರಾಷ್ಟ್ರ ಇದೀಗ ಅಭಿವೃದ್ಧಿ ಹಾದಿಯಲ್ಲಿ ತುಂಬ ದೂರ ಕ್ರಮಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದೆ. ಈ ದಾರಿಯಲ್ಲಿ ಗಂಭೀರವಾದ ಸವಾಲುಗಳಿವೆ, ಅಡೆತಡೆಗಳು ಇವೆ. ಅವನ್ನು ಮೀರಿ ಸಾಗಬೇಕಾದ ಜರೂರತ್ತು ಇದೆ.

ಮಾನವ ಅಭಿವೃದ್ಧಿಗಾಗಿ ಅಗತ್ಯವಿರುವ ವಸ್ತುಗಳನ್ನು, ವಾತಾವರಣವನ್ನು ಒದಗಿಸುವುದರಲ್ಲಿ ಯಾವ ರಾಷ್ಟ್ರ ಮುಂಚೂಣಿಯಲ್ಲಿದೆ ಎಂಬ ಬಗ್ಗೆ ಈ ವರ್ಷ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ 122 ದೇಶಗಳ ಪೈಕಿ ಭಾರತಕ್ಕೆ 117ನೇ ಸ್ಥಾನ ಸಿಕ್ಕಿದೆ. ಅಂದರೆ ಈ ವರದಿ ಪ್ರಕಾರ ನಮ್ಮ ದೇಶಕ್ಕಿಂತ ಕೆಳಸ್ಥಾನದಲ್ಲಿ ಕೇವಲ 5 ರಾಷ್ಟ್ರಗಳು ಇವೆ. ಭಾರತ ಅಭಿವೃದ್ಧಿಶೀಲ ರಾಷ್ಟ್ರ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳ ಮೂಲಕ ವಿದೇಶಿ ಹೂಡಿಕೆಗಳನ್ನೂ ಸೆಳೆದುಕೊಂಡು ಕೈಗಾರಿಕಾ ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ ಎಂಬುದು ಸತ್ಯವೇ ಆಗಿದ್ದರೆ ಮಾನವನ ಅಭಿವದ್ಧಿಗೆ ಪೂರಕವಾಗಿರುವ ವಸ್ತುಗಳನ್ನು ಒದಗಿಸುವಲ್ಲಿ ಅಷ್ಟೊಂದು ಹಿಂದೆ ಉಳಿದಿದ್ದು ಯಾಕೆ? ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಹೀಗೇಕೆ? ಇದು ದೇಶದ ಜನತೆಗೆ ಮಾತ್ರವಲ್ಲ ವಿದೇಶಿಗರಲ್ಲೂ ಅಚ್ಚರಿ ಮೂಡಿಸಿದೆ.

ಬದಲಾದ ಪರಿಸ್ಥಿತಿ: ಕಳೆದ ವರ್ಷ ಭಾರತಕ್ಕೆ 113ನೇ ಸ್ಥಾನ ಸಿಕ್ಕಿತ್ತು. ಈ ವರ್ಷ ನಾಲ್ಕು ಸ್ಥಾನಗಳ ಇಳಿಕೆಯಾಗಿದೆ. ಇದು ಯಾಕಾಯಿತು, ಹೇಗಾಯಿತು? ವ್ಯವಸ್ಥೆಯ ದೋಷವೇ ಅಥವಾ ಅನುಷ್ಠಾನದ ಸಮಸ್ಯೆಯೇ ಎಂಬುದಕ್ಕೆಲ್ಲ ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ‘ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುತ್ತೇವೆ’ ಎಂದು ಬರೀ ಬಾಯಿಮಾತಿನಿಂದ ಹೇಳಿದರೆ ಯಾವುದೇ ಪ್ರಯೋಜನವಿಲ್ಲ. ಸಮಸ್ಯೆಯ ಆಳಕ್ಕೆ ಇಳಿದು ಈ ಸ್ಥಿತಿಗೆ ಕಾರಣವೇನು, ಅದಕ್ಕೆ ಕಂಡುಕೊಳ್ಳಬಹುದಾದ ಪರಿಹಾರವೇನು, ಅಭಿವೃದ್ಧಿಯ ಗತಿಯನ್ನು ಹೆಚ್ಚಿಸುವುದು ಹೇಗೆ? ಎಂಬೆಲ್ಲ ಸಂಗತಿಗಳ ಬಗ್ಗೆ ಅಂತರಾಳದಿಂದ ಅವಲೋಕನ ನಡೆಸಿ ಮುಂದೆ ಸಾಗಬೇಕಿದೆ.

ವಾಸ್ತವ ಗ್ರಹಿಸೋಣ: ದೇಶದಲ್ಲಿಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಆಳ್ವಿಕೆ ನಡೆಸುತ್ತಿದೆ. ಅವರ ದೂರದೃಷ್ಟಿ, ಪ್ರಗತಿ ನಿಟ್ಟಿನಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಚಿಂತನೆಗಳಿಂದ ಇಡೀ ವಿಶ್ವವೇ ಪ್ರಭಾವಿತವಾಗಿದೆ ಎಂಬುದು ಸತ್ಯವೇ. ಪರಿಸ್ಥಿತಿ ಹೀಗಿರುವಾಗ ಇಂತಹ ವರದಿಯನ್ನು ನಂಬಲು ಸಾಧ್ಯವೇ? ದೇಶಿಗರನ್ನು ಬಿಡಿ ವಿದೇಶಿಗರಲ್ಲೂ ಇಂತಹದ್ದೊಂದು ಪ್ರಶ್ನೆ ಕಾಡುತ್ತಿದೆ. ವಿಶ್ವಾದ್ಯಂತ ಭಾರತದ ಪ್ರಗತಿ ಮತ್ತು ವಿಕಾಸದ ವಿಚಾರವೇ ಚರ್ಚೆಯಲ್ಲಿರುವಾಗ ವಿದೇಶಗಳು ಕಣ್ಣರಳಿಸಿ ನೋಡುವುದರಲ್ಲಿ ಅಚ್ಚರಿಯೇನೂ ಇಲ್ಲ. ಆದಾಗ್ಯೂ ನಮ್ಮ ದೇಶದ ಸ್ಥಿತಿಯನ್ನು ವ್ಯಕ್ತಿಯೊಬ್ಬನ ವೈಯಕ್ತಿಕ ಜೀವನಕ್ಕೆ ಹೋಲಿಸುವುದಾದರೆ ಆತ ಬಹಿರಂಗ ಪ್ರಪಂಚಕ್ಕೆ ಉತ್ತಮ ಉಡುಪು ತೊಟ್ಟು ಆರೋಗ್ಯವಂತನಂತೆ, ಸ್ಥಿತಿವಂತನಂತೆ ಕಾಣುತ್ತಿದ್ದಾನೆಯಾದರೂ ಅಂತರಂಗದಲ್ಲಿ ಆತ ಜಝುರಿತವಾಗಿ ಹೋಗಿದ್ದಾನೆ. ಇಂಥ ಸ್ಥಿತಿಯನ್ನು ತುಂಬ ಸಮಯದವರೆಗೆ ಮರೆಮಾಚಲು ಹೇಗೆ ತಾನೇ ಸಾಧ್ಯ? ಹೀಗಾಗಿ ನಾವು ನಮ್ಮ ಕೊರತೆಗಳನ್ನು ನಿವಾರಿಸಿಕೊಳ್ಳುವ ಹಿನ್ನೆಲೆಯಲ್ಲಿ ಚಿಂತನೆ ನಡೆಸಲೇಬೇಕಾದ ಅಗತ್ಯವಿದೆ. ಜನರೀಗ ‘ಅಚ್ಛೇದಿನ್’ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ, ಭಾರತ ಆಂತರಿಕವಾಗಿ ಬಲಗೊಳ್ಳಬೇಕಿದೆ. ಆಂತರಿಕವಾಗಿ ಬಲಗೊಳ್ಳುವುದು ಎಂದರೆ ಪ್ರತಿ ನಾಗರಿಕನ ವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚಿಸುವುದಲ್ಲದೆ ಅಭಿವೃದ್ಧಿಯ ಲಾಭ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವುದು. ಇದಕ್ಕೆ ಅಡ್ಡಿಯಾಗಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ಕಿತ್ತೊಗೆಯಲು ಪರಿಣಾಮಕಾರಿ ಹೆಜ್ಜೆಗಳನ್ನು ಇರಿಸುವುದು. ಹಿಂದೆ ಬಾಹ್ಯ ಶಕ್ತಿಗಳ ಆಕ್ರಮಣದಿಂದ ನಮ್ಮ ದೇಶ ಸೊರಗಿತು ಎಂಬುದು ನಿಜ. ಆದರೀಗ, ಆಂತರಿಕ ಸಮಸ್ಯೆಗಳೇ ದೇಶವನ್ನು ದುರ್ಬಲ ಮಾಡುತ್ತಿವೆ. ಈ ನಿಟ್ಟಿನಲ್ಲಿ ರಾಜಕೀಯ ಏಳುಬೀಳುಗಳ ಬಗೆಗಿನ ಚರ್ಚೆಗಳನ್ನು ಬದಿಗೊತ್ತಿ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವುದು ಅಗತ್ಯವಾಗಿದೆ. ಭಾರತದಲ್ಲಿ 500 ಮತ್ತು 1,000 ರೂಪಾಯಿ ನೋಟುಗಳ ಚಲಾವಣೆ ನಿಷೇಧಿಸಿದಾಗ ದೇಶದ ಆರ್ಥಿಕ ವ್ಯವಸ್ಥೆ ಸುಸ್ಥಿರವಾಗಿದೆ ಎಂದು ಅನಿಸಿತ್ತು. ಇತ್ತೀಚಿನ ಜಿಡಿಪಿ ವರದಿ ನೋಡಿದಾಗ ವಾಸ್ತವ ಬೇರೆಯೇ ಇದೆ ಎಂಬುದು ಸ್ಪಷ್ಟವಾಗಿದೆ.

ಕಠಿಣ ಪರಿಶ್ರಮ ಬೇಕು: ಸೂಪರ್ ಪವರ್ ಆಗುವ ಸ್ಪರ್ಧೆಯಲ್ಲಿ ಚೀನಾ ಮತ್ತು ಭಾರತ ತೊಡಗಿಸಿಕೊಂಡಿವೆ ಎಂಬುದು ಗೊತ್ತಿರುವಂಥದ್ದೇ. ಈ ಎರಡೂ ದೇಶಗಳ ನಾಗಾಲೋಟ ಕಂಡು ಅಮೆರಿಕ, ರಷ್ಯಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಬೆರಗಾಗಿವೆ. ಅಷ್ಟಕ್ಕೂ, ಬರೀ ಒಂದೆರಡು ಕ್ಷೇತ್ರಗಳ ಅಭಿವೃದ್ಧಿಯನ್ನಷ್ಟೇ ಸಮಗ್ರ ಬೆಳವಣಿಗೆ ಎಂದು ಕರೆಯಲು ಸಾಧ್ಯವಿಲ್ಲ. ಎಲ್ಲ ಕ್ಷೇತ್ರ, ರಂಗಗಳ ಸಮಾನ ಅಭಿವೃದ್ಧಿಗೆ ಒತ್ತು ಕೊಡಬೇಕಿದೆ. ಆ ನಿಟ್ಟಿನಲ್ಲಿ ಭಾರತ ವಿಶ್ವದ ಸರ್ವಶ್ರೇಷ್ಠ ದೇಶವಾಗಿ ಹೊರಹೊಮ್ಮಲು ನಾವು ಇನ್ನಷ್ಟು ಕಠಿಣ ಪರಿಶ್ರಮ ಮಾಡುವ ಅಗತ್ಯವಿದೆ.

ನರೇಂದ್ರ ಮೋದಿ ಸರ್ಕಾರ ರಾಜಕೀಯ ರೂಪದಲ್ಲಿ ದೇಶದ ಜನತೆಯ ಮನಃಪಟಲದಲ್ಲಿ ಛಾಪು ಮೂಡಿಸುವಲ್ಲಿ ಸಫಲವಾಗಿದೆ. ಆದರೆ ಆರ್ಥಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಇಂತಹ ಸಾಧನೆ ಮಾಡುವುದಕ್ಕೆ ಇನ್ನೊಂದಷ್ಟು ಹೆಜ್ಜೆಗಳನ್ನಿರಿಸುವ ಅಗತ್ಯವಿದೆ. ಅಷ್ಟಕ್ಕೂ, ಭಾರತ ಇಂದು ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆಯೆಂದರೆ ಅದು ಕೇವಲ ಒಂದು ಸರ್ಕಾರದ ಚಮತ್ಕಾರವಲ್ಲ, ದೇಶದ ಜನತೆಯ ಪರಿಶ್ರಮದ ಫಲ ಅದರಲ್ಲಿ ಅಡಗಿದೆ ಎಂಬುದನ್ನು ಕಡೆಗಣಿಸುವಂತಿಲ್ಲ. ಈ ಶ್ರಮಶಕ್ತಿಯನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಿದೆ. ಅಪಾರ ಮಾನವ ಸಂಪನ್ಮೂಲವೇ ನಮ್ಮ ದೇಶಕ್ಕಿರುವ ಶಕ್ತಿ. ಈ ಮಾನವ ಸಂಪನ್ಮೂಲವನ್ನು ಸದುಪಯೋಗ ಪಡಿಸಿಕೊಂಡು, ರಾಷ್ಟ್ರನಿರ್ವಣದಲ್ಲಿ ತೊಡಗಿಸಬೇಕಿದೆ. ಆದರೆ, ದೇಶದಲ್ಲಿನ ನಿರುದ್ಯೋಗಿಗಳ ಸಂಖ್ಯೆ ನೋಡಿದಾಗ ನಿಜಕ್ಕೂ ಗಾಬರಿಯಾಗುತ್ತದೆ. ಮುಂಬರುವ ವರ್ಷಗಳಲ್ಲಿ ಉದ್ಯೋಗಸೃಷ್ಟಿಯ ವೇಗ ಹೆಚ್ಚದಿದ್ದರೆ ಈ ಸಮಸ್ಯೆ ಮತ್ತಷ್ಟು ಭೀಕರವಾಗಲಿದೆ. ಉದ್ಯೋಗ ರಂಗದ ಏಳ್ಗೆ ಆಗದೆ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು ತೀರ ಕಷ್ಟಕರ ಎಂಬುದನ್ನು ಮರೆಯುವಂತಿಲ್ಲ.

ಮುಂದಿನ ದಾರಿ: ಭಾರತ ಈಗಾಗಲೇ ದಕ್ಷಿಣ ಏಷ್ಯಾದಲ್ಲಿ ತನ್ನ ಛಾಪು ಮೂಡಿಸುತ್ತಿದೆ, ವಿಶ್ವದಲ್ಲಿ ನಂ.1 ಸ್ಥಾನವನ್ನು ಅಲಂಕರಿಸಲು ಬಹಳಷ್ಟು ದೂರ ಕ್ರಮಿಸುವ ಅಗತ್ಯವಿದೆ. ಇನ್ನು, ಸುಖಿ ರಾಷ್ಟ್ರಗಳ ವಿಚಾರಕ್ಕೆ ಬರುವುದಾದರೆ ಭಾರತಕ್ಕೆ ಹೋಲಿಸಿದರೆ ನೆರೆರಾಷ್ಟ್ರಗಳಾದ ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಚೀನಾ ಬಹಳಷ್ಟು ಮುಂದಿವೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಅಂಶಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಯಾಕೆಂದರೆ, ವರದಿ ವೈಜ್ಞಾನಿಕವಾಗಿ ತಯಾರಿಸಿರುವಂಥದ್ದಾಗಿದೆ. ಉತ್ತಮ ಆಡಳಿತ, ತಲಾ ಆದಾಯ, ಸ್ವಾಸ್ಥ್ಯ ವಿಶ್ವಾಸ, ಸ್ವಾತಂತ್ರ್ಯ ಮತ್ತು ಉದಾರತೆ ಮುಂತಾದ ಆರು ಅಂಶಗಳನ್ನಾಧರಿಸಿ ನಡೆಸಿರುವ ಅಧ್ಯಯನದಿಂದ ವರದಿ ತಯಾರಿಸಲಾಗಿದೆ.

ಈ ವಿಚಾರಗಳಲ್ಲಿ ಭಾರತದ ನಿರ್ವಹಣೆಯನ್ನು ತೀರಾ ಕಳಪೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಲ್ಲಿರುವ ಜಾತಿ-ಧರ್ಮಗಳು, ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ವಿಶ್ವಾಸದಿಂದ ನಿಭಾಯಿಸುವುದು ಸಾಮಾನ್ಯವಾದ ವಿಚಾರವಲ್ಲ. ಈ ದೇಶದಲ್ಲಿರುವ ಪ್ರತಿಯೊಂದು ಧರ್ಮ ಮತ್ತು ಜಾತಿಯ ನಂಬಿಕೆಯನ್ನೂ, ವಿಶ್ವಾಸವನ್ನೂ ನಿಭಾಯಿಸುವುದು, ಭಿನ್ನ ಭಿನ್ನ ಧರ್ಮ ಮತ್ತು ಜಾತಿಗಳಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ನೀಡುವುದು ಸರಳವಾದ ವಿಚಾರವೇನಲ್ಲ. ಇಲ್ಲಿರುವಷ್ಟು ಜಾತಿಗಳು ವಿಶ್ವದ ಯಾವುದೇ ದೇಶದಲ್ಲಿಲ್ಲ. ಹೀಗಾಗಿ ಎಲ್ಲರನ್ನೂ ಸಮಾನ ರೂಪದಲ್ಲಿ ನೋಡಿಕೊಳ್ಳುವುದು ಮತ್ತು ಅವರ ಜೀವನ ನಿರ್ವಹಣೆ, ಅವಶ್ಯಕತೆಗಳನ್ನು ಪೂರ್ಣಗೊಳಿಸುವುದು ಸುಲಭದ ಮಾತಲ್ಲ. ಹೀಗಾಗಿ ಭಾರತ ಯುಎನ್​ಒದ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಂಡುಬರದಿದ್ದರೂ 20-25ನೇ ಸ್ಥಾನದಲ್ಲಾದರೂ ಬರಬೇಕು.

ಧರ್ಮ, ಸಂಸ್ಕೃತಿಯ ರಕ್ಷಕ: ಭಾರತದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿಗಳ ಜತೆ ಜತೆಗೆ ಬೇರೆ ಧರ್ವಿುಯರೂ ಭಾರಿ ಸಂಖ್ಯೆಯಲ್ಲಿದ್ದಾರೆ. ಇವರ ಧರ್ಮಗಳಿಗೆ ಸಂಬಂಧಿಸಿದ ಪ್ರಮುಖ ತೀರ್ಥಕ್ಷೇತ್ರಗಳು ಭಾರತದಲ್ಲಿಲ್ಲ. ಆದರೂ ಅಲ್ಲಿಗೆ ತೆರಳುವ ಯಾತ್ರಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಸರ್ಕಾರ ಒದಗಿಸುತ್ತದೆ. ಎಲ್ಲ ಧರ್ಮಗಳಿಗೂ ಒಂದೇ ರೀತಿಯ ಮನ್ನಣೆ ನೀಡುವುದು ನೂರಕ್ಕೆ ನೂರು ಸಾಧ್ಯವಾಗದಿದ್ದರೂ ಈ ನಿಟ್ಟಿನಲ್ಲಿ ಪ್ರಯತ್ನವಂತೂ ನಡೆಯುತ್ತಿದೆ ಎಂಬುದು ಸಮಾಧಾನಕಾರ ಅಂಶ.

ಈ ಬಗ್ಗೆ ಇಲ್ಲಿ ನೆಲೆಸಿರುವ ವಿವಿಧ ಧರ್ವಿುಯರೇ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ವಿಶ್ವದಲ್ಲಿ ಬೇರೆ ಯಾವುದಾದರೂ ರಾಷ್ಟ್ರದಲ್ಲಿ ಭಾರತದಂತೆ ಎಲ್ಲ ಧರ್ಮಗಳಿಗೂ ಸಮಾನತೆ ಸಿಗುತ್ತಿದೆಯೇ? ಎಂದು ಪರಿಶೀಲಿಸಿದರೆ ಉತ್ತರ ನಕಾರಾತ್ಮಕವಾಗಿಯೇ ಇರುತ್ತದೆ. ಇಲ್ಲಿನ ಅದೆಷ್ಟೊ ಜಾತಿಗಳಿಗೆ, ಸಮುದಾಯಗಳಿಗೆ ತಮ್ಮದೇ ಆದ ವೈಯಕ್ತಿಕ ಕಾನೂನಿದೆ. ಯಾವತ್ತಾದರೂ ಸರ್ಕಾರ ಇದನ್ನು ನಿರ್ಲಕ್ಷಿಸಿದೆಯೇ? ಸ್ವತಃ ವಿಶ್ವಸಂಸ್ಥೆಯೇ ಇದನ್ನು ಪ್ರಶಂಸಿಸಿದೆ. ಯಾವುದೇ ಧರ್ಮದ ವಸ್ತ್ರಸಂಹಿತೆ, ಅವರ ಜೀವನಶೈಲಿ ಯಾವುದಕ್ಕೂ ಸರ್ಕಾರದಿಂದ ಅಡ್ಡಿಯಾಗಿಲ್ಲ. ಭಾಷೆಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಹಿತ್ಯಗಳು ಭಾರಿ ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಭಾರತದಲ್ಲಿ ಮುದ್ರಣವಾಗುವಷ್ಟು ಕುರಾನ್ ಸೌದಿ ಅರಬ್, ಇರಾನ್ ಮತ್ತು ಪಾಕಿಸ್ತಾನದಲ್ಲಿಯೇ ಆಗುವುದಿಲ್ಲ. ಭಾರತ ಧರ್ಮ ಮತ್ತು ಸಂಸ್ಕೃತಿಯ ರಕ್ಷಕನಾಗಿದೆ.

ಒಂದು ಕಾಲದಲ್ಲಿ ಯುರೋಪ್​ನ ನಾರ್ವೆ, ಸ್ವೀಡನ್, ಫಿನ್ಲೆಂಡ್ ಮತ್ತು ಕೆನಡಾವನ್ನು ಅತ್ಯುತ್ಕ್ರಷ್ಟ ರಾಷ್ಟ್ರಗಳೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ಇಲ್ಲಿನ ಪರಿಸ್ಥಿತಿಯೂ ಬದಲಾಗಿದೆ. ಮಾನವೀಯತೆಯನ್ನು ಆಧರಿಸಿ ನೋಡುವುದಾದರೆ ಭಾರತೀಯರು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಮಾನವೀಯತೆ ಜತೆಗೆ ಆರ್ಥಿಕವಾಗಿಯೂ ಭಾರತ ಮುನ್ನಡೆಯತ್ತ ಸಾಗಿದರೆ ಇದು ಅಭಿಮಾನ ಮತ್ತು ಗೌರವದ ವಿಚಾರವಾಗಿರಲಿದೆ. ಆದರೆ ಒಂದಂಶವಂತೂ ಸ್ಪಷ್ಟ, ನಮ್ಮ ನೆರೆರಾಷ್ಟ್ರಗಳ ನಿರಂತರ ದಾಳಿ, ಆಕ್ರಮಣ ಪ್ರವೃತ್ತಿಯ ಹೊರತಾಗಿಯೂ ನಾವು ಅಭಿವೃದ್ಧಿ ದಾರಿಯಲ್ಲಿಯೇ ಹೆಜ್ಜೆ ಇರಿಸಿದ್ದೇವೆ ಎಂಬುದು ಹೆಮ್ಮೆಯ ವಿಚಾರ. ಯಾವೆಲ್ಲ ಕ್ಷೇತ್ರಗಳಲ್ಲಿ ಭಾರತ ಅಭಿವೃದ್ಧಿ ಸಾಧಿಸಬೇಕಿದೆಯೋ ಮುಂದಿನ ದಿನಗಳಲ್ಲಿ ಅದರಲ್ಲಿ ಪ್ರಗತಿ ಸಾಧಿಸಿದಲ್ಲಿ ಪ್ರಾಚೀನ ಭಾರತದ ಗೌರವ ಮರುಕಳಿಸುವಂತೆ ಮಾಡುವುದರಲ್ಲಿ ನಾವು ಸಫಲರಾಗಲಿದ್ದೇವೆ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

 

Leave a Reply

Your email address will not be published. Required fields are marked *

Back To Top