Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಅಹಂಕಾರ ಕಮ್ಮಿಯಾಗಿದೆ, ಪ್ರೀತಿಸುವ ಮನಸಾಗಿದೆ

Tuesday, 31.01.2017, 2:11 AM       No Comments

‘ಬಿಗ್ ಬಾಸ್’ ರಿಯಾಲಿಟಿ ಶೋನ 4ನೇ ಸೀಸನ್​ನಲ್ಲಿ ಪ್ರಥಮ್ ವಿಜಯದುಂದá-ಭಿ ಮೊಳಗಿಸಿದ್ದಾರೆ. ಪ್ರಾರಂಭದಲ್ಲಿ ಒರಟಾಗಿ ಕಾಣಿಸಿಕೊಂಡರೂ, ನಂತರ ಕಿರುತೆರೆ ಪ್ರೇಕ್ಷಕರ ಮನಗೆದ್ದ ಅವರು, ‘ಬಿಗ್​ಬಾಸ್’ ಮನೆಯೊಳಗೆ ಪಡೆದ ಅನುಭವಗಳನ್ನು ಎಳೆಎಳೆಯಾಗಿ ನಮಸ್ತೆ ಬೆಂಗಳೂರು ಜತೆ ಹಂಚಿಕೊಂಡಿದ್ದಾರೆ.

  • ಅವಿನಾಶ್ ಜಿ. ರಾಮ್ ಬೆಂಗಳೂರು

ನಿಮ್ಮ ಹೆಸರು ಪ್ರಥಮ್ ‘ಬಿಗ್ ಬಾಸ್’ ಮನೆಗೆ ಪ್ರಥಮವಾಗಿ ಪ್ರವೇಶ ಮಾಡಿದ್ದು ನೀವೇ, ಈಗ ಪ್ರಥಮ ಸ್ಥಾನವೂ ನಿಮ್ಮದೇ..

ಹ್ಹಹ್ಹಹ್ಹ..! ಇದರಲ್ಲಿ ನನ್ನ ಪಾತ್ರವೇನಿಲ್ಲ. ಯಾವುದನ್ನೂ ನಾನು ನಿರೀಕ್ಷೆ ಮಾಡಿರಲಿಲ್ಲ. ಇದು ಕನ್ನಡಿಗರ ಗೆಲುವು. ಅವರ ಪ್ರೀತಿ, ಮಾಧ್ಯಮದವರ ಸಹಕಾರವೇ ಇದಕ್ಕೆಲ್ಲ ಕಾರಣ. ‘ಬಿಗ್ ಬಾಸ್’ ಮನೆಯೊಳಕ್ಕೆ ಕಾಲಿಟ್ಟ ಒಂದೇ ವಾರಕ್ಕೆ ಎಲಿಮಿನೇಟ್ ಆಗುತ್ತೇನೆ ಎಂಬುದು ನನ್ನ ಊಹೆ ಆಗಿತ್ತು. ಮನೆಯ ಸದಸ್ಯರು ‘ನೀನಿಲ್ಲಿ ಇರಬೇಡ’ ಎಂದಾಗ, ಕನ್ನಡಿಗರು ‘ನೀನು ಅಲ್ಲೇ ಇರು’ ಎನ್ನುತ್ತ ನನಗೆ ವೋಟ್ ಮಾಡಿದ್ದರು. ಅವರಿಗೆ ಪ್ರಾಮಾಣಿಕನಾಗಿ ಇರಬೇಕಾಗಿದ್ದು ನನ್ನ ಕರ್ತವ್ಯ. ಅವರು ಇರು ಎಂದಮೇಲೆ ಎಷ್ಟೇ ಕಷ್ಟ, ಅವಮಾನಗಳಾದರೂ ನಾನಲ್ಲಿ ಇದ್ದೆ.

ಮನೆಯೊಳಗೆ ಹೋದ ದಿನದಿಂದಲೂ ನೀವೇ ಒಂದು ಗುಂಪು ಎಂಬಂತೆ ಇದ್ದಿದ್ದೀರಿ, ಅಲ್ಲವೆ?

ಮನೆಯೊಳಕ್ಕೆ ಪ್ರವೇಶ ಮಾಡುವುದಕ್ಕೂ ಮುನ್ನ ಎರಡು ನಿರ್ಧಾರ ಮಾಡಿದ್ದೆ. ಒಂದು, ನಾನು ಪ್ರಾಮಾಣಿಕವಾಗಿ ಆಡಬೇಕು. ಮತ್ತೊಂದು, ಗಲಾಟೆ ಮಾಡಿದ್ರೂ ಅದನ್ನು ಪ್ರಾಮಾಣಿಕವಾಗಿ ಮಾಡಬೇಕು. ಸತತವಾಗಿ 14 ಬಾರಿ ನಾನು ನಾಮಿನೇಟ್ ಆಗಿದ್ದೇನೆ. ಗೆಲ್ಲುತ್ತೇನೆ ಎಂಬ ನಿರೀಕ್ಷೆಗಿಂತ, ಇರುವಷ್ಟು ದಿನ ಪ್ರಾಮಾಣಿಕವಾಗಿರಬೇಕು ಎಂದುಕೊಂಡಿದ್ದೆ. ಯಾರನ್ನೋ ಸಂತೋಷ ಪಡಿಸುವುದಕ್ಕಿಂತ, ನನ್ನನ್ನು ನಂಬಿ ವೋಟ್ ಹಾಕಿರುವವರಿಗೆ ನಾನು ಅಸಮಾಧಾನ ಮಾಡಬಾರದು ಎಂಬುದು ನನ್ನ ಉದ್ದೇಶವಾಗಿತ್ತು.

‘ಬಿಗ್ ಬಾಸ್’ ಮನೆಯಲ್ಲಿ ನೀವು ಕಲಿತಿದ್ದೇನು?

ಅತಿ ಎನ್ನುವಷ್ಟು ಕೋಪ, ಅಹಂಕಾರ ನನಗಿತ್ತು. ಅದನ್ನು ಕಡಿಮೆ ಮಾಡಿಕೊಂಡಿದ್ದೇನೆ. ನನ್ನ ಸá-ತ್ತಲಿರá-ವವರನ್ನು ಪ್ರೀತಿಸಬೇಕೆಂದುಕೊಂಡಿದ್ದೇನೆ. ನನ್ನ ಒರಟುತನ ಬೇರೆಯವರಿಗೆ ಕಿರಿಕಿರಿಯಾಗುತ್ತದೆ ಎಂಬುದು ನನಗೀಗ ತಿಳಿದಿದೆ. ನಮ್ಮವರಲ್ಲದ ಜನಗಳ ಮಧ್ಯೆ, ನಮ್ಮ ಇಷ್ಟಾರ್ಥಗಳು ಇಲ್ಲದ, ಕಟ್ಟಿಹಾಕಿದಂತಹ ಮನಃಸ್ಥಿತಿಯೊಂದಿಗೆ ಬದುಕುತ್ತೇವೆ ಎಂದಮೇಲೆ ಹೊರಗಡೆ ಪ್ರಪಂಚವನ್ನು ಎದುರಿಸೋಕೆ ಆಗುವುದಿಲ್ಲವೇ? ಇಲ್ಲಿ ಬೇಡ ಎನಿಸಿದ್ದನ್ನು ಬಿಡಬಹುದು, ಆದರೆ ಅಲ್ಲಿ ಬೇಡ ಅಂದರೂ ಇರಬೇಕು. ‘ಬಿಗ್ ಬಾಸ್’ನಿಂದ ಮುಖ್ಯವಾಗಿ ನಾನು ನನ್ನ ಪಾಲಕರನ್ನು ಪಡೆದುಕೊಂಡಿದ್ದೇನೆ. ಈ ಬಹುಮಾನದ ದುಡ್ಡು ಅದಕ್ಕಿಂತ ದೊಡ್ಡದಲ್ಲ. ಸಿಕ್ಕಿರುವ ಜನಪ್ರಿಯತೆಯಿಂದ ಬದುಕು ಕಟ್ಟಿಕೊಳ್ಳಬೇಕು ಎಂಬುದು ನನ್ನ ಉದ್ದೇಶ, ದುಡ್ಡಿನಿಂದಲ್ಲ.

ನಿಮ್ಮ ನೆನಪಿನ ಶಕ್ತಿ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಏನಿದರ ಗುಟ್ಟು?

ನಾನು ಎಷ್ಟು ನಿರರ್ಗಳವಾಗಿ ಕನ್ನಡ ಮಾತನಾಡುತ್ತೇನೋ, ಅಷ್ಟೇ ಸ್ಪಷ್ಟವಾಗಿ ಸಂಸ್ಕೃತವನ್ನೂ ಮಾತನಾಡುತ್ತೇನೆ. ಸುದೀಪ್ ಅವರು ಶೋಗೆ ಬಂದಾಗೆಲ್ಲ ಸಂಸ್ಕೃತ ಶ್ಲೋಕ ಹೇಳಿ ಸ್ವಾಗತ ಮಾಡಿದ್ದೇನೆ. 39ನೇ ದಿನ ಬೆಳಗ್ಗೆ 8.45ಕ್ಕೆ ಕೀರ್ತಿ ಜತೆಗೆ ಜಗಳ, ಮೂರನೇ ದಿನ ಮಧ್ಯಾಹ್ನ ವಾಣಿಶ್ರೀ ಜತೆ ಜಗಳ, ನಿದ್ದೆ ಮಾಡ್ತಾ ಇದ್ದೆ ಎಂದು 17ನೇ ದಿನ ನನ್ನನ್ನು ನೀರಿಗೆ ಹಾಕಿದ್ದರು. ಅದೇನೋ ಗೊತ್ತಿಲ್ಲ, ನಾನು ನೋಡಿದ್ದನ್ನೆಲ್ಲ, ಹೇಳಿದ್ದನ್ನೆಲ್ಲ ನೆನಪಿನಲ್ಲಿಟ್ಟುಕೊಂಡಿರುತ್ತೇನೆ.

115 ದಿನಗಳ ಕಾಲ ನೀವು ಹೆಚ್ಚು ಮಿಸ್ ಮಾಡಿಕೊಂಡಿದ್ದು ಯಾರನ್ನು? ಯಾವುದನ್ನು? ಯಾಕೆ?

ಕನ್ನಡ ಸಿನಿಮಾಗಳನ್ನು ಮತ್ತು ಹೊಟ್ಟೆ ತುಂಬ ಊಟವನ್ನು. ಒಂದು ವೇಳೆ, ಮದುವೆಯಾಗಿದ್ದರೆ, ಹೆಂಡತಿಯನ್ನು ಬಿಟ್ಟು ಇರುತ್ತಿದ್ದೇನೋ, ಇಲ್ಲವೋ ಗೊತ್ತಿಲ್ಲ. ಆದರೆ ಮೊಬೈಲ್ ಬಿಟ್ಟಿರುತ್ತಿರಲಿಲ್ಲ. ‘ಬಿಗ್ ಬಾಸ್’ನಲ್ಲಿದ್ದ ಅಷ್ಟ್ಟೂ ದಿನ ನಾನು ಮೊಬೈಲ್ ಬಳಸಿಲ್ಲ. ಶೀತಲ್ ಶೆಟ್ಟಿ ಮನೆಯಿಂದ ಹೊರಹೋದಾಗ ತುಂಬ ಬೇಜಾರಾಯ್ತು. ಪ್ರಥಮ್ ಹೆಣ್ಣಾಗಿದ್ದರೆ, ಅದು ಶೀತಲ್ ರೀತಿ ಇರುತ್ತಾರೆ. ಹಾಗಾಗಿ, ಅವರನ್ನು ಲೇಡಿ ಪ್ರಥಮ್ ಎನ್ನುತ್ತೇನೆ. ಕಾವ್ಯಾ, ಮಾಳವಿಕಾ, ರೇಖಾ ಅವರನ್ನೆಲ್ಲ ಮಿಸ್ ಮಾಡಿಕೊಳ್ಳುತ್ತೇನೆ. ಇನ್ನೂ, ಈ ಕ್ಷಣಕ್ಕೆ ನಾನು ‘ಬಿಗ್ ಬಾಸ್’ ಮನೆಯನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತೇನೆ. ಇನ್ನೂ ಒಂದು ವಾರ ಬೇಕಾದರೂ ಅಲ್ಲಿರುವುದಕ್ಕೆ ನಾನು ಸಿದ್ದ. ಆಟ ಮುಗಿಸಿದ್ದಕ್ಕಾಗಿ ನಾನು ‘ಬಿಗ್ ಬಾಸ್’ನ ಖಂಡಿಸುತ್ತೇನೆ. ಹ್ಹಹ್ಹಹ್ಹ..!!

ಮಾತುಮಾತಿಗೂ ‘ಇದು ಕನ್ನಡಿಗರ ಗೆಲುವು’ ಎನ್ನುತ್ತಿದ್ದೀರಿ. ಈಗ ಗೆಲುವು ನೀಡಿದ ಕನ್ನಡಿಗರಿಗೆ ಏನು ಹೇಳುವುದಕ್ಕೆ ಬಯಸುತ್ತೀರಿ?

ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು. ‘ಬಿಗ್ ಬಾಸ್’ನಿಂದ ನಾನು ಮನೆಯಲ್ಲಿ ಉಳಿಯಲಿಲ್ಲ, ಜನರಿಂದ ಉಳಿದಿದ್ದು. ಅವರಿಗೆ ಕ್ರೆಡಿಟ್ ನೀಡುವುದರಲ್ಲಿ ತಪ್ಪೇನು? ನನಗೆ ಸಿಕ್ಕಿರುವ ಜನಪ್ರಿಯತೆಗೆ ಕನ್ನಡಿಗರೇ ಕಾರಣ.

ನಿಮ್ಮ ಯಾವ ಗುಣವನ್ನು ಕಂಡು ಜನರು ವೋಟ್ ಹಾಕಿದ್ದಾರೆ ಅಂತ ಅನಿಸುತ್ತದೆ?

ನಾನು ನೇರ, ಸ್ವಲ್ಪ ಖಾರ! ಯಾವುದನ್ನೂ ಬೆನ್ನಹಿಂದೆ ಹೇಳುವ ವ್ಯಕ್ತಿತ್ವ ನನ್ನದಲ್ಲ. ಮುಖಾಮುಖಿಯಾಗಿಯೇ ಎಲ್ಲವನ್ನೂ ಎದುರಿಸಿದ್ದೇನೆ. ನಾನು ನಾನಾಗಿಯೇ ‘ಬಿಗ್​ಬಾಸ್’ ಮನೆಗೆ ಪ್ರವೇಶ ಮಾಡಿದ್ದೆ.

ಬಹುಮಾನದ ದುಡ್ಡನ್ನು ದಾನ ಮಾಡಬೇಕು ಎಂಬುದು ಆ ಕ್ಷಣದ ನಿರ್ಧಾರವೇ ಅಥವಾ ಮೊದಲೇ ಹಾಗೆ ಯೋಚಿಸಿದ್ರಾ?

ಮೊದಲ ವಾರದಿಂದಲೂ ಜನರು ನನ್ನನ್ನು ಬೆಂಬಲಿಸಿದ್ದಾರೆ. ಹೀಗಿರಬೇಕಾದರೆ ಈ ದುಡ್ಡು ಯಾವುದು ಬೇಡ, ಅವರು ನೀಡಿದ ಯಶಸ್ಸು ಮಾತ್ರ ಸಾಕು ಎಂದು ನಿರ್ಧಾರ ಮಾಡಿದೆ. ಗೆದ್ದಿರುವುದಕ್ಕೆ ಟ್ರೋಫಿ ನೀಡಿದ್ದಾರೆ, ಮನೆಮಗ ಎಂದು ಅಪ್ಪಿಕೊಂಡಿದ್ದಾರೆ. ಗೆಲುವನ್ನು ಅನುಭವಿಸೋಣ, ಮಿಕ್ಕಿದ್ದನ್ನು ಅವರಿಗೇ ನೀಡಿದ್ದೇನೆ. ಕೆಲವು ವರ್ಗದ ಜನರು ಕಷ್ಟದಲ್ಲಿದ್ದಾರೆ. ಈ ದುಡ್ಡಿನಿಂದ ಅವರಿಗೆ ಸಹಾಯವಾಗಲಿ ಎಂಬುದಷ್ಟೇ ನನ್ನ ಕಾಳಜಿ.

‘ಬಿಗ್ ಬಾಸ್’ ನಂತರ ಪ್ರಥಮ್ ಜೀವನ ಹೇಗಿರಲಿದೆ?

ಒಂಚೂರು ಅಹಂ ಕಮ್ಮಿ ಮಾಡಿಕೊಳ್ಳುತ್ತೇನೆ. ಹೊಸ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತೇನೆ. ನನ್ನ ಅಹಂಕಾರದಿಂದ ಯಾರನ್ನು ನಾನು ದೂರ ಇಟ್ಟಿದ್ದೆನೋ, ಪ್ರೀತಿಯಿಂದ ಅವರ ಹತ್ತಿರ ಹೋಗುತ್ತೇನೆ.

‘ಬಿಗ್​ಬಾಸ್’ ಮನೆಯಿಂದ ಹೊರಬಂದ ಮೇಲೆ ಪ್ರಥಮ್ ಮಾಡುವ ಪ್ರಥಮ ಕೆಲಸ?

ನನ್ನ ನಿರ್ದೇಶನದ ‘ದೇವ್ರವ್ನೇ ಬುಡು ಗುರು’ ಚಿತ್ರವನ್ನು ಮುಗಿಸಬೇಕಿದೆ. ಅದಾದ ಮೇಲೆ ಮುಂದಿನ ಕೆಲಸಗಳು. ನಮ್ಮೂರು ಕೊಳ್ಳೇಗಾಲಕ್ಕೆ ಹೋಗಬೇಕಿದೆ.

ರೇಖಾ ಅವರ ಬಗ್ಗೆ ಏನು ಹೇಳುವುದಕ್ಕೆ ಬಯಸುತ್ತೀರಿ?

ಕೀರ್ತಿ ರನ್ನರ್ ಅಪ್ ಆಗಿದ್ದಾರೆ, ಸಂತೋಷ. ನನ್ನೊಟ್ಟಿಗೆ ರೇಖಾ ಅವರೇನಾದರೂ ಫೈನಲ್​ಗೆ ಬಂದಿದ್ದರೆ, ಖಂಡಿತ ಅವರೇ ವಿನ್ನರ್! ನನ್ನನ್ನು ಇಷ್ಟಪಟ್ಟವರೆಲ್ಲ ರೇಖಾ ಅವರನ್ನೂ ಇಷ್ಟಪಟ್ಟಿರುತ್ತಾರೆ. ಅವರನ್ನು ವಿರೋಧಿಸುವುದಕ್ಕೆ ಕಾರಣಗಳೇ ಇಲ್ಲ. ಒಂದು ವೇಳೆ, ಹಾಗೇನಾದರೂ ಆಗಿ ರೇಖಾ ಗೆದ್ದಿದ್ದರೆ ನಾನು ತುಂಬ ಖುಷಿಪಡುತ್ತಿದ್ದೆ.

ರನ್ನರ್ ಅಪ್ ಆದ ಕೀರ್ತಿ ಬಗ್ಗೆ ನಿಮ್ಮ ಅಭಿಪ್ರಾಯ?

ಕೀರ್ತಿ ಒಳ್ಳೆಯ ಮನುಷ್ಯ. ನನಗೆ ಸಿಕ್ಕಿದ ಉತ್ತಮ ಪ್ರತಿಸ್ಪರ್ಧಿ. ಮೊದಲು ಜಗಳ ಆಗಿದ್ದು, ನನ್ನ ಎಲ್ಲ ವಾದ-ವಿವಾದಗಳು ಶುರುವಾಗಿದ್ದು ಕೀರ್ತಿ ಜತೆಗೇ. ಕೆಲವೊಂದರಲ್ಲಿ ನನ್ನ ನಿಲುವು ಸರಿ ಇತ್ತು, ಇನ್ನೂ ಕೆಲವೊಮ್ಮೆ ಅವರ ನಿಲುವು ಸರಿ ಇತ್ತು. ತುಂಬ ಸಲ ನಾವಿಬ್ಬರೂ ಪರಸ್ಪರ ಮೆಚ್ಚಿಕೊಂಡಿದ್ದೇವೆ. ಕಿರಿಕ್ ಕೀರ್ತಿ ಅಂತ ಅವರು ಹೇಳಿಕೊಂಡರು, ಜಾಸ್ತಿ ಕಿರಿಕ್ ಅಲ್ಲ. ಅವರಿಗೆ ಒಳ್ಳೆಯದಾಗಲಿ.

 

Leave a Reply

Your email address will not be published. Required fields are marked *

Back To Top