Friday, 20th April 2018  

Vijayavani

ಹಾಸನದಲ್ಲಿ ರೇವಣ್ಣ, ಮೈಸೂರಲ್ಲಿ ಜಿಟಿಡಿ- ದಿಗ್ಗಜರಿಂದ ನಾಮಪತ್ರ ಸಲ್ಲಿಕೆ- ಅಫಜಲ್​ಪುರದಲ್ಲಿ ಗುತ್ತೇದಾರ್​ಗೆ ಬಿಎಸ್​ವೈ ಸಾಥ್​        ಭಾಲ್ಕಿಯಲ್ಲಿ ಖಂಡ್ರೆ ಬಲ ಪ್ರದರ್ಶನ- ಲಿಂಗಸೂರಲ್ಲಿ ಎತ್ತಿನ ಬಂಡಿ ಮೆರವಣಿಗೆ- ಉಮೇದುವಾರಿಕೆಗೂ ಮುನ್ನ ಭರ್ಜರಿ ರೋಡ್​ ಶೋ        ಚಾಮುಂಡಿ ದರ್ಶನ.. ಸ್ವಗ್ರಾಮದ ದೇಗುಲದಲ್ಲೂ ನಮನ- ಕೋಟೆ ಆಂಜನೇಯನಿಗೂ ಸಿಎಂ ಪೂಜೆ- ಒಂದೇ ದಿನ ಸಿದ್ದು ಟೆಂಪಲ್​ರನ್​        ರೆಡಿಯಾಯ್ತು ಬಿಜೆಪಿ ಮೂರನೇ ಪಟ್ಟಿ- ಕೆಲವೇ ಹೊತ್ತಲ್ಲಿ ಕದನ ಕಲಿಗಳ ಹೆಸರು ಪ್ರಕಟ- ಜೆಡಿಎಸ್​​​ನಿಂದಲೂ ಇಂದು ಎರಡನೇ ಪಟ್ಟಿ ರಿಲೀಸ್        ಶಟರ್ ಮುರಿದು ಮೊಬೈಲ್ ದೋಚಿದ ಕಳ್ಳರು- ಮತ್ತಿಕೆರೆಯಲ್ಲಿ ಅಂಗಡಿ ರಾಬರಿ- ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ        ಸುಪ್ರೀಂ ಮುಖ್ಯನ್ಯಾಯಮೂರ್ತಿ ವಿರುದ್ಧ ವಿಪಕ್ಷಗಳು ಗರಂ- ಸಿಜೆಐ ವಿರುದ್ಧ 7 ಪಕ್ಷಗಳ ಮಹಾಭೀಯೋಗ ನಿರ್ಣಯ- ಉಪರಾಷ್ಟ್ರಪತಿ ಭೇಟಿ, ಮನವಿ ಸಲ್ಲಿಕೆ       
Breaking News

ಅರಳುವ ಹೂವು ಬಾಡದಿರಲಿ

Monday, 20.03.2017, 8:20 AM       No Comments

ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿದ್ದರೂ, ಅದರ ಕಣ್ಣಿಗೆ ಮಣ್ಣೆರಚಿ ಬಾಲಕಾರ್ವಿುಕ ಪದ್ಧತಿ ತಡೆಯಿಲ್ಲದೆ ಮುಂದುವರಿದಿರುವುದು ಗೊತ್ತಿರುವ ಸಂಗತಿಯೇ. ಈ ಪಿಡುಗಿನ ನಿವಾರಣೆಯ ಸಂಕಲ್ಪ ತೊಟ್ಟಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರು, 1986ರ ಬಾಲಕಾರ್ವಿುಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಕಲಂ 14(ಎ)ರ ಪರಿಣಾಮಕಾರಿ ಅನುಷ್ಠಾನಕ್ಕೆಂದು ಸುತ್ತೋಲೆ ಹೊರಡಿಸಿರುವುದು ಶ್ಲಾಘನೀಯ ಸಂಗತಿ. ಕಟ್ಟಡ ಕಾಮಗಾರಿ, ಅಗರಬತ್ತಿ ಕಾರ್ಖಾನೆ, ಹೋಟೆಲು, ವಾಹನ ಗ್ಯಾರೇಜು ಸೇರಿದಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಕೆಲವರು 14ರ ವಯೋಮಾನದೊಳಗಿನ ಮಕ್ಕಳನ್ನು ಅಕ್ರಮವಾಗಿ ದುಡಿಸಿಕೊಳ್ಳುತ್ತಿರುವುದು ಜಗಜ್ಜಾಹೀರು. ಇಂಥ ಪರಿಪಾಠಕ್ಕೆ 20 ಸಾವಿರ ರೂ. ದಂಡ ಮತ್ತು 1 ವರ್ಷ ಜೈಲುಶಿಕ್ಷೆ ವಿಧಿಸಲು ಈ ನೆಲದ ಕಾನೂನು ಅನುವುಮಾಡಿಕೊಟ್ಟಿದೆಯಾದರೂ, ಅದರ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದಾಗಿ ನಿರೀಕ್ಷಿತ ಫಲಿತ ದಕ್ಕಿಲ್ಲ, ಈ ಪಿಡುಗಿನ ಮೂಲೋತ್ಪಾಟನೆಯಾಗಿಲ್ಲ.

ಇದಕ್ಕೆ ಕಾನೂನಿನ ಅನುಷ್ಠಾನದ ಕೊರತೆಯ ಕಡೆಗೇ ಬೆರಳುಮಾಡಿ ತೋರಿಸುವುದರ ಬದಲು, ಈ ಸಮಸ್ಯೆ ಅಥವಾ ಚರ್ಚಾವಿಷಯಕ್ಕಿರುವ ಸಾಮಾಜಿಕ ಮಗ್ಗುಲಿನ ಕುರಿತೂ ಕಿರುನೋಟ ಬೀರುವ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ದಕ್ಕಿ ದಶಕಗಳೇ ಆಗಿವೆ; ಇಷ್ಟಾಗಿಯೂ, ಶಾಲಾ ಕೊಠಡಿ, ಮೈದಾನಗಳಲ್ಲಿ ಓದಿ-ಆಡಿ-ಹಾಡಿ-ನಲಿದು ಜ್ಞಾನಮುಖಿಗಳಾಗಿ, ಭವಿಷ್ಯದ ಬೆಳಕಿನ ಕಿರಣಗಳಾಗಬೇಕಿದ್ದ ಮಕ್ಕಳು ದುಡಿಮೆಯ ನೊಗಹೊರಬೇಕಾಗಿ ಬಂದಿರುವುದೇಕೆ ಎಂಬುದು ಪ್ರಶ್ನೆ. ಕುಟುಂಬದಲ್ಲಿ ದುಡಿಯುವ ಕೈ ಒಂದೇ ಇದ್ದು, ತಿನ್ನುವ ಬಾಯಿ ಹಲವಿರುವ ಕಾರಣದಿಂದ, ಅರೆಹೊಟ್ಟೆಯ ಸಮಸ್ಯೆ ನೀಗಲು ಮಕ್ಕಳನ್ನು ಅನಿವಾರ್ಯವಾಗಿ ಚಾಕರಿಗೆ ಹಚ್ಚಲಾಗುತ್ತಿದೆಯೇ ಅಥವಾ ನೆಪಮಾತ್ರದ ವೇತನ/ಕೂಲಿ ನೀಡಿ ದೊಡ್ಡಮಟ್ಟದ ಕೆಲಸ ತೆಗೆಸಿಕೊಳ್ಳುವ ತಥಾಕಥಿತ ಉದ್ಯೋಗದಾತರ ಸಮಯಸಾಧಕತನ ಇದಕ್ಕೆ ಕಾರಣವೇ ಎಂಬೆಲ್ಲ ಮೂಲಗಳನ್ನು ಅರಸಿದರೆ ಇದಕ್ಕೆ ಉತ್ತರ ಸಿಕ್ಕೀತು.

‘ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು, ಬಾಲ್ಯವಾಗಿತ್ತು’ ಎನ್ನುತ್ತದೆ ಒಂದು ಕವಿವಾಣಿ. ಜೀವನ ಪಯಣದ ಅನೇಕ ವೈಶಿಷ್ಟ್ಯೂರ್ಣ ಘಟನೆಗಳು ನಮ್ಮನ್ನು ಧನ್ಯರನ್ನಾಗಿಸಬಹುದು, ಔದ್ಯೋಗಿಕವಾಗಿ/ವ್ಯಾವಹಾರಿಕವಾಗಿ ಏರಿದ ಉನ್ನತಿಯು ಮನೆಮಂದಿ ಹಾಗೂ ಸುತ್ತಲಿನವರು ನಮ್ಮ ಕುರಿತು ಹೆಮ್ಮೆಪಡುವಂತೆ ಮಾಡಬಹುದು. ಆದರೆ ಆಯಾ ಕಾಲಘಟ್ಟದಲ್ಲಿ ಇಂಥ ಯಾವುದೇ ಸಾಧನೆ-ಹೆಮ್ಮೆಯ ಕ್ಷಣಗಳು ರೂಪುಗೊಂಡರೂ, ಅವೆಲ್ಲವನ್ನೂ ಮೀರಿಸಿ ಹೃದಯದಲ್ಲಿ ಗಟ್ಟಿಯಾಗಿ ಕೆನೆಕಟ್ಟುವುದು ಬಾಲ್ಯದ ನೆನಪುಗಳು ಮತ್ತು ಅದು ತುಂಬುವ ಧನ್ಯತೆ ಮಾತ್ರ. ಆದರೆ ಅಂಥ ಬಾಲ್ಯವೇ ರೌರವ ನರಕಸದೃಶವಾಗಿದ್ದರೆ, ಧನ್ಯತೆಗೆ ಬುನಾದಿಯಾದರೂ ಹೇಗೆ ದಕ್ಕೀತು? ಅಸ್ವಸ್ಥ ಬಾಲಮನಸ್ಸು ಒಂದೊಮ್ಮೆ ಸಮಾಜಘಾತುಕತನಕ್ಕೆ ಒಡ್ಡಿಕೊಂಡರೆ ಅದರ ಹೊಣೆ ಯಾರು ಹೊರಬೇಕು? ಅರಳಿ ನಲಿಯಬೇಕಾದ ಹೂವುಗಳು ‘ಕಾರ್ವಿುಕತನದ’ ಮುಳ್ಳಿನ ಕಿರೀಟ ಧರಿಸಿ ಮೊಗ್ಗಿನಲ್ಲೇ ಮುರುಟಿಹೋಗುವುದನ್ನು ತಡೆಯಲು ಕಾಯ್ದೆ-ಕಾನೂನಿನ ಜತೆಗೆ ಸಾರ್ವಜನಿಕರೂ ಸಹಕಾರ ಹಸ್ತ ಚಾಚಬೇಕಿದೆ. ಬಾಲಕಾರ್ವಿುಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂಬ ಸಂಕಲ್ಪಕ್ಕೆ ಕಟಿಬದ್ಧರಾಗುವುದರ ಜತೆಗೆ, ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಇಂಥ ಜಾಗೃತಿ ಮೂಡಿಸಬೇಕಿದೆ. ಅರಿವುಳ್ಳ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

Leave a Reply

Your email address will not be published. Required fields are marked *

Back To Top