Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಆಂಗ್ಲ ಪುಂಡರ ಬೆಂಡೆತ್ತಿದ ಕ್ರಾಂತಿನಾಯಕ

Thursday, 07.09.2017, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ

ವಿವೇಕಾನಂದ-ನಿವೇದಿತಾ-ಅರವಿಂದ-ಭೋಲಾನಂದ ಗಿರಿಗಳ ಕುಲುಮೆಯಲ್ಲಿ ತಯಾರಾದ, ಕ್ಷಾತ್ರತೇಜವನ್ನು ಪ್ರತಿನಿಧಿಸಿದ ವೀರಾಗ್ರಣಿ ಜತೀನ್ ಮುಖರ್ಜಿ. ಆತ ಪುಂಡ ಆಂಗ್ಲರಿಗೆ ಬುದ್ಧಿ ಕಲಿಸಿದ ಘಟನೆಗಳೆಷ್ಟೋ. ಸನ್ಯಾಸಿಯಾಗಲು ಹೊರಟಿದ್ದ ಜತೀನ್ ಕ್ರಾಂತಿಕಾರಿಯಾಗಿ ಪರಿವರ್ತನೆಗೊಂಡು ಬ್ರಿಟಿಷರನ್ನು ಕಂಗೆಡಿಸಿದ.

 

‘ಜತೀನ್ ಮುಖರ್ಜಿಯ ಸಾಹಸಗಳನ್ನು ಕುರಿತು ನೀವು ಕೇಳಿಲ್ಲವೇ? ಅವನೊಬ್ಬ ಅದ್ಭುತ ವ್ಯಕ್ತಿ! ಇಡೀ ಮನುಕುಲದ ಮುಂಚೂಣಿಯನ್ನಲಂಕರಿಸಬಲ್ಲಂಥ ಅದ್ವಿತೀಯ ವ್ಯಕ್ತಿತ್ವ ಅವನದು! ಅಂಥ ದೇಹ ಸೌಂದರ್ಯ ಮತ್ತು ಭೀಮಬಲಗಳ ಅಪೂರ್ವ ಸಮ್ಮಿಲನವನ್ನು ನಾನೂ ಬೇರೆಲ್ಲೂ ಕಂಡಿಲ್ಲ. ಒಬ್ಬ ಮಹಾಯೋಧನ ಶರೀರ ಶಿಲ್ಪ ಅವನದು‘- ಮಹರ್ಷಿ ಅರವಿಂದರ ಘೊಷರು ಪಾಂಡಿಚೆರಿಯಲ್ಲಿದ್ದಾಗ ಒಮ್ಮೆ ತಮ್ಮ ಸುತ್ತ ಕುಳಿತಿದ್ದ ಶಿಷ್ಯರೊಂದಿಗೆ ಹೇಳಿದ ಮಾತು.

ಮತ್ತೊಬ್ಬ ಶ್ರೇಷ್ಠ ಇತಿಹಾಸಕಾರ ಹಾಗೂ ಯುಗಾಂತರ ಕ್ರಾಂತಿ ಸಂಸ್ಥೆಯ ನಾಯಕ ಭೂಪೇಂದ್ರಕುಮಾರ ದತ್ತ ಒಂದು ಲೇಖನದಲ್ಲಿ ಹೀಗೆಂದಿದ್ದಾರೆ: ‘ಇಪ್ಪತ್ತನೆಯ ಶತಮಾನದ ಭಾರತೀಯ ಕ್ರಾಂತಿಕಾರಿ ಚಳವಳಿಯು, ತಮ್ಮನ್ನು ತಾವೇ ನಾಡಿಗಾಗಿ ಸಮರ್ಪಿಸಿಕೊಂಡ ಸಿಡಿಲಿನಂತಹ ಹಲವರನ್ನು ರೂಪಿಸಿತು. ಅವರ ಪೈಕಿ ಅತ್ಯಂತ ಮುಖ್ಯವಾದ ಪ್ರಾತಿನಿಧಿಕ ಆದ್ಯ ಪ್ರವರ್ತಕರೆಂದರೆ ಸ್ವಾಮಿ ವಿವೇಕಾನಂದರು. ಮತ್ತು ಅದರ ಅತ್ಯಂತ ಹೆಚ್ಚಿನ ಕ್ರಿಯಾಶೀಲ ಪ್ರಾತಿನಿಧಿಕ ಅಧ್ವರ್ಯುವೆಂದರೆ ಜತೀನ್ ಮುಖರ್ಜಿ. ಇವರಿಬ್ಬರೂ ತಮ್ಮ ದೇಶಬಾಂಧವರಿಗೆ ನೀಡಿದ ಸಂದೇಶವಾದರೂ ಏನು? ಪುರುಷಸಿಂಹರಾಗಿ! ಕೇವಲ ಪುರುಷಸಿಂಹರಾಗಿ!’

ಆಗಿನ ಆಂಗ್ಲ ಸರ್ಕಾರದ ಕೇಂದ್ರ ಗುಪ್ತಚಾರ ವಿಭಾಗದ ಡಿ.ಐ.ಜಿ ಆಗಿದ್ದ ಜಿ.ಸಿ. ಡೆನ್​ಹಮ್ ಜತೀನ್ ಮುಖರ್ಜಿಯ ಬಲಿದಾನದ ಅನಂತರ ಹೀಗೆ ಉದ್ಗರಿಸಿದ್ದ; ‘ಸಮಸ್ತ ಬಂಗಾಳಿ ಕ್ರಾಂತಿಕಾರಿಗಳ ಪೈಕಿ ಅತ್ಯಂತ ಧೈರ್ಯಶಾಲಿಯೂ ಅತ್ಯಂತ ಕ್ರಿಯಾಶೀಲನೂ ಹಾಗೂ ಅತ್ಯಂತ ಅಪಾಯಕಾರಿ ವ್ಯಕ್ತಿಯೂ ಆಗಿದ್ದ’. 1915ರ ಸೆಪ್ಟೆಂಬರ್ 10ರಂದು ಚಾಸ್​ಖಂಡದ ಸಮರದಲ್ಲಿ ಜತೀನ್ ಮುಖರ್ಜಿ ಹುತಾತ್ಮನಾದನೆಂದು ಸುದ್ದಿ ಕೇಳಿದಾಗ ಆ ಕಾಲದ ಮಹಾನ್ ಬಂಗಾಳಿ ಕವಿ ಕಾಜಿ ನಜ್ರುಲ್ ಇಸ್ಲಾಂ ಐದು ಪದ್ಯಗಳಿದ್ದ ಒಂದು ಸುದೀರ್ಘ ಕಥನ ಕಾವ್ಯದಲ್ಲಿ ಅವನನ್ನು ರಾಣಾ ಪ್ರತಾಪನಿಗೆ ಹೋಲಿಸಿ ಹೀಗೆ ಬರೆದಿದ್ದಾರೆ: ‘ಚಾಸಖಂಡದ ಸಮರಾಂಗಣದಲಿ ಹಲದಿ ಘಾಟಿಯ ಮರುದನಿ ಕೇಳಿತ್ತು, ಜತೀಂದ್ರನಾಥನ ರಣಹೂಂಕಾರದಿ ಪ್ರತಾಪಸಿಂಹನ ಗರ್ಜನೆ ಮೊಳಗಿತ್ತು’.

ಕರ್ನಾಟಕದ ಪ್ರಸಿದ್ಧ ವಿದ್ವಾಂಸ, ಲೇಖಕ ಡಾ. ಎಸ್.ಆರ್. ರಾಮಸ್ವಾಮಿಯವರು ಜತೀನ್ ಮುಖರ್ಜಿಯನ್ನು ಕುರಿತು ಹೇಳಿರುವ ಮಾತುಗಳಿವು: ‘…ಬಂಕಿಮಚಂದ್ರ, ವಿವೇಕಾನಂದರಿಂದ ಸ್ಪೂರ್ತಿ, ಲೋಕಮಾನ್ಯ ತಿಲಕ್-ಬಿಪಿನ್​ಚಂದ್ರ ಪಾಲ್ – ಲಜಪತರಾಯರಿಂದ ಪ್ರೇರಣೆ, ನಿವೇದಿತಾ-ಅರವಿಂದರಿಂದ ಮಾರ್ಗದರ್ಶನ ಇವು ಮುಪ್ಪರಿಗೊಂಡು ಸಾಕಾರಗೊಂಡ ಕ್ರಾಂತಿರತ್ನಗಳು ಬಾಘಾ ಜತೀನ್ ಮತ್ತು ಸಂಗಡಿಗರು’.

ಇಂಥ ಮಹಾ ಸೇನಾಪತಿಯೊಬ್ಬ ಈಗ ಅಪರಿಚಿತ. ನಮ್ಮ ಘನ ಸೆಕ್ಯುಲರ್ ಇತಿಹಾಸಕಾರರ ದೃಷ್ಟಿಯಲ್ಲಿ ಇಂಥ ಶ್ರೇಷ್ಠ ಹೋರಾಟಗಾರ ಅವರ ಗ್ರಂಥಗಳಲ್ಲಿ ಒಂದೆರಡು ಸಾಲು ಉಲ್ಲೇಖ ಪಡೆಯಲೂ ಅರ್ಹನಲ್ಲ. ಇದೇ ಬಾಘಾ ಜತೀನನನ್ನು ಮತ್ತು ಅವನ ಕಾಲವನ್ನು ಕುರಿತು ಇದೇ ಅಂಕಣಕಾರ ಡೆಮಿ ಆಕಾರದಲ್ಲಿ ಒಂದು ಸಾವಿರ ಪುಟಗಳಷ್ಟು ಇರುವ ‘ರುಧಿರಾಭಿಷೇಕ’ ಕೃತಿ ರಚಿಸಲು ಸಾಧ್ಯವಾಗಿದೆ ಎಂದರೆ ರಾಷ್ಟ್ರೀಯ ದೃಷ್ಟಿಕೋನದ ಲೇಖಕನಿಗೂ ದಾರಿ ತಪ್ಪಿದ ಸೆಕ್ಯುಲರ್​ವಾದಿ ಲೇಖಕರ ದೃಷ್ಟಿಗೂ ಇರುವ ಅಂತರ ತಿಳಿದುಬರುತ್ತದೆ. ಹಾಗೆಯೇ ಈ ಢೋಂಗಿ ಸೆಕ್ಯುಲರ್​ವಾದಿಗಳ ದೃಷ್ಟಿಯಲ್ಲಿ ಭಗತ್ ಸಿಂಗ್, ಚಂದ್ರಶೇಖರ ಆಜಾದರು ಭಯೋತ್ಪಾದಕರು. ಅವರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಹಚ್ಚಿ ಒಂದೆರಡು ಸಾಲು ಬರೆದಿದ್ದಾರೆ. ಆದರೆ ದೇಶನಿಷ್ಠೆಯ ದೃಷ್ಟಿಯ ಈ ಅಂಕಣಕಾರ ಭಗತ್​ಸಿಂಗನನ್ನು ಕುರಿತು ನಾಲ್ಕುನೂರ ಐವತ್ತು ಪುಟಗಳ ಹಾಗೂ ಚಂದ್ರಶೇಖರ ಆಜಾದನನ್ನು ಕುರಿತು ಏಳು ನೂರು ಪುಟಗಳ ಗ್ರಂಥಗಳನ್ನು ಹೊರತರಲು ಸಾಧ್ಯವಾಗಿದೆ. ಅವು ಇಂದಿಗೂ ಬೆಸ್ಟ್ ಸೆಲ್ಲರ್​ಗಳಾಗಿವೆ ಎಂದರೆ ಆ ದೇಶಭಕ್ತ ಧೀರ ಚೇತನಗಳಿಗೆ ಈ ಅಪ್ರಾಮಾಣಿಕ ಇತಿಹಾಸಕಾರರಿಂದ ಆಗಿರುವ ಘೊರ ಅಪಚಾರದ ಅರಿವಾಗುತ್ತದೆ.

ಬಾಘಾ ಜತೀನ್ ಆದದ್ದು: ಈ ಬಾಘಾ ಜತೀನ್ ಅಥವಾ ಜತೀಂದ್ರನಾಥ ಮುಖ್ಯೋಪಾಧ್ಯಾಯ ಜನಿಸಿದ್ದು 1879ರ ಡಿಸೆಂಬರ್ 7ರಂದು. ಅವನದು ವೇದನಿಷ್ಠ ಕುಲೀನ ಬ್ರಾಹ್ಮಣ ಮನೆತನ. ತಂದೆ ಉಮೇಶಚಂದ್ರ ಮುಖ್ಯೋಪಾಧ್ಯಾಯ ಮಹಾನ್ ವೇದ ಪಂಡಿತ. ತಾಯಿ ಶರತ್​ಶಶಿ ದೇವಿ ಏನೂ ಕಡಿಮೆಯಲ್ಲ. ಬಂಕಿಮಚಂದ್ರರ ಹಾಗೂ ಆ ಕಾಲದ ಉತ್ತಮ ಸಾಹಿತ್ಯವನ್ನೆಲ್ಲ ಓದಿ ಜೀರ್ಣಿಸಿಕೊಂಡಿದ್ದ ಆಕೆ ಸ್ವತಃ ಕವಯಿತ್ರಿ. ಜೀಜಾಬಾಯಿ ಶಿವಾಜಿಗೆ ವೀರ ಪುರುಷರ ಕಥೆ ಹೇಳಿ ಅವನಲ್ಲಿ ಕ್ಷಾತ್ರತೇಜವನ್ನು ಆವಾಹಿಸಿದಂತೆ ಶರತ್​ಶಶಿ ದೇವಿಯೂ ಜತೀನನ ಶೈಶವದಲ್ಲಿ ಅದೇ ಕೆಲಸ ಮಾಡಿದಳು. ಜತೀನನಿಗೆ ಮತ್ತಷ್ಟು ಪ್ರೇರಣೆ ನೀಡಿದ ಅಕ್ಕ ಒಬ್ಬಳಿದ್ದಳು. ಅವಳು ಹೆಸರು ವಿನೋದಾ ಬಾಲಾ.

ಅವರಿದ್ದುದು ನಾದಿಯಾ ಜಿಲ್ಲೆಯ ಕುಷ್ಟಿಯಾ ತಾಲ್ಲೂಕಿನ ಕೋಯಾ ಎಂಬ ಹಳ್ಳಿಯಲ್ಲಿ (ಈಗ ಅದು ಬಾಂಗ್ಲಾದೇಶದಲ್ಲಿದೆ). 1906ನೆ ಇಸವಿಯ ಏಪ್ರಿಲ್ ತಿಂಗಳಿನಲ್ಲಿ ಬರೋಡಾದಿಂದ ಕಲ್ಕತ್ತೆಗೆ ಬಂದಿದ್ದ ಅರವಿಂದ ಘೊಷರನ್ನು ಕಾಣಲು ಜತೀನ್ ಮುಖರ್ಜಿ ಕೋಯಾ ಗ್ರಾಮದಿಂದ ಕಲ್ಕತ್ತೆಯ ಕಡೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ಕಾಡನ್ನು ದಾಟಬೇಕಾಗಿ ಬಂತು. ಸಂಜೆ ಕತ್ತಲಾಗುತ್ತಿದ್ದ ಸಮಯ. ಇದ್ದಕ್ಕಿದ್ದಂತೆ ಅವನ ದಾರಿಗೆ ಅಡ್ಡವಾಗಿ ಒಂದು ಬಂಗಾಳಿ ಹೆಬ್ಬುಲಿ ಬಂತು. ಯಾವಾಗಲೂ ಆತ್ಮರಕ್ಷಣೆಗಾಗಿ ಬಳಿಯಲ್ಲಿರಿಸಿಕೊಳ್ಳುತ್ತಿದ್ದ ಒಂದು ದೊಡ್ಡ ಚೂರಿಯನ್ನು ಕೈಯಲ್ಲಿ ಹಿಡಿದುಕೊಂಡು ಸುಮಾರು ಅರ್ಧಗಂಟೆ ಕಾಲ ಅದರೊಂದಿಗೆ ಸೆಣಸಾಡಿ ಅದನ್ನು ಕೊಂದು ಹಾಕಿ ‘ಬಾಘಾ ಜತೀನ್’ ಎಂಬ ಹೊಸ ಹೆಸರು ಗಳಿಸಿ ತನ್ನ ಧೈರ್ಯ ಸಾಹಸ ಶಕ್ತಿ ಸಾಮರ್ಥ್ಯಗಳ ಪರಿಚಯ ಮಾಡಿಕೊಟ್ಟ ಮಹಾಶೂರ ಅವನು. ಅಂದಿನ ಬಂಗಾಳ ಸರ್ಕಾರ ಅವನ ಈ ಸಾಹಸಕ್ಕೆ ಮಾರುಹೋಗಿ ಹುಲಿಯೊಂದಿಗೆ ಹೋರಾಡುತ್ತಿದ್ದ ಒಬ್ಬ ಯೋಧನ ಉಬ್ಬುಚಿತ್ರವನ್ನು ರಜತ ಫಲಕದ ಮೇಲೆ ಕೆತ್ತಿಸಿ ಗೌರವಪೂರ್ವಕವಾಗಿ ಅವನಿಗೆ ನೀಡಿ ಸನ್ಮಾನಿಸಿತು.

1900ರಲ್ಲಿ ಅವನಿಗೆ ಇಂದುಬಾಲಾ ಬ್ಯಾನರ್ಜಿ ಎಂಬ ಕನ್ಯೆಯೊಂದಿಗೆ ವಿವಾಹವಾಯಿತು. ಅವನಿಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಜತೀನ್ ಸಂಸಾರ ನಿರ್ವಹಣೆಗಾಗಿ ಸರ್ಕಾರದ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ. ಆ ಕಾಲಖಂಡದಲ್ಲೇ ಅವನು ಬರಿಗೈಲಿ ಹುಲಿಯನ್ನು ಕೊಂದ ಧೀರ ಎಂಬ ಪ್ರಸಿದ್ಧಿಗೆ ಪಾತ್ರನಾದದ್ದು.

ಮಹಾನ್ ವ್ಯಕ್ತಿಗಳ ಸಾಮೀಪ್ಯ: ಕಿಶೋರಾವಸ್ಥೆಯಿಂದಲೇ ಅವನಿಗೆ ಸೋದರಿ ನಿವೇದಿತಾ ಮತ್ತು ಸ್ವಾಮಿ ವಿವೇಕಾನಂದರ ಘನಿಷ್ಠ ಸಂಪರ್ಕ. ಅವನು ನಿಜಕ್ಕೂ ಅವರಿಬ್ಬರ ವಿಚಾರಗಳ ಪ್ರಾತಿನಿಧಿಕ ಸ್ವಾತಂತ್ರ್ಯ ಹೋರಾಟಗಾರನಾದುದರಲ್ಲಿ ಅಚ್ಚರಿ ಇಲ್ಲ.

ಅವನಿಗೊಮ್ಮೆ ರಾಮಕೃಷ್ಣ ಮಠ ಸೇರಿ ಮಠದ ಸಂನ್ಯಾಸಿಯಾಗಿ ಸಮಾಜ ಹಾಗೂ ಹಿಂದೂ ಧರ್ಮದ ಸೇವೆ ಮಾಡಬೇಕೆಂದು ಆಲೋಚನೆ ಬಂದು ಸ್ವಾಮಿ ವಿವೇಕಾನಂದರ ಬಳಿ ಅದನ್ನು ಪ್ರಸ್ತಾವಿಸುತ್ತಾನೆ. ಅವನನ್ನು ಆಪಾದಮಸ್ತಕ ನೋಡಿದ ಸ್ವಾಮೀಜಿ ‘ನೀನು ಕ್ರಾಂತಿಕಾರಿ ಸಂಘಟನೆಯನ್ನು ಸೇರಿ ಅದರ ಮೂಲಕ ದೇಶದ ಬಿಡುಗಡೆಯ ಕಾರ್ಯದಲ್ಲಿ ಭಾಗಿಯಾಗು’ ಎಂದು ಆದೇಶಿಸುತ್ತಾರೆ. ತತ್ಪಲವಾಗಿ ಅನುಶೀಲನ ಸಮಿತಿಯಲ್ಲಿ ಸೇರುತ್ತಾನೆ. ಯುಗಾಂತರ ಸಂಸ್ಥೆಯ ಮುಖ್ಯಕಾರ್ಯಕರ್ತನಾಗಿ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಮುಂದೊಮ್ಮೆ ಅದರ ಅಗ್ರನಾಯಕನಾಗುತ್ತಾನೆ.

1903ರಲ್ಲಿ ಅರವಿಂದ ಘೊಷ್ ಮತ್ತು ಅವರ ತಮ್ಮ ಬಾರೀಂದ್ರ ಘೊಷರ ಸಂಪರ್ಕ ಉಂಟಾಗುತ್ತದೆ. ಅವನು ಅರವಿಂದರನ್ನು ಪ್ರಥಮವಾಗಿ ಭೇಟಿಯಾದದ್ದು ಬಂಕಿಮಚಂದ್ರರಂತೆ ಬಂಗಾಳದಲ್ಲಿ ಪ್ರಸಿದ್ಧ ಲೇಖಕರಾಗಿದ್ದ ಯೋಗೇಂದ್ರ ವಿದ್ಯಾಭೂಷಣರ ಮನೆಯಲ್ಲಿ. ಇಟಲಿಯ ಸ್ವಾತಂತ್ರ್ಯ ಸೇನಾನಿಗಳಾದ ಮ್ಯುಝಿನಿ ಮತ್ತು ಗ್ಯಾರಿಬಾಲ್ಡಿಯವರ ಜೀವನ ಚರಿತ್ರೆಗಳನ್ನು ಬರೆದು ಸ್ವಾತಂತ್ರ್ಯ ಹೋರಾಟಗಾರರ ಹೋರಾಟಕ್ಕೆ ಇಂಧನವನ್ನು ಒದಗಿಸಿದ್ದ ವಿದ್ಯಾಭೂಷಣರು ಜತೀನನ ಕಿರಿಯ ಸೋದರ ಮಾವ ಹಾಗೂ ಆಪ್ತ ಸಲಹೆಗಾರ ಲಲಿತ್​ಕುಮಾರ್ ಚಟರ್ಜಿಯವರ ಕಿರಿಯ ಮಗಳನ್ನು ವಿವಾಹವಾಗಿದ್ದರು. ಆ ಭೇಟಿಯ ಅನಂತರ ಜತೀನನಿಗೆ ವಿವೇಕಾನಂದರ ಆಶಯದಂತೆ ಮುಂದುವರಿಯಲು ಅರವಿಂದರಂಥ ತೇಜಸ್ವಿ ಓಜಸ್ವಿ ಮಹಾಸಾಧಕರ ಸಾಥ್ ದೊರೆತಿತ್ತು. ಮೂಲತಃ ಅಧ್ಯಾತ್ಮ ಸ್ವಭಾವದವನಾಗಿದ್ದ ಜತೀನನಿಗೆ ಆ ಕಾಲದ ಪ್ರಸಿದ್ಧ ಅಧ್ಯಾತ್ಮ ನಾಯಕ ಹರಿದ್ವಾರದ ಸ್ವಾಮೀ ಭೋಲಾನಂದ ಗಿರಿ ಎಂಬುವರು ದೀಕ್ಷೆ ನೀಡಿ ಒಂದು ರುದ್ರಾಕ್ಷಿ ಮಾಲೆಯನ್ನು ಅನುಗ್ರಹಿಸಿದ್ದರು. ಅವನ ಹೋರಾಟದ ಹಾದಿಗೆ ಅಧ್ಯಾತ್ಮದ ತಳಹದಿಯನ್ನು ಒದಗಿಸಿದ್ದರು. ಹೀಗೆ ವಿವೇಕಾನಂದ-ನಿವೇದಿತಾ-ಅರವಿಂದ-ಭೋಲಾನಂದ ಗಿರಿಗಳ ಕುಲಮೆಯಲ್ಲಿ ತಯಾರಾದ, ಭೀಮಾರ್ಜುನರ ಕ್ಷಾತ್ರತೇಜವನ್ನು ಪ್ರತಿನಿಧಿಸಿದ ವೀರಾಗ್ರಣಿಯಾದ ಜತೀನ್ ಮುಖರ್ಜಿ.

ಆಂಗ್ಲ ಪುಂಡರ ಪಾಲಿನ ಸಿಂಹಸ್ವಪ್ನ: ಹಂತ ಹಂತವಾಗಿ ಬೆಳೆಯುತ್ತಾ ಹೋದ ಜತೀನ್ ಹೊಸ ಹೊಸ ಯುವಕರನ್ನು ಯುಗಾಂತರಕ್ಕೆ ದಾಖಲಿಸುವುದರಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದ. ಅದೇ ವೇಳೆ ಬಾರೀಂದ್ರ ಘೊಷ್ ಕೂಡ ಬಹಳ ಚಟುವಟಿಕೆಯಿಂದ ಕಾರ್ಯನಿರತನಾಗಿದ್ದ. ಆದರೆ ಇವರಿಬ್ಬರಲ್ಲಿ ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಚಂಚಲ ಮನಸ್ಕನೂ ದುಡುಕು ಸ್ವಭಾವದವನೂ ಆಗಿದ್ದ ಬಾರೀಂದ್ರನ ರೀತಿನೀತಿಗಳು ಶಾಂತಚಿತ್ತದ ದೃಢಮನಸ್ಕನೂ ಅಪೂರ್ವ ಕ್ರಿಯಾಶೀಲನೂ ಆಗಿದ್ದ ಜತೀನನಿಗೆ ಸರಿ ಕಾಣುತ್ತಿರಲಿಲ್ಲ. ಬಾರೀಂದ್ರನಿಗೆ ಒಂದು ಬಗೆಯ ಅಸೂಯೆಯೂ ಉಂಟಾಗಿತ್ತು. ಕೊನೆಗೆ ಅರವಿಂದರೇ ಅವನ ಸಮಯಕ್ಕಾಗಿ ಕಾಯಬೇಕೆಂದು ಜತೀನನನ್ನು ಸಮಾಧಾನಪಡಿಸಬೇಕಾಗಿ ಬಂದಿತ್ತು.

1905ರಲ್ಲಿ ಬಂಗಾಳ ವಿಭಜನೆಯ ಸಮಯದಲ್ಲಿ ಉತ್ಸಾಹದಿಂದ ಪ್ರತಿಭಟನೆಗಳಲ್ಲಿ ಪಾಲ್ಗೊಳುತ್ತಿದ್ದ ಅವನಿಗೆ ಸಂಸಾರ ಎಂಬುದು ನೆಪಮಾತ್ರಕ್ಕೆ. ಸಮಯ ಶಕ್ತಿಗಳೆಲ್ಲ ಕ್ರಾಂತಿ ಚಳವಳಿಗೆ ಸಮರ್ಪಿತ.

ಜತೀನ್ ಒಮ್ಮೆ ನಾಲ್ವರು ಆಂಗ್ಲ ಸೈನಿಕರಿಗೆ ತಪರಾಕಿ ಕೊಟ್ಟು ಮಣ್ಣು ಮುಕ್ಕಿಸಿದ ಘಟನೆ ಆಂಗ್ಲರ ಬಗ್ಗೆ ಅವನಿಗಿದ್ದ ಬದ್ಧದ್ವೇಷದ ಧೋರಣೆಗೆ ಹಿಡಿದಿದ್ದ ಕೈಗನ್ನಡಿ. ಸಂದರ್ಭ ಬಂದಾಗಲೆಲ್ಲ ಥಟ್ಟನೆ ಪ್ರತಿಕ್ರಿಯಿಸುತ್ತಿದ್ದ ಜತೀನನ ‘ಕೃಪಾಕಟಾಕ್ಷ‘ಕ್ಕೆ ಒಳಗಾದ ಆಂಗ್ಲರು ಒಬ್ಬೊಬ್ಬರಲ್ಲ, ಅಸಂಖ್ಯರು.

ಕಲ್ಕತ್ತಾದ ಗೋರಾ ಬಜಾರಿನಲ್ಲಿ ಒಬ್ಬ ದುರಹಂಕಾರಿ ದುಷ್ಟ ಆಂಗ್ಲನು ದೇಶೀಯರ ಮೇಲೆ ವಿನಾಕಾರಣ ಲಾಠಿ ಬೀಸುತ್ತಾ ಗೊಂದಲವೆಬ್ಬಿಸಿದಾಗ ಜತೀನ್ ಅವನನ್ನು ಕೆಡವಿ ಕಾಲಿನಿಂದ ಒದ್ದು ಅಲ್ಲಿಂದ ಪಲಾಯನ ಮಂತ್ರ ಪಠಿಸುವಂತೆ ಮಾಡಿದ್ದ. 1905ರಲ್ಲಿ ಇಂಗ್ಲೆಂಡಿನ ರಾಜಕುಮಾರ ಕಲ್ಕತ್ತೆಗೆ ಬಂದಿದ್ದಾಗ ಹುಡುಗಿಯರನ್ನು ಚುಡಾಯಿಸುತ್ತಿದ್ದ ಆರು ಜನ ಆಂಗ್ಲ ಗೂಂಡಾ ಯುವಕರನ್ನು ಏಕಾಕಿಯಾಗಿ ಎದುರಿಸಿ ಚೆನ್ನಾಗಿ ಹೊಡೆದು ಬುದ್ಧಿ ಕಲಿಸಿದ್ದ. ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ವೃದ್ಧನ ಮೇಲೆ ನಾಲ್ವರು ಬ್ರಿಟಿಷ್ ಸೈನ್ಯದ ಅಧಿಕಾರಿಗಳು ದರ್ಪ ತೋರಿಸಿದಾಗ ಆ ನಾಲ್ವರಿಗೂ ಚೆನ್ನಾಗಿ ತಪರಾಕಿ ನೀಡಿದ್ದ. ಆ ನಾಲ್ವರೂ ಕೋರ್ಟಿನ ಮೆಟ್ಟಿಲು ಹತ್ತಿದರು. ನ್ಯಾಯಾಧೀಶನೂ ಆಂಗ್ಲನೇ. ಆತ ಕೋರ್ಟಿಗೆ ಬಂದ ಅವರಿಗೆ ಚೆನ್ನಾಗಿ ಛೀಮಾರಿ ಹಾಕಿ ‘ಒಬ್ಬ ಸಾಮಾನ್ಯ ಇಂಡಿಯನ್ ಕೈಯಲ್ಲಿ ಸೈನ್ಯಾಧಿಕಾರಿಗಳಾದ ನೀವು ನಾಲ್ವರು ಏಟು ತಿಂದಿರೆಂದರೆ ಬ್ರಿಟಿಷ್ ಪ್ರಭುತ್ವಕ್ಕೆ ಅಪಮಾನ ಮಾಡಿದಂತಲ್ಲವೇ. ಹೋಗಿ ಹೋಗಿ. ಹೀಗೆ ಮಾಡಿ ಬ್ರಿಟಿಷ್ ಪ್ರಭುತ್ವದ ಮುಖಕ್ಕೆ ಮಸಿ ಬಳಿಯಬೇಡಿ’ ಎಂದು ಕೋರ್ಟಿನಿಂದ ಹೊರಗಟ್ಟಿಬಿಟ್ಟ.

1908ರಲ್ಲಿ ಮುಝುಫ್ಪರಪುರದ ಬಾಂಬ್ ಪ್ರಕರಣದಲ್ಲಿ ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ವೀರಮರಣಗಳ ಅನಂತರ ಆಲಿಪುರ ಬಾಂಬ್ ಮೊಕದ್ದಮೆ ಆರಂಭಗೊಂಡು ಅರವಿಂದ, ಬಾರೀಂದ್ರ ಮುಂತಾದವರು ಆಲಿಪುರ ಸೆರೆಮನೆ ಸೇರಿದ ಮೇಲೆ ಯುಗಾಂತರದ ಸಂಪೂರ್ಣ ಜವಾಬ್ದಾರಿ ಜತೀನನ ಹೆಗಲಿಗೆ ಬಂತು. ಮುಂದೆ ಜತೀನನ ಪರ್ವ ಆರಂಭಗೊಂಡಿತು.

(ಮುಂದುವರಿಯುವುದು)

(ಈ ಅಂಕಣಕಾರರ ರುಧಿರಾಭಿಷೇಕ, ಬಾಘಾ ಜತೀನ್ ಮತ್ತು ಅವನ ಕಾಲವನ್ನು ಕುರಿತ ರಾಯಲ್ ಅಷ್ಟದಳ ಆಕಾರದ 800 ಪುಟಗಳ ಪುಸ್ತಕ ಮುದ್ರಣದಲ್ಲಿದೆ.)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top