Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಅಹಿಂಸೆಯೇ ಪರಮಧರ್ಮ ಎಂದರಿತರೆ ಬದುಕು ಹಸನು

Friday, 31.03.2017, 9:16 AM       No Comments

ಕೋಪ, ಅಸೂಯೆ, ದ್ವೇಷ ಮುಂತಾದ ದುರ್ಗಣಗಳಿಂದ ತನಗೂ ಹಾನಿ, ಇತರರಿಗೂ ಹಾನಿ. ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಇವು ಕಾರಣವಾಗುತ್ತವೆ. ಕೋಪ, ರೋಷ, ದ್ವೇಷ, ಹಿಂಸೆಯ ಯುಗ ತ್ಯಜಿಸಿ ಸುಂದರ, ಸುಖಕರ, ಸುಸಂಸ್ಕೃತ ಸಮಾಜ ಕಟ್ಟಲು ಎಲ್ಲರೂ ಮುಂದಾದರೆ ಎಷ್ಟು ಚೆನ್ನ ಅಲ್ಲವೆ?

 ಒಂದು ಕಾಲಕ್ಕೆ ವಿಶ್ವಕ್ಕೆ ಅಹಿಂಸೆಯ ಬೋಧನೆ ಮಾಡಿದ ಶಾಂತಿಧಾಮ ಭಾರತ; ಇದು ಸಂಘರ್ಷ, ಘರ್ಷಣೆ, ಜಗಳ ಜಂಜಾಟ, ಕೊಲೆಗಳ ಆಗರವಾಗಿದೆ. ‘ಓಂ ಶಾಂತಿ ಶಾಂತಿ ಶಾಂತಿಃ’ ಎಂದು ನಮಗೂ ನಮ್ಮ ಕುಟುಂಬಕ್ಕೂ, ಜಗತ್ತಿಗೂ ಶಾಂತಿಕೋರಿ ಶಾಂತಿಮಂತ್ರ ಪಠಿಸುತ್ತಿದ್ದ ಭಾರತ ಹೀಗಾಗಲು ಕಾರಣವೇನು? ಯುವಪೀಳಿಗೆಯ ರಕ್ತದಲ್ಲಿ ರಾಷ್ಟ್ರಪ್ರೇಮದ ಬದಲು ದ್ವೇಷ ತುಂಬಲು ಕಾರಣವೇನು? ಎಲ್ಲಿ ನೋಡಿದರಲ್ಲಿ ಅತ್ಯಾಚಾರ, ಅನಾಚಾರ ನಡೆಯಲು ಕಾರಣಗಳೇನು? ಜನರು ನಮ್ಮ ಹಿರಿಯರ ಹಿತೋಪದೇಶ ಕೇಳದೇ, ಹೊಣೆಯನ್ನು ಮರೆತು ಕೇವಲ ಸ್ಪರ್ಧಿಗಳಾಗಿ ಹಕ್ಕಿಗೆ ಕಾದಾಡುತ್ತಿರುವುದೇ ಈ ದುಃಸ್ಥಿತಿಗೆ ಪ್ರಮುಖ ಕಾರಣ.

ಯುವಕರು, ಮಕ್ಕಳು ನಮ್ಮ ಸಂಸ್ಕೃತಿಯ ವಿರುದ್ಧ, ವಿಕೃತಿ ತೋರಿಸುವ ಮನಸ್ಸಿನವರಾಗಲು ಕಾರಣ ಮನೆಯಲ್ಲಿ ತಂದೆ-ತಾಯಿ ಸರಿಯಾಗಿ ಬೆಳೆಸಿದರೂ ಶಾಲೆಯಲ್ಲಿ ಶಿಕ್ಷಕರು ಶಿಕ್ಷಣ, ಶಿಸ್ತು, ಶಿಷ್ಟಾಚಾರ ಕಲಿಸಿದರೂ, ಅವರು ಹೊರಗಿನ ಚಿತ್ರಮಾಧ್ಯಮದ ಪ್ರಭಾವದಿಂದ ಹೊಡೆದಾಡುವುದು ಬಡಿದಾಡುವುದು ‘ಹೀರೋ’ ಲಕ್ಷಣ ಎಂದುಕೊಳ್ಳುವುದು! ನಾವು ಮಕ್ಕಳಿದ್ದಾಗ ನಮ್ಮ ತಂದೆ ತಾಯಿ ದೇವರ ಮತ್ತು ಉತ್ತಮ ಸಾಮಾಜಿಕ ಚಿತ್ರಗಳನ್ನು ಆಗೊಮ್ಮೆ ಈಗೊಮ್ಮೆ ತೋರಿಸುತ್ತಿದ್ದರು. ಅಜ್ಜ ಅಜ್ಜಿ ಒಳ್ಳೆಯ ಕಥೆಹೇಳಿ ನಮಗೆ ಸನ್ಮಾರ್ಗ ತೋರಿಸುತ್ತಿದ್ದರು. ಆದರೆ ಇಂದು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾದ ಅಜ್ಜ ಅಜ್ಜಿಯಂದಿರು ವೃದ್ಧಾಶ್ರಮ ಸೇರುತ್ತಿದ್ದಾರೆ. ಮಕ್ಕಳನ್ನು ತಿದ್ದಿ ತೀಡಿ ಬುದ್ಧಿ ಹೇಳಬೇಕಾದ ತಂದೆ ತಾಯಿ ಹಣಸಂಪಾದನೆಯಲ್ಲಿ ನಿರತರಾಗಿದ್ದಾರೆ.

‘ಕೋಪ ಪಾಪದ ನೆಲಗಟ್ಟು’ ಎಂದು ಗಾದೆ ಮಾತು ಹೇಳಿದರೆ, ‘ಕೋಪ ನರಕಕ್ಕೆ ದ್ವಾರ’ ಎಂದ ಕೃಷ್ಣ ಪರಮಾತ್ಮ! 12ನೇ ಶತಮಾನದ ಶರಣೆ ಅಕ್ಕಮಹಾದೇವಿ ಅರಿಷಡ್ವರ್ಗಗಳು ಹಾವಿನ ಹಲ್ಲಿನಲ್ಲಿರುವ ವಿಷದಂತೆ ಎಂದು ವರ್ಣಿಸುತ್ತ- ‘ಹಾವಿನ ಹಲ್ಲ ಕಳೆದು ಹಾವಾಡಿಕ ಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ…’ ಎನ್ನುತ್ತಾರೆ. ಇನ್ನು ಚೆನ್ನಬಸವಣ್ಣನವರು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಕಾಳಕೂಟ ವಿಷದಿಂದ ದೂರವಿರದೆ ಪೂಜೆಪುನಸ್ಕಾರ ಮಾಡಿದರೆ ವ್ಯರ್ಥವೆಂದು ಹೀಗೆ ಹೇಳುತ್ತಾರೆ.

ಕಾಮಿ ಮಜ್ಜನಕ್ಕೆ ನೀರೆರೆದರೆ ರಕ್ತಧಾರೆ

ಕ್ರೋಧಿ ಪುಷ್ಪವನರ್ಪಿಸಿದರೆ ಕತ್ತಿಯ ಮೊನೆ

ಲೋಭಿ ರುದ್ರಾಕ್ಷಿಯ ಧರಿಸಿದರೆ ಗಿರಕಿ,

ಮದಿ ಲಿಂಗವ ಕಟ್ಟಿದರೆ ಎತ್ತುಗಲ್ಲು

ಮತ್ಸರಿ ಪಾದೋದಕ ಪ್ರಸಾದವ ಕೊಂಡರೆ ಕಾಳಕೂಟವಿಷ

ಕೂಡಲ ಚನ್ನಸಂಗಮ ದೇವರಲ್ಲಿ

ಮದ ಮತ್ಸರ ಬಿಟ್ಟವರು ಅಪೂರ್ವ

ಹೀಗೆ ಬದುಕನ್ನು ಅಪೂರ್ವಗೊಳಿಸುವ ಬದಲು, ಇಂದಿನ ಜನ ಅರಿಷಡ್ವರ್ಗಗಳ ದಾಸರಾಗಿದ್ದಾರೆ. ಹೀಗಾಗಿ ಅಪರಾಧಗಳು ಹೇರಳವಾಗಿ ನಡೆಯುತ್ತಿವೆ. ಕ್ರೋಧ ಇತರರಿಗಿಂತ ಹೆಚ್ಚು ತನ್ನನ್ನು ಸುಡುತ್ತದೆ ಎಂಬ ಸತ್ಯವನ್ನು ವಿಜ್ಞಾನ ಸಾಬೀತುಪಡಿಸಿದೆ. ಒಬ್ಬ ವ್ಯಕ್ತಿ ಕೋಪಗೊಂಡಾಗ ಅವನ ಮಿದುಳಿನಿಂದ 400 ಪಟ್ಟು ಹೆಚ್ಚು Catecholamine  ವಿತ್ತ Cortisol (ಕ್ರೀಡಾಪಟುಗಳು ತಮ್ಮ ಕ್ಷಮತೆ ಹೆಚ್ಚಿಸಲು ಬಳಸಿ ನಿಷೇಧಕ್ಕೊಳಗಾಗುವ ರಾಸಾಯನಿಕ) ಬಿಡುಗಡೆಯಾಗುತ್ತದೆ. ಇದರಿಂದ ನೋಡಲು ಕೋಪಿಷ್ಠ ಶೂರನಂತೆ, ವೀರಭದ್ರನಂತೆ ಕಂಡರೂ ಅವನ ಶರೀರದಲ್ಲಿ ರಕ್ತದ ಒತ್ತಡ (ಹೈ ಬಿಪಿ) ಹೃದಯದ ಮಿಡಿತ ಹೆಚ್ಚಾಗಿ, ಕೈಕಾಲು ನಡುವುದರ ಜೊತೆಗೆ ಅವನ ಹೃದಯಕ್ಕೆ ರಕ್ತ ಪ್ರಾಣವಾಯು ಪೋಷಣೆ ಸರಬರಾಜು ಮಾಡುವ ಧಮನಿಗಳು ಸಂಕುಚಿತಕೊಂಡು ಹೃದಯದ ಕ್ಷಮತೆ ಕ್ಷೀಣಗೊಂಡು ಹಾರ್ಟ್ ಫೇಲ್ಯೂರ್ ಉಂಟಾಗಬಹುದು. ಇದರಿಂದ ಇದೇ ಶರೀರದ 102 ಟ್ರಿಲಿಯನ್ ಜೀವಕಣಗಳಿಗೆ ಪ್ರಾಣವಾಯು ಪೋಷಣೆ ಕಡಿಮೆ ಆಗಿ ಸುಸ್ತಾಗುತ್ತದೆ. ಒಂದು ಸಲ ಕೋಪ ಮಾಡಿಕೊಂಡಾಗ ಶರೀರ ಅದರಲ್ಲೂ ಹೃದಯದ ಮೇಲೆ ಆಗುವ ದುಷ್ಪರಿಣಾಮ 72 ಗಂಟೆಗಳವರೆಗೂ ಇರುತ್ತದೆ. ಮತ್ತೆ ಮೊದಲಿನ ಹಾಗೆ ಹೃದಯ ಸರಿ ಆಗಬೇಕೆಂದರೆ 3 ದಿನ ಶಾಂತವಾಗಿರಬೇಕು! ಯಾರು ಮೇಲಿಂದ ಮೇಲೆ ಕೋಪ ಮಾಡಿಕೊಳ್ಳುತ್ತಾರೋ ಅವರು ಪಾರ್ಶ್ವವಾಯು, ಹೃದಯಾಘಾತ ಹಾಗೂ ಅಧಿಕ ರಕ್ತದೊತ್ತಡದಿಂದ ಸಾಯುವ ಪ್ರಮಾಣ 3 ಪಟ್ಟು ಹೆಚ್ಚು. ಇಂದು ಹೆಚ್ಚೆಚ್ಚು ಯುವಕರು, ಮಧ್ಯಮ ವಯಸ್ಸಿನವರು ದಿಢೀರ್ ಎಂದು ಹೃದಯಾಘಾತದಿಂದ, ಪಾರ್ಶ್ವವಾಯುವಿನಿಂದ ಸಾಯಲು ಕಾರಣ, ಕೋಪ, ದ್ವೇಷ, ಅಸೂಯೆಯ ‘ಟೈಪ್ ಎ ವ್ಯಕ್ತಿತ್ವ’ ಎಂದು ತಿಳಿದು ಬಂದಿದೆ.

ಕಳೆದ 20 ವರ್ಷದಲ್ಲಿ ನಕ್ಸಲರು 12,000 ಜನರ ಹತ್ಯೆ ಮಾಡಿದ್ದಾರೆ. ಕಳೆದ 10 ವರ್ಷದಲ್ಲಿ 2,473 ಕೋಮುಗಲಭೆಗಳಿಂದಾಗಿ 2,500 ಅಮಾಯಕರ ಹತ್ಯೆಯಾಗಿದೆ. ನ್ಯಾಷನಲ್ ಕ್ರೖೆಮ್ ರೆಕಾರ್ಡ್ ಬ್ಯೂರೋ ಆಫ್ ಇಂಡಿಯಾ ಪ್ರಕಾರ ಮಹಿಳೆಯರ ಮೇಲಿನ ಅತ್ಯಾಚಾರ, ಅನಾಚಾರ, ದೌರ್ಜನ್ಯ ಕಳೆದ ಹತ್ತು ವರ್ಷದಲ್ಲಿ ಶೇ.6.4ರಿಂದ 17.5ಗೆ ಹೆಚ್ಚಿದೆ. ಪ್ರತಿ ಮೂರು ನಿಮಿಷಕ್ಕೆ ಒಂದು ದೌರ್ಜನ್ಯ ನಡೆಯುತ್ತಿದೆ. ಇವು ಕಣ್ಣಿಗೆ ಕಾಣುವ ಅಂಕಿ ಸಂಖ್ಯೆಗಳು. ಆದರೆ ಮನೆಮನೆಗಳಲ್ಲಿ ನಡೆಯುವ ದೌರ್ಜನ್ಯ ದಬ್ಬಾಳಿಕೆ ಯಾರಿಗೂ ತಿಳಿಯುವುದಿಲ್ಲ. ಮನೆಗಳಲ್ಲಿ ಅಶಾಂತಿಯ ಬಿರುಗಾಳಿ ಎಬ್ಬಿಸುವುದೇ ಕೋಪ ದ್ವೇಷ! ಆದ್ದರಿಂದ ಯೋಗ ಧ್ಯಾನದಿಂದ ಮನಸ್ಸು ನಿಯಂತ್ರಿಸಿ ಮನಃಶಾಂತಿ ಪಡೆಯುವುದು ಅತೀ ಅವಶ್ಯ.

ಸಮೀಕ್ಷೆಗಳ ಪ್ರಕಾರ ಹೊರಗಡೆ ಪ್ರದರ್ಶಿಸಿದ ಕೋಪವಾಗಲಿ ಒಳಗೆ ಮನಸ್ಸಿನಲ್ಲಿ ಹುದುಗಿದ ಕೋಪವಾಗಲಿ ಎರಡೂ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಕೋಪಿಷ್ಠರಲ್ಲಿ ಮಧುಮೇಹ ಶೇ. 34 ಹೆಚ್ಚು ಎಂದು ತಿಳಿದುಬಂದಿದೆ. ಇಂದು ನಮ್ಮ ದೇಶ ಸಕ್ಕರೆ ಕಾಯಿಲೆಯ ರಾಜಧಾನಿ ಆಗಲು ಪ್ರಮುಖ ಕಾರಣ ಮಾನಸಿಕ ಒತ್ತಡ ಮತ್ತು ಕೋಪ! ಕೋಪಿಷ್ಠರು ತಮ್ಮ ಹಾಗೂ ಸುತ್ತಲಿರುವ ಜನರ ಮನಶಾಂತಿ ಹಾಳು ಮಾಡುವುದಲ್ಲದೆ ರಸ್ತೆ ಅಪಘಾತಕ್ಕೂ ಕಾರಣರಾಗುತ್ತಾರೆ ಎಂದು ತಿಳಿದು ಬಂದಿದೆ.

ಒಂದು ಸಲ ನಾನು ಕಾರು ಓಡಿಸುತ್ತಿದ್ದಾಗ ಒಬ್ಬ ಟೆಂಪೋ ಡ್ರೖೆವರ್ ಒಂದೇ ಸಮನೆ ಕರ್ಕಶವಾಗಿ ಹಾರ್ನ್ ಮಾಡುತ್ತಿದ್ದ. ಆಗ ಪಕ್ಕದಲ್ಲಿ ಕುಳಿತಿದ್ದ ಚಿದಾನಂದ ಮೂರ್ತಿಗಳು – ‘ವಿಜಯಲಕ್ಷ್ಮಿಯವರೇ ಯಾರೋ ಬೇಗ ಮೇಲೆ ಹೋಗುವ ಅವಸರದಲ್ಲಿದ್ದಾರೆ. ಅವರಿಗೆ ದಾರಿಬಿಡಿ, ನಮಗೆ ಮೇಲೆ ಹೋಗುವ ಅವಸರವಿಲ್ಲ!’ ಎಂದರು. ಅವರ ಹಾಸ್ಯಪ್ರಜ್ಞೆಗೆ ನಾನು ಜೋರಾಗಿ ನಕ್ಕೆ. ಆದರೆ ತಾತ್ವಿಕವಾಗಿ ವಿಚಾರಮಾಡಿದಾಗ ಆ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂದು ವಿಜ್ಞಾನ ತಿಳಿಸುತ್ತದೆ. ಕಾರಣ ಮೇಲೆ ಹೇಳಿದ ಟೈಪ್ ಎ ವ್ಯಕ್ತಿತ್ವದವರು ಇತರರನ್ನು ಹಿಂದೆ ಹಾಕಿ ತಾವು ಹೇಗಾದರೂ ಮುಂದೆ ಹೋಗಬೇಕು ಎಂದು ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ.

ಇತರರನ್ನು ಕಂಡು ಅಸೂಯೆಪಡುವವರ ಉದರದಲ್ಲಿ ಹೈಡ್ರೊಕ್ಲೊರಿಕ್ ಆಸಿಡ್ ಉತ್ಪತ್ತಿ ವಿಪರೀತವಾಗಿ ಅವರು ಸದಾ ಹೊಟ್ಟೆ ಉರಿಯಿಂದ ಬಳಲುತ್ತಿರುತ್ತಾರೆ. ಅದಕ್ಕೆ ನಮ್ಮ ಪೂರ್ವಜರು ‘ಹೊಟ್ಟೆಕಿಚ್ಚು’ ಅಂತ ಕರೆದರು. ಇಂದು ನಮ್ಮ ಸಮಾಜದಲ್ಲಿ ಇತರರನ್ನು ಕಂಡು ಹೊಟ್ಟೆಕಿಚ್ಚು ಪಡುವವರ ಸಂಖ್ಯೆ ಸಾಕಷ್ಟಿರುವುದು ಗಮನಕ್ಕೆ ಬರುತ್ತದೆ.

ಟೈಪ್ ಬಿ ವ್ಯಕ್ತಿತ್ವದವರು ಸದಾ ಸಮಾಧಾನಿಗಳಾಗಿ ಇತರರೊಂದಿಗೆ ಸಹಕರಿಸಿ, ತಾಳ್ಮೆಯಿಂದ ಶಾಂತರಾಗಿ ಜೀವನ ನಡೆಸುವವರು. ಸದಾ ಸಮಾಜದ ಹಿತಕ್ಕಾಗಿ ಶ್ರಮಿಸುವವರು ಬಹುಕಾಲ ಬಾಳುತ್ತಾರೆ. ಸಿದ್ಧಗಂಗಾ ಶ್ರೀಗಳು 110 ವರ್ಷ ಪೂರೈಸಿದ್ದಾರೆ. ನಮ್ಮ ಅಜ್ಜನವರು ಪಶುವೈದ್ಯರಾಗಿ ಸದಾ ಪ್ರಾಣಿದಯೆ ಮೆರೆದವರು. 95 ವರ್ಷ ತುಂಬು ಜೀವನ ನಡೆಸಿ ಅಕ್ಷಯತೃತೀಯದ ದಿನಕ್ಕಾಗಿ ಕಾದು, ಅಂದು ಸ್ನಾನ ಪೂಜೆ ಪ್ರಸಾದ ಮುಗಿಸಿ ದೇವರ ಮುಂದೆ ಕೈಮುಗಿದುಕೊಂಡು ಕುಳಿತು ಇಚ್ಛಾಮರಣಿ ಆದವರು! ಆದರೆ ಇಂದು ಮಕ್ಕಳ ಶವಸಂಸ್ಕಾರವನ್ನು ತಂದೆ-ತಾಯಿ ಮಾಡುವ ದುರ್ಗತಿ ಬಂದಿದೆ. ಕಾರಣ ಜೀವನದಲ್ಲಿ ಶಾಂತಿ, ಸಮಾಧಾನ, ಅಹಿಂಸೆಯನ್ನು ಅಳವಡಿಸಿಕೊಳ್ಳದೇ ಹಿಂಸಾಚಾರ, ಕೋಪ, ದ್ವೇಷದಲ್ಲಿ ಬದುಕನ್ನು ಬರಡುಮಾಡಿಕೊಳ್ಳುತ್ತಿರುವುದು.

ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ. ಇಂದು ಜನ ದುರಾಸೆ ಎಂಬ ನೀರುಗುದುರೆ ಬೆನ್ನು ಹತ್ತಿದ್ದಾರೆ. ಅಲ್ಲಮ ಪ್ರಭುಗಳು ಹೇಳುತ್ತಾರೆ-‘ ಆಸೆಯೇ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೊನ್ನು, ಹೆಣ್ಣು, ಮಣ್ಣಿಗೆ ಸತ್ತುದು ಕೋಟಿ, ಗುಹೇಶ್ವರ ನಿಮಗಾಗಿ ಸತ್ತವರನಾರನೂ ಕಾಣೆ’. ದಯವೇ ಧರ್ಮದ ಮೂಲವೆಂದ ಬಸವಣ್ಣನವರ ನೆಲದಲ್ಲಿ ದಯೆ ಧರ್ಮ ಮಾಯವಾಗಿ ಹಿಂಸಾಚಾರ ಹೆಚ್ಚುತ್ತಿದೆ. ಜೀವ ಉಳಿಸಲು ಸಾವಿನೊಂದಿಗೆ ಸೆಣಸಾಡುವ ವೈದ್ಯರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಗೌತಮ ಬುದ್ಧ ಹೇಳಿದ ಮೂರು ವಿಷಗಳು ಎಂದರೆ ಕೋಪ, ದುರಾಸೆ ಮತ್ತು ಮೂರ್ಖತನ. ಮಹಿಳೆಯರು, ಮಕ್ಕಳು ಮತ್ತು ವೈದ್ಯರ ಮೇಲೆ ಹಲ್ಲೆ ಮಾಡುವವರು ಈ ಮೂರೂ ತರಹದ ವಿಷದಿಂದ ಸಮಾಜವನ್ನು ಕೆಡಿಸುತ್ತಿದ್ದಾರೆ.

‘ಅಹಿಂಸಾ ಪರಮೋಧರ್ಮಃ’ ಎಂಬುದರ ಮಹತ್ವ ಅರಿಯಬೇಕಿದೆ. ‘ಗತವರ್ಷದ ಮೃತ ಪಾಪವ ಸೇಡು, ತೊರೆ/ಅಪಜಯ, ಅವಮಾನಗಳನು ಬಿಡು ಮರೆ/ ಕಳಚಲಿ, ಬೀಳಲಿ ಬಾಳಿನ ಹಳೆ ಪೊರೆ/ ನವಸಂವತ್ಸರವನು ಕೂಗಿ ಕರೆ’ ಎಂದು ಕುವೆಂಪು ಅವರು ಹೇಳಿದಂತೆ ಹಳೆ ಹಗೆಯನ್ನು ತ್ಯಜಿಸಿ ಹೊಸ ಪ್ರೀತಿ ವಿಶ್ವಾಸ ತುಂಬಿದ ಮನದಿಂದ ಹೇಮಲಂಬಿನಾಮ ಸಂವತ್ಸರವನ್ನು ಸ್ವಾಗತಿಸೋಣ. ‘ಅರವತ್ತು ಸಂವತ್ಸರದ ಈ ಚಕ್ರ ತಿರುಗುತ್ತಲೇ ಇರುವಾಗ ಇದರಲ್ಲಿ ಯಾವುದು ಮೊದಲು ಯಾವುದು ತುದಿ? ಹೆಸರಿಗೆ ಮಾತ್ರ ಯುಗಾದಿ ಯುಗಾದಿ ಅನ್ನುತ್ತೇವೆ. ಇವತ್ತು ಯಾವ ಯುಗದ ಆದಿ, ಯಾವ ಯುಗದ ಅಂತ?’ ಎಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಅನ್ನುವಂತೆ ಕೋಪ, ರೋಷ, ದ್ವೇಷ, ಹಿಂಸೆಯ ಯುಗ ತ್ಯಜಿಸಿ ಸುಶೀಲ, ಸುಂದರ, ಸುಖಕರ, ಸುಸಂಸ್ಕೃತ ಸಮಾಜ ಕಟ್ಟೋಣ. ಆರೋಗ್ಯ, ಆಯುಸ್ಸು, ಆನಂದ, ಶ್ರೇಯಸ್ಸು, ಯಶಸ್ಸು, ತೇಜಸ್ಸು, ಸಂತೋಷ ಸಂವೃದ್ಧಿಯ ಹೊಸ ಹರ್ಷ ನಮ್ಮದಾಗಲಿ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top