Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಅರುಣಾಚಲದಿಂದ ಹೋದೆಯಾ ಚೀನೀ ಪಿಶಾಚಿ ಅಂದರೆ…

Wednesday, 19.07.2017, 3:03 AM       No Comments

| ಪ್ರೇಮಶೇಖರ

ಭಾರತೀಯ ಮತ್ತು ಚೀನೀ ಸೇನೆಗಳು ಕಳೆದೊಂದು ತಿಂಗಳಿಂದಲೂ ಎದುರುಬದುರಾಗಿ ನಿಂತಿರುವ ದೊಕ್ಲಮ್ ಪ್ರದೇಶದ ದೊಕೊ ಲಾ ಕಣಿವೆಯಲ್ಲಿ ಈ ಕ್ಷಣಕ್ಕೆ ಏನು ನಡೆಯುತ್ತಿದೆಯೆಂದು ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ. ಗೊತ್ತಾಗದಂತೆ ಎರಡೂ ದೇಶಗಳು ಎಚ್ಚರಿಕೆ ವಹಿಸುತ್ತಿವೆ. ಭೂತಾನ್​ಗೆ ಸೇರಿದ ನೆಲದಲ್ಲಿ ಚೀನೀ ಸೇನೆ ರಸ್ತೆ ನಿರ್ಮಾಣ ಮಾಡಲು ಹೋಗಿ ಮೂರೂ ದೇಶಗಳ ಗಡಿಗಳು ಸಂಧಿಸುವ ಪ್ರದೇಶದಲ್ಲಿನ ವಸ್ತುಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಹೊರಟಿದೆ, ಅದನ್ನು ತಡೆಗಟ್ಟಲು ತನ್ನ ಸೇನೆಯನ್ನು ಕಳುಹಿಸಿರುವುದಾಗಿ ಭಾರತ ಅಧಿಕೃತ ಹೇಳಿಕೆಗಳ ಮೂಲಕ ಜಗತ್ತಿಗೆ ಹೇಳಿದೆ. ಇದಕ್ಕೆ ವಿರುದ್ಧವಾಗಿ, ತನ್ನ ಮತ್ತು ಭೂತಾನ್ ನಡುವಿನ ವಿವಾದಿತ ಪ್ರದೇಶಕ್ಕೆ ಭಾರತ ಅನಗತ್ಯವಾಗಿ ತನ್ನ ಸೇನೆ ಕಳುಹಿಸಿ ಪರಿಸ್ಥಿತಿಯನ್ನು ಹದಗೆಡಿಸಿದೆ ಎಂದು ಚೀನಾ ಹೇಳುತ್ತಿದೆ. ಎರಡೂ ದೇಶಗಳ ಸಮೂಹ ಮಾಧ್ಯಮಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಚೀನೀ ಸರ್ಕಾರದ ಕಡುನಿಯಂತ್ರಣದಲ್ಲಿರುವ ‘ಗ್ಲೋಬಲ್ ಟೈಮ್್ಸ’ ಮತ್ತು ‘ಪೀಪಲ್ಸ್ ಡೈಲಿ’ ಪತ್ರಿಕೆಗಳು ಭಾರತವನ್ನು, ಭಾರತೀಯ ಸೇನೆಯನ್ನು ಉಗ್ರವಾಗಿ ಟೀಕಿಸುವ, ಭಾರತೀಯರನ್ನು ಮಾನಸಿಕವಾಗಿ ಧೃತಿಗೆಡಿಸುವ ಸುದ್ದಿಗಳನ್ನು, ವಿಶ್ಲೇಷಣೆಗಳನ್ನು ಪ್ರಕಟಿಸುವುದನ್ನು ದಿನನಿತ್ಯದ ಕಾರ್ಯಕ್ರಮವನ್ನಾಗಿಸಿಕೊಂಡಿವೆ. ದೆಹಲಿ (ಕೇಂದ್ರದಲ್ಲಿ)ಯಲ್ಲೀಗ ಬಿಜೆಪಿ ಸರ್ಕಾರವಿದೆ ಎನ್ನುವ ಏಕೈಕ ಕಾರಣಕ್ಕೆ ಭಾರತದ ವಿರುದ್ಧ ಯಾರು ಏನು ಹೇಳಿದರೂ ಅದು ಸತ್ಯ ಹರಿಶ್ಚಂದ್ರನ ಬಾಯಿಂದ ಬಂದ ಮಾತುಗಳು ಎಂದು ನಂಬುವ ನಮ್ಮ ಕೆಲ ಎಡ ವಿಚಾರವಾದಿಗಳು ಚೀನೀ ಪತ್ರಿಕೆಗಳ ಸುದ್ದಿಗಳನ್ನು ಮತ್ತಷ್ಟು ತಿರುಚಿ ಹರಡುತ್ತ ನಾಲಿಗೆ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ನಮ್ಮಲ್ಲಿನ ಕೆಲ ಸುದ್ದಿವಾಹಿನಿಗಳು ಭಾರತೀಯ ಮತ್ತು ಚೀನೀ ಸೈನಿಕರು ಪರಸ್ಪರರನ್ನು ತಳ್ಳಾಡುವ ವಿಡಿಯೋಗಳನ್ನು ಮತ್ತೆ ಮತ್ತೆ ಪ್ರದರ್ಶಿಸುತ್ತ ಇನ್ನೇನು ಯುದ್ಧ ಆರಂಭವಾಗಿಯೇಬಿಟ್ಟಿತು ಎಂಬಂತೆ ‘ಒಂದು ತಿಂಗಳಿಂದಲೂ’ ಆಡುತ್ತಿವೆ. ಆದರೆ, ಲಭ್ಯ ಮಾಹಿತಿಗಳ ಪ್ರಕಾರ ಎರಡೂ ಸೇನೆಗಳು ಒಂದನ್ನೊಂದು ಸಂಧಿಸಿಲ್ಲ, ತಮ್ಮ ನಡುವೆ ಸುಮಾರು ಐನೂರು ಮೀಟರ್​ಗಳ ಅಂತರ ಕಾಪಾಡಿಕೊಂಡಿರುವ ಅವು ಆ ಕ್ಷಣದ ತಂತಮ್ಮ ಅಭಿಪ್ರಾಯ, ಅನುಮಾನ, ಆತಂಕಗಳನ್ನು ಪರಸ್ಪರರಿಗೆ ತಲುಪಿಸುತ್ತಿರುವುದು ಧ್ವನಿವರ್ಧಕಗಳ ಮೂಲಕ. ಸುದ್ದಿಬಾಕ ಭಾರತೀಯ ವಾಹಿನಿಗಳು ತೋರಿಸುತ್ತಿರುವ ವಿಡಿಯೋ ಬೇರಾವುದೋ ಸಮಯದಲ್ಲಿ, ಬೇರೆಲ್ಲೋ ನಡೆದ ಮುಖಾಮುಖಿ.

ಚೀನಾ ಕುತಂತ್ರ: ಈ ನಡುವೆ ಚೀನಾ ಸರ್ಕಾರ ಬೀಜಿಂಗ್​ನಲ್ಲಿರುವ ತನ್ನ ಹೊರತಾಗಿನ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಇತರ ನಾಲ್ಕು ಕಾಯಂ ಸದಸ್ಯರಾಷ್ಟ್ರಗಳಾದ ಅಮೆರಿಕ, ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್ ಗಳ ರಾಯಭಾರಿಗಳ ವಿಶೇಷ ಸಭೆ ಕರೆದು ಭಾರತದೊಂದಿಗಿನ ಪ್ರಸಕ್ತ ಸಮಸ್ಯೆಯ ಬಗ್ಗೆ ತನ್ನ ನಿಲುವನ್ನು ಅರುಹಿರುವುದಾಗಿ ವರದಿಯಾಗಿದೆ. ಕಳೆದವಾರ ನಡೆದ ಈ ಸಭೆಯಲ್ಲಿ ತನ್ನ ಸೇನೆ ಸಂಯಮ ವಹಿಸುತ್ತಿರುವುದಾಗಿಯೂ ಆದರೆ ಈ ಸಂಯಮ ಅನಿರ್ದಿಷ್ಟ ಕಾಲದವರೆಗೆ ಮುಂದುವರಿಯುವುದಿಲ್ಲವೆಂದೂ ಚೀನಾ ನಾಲ್ಕು ಮಹಾಶಕ್ತಿಗಳಿಗೆ ತಿಳಿಸಿದೆಯಂತೆ. ಅಂದರೆ ಇದು ಭಾರತದ ವಿರುದ್ಧ ತಾನು ಸಧ್ಯದಲ್ಲೇ ಯುದ್ಧಕ್ಕೆ ಹೊರಡಲಿದ್ದೇನೆ ಎಂದು ಚೀನಾ ನೀಡುತ್ತಿರುವ ಸೂಚನೆ! ಹಾಗೆಯೇ ಅರ್ಥೈಸಿರುವ ಒಂದು ಮಹಾಶಕ್ತಿಯ ರಾಯಭಾರಿ ಪರಿಸ್ಥಿತಿಯ ಗಂಭೀರತೆಯನ್ನು ಬೀಜಿಂಗ್​ನಲ್ಲಿರುವ ಭಾರತೀಯ ರಾಯಭಾರಿಗೆ ತಿಳಿಸಿ ದ್ದಾರಂತೆ. ಈ ನಡುವೆ, ಭಾರತದ ಮೇಲೆ ಚೀನಾ ಎರಗಿ ಹಣ್ಣುಗಾಯಿ ನೀರುಗಾಯಿ ಮಾಡಿಬಿಡಬೇಕೆಂದೂ, ಆ ಮೂಲಕ ತಮ್ಮೆಲ್ಲ ಕನಸುಗಳೂ ನನಸಾಗಬೇಕೆಂದೂ ಪಾಕಿಸ್ತಾನಿಯರು ಆಸೆಗಣ್ಣಿನಿಂದ ಕಾಯತೊಡಗಿದ್ದಾರೆ. ಅವರದೊಂದು ಆತುರಗೆಟ್ಟ ಸುದ್ದಿವಾಹಿನಿ ನಮ್ಮ ಎಡಪಂಥೀಯರಿಗಿಂತಲೂ ಎರಡು ಹೆಜ್ಜೆ ಮುಂದೆ ಹೋಗಿ, ಇದೇ ಸೋಮವಾರ ಚೀನಿ ಸೇನೆ ಭಾರತೀಯ ಸೇನೆಯ ಮೇಲೆ ರಾಕೆಟ್ ದಾಳಿ ಎಸಗಿದೆಯೆಂದೂ, ಅದರಲ್ಲಿ 158 (ನಿಖರ ಸಂಖ್ಯೆ!) ಭಾರತೀಯ ಸೈನಿಕರು ಮೃತಪಟ್ಟಿರುವರೆಂದೂ ವರದಿ ಮಾಡಿದೆ. ಅಂತೂ ಸುಳ್ಳುಗಳ ಕಾರ್ಖಾನೆಗಳು ಓವರ್​ಟೈಂ ಕೆಲಸ ಮಾಡುತ್ತಿವೆ! ಇವುಗಳ ಸುಳ್ಳುಗಳ ಅಬ್ಬರದಲ್ಲಿ ಬಲಿಪಶುವಾಗಿಹೋಗಿರುವುದು ಸತ್ಯ. ಅದೇನೆಂದು ಈಗ ನೋಡೋಣ.

ಗಡಿ ಕ್ಯಾತೆ: ವಾಸ್ತವವಾಗಿ ದೊಕ್ಲಮ್ ಚೀನಾ ಮತ್ತು ಭೂತಾನ್​ಗಳ ನಡುವಿನ ವಿವಾದಿತ ಪ್ರದೇಶ. ಇದಿರುವುದು ಚುಂಬಿ ಕಣಿವೆಯ ದಕ್ಷಿಣ ತುದಿಯಲ್ಲಿ. ಇದೇಕೆ ವಿವಾದಿತವಾಗಿದೆಯೆಂದರೆ ಭಾರತ ಚೀನಾ ಹಾಗೂ ಭೂತಾನ್ ಮೂರೂ ದೇಶಗಳ ಗಡಿ ಒಂದುಗೂಡುವ ಸ್ಥಳ ಯಾವುದು ಎನ್ನುವುದರ ಬಗ್ಗೆ ಚೀನಾ ಮತ್ತು ಭೂತಾನ್​ಗಳ ನಡುವೆ ಒಮ್ಮತ ಇಲ್ಲ. ದೊಕೊ ಲಾ ಕಣಿವೆಗೆ ನಾಲ್ಕು ಕಿಲೋಮೀಟರ್ ಉತ್ತರದಲ್ಲಿರುವ ಬತಂಗ್ ಲಾ ಮೂರೂ ದೇಶಗಳ ನಡುವಿನ ಗಡಿಗಳು ಸಂಧಿಸುವ ಸ್ಥಳ ಎಂದು ಭೂತಾನ್ ಹೇಳಿದರೆ, ದೊಕೊ ಲಾಗೆ ಎರಡೂವರೆ ಕಿಲೋಮೀಟರ್ ದಕ್ಷಿಣದಲ್ಲಿರುವ ಗಿಂಪೋಚಿ ಶಿಖರವೇ ಸಂಧಿಸ್ಥಳ ಎಂದು ಚೀನಾ ವಾದಿಸುತ್ತಿದೆ. ಇದಲ್ಲದೇ ಇನ್ನೂ ಮೂರು ಕಡೆ ಈ ಎರಡು ದೇಶಗಳ ನಡುವೆ ವಿವಾದವಿದೆ. ಈ ಕುರಿತಾಗಿ ಎರಡೂ ದೇಶಗಳ ನಡುವೆ ಇದುವರೆಗೆ ಇಪ್ಪತ್ತನಾಲ್ಕು ಸುತ್ತಿನ ಮಾತುಕತೆಗಳಾಗಿವೆ. ಆದರೆ ಅವ್ಯಾವುವೂ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಲ್ಲ. ಹೀಗಾಗಿ, ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೆ ಯಾವೊಂದು ದೇಶವೂ ಏಕಪಕ್ಷೀಯವಾಗಿ ವಸ್ತುಸ್ಥಿತಿಯನ್ನು ಬದಲಾಯಿಸುವ ಕ್ರಮ ಕೈಗೊಳ್ಳಬಾರದೆಂದೂ ಎರಡೂ ದೇಶಗಳು 1988 ಹಾಗೂ 1998ರಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿವೆ. ಹೀಗೆ ಒಪ್ಪಂದವಿರುವಾಗ, ವಿವಾದಿತ ಪ್ರದೇಶದಲ್ಲಿ ಚೀನಾ ಸೇನಾ ಅನುಕೂಲಕ್ಕಾಗಿ ರಸ್ತೆ ನಿರ್ವಿುಸಹೊರಟಿರುವುದು ವಸ್ತುಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಕ್ರಮವಲ್ಲದೇ ಬೇರೇನಲ್ಲ. ಅಲ್ಲದೇ, ಈ ಪ್ರದೇಶದಲ್ಲಿ ಮೂರೂ ಗಡಿಗಳು ಸಂಧಿಸುವ ಸ್ಥಳದ ಬಗ್ಗೆ ಚೀನಾ ಮತ್ತು ಭಾರತದ ನಡುವೆ ಯಾವುದೇ ತಕರಾರು ಉಂಟಾದಲ್ಲಿ ಅದನ್ನು ಮೂರನೆಯ ದೇಶದ (ಅಂದರೆ ಭೂತಾನ್) ಜತೆ ಸಮಾಲೋಚಿಸಿ ಇತ್ಯರ್ಥಗೊಳಿಸಬೇಕೆಂದೂ, ಯಾವ ದೇಶವೂ ಏಕಪಕ್ಷೀಯವಾಗಿ ಏನೂ ಮಾಡಬಾರದೆಂದೂ ನವದೆಹಲಿ ಮತ್ತು ಬೀಜಿಂಗ್ ನಡುವೆಯೂ ತೀರಾ ಇತ್ತೀಚೆಗೆ ಅಂದರೆ 2012ರಲ್ಲಿ ಒಪ್ಪಂದವಾಗಿದೆ. ಪ್ರಸಕ್ತ ತಕರಾರು ಆರಂಭವಾದಂದಿನಿಂದಲೂ ಚೀನಾ ಈ ಒಪ್ಪಂದಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ! ಇದೆಲ್ಲದರ ಅರ್ಥ ಚೀನಾ ಒಪ್ಪಂದಗಳನ್ನು ಉಲ್ಲಂಘಿಸಿದೆ ಎನ್ನುವುದು ಸ್ಪಷ್ಟ.

ಕುಟಿಲ ಯೋಜನೆ: ದೊಕ್ಲಮ್ ಪ್ರಸ್ಥಭೂಮಿಯ ಮೇಲೆ ಚೀನಾ ಕಣ್ಣಿಟ್ಟದ್ದು ಇಂದಲ್ಲ. ಚೀನಾ ಸಾಮಾನ್ಯವಾಗಿ ನೆರೆರಾಷ್ಟ್ರಗಳ ನೆಲದ ಮೇಲೆ ತನ್ನ ಅಧಿಕಾರ ಸ್ಥಾಪಿಸಲು ಹಲವು ಹಂತಗಳ ಕುಟಿಲ ಯೋಜನೆ ರೂಪಿಸುತ್ತದೆ. ಮೊದಲಿಗೆ ಅದು ಅಮಾಯಕ ನೆರೆರಾಷ್ಟ್ರದ ಗಮನ ಅತ್ತ ಇಲ್ಲದಾಗ ತಾನು ಕಣ್ಣು ಹಾಕಿದ ಗಡಿಪ್ರದೇಶದಲ್ಲಿ ಕಾಲುದಾರಿಯೊಂದನ್ನು ನಿರ್ವಿುಸುತ್ತದೆ. ನಂತರ ಅದನ್ನು ಸಣ್ಣ ಸೇನಾವಾಹನಗಳು ಸಂಚರಿಸುವ ಹಂತಕ್ಕೆ ತರುತ್ತದೆ. ಆಗ ನೆರೆರಾಷ್ಟ್ರ ಪ್ರಶ್ನಿಸಿದಾಗ ಆ ಪ್ರದೇಶ ಲಾಗಾಯ್ತಿನಿಂದಲೂ ತನ್ನದೇ ಆಗಿತ್ತೆಂದೂ ವಾದಿಸತೊಡಗುತ್ತದೆ. ಜತೆಗೇ, ಕಾಲುದಾರಿಯ ಮೇಲೆ ಕಾಂಕ್ರೀಟ್ ಹರಡಿ ಸುವ್ಯವಸ್ಥಿತ ರಸ್ತೆ ನಿರ್ವಿುಸುವತ್ತ, ಆ ಮೂಲಕ ಆ ಪ್ರದೇಶದಲ್ಲಿ ತನ್ನ ಸೇನಾ ಸ್ಥಿತಿ ಮಜಬೂತು ಮಾಡಿಕೊಳ್ಳುವತ್ತ ದಾಪುಗಾಲಿಡುತ್ತದೆ. ಭಾರತ, ವಿಯೆಟ್ನಾಂ, ಲಾವೋಸ್, ಮ್ಯಾನ್ಮಾರ್, ಕಜಾಕಿಸ್ತಾನ್ ಜತೆಗಿನ ಗಡಿವಿವಾದಗಳಲ್ಲಿ ಚೀನಾ ಇದು ವರೆಗೂ ಅನುಸರಿಸಿಕೊಂಡು ಬಂದದ್ದು ಇದೇ ನೀತಿ. ಅದನ್ನೇ ಈಗ ಭೂತಾನ್ ಜತೆಗೂ ಮಾಡಹೊರಟಿದೆ. ಮೊದಲಿಗೆ ಅದು ಈ ಪ್ರದೇಶದಲ್ಲಿ ತನ್ನ ಸೇನಾ ಸ್ಥಿತಿಯನ್ನು ವೃದ್ಧಿಸಿಕೊಳ್ಳಲು ಪ್ರಾರಂಭಿಸಿದ್ದು 1980ರ ದಶಕದ ಅಂತ್ಯದಲ್ಲಿ. ಆ ಸಮಯವನ್ನೇ ಚೀನಾ ಆಯ್ದುಕೊಂಡದ್ದೇಕೆ ಎನ್ನುವುದೊಂದು ಕುತೂಹಲಕರ ಕಥೆ.

ಭೂತಾನ್ ಮೇಲೆ ಕಣ್ಣು: 1986ರ ಬೇಸಿಗೆಯಲ್ಲಿ ಅರುಣಾಚಲ ಪ್ರದೇಶ ಗಡಿಯ ಸೊಮ್ೊರಾಂಗ್ ಚು ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿತು. ಪ್ರತಿಯಾಗಿ ಭಾರತೀಯ ಸೇನೆ ತನಗೆ ಅನುಕೂಲವೆನಿಸಿದ ಪ್ರದೇಶಗಳಲ್ಲಿ ಚೀನೀ ಸೇನೆಗೆ ಸವಾಲೊಡ್ಡಿತು. ಒಂದೂಕಾಲು ವರ್ಷಗಳವರೆಗೆ ಸಾಗಿದ ಈ ಮುಖಾಮುಖಿಯಲ್ಲಿ ಎರಡೂ ದೇಶಗಳ ಒಂದು ಲಕ್ಷ ಸೈನಿಕರು ಎದುರುಬದುರಾಗಿ ನಿಂತಿದ್ದರು. ಆಗ ಘಟಿಸಿದ ಸಣ್ಣಪ್ರಮಾಣದ ಕದನಗಳ ಸರಣಿಯಲ್ಲಿ ಚಾಣಾಕ್ಷ ಜನರಲ್ ಸುಂದರ್​ಜೀ ದಂಡನಾಯಕತ್ವದ ಭಾರತೀಯ ಸೇನೆ ಮೇಲುಗೈ ಸಾಧಿಸಿತು. ಈ ಅಘೊಷಿತ ಯುದ್ಧದಲ್ಲಿ ನಮ್ಮ ಕಡೆಯ ಸಾವುನೋವಿನ ಸಂಖ್ಯೆಯ ಬಗ್ಗೆ ಮಾಹಿತಿ ಲಭ್ಯವಿಲ್ಲ. ಚೀನೀ ಸಾವುನೋವುಗಳ ಬಗ್ಗೆಯೂ ಏನೂ ಅಧಿಕೃತ ಮಾಹಿತಿ ಇಲ್ಲ. ಆದರೆ ಒಂದೇ ದಿನ ಸುಮಾರು ಇನ್ನೂರು ಮೃತ ಸೈನಿಕರ ದೇಹಗಳನ್ನೂ, ಅದಕ್ಕಿಂತಲೂ ಹೆಚ್ಚಿನ ಗಾಯಾಳುಗಳನ್ನೂ ಚೀನೀ ಸೇನೆ ಗಡಿಯಿಂದ ಲಾಸಾ ಪಟ್ಟಣದ ಆಸ್ಪತ್ರೆಗಳಿಗೆ ತಂದಿತೆಂದು ಆಗ ಅಲ್ಲಿದ್ದ ನಾರ್ವೆಯ ತಂಡವೊಂದು ವರದಿ ಮಾಡಿತು. ಇದರ ಹೊರತಾಗಿ ಮತ್ತಾವ ಮಾಹಿತಿಯೂ ಇಲ್ಲ. ಅಂತಿಮವಾಗಿ ಹಿಮ್ಮೆಟ್ಟಿದ ಚೀನೀ ಸೇನೆ ಭಾರತದೊಡನೆ ಸಂಬಂಧವೃದ್ಧಿಗೆ ಉತ್ಸುಕತೆ ತೋರಿತು. ಪ್ರಧಾನಿ ರಾಜೀವ್ ಗಾಂಧಿಯವರನ್ನು ಬೀಜಿಂಗ್​ಗೆ ಆಹ್ವಾನಿಸಿತು. ಮುಂದುವರಿದ ಮಾತುಕತೆಗಳ ಪರಿಣಾಮವಾಗಿ, 1993ರಲ್ಲಿ, ಪಿ ವಿ. ನರಸಿಂಹರಾವ್ ಕಾಲದಲ್ಲಿ ಎರಡೂ ದೇಶಗಳ ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿಬಿತ್ತು. ಹೀಗೆ ಮಾತುಕತೆ ನಡೆಸುತ್ತಲೇ ಚೀನಾ ರಹಸ್ಯವಾಗಿ ತನಗನುಕೂಲವಾಗಿದ್ದ ದೊಕ್ಲಮ್ ಪ್ರದೇಶದತ್ತ ಮುನ್ನುಗ್ಗತೊಡಗಿತು. ಅರುಣಾಚಲ ಗಡಿಯಲ್ಲಿ ಇನ್ನು ತನ್ನ ಆಟ ನಡೆಯದೆಂದು, 1987ರ ಭಾರತ 1962ರ ಭಾರತ ಅಲ್ಲವೆಂದೂ ಅನುಭವದ ಮೂಲಕ ಅರಿತ ಕುಟಿಲ ಚೀನಾ ಭಾರತವನ್ನು ಕೆಣಕಲು ಹೋಗದೇ, ಬಲಹೀನ ಭೂತಾನ್​ಗೆ ಸೇರಿದ ದೊಕ್ಲಮ್ ಮೇಲೆ ಕಣ್ಣು ಹಾಕುವುದರ ಮೂಲಕ ಭಾರತದ ವಿರುದ್ಧ ಜಾಲ ಹೆಣೆಯುವ ಯೋಜನೆ ರೂಪಿಸಿತು. ಚೀನೀ ಯೋಜನೆ ಭೂತಾನ್ ಹಾಗೂ ಭಾರತಕ್ಕೆ ಹೇಗೆ ಮಾರಕವಾಗಬಹುದು ಎನ್ನುವುದನ್ನು ತಿಳಿಯುವ ಮೂಲಕ ಚೀನಾಗೆ ದೊಕ್ಲಮ್ ಮುಖ್ಯವೆನಿಸಿದ ಬಗೆಯನ್ನು ಅರಿಯಬಹುದು.

ಆಯಕಟ್ಟಿನ ಚುಂಬಿ ಕಣಿವೆಗೆ ಅಂಟಿಕೊಂಡಿರುವ ದೊಕ್ಲಮ್ ಪ್ರದೇಶದಲ್ಲಿ ನೆಲೆ ನಿಂತ ಯಾವುದೇ ವೈರಿ ಸೇನೆ ಭಾರತ ಮತ್ತು ಭೂತಾನ್ ನಡುವಿನ ಪ್ರಮುಖ ವ್ಯಾಪಾರ ಮಾರ್ಗದ ಮೇಲೆ ಫಿರಂಗಿ ದಾಳಿ ಎಸಗಲು ಸಮರ್ಥವಾಗುತ್ತದೆ. ಜತೆಗೇ, ಝುಂಪೇರಿ ಬೆಟ್ಟಸಾಲಿನ ನೆತ್ತಿ ಅದರ ಕೈಗೆ ದಕ್ಕುವುದರಿಂದ ಅಲ್ಲಿಂದ ಇಳಿಜಾರಾಗಿ ಸಾಗುವ ನೈರುತ್ಯ ಭೂತಾನ್ ಹಾಗೂ ಅದರಾಚೆಯ ಭಾರತದ ಸಿಲಿಗುರಿ ಕಾರಿಡಾರ್ ಮೇಲೆ ಬೇಕೆಂದಾಗ ಎರಗಲು ಸಮರ್ಥವಾಗುತ್ತದೆ. ಅಂದರೆ ಚೀನಾ ತನ್ನ ಹಳೆಯ ಯೋಜನೆಯಂತೆ ಚುಂಬಿ ಕಣಿವೆಗಿಳಿದು, ದೊಕ್ಲಮ್ ಪ್ರಸ್ಥಭೂಮಿಯೇರಿ ಬಂದು ಪೂರ್ವೇತ್ತರ ರಾಜ್ಯಗಳನ್ನು ಭಾರತದಿಂದ ಕತ್ತರಿಸಿಬಿಡುವ ಬೆದರಿಕೆಯೊಡ್ಡಿ ನಮ್ಮನ್ನು ಬ್ಲಾಕ್​ವೆುೕಲ್ ಮಾಡಲು ಸಮರ್ಥವಾಗುತ್ತದೆ.

ಯುಪಿಎಗೈದ ಪ್ರಮಾದ: ಆದರೆ ಈ ಅಪಾಯವನ್ನು 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅರಿಯುವಲ್ಲಿ ಸೋತಿತು. 2005ರಿಂದೀಚೆಗೆ ದೊಕ್ಲಮ್ ಪ್ರದೇಶದಲ್ಲಿ ಚೀನೀ ಚಟುವಟಿಕೆಗಳು ಏಕಾಏಕಿ ಹೆಚ್ಚಾದದ್ದು ಉಪಗ್ರಹಗಳು ತೆಗೆದ ಚಿತ್ರಗಳಲ್ಲಿ ಕಂಡುಬರುತ್ತದೆ. ಅಂದರೆ ನವದೆಹಲಿ ಯಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದದ್ದನ್ನು ಚೀನಾ ತನಗನುಕೂಲ ಎಂದು ಭಾವಿಸಿದಂತೆ ಕಾಣುತ್ತದೆ. ಅದರ ಎಣಿಕೆಯೆಂತೇ ನಮ್ಮ ಸರ್ಕಾರ ಭೂತಾನ್ ಪರವಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಶತಾಯಗತಾಯ ದೊಕ್ಲಮ್ ಅನ್ನು ಪಡೆದುಕೊಳ್ಳಲೇಬೇಕೆಂದು ಹವಣಿಸಿದ ಚೀನಾ, 270 ಚದರ ಕಿಲೋಮೀಟರ್ ವಿಸ್ತಾರದ ಆ ಪ್ರದೇಶವನ್ನು ತನಗೆ ಬಿಟ್ಟುಕೊಟ್ಟರೆ ಉತ್ತರದಲ್ಲಿ ಸರಿಸುಮಾರು ಅದರ ದುಪ್ಪಟ್ಟು ವಿಸ್ತೀರ್ಣದ ವಿವಾದಿತ ಪ್ರದೇಶ ಬಿಟ್ಟುಕೊಡುವುದಾಗಿ ಭೂತಾನ್ ಮುಂದೆ ಪ್ರಸ್ತಾಪ ಇಟ್ಟಿತು. ಪ್ರಾರಂಭದಲ್ಲಿ ಇದಕ್ಕೆ ಸಮ್ಮತಿಸುವಂತೆ ಕಂಡ ಭೂತಾನ್ ನಂತರ ಹಿಂದೆಗೆಯಿತು. ಆಗ ಭಾರತದ ಸಹಕಾರವಿಲ್ಲದೇ ಚೀನಾದ ಒತ್ತಡವನ್ನು ಭೂತಾನ್ ಎದುರಿಸಿದ್ದು ಹೇಗೆಂದು ಅಚ್ಚರಿಯಾಗುತ್ತದೆ.

ನಂತರ 2014ರಲ್ಲಿ ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಬಂದದ್ದೇ ಭೂತಾನ್ ಪರ ಗಟ್ಟಿಯಾಗಿ ನಿಂತದ್ದಲ್ಲದೇ ಚೀನೀ ಯೋಜನೆಗಳಿಗೆ ವಿರುದ್ಧವಾಗಿ ಎಲ್ಲೆಡೆ ಪ್ರತಿ-ಯೋಜನೆ ರೂಪಿಸತೊಡಗಿತು. ಗಡಿ ಪ್ರದೇಶಗಳಲ್ಲಿ ತನ್ನ ಸೇನಾಸ್ಥಿತಿ ಮಜಬೂತುಗೊಳಿಸಿಕೊಳ್ಳುವುದಲ್ಲದೆ ಅಮೆರಿಕ, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ ಹಾಗೂ ಇಸ್ರೇಲ್ ಜತೆಗೂಡಿ ತನ್ನ ರಾಜತಾಂತ್ರಿಕ ಹಾಗೂ ರಕ್ಷಣಾ ಸ್ಥಿತಿಗಳನ್ನು ಉನ್ನತಮಟ್ಟಕ್ಕೆ ಒಯ್ಯತೊಡಗಿತು. ಅದೆಲ್ಲದರ ಪರಿಣಾಮವಾಗಿ ಈಗ ಭಾರತ 1949 ಹಾಗೂ 2007ರ ಒಪ್ಪಂದಗಳ ಪ್ರಕಾರ ಭೂತಾನ್​ನ ರಕ್ಷಣೆ ತನ್ನ ಜವಾಬ್ದಾರಿ ಎನ್ನುವುದನ್ನು ಚೀನಾಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ದೊಕ್ಲಮ್ೆ ತನ್ನ ಸೇನೆ ಕಳುಹಿಸಿದೆ. ಚೀನಾ ಇದನ್ನು ನಿರೀಕ್ಷಿಸಿರಲಿಲ್ಲ. ಚೀನೀ ಪತ್ರಿಕೆಗಳ ದಿನನಿತ್ಯದ ಅರುಚಾಟ, ಈಗ ಚೀನೀ ಸರ್ಕಾರ ಒಡ್ಡುತ್ತಿರುವ ಯುದ್ಧದ ಬೆದರಿಕೆ ಎಲ್ಲವೂ ತೋರಿಸುವುದು ಭಾರತದ ಕ್ರಮದಿಂದ ಆ ದುರುಳ ದೇಶ ಅದೆಷ್ಟು ಹತಾಶವಾಗಿದೆ ಎನ್ನುವುದನ್ನು. ಅದಕ್ಕೆ ವಿರುದ್ಧವಾಗಿ ಭಾರತ ಮಾತಿನಲ್ಲಿ ಸಂಯಮ ತೋರುತ್ತ, ಸೇನಾಸ್ಥಿತಿಯಲ್ಲಿ ಒಳಗೊಳಗೇ ಗಣನೀಯ ತಯಾರಿ ಮಾಡಿಕೊಳ್ಳುತ್ತ, ತಾನು ಎಂತಹ ಪರಿಸ್ಥಿತಿಗೂ ತಯಾರು ಎನ್ನುವುದನ್ನು ಬೀಜಿಂಗ್​ಗೆ ಸ್ಪಷ್ಟವಾಗಿ ಮನಗಾಣಿಸುತ್ತಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top