Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಅವರ ಉಪಕೃತಿಯನ್ನು ನೆನೆಯದಿದ್ದರೆ ನಾನು ಕೃತಘ್ನ!

Sunday, 03.09.2017, 3:05 AM       No Comments

ಪ್ರತಿವರ್ಷದ ಸೆಪ್ಟೆಂಬರ್ 5ನೇ ತಾರೀಕು ಶಿಕ್ಷಕರ ದಿನ. ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ಬಹು ಎತ್ತರವಾಗಿ ಬಾಳಿದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನ ಅದು. ದಾರ್ಶನಿಕನಾಗಿಯೂ, ಶಿಷ್ಯವತ್ಸಲನಾಗಿಯೂ ಸ್ವಚ್ಛವಾಗಿ ಬದುಕಿದ ರಾಧಾಕೃಷ್ಣನ್ ಆದರ್ಶ ಶಿಕ್ಷಕನ ಸಂಕೇತ. ಈ ನೆವದಲ್ಲಿ ನಮ್ಮ ಕಾಲದ ಕೆಲ ಆದರ್ಶ ಗುರುಗಳ ಬಗ್ಗೆ ಒಂದಷ್ಟು…

ಎಲ್ಲೋ, ಯಾವಾಗಲೋ ಓದಿದ ಮಹಾಭಾರತದ್ದೊಂದು ಕತೆ-

ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ಪಾಂಡವರು ರಾಜ್ಯಭ್ರಷ್ಟರಾಗಿ ಕಾಡುಮೇಡು ಅಲೆಯುತ್ತಿದ್ದರು. ಇತ್ತ ಹಸ್ತಿನಾವತಿಯಲ್ಲಿ ದುರ್ಯೋಧನ ಚಕ್ರವರ್ತಿಯಾಗಿದ್ದ. ದಾಯಾದಿಗಳ ಮೇಲೆ ಆಪಾದಮಸ್ತಕ ಅಸೂಯೆಯನ್ನೇ ತುಂಬಿಕೊಂಡಿದ್ದನಾದರೂ ಛಲಗಾರ; ಮಾತು-ನಡವಳಿಕೆ ಎಲ್ಲಾ ನೇರಾನೇರ. ಅವನ ಗುರು ದ್ರೋಣಾಚಾರ್ಯರು. ಗುರು-ಶಿಷ್ಯರು ಏಕಾಂತದಲ್ಲಿ ಕೂತು ಅದೂ ಇದೂ ಮಾತಾಡುತ್ತಿರುವಾಗೊಮ್ಮೆ ದ್ರೋಣರು ಕೇಳಿದರು- ‘ಸುಯೋಧನ, ನಾನೊಂದು ಪ್ರಶ್ನೆ ಕೇಳುತ್ತೇನೆ. ಪ್ರಾಮಾಣಿಕವಾಗಿ ಉತ್ತರಿಸುತ್ತೀಯಾ?’.

‘ಕೇಳಿ ಗುರುಗಳೇ, ಪ್ರಾಮಾಣಿಕವಾಗಿ ಉತ್ತರಿಸುವುದಕ್ಕೆ ನನಗೆ ಯಾರ ಭಯವೂ ಇಲ್ಲ’.

‘ಹಾಗಾದರೆ ಹೇಳು, ನಿನ್ನೊಂದಿಗೆ ಬದುಕಿದವರಲ್ಲಿ ನೀನು ಯಾರನ್ನು ಪ್ರೀತಿಸುತ್ತೀಯಾ? ನಿನ್ನ ಅತ್ಯಂತ ಮೆಚ್ಚಿನ ವ್ಯಕ್ತಿ ಯಾರು?’.

‘ಇನ್ನಾರು ಗುರುಗಳೇ?- ಕರ್ಣ!’.

‘ಅಲ್ಲಪ್ಪಾ, ಅವನು ಕುಲಹೀನ….’.

ದ್ರೋಣರ ಮಾತನ್ನು ಮಧ್ಯದಲ್ಲೇ ತುಂಡರಿಸಿ ದುರ್ಯೋಧನ ಹೇಳಿದ- ‘ನನಗದು ಮುಖ್ಯವಲ್ಲ; ಅವನು ಮಹಾವೀರ, ದಾನಶೂರ. ಅದಕ್ಕಿಂತ ಮಿಗಿಲಾಗಿ ನಿಯತ್ತಿನವನು, ನಂಬಬಹುದಾದವನು!’.

‘ಹಾಗಾದರೆ ಭೀಷ್ಮ?’.

‘ಭೀಷ್ಮನೂ ವೀರ, ವಿರಾಗಿ, ಘನವಂತ. ಆದರೂ ನನಗೆ ಕರ್ಣನಿಗಿಂತ ಮೆಚ್ಚಲ್ಲ, ಅವನಿಗಿಂತ ಹೆಚ್ಚಲ್ಲ!’.

‘ನಿನ್ನ ತಮ್ಮ ದುಶ್ಯಾಸನ?’.

‘ಅವನನ್ನು ಕಂಡರೆ ನನಗೆ ತುಂಬಾ ಪ್ರೀತಿ. ಆದರೆ ಅವನಿಗೆ ತನ್ನದೂ ಅಂತ ಒಂದು ವ್ಯಕ್ತಿತ್ವವಿಲ್ಲ, ಸ್ವಂತಬುದ್ಧಿಯಿಲ್ಲ. ನಾನು ಹೇಳಿದಷ್ಟನ್ನು ಮಾಡಬಲ್ಲನಷ್ಟೆ ಅವನು! ಅವನನ್ನು ಕರ್ಣನೊಂದಿಗೆ ಹೋಲಿಸಲೇಬೇಡಿ!’.

‘ಅವನು ಪಾಂಡವ ಪಕ್ಷಪಾತಿಯಾದರೂ ಅವನ ಲೀಲೆಗಳೇನು ಸಾಮಾನ್ಯವಾ? ಬುದ್ಧಿಶಕ್ತಿಯೇನು ಸಾಧಾರಣವಾ? ವೈರಿಯೇ ಆದರೂ ಶ್ರೀಕೃಷ್ಣನನ್ನು ಮೆಚ್ಚಲೇಬೇಕಲ್ಲವಾ ನೀನು?’.

‘ಊಹ್ಞುಂ, ಅವನನ್ನು ಮೆಚ್ಚಲು ಸಾಧ್ಯವೇ ಇಲ್ಲ. ಅವನೊಬ್ಬ ಕಪಟಿ, ಕುತಂತ್ರಿ, ಮಾಯಾವಿ. ಆ ದನ ಕಾಯುವವನನ್ನು ನೀವು ಮೆಚ್ಚಬೇಕಷ್ಟೆ!’.

‘ಹಾಗಾದರೆ ನಿನ್ನ ವೈರಿಗಳಲ್ಲಿ ನೀನಾರನ್ನು ಮೆಚ್ಚುತ್ತೀಯೆ?’.

‘ಅವರ ಬಗೆಗಿನ ಮೆಚ್ಚುಗೆಗಿಂತ ನನ್ನ ದ್ವೇಷವೇ ದೊಡ್ಡದು!’.

‘ಒಂದು ಕ್ಷಣವಾದರೂ ಆ ಹಾಳುದ್ವೇಷವನ್ನು ಮರೆತು ಹೇಳಬಹುದಾದರೆ….?’.

‘ಧರ್ಮರಾಯನನ್ನು ಮೆಚ್ಚುತ್ತೇನೆ. ಯಾಕೆಂದರೆ ಅವನು ನ್ಯಾಯವಂತ, ನೀತಿವಂತ, ನಿಗರ್ವಿ, ಧರ್ಮಮಾರ್ಗವನ್ನು ಬಿಟ್ಟು ನಡೆಯದವನು. ಜೂಜಿನಲ್ಲಿ ಸೋತು, ತನ್ನ ರಾಜ್ಯವನ್ನೆಲ್ಲ ನನಗೆ ಒಪ್ಪಿಸಿಕೊಟ್ಟು ನನ್ನನ್ನು ಬಯ್ಯದೆ, ಭಂಗಿಸದೆ ತನ್ನ ತಮ್ಮಂದಿರನ್ನೂ, ಮಡದಿಯನ್ನೂ ಕಟ್ಟಿಕೊಂಡು ದೇಸಿಗನಂತೆ ವನವಾಸಕ್ಕೆ ತೆರಳಿದನೆನ್ನುವ ಕಾರಣಕ್ಕಾದರೂ ನಾನವನನ್ನು ಮೆಚ್ಚಲೇಬೇಕು’.

ದ್ರೋಣರಿಗೆ ಈಗ ಮತ್ತೊಂದು ಪ್ರಶ್ನೆಯನ್ನು ಕೇಳಲೇಬೇಕಿತ್ತು. ಕೇಳಿದರೆ ಏನು ಉತ್ತರ ಬರುವುದೋ ಎಂದು ಆತಂಕವೂ ಆಯಿತು. ಆದರೂ ಧೈರ್ಯಮಾಡಿ ಕೇಳಿಯೇಬಿಟ್ಟರು- ‘ಸುಯೋಧನಾ, ನಾನು ನಿನ್ನ ಗುರು. ನಿನಗೆ ಬಗೆಬಗೆಯ ವಿದ್ಯೆಗಳನ್ನು ಧಾರೆಯೆರೆದವನು. ನೀನಿವತ್ತು ಪರಾಕ್ರಮಶಾಲಿ ಅಂದುಕೊಂಡಿದ್ದರೆ ಅದು ನಾನು ನಿನಗೆ ಕಲಿಸಿದ ವಿದ್ಯೆಯ ಫಲ. ಆದ್ದರಿಂದ ನನ್ನನ್ನಂತೂ ಮೆಚ್ಚುತ್ತೀಯಲ್ಲ? ಗೌರವಿಸುತ್ತೀಯಲ್ಲ? ಪ್ರೀತಿಸುತ್ತೀಯಲ್ಲ?’.

‘ನೀವಿದೊಂದು ಪ್ರಶ್ನೆಯನ್ನು ಕೇಳದಿದ್ದರೇ ಚೆನ್ನಾಗಿತ್ತು!’ ಅಂದ ದುರ್ಯೋಧನ. ದ್ರೋಣರ ತಲೆ ತಗ್ಗಿತು. ಆತಂಕ ಹೆಚ್ಚಾಯಿತು. ಆದರೂ ಕೇಳಿದರು- ‘ಭಾರತೀಯ ಪರಂಪರೆಯಲ್ಲಿ ಗುರುವಿನ ಮಹಿಮೆ ಎಂಥದು ಅನ್ನುವುದು ನಿನಗೆ ಅರಿವಿದೆಯಲ್ಲ ಸುಯೋಧನಾ!’. ‘ನನಗದರ ಅರಿವಿದೆ ಆಚಾರ್ಯ. ಆದರೂ ನನಗೆ ನಿಮ್ಮ ಬಗ್ಗೆ ಮೆಚ್ಚಿಕೆಯಿಲ್ಲ, ಗೌರವವಿಲ್ಲ, ಪ್ರೀತಿಯಿಲ್ಲ. ನಾನು ನಿಮ್ಮ ಪ್ರಶ್ನೆಗೆ ಪ್ರಾಮಾಣಿಕ ಉತ್ತರವನ್ನೇ ಹೇಳಬೇಕೆಂದು ನೀವು ಹೇಳಿದ್ದರಿಂದ ಹೀಗೆ ಹೇಳುತ್ತಿದ್ದೇನೆ. ಶಿಷ್ಯರಲ್ಲಿ ತಾರತಮ್ಯ ಮಾಡಿದವರು ನೀವು. ನಿಮ್ಮ ಅಹಂಕಾರ ತೃಪ್ತಿಗಾಗಿ ಅರ್ಜುನನನ್ನು ಬಳಸಿಕೊಂಡವರು ನೀವು. ಸೂತಕುಲದವನೆಂದು ಕರ್ಣನಂಥ ಮಹಾವೀರನನ್ನು ಧಿಕ್ಕರಿಸಿ ದೂರ ಕಳುಹಿಸಿದವರು ನೀವು. ನಿಮ್ಮ ಪಾಪದ ಪರಾಕಾಷ್ಠೆಯೆಂದರೆ, ಏಕಲವ್ಯ ಎಂಬ ಆ ಕಾಡ ಮುಗ್ಧಹುಡುಗನ ಬೆರಳ ಬಲಿ ತೆಗೆದುಕೊಂಡವರು ನೀವು. ನಿಮ್ಮ ವಿದ್ಯೆಯನ್ನು, ಪ್ರತಿಭೆಯನ್ನು, ಹಸ್ತಿನಾವತಿಯ ರಾಜರ ಮನೆಯ ಊಳಿಗಕ್ಕೆ ಬಿಟ್ಟವರು ನೀವು. ನಿಮ್ಮನ್ನು ಹೇಗೆ ಮೆಚ್ಚುವುದು? ಏನಂತ ಗೌರವಿಸುವುದು ಆಚಾರ್ಯ?’.

ದ್ರೋಣರ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಆದರೂ ಹಠಬಿಡದೆ ತಡೆತಡೆದು ಮಾತನಾಡಿದರು- ‘ಸುಯೋಧನಾ, ನೀನು ಹೇಳಿದ ಯಾವುದನ್ನೂ ಇಲ್ಲವೆನ್ನುವುದಿಲ್ಲ ನಾನು. ಆ ಪಶ್ಚಾತ್ತಾಪದ ಉರಿಯೇ ನನ್ನನ್ನು ಈಗಲೂ ಸುಡುತ್ತಿದೆ. ಆದರೂ ಈ ಯುಗದ ಮಹಾನ್ ಧನುರ್ವಿದ್ಯಾನಿಪುಣ ನಾನೇ ಎಂಬುದು ನಿನ್ನ ನೆನಪಿನಲ್ಲಿರಲಿ. ಇದನ್ನು ಅಹಂಕಾರದಿಂದ ಹೇಳುತ್ತಿಲ್ಲಪ್ಪಾ, ಅಭಿಮಾನದಿಂದ ಹೇಳುತ್ತಿದ್ದೇನೆ. ನನ್ನ ಅಸಾಧ್ಯವೆನಿಸುವ ವಿದ್ಯೆಗಾದರೂ ನೀನು ನನ್ನನ್ನು ಮೆಚ್ಚಲೇಬೇಕಲ್ಲವೆ ದೊರೆ?’.

‘ಮೆಚ್ಚಬಹುದಿತ್ತು ಆಚಾರ್ಯ. ನಾನು ಈ ಮೊದಲು ಹೇಳಿದ ನಿಮ್ಮ ಪಾಪಕೃತ್ಯಗಳ ಮಾಲಿನ್ಯದ ಹೊಳೆಯಲ್ಲಿ ನಿಮ್ಮ ಸದ್ವಿದ್ಯೆ, ಸಾಹಸಗುಣಗಳೆಲ್ಲವೂ ಕೊಚ್ಚಿಹೋದವು. ನಿಮ್ಮ ವ್ಯಕ್ತಿತ್ವದಲ್ಲಿ ಈ ಮಾಲಿನ್ಯವಿಲ್ಲದಿದ್ದರೆ ನಿಮ್ಮ ವಿದ್ಯೆ ಒಂದಿಷ್ಟು ಕಡಿಮೆಯಿದ್ದರೂ ನಾನು ನಿಮ್ಮನ್ನು ಮೆಚ್ಚುತ್ತಿದ್ದೆ, ಗೌರವಿಸುತ್ತಿದ್ದೆ, ಪ್ರೀತಿಸುತ್ತಿದ್ದೆ. ಕ್ಷಮಿಸಿ ಗುರುದೇವಾ, ಹೀಗೆ ಹೇಳಿದೆನೆಂದು ಮನಸ್ಸನ್ನು ಕಹಿಮಾಡಿಕೊಳ್ಳಬೇಡಿ. ನಿಮ್ಮ ಶಿಷ್ಯ ಅಹಿತವಾದುದಾದರೂ ಪ್ರಾಮಾಣಿಕವಾಗಿ ಮಾತಾಡಿದನೆಂದು ಸಮಾಧಾನಪಡಿ. ನಿಮ್ಮ ಮನಸ್ಸು ನೋಯಿಸಿದ್ದಕ್ಕಾಗಿ ನನ್ನನ್ನು ಕ್ಷಮಿಸಿ ಆಶೀರ್ವದಿಸಿ’.

ದ್ರೋಣಾಚಾರ್ಯರು ಕಣ್ಣೀರು ಮಿಡಿಯುತ್ತಾ ಅಲ್ಲಿಂದ ಎದ್ದುಹೋದರು.

-ಈ ಕತೆ ವ್ಯಾಸರಾಗಲೀ, ಕುಮಾರವ್ಯಾಸನಾಗಲೀ ಬರೆದದ್ದಲ್ಲ. ಈ ಕಾಲದವರ್ಯಾರೋ ಬರೆದು ಸೇರಿಸಿದ್ದು. ಹೌದು, ನಮ್ಮ ಮಹಾಭಾರತವೇ ಹಾಗೆ (ರಾಮಾಯಣವೂ ಹಾಗೆಯೇ). ಇವು ನಿರಂತರ ಬೆಳೆಯುವ ಮಹಾಕಾವ್ಯಗಳು. ಈ ಕಾವ್ಯಗಳ ಕಟ್ಟಡದಲ್ಲೇ ಹೀಗೆ ಕಾಲಕಾಲಕ್ಕೆ ಬರೆಬರೆದು ಸೇರಿಸುವುದಕ್ಕೆ ಬೇಕಾದಷ್ಟು ಎಡೆಗಳಿವೆ. ಅದಕ್ಕೇ ಹೇಳುತ್ತಾರಲ್ಲ, ಮಹಾಭಾರತವೊಂದು ವಿಶಾಲ ವಾರಿಧಿ. ಅದಕ್ಕೆ ಎಷ್ಟೊಂದು ಹೊಳೆಗಳು, ತೊರೆಗಳು, ಹಳ್ಳಗಳು ನಿರಂತರವಾಗಿ ಸೇರುತ್ತಲೇ ಇರುತ್ತವೆ. ಈ ಕತೆಯನ್ನು ಹೀಗೆ ಬರೆದು ಸೇರಿಸಿದವನಿಗೆ ಈ ಕಾಲದ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಮೇಷ್ಟ್ರುಗಳಿಗೆ ಏನೋ ಹೇಳಬೇಕೆನ್ನಿಸಿದೆ. ಅದಕ್ಕೇ ಇಂಥದೊಂದು ಕತೆಯನ್ನು ಹೇಳಿದ್ದಾನೆ ಅನ್ನಿಸುತ್ತದೆ.

ಪ್ರತಿವರ್ಷದ ಸೆಪ್ಟೆಂಬರ್ 5ನೇ ತಾರೀಕು ಶಿಕ್ಷಕರ ದಿನ. ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ಬಹು ಎತ್ತರವಾಗಿ ಬಾಳಿದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನ ಅದು. ದಾರ್ಶನಿಕನಾಗಿಯೂ, ಶಿಷ್ಯವತ್ಸಲನಾಗಿಯೂ ಸ್ವಚ್ಛವಾಗಿ ಬದುಕಿದ ರಾಧಾಕೃಷ್ಣನ್ ಆದರ್ಶ ಶಿಕ್ಷಕನ ಸಂಕೇತವಾಗಿದ್ದಾರೆ. ಅಂಥ ಶಿಕ್ಷಕರನ್ನು ಗೌರವಿಸುವುದಕ್ಕಾಗಿ ಸೆಪ್ಟೆಂಬರ್ 5ನೇ ತಾರೀಕು ಕೂಡ ಒಂದು ಸಂಕೇತವಾಗಿದೆ.

ಮೇಲೆ ಹೇಳಿದ ಕತೆಯಲ್ಲಿ ದುರ್ಯೋಧನನ ನಿಷ್ಠುರವಾದ ಮಾತುಗಳನ್ನು ಕೇಳಿ ದ್ರೋಣರು ಕಣ್ಣೀರು ಮಿಡಿಯುತ್ತಾ ಎದ್ದುಹೋದರು ಅನ್ನುವ ವಾಕ್ಯವನ್ನು ಬರೆಯುವಾಗ ನಾನು ಕಂಡ, ಕೇಳಿದ ಹಲವಾರು ಮೇಷ್ಟ್ರುಗಳ ಚಿತ್ರ ಮನಃಪಟಲದ ಮೇಲೆ ಸಾಲುಸಾಲಾಗಿ ಬಂದುಹೋಗುತ್ತದೆ. 34 ಸುದೀರ್ಘ ವರ್ಷಗಳ ಕಾಲ ಮೇಷ್ಟ್ರಾಗೇ ಬದುಕಿದ ನನಗೆ ಅಂಥ ಮೇಷ್ಟ್ರುಗಳನ್ನು ನೆನೆಸಿಕೊಂಡಾಗಲೆಲ್ಲಾ ಹೃದಯ ಒದ್ದೆಯಾಗುತ್ತದೆ.

ನನ್ನ ಮನಸ್ಸಿನಲ್ಲಿ ಮೂಡಿನಿಲ್ಲುವ ಮೇಷ್ಟ್ರುಗಳ ಸಾಲಿನಲ್ಲಿ ಬಹು ಎತ್ತರದಲ್ಲಿ ಕಾಣಿಸುವವರೆಂದರೆ ಅದು ರಾಷ್ಟ್ರಕವಿ ಕುವೆಂಪು ಅವರಂಥವರಿಗೇ ಆರಾಧ್ಯದೈವವೆನಿಸಿದ್ದ ಕೀರ್ತಿಶೇಷ ಪ್ರಾಧ್ಯಾಪಕ ಟಿ.ಎಸ್. ವೆಂಕಣ್ಣಯ್ಯನವರು. ಅವರ ಬದುಕಿನ ಇದೊಂದು ಕತೆ ಹೇಳುತ್ತೇನೆ. ದುರ್ಯೋಧನ ದ್ರೋಣರಿಗೆ ಹೇಳಿದಂತೆ ಯಾರಾದರೂ ಅವರಿಗೆ ಹೇಳಲು ಸಾಧ್ಯವಾ ನೋಡಿ- ಟಿ.ಎಸ್. ವೆಂಕಣ್ಣಯ್ಯನವರು ಸಂಪ್ರದಾಯಸ್ಥ ಬ್ರಾಹ್ಮಣರು. ಅವರು ದಿನಾ ಬೆಳಗ್ಗೆ ಸ್ನಾನಮಾಡಿ, ಮಡಿಯುಟ್ಟು ಪೂಜೆ ಮಾಡುವುದು ರೂಢಿ. ಅದೊಂದು ದಿನ ಅವರು ನಿತ್ಯದಂತೆ ಸ್ನಾನಾಹ್ನಿಕಗಳನ್ನು ಮುಗಿಸಿ ಮಡಿಯುಟ್ಟು, ಕೈಯಲ್ಲಿ ಗಂಗಾಜಲದ ಪಾತ್ರೆಯನ್ನು ಹಿಡಿದುಕೊಂಡು ಪೂಜೆಗೆ ಅಂತ ದೇವರ ಮನೆಯ ಕಡೆ ಹೊರಟಿದ್ದರು. ಆಗ ಹೊರಬಾಗಿಲಲ್ಲಿ ಯಾರೋ ‘ವೆಂಕಣ್ಣಯ್ಯನವರು ಇದ್ದಾರೆಯೆ?’ ಅಂತ ಕರೆದದ್ದು ಕೇಳಿಸಿತು. ‘ಇದ್ದೇನೆ, ಇದ್ದೇನೆ’ ಅಂತಲೇ ಮಡಿಯುಟ್ಟ ವೆಂಕಣ್ಣಯ್ಯನವರು ಹೊರಬಾಗಿಲಿಗೆ ಬಂದರು. ಬಂದಿದ್ದವನು ವಿಶ್ವವಿದ್ಯಾಲಯದ ಓರ್ವ ಉದ್ಯೋಗಿ. ಅವನಿಗೆ ವಿಶ್ವವಿದ್ಯಾಲಯದಿಂದ ಏನೋ ತೊಂದರೆಯಾಗಿತ್ತು. ಆತ ವೆಂಕಣ್ಣಯ್ಯನವರ ಬಳಿ ಅದನ್ನೆಲ್ಲಾ ಸವಿಸ್ತಾರವಾಗಿ ಹೇಳಿ, ‘ತಾವೊಂದು ಮಾತು ಕುಲಪತಿಯವರಿಗೆ ಹೇಳಿದರೆ ನನಗೆ ಸಹಾಯವಾಗುತ್ತದೆ ಸ್ವಾಮಿ. ಕುಲಪತಿಗಳು ತಮ್ಮ ಮಾತೆಂದರೆ ಕಿತ್ತುಹಾಕುವುದಿಲ್ಲ. ನನ್ನ ಪರವಾಗಿ ತಾವು ಶಿಫಾರಸು ಮಾಡಿದರೆ ನನಗೆ, ನನ್ನ ಕುಟುಂಬಕ್ಕೆ ಉಪಕಾರವಾಗುತ್ತದೆ. ಬಡವ ಬದುಕಿಕೊಳ್ಳುತ್ತೇನೆ’ ಅಂದ.

ವೆಂಕಣ್ಣಯ್ಯನವರು ಆತನ ಮೈಮುಟ್ಟಿ, ಬೆನ್ನುಸವರಿ ಸಮಾಧಾನ ಹೇಳಿ, ‘ನೀನೇನೂ ಆತಂಕ ಪಡಬೇಡಪ್ಪಾ, ನಿನ್ನ ಪರವಾಗಿ ನಾನು ಕುಲಪತಿಗಳಿಗೆ ಶಿಫಾರಸು ಮಾಡುತ್ತೇನೆ. ನಿಶ್ಚಿಂತೆಯಾಗಿರು’ ಎಂದು ಹೇಳಿ ಆತನನ್ನು ಕಳುಹಿಸಿಕೊಟ್ಟು ಮತ್ತೆ ದೇವರ ಕೋಣೆಯ ಕಡೆಗೆ ಹೊರಟರು. ಆಗ ಅವರ ಮನೆಯಲ್ಲಿದ್ದ ಮತ್ತಾರೋ ಹೇಳಿದರು, ‘ವೆಂಕಣ್ಣಯ್ಯನವರೇ, ನೀವು ಮಡಿಯಲ್ಲಿದ್ದೀರಿ. ನೀವು ಈಗ ಮೈಮುಟ್ಟಿ ಮಾತಾಡಿಸಿದಿರಲ್ಲ, ಆತ ಹೊಲೆಯರವನು. ನೀವು ಮತ್ತೆ ಸ್ನಾನ ಮಾಡಬೇಕಾಗುತ್ತೇನೋ?!’. ಆ ಮಾತನ್ನು ಕೇಳಿದ ಕೂಡಲೇ ವೆಂಕಣ್ಣಯ್ಯನವರು ಸಿಡಿಮಿಡಿಯಾದರು. ‘ಹೊಲೆಯರಂತೆ, ಮಾದಿಗರಂತೆ! ಯಾರು ಹೊಲೆಯರು? ಯಾರು ಮಾದಿಗರು? ಅವರನ್ನು ಮುಟ್ಟಿದರೆ ಮಡಿ ಕೆಟ್ಟುಹೋಗುವುದಂತೆ! ಅವಿವೇಕಿಗಳು! ಅವಿವೇಕಿಗಳು!!’ ಅಂದುಕೊಳ್ಳುತ್ತಾ ದೇವರ ಮನೆಯ ಕಡೆ ಹೋದರಂತೆ. ಅವರ ತಮ್ಮ, ಅವರ ವ್ಯಕ್ತಿತ್ವದ ನೆರಳಲ್ಲೇ ಬೆಳೆದವರು ತ.ಸು. ಶಾಮರಾಯರು. ಅವರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು. ಅವರ ಶಿಷ್ಯ ನಮ್ಮ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು. ವಿದ್ಯಾರ್ಥಿದೆಸೆಯಲ್ಲಿ ಶಿವರುದ್ರಪ್ಪ ತುಂಬಾ ಬಡವರು. ಮೈಸೂರಿಗೆ ಓದಲು ಬಂದ ಅವರಿಗೆ ಅಲ್ಲಿ ಆಶ್ರಯವಿರಲಿಲ್ಲ. ಆಗ ಶಾಮರಾಯರು ಶಿವರುದ್ರಪ್ಪನವರನ್ನು ಕರೆದುಕೊಂಡು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಬಳಿಗೆ ಹೋದರು. ಸ್ವಾಮಿಗಳ ಹತ್ತಿರ, ‘ಬುದ್ಧೀ, ಈ ಹುಡುಗ ಶಿವರುದ್ರಪ್ಪ ಅಂತ. ಶಿವಮೊಗ್ಗದ ಹೊನ್ನಾಳಿ ಕಡೆಯವನು. ಬಡವ, ಓದಿನಲ್ಲಿ ಬುದ್ಧಿವಂತ. ಇವನಿಗೆ ಮೈಸೂರಿನಲ್ಲಿ ಯಾವ ಆಶ್ರಯವೂ ಇಲ್ಲ. ದಯವಿಟ್ಟು ಈ ಹುಡುಗನಿಗೆ ನಿಮ್ಮ ವಿದ್ಯಾರ್ಥಿ ನಿಲಯದಲ್ಲಿ ಉಚಿತ ಪ್ರಸಾದಕ್ಕೆ ಅವಕಾಶ ಮಾಡಿಕೊಟ್ಟರೆ ಉಪಕಾರವಾಗುತ್ತದೆ’ ಅಂತ ನಮ್ರತೆಯಿಂದ ವಿನಂತಿಸಿಕೊಂಡರು.

ರಾಜೇಂದ್ರ ಸ್ವಾಮಿಗಳು ಹುಡುಗನ ಪೂರ್ವಾಪರಗಳನ್ನು ವಿಚಾರಿಸಿಕೊಂಡು ‘ಅಗತ್ಯವಾಗಿ ಈ ಹುಡುಗನನ್ನು ನಮ್ಮ ಉಚಿತ ಪ್ರಸಾದ ನಿಲಯಕ್ಕೆ ಸೇರಿಸಿಕೊಳ್ಳುತ್ತೇನೆ ಮೇಷ್ಟೆ್ರೕ. ಆದರೆ ವಿಚಿತ್ರ ನೋಡಿ, ಈ ಹುಡುಗ ವೀರಶೈವ. ನೀವು ಬ್ರಾಹ್ಮಣರು. ಈ ವೀರಶೈವರ ಹುಡುಗನನ್ನು ಬ್ರಾಹ್ಮಣರಾದ ನೀವು ವೀರಶೈವರ ಮಠಕ್ಕೆ ಸೇರಿಸಲು ಕರೆದುಕೊಂಡು ಬಂದಿದ್ದೀರಿ’ ಅಂತ ಮುಗುಳ್ನಕ್ಕರು. ಆಗ ಶಾಮರಾಯರು ಹೇಳಿದ್ದು- ‘ನನಗೆ ಅದೆಲ್ಲಾ ಗೊತ್ತಿಲ್ಲ ಬುದ್ಧೀ, ನಾನು ಮೇಷ್ಟ್ರು, ಶಿವರುದ್ರಪ್ಪ ನನ್ನ ಶಿಷ್ಯ. ನನಗೆ ಗೊತ್ತಿರುವುದು ಇಷ್ಟೇ. ನನ್ನದು ಮೇಷ್ಟ್ರ ಜಾತಿ. ಇವನದು ಶಿಷ್ಯನ ಜಾತಿ ಅಷ್ಟೇ‘. ರಾಜೇಂದ್ರ ಸ್ವಾಮಿಗಳು, ‘ಭಲೆಭಲೇ, ಇದಪ್ಪಾ ಮಾತು!’ ಅಂದು ಶಾಮರಾಯರನ್ನು ಸತ್ಕರಿಸಿ ಕಳುಹಿಸಿದರಂತೆ.

ಮೇಷ್ಟ್ರಾದ ನಾನು ಕೂಡ ನನ್ನ ಹಲವಾರು ಶಿಷ್ಯವತ್ಸಲ ಗುರುಗಳು ಕಡೆದ ಶಿಲ್ಪ. ಗದ್ದೆ ಉತ್ತುಕೊಂಡು, ಗೊಬ್ಬರ ಹೊತ್ತುಕೊಂಡು ಕಳೆದುಹೋಗಬಹುದಾಗಿದ್ದ ನನ್ನಲ್ಲೂ ಒಂದಿಷ್ಟು ವಿಚಾರಗಳನ್ನು ತುಂಬಿದವರು, ನನಗೂ ಮಾತಾಡಲು ಕಲಿಸಿದವರು ಸಾಲುಸಾಲಾಗಿ ನೆನಪಾಗುವ ನನ್ನ ಮೇಷ್ಟ್ರುಗಳೇ. ‘ನಾನು ಹೇಳಿದ ಮಾತುಗಳನ್ನು ನೀವು ಒಪ್ಪಲೇಬೇಕೆಂದಿಲ್ಲ. ನೀವೂ ಓದಿ, ಅಧ್ಯಯನ ಮಾಡಿ, ಜಗತ್ತನ್ನು ಕಂಡು, ನಿಮ್ಮದೇ ಅಭಿಪ್ರಾಯಗಳನ್ನು ರೂಢಿಸಿಕೊಳ್ಳಿ. ನಿಮ್ಮದೊಂದು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ, ಭಿನ್ನಾಭಿಪ್ರಾಯಗಳನ್ನೂ ಗೌರವದಿಂದ, ವಿನಯದಿಂದ ದಾಖಲಿಸುವುದನ್ನು ಕಲಿತುಕೊಳ್ಳಿ. ಹಣ ಸಂಪಾದಿಸುವುದಕ್ಕಾಗಿಯೇ ಬದುಕಬೇಡಿ. ಜ್ಞಾನಕ್ಕಿಂತ ಅದ್ಯಾವುದೂ ದೊಡ್ಡದಲ್ಲ. ಭೂಮಿಯನ್ನು ಲೂಟಿ ಮಾಡಬೇಡಿ, ಸಮಾಜದ್ರೋಹಿಗಳಾಗಿ ಬದುಕಬೇಡಿ’ ಹಾಗಂತೆಲ್ಲ ನಮಗೆ ಹೇಳಿ ಮನದಟ್ಟು ಮಾಡಿಸಿದ ವಿಶ್ವವಿದ್ಯಾಲಯದ ಮೇಷ್ಟ್ರುಗಳು ನೆನಪಾಗುತ್ತಾರೆ. ‘ಲೋ, ನೀನೂ ಜಾಣ ಇದ್ದೀಯ ಕಣೋ, ಬೆರಳು ತೋರಿದರೆ ಹಸ್ತ ನುಂಗ್ತೀಯ, ಚೆನ್ನಾಗಿ ಓದಿ ದೊಡ್ಡ ವಿದ್ಯಾವಂತನಾಗು. ರಾಯರ ಕುದುರೆ ಕತ್ತೆ ಆಯ್ತು ಅನ್ನೋ ಹಾಗಾಗಬೇಡ. ದೊಡ್ಡವರ ಸಹವಾಸ ಮಾಡಿದರೆ ನೀನೂ ದೊಡ್ಡವನಾಗ್ತೀಯೆ, ಅಲ್ಪರ ಸಂಗ ಮಾಡಿದರೆ ಅಲ್ಪನಾಗ್ತೀಯೆ. ಇದ್ಯಾವುದೂ ಬ್ರಹ್ಮವಿದ್ಯೆಯಲ್ಲ. ವಿದ್ಯೆ ಅನ್ನುವುದು ಸಾಧಕನ ಸಂಪತ್ತೇ ಪರಂತು ಸೋಮಾರಿಯ ಸೊತ್ತಲ್ಲ…’ ಇತ್ಯಾದಿತ್ಯಾದಿಯಾಗಿ ಉಪದೇಶ ಮಾಡಿ ನನ್ನ ಬೆನ್ನುತಟ್ಟಿ ಬೆಳೆಸಿದ ಪ್ರೖೆಮರಿ, ಮಿಡ್ಲ್ ಮತ್ತು ಹೈಸ್ಕೂಲಿನ ಮೇಷ್ಟ್ರುಗಳು ನೆನಪಾಗುತ್ತಾರೆ. ಅವರ ಉಪಕೃತಿಯನ್ನು, ಉದಾರಬುದ್ಧಿಯನ್ನು ನೆನೆಯದಿದ್ದರೆ ನಾನು ಕೃತಘ್ನನಾಗುತ್ತೇನೆ.

ದುರ್ಯೋಧನನ ಮಾತುಗಳನ್ನು ಕೇಳಿ ಕಣ್ಣೀರು ಮಿಡಿಯುತ್ತಾ ಎದ್ದುಹೋದ ದ್ರೋಣ ಮತ್ತೆ ನೆನಪಾಗುತ್ತಾನೆ- ಇದು ನಾನು ಪ್ರೖೆಮರಿ ಶಾಲೆಯಲ್ಲಿದ್ದಾಗ ನಡೆದ ಘಟನೆ. ಶಾಲೆ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಶಾಲೆಯೊಳಕ್ಕೆ ನುಗ್ಗಿಬಂದ ನಮ್ಮೂರ ಹಿರಿಯನೊಬ್ಬ. ಬಂದವನು ನಮ್ಮೆಲ್ಲರ ಮುಖಗಳನ್ನೂ ನೋಡಿದ. ಮೇಷ್ಟ್ರ ಕಡೆ ತಿರುಗಿ- ‘ಅಲ್ಲ ಕಣಯ್ಯಾ ಮೇಷ್ಟ್ರು, ಈ ಹುಡುಗ್ರ ಮೊಕಾ ನೋಡಿದ್ದೀಯಾ? ಒಬ್ಬರ ಹಣೆಯ ಮೇಲೂ ಊಬತ್ತಿ ಕಟ್ಟಿಲ್ಲ, ಗಂಧ ಇಲ್ಲ, ಸಾದಿಲ್ಲ. ಇದಾ ನೀವು ಹುಡುಗ್ರುಗೆ ಹೇಳ್ಕೊಟ್ಟಿರಾದು? ಹಿಂದೆಲ್ಲಾ ಬ್ರಾಮುಣ್ರು, ಸಿವಾಚಾರದೋರು ಮೇಷ್ಟ್ರಿದ್ರು. ಅವು› ಆಚಾರ-ಇಚಾರ ಹೇಳ್ಕೊಡೋರು. ನೀವೆಲ್ಲಿ ಹೇಳ್ಕೊಡ್ತೀರಾ? ಹೊಲೇರು ಮಾದಿಗರೆಲ್ಲಾ ಮೇಷ್ಟ್ರಾದ್ರೆ ಇಂಗೇ ಆಗೋದು!’.

ನಮ್ಮ ಮೇಷ್ಟ್ರು ದಲಿತ ಜಾತಿಯವರು ನಿಜ. ಆದರೆ ಇವತ್ತೂ ನಾನು ನೆನಪಿಸಿಕೊಳ್ಳುವ ಒಳ್ಳೆಯ ಮೇಷ್ಟ್ರು. ನಮ್ಮನ್ನೆಲ್ಲಾ ತಮ್ಮ ಹೊಟ್ಟೆಯ ಮಕ್ಕಳಂತೆ ಪ್ರೀತಿಸಿ ಪಾಠ ಹೇಳಿಕೊಟ್ಟವರು. ಪಾಪ! ಅವನ ಮಾತು ಕೇಳಿ ನಮ್ಮ ಮೇಷ್ಟ್ರು ನಮ್ಮೆದುರಿಗೇ ಅವಮಾನದಿಂದ ಕಣ್ಣೀರು ಮಿಡಿಯುತ್ತಾ ನಿಂತಿದ್ದರು!

ಇವತ್ತ್ಯಾಕೋ ದ್ರೋಣ ಕಣ್ಣೀರು ಮಿಡಿದ ಸಾಲು ಬರೆಯುತ್ತಿರುವಾಗ ನನ್ನ ಆ ಮೇಷ್ಟ್ರ ಕಣ್ಣೀರೂ ನೆನಪಾಯಿತು. ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top