Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಅಹಂಕಾರವೇ ಆಭರಣ, ಬಾಲಿವುಡ್ ರಾಣಿ ಕಂಗನಾ

Wednesday, 13.09.2017, 3:02 AM       No Comments

ಹನಿಮೂನ್​ಗೆ ಪ್ಯಾರಿಸ್​ಗೇ ಹೋಗಬೇಕು…

ಮದುವೆಯ ಬಗ್ಗೆ, ಪ್ರೀತಿಸಿದ ಹುಡುಗನ ಬಗ್ಗೆ, ಹನಿಮೂನ್ ಬಗ್ಗೆ ಆ ಹುಡುಗಿಗೆ ಅಪಾರ ಕನಸು. ಹನಿಮೂನ್​ಗೆ ತನ್ನ ಹಣದಲ್ಲೇ, ತಾನು ಇಷ್ಟಪಟ್ಟ ಜಾಗಕ್ಕೇ ತೆರಳಬೇಕು, ಎಲ್ಲವೂ ತಾನು ಬಯಸಿದಂತೆಯೇ ನಡೆಯಬೇಕೆಂಬ ಆ ಹುಡುಗಿ ತಾನು ಕೂಡಿಟ್ಟ ಹಣದಿಂದ ಹನಿಮೂನ್​ಗೆ ವಿಮಾನ ಟಿಕೆಟ್ ಖರೀದಿಸುತ್ತಾಳೆ.

ಇನ್ನೇನು ಮದುವೆಗೆ ಒಂದೇ ದಿನ ಬಾಕಿ. ಹುಡುಗ ಕೈಕೊಡುತ್ತಾನೆ. ನಿನ್ನಂಥ ಹಳ್ಳಿ ಹುಡುಗಿ ನನಗೆ ಹೊಂದಿಕೆಯಾಗುವುದಿಲ್ಲ.. ಈ ಮದುವೆ ಬೇಡ ಎಂದು ಕೊಡವಿಕೊಂಡುಬಿಡುತ್ತಾನೆ. ಅವಳಿಗೋ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂಥ ದಿಗ್ಭಾ Šಂತಿ. ಹುಡುಗನ ಮೋಸ, ಮುರಿದ ಮದುವೆಗಿಂತ ಹನಿಮೂನ್ ಕಥೆಯೇನು ಎಂಬ ಚಿಂತೆ!

ಕೊನೆಗೆ ಆ ಹುಡುಗಿಯೊಂದು ಕ್ರಾಂತಿಕಾರಿ ತೀರ್ವನಕ್ಕೆ ಬರುತ್ತಾಳೆ. ಒಬ್ಬಳೇ ಹನಿಮೂನ್​ಗೆ ತೆರಳುತ್ತಾಳೆ!

ಇದು ಬಾಲಿವುಡ್​ನ ಸೂಪರ್​ಹಿಟ್ ‘ಕ್ವೀನ್‘ ಚಿತ್ರದ ಕಥೆ. ಕನ್ನಡದಲ್ಲೂ ರೀಮೇಕ್ ಆಗುತ್ತಿರುವ ಈ ಚಿತ್ರಕ್ಕೆ ಜೀವ ತುಂಬಿದ್ದು ಬಾಲಿವುಡ್​ನ ವರ್ತಮಾನದ ರಾಣಿ ಕಂಗನಾ ರಣಾವತ್. ಬಾಲಿವುಡ್​ನಲ್ಲಿ ಹೋರಾಡಿಕೊಂಡು, ಪರದಾಡಿಕೊಂಡು ಏದುಸಿರುಬಿಡುತ್ತಿದ್ದ ಕಂಗನಾಗೆ ಪುನರ್ಜನ್ಮ ನೀಡಿದ ಚಿತ್ರ ಕ್ವೀನ್. ವಿಶೇಷವೆಂದರೆ, ಚಿತ್ರದ ನಾಯಕಿ ರಾಣಿಗೂ, ಕಂಗನಾ ಜೀವನಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲದಿರುವುದು. ಕಂಗನಾ ಸ್ವಭಾವವೇ ಹಾಗೆ. ನೇರಾನೇರ, ದಿಟ್ಟ ಲೈಫ್​ಸ್ಟೈಲ್, ಫಿಲ್ಟರ್ ಇಲ್ಲದ ಮಾತು, ಸಾಟಿಯಿಲ್ಲದ ಎದೆಗಾರಿಕೆ.. ಸ್ನೇಹಕ್ಕೆ ಸ್ನೇಹ, ಜೀವಕ್ಕೆ ಜೀವ, ಕೆಣಕಿದರೆ ಮಟಾಷ್ ಎಂಬ ಮನಸ್ಥಿತಿಯ ಹುಡುಗಿ.

ಬಣ್ಣದ ಬದುಕೆಂದರೇ ಮುಖವಾಡದ್ದು. ತೆರೆಯ ಮೇಲೆ ಕಾಣುವ ಪಾತ್ರಗಳು ನಿಜವಿರುವುದಿಲ್ಲ, ಮೇಕಪ್ ಹಿಂದಿರುವ ಮುಖದ ಭಾವನೆ ಯಾರಿಗೂ ಕಾಣುವುದಿಲ್ಲ. ಕ್ಯಾಮೆರಾ ಎದುರು ನಟಿಸುವುದಕ್ಕೂ, ಲೌಕಿಕ ಬದುಕಿನ ವ್ಯವಹಾರಗಳಿಗೂ ಅಗಾಧ ವ್ಯತ್ಯಾಸವಿರುತ್ತದೆ. ಆದರೆ, ಹೆಚ್ಚಿನ ನಟರು ಚಿತ್ರಗಳ ಮೂಲಕ ಬೆಳೆಸಿಕೊಂಡ ಇಮೇಜ್​ನ ಮುಖವಾಡ ತೊಟ್ಟು ಸಮಾಜದಲ್ಲೂ ಬದುಕುತ್ತಾರೆ. ವ್ಯಕ್ತಿಗತವಾಗಿ ತಮ್ಮ ಇಷ್ಟಾನಿಷ್ಟಗಳು, ವ್ಯಕ್ತಿತ್ವ ಏನೇ ಇದ್ದರೂ, ಜನರು ಮೆಚ್ಚಿದ ಪಾತ್ರಗಳ ಪ್ರತಿರೂಪ ತಾವೆಂಬ ಭ್ರಮೆಯನ್ನು ಸಮಾಜದಲ್ಲಿ ಮೂಡಿಸಿ ತಮ್ಮ ಪ್ರಸ್ತುತತೆ, ವರ್ಚಸ್ಸು ಕಾಯ್ದುಕೊಳ್ಳುತ್ತಾರೆ. ಆದರೆ, ಯಾವುದೋ ಒಂದು ಸಾಮಾಜಿಕ ಸಂದರ್ಭದಲ್ಲಿ, ಕೌಟುಂಬಿಕ ಬಿಕ್ಕಟ್ಟಿನಲ್ಲಿ ಅಥವಾ ಅತಿರೇಕದ ಕ್ಷಣಗಳಲ್ಲಿ ಅವರ ನಿಜರೂಪ ಬಯಲಾಗಿಬಿಡುತ್ತದೆ.

ಆದರೆ, ಆಶ್ಚರ್ಯವೆಂದರೆ ಕಂಗನಾ ಬಣ್ಣದ ಬದುಕಿಗೂ, ನಿಜಬದುಕಿಗೂ ವ್ಯತ್ಯಾಸವಿಲ್ಲದಿರುವುದು. ಬೇರೆ ನಟಿಯರು ಸಿನಿಮಾ, ಜಾಹೀರಾತುಗಳಲ್ಲಿ ತೋರಿಕೆಗೆ ಪ್ರದರ್ಶಿಸುವ ನನ್ನ ಬದುಕು, ನನ್ನ ಆಯ್ಕೆ, ನನ್ನಿಷ್ಟ ಎಂಬ ಜೀವನ ಧೋರಣೆಯನ್ನು ಯಾವುದೇ ಗೊಂದಲ, ಗದ್ದಲವಿಲ್ಲದೆ ಅಳವಡಿಸಿಕೊಂಡವರೀಕೆ. ಕಂಗನಾರ ಈ ನೇರವಂತಿಕೆ ಮೆಚ್ಚುವ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ, ಬಾಲಿವುಡ್ ಮಂದಿ ಆಕೆಯ ಬಗ್ಗೆ ಹೆದರುತ್ತಾರೆ, ಅಂತರ ಕಾಯ್ದುಕೊಳ್ಳುತ್ತಾರೆ. ಕೆಲವೊಮ್ಮೆ ಅತಿ ಎನಿಸಿದರೂ ಅಹಂಕಾರವೇ ಕಂಗನಾ ಆಭರಣ, ಐಡೆಂಟಿಟಿ.

ಹಿಮಾಚಲ ಪ್ರದೇಶದ ಸಿರಿವಂತ, ಅವಿಭಕ್ತ ರಜಪೂತ ಕುಟುಂಬದಲ್ಲಿ ಜನಿಸಿದ ಕಂಗನಾ, ಯಾವುದಕ್ಕೂ ಕೊರತೆ ಇಲ್ಲದಂತೆ ಬಾಲ್ಯ ಕಳೆದವರು. ಅಪ್ಪ ಉದ್ಯಮಿ, ಅಮ್ಮ ಶಿಕ್ಷಕಿ, ಅಜ್ಜ ನಿವೃತ್ತ ಐಎಎಸ್ ಅಧಿಕಾರಿ, ಮುತ್ತಜ್ಜ ಶಾಸಕರಾಗಿದ್ದವರು. ಅರಮನೆಯಂಥ ಬಂಗಲೆಯಲ್ಲಿ ವಾಸ. ಆದರೆ, ಮನೆಯ ಸಾಂಪ್ರದಾಯಿಕ, ಕಟ್ಟುನಿಟ್ಟಿನ ವಾತಾವರಣದಲ್ಲೂ ಸ್ವತಂತ್ರವಾಗಿ ಆಲೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಛಾತಿ ಬೆಳೆಸಿಕೊಂಡಿದ್ದು ಕಂಗನಾ ಹೆಚ್ಚುಗಾರಿಕೆ. ಆಕೆ ಬಾಲ್ಯದಿಂದಲೇ ಹಾಗೆ. ಶಾಲೆಯಿಂದ ಬಂದ ಮೇಲೆ ಚಿತ್ರವಿಚಿತ್ರವಾಗಿ ಡ್ರೆಸ್ ಮಾಡಿಕೊಳ್ಳುವುದು ಆಕೆಗೆ ಇಷ್ಟ. ತಮ್ಮನಿಗೆ ಪ್ಲಾಸ್ಟಿಕ್ ಗನ್ ತಂದುಕೊಟ್ಟರೆ, ನನಗೂ ಗನ್ನೇ ಬೇಕು, ಗೊಂಬೆ ತಂದಿದ್ದೇಕೆ ಎಂದು ಮನೆಯಲ್ಲೇ ತಾರತಮ್ಯದ ವಿರುದ್ಧ ಹೋರಾಟ. ಮಗಳು ಡಾಕ್ಟರ್ ಆಗಲಿ ಎನ್ನುವುದು ಅಪ್ಪನ ಕನಸಾಗಿತ್ತು. ಆರಂಭದಲ್ಲಿ ಆಕೆಗೂ ಇಷ್ಟವಿತ್ತು. ಆದರೆ, ಒಂದು ಯುನಿಟ್ ಟೆಸ್ಟ್​ನಲ್ಲಿ ಫೇಲ್ ಆದ ಬಳಿಕ ಛೇ ಇದು ನನಗಲ್ಲ ಎಂದು ಅನಿಸಿದ್ದೇ ತಡ. ಮತ್ತೆ, ಯಾರು ಹೇಳಿದರೂ ಕೇಳಲಿಲ್ಲ. ವೈದ್ಯಕೀಯ ಪ್ರವೇಶ ಪರೀಕ್ಷೆ ಕಟ್ಟಿದರೂ, ಬರೆಯಲಿಲ್ಲ. 18 ತುಂಬುವ ಮೊದಲೇ ಮನೆಯಲ್ಲಿ ಜಗಳವಾಡಿಕೊಂಡು, ಉಟ್ಟ ಬಟ್ಟೆಯಲ್ಲೇ ದೆಹಲಿಗೆ ಬಂದಿದ್ದು, ಏನು ಮಾಡಬೇಕೆಂದು ಗೊತ್ತಾಗದೆ ಅಲೆದಾಡಿದ್ದು, ಮಾಡೆಲಿಂಗ್ ಏಜೆನ್ಸಿಗಳ ಸಂಪರ್ಕಕ್ಕೆ ಬಂದು ಮಾಡೆಲ್ ಆಗಿ ರ‍್ಯಾಂಪ್ ವಾಕ್ ಮಾಡಿದ್ದು, ಅದೂ ಬೋರಾಗಿ ಮುಂದೇನು ಎಂದು ಪರದಾಡಿದ್ದು, ನಾಟಕ ಶಾಲೆ ಸೇರಿದ್ದು… ಕಂಗನಾ ವೃತ್ತಿಜೀವನವೂ ಯಾವ ಬಾಲಿವುಡ್ ಕಥೆಗೂ ಕಡಿಮೆ ಏನಿಲ್ಲ.

ದೆಹಲಿಯಲ್ಲಿ ರಂಗಕರ್ವಿು ಅರವಿಂದ್ ಗೌರ್ ಗರಡಿಯಲ್ಲಿ ಪಳಗಿದ ಕಂಗನಾ ಗಿರೀಶ್ ಕಾರ್ನಾಡ್​ರ ‘ತಲೆದಂಡ‘ ಸಹಿತ ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬಳಿಕ ನಟನೆಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ವಿಶ್ವಾಸ ಮೂಡತೊಡಗಿತ್ತು. ಅಲ್ಲಿಂದ ಹೊಸ ಪಯಣ ಶುರುವಾಗಿತ್ತು. ಮುಂದಿನ ನಿಲ್ದಾಣವೇ ಮುಂಬೈ. ಆಶಾ ಚಂದ್ರ ಅವರ ಅಭಿನಯ ಶಾಲೆಯಲ್ಲಿ 4 ತಿಂಗಳ ತರಬೇತಿಗೆ ಸೇರಿಕೊಂಡ ಕಂಗನಾ ಪಾಲಿಗೆ ಮುಂಬೈ ಬದುಕು ಅಸಹನೀಯವಾಗಿತ್ತು. ಮನೆಯಿಂದ ಜಗಳವಾಡಿಕೊಂಡು ಬಂದ ಮೇಲೆ ಅಪ್ಪನ ದುಡ್ಡಿನ ಹಂಗೇಕೆ ಎಂಬ ಸ್ವಾಭಿಮಾನದಿಂದಾಗಿ ಮನೆಯ ಸಂಪರ್ಕ ಕಡಿದುಕೊಂಡಿದ್ದ ಕಂಗನಾ ಪಾಲಿಗೆ ಬ್ರೆಡ್ ಮತ್ತು ಉಪ್ಪಿನಕಾಯಿ ನಿತ್ಯದ ಊಟ. ಕೈಯಲ್ಲಿ ಕೆಲಸವಿಲ್ಲ, ಖರ್ಚಿಗೆ ಕಾಸಿಲ್ಲ, ಸೌಂದರ್ಯ, ಮೈಮಾಟ ಹೊಗಳುವವರ ನಿರೀಕ್ಷೆ ಬೇರೆಯೇ ಇದ್ದ ಕಾರಣ ಯಾವ ಅವಕಾಶವೂ ಕೈಗೆ ಹತ್ತುತ್ತಿರಲಿಲ್ಲ. ಜೊತೆಗೆ ಬಟ್ಲರ್ ಇಂಗ್ಲಿಷ್​ನ ಅವಮಾನ ಬೇರೆ. ಅಷ್ಟಾಗಿಯೂ, ಕಷ್ಟಗಳೇ ಬದುಕುವುದನ್ನು ಕಲಿಸುತ್ತದೆ ಎಂದು ನಂಬಿದ್ದ ಕಂಗನಾ, ಯಾವುದಕ್ಕೂ ಕೊರಗಲಿಲ್ಲ, ಮರುಗಲಿಲ್ಲ. ಈ ಹಂತದಲ್ಲಿ ಕೆಲವರು ನೆರವಿಗೆ ಬಂದರು, ಕೆಲವರು ಕೈಕೊಟ್ಟರು. ಆ ದಿನಗಳಲ್ಲಿ ಕಂಗನಾ ನೆರವಿಗೆ ಬಂದಿದ್ದು ನಟ ಆದಿತ್ಯ ಪಂಚೋಲಿ. ಆದಿತ್ಯ ಜೊತೆಗಿನ ಸುಮಾರು ನಾಲ್ಕೂವರೆ ವರ್ಷಗಳ ಒಡನಾಟದಲ್ಲಿ ಕಂಗನಾ ಬಾಲಿವುಡ್​ನ ಕೆಮಿಸ್ಟ್ರಿ, ಅಂಕಗಣಿತ, ರೇಖಾಗಣಿತ ಅರ್ಥಮಾಡಿಕೊಂಡರು. ಇದರ ನಡುವೆ ಮಹೇಶ್ ಭಟ್ ಪ್ರೊಡಕ್ಷನ್​ನ ಗ್ಯಾಂಗ್​ಸ್ಟರ್ ಚಿತ್ರದಲ್ಲಿ ನಾಯಕಿ ಪಾತ್ರ ದೊರಕಿತು. ಆಗಿನ್ನೂ ಕಂಗನಾಗೆ 17 ವರ್ಷ ವಯಸ್ಸು. ಸದಾ ಮದಿರೆಯ ಅಮಲಿನಲ್ಲಿರುವ, ಇಬ್ಬರು ಪ್ರೇಮಿಗಳ ನಡುವೆ ತೊಳಲಾಡುವ, ಸಂಕೀರ್ಣ ಪಾತ್ರ ಅದು. ಈಕೆಗಿನ್ನೂ ವಯಸ್ಸು ಸಾಲದು ಎಂದು ಮಹೇಶ್ ಭಟ್, ಚಿತ್ರಾಂಗದಾ ಸಿಂಗ್​ರನ್ನು ಆಯ್ಕೆ ಮಾಡಿಯೂ ಆಗಿತ್ತು. ಆದರೆ, ಅದೃಷ್ಟ ಕಂಗನಾ ಹಣೆಯಲ್ಲೇ ಬರೆದಿತ್ತು. ಚಿತ್ರಾಂಗದಾ ಅಲಭ್ಯತೆಯಿಂದ ಮತ್ತೆ ಆಯ್ಕೆಯಾದ ಕಂಗನಾ, ಅದ್ಭುತ ನಟನೆಯಿಂದ ಫಿಲಂಫೇರ್ ಅವಾರ್ಡ್ ಕೂಡ ಪಡೆದರು.

ಅಂದಿನಿಂದ ಕಂಗನಾ ವೃತ್ತಿಬದುಕು ವೇಗ ಪಡೆಯಿತು. ವ್ಯಕ್ತಿಗತ ಬದುಕೂ ಹಲವು ತಿರುವುಗಳನ್ನು ಕಂಡಿತು. ವೋ ಲಮ್ಹೆ, ಲೈಫ್ ಇನ್ ಎ ಮೆಟ್ರೋ, ಫ್ಯಾಶನ್, ರಾಜ್: ದ ಮಿಸ್ಟರಿ ಕಂಟಿನ್ಯೂಸ್, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ತನು ವೆಡ್ಸ್ ಮನು, ಕೈಟ್, ಕ್ರಿಶ್-3, ತನು ವೆಡ್ಸ್ ಮನು ರಿಟರ್ನ್ಸ್, ಕ್ವೀನ್… ಹೀಗೆ ಯಶಸ್ವಿ ಚಿತ್ರಗಳ ಪಟ್ಟಿ ಬೆಳೆಯಿತು. ಈ ಒಂದೊಂದು ಚಿತ್ರಗಳ ಮೂಲಕವೂ ಕಂಗನಾ ವ್ಯಕ್ತಿತ್ವ, ವರ್ಚಸ್ಸು ಹೆಚ್ಚಿತು. ಸಕಾರಾತ್ಮಕ, ನಕಾರಾತ್ಮಕ ಎಲ್ಲಾ ಬಗೆಯ ಪ್ರಚಾರ ಜನಪ್ರಿಯತೆ ಹೆಚ್ಚಿಸಿತು. ಅತ್ಯುತ್ತಮ ನಟನೆಗಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ, ನಾಲ್ಕೂ ಬಾರಿ ಫಿಲಂ ಫೇರ್ ಪ್ರಶಸ್ತಿ ಒಲಿದುಬಂದವು. ಬದುಕಿನ ಹಲವು ಸಂಬಂಧಗಳು, ಬ್ರೇಕಪ್​ಗಳು, ವೈಫಲ್ಯಗಳ ಮೂಲಕ ಒಂಟಿಯಾಗಿ, ವಿರಹಿಯಾಗಿ, ನೊಂದ ಹೆಣ್ಣಾಗಿ, ಸಾರ್ವಜನಿಕ ನಿಂದನೆಗೊಳಗಾದರೂ, ಕಂಗೆಡದೆ ಎಲ್ಲವನ್ನೂ ದಿಟ್ಟವಾಗಿ ಎದುರಿಸಿದ್ದು ಅವರ ಹೆಚ್ಚುಗಾರಿಕೆ. ಬೇರೆ ನಟಿಯರಿಗೆ ಹೋಲಿಸಿದರೆ, ಕಂಗನಾ ತಪ್ಪು ಒಪ್ಪಿಕೊಳ್ಳಲು ಮುಜುಗರ ಪಟ್ಟುಕೊಳ್ಳಲಿಲ್ಲ, ಬೇರೆಯವರ ತಪ್ಪು ಎತ್ತಿ ತೋರಿಸಲು ಹಿಂಜರಿಯಲಿಲ್ಲ. ತನಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಲಿಲ್ಲ, ಆಪತ್ತಿಗೆ ಒದಗಿದವರನ್ನು ಮರೆಯಲಿಲ್ಲ. ಮಾತು, ಕೃತಿ ಹಾಗೂ ಬದುಕಿನ ರೀತಿಯಲ್ಲಿ ವ್ಯತ್ಯಾಸ ಇಟ್ಟುಕೊಳ್ಳದೆ, ತಾನಿರುವುದೇ ಹಾಗೆ ಎಂದು ಜಗತ್ತಿಗೆ ಸೆಡ್ಡು ಹೊಡೆವ ಕಂಗನಾ ಧೈರ್ಯ ಮೆಚ್ಚಲೇಬೇಕು.

ಬಾಲಿವುಡ್​ನಲ್ಲಿ, ಬದುಕಿನಲ್ಲಿ ಕಂಗನಾ ಸಾಗಿ ಬಂದ ಹಾದಿಯನ್ನು ಅನುಸರಿಸುವುದು, ಅನುಕರಿಸುವುದು ಅಸಾಧ್ಯ. ಆದರೆ, ಆಲೋಚನೆಯಲ್ಲಿ, ಜೀವನಶೈಲಿಯಲ್ಲಿ, ಗುರಿಯಲ್ಲಿ ಆಕೆ ಹೊಂದಿರುವ ಸ್ಪಷ್ಟತೆ, ನಿಷ್ಠುರತೆ ಮಾದರಿ. ಹೃತಿಕ್ ರೋಷನ್ ಜೊತೆಗಿನ ಪ್ರೀತಿ-ವಿರಸ, ಕರಣ್ ಜೋಹರ್, ಸೈಫ್ ಅಲಿ ಖಾನ್​ರಂಥವರ ಜೊತೆಗಿನ ಕಚ್ಚಾಟ, ಆದಿತ್ಯ ಪಂಚೋಲಿ, ಶೇಖರ್ ಸುಮನ್, ಅಧ್ಯಯನ್ ಸುಮನ್ ಮೊದಲಾದವರ ಜೊತೆಗಿನ ಜಗಳಗಳಲ್ಲಿ ಕೆಲವು ಬಾರಿ ಕಂಗನಾ ಹೀಗೇಕೆ ಅನ್ನಿಸಿದರೂ, ಸಂದಿಗ್ಧ, ಸಂಕಷ್ಟಗಳನ್ನು ಏಕಾಂಗಿಯಾಗಿ ಎದುರಿಸಿದ ರೀತಿ ಆಕೆಗೆ ಮಾತ್ರ ಸಾಧ್ಯ.

ಕಂಗನಾರ ಹೊಸ ಚಿತ್ರ ಸಿಮ್ರನ್ ಬಿಡುಗಡೆಗೆ ಸಿದ್ಧವಾಗಿದೆ. ಅದರಲ್ಲೂ ಆಕೆಗೆ ನಿಜಬದುಕಿಗೆ ಹತ್ತಿರವಾದ ತನ್ನಿಷ್ಟದಂತೆ ಬದುಕುವ, ಸ್ವತಂತ್ರ ಹಕ್ಕಿಯ ಪಾತ್ರ. ಮಣಿಕರ್ಣಿಕಾ ಶೀರ್ಷಿಕೆಯ ನೂತನ ಚಿತ್ರದಲ್ಲಿ ಝಾನ್ಸಿ ರಾಣಿಯ ಪಾತ್ರವನ್ನೂ ನಿಭಾಯಿಸುತ್ತಿರುವ ಕಂಗನಾ ಅಭಿಮಾನಿಗಳ ಪಾಲಿಗೆ ಅರ್ಥಮಾಡಿಕೊಂಡಷ್ಟೂ ಅರ್ಥವಾಗದೇ ಉಳಿಯುವ ಸರ್ಪ್ರೖೆಸ್ ಪ್ಯಾಕೇಜ್.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top