Friday, 20th April 2018  

Vijayavani

ಹಾಸನದಲ್ಲಿ ರೇವಣ್ಣ, ಮೈಸೂರಲ್ಲಿ ಜಿಟಿಡಿ- ದಿಗ್ಗಜರಿಂದ ನಾಮಪತ್ರ ಸಲ್ಲಿಕೆ- ಅಫಜಲ್​ಪುರದಲ್ಲಿ ಗುತ್ತೇದಾರ್​ಗೆ ಬಿಎಸ್​ವೈ ಸಾಥ್​        ಭಾಲ್ಕಿಯಲ್ಲಿ ಖಂಡ್ರೆ ಬಲ ಪ್ರದರ್ಶನ- ಲಿಂಗಸೂರಲ್ಲಿ ಎತ್ತಿನ ಬಂಡಿ ಮೆರವಣಿಗೆ- ಉಮೇದುವಾರಿಕೆಗೂ ಮುನ್ನ ಭರ್ಜರಿ ರೋಡ್​ ಶೋ        ಚಾಮುಂಡಿ ದರ್ಶನ.. ಸ್ವಗ್ರಾಮದ ದೇಗುಲದಲ್ಲೂ ನಮನ- ಕೋಟೆ ಆಂಜನೇಯನಿಗೂ ಸಿಎಂ ಪೂಜೆ- ಒಂದೇ ದಿನ ಸಿದ್ದು ಟೆಂಪಲ್​ರನ್​        ರೆಡಿಯಾಯ್ತು ಬಿಜೆಪಿ ಮೂರನೇ ಪಟ್ಟಿ- ಕೆಲವೇ ಹೊತ್ತಲ್ಲಿ ಕದನ ಕಲಿಗಳ ಹೆಸರು ಪ್ರಕಟ- ಜೆಡಿಎಸ್​​​ನಿಂದಲೂ ಇಂದು ಎರಡನೇ ಪಟ್ಟಿ ರಿಲೀಸ್        ಶಟರ್ ಮುರಿದು ಮೊಬೈಲ್ ದೋಚಿದ ಕಳ್ಳರು- ಮತ್ತಿಕೆರೆಯಲ್ಲಿ ಅಂಗಡಿ ರಾಬರಿ- ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ        ಸುಪ್ರೀಂ ಮುಖ್ಯನ್ಯಾಯಮೂರ್ತಿ ವಿರುದ್ಧ ವಿಪಕ್ಷಗಳು ಗರಂ- ಸಿಜೆಐ ವಿರುದ್ಧ 7 ಪಕ್ಷಗಳ ಮಹಾಭೀಯೋಗ ನಿರ್ಣಯ- ಉಪರಾಷ್ಟ್ರಪತಿ ಭೇಟಿ, ಮನವಿ ಸಲ್ಲಿಕೆ       
Breaking News

ಅಮ್ಮನ ಸ್ಪೂರ್ತಿ ಕೀರ್ತಿಗೆ ಕಾರಣ

Tuesday, 21.03.2017, 9:15 AM       No Comments

ಆತನೊಬ್ಬ ಹುಟ್ಟಿನಿಂದಲೇ ಸಮರ್ಪಕವಾದ ಬೆಳವಣಿಗೆ ಇಲ್ಲದ ಬಾಲಕ. ತನ್ನ ನಾಲ್ಕನೆಯ ವರುಷದಲ್ಲಿ ಮಾತ್ರ ನಡೆಯಲಾರಂಭಿಸಿದವ. ಮುಂದೆ ಎರಡೂ ಕಿವಿಗಳಿಂದಲೂ ಕೇಳಿಸಿಕೊಳ್ಳದೆ ಕಿವುಡನಾದವ. ಆದರೆ ಆತನದು ವಿಪರೀತ ಬುದ್ಧಿ, ಕುತೂಹಲಕಾರೀ ಮನಸ್ಸು ಮತ್ತು ಎಲ್ಲವನ್ನೂ ಪ್ರಶ್ನಿಸಿ ಎಲ್ಲದಕ್ಕೂ ಉತ್ತರ ಕಂಡುಕೊಳ್ಳಬೇಕೆನ್ನುವ ಸ್ವಭಾವ. ಇಂತಹ ಹುಡುಗನನ್ನು ಸಂಭಾಳಿಸಲು ಸಾಧ್ಯವಾಗದೆ ಅವನ ಶಾಲೆಯ ಉಪಾಧ್ಯಾಯರು ಅವನ ಅಮ್ಮನಿಗೆ ಹೀಗೊಂದು ಪತ್ರ ಬರೆಯುತ್ತಾರೆ:

‘ನಿಮ್ಮ ಮಗ ವಿಚಿತ್ರವಾದ ವಿಪರೀತವಾದ ಬುದ್ಧಿಯುಳ್ಳವ. ಜೊತೆಗೆ ಕಿವುಡ ಬೇರೆ. ಅವನಿಗೆ ಪಾಠ ಹೇಳಲು ನಮ್ಮಿಂದ ಸಾಧ್ಯವಾಗದ ಕಾರಣ, ಅವನನ್ನು ಶಾಲೆಯಿಂದ ಹೊರಗೆ ಹಾಕುತ್ತಿದ್ದೇವೆ. ಇನ್ನು ಮುಂದೆ ಅವನಿಗೆ ನಿಮ್ಮ ಮನೆಯಲ್ಲಿ ನೀವೇ ಪಾಠ ಹೇಳಿಕೊಡಿ’.

ಮುಚ್ಚಿದ ಲಕೋಟೆಯೊಳಗಿದ್ದ ಈ ಪತ್ರವನ್ನು ಬಾಲಕ ತನ್ನ ತಾಯಿಗೆ ತಂದು ಕೊಡುತ್ತಾನೆ. ಪತ್ರವನ್ನು ಓದಿದ ಆ ತಾಯಿ ಕಣ್ಣೀರು ಹಾಕಲಾರಂಭಿಸಿದಳು. ಇದನ್ನು ಗಮನಿಸಿದ ಬಾಲಕ ‘ಪತ್ರದೊಳಗೆ ಏನಿದೆ?’ ಎಂದು ಕೇಳಿದಾಗ ಸತ್ಯಾಂಶ ಹೇಳಿದರೆ ಎಲ್ಲಿ ತನ್ನ ಮಗ ಬೇಸರ ಪಟ್ಟುಕೊಂಡು ಆತ್ಮಶಕ್ತಿಯನ್ನೇ ಕಳೆದುಕೊಂಡಾನೋ ಎಂಬ ಭಯದಿಂದ ‘ನಿಮ್ಮ ಮಗ ಬಹಳ ಬುದ್ಧಿವಂತ, ಬಲು ಜಾಣ, ನಮ್ಮದು ಚಿಕ್ಕ ಶಾಲೆ. ಅವನಿಗೆ ಪಾಠ ಹೇಳುವ ಸಾಮರ್ಥ್ಯವುಳ್ಳ ಶಿಕ್ಷಕರು ನಮ್ಮಲ್ಲಿ ಇಲ್ಲ. ಈ ಕಾರಣ, ಇನ್ನು ಮುಂದೆ ನೀವೇ ಅವನಿಗೆ ಪಾಠ ಹೇಳಿ’ ಎಂಬ ಸುಂದರ ಸುಳ್ಳನ್ನು ಹೇಳುತ್ತಾರೆ.

ವೃತ್ತಿಯಿಂದ ಶಿಕ್ಷಕಿಯಾಗಿದ್ದ ಆಕೆ ಮಗನಿಗೆ ತಾನೇ ಶಿಕ್ಷಣವನ್ನು ನೀಡಿ ಮಾರ್ಗದರ್ಶನ ಮಾಡಿ ಸಂಶೋಧನೆಗೆ ಪ್ರೇರೇಪಿಸಿ ಜಗತ್ತಿನ ಅತಿದೊಡ್ಡ ವಿಜ್ಞಾನಿಯಾಗಲು ಕಾರಣಳಾಗುತ್ತಾಳೆ. ಆ ವಿಜ್ಞಾನಿ ಇನ್ಯಾರೂ ಅಲ್ಲ, ತನ್ನ 84 ವರ್ಷದ ಜೀವನದಲ್ಲಿ ಟೆಲಿಫೋನ್, ಟೆಲಿಗ್ರಾಫ್, ಫೋನೋಗ್ರಾಫ್, ವಿದ್ಯುತ್ ಬಲ್ಬ್ ಮುಂತಾದ 1093 ಪೇಟೆಂಟ್​ಗಳನ್ನು ಪಡೆದ ಮಹಾವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್.

ತನ್ನ ಜೀವನದಲ್ಲಿ ಸ್ಪೂರ್ತಿಯಾಗಿದ್ದ ಅವನ ತಾಯಿ ನ್ಯಾನ್ಸಿ ಮಾಥ್ಯೂ ತೀರಿಕೊಂಡ ಬಳಿಕ ಆಕೆಯ ಟ್ರಂಕ್​ಗಳನ್ನು ಹುಡುಕುತ್ತಿದ್ದಾಗ ಅಂದು ಅವನ ಶಾಲೆಯ ಉಪಾಧ್ಯಾಯರು ಬರೆದ ಪತ್ರ ಸಿಕ್ಕಿತು. ತನ್ನ ಏಳಿಗೆಗಾಗಿ ಅಮ್ಮ ಹೇಳಿದ್ದೇ ಬೇರೆ, ಆ ಪತ್ರದಲ್ಲಿ ಇದ್ದುದೇ ಬೇರೆ ಎಂಬ ನಿಜಾಂಶ ಮನವರಿಕೆಯಾದಾಗ ಅಮ್ಮನ ಹೃದಯವನ್ನು ನೆನೆದು ಅವನ ಕಣ್ಣುಗಳು ಒದ್ದೆಯಾಗದೆ ಇರಲಿಲ್ಲ. ಹೀಗೆ ಪೋಷಕರೂ ಶಿಕ್ಷಕರಾಗಿ ಮಕ್ಕಳಿಗೆ ಸ್ಪೂರ್ತಿಯನ್ನು ತುಂಬಿ ಅವರ ಕೀರ್ತಿಗೆ ಕಾರಣರಾಗಬಹುದಲ್ಲವೇ?

Leave a Reply

Your email address will not be published. Required fields are marked *

Back To Top