Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಅವ್ಯವಸ್ಥೆಯ ಕೂಪವಾಗಿರುವ ಪಾಕ್​ನಿಂದ ಕಲಿಯಬೇಕಾದ್ದೇನು?

Wednesday, 02.08.2017, 3:05 AM       No Comments

ಪಾಕಿಸ್ತಾನದ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಚಕಮಕಿ ಅಲ್ಲಿನ ಅಸ್ತವ್ಯಸ್ತತೆ, ರಾಜಕೀಯ ಅಸ್ಥಿರತೆಯನ್ನು ಮತ್ತಷ್ಟು ವ್ಯಾಪಕಗೊಳಿಸುವುದರಲ್ಲಿ ಎರಡು ಮಾತಿಲ್ಲ. ಇಂಥ ಸಂದರ್ಭಗಳಲ್ಲಿ ಪಾಕ್ ಸೇನೆ ದೇಶವನ್ನೇ ಹತೋಟಿಗೆ ತೆಗೆದುಕೊಳ್ಳುವುದರಿಂದ, ಈ ರೀತಿಯ ಬೆಳವಣಿಗೆಗಳನ್ನು ಭಾರತ ಹದ್ದಿನಗಣ್ಣಿಂದ ಅವಲೋಕಿಸಬೇಕಾಗುತ್ತದೆ. ಇಂಥ ಘಟನೆಗಳಿಂದಾಗಿ ಏನೆಲ್ಲ ಬಿಕ್ಕಟ್ಟಿನ ಪರಿಸ್ಥಿತಿಗಳು ಉದ್ಭವಿಸಬಹುದು ಎಂಬುದನ್ನು ಮುನ್ನಂದಾಜಿಸಬೇಕಾಗುತ್ತದೆ.

ಭಾರತದೊಂದಿಗೆ ಹೋಲಿಸುವ ಮೂಲಕ, ಬ್ರಹ್ಮಾಂಡ ಭ್ರಷ್ಟಾಚಾರವಿರುವ ಒಂದು ಅಪ್ರಬುದ್ಧ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ನಾವು ಪಾಕಿಸ್ತಾನವನ್ನು ನೋಡುತ್ತೇವೆ. ಈಗ ಮುಂಚೂಣಿಗೆ ಬಂದಿರುವ ನವಾಜ್ ಷರೀಫ್ ಭ್ರಷ್ಟಾಚಾರ ಪ್ರಕರಣ ಈ ಪರಿಪಾಠವನ್ನು ಮತ್ತೊಮ್ಮೆ ನೆನಪಿಸುವಂತಿದೆ ಎನ್ನಲಡ್ಡಿಯಿಲ್ಲ.

ಪಾಕಿಸ್ತಾನದಲ್ಲಿ, ಒಬ್ಬನೇ ಒಬ್ಬ ಪ್ರಧಾನ ಮಂತ್ರಿಯೂ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ; ಈಗ ಅಲ್ಲಿನ ಸುಪ್ರೀಂಕೋರ್ಟ್​ನಿಂದ ಹೊರಬಿದ್ದಿರುವ ತೀರ್ಪನ್ನು ಅವಲೋಕಿಸಿದರೆ, ನವಾಜ್ ಷರೀಫ್ ಕೂಡ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ‘ಅಪ್ರಾಮಾಣಿಕ’ ಎಂಬುದಾಗಿ ಕಂಡುಬಂದ ಸಂಸತ್ ಸದಸ್ಯರನ್ನು ಅನರ್ಹಗೊಳಿಸಲು ನ್ಯಾಯಾಲಯಗಳಿಗೆ ಅನುವುಮಾಡಿಕೊಟ್ಟಿರುವ ಸಂವಿಧಾನಾತ್ಮಕ ವಿಧಿಯೊಂದರ ಬಲದ ಮೇಲೆ, ಪಾಕಿಸ್ತಾನ ಸವೋಚ್ಚ ನ್ಯಾಯಾಲಯದ ಐದು ಮಂದಿ ನ್ಯಾಯಮೂರ್ತಿಗಳ ಪೀಠ, ‘ತಮ್ಮ ಕುಟುಂಬಕ್ಕೆ ಸೇರಿದ ಸಾಗರೋತ್ತರ/ವಿದೇಶಿ ಸ್ವತ್ತುಗಳ ಕುರಿತ ಮಾಹಿತಿ ಬಹಿರಂಗಪಡಿಸಲು ವಿಫಲರಾಗಿದ್ದಕ್ಕೆ ಷರೀಫ್​ರನ್ನು ಅನರ್ಹಗೊಳಿಸಿದೆ’ ಎಂಬುದನ್ನಿಲ್ಲಿ ಗಮನಿಸಬೇಕು. ಕಳೆದ ಶುಕ್ರವಾರ ಹೊರಬಿದ್ದ ಈ ತೀರ್ಪು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಲಿದ್ದು, ನಾಟಕೀಯವಾದ ರಾಜಕೀಯ ವಿದ್ಯಮಾನಗಳು ಮತ್ತು ನ್ಯಾಯಾಲಯದ ಕಾರ್ಯಕಲಾಪಗಳಿಗೆ ಇದು ಸಾಕ್ಷಿಯಾಗಲಿದೆ. ಜತೆಗೆ, ಷರೀಫ್ ಕುಟುಂಬದ ಹಣಕಾಸು ವ್ಯವಹಾರಗಳೂ ಕೂಲಂಕಷ ಪರಿಶೀಲನೆಗೆ ಒಳಗಾಗಲಿವೆ.

ಸುಮಾರು 10 ತಿಂಗಳು ಕಳೆದಿದ್ದರೆ ಷರೀಫ್ ಅಧಿಕಾರಾವಧಿ ಸಂಪೂರ್ಣಗೊಳ್ಳುತ್ತಿತ್ತು; ಆದರೆ ಅಷ್ಟರಲ್ಲೇ ಅವರ ಪದಚ್ಯುತಿಯಾಗಿಬಿಟ್ಟಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಅವಧಿಗೆ ಮೊದಲೇ ಅಂತ್ಯಗೊಂಡ ಸರ್ಕಾರಗಳ ಒಂದು ಕರಾಳ ಹಾಗೂ ಸುದೀರ್ಘ ಪಟ್ಟಿಗೆ ಷರೀಫರ ಈಗಿನ ಪದಚ್ಯುತಿಯೂ ಸೇರ್ಪಡೆಗೊಳ್ಳುವಂತಾಗಿದೆ. ಹೀಗೆ ಅಕಾಲಿಕ ಅಂತ್ಯ ಕಂಡ ಸರ್ಕಾರಗಳ ಯಾದಿಯಲ್ಲಿ ಪ್ರಧಾನಿಯಾಗಿ ಸ್ವತಃ ಷರೀಫರ ಹಿಂದಿನ ಮತ್ತೆರಡು ಅಧಿಕಾರಾವಧಿಗಳೂ ಇವೆ ಎಂಬುದನ್ನಿಲ್ಲಿ ಗಮನಿಸಬೇಕು; ಪಾಕಿಸ್ತಾನ್ ಮುಸ್ಲಿಂ ಲೀಗ್​ನ ಮುಖ್ಯಸ್ಥರಾಗಿದ್ದ ಷರೀಫ್ 1990ರಲ್ಲಿ ಮೊದಲ ಬಾರಿಗೆ ಪ್ರಧಾನಿ ಗದ್ದುಗೆಗೇರಿದರು. ಅಧಿಕಾರಕ್ಕೇರುತ್ತಿದ್ದಂತೆ ಅವರ ಕುಟುಂಬ ವ್ಯವಹಾರದ ವರ್ಧನೆಯೂ ಆಗಿದ್ದರಿಂದ, ಅಧಿಕಾರದ ದುರುಪಯೋಗ ಮತ್ತು ಭ್ರಷ್ಟಾಚಾರದ ಶಂಕೆಗಳು ಬಲವಾಗಿ, ಬಯಲಾಗುವಂತಾಯಿತು. 1993ರಲ್ಲಿ ಷರೀಫರನ್ನು ರಾಷ್ಟ್ರಾಧ್ಯಕ್ಷ ಗುಲಾಂ ಇಶಾಕ್ ಖಾನ್ ವಜಾಗೊಳಿಸಿದರು. ಇದು ಅಸಾಂವಿಧಾನಿಕ ಕ್ರಮವೆಂದು ಸುಪ್ರೀಂಕೋರ್ಟ್ ಅಂತಿಮವಾಗಿ ಪರಿಗಣಿಸಿತಾದರೂ, ಪಾಕಿಸ್ತಾನದ ಪ್ರಬಲ ಸೇನಾವ್ಯವಸ್ಥೆಯಿಂದ ಬಂದ ಒತ್ತಡದ ಕಾರಣದಿಂದಾಗಿ ಷರೀಫ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.

1997ರಲ್ಲಿ ಷರೀಫ್ ಮತ್ತೊಮ್ಮೆ ಪ್ರಧಾನಿಯಾಗಿ ಚುನಾಯಿತರಾದರೂ, ಎರಡು ವರ್ಷಗಳ ನಂತರ ಅಧಿಕಾರಕ್ಕೆ ಸಂಚಕಾರ ತಂದುಕೊಳ್ಳುವಂತಾಯಿತು. ಅದಾಗಿದ್ದು ಹೀಗೆ: ಸೇನಾ ಮುಖ್ಯಸ್ಥ ಜನರಲ್ ಪರ್ವೆಜ್ ಮುಷರಫ್​ರೊಂದಿಗಿನ ಹಿತಾಸಕ್ತಿಯ ಸಂಘರ್ಷದ ಫಲವಾಗಿ ಅವರ ವಜಾಕ್ಕೆ ಮುಂದಾದ ಷರೀಫ್, ಅಧಿಕೃತ ವಿದೇಶ ಭೇಟಿಯ ನಂತರ ಮರಳಿದ ಮುಷರಫ್​ರ ವಿಮಾನ ಕರಾಚಿಯಲ್ಲಿ ಲ್ಯಾಂಡ್ ಆಗುವುದಕ್ಕೆ ಅನುಮತಿ ನಿರಾಕರಿಸಿದರು. ಈ ನಡೆಯಿಂದಾಗಿ ಕೆರಳಿದ ಸೇನೆ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಯಿತು. ಮುಷರಫ್​ರಿಗೆ ನಿಷ್ಠರಾಗಿದ್ದ ಪಡೆಗಳು ಕರಾಚಿ ವಿಮಾನ ನಿಲ್ದಾಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಪ್ರಧಾನಿಯನ್ನೇ ಅಧಿಕಾರದಿಂದ ಕೆಡವಿದವು. ವಿಮಾನಾಪಹರಣ ಮತ್ತು ಭಯೋತ್ಪಾದನೆಯ ಆರೋಪದ ಮೇರೆಗೆ ನ್ಯಾಯಾಲಯದಲ್ಲಿ ಷರೀಫರ ವಿಚಾರಣೆ ನಡೆದು ತಪ್ಪಿತಸ್ಥ ಎಂದೂ ತೀರ್ವನವಾಯಿತು ಹಾಗೂ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಸೌದಿ ಅರೇಬಿಯಾದ ರಾಜಕುಟುಂಬದ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಹೊಂದಿದ ಷರೀಫ್ ಗಡೀಪಾರು ಶಿಕ್ಷೆಯಲ್ಲಿ 7 ವರ್ಷಗಳನ್ನು ಕಳೆದರು. ನಂತರ, 2007ರಲ್ಲಿ ಪಾಕಿಸ್ತಾನಕ್ಕೆ ಮರಳಿದರು. ಅವರ ಮೇಲಿದ್ದ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿಸಿ, ಅಧಿಕಾರ ರಾಜಕಾರಣಕ್ಕೆ ಮರಳುವುದಕ್ಕೆ ಅರ್ಹರು ಎಂದು ಪರಿಗಣಿಸಲಾಯಿತು. 2013ರಲ್ಲಿ ಮತ್ತೊಮ್ಮೆ ಷರೀಫ್ ಪ್ರಧಾನಿ ಗಾದಿಗೆ ಚುನಾಯಿತರಾದರೂ, 2014ರಲ್ಲಿ ಅಗಾಧ ಪ್ರಮಾಣದ ಪ್ರತಿರೋಧ-ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಸಾಗರೋತ್ತರ ಕಂಪನಿಗಳ ಪ್ರಭಾವದಡಿಯಲ್ಲಿ ಷರೀಫ್ ಮಕ್ಕಳು ಲಂಡನ್​ನಲ್ಲಿ ದುಬಾರಿ ಮನೆಗಳನ್ನು ಹೊಂದಿದ್ದಾರೆ ಎಂಬ ಸಂಗತಿಯನ್ನು 2016ರ ‘ಪನಾಮಾ ಪೇಪರ್ಸ್’ ತನಿಖೆಯು ಹೊರಹಾಕಿದ ತರುವಾಯದಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತಾಗಿ ನ್ಯಾಯಾಲಯದಲ್ಲಿ ಷರೀಫರ ವಿಚಾರಣೆ ನಡೆಸಲಾಯಿತು; ಷರೀಫರನ್ನು ಸಂಸದನ ಸ್ಥಾನದಿಂದ ಮತ್ತು ತರುವಾಯದಲ್ಲಿ ದೇಶದ ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸುವ ತೀರ್ಮಾನ ಕೈಗೊಳ್ಳಲು ಈ ಆರೋಪಗಳೇ ಸುಪ್ರೀಂಕೋರ್ಟ್​ಗೆ ಸಾಕಷ್ಟು ಆಧಾರವನ್ನು ಒದಗಿಸಿದವು ಎಂಬುದು ಸ್ವಾರಸ್ಯಕರ ಸಂಗತಿ. ಪನಾಮಾ ಪೇಪರ್ಸ್ ಸೋರಿಕೆಯ ಫಲವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದ ಐಸ್​ಲ್ಯಾಂಡ್​ನ ಹಿಂದಿನ ಪ್ರಧಾನಿ ಸಿಗ್ಮಂಡರ್ ಡೇವಿಡ್ ಗುನ್ಲೌಗ್ಸನ್​ರ ತರುವಾಯ ಹೀಗೆ ಪನಾಮಾ ಪೇಪರ್ಸ್​ಗೆ ಬಲಿಯಾದ ಎರಡನೇ ಪ್ರಧಾನಿಯಾಗಿದ್ದಾರೆ ನವಾಜ್ ಷರೀಫ್. ಸಾಗರೋತ್ತರ ಕಂಪನಿಯೊಂದರಲ್ಲಿ ಸಿಗ್ಮಂಡರ್ ಡೇವಿಡ್ ಹಾಗೂ ಅವರ ಪತ್ನಿ ಲಕ್ಷಾಂತರ ಡಾಲರ್​ನಷ್ಟು ರಹಸ್ಯಹೂಡಿಕೆ ಮಾಡಿದ್ದಾರೆ ಎಂಬ ಸಂಗತಿಯನ್ನು ಸದರಿ ದಾಖಲೆಪತ್ರಗಳು ಹೊರಗೆಡಹಿದವು. ನಂತರ ಸಿಗ್ಮಂಡರ್ ಡೇವಿಡ್ ರಾಜೀನಾಮೆಯ ನಿರ್ಬಂಧಕ್ಕೆ ಒಳಗಾಗಬೇಕಾಗಿ ಬಂತು.

ಮಧ್ಯ ಅಮೆರಿಕದ ಪನಾಮಾ ಗಣರಾಜ್ಯದ ‘ಮೊಸಾಕ್ ಫಾನ್ಸಿಕಾ’ ಎಂಬ ಕಾನೂನು ಸಂಸ್ಥೆಯಿಂದ ಸೋರಿಕೆಯಾದ ಗುಪ್ತದಾಖಲೆಗಳ ಭಂಡಾರ ಎಂದೇ ಹೇಳಬಹುದಾದ ‘ಪನಾಮಾ ಪೇಪರ್ಸ್’, ಇಂಥ 11.5 ದಶಲಕ್ಷ ದಾಖಲೆಪತ್ರಗಳ ಸಂಗ್ರಹವಾಗಿದ್ದು, 2,14,488ಕ್ಕೂ ಹೆಚ್ಚಿನ ಸಾಗರೋತ್ತರ ಕಂಪನಿಗಳಿಗೆ ಸಂಬಂಧಿಸಿದ ಹಣಕಾಸು ಸಂಬಂಧಿತ ಹಾಗೂ ವಕೀಲ-ಕಕ್ಷಿಗಾರರ ವಿಸõತ ಮಾಹಿತಿಯನ್ನು ಒಳಗೊಂಡಿದೆ. ಸಾಗರೋತ್ತರ ಕಂಪನಿಗಳ ಸಂಸ್ಥಾಪನೆ ಹಾಗೂ ನಿರ್ವಹಣೆಯು, ಅನ್ವಯವಾಗುವ ಕಾನೂನಾತ್ಮಕ ಕಟ್ಟುಪಾಡುಗಳಿಗೆ ಒಳಪಟ್ಟಿರುವುದು ಹೌದು; ಆದರೆ, ‘ಮೊಸಾಕ್ ಫಾನ್ಸಿಕಾ’ ಕಾನೂನು ಸಂಸ್ಥೆಯ ನೆರವಿನೊಂದಿಗೆ ಸ್ಥಾಪಿಸಲ್ಪಟ್ಟ ಕೆಲವೊಂದು ಕಂಪನಿಗಳನ್ನು, ಮೋಸಗಾರಿಕೆ, ತೆರಿಗೆ ವಂಚನೆ ಮತ್ತು ಅಂತಾರಾಷ್ಟ್ರೀಯ ದಂಡನೆಯಿಂದ ತಪ್ಪಿಸಿಕೊಳ್ಳುವಿಕೆ ಸೇರಿ ಅಕ್ರಮ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಸಂಗತಿಯನ್ನು ‘ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ’ (ಐಠಿಛ್ಟಿ್ಞಠಿಜಿಟ್ಞಚ್ಝ ಇಟ್ಞಠಟ ್ಟಜ್ಠಿಞ ಟ್ಛ ಐಡಛಿಠಠಿಜಿಜಚಠಿಜಿಡಛಿ ಒಟ್ಠrಚ್ಝಜಿಠಠಿಠ) ಕಂಡುಕೊಂಡಿತು. ಸ್ವಾರಸ್ಯವೆಂದರೆ, ಪನಾಮಾ ಪೇಪರ್ಸ್​ನ ಪಟ್ಟಿಯಲ್ಲಿರುವ ಭಾರತೀಯರು ಮತ್ತು ಬಹಿರಂಗಪಡಿಸದ ವಿದೇಶಿ ಸ್ವತ್ತುಗಳನ್ನು ಹೊಂದಿದ್ದಾರೆನ್ನಲಾಗುವ ಭಾರತೀಯರ ಪ್ರಕರಣಗಳ ತನಿಖೆಯನ್ನು ಕ್ಷಿಪ್ರವಾಗಿ, ಸುಸಂಘಟಿತವಾಗಿ ನಡೆಸಲು ‘ಮಲ್ಟಿ ಏಜೆನ್ಸಿ ಗ್ರೂಪ್‘ ಒಂದನ್ನು ಕೇಂದ್ರ ಸರ್ಕಾರ ರಚಿಸಿದೆ.

ಷರೀಫರ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವನ್ನು ಹೊರತುಪಡಿಸಿ ಹೇಳುವುದಾದರೆ, ಸುಪ್ರೀಂಕೋರ್ಟ್ ಮತ್ತು ಐದು ಹೈಕೋರ್ಟ್ ಗಳನ್ನು ಒಳಗೊಂಡಿರುವ ಪಾಕಿಸ್ತಾನದ ಸವೋಚ್ಚ ನ್ಯಾಯಾಂಗ ವ್ಯವಸ್ಥೆಯು ಇತ್ತೀಚಿನ ವರ್ಷಗಳಲ್ಲಿ ತನಗಿರುವ ಸ್ವಾತಂತ್ರ್ಯ ಮತ್ತು ಅಧಿಕಾರವನ್ನು ಅತೀವವಾಗಿ ಸಮರ್ಥಿಸಿಕೊಂಡಿದೆ ಎಂಬುದು ಗಮನಾರ್ಹ ಸಂಗತಿ. ಆದರೆ, ನಿರಂಕುಶಾಧಿಕಾರದ ಹಸ್ತಕ್ಷೇಪಗಳಿಗೆ ವಿರುದ್ಧವಾಗಿ, ಅದರಲ್ಲೂ ನಿರ್ದಿಷ್ಟವಾಗಿ ಚುನಾಯಿತ ಪ್ರತಿನಿಧಿಗಳೆದುರು ಪ್ರಜಾಪ್ರಭುತ್ವವನ್ನು ಸಮರ್ಥಿಸಿಕೊಳ್ಳುವಲ್ಲಿ ಈ ನ್ಯಾಯಾಂಗ ವ್ಯವಸ್ಥೆ ಹೊಂದಿರುವ ದಾಖಲೆ ತೀರಾ ಕಳಪೆಯಾಗಿದೆ ಎನ್ನಲಡ್ಡಿಯಿಲ್ಲ; 1958, 1977 ಮತ್ತು 1999ರ ವರ್ಷಗಳಲ್ಲಿ ನಡೆದ ಪಾಕಿಸ್ತಾನದ ಮೂರು ಯಶಸ್ವೀ ದಿಢೀರ್ ಸೇನಾ ಕಾರ್ಯಾಚರಣೆಗಳ ಪೈಕಿ ಒಂದೊಂದನ್ನೂ ಅಲ್ಲಿನ ಸುಪ್ರೀಂಕೋರ್ಟ್ ‘ಅನಿವಾರ್ಯತೆಯ ಸಿದ್ಧಾಂತ’ದ ಅಡಿಯಲ್ಲಿ ವಿಧಿಬದ್ಧವಾಗಿಸಿಬಿಟ್ಟಿರುವುದು ಇದಕ್ಕೆ ಸಾಕ್ಷಿ.

ಅಂತಾರಾಷ್ಟ್ರೀಯ ಸಮುದಾಯದ ಪೈಕಿ ಕೆಲವರ ಭಾವನೆಗಳಿಗೆ ಈ ಶಂಕೆಯು ಒತ್ತುನೀಡುವಂತಿದೆ; ಇವರ ಪ್ರಕಾರ ಸುಪ್ರೀಂಕೋರ್ಟ್ ಒಂದು ಅಪಾಯಕಾರಿ ಪೂರ್ವನಿದರ್ಶನವನ್ನು ಹುಟ್ಟುಹಾಕಿಬಿಟ್ಟಿದೆ. ‘ಪನಾಮಾ ಸೋರಿಕೆಯ ಪಟ್ಟಿಯಲ್ಲಿ ಷರೀಫರನ್ನು ಹೆಸರಿಸಲಾಗಿಲ್ಲ. ಅಲ್ಲದೆ, ಸ್ವ ಹಿತಾಸಕ್ತಿಗಾಗಿ ಅವರು ಸಾರ್ವಜನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಯಾವುದೇ ಸಾಕ್ಷಿ-ಪುರಾವೆ ಇಲ್ಲ. ಹೀಗಿರುವಾಗಲೂ, ಸ್ವತ್ತುಗಳ ಕುರಿತಾದ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಮತ್ತು ತನ್ಮೂಲಕ ಓರ್ವ ಸಂಸದರ ಸಂವಿಧಾನಾತ್ಮಕ ಅವಶ್ಯಕತೆಯಾದ ‘ಪ್ರಾಮಾಣಿಕತೆ’ಯನ್ನು ಮೆರೆಯದಿರುವುದಕ್ಕಾಗಿ ನ್ಯಾಯಮೂರ್ತಿಗಳು ಷರೀಫರನ್ನು ಅನರ್ಹಗೊಳಿಸಿದ್ದಾರೆ. ಷರೀಫರ ನೈತಿಕ ಚಾರಿತ್ರ್ಯನ್ನು ಶೋಧಿಸುವ ಒಂದು ಉತ್ಸಾಹಭರಿತ ತನಿಖೆಯಾಗಿ ಈ ವಿಚಾರಣೆಯನ್ನು ಪರಿವರ್ತಿಸುವ ಮೂಲಕ ಅವರು ಈಗಾಗಲೇ ತಮ್ಮ ಇಂಗಿತಗಳನ್ನು ಸ್ಪಷ್ಟಪಡಿಸಿದ್ದಾರೆ; ಐವರು ಸದಸ್ಯರ ನ್ಯಾಯಪೀಠದ ಮುಖ್ಯಸ್ಥರು ಷರೀಫ್ ಕುಟುಂಬವನ್ನು, ಮಾರಿಯೋ ಪುಜೋ ಅವರ ‘ದಿ ಗಾಡ್​ಫಾದರ್’ ಕೃತಿಯಲ್ಲಿನ ಮಾಫಿಯಾಗೆ ಹತಾಶರಾಗಿ ಹೋಲಿಸಿರುವುದೇ ಇದಕ್ಕೆ ಸಾಕ್ಷಿ’ ಎಂಬುದು ಇಂಥವರ ಸಮರ್ಥನೆ.

ಅದೇನೇ ಇರಲಿ, ಅಸ್ಥಿರತೆ ಮತ್ತು ಅನಿಶ್ಚಿತತೆ ಎಂಬುದು ‘ಪಾಕಿಸ್ತಾನ’ ಎಂಬ ಆಟದ ಅವಳಿ ನಿಯಮಗಳಾಗಿಬಿಟ್ಟಿವೆ ಎಂಬುದಂತೂ ಖರೆ. ಒಂದು ಸಮರ್ಥ ಸರ್ಕಾರವಿಲ್ಲದ ಪಾಕಿಸ್ತಾನವು ತಾನೊಂದು ‘ವಿಫಲ ರಾಷ್ಟ್ರ’ ಎಂಬುದನ್ನು ಮತ್ತೆ ಮತ್ತೆ ದೃಢೀಕರಿಸುತ್ತಿದೆ. ಹೀಗಿರುವಾಗ, ಅಲ್ಲಿನ ಭವಿಷ್ಯದ ಪ್ರಜಾಪ್ರಭುತ್ವದ ಕುರಿತು ಚಿಂತನೆ ಮಾಡುವುದು ನಿರರ್ಥಕ. ಕಾರಣ, 1947ರಿಂದಲೂ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯು ಒಳಗೊಳಗೇ ದುರ್ಬಲವಾಗುತ್ತಲೇ ಬಂದಿದೆ. ಆಜೀವಪರ್ಯಂತ ವಜಾದ ನಿದರ್ಶನವಿದ್ದಾಗಲೂ ಸ್ವಜನ ಪಕ್ಷಪಾತವೆಂಬುದು ಇಲ್ಲಿ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದೆ. ಹೀಗಿರುವಾಗ ನವಾಜ್ ಷರೀಫರ ಸೋದರ ಶೆಹಬಾಜ್ ಷರೀಫ್ ಈಗಿನ ನಿಯೋಜಿತ ಪ್ರಧಾನಿಯಾಗಿರುವುದು ಅಚ್ಚರಿಯೇನಲ್ಲ. ಕುಟುಂಬದಲ್ಲಿದ್ದುದು, ಕುಟುಂಬದೊಳಗೇ ಉಳಿದುಕೊಂಡಂತಾಗಿದೆ! ಶೆಹಬಾಜ್ ಷರೀಫ್ ಚುನಾವಣೆಗೆ ಸ್ಪರ್ಧಿಸಿ ಸಂಸತ್ ಪ್ರವೇಶಿಸುವ ತನಕ ಸಚಿವ ಶಹೀದ್ ಖಾಖನ್ ಅಬ್ಬಾಸಿ ಹಂಗಾಮಿ ಪ್ರಧಾನಿಯಾಗಿ ನಿಯೋಜಿತರಾಗಿದ್ದಾರೆ.

ಪಾಕಿಸ್ತಾನದ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಈ ಚಕಮಕಿಯು, ದೇಶದಲ್ಲಿನ ಅಸ್ತವ್ಯಸ್ತತೆ ಮತ್ತು ರಾಜಕೀಯ ಅಸ್ಥಿರತೆ ಯನ್ನು ಮತ್ತಷ್ಟು ವ್ಯಾಪಕಗೊಳಿಸುವುದರಲ್ಲಿ ಎರಡು ಮಾತಿಲ್ಲ. ಇಂಥ ಸಂದರ್ಭಗಳಲ್ಲಿ ಪಾಕ್ ಸೇನೆಯು ಒಂದಿಡೀ ದೇಶವನ್ನೇ ತನ್ನ ಹತೋಟಿಗೆ ತೆಗೆದುಕೊಂಡುಬಿಡುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಇಂಥ ಬೆಳವಣಿಗೆಗಳನ್ನು ಭಾರತ ಅತ್ಯಂತ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಬೇಕಾಗುತ್ತದೆ; ಇಂಥ ಯಾವುದೇ ಸಂಭಾವ್ಯ ಘಟನೆಗಳಿಂದಾಗಿ ಏನೆಲ್ಲ ಉಪ-ಪರಿಣಾಮ, ಬಿಕ್ಕಟ್ಟಿನ ಪರಿಸ್ಥಿತಿಗಳು ಉದ್ಭವಿಸಬಹುದು ಎಂಬುದನ್ನು ತನ್ಮೂಲಕ ಮುನ್ನಂದಾಜಿಸಬೇಕಾಗುತ್ತದೆ. ಇಂಥ ಯಾವುದೇ ಬಿಕ್ಕಟ್ಟನ್ನು ಎದುರಿಸಿ ಸೂಕ್ತವಾಗಿ ಪ್ರತಿಕ್ರಿಯಿಸಲು ಭಾರತದ ವ್ಯೂಹಾತ್ಮಕ, ಭೂ-ರಾಜಕೀಯ ಮತ್ತು ಗಡಿಗುಂಟದ ಸನ್ನದ್ಧತೆಗಳು ಸಮರ್ಥವಾಗಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿರುವುದೂ ಇಲ್ಲಿ ಅನಿವಾರ್ಯ. ಗಡಿಭಾಗದಲ್ಲಿನ ಅಕ್ರಮ ನುಸುಳುವಿಕೆ ಅಥವಾ ರಹಸ್ಯಾಕ್ರಮಣ ಮತ್ತು ಪಾಕ್-ಪ್ರಾಯೋಜಿತ ಭಯೋತ್ಪಾದನೆಯ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಾತನ್ನು ಒತ್ತಿಹೇಳಬೇಕಾಗಿದೆ. ಪಾಕಿಸ್ತಾನದ ಪ್ರಸಕ್ತ ಸ್ಥಿತಿಗತಿಯ ಸಾರಾಂಶ ಹೇಳಲು, ಅರ್ಧ ಶತಮಾನದಷ್ಟು ಹಿಂದಿನ ಈ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಬಹುದು: ‘ಪಾಕಿಸ್ತಾನದಲ್ಲಿ ರಾಜಕಾರಣಿ ಎಂಬ ಪರಿಕಲ್ಪನೆಗೆ ಅಸ್ತಿತ್ವವೇ ಇಲ್ಲ. ಸಾರ್ವಜನಿಕ ಜೀವನದಿಂದ ಅವರನ್ನು ಹೊರಗಟ್ಟಲಾಗಿದ್ದು, ‘ಬಹಿಷ್ಕೃತರು’ ಎಂಬುದೇ ಅವರ ಹೆಸರಾಗಿಬಿಟ್ಟಿದೆ. ತತ್ತ್ವದ ರೂಪದಲ್ಲಿಯೂ ರಾಜಕೀಯಕ್ಕೆ ಅಲ್ಲಿ ಅಸ್ತಿತ್ವವಿಲ್ಲ. ಸ್ವತಂತ್ರ ಉದ್ಯಮಕ್ಕೆ ಎದುರಾಗಿ ಸಮಾಜವಾದವನ್ನೋ ಅಥವಾ ಎಡಪಂಥದ ಎದುರು ಬಲಪಂಥವನ್ನೋ ಚರ್ಚೆಗೆ ಎತ್ತಿಕೊಳ್ಳಲು ಇಲ್ಲಿನ ಜನಕ್ಕೆ ಆಸಕ್ತಿಯೇ ಇಲ್ಲವೆಂಬಂತೆ ತೋರುತ್ತದೆ. ಸಂಸದೀಯ ಪ್ರಜಾಪ್ರಭುತ್ವದ ರೀತಿಯಲ್ಲಿಯೇ ಈ ವಿವಾದಗಳೂ ಪಾಶ್ಚಾತ್ಯ ಪ್ರಪಂಚದಿಂದ ಒಂದೊಮ್ಮೆ ಬಲವಂತವಾಗಿ ಪಡೆದುಕೊಂಡಿರುವಂಥವೇ ಆಗಿದ್ದಲ್ಲಿ, ಅವನ್ನೀಗ ಅನವಶ್ಯಕವಾಗಿಸುವುದೇ ಸೂಕ್ತ ಎಂಬಂಥ ವಾತಾವರಣ ಪಾಕಿಸ್ತಾನದಲ್ಲಿದೆ’. ಪಾಕಿಸ್ತಾನ ಸರ್ಕಾರ ತನ್ನ ಜನರಿಗೆ ಅತೀವ ಆಶಾಭಂಗವನ್ನುಂಟುಮಾಡಿದೆ. ಒಂದು ವೇಳೆ ಈ ‘ಅಪಾಯಕಾರಿ ಮಾರ್ಗಚ್ಯುತಿ’ ಮುಂದುವರಿದಿದ್ದೇ ಆದಲ್ಲಿ, ಅದು ಆಡಳಿತ ವ್ಯವಸ್ಥೆಯ ನಿರರ್ಥಕತೆಗೆ, ದಿವಾಳಿತನಕ್ಕೆ ಅನುವುಮಾಡಿಕೊಡುವುದರಲ್ಲಿ ಸಂದೇಹವಿಲ್ಲ. ತನ್ನನ್ನು ಒಂದು ‘ಕಾರ್ಯಸಾಧ್ಯ ಅಸ್ತಿತ್ವ’ ಎಂದು ಕರೆದುಕೊಳ್ಳುವ ಹಕ್ಕನ್ನೂ ಅದು ಕಳೆದುಕೊಳ್ಳುವಷ್ಟರ ಮಟ್ಟಿಗೆ ಈ ದುಸ್ಥಿತಿ ತೀವ್ರವಾದರೆ ಅದರಲ್ಲೇನೂ ಅಚ್ಚರಿಯಿಲ್ಲ. ಇಂಥದೊಂದು ಮೌಲ್ಯನಿರ್ಣಯದಿಂದ ಅಲ್ಲಿನ ಅನೇಕ ದೇಶಪ್ರೇಮಿಗಳಿಗೆ ಅಸಮಾಧಾನವಾಗಬಹುದು; ಆದರೆ ಅಲ್ಲಿನ ಆಳುಗ ವ್ಯವಸ್ಥೆಯೇ ತನ್ನನ್ನು ಸಮರ್ಥಿಸಿಕೊಳ್ಳಲು ವಿಫಲವಾಗಿರುವಾಗ ಪಾಕಿಸ್ತಾನೀಯರು ತಾನೆ ಏನು ಮಾಡಿಯಾರು?!

( ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top