Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಅಲರ್ಜಿ ಸಮಸ್ಯೆಗೆ ಪರಿಹಾರ

Tuesday, 12.06.2018, 3:03 AM       No Comments

ನಾನು ದಿನವೂ ಸ್ನಾನ ಮಾಡಿದ ನಂತರ ಸ್ವಲ್ಪ ಕಾಲ ಕಣ್ಣು ಕೆಂಪಗಿರುತ್ತದೆ. ಕೆಲವು ದಿನ ಬೆಳಗ್ಗೆಯಿಂದಲೇ ಮೂಗಿನಿಂದ ನಿರಂತರವಾಗಿ ಗೊಣ್ಣೆ ಸೋರುತ್ತದೆ. ಸೀನು ಬರುತ್ತದೆ. ಉಸಿರಾಟದ ತೊಂದರೆಯೂ ಇರುತ್ತದೆ. ಕೆಲವು ದಿನ ಕಣ್ಣುಗಳಲ್ಲಿ ಅಪಾರ ತುರಿಕೆ, ಚುಚ್ಚುವುದು ಆರಂಭವಾಗುತ್ತದೆ. ಬಹಳ ಬೇನೆ ಉಂಟಾಗುತ್ತದೆ. ಇದು ಅಲರ್ಜಿ ಎಂದು ಐಡ್ರಾಪ್ಸ್ ಕೊಟ್ಟಿದ್ದಾರೆ. ಆದರೂ ಸರಿಯಾಗಿಲ್ಲ. ಇನ್ನು, ತಿಂಡಿ-ಊಟವಾದ ಬಳಿಕ ಸ್ವಲ್ಪ ಹೊತ್ತಿನ ನಂತರ ಆಹಾರ ಸಾಗುವ ಜಾಗದಲ್ಲಿ ಒತ್ತಿದಂತಾಗಿ ಬಹಳ ತೊಂದರೆಯಾಗುತ್ತದೆ. ಊಟ-ತಿಂಡಿ ತಿನ್ನುತ್ತಿದ್ದಂತೆ ನೆತ್ತಿಯಿಂದ ತಲೆಯ ಸುತ್ತಮುತ್ತ ಎರಡೂ ಕಿವಿಗಳ ಮೇಲೆ ನೀರು ಹರಿಯುತ್ತದೆ. ಈ ಬಗ್ಗೆ 1998ರಿಂದಲೂ ಇಂಗ್ಲಿಷ್ ಔಷಧ ಮಾಡುತ್ತಿದ್ದೇನೆ. ಯಾವುದೇ ವೈದ್ಯರು ಈ ಬಗ್ಗೆ ಕಾಯಿಲೆ ಏನು ಎಂದು ಹೇಳಿಲ್ಲ. ಮಾತ್ರೆ ಕೊಡುತ್ತಲೇ ಇದ್ದಾರೆ. ಮಾತ್ರೆ ಬಳಕೆ ಮಾಡಿದಾಗ ಕಡಿಮೆಯಾಗಿ, ನಿಲ್ಲಿಸಿದಾಗ ಪುನಃ ಬರುತ್ತದೆ. ಎರಡು ಬಾರಿ ಎಂಡೋಸ್ಕೊಪಿಯನ್ನೂ ಮಾಡಿಸಿದ್ದೆ. ಮಲ-ಮೂತ್ರ ವಿಸರ್ಜನೆಯಲ್ಲಿ ಯಾವುದೇ ತೊಂದರೆ ಇಲ್ಲ.

-ಜೆ. ಶಿವಶಂಕರಪ್ಪ, ಬೆಂಗಳೂರು

ನಿಮಗೆ ಅಲರ್ಜಿಯ ತೊಂದರೆ ಇದೆ. ಧೂಳು, ಹೊಗೆ, ವಾತಾವರಣದಲ್ಲಿನ ಬದಲಾವಣೆ, ಆಹಾರ, ನೀರು ಬದಲಾದಲ್ಲಿ ಅಲರ್ಜಿ ಸಮಸ್ಯೆ ಉಂಟಾಗುತ್ತದೆ. ನೀವು ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಒಂದು ಚಮಚೆ ಹರಿದ್ರಾಖಂಡವನ್ನು ಬಿಸಿಹಾಲಿನೊಂದಿಗೆ ಬೆರೆಸಿ ಕುಡಿಯಿರಿ. ಕುದಿಯುವ ನೀರಿಗೆ 3-4 ಹನಿ ನೀಲಗಿರಿ ತೈಲ ಹಾಕಿ ಹಬೆ ತೆಗೆದುಕೊಳ್ಳಿ. ತಲೆಗೆ ಸ್ನಾನ ಮಾಡುವಾಗ ಬಿಸಿನೀರಿಗೆ ಒಂದೆರಡು ಹನಿ ನೀಲಗಿರಿ ತೈಲ ಇಲ್ಲವೇ ನಿಂಬೆಹಣ್ಣಿನ ತೈಲ ಹಾಕಿ ಸ್ನಾನ ಮಾಡಿ. ಕುಡಿಯುವ ನೀರನ್ನು ಕಾಯಿಸಿ ಕುಡಿಯಿರಿ. ಕಾಯಿಸುವಾಗ ತುಳಸಿ ಎಲೆ ಹಾಕಿ ಕುದಿಸಿ. ಅಡುಗೆ ತಯಾರಿಸುವಾಗ ಮೆಣಸು, ಶುಂಠಿ, ಬೆಳ್ಳುಳ್ಳಿಗಳನ್ನು ಮಿತವಾಗಿ ಬಳಸಿ. ಧೂಳಿನಲ್ಲಿ ತಿರುಗಾಡುವಾಗ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ, ಇಲ್ಲವೇ ಕರ್ಚೀಫು ಕಟ್ಟಿಕೊಳ್ಳಿ. ನಿಮ್ಮ ಎಂಡೋಸ್ಕೊಪಿ ವರದಿ ನೋಡಿದೆ. ಹೈಟಸ್ ಹರ್ನಿಯಾ ಅಂದರೆ ಅನ್ನನಾಳದಲ್ಲಿ ತೊಂದರೆ ಇರುವುದರಿಂದ ಜೀರ್ಣದ ತೊಂದರೆ ಇದೆ. ಆಹಾರದಲ್ಲಿ ಹೆಚ್ಚು ಖಾರ, ಹುಳಿ, ಕರಿದ ಪದಾರ್ಥ ಸೇವನೆ ಬೇಡ. ಪ್ರತಿ ತುತ್ತನ್ನೂ ನಿಧಾನವಾಗಿ ಅಗಿದು ತಿನ್ನಿ. ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಿ. ಉಪವಾಸ ಇರುವುದಾಗಲೀ ಒಂದೇ ಬಾರಿ ಹೆಚ್ಚು ತಿನ್ನುವುದಾಗಲೀ ಒಳ್ಳೆಯದಲ್ಲ. 3-4 ಗಂಟೆಗಳಿಗೊಮ್ಮೆ ಸ್ವಲ್ಪ ಆಹಾರ ಸೇವಿಸಿ. ಕಾಫಿ-ಟೀ ಹೆಚ್ಚು ಕುಡಿಯಬೇಡಿ. ತರಕಾರಿಯೊಂದಿಗೆ ಜ್ಯೇಷ್ಠಮಧು ಹಾಕಿ ಕುದಿಸಿ, ಸೂಪ್ ತಯಾರಿಸಿ ಕುಡಿಯುವುದು ಒಳ್ಳೆಯದು. ಜೀರಕ ರಸಾಯನವನ್ನು ಒಂದು ಚಮಚೆಯಷ್ಟನ್ನು ದಿನಕ್ಕೆರಡು ಬಾರಿ ಸೇವಿಸಿ.

ನನ್ನ ಗಂಡನ ವಯಸ್ಸು 41. ಅವರ ಎತ್ತರ 5.5. ಅವರು ಬಹಳ ವರ್ಷಗಳಿಂದಲೂ ತುಂಬ ಸಣ್ಣಗೆ ಇದ್ದಾರೆ. 56 ಕೆಜಿ ಅವರ ತೂಕ ಇದೆ. ಅವರಿಗೆ ಕೆಲವು ಸಲ ಉಸಿರಾಟದ ತೊಂದರೆ ಉಂಟಾಗುತ್ತದೆ. ತೂಕ ಹೆಚ್ಚಾಗಲು ಹಾಗೂ ಉಸಿರಾಟದ ಸಮಸ್ಯೆಗೆ ಯಾವ ರೀತಿಯ ಚಿಕಿತ್ಸೆ, ಆಹಾರ ಪದ್ಧತಿ ಸೂಕ್ತ?

-ಭವಾನಿ, ಬೆಂಗಳೂರು

ಅವರಿಗೆ ಸಿಹಿ ಸೇವಿಸಲು ಹೇಳಿ. ಬೆಲ್ಲದಿಂದ ತಯಾರಿಸಿದ ಉಂಡೆ ಮತ್ತು ಪಾಯಸವನ್ನು ಕೊಡಬೇಕು. ಆಮಲಕಿ ರಸಾಯನವನ್ನು ದಿನಕ್ಕೆರಡು ಬಾರಿ ಊಟದ ನಂತರ ಒಂದು ಚಮಚೆ ಸೇವಿಸಿ ನಂತರ ಅರ್ಧಲೋಟ ಹಾಲು ಕುಡಿಯಬೇಕು. ಆಮಲಕಿ ರಸಾಯನ ಸೇವನೆಯಿಂದ ಉಸಿರಾಟದ ತೊಂದರೆಯನ್ನು ಸರಿಪಡಿಸುವುದರೊಂದಿಗೆ ತೂಕ ಹೆಚ್ಚಾಗುತ್ತದೆ. ಬೆಳಗ್ಗೆ ಹಾಗೂ ರಾತ್ರಿ ತಪ್ಪದೇ ಬಿಸಿನೀರು ಕುಡಿಯಬೇಕು. ಆಹಾರದಲ್ಲಿ ಮಜ್ಜಿಗೆ, ತಂಪು ಪಾನೀಯಗಳು, ಐಸ್ಕ್ರೀಂ, ಬೇಕರಿ ಪದಾರ್ಥಗಳ ಸೇವನೆ ಬೇಡ. ತುಪ್ಪದ ಬಳಕೆಯೂ ಮಿತವಾಗಿರಲಿ. ನಡಿಗೆ ಮತ್ತು ಪ್ರಾಣಾಯಾಮ ಒಳ್ಳೆಯದು. ರಾತ್ರಿ ಊಟ ಹಾಗೂ ನಿದ್ದೆಗೆ ಎರಡು ಗಂಟೆ ಅಂತರವಿರಲಿ. ತರಕಾರಿ, ಸೊಪ್ಪು, ಮೊಳಕೆಕಾಳು, ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಲು ಹೇಳಿ.

ಆಪ್ತ ವಿಭಾಗಕ್ಕೆ ಪ್ರಶ್ನೆ ಕಳಿಸುವವರು ವಿಜಯವಾಣಿ ಲಲಿತಾ ಪುರವಣಿಗೆ ಕಳುಹಿಸಿ.

Leave a Reply

Your email address will not be published. Required fields are marked *

Back To Top