Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಅರಮನೆಗಳ ಬೆಡಗು ಬೆರಗು

Thursday, 21.09.2017, 3:00 AM       No Comments

ಯದುವಂಶದ ಅರಸರು ಆಳಿದ ಸಾಂಸ್ಕೃತಿಕ ನಗರಿ ಮೈಸೂರು ದಸರೆ, ಜಂಬೂಸವಾರಿಯಿಂದ ಮಾತ್ರವಲ್ಲದೇ ಹತ್ತು ಹಲವು ಚೆಂದದ ಅರಮನೆಗಳ ಬೀಡಾಗಿಯೂ ಖ್ಯಾತಿ ಪಡೆದಿದೆ. ಮೈಸೂರು ಎಂದಾಕ್ಷಣ ನಮಗೆ ಥಟ್ಟನೆ ನೆನಪಾಗುವುದು ಅರಮನೆಗಳು. ಯಾವುದೇ ನಗರದಲ್ಲೂ ಇರದಷ್ಟು ಸುಂದರ ವಾಸ್ತುಶಿಲ್ಪದ ಅರಮನೆಗಳು ಮೈಸೂರಿನಲ್ಲಿರುವುದರಿಂದಲೇ ಸಾಂಸ್ಕೃತಿಕ ರಾಜಧಾನಿಯನ್ನು ಅರಮನೆಗಳ ನಗರಿ ಎಂದೂ ಕರೆಯುತ್ತಾರೆ. ತನ್ನ ಕಲಾತ್ಮಕ ಕುಸುರಿಯಿಂದಲೇ ವಿಶ್ವವಿಖ್ಯಾತವಾಗಿರುವ ಅಂಬಾವಿಲಾಸ ಅರಮನೆ ಮೈಸೂರಿಗೆ ಮುಕುಟವಿಟ್ಟಂತಿದೆ. ಅದನ್ನು ಬಿಟ್ಟರೆ ಜಗನ್ಮೋಹನ ಅರಮನೆ, ಲಲಿತಮಹಲ್, ವಸಂತಮಹಲ್, ರಾಜೇಂದ್ರ ವಿಲಾಸ, ಕಾರಂಜಿ ವಿಲಾಸ, ಚೆಲುವಾಂಬ ವಿಲಾಸ, ಜಯಲಕ್ಷಿ್ಮೕ ವಿಲಾಸ ಅರಮನೆಗಳು ಪ್ರವಾಸಿಗರನ್ನು ಬೆರಗುಗೊಳಿಸುವುದಲ್ಲದೆ ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿದಿವೆ.

 

ಲಲಿತ್ ಮಹಲ್

1921-22ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲಲಿತ್ ಮಹಲ್ ಅರಮನೆಯನ್ನು 13 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದರು. ವಾಸ್ತುಶಿಲ್ಪಿ ಇ.ಬ್ಲೃು.ಫ್ರಿಟ್ನೆ ಅರಮನೆ ವಿನ್ಯಾಸಗೊಳಿಸಿದ್ದಾರೆ. ವಿಶಾಲ ಮುಖಮಂಟಪ, ಬೃಹತ್ ಗೋಳಾಕಾರದ ಗುಮ್ಮಟ, ಅಲಂಕಾರಿಕ ಲಾಂದ್ರಗಳು ಸೂಕ್ಷ್ಮ ಕಲಾಕುಸುರಿಗೆ ಹಿಡಿದ ಕನ್ನಡಿಯಾಗಿದೆ. ಇಲ್ಲಿನ ನೆಲ ಹಾಗೂ ಮೆಟ್ಟಿಲುಗಳಿಗೆ ಇಟಾಲಿಯನ್ ವೆನಿಸ್ ದೇಶದ ಅಮೃತಶಿಲೆ ಬಳಸಲಾಗಿದೆ. ಸದ್ಯ ಈ ಕಟ್ಟಡ ಐಷಾರಾಮಿ ಹೋಟೆಲ್ ಆಗಿದೆ.

 

ಕರ್ನಾಟಕ ಸರ್ಕಾರದ ತೆಕ್ಕೆಗೆ ಮೈಸೂರಿನ ಲಲಿತ್ ಮಹಲ್

ಹೂಡಿಕೆ ಹಿಂತೆಗೆತದ ಭಾಗವಾಗಿ ಮೂರು ಐಟಿಡಿಸಿ ಹೋಟೆಲ್​ಗಳನ್ನು ಆಯಾ ರಾಜ್ಯ ಸರ್ಕಾರಗಳ ವಶಕ್ಕೆ ಒಪ್ಪಿಸುವ ತೀರ್ವನವನ್ನು ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ತೆಗೆದುಕೊಂಡಿದೆ. ಇದರಲ್ಲಿ, ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲನ್ನು(7.45 ಕೋಟಿ ರೂ.) ಕರ್ನಾಟಕ ಸರ್ಕಾರಕ್ಕೆ, ಹೋಟೆಲ್ ಜೈಪುರ ಅಶೋಕ(14 ಕೋಟಿ ರೂ.)ನ್ನು ರಾಜಸ್ಥಾನ ಸರ್ಕಾರಕ್ಕೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ನಿರ್ಣಯಿಸಿದೆ. ಅಲ್ಲದೆ, ಇಟಾನಗರದಲ್ಲಿರುವ ಡೋನೈ ಪೋಲೊ ಅಶೋಕ್(3.89 ಕೋಟಿ ರೂ.)ನಲ್ಲಿನ ಶೇಕಡ 51 ಷೇರುಗಳನ್ನು ಅರುಣಾಚಲ ಪ್ರದೇಶ ಸರ್ಕಾರದ ಪರವಾಗಿ ಹೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದರು.

 

ಕಾರಂಜಿ ವಿಲಾಸ

ಈ ಅರಮನೆಯನ್ನು 1914ರಲ್ಲಿ ನಿರ್ವಿುಸಲು 4,27,610 ರೂ. ವೆಚ್ಚವಾಗಿತ್ತು. ಇದು ಕಾರಂಜಿ ಕೆರೆಯ ಪಕ್ಕದಲ್ಲಿರುವುದರಿಂದ ಸಾಮಾನ್ಯವಾಗಿ ಎಲ್ಲರೂ ‘ಕಾರಂಜಿ ವಿಲಾಸ’ ಎಂದು ಕರೆಯುತ್ತಾರೆ. ನಾಲ್ವಡಿ ಅವರು ಎರಡನೇ ಸಹೋದರಿ ಕೃಷ್ಣರಾಜಮ್ಮಣ್ಣಿಯವರಿಗಾಗಿ ಇದು ನಿರ್ವಿುಸಿದರೆಂದು ಹೇಳಲಾಗುತ್ತದೆ. ಅಂಚೆ ತರಬೇತಿ ಕೇಂದ್ರ ಮತ್ತು ದೇಶದ ಅಂಚೆ ಇತಿಹಾಸವನ್ನು ತಿಳಿಸುವ ವಸ್ತುಸಂಗ್ರಹಾಲಯ ಈ ಕಟ್ಟಡದಲ್ಲಿದೆ.

 

ಜಗನ್ಮೋಹನ ಅರಮನೆ

1861ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಅರಮನೆ ಕಟ್ಟಿಸಿದರು. 1867ರಲ್ಲಿ ಮೈಸೂರಿನ ಅರಮನೆ ಬೆಂಕಿ ಆಕಸ್ಮಿಕದಿಂದ ಸುಟ್ಟು ಹೋದಾಗ ರಾಜಪರಿವಾರಕ್ಕೆ ಆಶ್ರಯ ನೀಡಿದ್ದೇ ಈ ಜಗನ್ಮೋಹನ ಅರಮನೆ. 1900ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿವಾಹ ನೆರವೇರಿದ್ದು, 1902ರಲ್ಲಿ ಅವರ ಪಟ್ಟಾಭಿಷೇಕವೂ ಈ ಅರಮನೆಯಲ್ಲೇ ನಡೆಯಿತು. ಮೈಸೂರು ರಾಜ್ಯದ ಪ್ರಥಮ ಪ್ರಜಾ ಪ್ರತಿನಿಧಿ ಸಭೆ ನಡೆದದ್ದು ಇಲ್ಲೇ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915ರಲ್ಲಿ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲವರ್ಣ ಚಿತ್ರಗಳನ್ನೊಳಗೊಂಡ ಈ ವಸ್ತು ಸಂಗ್ರಹಾಲಯವನ್ನು ಒಂದು ಸಮಿತಿಗೆ ವಹಿಸಲಾಯಿತು. ನಂತರ ಈ ಅರಮನೆಗೆ 1955ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಆರ್ಟ್ ಗ್ಯಾಲರಿ ಎಂದು ಹೆಸರು ಬಂತು. ಈ ಗ್ಯಾಲರಿಯಲ್ಲಿ ಟ್ರಾವೆಂಕೂರಿನ ರಾಜ ರವಿವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ, ಜಪಾನ್ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

 

ಜಯಲಕ್ಷಿ್ಮೕವಿಲಾಸ

ಮಾನಸಗಂಗೋತ್ರಿ ಆವರಣದಲ್ಲಿರುವ ಇದನ್ನು ಕೆಬ್ಬೆಕಟ್ಟೆ ಅರಮನೆ ಎಂದು ಕರೆಯುತ್ತಾರೆ. ಚಾಮರಾಜ ಒಡೆಯರ್ ಅವರ ಹಿರಿಯ ಮಗಳು ಹಾಗೂ ಕೃಷ್ಣರಾಜ ಒಡೆಯರ್ ಅವರ ಸಹೋದರಿ ರಾಜಕುಮಾರಿ ಜಯಲಕ್ಷ್ಮಣ್ಣಿಯವರಿಗಾಗಿ 1907ರಲ್ಲಿ ಸುಮಾರು ಏಳು ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸಲಾಯಿತು. ನರಸರಾಜ ಒಡೆಯರ್ ಹಾಗೂ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಇಲ್ಲೇ ನಡೆದಿತ್ತು. ಈ ಸೌಧ ಒಂದೇ ಕಟ್ಟಡದಂತೆ ತೋರಿದರೂ ವಾಸ್ತವವಾಗಿ ಮೂರು ಕಟ್ಟಡಗಳಾಗಿದ್ದು ಒಂದಕ್ಕೊಂದು ಸೇರಿಕೊಂಡು ಒಂದೇ ಕಟ್ಟಡವೆಂಬ ನೋಟವನ್ನು ಒದಗಿಸುವುದು ವಿಶೇಷ. ಕಟ್ಟಡದ ಕಿಟಕಿಯ ಬಾಗಿಲುಗಳು, ಕಪಾಟಿಗಳು ಮತ್ತು ಕಂಬಗಳು ಉತ್ತಮ ಕೆತ್ತನೆಗಳಿಂದ ಗಮನ ಸೆಳೆಯುತ್ತವೆ. ಈ ಅರಮನೆಯನ್ನು ಅಂದಿನ ಕುಲಪತಿಗಳಾಗಿದ್ದ ರಾಷ್ಟ್ರಕವಿ ಕುವೆಂಪು ಮೈಸೂರು ವಿವಿಗಾಗಿ 1959ರಲ್ಲಿ 10 ಲಕ್ಷ ರೂ.ಗಳಿಗೆ ಖರೀದಿಸಿದರು. ಸದ್ಯ ಅರಮನೆ ಮೈಸೂರು ವಿವಿಯ ಜಾನಪದ ವಸ್ತು ಸಂಗ್ರಹಾಲಯವಾಗಿದೆ.

 

ವಸಂತ ಮಹಲ್

ಸುಂದರ ಚಿತ್ತಾರಗಳಿಂದ ಸಿಂಗರಿಸಲ್ಪಟ್ಟಂತೆ ಕಾಣುವ ವಸಂತ ಮಹಲ್ ಅರಮನೆಯನ್ನು 30 ಎಕರೆ ಪ್ರದೇಶದಲ್ಲಿ 1842ರಲ್ಲಿ ಲೋಕರಂಜನ್ ಮಹಲ್ ಅರಮನೆ ನಿರ್ವಣದ ಸಂದರ್ಭದಲ್ಲೇ ನಿರ್ವಿುಸಲಾಗಿದೆ.

ಚಿತ್ತರಂಜನ್ ಮಹಲ್

ಚಿತ್ತರಂಜನ್ ಅರಮನೆಯನ್ನು 1916 ರಲ್ಲಿ ಮೈಸೂರು ಮಹಾರಾಜರು ತಮ್ಮ ಸಹೋದರಿಗಾಗಿ ನಿರ್ವಿುಸಿದರು. ಈ ಅರಮನೆಯನ್ನು ರಾಯಲ್ ಫ್ಯಾಮಿಲಿಯಿಂದ ಚಲನಚಿತ್ರ ಕಂಪನಿಗೆ ಮಾರಾಟ ಮಾಡಲಾಯಿತು. ಅಲ್ಲಿ ಪ್ರೀಮಿಯರ್ ಸ್ಟುಡಿಯೋಸ್ ರೂಪಿಸಲಾಯಿತು. ಹಲವಾರು ಖ್ಯಾತನಾಮರ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಭೀಕರ ಅಗ್ನಿ ದುರಂತದ ನಂತರ ಸ್ಟುಡಿಯೊವನ್ನು ಮುಚ್ಚಿದ್ದು, ಇದೀಗ ಹೋಟೆಲ್ ಆಗಿ ಪರಿವರ್ತನೆಯಾಗಿದೆ.

 

ಶೈಲಪುತ್ರೀ ಮಹಿಮೆ

ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ನವರಾತ್ರಿಯ ಪ್ರಥಮ ದಿನ ದೇವಿಯನ್ನು ಶೈಲಪುತ್ರೀ ರೂಪದಲ್ಲಿ ಪೂಜಿಸಲಾಗುತ್ತದೆ. ಪರ್ವತರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿದ್ದರಿಂದ ಈ ದೇವಿಗೆ ಶೈಲಪುತ್ರೀ ಎಂದು ಹೆಸರಾಯಿತು.

ಅವತಾರದ ಹಿನ್ನೆಲೆ: ಈ ದೇವಿಯು ಹಿಂದಿನ ಜನ್ಮದಲ್ಲಿ ಪ್ರಜಾಪತಿ ದಕ್ಷನ ಮಗಳಾಗಿ ಅವತರಿಸಿದ್ದಳು. ಆಗ ಇವಳ ಹೆಸರು ಸತಿ. ಇವಳ ವಿವಾಹವು ಶಿವನೊಡನೆ ಆಗಿತ್ತು. ಒಮ್ಮೆ ದಕ್ಷನು ದೊಡ್ಡ ಯಜ್ಞವನ್ನು ಮಾಡಿ, ಅದಕ್ಕೆ ಎಲ್ಲ ದೇವಾನುದೇವತೆಗಳನ್ನು ಕರೆದಿದ್ದನು. ಆದರೆ ಶಿವನಿಗೆ ಮತ್ತು ಅವನ ಪತ್ನಿಗೆ ಆಮಂತ್ರಣವಿರಲಿಲ್ಲ. ಯಜ್ಞ ನಡೆಯುವ ವಿಷಯ ಇವರಿಗೆ ತಿಳಿದಿತ್ತು. ಆ ಯಜ್ಞದಲ್ಲಿ ಭಾಗವಹಿಸಲು ಸತಿಯು ಹೊರಟಳು. ಆಗ ಶಿವನು, ‘ನಿನ್ನ ತಂದೆ ಯಜ್ಞಕ್ಕೆ ಆಮಂತ್ರಿಸಿಲ್ಲ, ನೀನು ಹೋಗಬೇಡ’ ಎಂದು ಹೇಳಿದರೂ ಅಲ್ಲಿಗೆ ಸತಿ ದೇವಿಯು ಹೋದಳು. ಅಲ್ಲಿ ಅವಳಿಗೆ ಗೌರವ ಸಿಗಲಿಲ್ಲ. ಬಂಧುಗಳ ಈ ವ್ಯವಹಾರದಿಂದ ಅವಳ ಮನಸ್ಸಿಗೆ ಬಹಳ ದುಃಖವಾಯಿತು. ಪ್ರಜಾಪತಿ ದಕ್ಷ ತನ್ನ ಪತಿ ಶಂಕರನನ್ನು ಅವಮಾನಿಸಿದ್ದು ಸಹಿಸಲಾರದೆ ಅವಳು ತನ್ನ ಆ ರೂಪವನ್ನು ಯೋಗಾಗ್ನಿಯಿಂದ ಸುಟ್ಟು ಭಸ್ಮ ಮಾಡಿದಳು. ಆ ದುಃಖದ ಘಟನೆಯನ್ನು ಕೇಳಿ ಶಿವನು ತನ್ನ ಗಣಕಗಳನ್ನು ಕಳಿಸಿ ದಕ್ಷನು ಮಾಡುತ್ತಿದ್ದ ಯಜ್ಞವನ್ನು ಪೂರ್ಣವಾಗಿ ಧ್ವಂಸ ಮಾಡಿಸಿದನು. ಸತಿಯು ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನ ಪುತ್ರಿಯ ರೂಪದಲ್ಲಿ ಅವತರಿಸಿದಳು. ಆಗ ಅವಳು ಶೈಲಪುತ್ರೀ ಎಂದು ಹೆಸರು ಪಡೆದು ಪ್ರಖ್ಯಾತವಾದಳು. ಇವಳನ್ನು ಪಾರ್ವತಿ ಹಾಗೂ ಹೇಮಾವತಿ ಎಂದು ಸಹ ಕರೆಯುವರು.ನವರಾತ್ರಿಯ ಮೊದಲನೇ ದಿನ ಈ ಶೈಲಪುತ್ರೀ ದೇವಿಗೆ ಹಳದಿ ಬಣ್ಣದ ಸೀರೆ, ಕುಪ್ಪಸವನ್ನು ತೊಡಿಸಿ, ಹಳದಿ ಬಣ್ಣದ ಹೂ, ಅಕ್ಷತೆ, ಅರಿಷಿಣ ಗೆಜ್ಜೆವಸ್ತ್ರಗಳಿಂದ ಪೂಜಿಸಬೇಕು. ಅಂದು ಈ ದೇವಿಗೆ ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡಬೇಕು. ಅಂದು ದೇವಿಗೆ ಬ್ರಾಹ್ಮಿ ಅಲಂಕಾರ ಮಾಡುವರು. ಫಲ: ಈ ದೇವಿಯನ್ನು ಪೂಜಿಸುವುದರಿಂದ ಸಂತಾನಪ್ರಾಪ್ತಿ ಆಗುವುದು, ಮನಸ್ಸಿನ ದೃಢತೆ ಹೆಚ್ಚುವುದು, ಗೌರವ ಹೆಚ್ಚುವುದು, ಉತ್ತಮ ಆರೋಗ್ಯ ಲಭಿಸುವುದು. (ಲೇಖಕರು ಧಾರ್ವಿುಕ ಚಿಂತಕರು)

 

ಮೇರು ಕಲಾಕೃತಿ ಮೈಸೂರು ಅರಮನೆ

ಶತಮಾನ ಕಂಡಿರುವ ಅರಮನೆಯ ಸೊಬಗು, ಸೊಗಸು, ಸೌಂದರ್ಯ… ವರ್ಣನಾತೀತ. ಇಂಡೋ-ಸಾರ್ಸನಿಕ್ ಶೈಲಿಯಲ್ಲಿ ಅತ್ಯಂತ ಕಲಾತ್ಮಕವಾಗಿ ನಿರ್ವಣವಾಗಿರುವ ಈ ಅರಮನೆಗೆ ಜಗತ್ತಿನ ಸುಂದರ ಅರಮನೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ. ಇದು ಮೈಸೂರು ಸಂಸ್ಥಾನವನ್ನು ಆಳಿದ ಯದುವಂಶ ಅರಸರ ಕೊಡುಗೆ.

ದಾಖಲೆಗಳ ಪ್ರಕಾರ ಈಗಿನ ಅರಮನೆ 1911-12 ಅವಧಿಯಲ್ಲಿ ಪೂರ್ಣಗೊಂಡಿತು. ಅರಮನೆಯ ಮುಖ್ಯ ಕಟ್ಟಡ ನಿರ್ವಣಕ್ಕೆ ಬೂದು ಬಣ್ಣದ ಗ್ರಾನೈಟ್ ಶಿಲೆ ಬಳಕೆ ಮಾಡಲಾಗಿದೆ. ಮೂರು ಮಹಡಿ ಮೇಲೆ ಐದು ಅಂತಸ್ತಿನ ಗೋಪುರ, ಗೋಪುರಕ್ಕೆ ಚಿನ್ನದ ಕವಚ. ಅರಮನೆಯ ಮುಂಭಾಗ 7 ಕಮಾನುಗಳಿದ್ದು, ಎತ್ತರವಾದ ಸ್ತಂಭಗಳು ಆಸರೆಯಾಗಿವೆ. ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ. ಒಳಗೆಲ್ಲ ಚಿನ್ನದ ಲೇಪನದ ಕಲಾವೈಭವ. ಅರಮನೆಯ ಮುಂಭಾಗದಲ್ಲಿ ಏಳು ವಿಶಾಲವಾದ ಮತ್ತು ಚಿಕ್ಕ ಕಮಾನುಗಳಿವೆ. ಮಧ್ಯದ ಕಮಾನಿನ ಮೇಲೆ ಗಜಲಕ್ಷ್ಮಿಶಿಲ್ಪವಿದೆ. ಕೋಟೆಯಿಂದ ಆವೃತ್ತವಾದ ಅರಮನೆ ಆವರಣ 77 ಎಕರೆಯಷ್ಟಿದ್ದು, ಅಂಬಾ ವಿಲಾಸ ಅರಮನೆ 7 ಎಕರೆಯಲ್ಲಿ ನಿರ್ವಣವಾಗಿದೆ. ಇದಕ್ಕೂ ಮುನ್ನ- ಈಗಿನ ಅಂಬಾವಿಲಾಸ ಅರಮನೆ ಜಾಗದಲ್ಲಿಯೇ ಹಳೆಯ ಅರಮನೆ ಇತ್ತು. ಹಿಂದು ವಾಸ್ತುಶೈಲಿಯಲ್ಲಿ ಕ್ರಿ.ಶ.1800-1804ರ ನಡುವೆ ಮರದ ಅರಮನೆಯನ್ನು ಕಟ್ಟಲಾಗಿತ್ತು. 1897ರಲ್ಲಿ ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿ ಮತ್ತು ಎಂ.ಕಾಂತರಾಜೇಅರಸು ವಿವಾಹ ಸಂದರ್ಭದಲ್ಲಿ ಅದು ಬೆಂಕಿಗೆ ಆಹುತಿಯಾಯಿತು.

ಅರಮನೆ ವೈಭವವನ್ನು ಮರಳಿ ತರುವ ಉದ್ದೇಶದಿಂದ ಮಹಾರಾಣಿ ವಾಣಿವಿಲಾಸ ಸನ್ನಿಧಾನ ಅವರು ಹೊಸ ಅರಮನೆ ನಿರ್ವಣಕ್ಕೆ ಮುಂದಾದರು. ಹಳೇ ಅರಮನೆಯ ಅಸ್ತಿಭಾರದ ಮೇಲೆ ಮದ್ರಾಸು ಸರ್ಕಾರದ ಸಲಹೆಗಾರ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ಅವರ ನಕಾಶೆಯಂತೆ 1897ರಲ್ಲಿ ಮಹಾರಾಣಿ ಹೊಸ ಅರಮನೆ ನಿರ್ವಣಕ್ಕೆ ಚಾಲನೆ ನೀಡಿದರು. ಇದಕ್ಕೆ ತಗುಲಿದ ವೆಚ್ಚ 41,47,913 ರೂ.ಗಳು.

ಅರಮನೆಯ ಪ್ರಮುಖ ಆಕರ್ಷಣೆಗಳು: ್ಞ ದರ್ಬಾರ್ ಹಾಲ್​ಗಳು, ಕಲ್ಯಾಣಮಂಟಪ, ರತ್ನಖಚಿತ ಸಿಂಹಾಸನ, ಚಿನ್ನದ ಅಂಬಾರಿ, 3ಡಿ ತಂತ್ರಜ್ಞಾನದಲ್ಲಿ ರಚಿಸಲಾಗಿರುವ 26 ವರ್ಣಚಿತ್ರಗಳು, ಗೊಂಬೆ ತೊಟ್ಟಿ, ಬೆಳ್ಳಿ ಬಾಗಿಲು, ದಂತದ ಇನ್ಲೇ ಇರುವ ಬಾಗಿಲು, ಕ್ಯಾಸ್ಕೆಟ್ ಹಾಲ್, ಸಮಕಾಲೀನ ಪೀಠೋಪಕರಣಗಳ ಕೊಠಡಿ, ಆತ್ಮವಿಲಾಸ ಗಣೇಶ, ಅರಮನೆ ಹೊರ ಆವರಣದಲ್ಲಿ ಎಂಟು ದೇವಾಲಯಗಳು, ಕಲಾ ಶಾಲೆ. ್ಞದ್ಯುತ್ ದೀಪಗಳಿಂದ ಬೆಳಗುವ ಅಂಬಾವಿಲಾಸ ಅರಮನೆ ವಿಶ್ವವಿಖ್ಯಾತ. 96,200 ದೀಪಗಳನ್ನು ಅರಮನೆಗೆ ಅಳವಡಿಸಲಾಗಿದೆ. ಪ್ರತಿವರ್ಷ ಸುಮಾರು 25,000ದಷ್ಟು ದೀಪಗಳನ್ನು ಬದಲಾಯಿಸಲಾಗುತ್ತದೆ. ್ಞ ಪ್ರತಿ ವರ್ಷ 25-30 ಲಕ್ಷಕ್ಕೂ ಮೀರಿ ಪ್ರವಾಸಿಗರು ಅರಮನೆಯನ್ನು ವೀಕ್ಷಿಸುತ್ತಾರೆ.

 

ದರ್ಬಾರ್ ಹಾಲ್​ನ ಬೆಡಗು ಬಿನ್ನಾಣ

ಅಂಬಾವಿಲಾಸ ಅರಮನೆಯಲ್ಲಿ ಎರಡು ದರ್ಬಾರ್ ಹಾಲ್​ಗಳಿದ್ದು, ಒಂದು ಸಾರ್ವಜನಿಕ ದರ್ಬಾರ್ ಹಾಲ್, ಮತ್ತೊಂದು ಖಾಸಗಿ ದರ್ಬಾರ್ ಹಾಲ್. ಅರಮನೆ ಮೇಲ್ಮಹಡಿಯಲ್ಲಿರುವ ಮುಖಮಂಟಪದಲ್ಲಿ ನಡೆಯುತ್ತಿದ್ದುದನ್ನು ಸಾರ್ವಜನಿಕ ದರ್ಬಾರ್ ಎಂದು ಕರೆಯಲಾಗುತ್ತಿತ್ತು. ಅದರ ಹಿಂಬದಿಯಲ್ಲಿರುವ ಸಭಾಂಗಣವೇ ಖಾಸಗಿ ದರ್ಬಾರ್ ಹಾಲ್.

 

ಚೆಲುವಾಂಬ ವಿಲಾಸ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಮೂರನೇ ಸಹೋದರಿಯಾದ ರಾಜಕುಮಾರಿ ಚೆಲುವರಾಜಮ್ಮಣ್ಣೀಗಾಗಿ 1911ರಲ್ಲಿ ಚೆಲುವಾಂಬ ವಿಲಾಸ ಅರಮನೆ ಕಟ್ಟಿಸಿದರು. ಇಂಡೋಸಾರ್ಸನಿಕ್ ಶೈಲಿಯ ಅರಮನೆಯನ್ನು 1950ರ ದಶಕದಲ್ಲಿ ಸರ್ಕಾರಕ್ಕೆ ಮಾರಾಟ ಮಾಡಲಾಯಿತು. ಸದ್ಯ ಇದು ಪ್ರಸಿದ್ಧ ಸಿಎಫ್​ಟಿಆರ್​ಐ ಕಚೇರಿಯಾಗಿದೆ.

 

ಲೋಕರಂಜನ ಮಹಲ್ ಅರಮನೆ

ಈ ಅರಮನೆ ಇಟ್ಟಿಗೆಗೂಡಿನಲ್ಲಿದೆ. 1842ರಲ್ಲಿ ನಿರ್ವಿುಸಲಾಗಿದ್ದು, ಮೊದಲು ಇದು ರಾಜ ಮನೆತನದವರ ನಿವಾಸವಾಗಿತ್ತು. ನಂತರದ ದಿನಗಳಲ್ಲಿ ಇದು ಚಾಮರಾಜ ಒಡೆಯರ್ ಹಾಗೂ ಕೃಷ್ಣರಾಜ ಒಡೆಯರ್ ಅವರ ಪಾಠಶಾಲೆಯೂ ಆಗಿತ್ತು ಎನ್ನಲಾಗಿದೆ. ಆಕರ್ಷಣೀಯ ಕೆತ್ತನೆ ಕೆಲಸದಿಂದ ಕೂಡಿರುವ ಈ ಅರಮನೆ ಗಣ್ಯರ ತಂಗುದಾಣವಾಗಿತ್ತು.

 

ರಾಜೇಂದ್ರ ವಿಲಾಸ ಅರಮನೆ

ಚಾಮುಂಡಿಬೆಟ್ಟದ ಮೇಲೆ ರಾಜೇಂದ್ರವಿಲಾಸ ಅರಮನೆ ಇದೆ. ಮೈಸೂರಿನ ರಾಜಮನೆತನದವರು ವಿಹಾರಕ್ಕಾಗಿ ಈ ಅರಮೆನೆಯನ್ನು ಉಪಯೋಗಿಸುತ್ತಿದ್ದರು. 1822ರಲ್ಲಿ ಮೈಸೂರು ಸಂಸ್ಥಾನದ ರೆಸಿಡೆಂಟರಾದ ಅರ್ಥರ್ ಕೋಲ್ಟ್ರ ಅವರು ಅಭಿವೃದ್ಧಿ ಪಡಿಸಿದರೂ ರಾಜರೇ ನಿರ್ವಿುಸಿದರು. 1938ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತಷ್ಟು ಮೆರಗು ನೀಡಿದರು. ಅರಮನೆಯ ನಾಲ್ಕು ಮೂಲೆಗಳಲ್ಲಿ ಮತ್ತು ಮಧ್ಯದಲ್ಲಿನ ಗುಮ್ಮಟಗಳು ದೂರದಿಂದ ಆಕಾಶದಲ್ಲಿ ವಿಶೇಷ ಛಾಯಾರೂಪ ಒದಗಿಸಲೋ ಎಂಬಂತೆ ನಿರ್ವಿುಸಿದವುಗಳಾಗಿವೆ. ಸದ್ಯ ರಾಜವಂಶಸ್ಥರ ವಶದಲ್ಲಿರುವ ಈ ಅರಮನೆ ಹೋಟೆಲ್ ಆಗಿದ್ದು, ಸದ್ಯ ಹೋಟೆಲ್ ಸಹ ನಡೆಯುತ್ತಿಲ್ಲ.

 

ದಸರಾ ಉತ್ಸವಕ್ಕೆ ಇಂದು ಚಾಲನೆ

ನಾಡಹಬ್ಬ ದಸರಾ ಉತ್ಸವಕ್ಕೆ ಅರಮನೆ ನಗರಿ ಸಂಪೂರ್ಣ ಸಜ್ಜುಗೊಂಡಿದ್ದು, ಗುರುವಾರ ಬೆಟ್ಟದ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಉತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಲಿದೆ.

ಪದ್ಮಶ್ರೀ ಪುರಸ್ಕೃತ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಬೆಳಗ್ಗೆ 8.45ಕ್ಕೆ ಸಲ್ಲುವ ಶುಭ ತುಲಾಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

ಇಂದಿನ ಕಾರ್ಯಕ್ರಮಗಳು: ದಸರಾ ಮೊದಲ ದಿನ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ದಸರಾ ವಸ್ತು ಪ್ರದರ್ಶನ, ಚಲನಚಿತ್ರೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಕುಸ್ತಿ ಪಂದ್ಯಾವಳಿ, ಫಲಪುಷ್ಪ ಪ್ರದರ್ಶನ, ದಸರಾ ಕ್ರೀಡಾಕೂಟ, ಕಲಾಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ.

ಖಾಸಗಿ ದರ್ಬಾರ್: ಅಂಬಾವಿಲಾಸ ಅರಮನೆಯಲ್ಲಿ ಮೈಸೂರು ರಾಜಮನೆತನದವರು ಹಮ್ಮಿಕೊಂಡಿರುವ ದಸರಾ ಖಾಸಗಿ ದರ್ಬಾರ್​ಗೆ ಗುರುವಾರ ಚಾಲನೆ ದೊರೆಯಲಿದೆ. ಬೆಳಗ್ಗೆ 11.40ಕ್ಕೆ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದರ್ಬಾರ್ ನಡೆಸಲಿದ್ದಾರೆ.

 

ಕುಸ್ತಿ ಪಂದ್ಯಾವಳಿಗಳು

ದಸರಾ ಕುಸ್ತಿ ಪಂದ್ಯಾವಳಿಗಳು ಸೆ.21 ರಿಂದ 26ರವರೆಗೆ ಮೈಸೂರಿನ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿವೆ. 21 ರಂದು 3.30ಕ್ಕೆ ದಸರಾ ಕುಸ್ತಿ ಪಂದ್ಯಾವಳಿಯ ಉದ್ಘಾಟನೆ ಮತ್ತು ನಾಡಕುಸ್ತಿ ಪಂದ್ಯಾವಳಿ ನಡೆಯಲಿದೆ. 22 ರಂದು 17 ವರ್ಷದೊಳಗಿನ ಹಾಗೂ 17 ವರ್ಷ ಮೇಲ್ಪಟ್ಟ ಎಂಬ ಎರಡು ವಿಭಾಗದಲ್ಲಿ ಒಟ್ಟು 8 ತೂಕಗಳಲ್ಲಿ ಮೈಸೂರು ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. 23ರಂದು 9ನೇ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿ, 24 ಮತ್ತು 25 ರಂದು 35ನೇ ರಾಜ್ಯಮಟ್ಟದ ಪುರುಷರ ಮತ್ತು ಬಾಲಕರ ಕುಸ್ತಿ ಪಂದ್ಯಾವಳಿ, 26 ರಂದು ಮೈಸೂರು ವಿಭಾಗ ಮಟ್ಟದ ಬಾಲಕರ ಹಾಗೂ 35ನೇ ರಾಜ್ಯಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಯ ಅಂತಿಮ ಕುಸ್ತಿ, ನಾಡ ಕುಸ್ತಿ ಪಂದ್ಯಾವಳಿ ಇರಲಿದೆ. ಪ್ರತಿದಿನ ನಾಡಕುಸ್ತಿ ಪಂದ್ಯಾವಳಿಯಲ್ಲಿ ಕನಿಷ್ಠ 1 ಅಥವಾ 2 ಮಹಿಳಾ ಕುಸ್ತಿಯೂ ನಡೆಯಲಿದೆ.

ದಸರಾ ಕ್ರೀಡಾಕೂಟ

ಸೆ.21 ರಿಂದ 24ರ ವರೆಗೆ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. 21ರಂದು ಸಂಜೆ 4 ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದ್ದು, ಅಥ್ಲೆಟಿಕ್ಸ್, ಬ್ಯಾಸ್ಕೆಟ್​ಬಾಲ್, ಬಾಲ್ ಬ್ಯಾಡ್ಮಿಂಟನ್, ಫುಟ್​ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ-ಖೋ, ಈಜು, ಷಟಲ್ ಬ್ಯಾಡ್ಮಿಂಟನ್, ಟೆನಿಸ್, ವಾಲಿಬಾಲ್, ದೇಹಧಾರ್ಡ್ಯ, ಹಾಫ್ ಮ್ಯಾರಾಥಾನ್ ಸ್ಪರ್ಧೆಗಳು ನಡೆಯಲಿವೆ.

ವಜ್ರಮುಷ್ಟಿ ಕಾಳಗ

ನೋಡುಗರ ಮೈ ನವಿರೇಳಿಸುವ ಮೈಸೂರು ಅರಸರ ಪಾರಂಪರಿಕ ‘ವಜ್ರಮುಷ್ಟಿ ಕಾಳಗ’ ಈ ಬಾರಿ ವಿಜಯ ದಶಮಿದಿನದಂದು ನಡೆಯಲಿದೆ. ಯದುವಂಶದ ಅರಸರು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ನಡೆಸುವ ವಜ್ರಮುಷ್ಟಿ ಕಾಳಗ ಸಂಪ್ರದಾಯದಂತೆ ಅಂಬಾವಿಲಾಸ ಅರಮನೆ ಅಂಗಳದಲ್ಲಿ

ಸೆ.30 ರಂದು ನಡೆಯಲಿದೆ.

 

ಮಡಿಕೇರಿ ದಸರಾ ಉತ್ಸವಕ್ಕೆ ಇಂದು ವಿಧ್ಯುಕ್ತ ಚಾಲನೆ

ಶಕ್ತಿದೇವತೆಗಳ ಕರಗೋತ್ಸವದೊಂದಿಗೆ ಜನೋತ್ಸವ ಮಡಿಕೇರಿ ದಸರಾ ಉತ್ಸವಕ್ಕೆ ಗುರುವಾರ ವಿಧ್ಯುಕ್ತ ಚಾಲನೆ ದೊರೆಯಲಿದೆ. ಪಂಪಿನಕೆರೆಯಲ್ಲಿ ಸಂಜೆ 4 ಗಂಟೆಗೆ 4 ಶಕ್ತಿದೇವತೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಧಾರ್ವಿುಕ ಕೈಂಕರ್ಯ ಪ್ರಾರಂಭವಾಗಲಿದೆ. ಪಂಪಿನಕೆರೆಯಲ್ಲಿ ಪೂಜಾ ಕೈಂಕರ್ಯ ಪೂರ್ಣಗೊಂಡ ಬಳಿಕ ನಾಲ್ಕೂ ಶಕ್ತಿದೇವತೆಗಳ ಕರಗ ಮೆರವಣಿಗೆ ನಡೆಯಲಿದೆ. ಮಹದೇವಪೇಟೆ ಚೌಡೇಶ್ವರಿ ದೇವಾಲಯ, ಪೇಟೆ ಶ್ರೀರಾಮಮಂದಿರದಲ್ಲಿ ಕರಗಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಕರಗಗಳು ಆಯಾ ದೇವಾಲಯಗಳಿಗೆ ತೆರಳಲಿದ್ದು, ಶುಕ್ರವಾರ ನಗರ ಪ್ರದಕ್ಷಿಣೆ ಪ್ರಾರಂಭಿಸಲಿವೆ. ಸಾಂಕ್ರಾಮಿಕ ರೋಗ ನಿವಾರಣೆ, ಜನರ ಸಂಕಷ್ಟ ದೂರ ಮಾಡುವ ನಿಟ್ಟಿನಲ್ಲಿ ರಾಜರ ಆಳ್ವಿಕೆ ಕಾಲದಲ್ಲಿ ನವರಾತ್ರಿ ವೇಳೆ ಕರಗೋತ್ಸವ ನಡೆಸಲಾಗುತ್ತಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿಯೂ ಪಲ್ಲಕ್ಕಿ ಉತ್ಸವ, ಕರಗೋತ್ಸವಕ್ಕೆ ನಿರ್ಬಂಧ ವಿಧಿಸಲಿಲ್ಲ ಎನ್ನುವುದು ವಿಶೇಷ. ಇಂದಿಗೂ ಮುಂದುವರಿದು ನಾಡಹಬ್ಬ ಮಡಿಕೇರಿ ದಸರಾಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ನವರಾತ್ರಿ ದಿನಗಳಂದು ಕರಗಗಳು ನಗರ ಪ್ರದಕ್ಷಿಣೆ ಮಾಡುವ ಮೂಲಕ ಭಕ್ತರಿಂದ ಪೂಜೆ ಸ್ವೀಕರಿಸಲಿವೆ.

 

ನವ ಬಣ್ಣಗಳ ನವರಾತ್ರಿ

 

ನಯನಾ ಭಿಡೆ

|| ಪ್ರಥಮಂ ಶೈಲಪುತ್ರೀಚ, ದ್ವಿತೀಯಂ ಬ್ರಹ್ಮಚಾರಿಣೀಮ್ ||

|| ತೃತೀಯಂ ಚಂದ್ರಘಟೇತಿ, ಕೂಷ್ಮಾಂಡೇತಿ ಚತುರ್ಥಕಮ್|

|| ಪಂಚಮಂ ಸ್ಕಂದಮಾತ್ರೇತಿ, ಷಷ್ಠಂ ಕಾತ್ಯಾಯನೀತಿಚ ||

|| ಸಪ್ತಮಂ ಕಾಲರಾತ್ರೀತಿ, ಮಹಾಗೌರೀತಿ ಚಾಷ್ಠಮಮ್|

|| ನವಮಂ ಸಿಧಿ್ಧಾತ್ರೀಚ ನವದುರ್ಗಾಃ ಪ್ರಕೀರ್ತಿತಾಃ||

ಸಂಭ್ರಮ ಸಡಗರದ, ಘಟಸ್ಥಾಪನೆಯ ವಿಧಿಯೊಂದಿಗೆ ಆರಂಭವಾಗುವ ಶುಭನ್ನವರಾತ್ರಿಯ ಮೊದಲ ದಿನ ಪ್ರತಿಪದೆ. ಈ ದಿನ ಮಹಾದೇವಿ ಶೈಲಪುತ್ರಿಯಾಗಿ ಭಕ್ತರನ್ನು ಅಶೀರ್ವದಿಸುವಳು. ಸೂರ್ಯನ ಕಿರಣಗಳ ಧನಾತ್ಮಕತೆಯನ್ನು ಪ್ರತಿನಿಧಿಸುವ ಹಳದಿ ಬಣ್ಣದ ಬಟ್ಟೆ ಧರಿಸಿ ದೇವಿಯನ್ನಾರಾಧಿಸಿದರೆ ಸಂತೋಷ, ಶಕ್ತಿಯೆಲ್ಲವೂ ಲಭಿಸಿ ದೇವೀ ಆರಾಧಕರಿಗೆ ಧನ್ಯತಾ ಭಾವ ಮೂಡುವುದು.

ಎರಡನೇ ದಿನ ದ್ವಿತೀಯಾ. ಬ್ರಹ್ಮಚಾರಿಣಿಯಾಗಿ ಅವತರಿಸುವ ಜಗನ್ಮಾತೆ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಾಳೆ. ಮಂಗಳಕಾರಕನಾದ ಮಂಗಳಗ್ರಹ ಪ್ರಭಾವ ಬೀರುವ ದಿನವಿದು. ಸಾಮರಸ್ಯ, ಸಹಬಾಳ್ವೆ, ಫಲವತ್ತತೆ, ಹಿತವಾದ ಭಾವನೆಗಳ ಪ್ರತೀಕ ಪ್ರಕೃತಿ ಮಾತೆ ಅಥವಾ ಬ್ರಹ್ಮಚಾರಿಣೀ ದೇವಿಯದ್ದು. ಸಿಂಧೂರ್ ತೃತೀಯಾ ಎಂದೇ ಕರೆಯಲ್ಪಡುವ ಮೂರನೇ ದಿನ ತೃತೀಯಾ. ದಶಾಕಾರಕನಾದ ಶುಕ್ರಗ್ರಹದ ಏಕಾಧಿಪತ್ಯ ಈ ದಿನ. ಈ ದಿನ ತನ್ನ ಹಣೆಯಲ್ಲಿ ಘಂಟೆಯ ಆಕಾರದಲ್ಲಿ ಚಂದ್ರನನ್ನು ಧರಿಸಿರುವ ಚಂದ್ರಘಂಟಾ ಅವತಾರ ಮಾತೆಯದ್ದು. ಶಾಂತತೆ ಮತ್ತು ಸಮಚಿತ್ತದ ಭಾವನೆ ಮೂಡಿಸುವ ಬೂದು ಬಣ್ಣವನ್ನು ಧರಿಸಿ ಎಲ್ಲರೂ ಮಾತೆಯ ಕೃಪಾಕಟಾಕ್ಷಕ್ಕೆ ಒಳಗಾಗಬಹುದು.

ಉಪಾಂಗ ಲಲಿತಾ ವೃತವಿಶೇಷದ ದಿನ ಚತುರ್ಥಿ. ದೇವಿಯು ತಾನು ಕೂಷ್ಮಾಂಡಿನಿಯಾಗಿ ಭಕ್ತರುದ್ಧಾರಕ್ಕಾಗಿ ಅವತರಿಸಿ ಒಳಿತನ್ನುಂಟುಮಾಡಿದ ದಿನ. ಸರ್ವಕ್ರಿಯೆಗಳಿಗೆ ಮೂಲನಾದ ಸೂರ್ಯಾರಾಧನೆಗೆ ಶ್ರೇಷ್ಠ ದಿನವಿದು. ಸೃಷ್ಟಿ ಕ್ರಿಯೆಗೆ ಮಹಾಮಾತೆ ಕಾರಣಳಾದ ದಿನವೂ ಹೌದು. ಈ ದಿನಕ್ಕೆ ಶ್ರೇಷ್ಠವಾದ ಬಣ್ಣ ಕೇಸರಿ. ಅದು ಭಾವನಾತ್ಮಕತೆ, ಕ್ರಿಯಾಶೀಲತೆ ಮತ್ತು ಶಕ್ತಿಯನ್ನು ಪ್ರತಿನಿಧಿಸುವ ಏಕೈಕ ಬಣ್ಣ.

ಸ್ಕಂದಕುಮಾರನ ಮಾತೆಯಾದ ಸ್ಕಂದಮಾತೆಯ ಆರಾಧನಾ ದಿನ ಪಂಚಮಿ. ಲಕ್ಷ್ಮೀ ಪಂಚಮಿಯೆಂದೇ ಪ್ರಚಲಿತ. ದೇವತೆಗಳು ಮತ್ತು ಅಸುರರ ಯುದ್ಧದಲ್ಲಿ ಮಹಾದಂಡನಾಯಕನಾಗಿ ಪಾತ್ರವಹಿಸಿದ್ದು ಸ್ಕಂದಕುಮಾರನೆಂದು ನಂಬಿಕೆ. ಶ್ವೇತವಸ್ತ್ರಧಾರಿಣಿಯರಾಗಿ ಮಹಿಳೆಯರೆಲ್ಲರೂ ಸ್ಕಂದಮಾತೆಯನ್ನು ಆರಾಧಿಸುವುದು ಇಂದಿನ ವಿಶೇಷ. ಪರಿಪೂರ್ಣತೆ, ಶುದ್ಧತೆ ಹಾಗೂ ಶಾಂತಿಯ ಸಂಕೇತ ಶ್ವೇತವರ್ಣ. ಮಲ್ಲಿಗೆಯ ಅಥವಾ ಬಿಳಿ ಬಣ್ಣದ ಪುಷ್ಪಾಲಂಕಾರ ಈ ದಿನದ ವಿಶೇಷತೆ. ಷಷ್ಟಿಯ ಈ ದಿನದಂದು ಕಾತ್ಯಾಯಿನಿಯ ಅವತಾರವೆತ್ತಿ , ಭಕ್ತರೆಲ್ಲರೂ ತಮ್ಮ ಜೀವನದಲ್ಲಿ ಪ್ರಕಾಶಮಾನರಾಗಿ ಬೆಳಗುವಂತೆ ಶ್ರೀದೇವಿ ಆಶೀರ್ವದಿಸುವಳೆಂದು ನಂಬಿಕೆ. ಪ್ರತಿಯೊಂದು ಆತ್ಮ ಒಳಗೊಂಡಿರುವ ಪ್ರಕಾಶ ಹಾಗೂ ಆತ್ಮವಿಶ್ವಾಸದ ಅತ್ಯಧಿಕ ಛಾಯೆಯ ಪ್ರತಿನಿಧಿತ್ವ ಕೆಂಪು ಬಣ್ಣದ್ದು. ಮಂಗಳಕರವಾದ ಈ ದಿನ ಕೆಂಪು ಬಣ್ಣ ಮಹತ್ತರವಾದದ್ದು. ಕೆಂಪುಬಣ್ಣದ ಹೂವುಗಳಿಂದ ಮಾಡುವ ದೇವಿಯ ಅಲಂಕಾರ ಈ ದಿನಕ್ಕೆ ಮೆರುಗು ನೀಡುತ್ತದೆ.

ಸಪ್ತಮೀ, ಸರಸ್ವತಿಯನ್ನು ಆವಾಹನೆ ಮಾಡುವ ದಿನ. ದುಷ್ಟಶಕ್ತಿಗಳ ಸಂಹಾರಕ್ಕಾಗಿ ದೇವಿ ಕಾಳರಾತ್ರಿಯ ಅವತಾರವೆತ್ತಿದ ದಿನ. ಮನಸ್ಸಿಗೆ ಮುದ ನೀಡುವ ನೀಲಿಯ ಬಣ್ಣ ಈ ದಿನಕ್ಕೆ ಯೋಗ್ಯ. ಶುಭಂಕರಿಯಾಗಿಯೂ ಭಕ್ತರಿಂದ ಪೂಜಿಸಲ್ಪಡುವ ದೇವಿ ಈ ದಿನ ತನ್ನ ಭಕ್ತರ ಮನಸ್ಸಿನ ಕ್ಲೇಶಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಶೀರ್ವದಿಸುತ್ತಾಳೆಂದು ನಂಬಿಕೆ. ಅಷ್ಟಮಿ ತಿಥಿ. ಸರಸ್ವತಿ ಪೂಜೆಯ ಶ್ರೇಷ್ಠ ದಿನ. ಮಹಾಗೌರಿಯ ಪೂಜೆ ಅಷ್ಟಮಿತಿಥಿ ಕೊನೆಗೊಳ್ಳುವ ಸಮಯ ಮತ್ತು ನವಮಿ ತಿಥಿ ಆರಂಭವಾಗುವ ಸಮಯದಲ್ಲಿ ಮಾಡುವುದರಿಂದ ಈ ದಿನ ಸಂಧಿಪೂಜಾ ದಿನವೆಂದೂ ಪರಿಗಣಿಸಲ್ಪಟ್ಟಿದೆ. ಗುಲಾಲು ಬಣ್ಣ ಈ ದಿನಕ್ಕೆ ವಿಶೇಷವಾಗಿ ಹೊಂದುತ್ತದೆ.

ನೇರಳೆ ಬಣ್ಣದ ದಿರಿಸುಗಳನ್ನುಟ್ಟು ಮಹಾನವಮಿ ಪೂಜೆ, ಆಯುಧ ಪೂಜೆ, ನವಮಿ ಹೋಮ ಮಾಡಿದಲ್ಲಿ ಮಹಾಮಾತೆಯ ಆಶೀರ್ವಾದ ಸಿದ್ಧಿಸುವುದರಲ್ಲಿ ಸಂದೇಹವೇ ಇಲ್ಲ. ನಮ್ಮೆಲ್ಲರಿಂದ ಮಾತ್ರವಲ್ಲ ದೇವತೆಗಳು, ಗಂಧರ್ವರು, ಅಸುರರು, ಯಕ್ಷರು ಮತ್ತು ಸಿದ್ಧರಿಂದ ಪೂಜಿಸಲ್ಪಟ್ಟ ಮಹಾಮಾತೆಯ ಏಕೈಕ ರೂಪವೆಂದರೆ ಸಿದ್ಧಿಧಾತ್ರಿ ರೂಪ.

 

Leave a Reply

Your email address will not be published. Required fields are marked *

Back To Top