Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಅಷ್ಟಕ್ಕೂ ಅವರೇಕೆ ಭಾರತಕ್ಕೆ ವಾಪಸ್ ಬರುವುದಿಲ್ಲ?

Sunday, 02.07.2017, 3:03 AM       No Comments

ಪ್ರೀತಿಯ ಗೆಳೆಯನಿಗೆ, ಅನಂತ ನಮಸ್ಕಾರಗಳು.

ಅಂತೂ ಕ್ಷೇಮವಾಗಿ ಬಂದು ಅಮೆರಿಕ ತಲುಪಿದ್ದೇನೆ. ಏನ್ ಗೊತ್ತಾ? ನಾನು ಬಂದದ್ದು ನಿನ್ನೆ ಸಂಜೆಯಷ್ಟೇ ಆದ್ದರಿಂದ ಇವತ್ತೇ ನಿನಗೆ ಪತ್ರ ಬರೆದುಬಿಡಬೇಕೆಂದು ಪೇಪರ್ ಎದುರಿಗಿಟ್ಟುಕೊಂಡೆ. ಆದರೆ ಪೆನ್ನು ಊರುವ ಮೊದಲು ಒಂದಿಷ್ಟು ಪರದಾಡಿಬಿಟ್ಟೆ. ಯಾಕೆ ಗೊತ್ತಾ? ಈಚೀಚೆಗೆ ನನ್ನ, ನಿನ್ನ ಕೈಗಳಿಗೆಲ್ಲ ಈ ಮೊಬೈಲ್​ಫೋನು ಬಂದು ತಗಲುಹಾಕಿಕೊಂಡ ಮೇಲೆ ಪತ್ರ ಬರೆಯುವುದನ್ನೇ ಮರೆತುಬಿಟ್ಟಿದ್ದೇವಲ್ಲ! ಹಾಗಾಗಿ ಅಪ್ಪನಿಗೆ ತೀರ್ಥರೂಪು, ಅವ್ವನಿಗೆ ಮಾತೋಶ್ರೀ, ಗುರುಗಳಿಗೆ ಪೂಜ್ಯ, ತಮ್ಮನಿಗೆ ಚಿರಂಜೀವಿ ಹಾಕುವ ಹಾಗೆ ಗೆಳೆಯನಿಗೆ ಏನು ಹಾಕಬೇಕು? ಅಂತ ಸುಮಾರು ಹೊತ್ತು ತಲೆಕೆಡಿಸಿಕೊಂಡೆ. ಉಹುಂ, ಬರಲಿಲ್ಲ. ಗೆಳೆಯನ ಹಿಂದೆ ಹಾಕಬೇಕಾದ್ದು ಏನೋ ಇದೆ ಅನ್ನಿಸುತ್ತಿದೆ. ಆದರೆ ಏನು ಅಂತ ನೆನಪಾಗುತ್ತಿಲ್ಲ. ಇರಲಿ, ಕನ್ನಡ ಮೇಷ್ಟ್ರಾದ ನನಗೇ ಅದು ಮರೆತಿದೆ ಅಂದಮೇಲೆ ಇಂಜಿನಿಯರ್ ಆದ ನಿನಗೆಲ್ಲಿ ನೆನಪಾಗಬೇಕು? ಆದ್ದರಿಂದ ಪ್ರೀತಿಯ ಗೆಳೆಯನಿಗೆ ಅಂತ ಬರೆದಿದ್ದೇನೆ. ‘ಪ್ರೀತಿಯ’ ಬದಲಿಗೆ ಅಲ್ಲಿ ಏನಿರಬೇಕು ಅಂತ ನಿನಗೇನಾದರೂ ಗೊತ್ತಾದರೆ ಅಲ್ಲಿ ನೀನೇ ಬದಲಾಯಿಸಿಕೊಂಡುಬಿಡು. ಇರಲಿ.

ಮೊನ್ನೆ ನೀನು ಮಧ್ಯರಾತ್ರಿ ನನ್ನನ್ನು ನಿನ್ನ ಕಾರಿನಲ್ಲಿ ಕರೆದುಕೊಂಡು ಏರ್​ಪೋರ್ಟಿಗೆ ಬಿಟ್ಟು ‘ಹ್ಯಾಪಿ ಜರ್ನಿ…! ಜೋಪಾನ…!’ ಅಂತ ಹೇಳಿ ಮೃದುವಾಗಿ ಬೆನ್ನುತಟ್ಟಿ ಬೀಳ್ಕೊಟ್ಟೆಯಷ್ಟೆ. ಅನಂತರ ನಾನು ಕತಾರ್ ಏರ್​ವೇಸ್ ಡೆಸ್ಕಿನ ಮುಂದೆ ಹೋಗಿ ಅಲ್ಲಿ ಕೂತಿದ್ದ ಸುಕುಮಾರಿ ಸುಂದರಾಂಗಿಯೊಂದಿಗೆ, ‘ನನಗೆ ಸುರಳೀತವಾಗಿ ಕಾಲು ಚಾಚಿಕೊಂಡು ಕೂತುಕೊಳ್ಳಲು ಸಾಧ್ಯವಾಗುವಂಥ ಸೀಟೊಂದನ್ನು ಕರುಣಿಸಲು ಸಾಧ್ಯವೇ?’ ಅಂತ ಒಂದಿಷ್ಟು ಹಲ್ಲುಗಿಂಜಿದೆ. ಆಕೆ ಪ್ರತಿಯಾಗಿ ನನಗಿಂತ ಇನ್ನೊಂದಿಷ್ಟು ಅಗಲವಾಗಿ ಹಲ್ಲುಗಿಂಜಿ, ‘ನಿಮಗೆ ಬೆಂಗಳೂರಿನಿಂದ ದೋಹಾ (ಕತಾರ್​ನ ರಾಜಧಾನಿ)ಕ್ಕೆ ಮುಂದಿನ ಸಾಲಿನ ಸೀಟನ್ನೇ ಕೊಡುತ್ತೇನೆ. ಆದರೆ ದೋಹಾದಿಂದ ಡಲಾಸ್​ಗೆ ಹಾರುವ ವಿಮಾನದಲ್ಲಿ ಅಂಥ ಯಾವ ಸೀಟುಗಳೂ ಲಭ್ಯವಿಲ್ಲ, ವಾಟ್ ಡೂ ಐ ಡು?’ ಅಂದಳು. ನಾನು ‘ಆಯ್ತು, ಹಾಗೇ ಮಾಡಿ’ ಅಂದೆ. ಅವಳು ಹಾಗೇ ಮಾಡಿದಳು.

ಬೆಂಗಳೂರು-ದೋಹಾ ಮತ್ತು ದೋಹಾ-ಡಲಾಸ್ ಎರಡೂ ವಿಮಾನಗಳು ಅವತ್ತು ಸಮಯಕ್ಕೆ ಹಾರಿ ಸರೀ ಸಮಯಕ್ಕೆ ನೆಲಮುಟ್ಟಿದವು. ಆದ್ದರಿಂದ ನಾನು ಅಮೆರಿಕ ದೇಶದ, ಟೆಕ್ಸಾಸ್ ರಾಜ್ಯದ ಡಲಾಸ್-ಪೋರ್ಟ್​ವರ್ತ್ ಏರ್​ಪೋರ್ಟಿನಲ್ಲಿ ಇಳಿದಾಗ ಸರಿಯಾಗಿ ಐದು ಗಂಟೆ ಎಂಟು ನಿಮಿಷ. ಅವತ್ತು ಇಮಿಗ್ರೇಷನ್ ಕೌಂಟರಿನ ಮುಂದೆ ಭಾರಿ ದೊಡ್ಡ ಕ್ಯೂ ಇದ್ದದ್ದರಿಂದ ಅಲ್ಲಿ ಸ್ವಲ್ಪ ನಿಧಾನವಾಯಿತು. ನಾನು ಏರ್​ಪೋರ್ಟಿಂದ ಹೊರಗೆ ಬರುವಷ್ಟರಲ್ಲಿ ನನ್ನನ್ನು ಆಹ್ವಾನಿಸಿದ್ದ ಡಾ. ಬಾಲುಚಂದ್ರ ಮತ್ತು ಅವರ ಪತ್ನಿ ನಂದಿನಿ ಅಲ್ಲೇ ಕಾಯುತ್ತಿದ್ದರು. ಕುಶಲ ಸಂಭಾಷಣೆಗಳಾದ ಮೇಲೆ ಅವರೊಂದಿಗೆ ಕಾರು ಹತ್ತಿಕೊಂಡು ‘ಕಾಲಿ ವಿಲ್ಲ್’ (Colley Ville) ಎಂಬ ಐಷಾರಾಮಿ ಬಡಾವಣೆಯಲ್ಲಿರುವ ಪುಟ್ಟ ಅರಮನೆಯಂಥ ಅವರ ಮನೆಗೆ ಬಂದೆ.

ನಾನಿಲ್ಲಿ ಅಗತ್ಯಕ್ಕಿಂತ ಹೆಚ್ಚು ಕ್ಷೇಮವಾಗಿದ್ದೇನೆ. ನೀನೂ, ನಿನ್ನ ಮನೆಯವರೂ ಯಥೋಚಿತವಾಗಿ ಕ್ಷೇಮದಿಂದಿರುತ್ತೀರೆಂದು ನಂಬಿದ್ದೇನೆ.

ನನ್ನಾತ್ಮೀಯ ಗೆಳೆಯನೇ, ನೀನೇ ಬಲ್ಲಹಾಗೆ ನಾನು ಈ ದೇಶಕ್ಕೆ ಹಲವಾರು ಬಾರಿ ಬಂದಿದ್ದೇನೆ. ವಿವಿಧ ಹವಾಮಾನಗಳಲ್ಲಿ ವಿವಿಧ ಊರುಗಳಲ್ಲಿ, ರಾಜ್ಯಗಳಲ್ಲಿ ಸುತ್ತಾಡಿದ್ದೇನೆ. ಜಗತ್ತಿನ ಬಹುದೊಡ್ಡ, ಬಹುಪ್ರಭಾವಿ ದೇಶವಾದ ಅಮೆರಿಕದಲ್ಲಿ ಜಗತ್ತಿನ ಎಲ್ಲ ದೇಶಗಳ ಜನರೂ ಬಂದು ನೆಲೆಸಿದ್ದಾರೆ. ಅಮೆರಿಕ ಅದೆಷ್ಟು ದೊಡ್ಡ ದೇಶ, ಅದೆಷ್ಟು ಪ್ರಭಾವಿ ದೇಶವೆಂದರೆ ಜಗತ್ತಿನ ಯಾವುದೇ ದೇಶದಿಂದ ಬಂದವರೂ ಆ ದೇಶದ ಸಂಸ್ಕೃತಿಯಲ್ಲಿ ಕರಗಿಹೋಗುತ್ತಾರೆ. ಆದ್ದರಿಂದ ಈ ದೇಶವನ್ನು ’Melting Pot’  ಎಂದು ಕೆಲವರು ಕರೆದರು. ಮತ್ತೆ ಕೆಲವರು ಅದು ಹಾಗಲ್ಲ, ಅಮೆರಿಕ ಎಷ್ಟು ಉದಾರ ದೇಶವೆಂದರೆ ಜಗತ್ತಿನ ಬೇರೆಬೇರೆ ದೇಶಗಳ ಜನರು ಬಂದು ಅಮೆರಿಕದ ಸಂಸ್ಕೃತಿಯಲ್ಲಿ ಕರಗಿಹೋಗಬೇಕಾಗಿಲ್ಲ. ಯಾವುದೇ ದೇಶದ ಜನ ಅವರವರ ಸಂಸ್ಕೃತಿ, ಜೀವನ ವಿಧಾನಗಳನ್ನು ಮುಂದುವರಿಸಿಕೊಂಡೇ ಅಮೆರಿಕದಲ್ಲಿ ಬದುಕಬಹುದು. ಆದ್ದರಿಂದ, ಅಮೆರಿಕವೊಂದು Melting Pot ಅಲ್ಲ, ಬದಲಾಗಿ ಅದೊಂದು ‘Salad Bowl’ ಎಂದೂ ಕರೆಯುತ್ತಾರೆ. ಅಮೆರಿಕವನ್ನು ನೋಡಿದಾಗ ಈ ಎರಡೂ ಮಾತುಗಳು ನಿಜವೇ ಅನ್ನಿಸುತ್ತದೆ. ಆ ಮಾತಿರಲಿ.

ನಾನೀಗ ಹೇಳಲು ಹೊರಟಿರುವುದು ಗುಣಾತ್ಮಕ ಬದುಕು ಅಂದರೆ Quality of Living ಅಂತಾರಲ್ಲ ಅದರ ಬಗ್ಗೆ. ಈ Quality of Living ಅನ್ನುವುದಕ್ಕೂ, Standard of Living ಅನ್ನುವುದಕ್ಕೂ ವ್ಯತ್ಯಾಸವಿದೆ. ಅಮೆರಿಕ ನಿವಾಸಿಯಾಗಿರುವ ಕನ್ನಡದ ಕೆಲವೊಬ್ಬರು ಗೆಳೆಯರನ್ನು ನಾನು ಆಗಾಗ ಕೇಳುತ್ತಿರುತ್ತೇನೆ- ‘ನೀವು ಭಾರತಕ್ಕೆ ವಾಪಸ್ಸು ಬಂದು ಬದುಕುವ ಅವಕಾಶ ಸಿಕ್ಕರೆ ವಾಪಸ್ಸು ಬಂದುಬಿಡುತ್ತೀರಾ?’. ಅದಕ್ಕೆ ಕೆಲವರು, ‘ಹೌದೌದು, ಅವಕಾಶವಾದರೆ ಖಂಡಿತ ಬಂದುಬಿಡುತ್ತೇವೆ’ ಅನ್ನುತ್ತಾರೆ. ಹೀಗನ್ನುವವರು ಕೆಲವರು, ಕೆಲವರು ಮಾತ್ರ. ಆದರೆ ಬಹುಮಂದಿ ಹೇಳುವುದು ‘ನಮ್ಮನ್ನು ನಂಬಿ, ಇಂಡಿಯಾ ಅಂದರೆ ನಮಗೀಗಲೂ ಬಹಳ ಪ್ರೀತಿ. ಆ ದೇಶದಲ್ಲೂ ನಮಗೆ ಇದೇ ಗುಣಾತ್ಮಕ ಬದುಕು ಸಾಧ್ಯವಿದ್ದಿದ್ದರೆ?! ಅಂತ ಆಸೆಯಾಗುತ್ತದೆ. ಆದರೆ ಪರಿಸ್ಥಿತಿ ನೋಡಿದರೆ ಭಾರತದ ಬದುಕಿನಲ್ಲಿ ಅಂಥದೊಂದು Quality ಈಗಲೂ ಸಾಧ್ಯವಿಲ್ಲ. ನಾವು ಈಗ ಇಂಥದೊಂದು ಗುಣಮಟ್ಟದ ಜೀವನಕ್ರಮಕ್ಕೆ ಒಗ್ಗಿಕೊಂಡಿರುವುದರಿಂದ ಭಾರತಕ್ಕೆ ವಾಪಸ್ಸು ಬರುವುದು ಸಾಧ್ಯವಿಲ್ಲ’. ಹಾಗಂತ ಅವರು ನೇರಾನೇರವಾಗಿ ಸ್ಪಷ್ಟವಾಗಿ ಹೇಳಿಬಿಡುತ್ತಾರೆ ಮತ್ತು ಏನಾದರೂ ಹೇಳಬೇಕೆನಿಸಿದಾಗ ಯಾವುದಕ್ಕೂ, ಯಾರಿಗೂ ಹೆದರದೆ, ಯಾರು ಏನಂದುಕೊಳ್ಳುತ್ತಾರೋ ಅಂತ ಸಂಕೋಚ ಮಾಡದೆ, ನಾನು ಹೇಳುವುದು ಇದು, ನೀವು ಏನು ಬೇಕಾದರೂ ಅಂದುಕೊಳ್ಳಿ ಅನ್ನುವ ಧಾರ್ಷ್ಯrದಿಂದ ಹೇಳಿಬಿಡುವುದನ್ನೂ ಅಮೆರಿಕವೇ ಅವರಿಗೆ ಕಲಿಸಿದೆ. ಹಾಗಂದರೆ ಈ ಗುಣಾತ್ಮಕ ಬದುಕು ಅಂದರೇನು? ಅವರು Standard of Lifeನ್ನೇ ಗುಣಾತ್ಮಕ ಬದುಕು ಅಂದುಕೊಂಡಿರಲೂಬಹುದಾ? ಅನ್ನುವ ಆಲೋಚನೆ ಬರುತ್ತದೆ.

Standard of Life ಅನ್ನುವುದು ಯಾರಿಗಾದರೂ ತಕ್ಷಣ ಅರ್ಥವಾಗುತ್ತದೆ. ಒಂದು ಪುಟ್ಟ ಅರಮನೆ ಅನ್ನುವಂಥ ಮನೆ, ಅದರ ಸುತ್ತ ಒಂದೆರಡು ಎಕರೆ ಹಸಿರು ಮುಕ್ಕಳಿಸುವ ಸುಂದರ ಉದ್ಯಾನ, ಉದ್ಯಾನದ ನಡುವೆ ಪುಟ್ಟದೊಂದು ಕೊಳ, ಮನೆಯ ಹಿಂಭಾಗದಲ್ಲೋ, ಪಕ್ಕದಲ್ಲೋ ಒಂದು ಸುಂದರ ಈಜುವ ಕೊಳ. ಸುಂದರವಾದ ಸೋಫಾ, ಚಿತ್ತಚಿತ್ತಾರದ ಕುರ್ಚಿ-ಟೀಪಾಯ್ಗಳು, ಹೊರಗೆ ಓಡಾಡುವುದಕ್ಕೆ ನಮ್ಮ ದೇಶದ ಹಣದಲ್ಲಿ ಕೋಟ್ಯಂತರ ಬೆಲೆಬಾಳುವ ದೊಡ್ಡದೊಡ್ಡ ಕಾರುಗಳು, ಆಗಾಗ ರಜೆ, ಬಿಡುವು ಅಂತ ಸಿಕ್ಕಾಗ ಹೋಗಿಬರೋದಕ್ಕೆ ಕ್ರೂಜು, ಇದ್ದು ಬರೋದಕ್ಕೆ ಸಮುದ್ರದ ತಡಿಯಲ್ಲೋ, ಪರ್ವತಪಂಕ್ತಿಯಲ್ಲೋ ಒಂದು ಮನೆ, ಸ್ವಲ್ಪ ದೂರ ಪ್ರಯಾಣವಾದರೆ ಕಾರು ಬಿಟ್ಟು ಹಾರಿಹೋಗುವುದಕ್ಕೆ ತಮ್ಮದೇ ಒಂದು ಸಣ್ಣವಿಮಾನ- ಇದೆಲ್ಲ ಇದ್ದರೆ ಅದು ಅವರ Standard of Living. ಆದರೆ, ಕೆಲವರು ಇದನ್ನೇ ‘ಗುಣಾತ್ಮಕ ಬದುಕು’ ಅಂದುಕೊಂಡಿರುವ ಸಾಧ್ಯತೆಯೂ ಇದೆ. ಆದರೆ ಗುಣಾತ್ಮಕ ಬದುಕಿನ ಪರಿಕಲ್ಪನೆಯೇ ಬೇರೆ. ಹಾಗೆಂದರೆ Standard of Living ಅನ್ನುವುದೇ ಬೇರೆ Quality of Living ಅನ್ನುವುದೇ ಬೇರೆ. ನಿಜವಾಗಿ ಗುಣಾತ್ಮಕ ಬದುಕು ಆ ದೇಶದ ವ್ಯಕ್ತಿಯ ತಲಾ ಆದಾಯ ಹೆಚ್ಚಾದಷ್ಟೂ ಹೆಚ್ಚಾಗುವುದಿಲ್ಲ.

ಗುಣಾತ್ಮಕ ಬದುಕು ಅನ್ನುವುದು ನಿರ್ಧಾರವಾಗುವುದು ಒಬ್ಬ ವ್ಯಕ್ತಿ ಒಂದು ದೇಶದಲ್ಲಿ ಅದೆಷ್ಟು ದುಡಿದು ಗುಡ್ಡೆಹಾಕಿದ್ದಾನೆ, ಎಂಥ ಮನೆಯಲ್ಲಿ ವಾಸಿಸುತ್ತಾನೆ, ಎಂತೆಂಥ ಕಾರುಗಳಲ್ಲಿ ಓಡಾಡುತ್ತಾನೆ, ಎಷ್ಟೆಷ್ಟು ದುಡ್ಡು ಚೆಲ್ಲಾಡುತ್ತಾನೆ ಅನ್ನುವುದರಿಂದಲ್ಲ. ಬದಲಾಗಿ ಓರ್ವ ವ್ಯಕ್ತಿ (ಒಂದು ಕುಟುಂಬ ಅಂತ ಬೇಕಾದರೂ ಅನ್ನಿ) ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಎಷ್ಟು ಸಮಾಧಾನದಿಂದಿದ್ದಾನೆ, ಎಷ್ಟು ತೃಪ್ತಿಯಿಂದ ಇದ್ದಾನೆ. ಅಂದರೆ ಆ ವ್ಯಕ್ತಿಗೆ ಅಗತ್ಯವಾದ ದೇಹಾರೋಗ್ಯ, ಕೌಟುಂಬಿಕ ಸುವ್ಯವಸ್ಥೆ, ಆಧ್ಯಾತ್ಮಿಕತೆ, ಆರ್ಥಿಕತೆ, ಶಿಕ್ಷಣ, ಪ್ರಕೃತಿ ಮತ್ತು ಪರಿಸರ ಇವೆಲ್ಲವೂ ಸುಸ್ಥಿತಿಯಲ್ಲಿವೆಯಾ ಅನ್ನುವುದು ಮುಖ್ಯವಾಗುತ್ತದೆ. ಅಷ್ಟೂ ಮಾತ್ರವೇ ಅಲ್ಲದೆ ಅಲ್ಲೊಂದು ಪ್ರಬುದ್ಧ ರಾಜಕೀಯ, ಆಡಳಿತ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ, ಉದ್ಯೋಗನೀತಿ ಇವೆಲ್ಲವೂ ಇದ್ದಾಗಲಷ್ಟೇ ಓರ್ವ ವ್ಯಕ್ತಿಯ ‘ಗುಣಾತ್ಮಕ ಬದುಕು’ ಚೆನ್ನಾಗಿದೆ ಎಂದು ಹೇಳಲು ಸಾಧ್ಯವಾಗುತ್ತದೆ.

ನಮ್ಮಲ್ಲಿ, ಪರಿಮಾಣಾತ್ಮಕ ಬದುಕೇ (Quantitative Living) ಗುಣಾತ್ಮಕ ಬದುಕು (Qualitative Living) ಎಂಬ ತಪ್ಪು ತಿಳಿವಳಿಕೆಯಿದೆ. ದೊಡ್ಡ ಬಂಗಲೆ, ದೊಡ್ಡ ಕಾರು, ದೊಡ್ಡ ಹಣ ಇದೆಲ್ಲದರಿಂದ ವ್ಯಕ್ತಿಗೆ ದೊಡ್ಡದೊಂದು ಸುಖ ಸಿಗಬಹುದೇ ವಿನಾ ಸಂತೋಷವಲ್ಲ. ವಿಚಿತ್ರವೆಂದರೆ ನಾವೆಲ್ಲರೂ ಹಿಂದೆ ಬಿದ್ದಿರುವುದು ಈ ಸುಖದ ಬದುಕಿಗೇ ವಿನಾ ಸಂತೋಷದ ಬದುಕಿಗಲ್ಲ. ಆದ್ದರಿಂದ ಈಗ ಪ್ರಪಂಚದಲ್ಲಿ ಈ ಗುಣಾತ್ಮಕ ಬದುಕಿನ ವಿಶ್ಲೇಷಣೆ, ವಿವೇಚನೆ ಆರಂಭವಾಗಿದೆ. ಒಂದು ದೇಶ ಅಥವಾ ಒಂದು ಸಮಾಜ ಅದೆಷ್ಟು ಸಂತೋಷದಿಂದ ಬದುಕುತ್ತಿದೆ ಅನ್ನುವುದರ ಅಧ್ಯಯನ ಆರಂಭವಾಗಿದೆ. ಅಂದರೆ ಒಂದು ದೇಶದ ತಲಾ ಆದಾಯ, ವೈಜ್ಞಾನಿಕ ಆವಿಷ್ಕಾರಗಳು, ಬಗೆಬಗೆ ಐಷಾರಾಮಿ ಉಪಕರಣಗಳಾಚೆಗೂ ಸಂತೋಷ ಅನ್ನುವುದು ಬೇರೆ ಇದೆ ಎಂಬುದೊಂದು ಪರಿಕಲ್ಪನೆ ಇದೀಗ ಜಗತ್ತಿನಲ್ಲಿ ಅಧ್ಯಯನ ವಿಷಯವಾಗಿ ಬರುತ್ತಿದೆ. ನಮ್ಮ ಕವಿಗಳು, ಕಲಾವಿದರು ಬಹು ಹಿಂದಿನ ಕಾಲದಿಂದಲೂ ಇಂಥದನ್ನು ಹೇಳಿಕೊಂಡೇ ಬರುತ್ತಿದ್ದಾರಾದರೂ, ನಮಗದು ಒಪ್ಪಿಗೆಯಾಗಿರಲಿಲ್ಲ. ಯಾಕೆಂದರೆ ಇವರು ಕವಿಗಳಲ್ವಾ, ಕಲಾವಿದರಲ್ವಾ? ಕನಸು ತಿಂದುಕೊಂಡೇ ತಾನೇ ಇವರು ಬದುಕುವುದು? ಅಂತ ನಾವು ಆ ಕಡೆಗೆ ದೃಷ್ಟಿ ಹಾಯಿಸಿರಲಿಲ್ಲ. ಆದರೆ ಈಚೀಚೆಗೆ ಜಗತ್ತಿನಲ್ಲಿ ವಿಜ್ಞಾನಿಗಳು ಕೂಡ ಈ ಗುಣಾತ್ಮಕ ಬದುಕಿನ ಬಗ್ಗೆ ಆಲೋಚಿಸಲು, ಅಧ್ಯಯನ ಮಾಡಲು ಆರಂಭಿಸಿದ್ದಾರೆ.

2010ನೇ ಇಸವಿಯಲ್ಲಿ ಅಮೆರಿಕದ ಪೂರ್ವತೀರದಲ್ಲಿರುವ ನ್ಯೂಜೆರ್ಸಿಯ ಪ್ರಿನ್ಸ್​ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಬ್ಬರು, ಅಮೆರಿಕದ ಬೇರೆಬೇರೆ ಊರುಗಳಲ್ಲಿ, ಬೇರೆಬೇರೆ ವೃತ್ತಿ, ಆದಾಯಗಳಿದ್ದ ಸುಮಾರು ಒಂದು ಸಾವಿರ ಜನರನ್ನು ಆಯ್ಕೆಮಾಡಿಕೊಂಡು, ಅವರ ಆದಾಯ ಹೆಚ್ಚಾದಂತೆ ಅವರ ಬದುಕಿನ ವಿಧಾನದಲ್ಲಿ ಆದ ಬದಲಾವಣೆಗಳ ಬಗ್ಗೆ ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನವನ್ನು ಆರಂಭಿಸಿದರು. ಅವರ ಆದಾಯವನ್ನನುಸರಿಸಿ ದಿನನಿತ್ಯ ಅವರ ಭಾವನೆಗಳಲ್ಲಾಗುತ್ತಿದ್ದ ವ್ಯತ್ಯಯಗಳನ್ನು, ಅಂದರೆ ಉಲ್ಲಾಸ, ಪ್ರೀತಿ, ಒತ್ತಡ, ಸಂಕಟ, ಕೋಪ, ವಿಷಾದ, ಉತ್ಸಾಹ ಇತ್ಯಾದಿ ಭಾವನೆಗಳಲ್ಲಾಗುತ್ತಿದ್ದ ಏರಿಳಿತಗಳನ್ನು ದಾಖಲಿಸುತ್ತ ಹೋದರು. ಆದಾಯ ಒಂದು ಮಟ್ಟವನ್ನು ಮುಟ್ಟಿದ ಮೇಲೆ- ವರ್ಷಕ್ಕೆ 75,000 ಡಾಲರ್- ಅನಂತರ ಆದಾಯ ಹೆಚ್ಚಾಗುತ್ತ ಹೋದಂತೆ ಅವರ ಬದುಕಿನ ಸಂತೋಷವೇನೂ ಹೆಚ್ಚಾಗಲಿಲ್ಲ ಅಥವಾ ಒತ್ತಡ, ಸಂಕಟ, ವಿಷಾದ, ಕೋಪದಂಥ ಭಾವನೆಗಳು ಕಡಿಮೆಯಾಗಲಿಲ್ಲ ಅನ್ನುವುದನ್ನು ಅವರ ಅಧ್ಯಯನ ದೃಢಪಡಿಸಿತು. ಹಾಗೆಯೇ ಆ 75,000 ಡಾಲರ್ ವಾರ್ಷಿಕ ಆದಾಯಕ್ಕಿಂತ ಕಡಿಮೆಯಿರುವವರಲ್ಲಿ ಸಂತೋಷ, ಪ್ರೀತಿ, ಉತ್ಸಾಹ- ಇಂಥ ಭಾವನೆಗಳು ಕಡಿಮೆಯಾಗಿ, ಒತ್ತಡ, ಕೋಪ, ಸಂಕಟ, ವಿಷಾದ ಭಾವನೆಗಳು ಹೆಚ್ಚಾದುದನ್ನೂ ಅವರ ಅಧ್ಯಯನ ದೃಢಪಡಿಸಿತು. ಅಂದರೆ, ಒಂದು ಸಭ್ಯ ಗುಣಮಟ್ಟದ ಬದುಕನ್ನು ನಡೆಸುವುದಕ್ಕೆ ಬೇಕಾದ ಆದಾಯ ಯಾವುದೇ ವ್ಯಕ್ತಿಯ, ಕುಟುಂಬದ ಗುಣಾತ್ಮಕ ಬದುಕಿಗೆ ಅಗತ್ಯ. ಅದಕ್ಕಿಂತ ಕಡಿಮೆ ಆದಾಯದಲ್ಲಿ ಒಂದು ಗುಣಾತ್ಮಕ ಬದುಕು ಸಾಧ್ಯವಾಗುವುದಿಲ್ಲ. ಹಾಗೆಯೇ ಆದಾಯ ಹೆಚ್ಚಾಗುವಷ್ಟರಿಂದಲೇ ಬದುಕಿನ ಗುಣಾತ್ಮಕತೆ ಹೆಚ್ಚಾಗುವುದಿಲ್ಲ ಎಂಬುದನ್ನೂ ಈ ಅಧ್ಯಯನ ಹೇಳಿತು. ಕಡಿಮೆ ಆದಾಯವು ಹೇಗೆ ಅನಾರೋಗ್ಯಕ್ಕೆ, ಕೌಟುಂಬಿಕ ಅಸಾಮರಸ್ಯಕ್ಕೆ, ವಿವಾಹ-ವಿಚ್ಛೇದನಗಳಿಗೆ, ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದೋ ಹಾಗೆಯೇ ಒಂದು ಸಭ್ಯ ಆದಾಯಕ್ಕಿಂತ ಹೆಚ್ಚಿನ ಆದಾಯವೂ ಇಂಥದೇ ಪರಿಣಾಮಗಳಿಗೆ ಕಾರಣವಾಗಬಹುದೆಂಬುದನ್ನು ಪ್ರಿನ್ಸ್​ಟನ್ ವಿಶ್ವವಿದ್ಯಾಲಯದ ಆ ಇಬ್ಬರು ಪ್ರಾಧ್ಯಾಪಕರ ಅಧ್ಯಯನ ತಿಳಿಸಿದೆ.

ಅಮೆರಿಕಕ್ಕೆ ಬಂದ ಮರುದಿನವೇ ಈ ಆಲೋಚನೆಗಳೆಲ್ಲ ಮನಸ್ಸಿನಲ್ಲಿ ಯಾಕೆ ಬಂದವೆಂದರೆ, ನಾನು ಇಷ್ಟೊಂದು ಬಾರಿ ಇಷ್ಟೊಂದು ದೇಶಗಳಲ್ಲಿ ಓಡಾಡಿದ್ದರೂ, ಪ್ರತಿಬಾರಿ ಒಂದು ಬೇರೆ ದೇಶಕ್ಕೆ ಬಂದಾಗ ನನ್ನ ಮನಸ್ಸು ಆ ದೇಶದ ಸ್ಥಿತಿಗತಿಗಳನ್ನೂ, ನಮ್ಮ ದೇಶದ ಸ್ಥಿತಿಗತಿಗಳನ್ನೂ ಹೋಲಿಸಲು ತೊಡಗುತ್ತದೆ. ಇದು ಯಾರಿಗಾದರೂ ಆಗುವಂಥದೇ. ಹೀಗೆ ಹೋಲಿಸುವಾಗ ತಟಕ್ಕನೆ ಕೆಲವು ತೀರ್ವನಗಳಿಗೆ ಮನಸ್ಸು ಜಾರಿಬಿಡುವುದೂ ಇದೆ. ಆದರೆ ಹಾಗೆ ತೀರ್ವನಗಳಿಗೆ ಜಾರುವುದಕ್ಕೆ ಬದಲಾಗಿ ಆ ಕುರಿತು ಒಂದಿಷ್ಟು ಆಲೋಚಿಸುವುದು, ಈವರೆಗೆ ನಡೆದಿರುವ ಆಲೋಚನೆ ಅಧ್ಯಯನಗಳನ್ನು ಗಮನಿಸುವುದು ಒಳ್ಳೆಯದೆಂದು ಯಾಕೋ ಅನ್ನಿಸಿತು. ದಿನಪತ್ರಿಕೆಯ ಅಂಕಣ ಸ್ವಲ್ಪ ಭಾರವೆನಿಸಿದ್ದರೆ ಕ್ಷಮಿಸು.

ಕಳೆದೊಂದು ಬಾರಿ ಅಮೆರಿಕಕ್ಕೆ ಬಂದಾಗ, ನ್ಯಾಶ್​ವಿಲ್ ರಾಜ್ಯದ ಚಾಟನೂಗ ಎಂಬ ಊರಿನಲ್ಲಿರುವ ಡಾ. ಚಂದ್ರಶೇಖರ್ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ಡಾ. ಚಂದ್ರಶೇಖರ್ ಅಮೆರಿಕದಲ್ಲಿ ದೊಡ್ಡ ಮೂಳೆ ಡಾಕ್ಟರು. ಅವರ ಮನೆಯೂ ತುಂಬಾ ಸುಂದರವಾಗಿದೆ. ಮನೆ ತುಂಬಾ ಬೇಕಾದಷ್ಟು ಬೆಲೆಬಾಳುವ ವಸ್ತುಗಳಿವೆ (ಅವರ ಪತ್ನಿ ಓರ್ವ ಐರಿಷ್. ಅವರು ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ). ಡಾ. ಚಂದ್ರಶೇಖರ್ ಅವರು ಎಷ್ಟೋ ದಿನ ಆಸ್ಪತ್ರೆಗೆ ಹೋಗುವಾಗ ತಮ್ಮ ಮನೆಯ ಬೀಗ ಹಾಕುವುದಿಲ್ಲ. ‘ನಾನು ಎಷ್ಟೋ ಬಾರಿ ಮನೆಗೆ ಬೀಗ ಹಾಕುವುದಿಲ್ಲ. ಬಾಗಿಲನ್ನು ಹಾಗೇ ಮುಂದಕ್ಕೆಳೆದುಕೊಂಡು ಆಸ್ಪತ್ರೆಗೆ ಹೋಗಿಬರುತ್ತೇನೆ. ಅಂಥದೇನೂ ಆಗುವುದಿಲ್ಲ’ ಅಂದರು ಚಂದ್ರಶೇಖರ್. ನನಗೆ ಬದುಕಿನಲ್ಲಿ ಅದಕ್ಕಿಂತ ದೊಡ್ಡ ಸುಖ ಬೇರೊಂದಿಲ್ಲ ಅನ್ನಿಸಿತು. ನಿನ್ನೆ ಡಾ. ಬಾಲು ಚಂದ್ರ ಅವರಿಗೂ ಅದನ್ನು ಹೇಳಿದೆ. ಅವರೂ, ‘ನಾವೂ ಎಷ್ಟೋ ಸಲ ನಮ್ಮ ಕಾರುಗಳನ್ನು ಲಾಕ್ ಮಾಡುವುದಿಲ್ಲ. ಮನೆಬಾಗಿಲನ್ನು ತೆಗೆದೇ ಇಟ್ಟಿರುತ್ತೇನೆ. ಇಲ್ಲಿಯೂ ಅಂಥದೇನೂ ಆಗುವುದಿಲ್ಲ’ ಅಂದರು. ಬಹುಶಃ ಈ ಸುರಕ್ಷಿತ ಭಾವನೆಯೇ ಅವರನ್ನು ಅಮೆರಿಕದಲ್ಲಿ ಹಿಡಿದಿಟ್ಟುಕೊಂಡಿರಬೇಕು. ಗೆಳೆಯಾ, ಕ್ಷೇಮ ಸಮಾಚಾರದ ಪತ್ರ ಬರೆಯಲು ಹೋಗಿ ಏನೇನೋ ಕೊರೆದುಬಿಟ್ಟೆ ಕ್ಷಮಿಸು.

ಇಂತೀ ನಮಸ್ಕಾರಗಳು.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top