Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಅರಸುತನ ತ್ಯಜಿಸಲು ಅಕಿಹಿಟೊಗೆ ಅವಕಾಶ

Saturday, 20.05.2017, 3:05 AM       No Comments

ಜಪಾನಿನ ಕ್ರೖೆಸಾಂತಮಮ್ ಸಿಂಹಾಸನ ತ್ಯಜಿಸಲು ಚಕ್ರವರ್ತಿ ಅಕಿಹಿಟೋ ಮುಂದಾಗಿದ್ದಾರೆ. ಜಪಾನಿನ ರಾಜಮನೆತನದ ಇತ್ತೀಚಿನ ಇನ್ನೂರು ವರ್ಷದ ಇತಿಹಾಸದಲ್ಲಿ ಇದೇ ಮೊದಲ ಸಲ ಚಕ್ರವರ್ತಿಯೊಬ್ಬರು ಪದತ್ಯಾಗ ಮಾಡಲು ಬಯಸಿರುವುದು. ಇದಕ್ಕೆ ಜಪಾನ್ ಸರ್ಕಾರ ಕೂಡ ಅನುಮತಿ ನೀಡಿದೆ.

ಸಾಮ್ರಾಟ ಅಕಿಹಿಟೋ(84) ಅವರ ಪದತ್ಯಾಗಕ್ಕೆ ಅನುವು ಮಾಡಿಕೊಡುವಂತಹ ಮಸೂದೆಗೆ ಜಪಾನ್ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಜಪಾನ್​ನ ಇತಿಹಾಸದಲ್ಲಿ ಇದೇ ಮೊದಲ ಸಲ ಇಂಥದ್ದೊಂದು ತೀರ್ವನಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಮಸೂದೆ ಇದೊಂದು ಸಲಕ್ಕೆ ಮಾತ್ರ ಅನ್ವಯವಾಗುವಂಥದ್ದು. ಜಪಾನಿನ ಇತ್ತೀಚಿನ 200 ವರ್ಷಗಳ ರಾಜ ಇತಿಹಾಸದಲ್ಲಿ ಈ ರೀತಿ ಪದತ್ಯಾಗ ಮಾಡುತ್ತಿರುವ ಮೊದಲ ಚಕ್ರವರ್ತಿ ಅಕಿಹಿಟೋ. ಇದಕ್ಕೂ ಮುನ್ನ 1817ರಲ್ಲಿ ಇದೇ ರೀತಿ ಒಬ್ಬ ಚಕ್ರವರ್ತಿ ಪದತ್ಯಾಗ ಮಾಡಿದ್ದರು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಕಳೆದ ವರ್ಷ ಆಗಸ್ಟ್​ನಲ್ಲಿ ಮೊದಲ ಬಾರಿ ಅಕಿಹಿಟೋ ಅವರು ಈ ಇಂಗಿತ ವ್ಯಕ್ತಪಡಿಸಿದ್ದರು. ‘ಇನ್ನು ಹೆಚ್ಚಿನ ಕಾಲ ನನ್ನ ಕರ್ತವ್ಯ ನಿಭಾಯಿಸಲು ಸಾಧ್ಯವಿಲ್ಲವೇನೋ.. ಆರೋಗ್ಯವೂ ಕೈ ಕೊಡುತ್ತಿದೆ. ಕರ್ತವ್ಯವನ್ನು ಅರ್ಧದಲ್ಲೇ ಕೈ ಬಿಡಬೇಕಾಗುತ್ತದೆಯೇ ಎಂಬ ಆತಂಕವೂ ಹುಟ್ಟಿಕೊಂಡಿದೆ’ ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದ ಅವರು ದೇಶಾದ್ಯಂತ ಅಚ್ಚರಿ ಮೂಡಿಸಿದ್ದರು. ಜಪಾನ್ ಕಾನೂನಿನಂತೆ ದೊರೆ ಅರ್ಧದಲ್ಲೇ ಅಧಿಕಾರ ತೊರೆಯುವಂತಿಲ್ಲ. ಆದರೆ ಅಕಿಹಿಟೋ ಅವರ ಆರೋಗ್ಯ ಗಮನಿಸಿದ ಜಪಾನ್ ಸರ್ಕಾರ ಕಾನೂನಿನಲ್ಲಿ ತಾತ್ಕಾಲಿಕ ಬದಲಾವಣೆ ತಂದಿದೆ. ಜಪಾನ್ ಸಚಿವ ಸಂಪುಟ ಈ ಮಸೂದೆಗೆ ಒಪ್ಪಿಗೆ ನೀಡಿದ್ದು, ಶೀಘ್ರವೇ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಅಲ್ಲಿ ಅದು ಚರ್ಚೆಗೆ ಒಳಗಾಗಿ ಅಲ್ಲಿನ ತೀರ್ವನಕ್ಕೆ ಅನುಗುಣವಾಗಿ ಚಕ್ರವರ್ತಿ ಪದತ್ಯಾಗದ ವಿಚಾರ ನಿರ್ಧಾರವಾಗುತ್ತದೆ. ಒಂದು ವರದಿ ಪ್ರಕಾರ, 2018ರ ಜನವರಿ 1ರಂದು ನಿಯೋಜಿತ ಯುವರಾಜ (ಕ್ರೌನ್ ಪ್ರಿನ್ಸ್) ನರುಹಿಟೋ(57)ಗೆ ಪಟ್ಟಾಭಿಷೇಕ ನಡೆಯಲಿದೆ.

ಸಾಗರಜೀವಶಾಸ್ತ್ರಜ್ಞ ದೊರೆ

ಜಪಾನ್ ದೊರೆ ಅಕಿಹಿಟೋಗೆ ಟೆನ್ನಿಸ್​ನಲ್ಲಿ ಭಾರಿ ಆಸಕ್ತಿ. ಇವರು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಸೀನಿಯರ್ ಜತೆಗೆ ಎರಡು ಬಾರಿ ಟೆನ್ನಿಸ್ ಆಡಿದ್ದರು ಮತ್ತು ಎರಡೂ ಬಾರಿಯೂ ಗೆದ್ದಿದ್ದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಅಕಿಹಿಟೋ ಸಾಗರ ಜೀವಶಾಸ್ತ್ರಜ್ಞ ಕೂಡಾ. ಅವರು ಗೋಬಿ ಫಿಶ್ ಬಗ್ಗೆ ಅಧ್ಯಯನಗಳನ್ನು ನಡೆಸಿದ್ದಾರೆ. ಹೀಗಾಗಿ ಒಂದು ಮೀನಿಗೆ ಅವರ ಹೆಸರನ್ನೇ ಇಡಲಾಗಿದೆ. ಎಕ್ಸಿರಿಯಾಸ್ ಅಕಿಹಿಟೋ ಎಂಬುದು ಮೀನಿನ ಹೆಸರು.

ಅಧಿಕಾರ ತ್ಯಜಿಸಿದರೆ ಅಕಿಹಿಟೋ ಸ್ಥಾನವೇನು?

ಅಕಿಹಿಟೋ ಅಧಿಕಾರದಿಂದ ಕೆಳಗಿಳಿದಲ್ಲಿ ಮುಂದಿನ ದಿನಗಳಲ್ಲಿ ಅವರ ಸ್ಥಾನವೇನಾಗಿರಲಿದೆ? ಇತಿಹಾಸದ ಪ್ರಕಾರ ಅಕಿಹಿಟೋರನ್ನು ಜೋಕೊ ಎಂದು ಕರೆಯಬೇಕು. ಇದರರ್ಥ ನಿವೃತ್ತ ರಾಜ. ಆದರೆ ಇದಕ್ಕೆ ಕೆಲ ಇತಿಹಾಸ ತಜ್ಞರು ಆಕ್ಷೇಪವ್ಯಕ್ತಪಡಿಸಿದ್ದು, ಜೋಕೋ ಬದಲಾಗಿ ಜೆನ್ ಟೆನ್ನೊ ಅಥವಾ ಮೊಟೋ ಟೆನ್ನೊ( ಮಾಜಿ ಅಥವಾ ಹಿಂದಿನ ರಾಜ) ಎಂದು ಕರೆಯಬೇಕೆಂದು ಒತ್ತಾಯಿಸಿದ್ದಾರೆ.

ಕಾನೂನು ಅಡ್ಡಿ

ಎರಡನೇ ವಿಶ್ವಯುದ್ಧದ ಬಳಿಕ ಅಮೆರಿಕ ರೂಪಿಸಿರುವ ಜಪಾನಿ ಕಾನೂನಿನಲ್ಲಿ ದೊರೆಯ ನಿಧನದ ಬಳಿಕವಷ್ಟೇ ಅವರ ಉತ್ತರಾಧಿಕಾರಿ ಚಕ್ರವರ್ತಿಯಾಗಬಹುದು. ಸಿಂಹಾಸನಾರೂಢ ಚಕ್ರವರ್ತಿ ಪದತ್ಯಾಗ ಮಾಡಬೇಕಾದರೆ, ಈ ಕಾನೂನಿನಲ್ಲಿ ಬದಲಾವಣೆ ಅವಶ್ಯ. ಇದರಲ್ಲಿ ಸರ್ಕಾರದ ತೀರ್ವನವೇ ಅಂತಿಮ. ಆದರೆ, ಜಪಾನಿನ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳಲ್ಲಿ ಈ ಬಗ್ಗೆ ಭಿನ್ನ ಅಭಿಪ್ರಾಯವಿದೆ.

ಜಪಾನ್ ಪ್ರಧಾನಿ ಶಿಂಜೋ ಅಬೆ ಸದ್ಯದ ಕಾನೂನಿನಲ್ಲಿ ಈಗಿನ ದೊರೆಗೆ ಅನ್ವಯಿಸುವಂತೆ ತಾತ್ಕಾಲಿಕ ಬದಲಾವಣೆ ತರಲು ಮುಂದಾಗಿದ್ದಾರೆ. ಅಬೆ ನೇತೃತ್ವದ ಪಕ್ಷಕ್ಕೆ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಇರುವ ಕಾರಣ, ಈ ಮಸೂದೆ ಯಾವುದೇ ಅಡೆತಡೆ ಇಲ್ಲದೆ ಅಂಗೀಕಾರವಾಗಲಿದೆ. ಇದಾದ ಬಳಿಕ, ಸಾಮ್ರಾಟರ ಪದತ್ಯಾಗದ ದಿನಾಂಕವನ್ನು ನಿರ್ಧರಿಸಲು ಸರ್ಕಾರಕ್ಕೆ ಮೂರು ವರ್ಷಗಳ ಕಾಲಾವಕಾಶವಿದೆ.

ಚಕ್ರವರ್ತಿ ಅಕಿಹಿಟೋ ಪ್ರವರ

ಕ್ರೖೆಸಾಂತಮಮ್ ರಾಜಪರಂಪರೆಯ ಇತಿಹಾಸ ಕ್ರಿ.ಪೂ.6ನೇ ಶತಮಾನದಿಂದ ಆರಂಭವಾಗುತ್ತದೆ. ಈ ಪರಂಪರೆಯ ಚಕ್ರವರ್ತಿಯಾಗಿ ಅಕಿಹಿಟೋ 1989ರಲ್ಲಿ ಅಧಿಕಾರ ಸ್ವೀಕರಿಸಿದರು. ಜಪಾನಿನಲ್ಲಿ ಸದ್ಯ ಸುಧಾರಣಾವಾದಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಅರಸುತನ ಚಾಲ್ತಿಯಲ್ಲಿದೆ. ಅಕಿಹಿಟೋ ಪಾಶ್ಚಾತ್ಯ ಸಂಸ್ಕೃತಿ ನೆರಳಿನಲ್ಲಿ ಬೆಳೆದಿದ್ದು, ಇಂಗ್ಲಿಷ್ ಭಾಷೆ ಕಲಿತಿದ್ದರು. ಪ್ರಜಾಸತ್ತಾತ್ಮಕ ಅರಸುತನವನ್ನು ಇಷ್ಟಪಟ್ಟವರು. ಒಂದರ್ಥದಲ್ಲಿ, ಅರಸುತನದ ಎಲ್ಲ ಸಂಪ್ರದಾಯಗಳನ್ನೂ ಮುರಿದವರು ಅವರು. ಜಪಾನ್ ದೊರೆಗೆ ರಾಜತಾಂತ್ರಿಕ ಅಧಿಕಾರ ಇಲ್ಲವಾದರೂ ವಿದೇಶಿ ಅತಿಥಿಗಳ ಸತ್ಕಾರ ಮುಂತಾದ ಕಾರ್ಯಗಳು ಅವರಿಗೆ ಸೀಮಿತ. ತಮ್ಮ ಕೆಲಸ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಬಂದಿರುವ ಅಕಿಹಿಟೋ ಎಂದರೆ ಜಪಾನ್ ಪ್ರಜೆಗಳಿಗೂ ಅಚ್ಚುಮೆಚ್ಚು. ಅಕಿಹಿಟೋ ಸಾಮಾನ್ಯರಲ್ಲಿ ಸಾಮಾನ್ಯರು. 2500 ವರ್ಷಗಳ ಸಂಪ್ರದಾಯವನ್ನು ಮುರಿದು ಮಿಚಿಕೋರನ್ನು ವರಿಸಿದ್ದರು. ಜಪಾನ್ ರಾಜವಂಶದಲ್ಲಿ ಬೇರೆ ರಾಜವಂಶದ ಹುಡುಗಿಯನ್ನೇ ವರಿಸುವುದು ಸಂಪ್ರದಾಯ. ಆದರೆ, ಟೆನ್ನಿಸ್ ಪ್ರೇಮಿಯಾದ ಅಕಿಹಿಟೋಗೆ ಟೆನ್ನಿಸ್ ಕೋರ್ಟ್​ನಲ್ಲಿ ಆಟಗಾರ್ತಿ ಮಿಚಿಕೋರ ಮೇಲೆ ಪ್ರೇಮಾಂಕುರವಾಗುತ್ತದೆ. ನಂತರ, ಅವರನ್ನೇ ವಿವಾಹವಾದರು. ಹೀಗಾಗಿ ಮಾಧ್ಯಮಗಳು ಇವರ ಪ್ರೀತಿಯನ್ನು ‘ಟೆನ್ನಿಸ್ ಕೋರ್ಟ್ ರೊಮ್ಯಾನ್ಸ್’ ಎಂದೇ ಹೇಳುತ್ತವೆ. ಅವರು ಕೆಲವರ್ಷಗಳ ಹಿಂದಷ್ಟೇ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡಾ ಕಾಡುತ್ತಿದೆ. ಹೀಗಾಗಿ ತಾವು ಅಧಿಕಾರದಿಂದ ಕೆಳಗಿಳಿಯಲು ಬಯಸುವುದಾಗಿ ಅಕಿಹಿಟೋ ಹೇಳಿಕೊಂಡಿದ್ದರು. ದೊರೆ ಆರೋಗ್ಯದ ಬಗ್ಗೆ ತಿಳಿದಿರುವ ಜನಸಾಮಾನ್ಯರು ಕೂಡಾ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಅಡ್ಡಿಯಾಗಿರುವುದು ಕಾನೂನು.

ಇತಿಹಾಸ ಹೇಳುವುದೇನು?

ಜಪಾನ್ ರಾಜವಂಶಕ್ಕೆ 2,700 ವರ್ಷಗಳಷ್ಟು ಸುದೀರ್ಘವಾದ ಇತಿಹಾಸವಿದೆ. ಇದಕ್ಕೂ ಮೊದಲು ಇಂತಹ ಪರಿಸ್ಥಿತಿ ಬಂದಿರಲೇ ಇಲ್ಲ ಎನ್ನುವ ಹಾಗಿಲ್ಲ. ಆದರೆ ಇದಕ್ಕೆ ಪರಿಹಾರವನ್ನೂ ಕಂಡುಕೊಂಡಿದ್ದರು ಆಗಿನವರು. ರಾಣಿಯಿಂದ ಪುತ್ರ ಸಂತಾನ ಪ್ರಾಪ್ತವಾಗಿಲ್ಲ ಎಂದಾದರೆ ರಾಜನಿಗೆ ಉಪಪತ್ನಿಯರನ್ನು ಇರಿಸಿಕೊಳ್ಳುವ ಅವರಿಂದ ಪುತ್ರನನ್ನು ಪಡೆದುಕೊಳ್ಳುವ ಕ್ರಮ ಚಾಲ್ತಿಯಲ್ಲಿತ್ತು. ಹೀಗಾಗಿ ಈ ಹಿಂದೆ ಇಂತಹ ಸಮಸ್ಯೆ ಹುಟ್ಟಿಕೊಂಡಿರಲಿಲ್ಲ. ವಿಶ್ವದ ರಾಜಮನೆತನಗಳಲ್ಲಿ ಕೆಲವದರಲ್ಲಿ ಮಾತ್ರ ಪುರುಷರಿಗೆ ಮಾತ್ರ ಅಧಿಕಾರ ಎಂಬ ನಿಯಮವಿದೆ. ಇಂತವುಗಳಲ್ಲಿ ಜಪಾನ್​ನ ಕ್ರೖೆಸಾಂತಮಮ್ ರಾಜಮನೆತನವೂ ಒಂದು. ನೆದರ್​ಲೆಂಡ್, ಬೆಲ್ಜಿಯಂ, ಸ್ವೀಡನ್, ನಾರ್ವೆ ಮತ್ತು ಸ್ಪೇನ್​ಗಳಲ್ಲಿ ಕಿರಿಯ ರಾಣಿಯರೇ ಅಧಿಕಾರಕ್ಕೇರಿದ್ದಾರೆ. ಜಪಾನ್ ರಾಜಮನೆತನ 125 ತಲೆಮಾರುಗಳನ್ನು ಕಂಡಿದೆ. ಈ ಸುದೀರ್ಘ ಅವಧಿಯಲ್ಲಿ 8 ಹುಡುಗಿಯರು ರಾಣಿಯರಾಗಿ ಅಧಿಕಾರ ನಡೆಸಿದ್ದರು. ಅದೂ ಆ ಅವಧಿಯಲ್ಲಿ ಪ್ರಾಪ್ತ ಯುವರಾಜ ಇರಲಿಲ್ಲ ಎಂಬ ಕಾರಣಕ್ಕೆ ಅವರು ವಯಸ್ಸಿಗೆ ಬರುವವರೆಗೆ ಮಾತ್ರ ಸಿಂಹಾಸನವೇರಲು ಅವಕಾಶ ಮಾಡಿಕೊಡಲಾಗಿತ್ತು. ಹೀಗೆ ಅಧಿಕಾರಕ್ಕೇರಿದ ರಾಣಿಯರು ರಾಜವಂಶದ ಹೊರಗಿನ ಪುರುಷನನ್ನು ವರಿಸುವಂತೆ ಇರಲಿಲ್ಲ. ಸಾಮಾನ್ಯರನ್ನು ವರಿಸಿ ಅವರಿಂದ ಮಕ್ಕಳಾದರೆ ಅವರಿಗೆ ರಾಣಿಯರಾಗುವ ಮಾನ್ಯತೆಯೇ ಇರುತ್ತಿರಲಿಲ್ಲ. ಹೀಗೆ ಅಧಿಕಾರಕ್ಕೇರಿದ ಕೊನೆಯ ರಾಣಿ ಗೋಸಾಕುರಮಾಚಿ. 1762ರಿಂದ 1770ರ ಅವಧಿಯಲ್ಲಿ ಗೋಸಾಕುರಮಾಚಿ ಜಪಾನ್ ಸಿಂಹಾಸನಕ್ಕೇರಿದ್ದಳು. ಆಕೆಯ ಸೋದರಳಿಯ ಸಿಂಹಾಸನಕ್ಕೇರಲು ಶಕ್ತನಾಗುತ್ತಿದ್ದಂತೆ ಆಕೆ ಅಧಿಕಾರದಿಂದ ಕೆಳಗಿಳಿದಿದ್ದಳು. ಆದರೆ ಕೆಲ ಇತಿಹಾಸತಜ್ಞರ ಪ್ರಕಾರ ಹಿಂದಿನಿಂದ ಬಂದಿದ್ದ ಜಪಾನಿ ಕಾನೂನಿನಲ್ಲಿ ಮಹಿಳೆಯರಿಗೂ ಅಧಿಕಾರವಹಿಸಿಕೊಳ್ಳುವ ಅವಕಾಶವಿತ್ತು. 7 ಮತ್ತು 8ನೇ ಶತಮಾನದಲ್ಲಿ ಈ ಕಾನೂನು ಜಾರಿಯಲ್ಲಿತ್ತು. ನಂತರ ಚೀನಾ ಸರ್ಕಾರದಿಂದ ಕೆಲ ನೀತಿ ನಿಯಮಗಳನ್ನು ಜಪಾನ್ ಎರವಲು ಪಡೆದುಕೊಂಡಿತು. ಇದರಲ್ಲಿ ಪುತ್ರನಿಗೆ ಮಾತ್ರ ಅಧಿಕಾರದ ಕಾನೂನು ಕೂಡಾ ಒಂದಾಗಿತ್ತು. ಆ ಬಳಿಕವಷ್ಟೇ ಜಪಾನಿನಲ್ಲಿ ರಾಜನೇ ಬರಬೇಕೆಂಬ ನಿಯಮ ರೂಪುಗೊಂಡಿತು ಎನ್ನುತ್ತಾರೆ ಇತಿಹಾಸ ತಜ್ಞರು. ಜಪಾನ್ ರಾಜಮನೆತನದ ಇತಿಹಾಸ ಗಮನಿಸಿದರೂ ಅದರಲ್ಲೂ ರಾಣಿಯರು ಅಧಿಕಾರ ನಡೆಸಿದ ಉಲ್ಲೇಖವಿದೆ. ಅದರಲ್ಲೂ ಜಪಾನ್​ನ ಪ್ರಥಮ ದೊರೆ ಜಿಮ್ಮು ಸೂರ್ಯದೇವತೆ ಅಮಾತೇರಸು ವಂಶಸ್ಥರೇ ಆಗಿದ್ದರು ಎಂಬುದು ಇತಿಹಾಸ.

ಸಾಮಾನ್ಯನ ವರಿಸಲಿರುವ ಯುವರಾಣಿ ಮಕೋ!

ಜಪಾನಿನ ರಾಜಮನೆತನದ ನಿಯಮಗಳ ಅನ್ವಯ ಯುವರಾಣಿ ಸಾಮಾನ್ಯನನ್ನು ವರಿಸಿದರೆ, ಆಕೆ ತನ್ನ ರಾಜಮನೆತನದ ಸುಖ ಸಂಪತ್ತನ್ನು ಬಿಟ್ಟು ಹೊರನಡೆಯಬೇಕಾಗುತ್ತದೆ. ಇಂತಹ ವಿರಳ ಸನ್ನಿವೇಶಕ್ಕೆ ಜಪಾನ್​ನ ನಿಯೋಜಿತ ಯುವರಾಜ ನರುಹಿಟೋರ ಸಹೋದರ ಫುಮಿಹಿಟೋರ ಮೊದಲ ಪುತ್ರಿ ಮಕೋ(25) ಉದಾಹರಣೆಯಾಗುತ್ತಿದ್ದಾರೆ. ಅವರು, ಹಳೆಯ ಸಹಪಾಠಿ ಕೈ ಕೊಮುರೋ ಎಂಬ ಕಾನೂನು ಪದವೀಧರರನ್ನು ಮುಂದಿನ ವರ್ಷ ವರಿಸಲಿದ್ದಾರೆ. ಈ ವಿಷಯ ಮೂರು ದಿನಗಳ ಹಿಂದಷ್ಟೆ ಅಧಿಕೃತವಾಗಿ ಬಹಿರಂಗವಾಗಿದೆ. ಇದರೊಂದಿಗೆ, ಮಕೋ ಅವರು ರಾಜಮನೆತನದ ಎಲ್ಲ ಸುಖ ಸಂಪತ್ತು, ಯುವರಾಣಿ ಪಟ್ಟ ಎಲ್ಲವನ್ನೂ ಬಿಟ್ಟು ಕೊಮುರೋ ಜತೆ ಸಾಮಾನ್ಯರಂತೆ ಬದುಕಬೇಕಾಗುತ್ತದೆ. ರಾಜಮನೆತನದ ಗಾತ್ರ ಕುಗ್ಗಿಸುವುದಕ್ಕಾಗಿ ಹಾಗೂ ವೆಚ್ಚ ತಗ್ಗಿಸುವುದಕ್ಕಾಗಿ ಇಂಪೀರಿಯಲ್ ಹೌಸ್ ಕಾನೂನು ಈ ನಿಯಮಗಳನ್ನು ಚಾಲ್ತಿಯಲ್ಲಿರಿಸಿದೆ. ಮಕೋ ವಿವಾಹದ ನಂತರ ರಾಜಮನೆತನದ ಸದಸ್ಯರ ಸಂಖ್ಯೆ 18ಕ್ಕೆ ಹಾಗೂ ಸ್ತ್ರೀಯರ ಸಂಖ್ಯೆ 13ಕ್ಕೆ ಇಳಿಕೆಯಾಗಲಿದೆ. ಇದಕ್ಕೂ ಮುನ್ನ 2005ರಲ್ಲಿ ಮಕೋ ಅವರ ಅತ್ತೆ ಸಯಾಕೋ(ಅಕಿಹಿಟೋರ ಏಕೈಕ ಪುತ್ರಿ) ಕೂಡ ಸಾಮಾನ್ಯನೊಬ್ಬನನ್ನು ವಿವಾಹವಾಗಿ ಅರಮನೆಯಿಂದ ಹೊರನಡೆದು, ಟೋಕಿಯೋದಲ್ಲಿ ಒಂದು ಬೆಡ್​ರೂಮ್ ಅಪಾರ್ಟ್ ಮೆಂಟ್​ನಲ್ಲಿ ಜೀವನ ನಡೆಸುತ್ತಿದ್ದಾರೆ.

ಜಪಾನಿಗೆ ರಾಣಿ ಬರುತ್ತಾಳಾ?

ಜಪಾನ್ ದೊರೆ ಅಕಿಹಿಟೋ ಅಧಿಕಾರದಿಂದ ಕೆಳಗಿಳಿಯುವ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಗರಿಗೆದರಿದೆ. ಕ್ರೖೆಸಾಂತಮಮ್ ರಾಜವಂಶದ ನಿಯಮಗಳ ಪ್ರಕಾರ ದೊರೆಯ ಮಗನೇ ಮುಂದಿನ ಉತ್ತರಾಧಿಕಾರಿ. ಅದರಂತೆ ಅಕಿಹಿಟೋರ ಹಿರಿಯ ಪುತ್ರ ನರುಹಿಟೋ ಯುವರಾಜನಾಗಿದ್ದಾರೆ. ನರುಹಿಟೋಗೆ ಒಬ್ಬ ಪುತ್ರಿ(ಐಕೊ) ಮಾತ್ರ ಇರುವುದು. ಆದರೆ ನರುಹಿಟೋ ನಂತರ ಯಾರು ಎಂಬ ಚರ್ಚೆ ಈಗಲೇ ಶುರುವಾಗಿದೆ. ಜಪಾನಿನ ಕಾನೂನಿನ್ವಯ ಹೆಣ್ಣು ಮಕ್ಕಳು ಸಿಂಹಾಸನ ಏರುವಂತಿಲ್ಲ. ಇದು ರಾಜಕೀಯ ಬಣ್ಣವೂ ಪಡೆದುಕೊಳ್ಳುತ್ತಿದ್ದು, ಕೆಲವರು ಗಂಡು ಮಕ್ಕಳಿಗೇ ಅಧಿಕಾರ ಹಸ್ತಾಂತರವಾಗಬೇಕೆಂದು ಹಲವರು ಪಟ್ಟು ಹಿಡಿದಿದ್ದಾರೆ. ಆದರೆ ಜನಸಾಮಾನ್ಯರು ಐಕೋಗೆ ಅಧಿಕಾರ ನೀಡುವ ಬಗ್ಗೆಯೂ ಆಸಕ್ತಿ ವ್ಯಕ್ತಪಡಿಸಿದ್ದು, ಜಪಾನ್​ಗೆ ರಾಣಿ ಬರುತ್ತಾಳೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸದ್ಯದ ಕಾನೂನಿನ ಪ್ರಕಾರ 15 ವರ್ಷದ ಐಕೋ ಸಿಂಹಾಸನವನ್ನು ಏರುವಂತಿಲ್ಲ. ಹಾಗಾದರೆ ಕ್ರೌನ್ ಪ್ರಿನ್ಸ್ ನರುಹಿಟೋರ ಸಹೋದರ ಅಕಿಶಿನೋರ 10 ವರ್ಷದ ಮಗ ಹಿಸಾಹಿಟೋ ಅಧಿಕಾರಕ್ಕೇರಬೇಕಾಗುತ್ತದೆ. ಆದರೆ, ಜಪಾನ್​ನ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿರುವ ಡೆಮಾಕ್ರಟಿಕ್ ಪಕ್ಷ ಮಹಿಳೆಯರಿಗೂ ಅಧಿಕಾರ ನಡೆಸಲು ಅವಕಾಶ ನೀಡುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು ಪಟ್ಟು ಹಿಡಿದಿದೆ.

ಐಕೋ ಮೇಲೆ ಹೆಚ್ಚುತ್ತಿದೆ ಒತ್ತಡ

ನರುಹಿಟೋ ಮತ್ತು ಮಸಾಕೋರ ಏಕೈಕ ಪುತ್ರಿ 15 ವರ್ಷದ ಐಕೋ ರಾಜಸಿಂಹಾಸನವೇರುತ್ತಾಳೆಯೇ ಎಂಬ ಊಹಾಪೋಹಗಳು ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಆಕೆಯ ಮೇಲೆ ಒತ್ತಡ ಹೆಚ್ಚುತ್ತಿದೆಯಂತೆ. ಇದು ತಾಯಿ ಮಸಾಕೋಗೆ ದೊಡ್ಡ ಸಮಸ್ಯೆಯಾಗಿದೆ. ಆಕೆ ರಾಜವಂಶ್ಥದ ಕುಡಿ ಎಂಬ ಕಾರಣಕ್ಕೆ ಇತ್ತೀಚೆಗೆ ಮಾಧ್ಯಮಗಳು ಐಕೋ ಮೇಲೆ ಹೆಚ್ಚಿನ ಗಮನಹರಿಸುತ್ತಿವೆ. ಅಲ್ಲದೆ ಅಕಿಹಿಟೋ ಅಧಿಕಾರದಿಂದ ಕೆಳಗಿಳಿಯುವ ಬಗ್ಗೆ ಹೇಳಿದ ಮೇಲಂತೂ ಆಕೆಯ ಬಗೆಗಿನ ಚರ್ಚೆಗಳೂ ಹೆಚ್ಚುತ್ತಲೇ ಇದ್ದು, ಆಕೆಯನ್ನು ಖಿನ್ನಳಾಗುವಂತೆ ಮಾಡಿದೆ. ಕಳೆದ ವರ್ಷ 2 ತಿಂಗಳ ಕಾಲ ಆಕೆ ಶಾಲೆಗೆ ಹೋಗದೆ ಮನೆಯಲ್ಲೇ ಇರುವಂತೆ ಆಗಿತ್ತು ಎಂದು ಮಸಾಕೋ ಹೇಳಿದ್ದಾರೆ. ಐಕೋ ಪ್ರಾಣಿಪ್ರಿಯಳಾಗಿದ್ದು, ಸುಮೋ ಕುಸ್ತಿಯ ಅಭಿಮಾನಿಯಾಗಿದ್ದಾಳೆ.

Leave a Reply

Your email address will not be published. Required fields are marked *

Back To Top