Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಅಮೆರಿಕಾಗೆ ಅಮರಿಕೊಂಡಿರುವ ಕೊರಿಯನ್ ಕರ್ಮ

Wednesday, 13.09.2017, 3:03 AM       No Comments

ಉತ್ತರ ಕೊರಿಯಾಕ್ಕೆ ಪಾಠ ಕಲಿಸಲು ಅಗತ್ಯವಾದ ಎಲ್ಲ ತಯಾರಿಯೂ ಮುಗಿದಿದೆ ಎಂಬ ಡೊನಾಲ್ಡ್ ಟ್ರಂಪ್ ಘೋಷಣೆಗೆ ಪ್ರತ್ಯುತ್ತರವೆಂಬಂತೆ, ಅಮೆರಿಕದ ಮೇಲೆ ಅಣ್ವಸ್ತ್ರ ದಾಳಿ ಎಸಗುವುದಕ್ಕೆ ತಾನೂ ಸಿದ್ಧ ಎಂದು ಉತ್ತರ ಕೊರಿಯಾ ಹೂಂಕರಿಸಿದೆ. ಇದರ ಫಲಶ್ರುತಿ ಏನಾಗಬಹುದು?

 ಈ ಕ್ಷಣಕ್ಕೆ ಜಗತ್ತನ್ನು ಅತೀವ ಆತಂಕಕ್ಕೀಡುಮಾಡಿರುವ ವಿಷಯವೆಂದರೆ ಉತ್ತರ ಕೊರಿಯಾದಿಂದ ಬರುತ್ತಿರುವ ಅಣ್ವಸ್ತ್ರ ಬೆದರಿಕೆಗಳು. ಐವತ್ತೈದು ವರ್ಷಗಳ ಹಿಂದಿನ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ನಂತರ ಜಗತ್ತು ಅಣ್ವಸ್ತ್ರ ಸಮರದ ಹೊಸ್ತಿಲಿಗೆ ಬಂದು ನಿಂತಿರುವುದು ಇದೇ ಮೊದಲು.

ಕಳೆದ ಎರಡೇ ವಾರಗಳಲ್ಲಿ ಅಮೆರಿಕಾವನ್ನು ಮುಟ್ಟಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಪಡೆದುಕೊಂಡ ಮರುಗಳಿಗೆಯೇ ತಾನು ಹೈಡ್ರೋಜನ್ ಬಾಂಬ್ ಎಂದು ಬಣ್ಣಿಸುತ್ತಿರುವ, ಆದರೆ 143 ಕಿಲೋಟನ್​ಗಳಷ್ಟು ಭಾರಿಯಾದ ಅಣ್ವಸ್ತ್ರ ಎಂದು ಹೊರಗಿನ ಮಿಲಿಟರಿ ತಜ್ಞರು ಅಂದಾಜಿಸಿರುವ ಸಮೂಹ ನಾಶಕ ಅಸ್ತ್ರವನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ಪರೀಕ್ಷಿಸಿದೆ. ಈಗ ಉತ್ತರ ಕೊರಿಯಾದ ಮೂವತ್ತಮೂರರ ಸೈಕೊಪ್ಯಾಥ್ ಅಧ್ಯಕ್ಷ ಕಿಮ್ ಜೊಂಗ್-ಉನ್ ಮುಂದೆ ಒಸಾಮಾ ಬಿನ್ ಲಾಡೆನ್ ಚಿನ್ನಿ-ದಾಂಡು ಹಿಡಿದ ಎಳೆಯ ಹುಡುಗ ಅಷ್ಟೇ ಎಂದು ಹೇಳಿದರೆ ಉತ್ತರ ಕೊರಿಯಾದಿಂದ ಜಗತ್ತಿಗೆ ಮುಖ್ಯವಾಗಿ ದಕ್ಷಿಣ ಕೊರಿಯಾ, ಜಪಾನ್ ಹಾಗೂ ಅಮೆರಿಕಾಗೆ ಎಂತಹ ಗಂಡಾಂತರವನ್ನೊಡ್ಡಬಹುದು ಎಂಬ ಒಂದು ಅಂದಾಜು ಸಿಗಬಹುದು.

ಉತ್ತರ ಕೊರಿಯಾ ಎರಡೂವರೆ ದಶಕಗಳಿಂದಲೂ ನಿಯತವಾಗಿ ಹೊಸಹೊಸ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸುತ್ತಲೇ ಇದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಆ ಕಮ್ಯೂನಿಸ್ಟ್ ದೇಶದ ಕ್ಷಿಪಣಿಗಳು ಅದೆಷ್ಟು ಅಪಾಯಕಾರಿಯಾಗಬಲ್ಲವು ಎನ್ನುವುದು ವಿಶ್ವಸಮುದಾಯಕ್ಕೆ, ಮುಖ್ಯವಾಗಿ ಅಮೆರಿಕಾಗೆ ಅರಿವಾದದ್ದು ಉತ್ತರ ಕೊರಿಯಾ ಅಣ್ವಸ್ತ್ರಗಳನ್ನು ಗಳಿಸಿಕೊಂಡಾಗ. ಆ ಅಣ್ವಸ್ತ್ರಗಳು ಎಲ್ಲಿಂದ ಸಿಕ್ಕಿದವು ಎಂಬುದರ ಜಾಡು ಹಿಡಿದು ಹೊರಟರೆ ಅಮೆರಿಕಾ ಹಿಂದೆ ಎಸಗಿದ ಕುಕೃತ್ಯಗಳ ಭಂಡಾರ ಬಿಚ್ಚಿಕೊಳ್ಳುತ್ತದೆ, ಕರ್ಮ ಸಿದ್ಧಾಂತಕ್ಕನುಗುಣವಾಗಿ ಅಮೆರಿಕಾ ತಾನು ಬಿತ್ತಿದ್ದನ್ನು ಬೆಳೆಯುತ್ತಿದೆ ಎಂಬ ದಾರುಣ ಸತ್ಯ ಅನಾವರಣಗೊಳ್ಳುತ್ತದೆ. ರೊನಾಲ್ಡ್ ರೀಗನ್ ಸರ್ಕಾರ 1980ರ ದಶಕದಲ್ಲಿ ಪಾಕಿಸ್ತಾನದ ರಹಸ್ಯ ಅಣ್ವಸ್ತ್ರ ಕಾರ್ಯಕ್ರಮಗಳ ಬಗ್ಗೆ ಜಾಣಕಿವುಡು, ಜಾಣಕುರುಡುತನ ತೋರಿಸಿತು. ಅಫ್ಘಾನಿಸ್ತಾನದಲ್ಲಿ ಸೋವಿಯೆತ್ ಸೇನೆಯನ್ನು ಮಣ್ಣುಮುಕ್ಕಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡ ವಾಷಿಂಗ್​ಟನ್ ಪಾಕಿಸ್ತಾನದ ಜಿಯಾ ಸರಕಾರ ಮಾಡುತ್ತಿದ್ದ ಎಲ್ಲ ಕುಕೃತ್ಯಗಳಿಗೂ ಮೌನಸಮ್ಮತಿ ನೀಡಿತು. ಒಂದು ಹಂತದಲ್ಲಂತೂ ಅಮೆರಿಕಾ ಸರಕಾರದ ರಕ್ಷಣಾ ಇಲಾಖೆ ಪೆಂಟಗನ್ ಮತ್ತು ಗುಪ್ತಚರ ಇಲಾಖೆ ಸಿಐಎ ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ರಹಸ್ಯವಾಗಿ ಸಹಕಾರ ನೀಡಿದ್ದವು! ಈ ಕರ್ಮಕಾಂಡ ಅಮೆರಿಕಾದ ಸಂಸತ್ತಿನಲ್ಲೇ 2009ರ ಬೇಸಗೆಯಲ್ಲಿ ಬಯಲಾಯಿತು.

ಅಮೆರಿಕಾದ ‘ಸಹಕಾರ‘ದಿಂದ ಪಾಕಿಸ್ತಾನ ಅಣ್ವಸ್ತ್ರಗಳನ್ನು ಗಳಿಸಿಕೊಂಡರೂ ಅವುಗಳನ್ನು ಭಾರತದ ವಿರುದ್ಧ ಪ್ರಯೋಗಿಸಲು ಅಗತ್ಯವಾದ ಕ್ಷಿಪಣಿಗಳು ಅದರಲ್ಲಿರಲಿಲ್ಲ. ಚೀನಾದ ಬಳಿ ದೂರಗಾಮಿ ಮಿಸೈಲ್​ಗಳಿದ್ದರೂ Mಜಿಠಠಜ್ಝಿಛಿ ಖಛ್ಚಿಜ್ಞಟ್ಝಟಜಢ ಇಟ್ಞಠ್ಟಿಟ್ಝ ್ಕಜಜಿಞಛಿ (Mಖಇ)ಗೆ ಬೀಜಿಂಗ್ ಸಹಿಹಾಕಿದ್ದರಿಂದಾಗಿ ಆ ತಂತ್ರಜ್ಞಾನವನ್ನು ಅದು ಪಾಕಿಸ್ತಾನಕ್ಕೆ ನೀಡುವುದಕ್ಕೆ ತೊಡಕುಗಳಿದ್ದವು. ಆ ಸಂದರ್ಭದಲ್ಲಿ ಉತ್ತರ ಕೊರಿಯಾ ವೃದ್ಧಿಗೊಳಿಸಿದ್ದ ್ಝಟ್ಠಿಜಿಛ ಟ್ಟಟಟಛ್ಝಿ್ಝ್ಞ ಮಾದರಿಯ ಮಿಸೈಲ್​ಗಳತ್ತ ಪಾಕಿಸ್ತಾನದ ಕಣ್ಣುಬಿತ್ತು. ಸಮೂಹನಾಶ ಅಸ್ತ್ರಗಳ ತಂತ್ರಜ್ಞಾನಗಳ ವರ್ಗಾವಣೆಯ ಬಗೆಗಿನ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳಿಗೂ ಸಹಿ ಹಾಕದೇ, ಯಾರ ಉಪದೇಶಕ್ಕೂ ಬೆಲೆ ಕೊಡದೇ, ಈಗಾಗಲೇ ಈಜಿಪ್ಟ್, ಲಿಬಿಯಾ, ಇರಾಕ್, ಸಿರಿಯಾ ಮತ್ತು ಯೆಮೆನ್​ಗಳಿಗೆ ಮಿಸೈಲ್ ತಂತ್ರಜ್ಞಾನವನ್ನು ಮಾರಿದ್ದ ಉತ್ತರ ಕೊರಿಯಾದಿಂದ ತನಗೆ ಅಗತ್ಯವಿದ್ದ ತಂತ್ರಜ್ಞಾನವನ್ನು ಖರೀದಿಸುವುದಕ್ಕೆ ಪಾಕಿಸ್ತಾನಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ತನ್ನ ಮಿಸೈಲ್ ತಂತ್ರಜ್ಞಾನಕ್ಕೆ ಬದಲಾಗಿ ಪಾಕಿಸ್ತಾನ ಅಣ್ವಸ್ತ್ರ ತಂತ್ರಜ್ಞಾನವನ್ನು ನೀಡಬೇಕೆಂದು ಪ್ಯೋಂಗ್​ಯ್ಯಾಂಗ್ ಬೇಡಿಕೆ ಮುಂದಿಟ್ಟಿತು. ಇದು ಪಾಕಿಸ್ತಾನಕ್ಕೂ ಸಮ್ಮತವಾಯಿತು. ಎರಡೂ ದೇಶಗಳ ನಡುವಿನ ಈ ಅನೈತಿಕ, ಕಾನೂನುಬಾಹಿರ ತಂತ್ರಜ್ಞಾನದ ವಿನಿಮಯವನ್ನು ಖುದ್ದಾಗಿ ನೆರವೇರಿಸಿದ್ದು ಬೆನಝಿರ್ ಭುಟ್ಟೋ. 1993ರಲ್ಲಿ ಪ್ರಧಾನಮಂತ್ರಿಯಾಗಿ ಉತ್ತರ ಕೊರಿಯಾಗೆ ಅಧಿಕೃತ ಭೇಟಿ ನೀಡಿದಾಗ ಅಣ್ವಸ್ತ್ರ ತಂತ್ರಜ್ಞಾನವಿದ್ದ ಸಿ.ಡಿ.ಯನ್ನು ಆಕೆ ತನ್ನ ಕೋಟಿನ ಒಳಜೇಬಿನಲ್ಲಿ ಕೊಂಡೊಯ್ದರು. ಹಿಂತಿರುಗುವಾಗ ಮಿಸೈಲ್ ತಂತ್ರಜ್ಞಾನದ ಸಿ.ಡಿ. ಆಕೆಯ ಜೇಬಿನಲ್ಲಿತ್ತು. ಅಷ್ಟೇ ಅಲ್ಲ, ಪಾಕಿಸ್ತಾನೀ ವಿಜ್ಞಾನಿಗಳ ಅಧ್ಯಯನಕ್ಕೆಂದು ನೊಂಡೋಂಗ್ ಮಿಸೈಲ್​ಗಳು ಬಿಡಿಬಿಡಿಯಾಗಿ ಪಾಕಿಸ್ತಾನ ತಲುಪಿದವು. ಹೀಗೆ ಒಂದು ರಾಷ್ಟ್ರದ ನಾಯಕಿಯಾಗಿ ಬೆನಝಿರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಿತ ತಂತ್ರಜ್ಞಾನದ ‘ಸ್ಮಗ್ಲರ್‘ ಆಗಿ ಕಾರ್ಯನಿರ್ವಹಿಸಿದರು. ಆಕೆ ತನ್ನನ್ನು ತಾನು ‘ಪಾಕಿಸ್ತಾನದ ಮಿಸೈಲ್ ಕಾರ್ಯಕ್ರಮಗಳ ತಾಯಿ‘ ಎಂದು ಹೊಗಳಿಕೊಂಡದ್ದಲ್ಲದ್ದೇ ‘ಪಾಕಿಸ್ತಾನದ ಎಲ್ಲ ಮಿಲಿಟರಿ ನಾಯಕರು ಒಟ್ಟಿಗೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಒಳ್ಳೆಯದನ್ನು ನಾನು ನನ್ನ ದೇಶಕ್ಕೆ ಮಾಡಿದ್ದೇನೆ‘ ಎಂದೂ ಕೊಚ್ಚಿಕೊಂಡದ್ದರ ಒಳಮರ್ಮ ಇದು.

ಉತ್ತರ ಕೊರಿಯಾದ ಮಿಸೈಲ್ ತಂತ್ರಜ್ಞಾನವನ್ನು ಮತ್ತಷ್ಟು ವೃದ್ಧಿಗೊಳಿಸಿದ ಪಾಕಿಸ್ತಾನೀಯರು 1999ರ ಹೊತ್ತಿಗೇ ಅಣ್ವಸ್ತ್ರಗಳನ್ನು ಕೊಂಡೊಯ್ಯಬಲ್ಲ ದೂರಗಾಮಿ ಘಾವ್ರಿ ಮತ್ತು ಶಾಹೀನ್ ಮಿಸೈಲ್​ಗಳನ್ನು ರೂಪಿಸಿದರು. ಪಾಕ್ ಅಣ್ವಸ್ತ್ರ ತಂತ್ರಜ್ಞಾನದಿಂದ ಇಂದು ಉತ್ತರ ಕೊರಿಯಾ ಅಣ್ವಸ್ತ್ರ ರಾಷ್ಟ್ರವಾಗಿ ಬೆಳೆದುನಿಂತಿದೆ. ಜತೆಗೇ, ತನ್ನಲ್ಲಿದ್ದ ಮಿಸೈಲ್ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಿಕೊಂಡು ಈಗ ಖಂಡಾಂತರ ಕ್ಷಿಪಣಿಗಳನ್ನು ಪಡೆದುಕೊಂಡಿದೆ. ಹಾಗೆ ನೋಡಿದರೆ ಮಿಸೈಲ್ ಅಭಿವೃದ್ಧಿ ಅಧ್ಯಕ್ಷ ಕಿಮ್ ಅತ್ಯಂತ ಪ್ರೀತಿಯ ಯೋಜನೆ. ಆರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಂದಿನಿಂದ ಅವರು 84 ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದ್ದಾರೆ! ಹೀಗೆ, ಅಂತಿಮವಾಗಿ ಆದದ್ದೇನೆಂದರೆ ಅಮೆರಿಕಾದ ಸಹಕಾರದಿಂದ ಗಳಿಸಿಕೊಂಡ ಅಣ್ವಸ್ತ್ರ ತಂತ್ರಜ್ಞಾನವನ್ನು ಪಾಕಿಸ್ತಾನೀಯರು ಉತ್ತರ ಕೊರಿಯಾ ಜತೆ ಹಂಚಿಕೊಂಡರು. ಅದನ್ನುಪಯೋಗಿಸಿಕೊಂಡು ತಾವು ತಯಾರಿಸಿದ ಅಣ್ವಸ್ತ್ರವನ್ನು ಕೊರಿಯನ್ನರು ಈಗ ಅಮೆರಿಕಾದತ್ತಲೇ ಝುಳಪಿಸುತ್ತಿದ್ದಾರೆ! ಮೂರು ದಶಕಗಳ ಹಿಂದಿನ ಕರ್ಮ ಇಂದು ಅಮೆರಿಕಾವನ್ನು ಅಮರಿಕೊಂಡಿದೆ.

ಅಮೆರಿಕಾ ಮೇಲೆ ಅಣ್ವಸ್ತ್ರ ದಾಳಿ ಎಸಗುವುದಾಗಿ ಉತ್ತರ ಕೊರಿಯಾ ಹೇಳುತ್ತಿದೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಉತ್ತರ ಕೊರಿಯಾಗೆ ಪಾಠ ಕಲಿಸಲು ಅಗತ್ಯದಾದ ಎಲ್ಲ ತಯಾರಿಯೂ ಮುಗಿದಿದೆ ಎಂದು ಘೊಷಿಸಿದ್ದಾರೆ. ಅಂದಹಾಗೆ, ಅಮೆರಿಕಾ-ಉತ್ತರ ಕೊರಿಯಾ ದ್ವೇಷಕ್ಕೆ ಏಳು ದಶಕಗಳ ಇತಿಹಾಸವಿದೆ. ಕೊರಿಯಾ ಪರ್ಯಾಯದ್ವೀಪ 1893ರಿಂದ 1945ರವರೆಗೆ ಜಪಾನ್​ನ ಅಧೀನದಲ್ಲಿತ್ತು. ಎರಡನೆಯ ಮಹಾಯುದ್ಧದಲ್ಲಿ ಜಪಾನ್ ಸೋತಾಗ ಕೊರಿಯಾದಲ್ಲಿದ್ದ ಅದರ ಸೇನೆಯನ್ನು ನಿಶ್ಶಸ್ತ್ರೀಕಣಗೊಳಿಸುವ ಜವಾಬ್ದಾರಿಯನ್ನು ಅಮೆರಿಕಾ ಮತ್ತು ಸೋವಿಯೆತ್ ಯೂನಿಯನ್ ತಮ್ಮಲ್ಲಿ ಹಂಚಿಕೊಂಡವು. ಒಪ್ಪಂದದ ಪ್ರಕಾರ ಪರ್ಯಾಯದ್ವೀಪದ ನಡುಮಧ್ಯದಲ್ಲಿ ಸಾಗುವ 38 ಡಿಗ್ರಿ ಉತ್ತರ ಅಕ್ಷಾಂಶದ ದಕ್ಷಿಣಕ್ಕಿದ್ದ ಪ್ರದೇಶದಲ್ಲಿ ಅಮೆರಿಕನ್ನರೂ ಉತ್ತರದಲ್ಲಿ ರಷಿಯನ್ನರೂ ತಂತಮ್ಮ ಜವಾಬ್ದಾರಿ ನಿರ್ವಹಿಸಬೇಕಾಗಿತ್ತು. ಜಪಾನೀ ಸೇನೆಯ ನಿಶ್ಶಸ್ತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾದ ನಂತರ ಇಡೀ ಕೊರಿಯಾ ಮತ್ತೆ ಒಂದುಗೂಡಿ ಒಂದೇ ರಾಷ್ಟ್ರವಾಗಿ ಒಂದೇ ಸರಕಾರದ ಆಡಳಿತಕ್ಕೆ ಒಳಪಡಬೇಕಾಗಿತ್ತು. ಆದರೆ ಸೋವಿಯೆತ್ ಯೂನಿಯನ್ ತನ್ನ ಹತೋಟಿಯಲ್ಲಿದ್ದ ಉತ್ತರದ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಕಮ್ಯೂನಿಸ್ಟ್ ಸರಕಾರವನ್ನು ಸ್ಥಾಪಿಸಿ ಕೊರಿಯಾದ ಭಾವೀ ಐಕ್ಯತೆಯನ್ನು ಸಂಕಷ್ಟಕ್ಕೀಡುಮಾಡಿತು. ಪ್ರತಿಕ್ರಿಯೆಯಾಗಿ ಅಮೆರಿಕಾ ದಕ್ಷಿಣದಲ್ಲಿ ತನ್ನ ಪರವಾದ ಸರಕಾರಕ್ಕೆ ಮನ್ನಣೆ ನೀಡಿತು. ಪರಿಣಾಮವಾಗಿ ಕೊರಿಯಾ ಪರ್ಯಾಯದ್ವೀಪ ‘ಕೋಣಗಳೆರಡುಂ ಹೋರೆ, ಗಿಡಮಿಂಗೆ ಮಿತ್ತು‘ ಎಂಬಂತೆ ಅಗ್ರರಾಷ್ಟ್ರಗಳ ನಡುವಿನ ಶೀತಲಸಮರದ ಕಣವಾಗಿ ಬದಲಾಗಿ ಅದರ ವಿಭಜನೆ ಶಾಶ್ವತವಾಗಿಬಿಟ್ಟಿತು. ಸೋವಿಯೆತ್ ಬೆಂಬಲದ ಜತೆ 1949ರ ನಂತರ ಕಮ್ಯೂನಿಸ್ಟ್ ಚೀನಾದ ಬೆಂಬಲವನ್ನೂ ಗಳಿಸಿಕೊಂಡ ಉತ್ತರ ಕೊರಿಯಾ 1950ರ ಜೂನ್​ನಲ್ಲಿ ಕ್ಷಿಪ್ರ ಸೈನಿಕ ಕಾರ್ಯಾಚರಣೆಯ ಮೂಲಕ ದಕ್ಷಿಣ ಸಮುದ್ರತೀರದ ಪೂಸಾನ್ ಪೆರಿಮೀಟರ್ ಎಂಬ ಪುಟ್ಟ ಪ್ರದೇಶದ ಹೊರತಾಗಿ ಇಡೀ ದಕ್ಷಿಣ ಕೊರಿಯಾವನ್ನು ಆಕ್ರಮಿಸಿಕೊಂಡುಬಿಟ್ಟಿತು. ಆದರೆ ಅಮೆರಿಕಾ ವಿಶ್ವಸಂಸ್ಥೆಯ ಬೆಂಬಲದೊಡನೆ ತನ್ನ ನೇತೃತ್ವದ ಅಂತಾರಾಷ್ಟ್ರೀಯ ಸೇನೆಯನ್ನು ಕಾಳಗಕ್ಕಿಳಿಸಿತು. ಮೂರು ವರ್ಷಗಳ ಯುದ್ಧದಲ್ಲಿ ಅಮೆರಿಕನ್ ಸೇನೆ ಮೇಲುಗೈ ಸಾಧಿಸಿ ಉತ್ತರ ಕೊರಿಯಾದೊಳಗೇ ನುಗ್ಗಿಬಂತು. ಆಗ ಆ ದೇಶವನ್ನು ಉಳಿಸಿದ್ದು ವಿಶ್ವಸಂಸ್ಥೆಯಲ್ಲಿ ಸೋವಿಯೆತ್ ರಾಜತಂತ್ರ ಮತ್ತು ರಣಾಂಗಣದಲ್ಲಿ ಚೀನಿ ರಣತಂತ್ರ. ಅಂತಿಮವಾಗಿ 1953ರಲ್ಲಿ ಕದನವಿರಾಮ ಜಾರಿಗೆ ಬಂತು.

ನಂತರ 60ರ ದಶಕದಲ್ಲಿ ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಚಳವಳಿ ಸೋವಿಯೆತ್ ಯೂನಿಯನ್ ಮತ್ತು ಚೀನಾ ಮಧ್ಯೆ ವಿಭಜನೆಗೊಂಡಾಗ ಉತ್ತರ ಕೊರಿಯಾ ತನಗೆ ಸೈದ್ಧಾಂತಿಕವಾಗಿ ಹಾಗೂ ಭೌಗೋಳಿಕವಾಗಿ ಹೆಚ್ಚು ಹತ್ತಿರವಾಗಿದ್ದ ಚೀನಾದ ತೆಕ್ಕೆಗೆ ಬಲವಾಗಿ ಸೇರಿಕೊಂಡಿತು. 90ರ ದಶಕದಲ್ಲಿ ಸೋವಿಯೆತ್ ಯೂನಿಯನ್ ಸಿಡಿದು ಕಮ್ಯೂನಿಸಂ ಕುಸಿದಾಗ ಉತ್ತರ ಕೊರಿಯಾ ಚೀನಾಗೆ ಮತ್ತಷ್ಟು ಬಲವಾಗಿ ಅಂಟಿಕೊಂಡಿತು. ಆದರೆ ತನ್ನ ಯಾವ ಪ್ರಯತ್ನದಿಂದಲೂ, ಯಾರ ಬೆಂಬಲದಿಂದಲೂ ಅದು ದಕ್ಷಿಣ ಕೊರಿಯಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗಲಿಲ್ಲ. ಆರ್ಥಿಕವಾಗಿ ಅಭಿವೃದ್ಧಿ ಹೊಂದತೊಡಗಿದ ದಕ್ಷಿಣ ಕೊರಿಯಾದ ಬೆನ್ನಿಗೆ ಅಮೆರಿಕಾ ಗಟ್ಟಿಯಾಗಿ ನಿಂತಿತ್ತು. ಹೀಗೆ ದಕ್ಷಿಣ ಕೊರಿಯಾವನ್ನು ಆಕ್ರಮಿಸಿಕೊಳ್ಳುವ ಬಯಕೆಗೆ ಮುಳ್ಳಾಗಿರುವ ಅಮೆರಿಕಾವನ್ನು ತನ್ನ ಪರಮಶತ್ರು ಎಂದು ಉತ್ತರ ಕೊರಿಯಾ ಬಗೆಯುತ್ತದೆ. ಅಮೆರಿಕಾದ ವಿರುದ್ಧ ದ್ವೇಷ ಕಾರುವುದರ ಜತೆಗೆ, ಅದರ ಮಿತ್ರದೇಶಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾಗಳ ಭದ್ರತೆಗೆ ಧಕ್ಕೆಯೊದಗುವ ನೀತಿಗಳ ಮೂಲಕ ಅಮೆರಿಕಾಗೆ ಶಾಶ್ವತ ತಲೆನೋವಾಗುವುದು ಉತ್ತರ ಕೊರಿಯಾದ ವಿದೇಶ ಮತ್ತು ರಕ್ಷಣಾ ನೀತಿಗಳ ಮೂಲತತ್ವವೇ ಆಗಿಹೋಗಿದೆ.

ಈಗಿನ ಮಿಸೈಲ್ ಮತ್ತು ಅಣ್ವಸ್ತ್ರ ಪರೀಕ್ಷೆಗಳ ಯಶಸ್ಸು ಮತ್ತದರ ಪರಿಣಾಮವಾಗಿ ಕೊಬ್ಬಿ ಅಣ್ವಸ್ತ್ರ ದಾಳಿ ನಡೆಸುವುದಾಗಿ ಬೆದರಿಕೆ ಹಾಕತೊಡಗಿದ್ದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಮೇಲೆ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಹೇರುವಂತೆ ಅಧ್ಯಕ್ಷ ಟ್ರಂಪ್ ವಿಶ್ವಸಂಸ್ಥೆಯನ್ನು ಒತ್ತಾಯಿಸಿದರು. ಅವರ ಮೊದಲ ಯೋಜನೆಯ ಪ್ರಕಾರ ಉತ್ತರ ಕೊರಿಯಾದ ಮುಖ್ಯ ರಫ್ತು ಸರಕುಗಳಾದ ಕಲ್ಲಿದ್ದಲು, ಉಕ್ಕು, ಸೀಸ ಹಾಗೂ ಉಡುಪುಗಳ ಮೇಲೆ ಸಂಪೂರ್ಣ ನಿಷೇಧದ ಜತೆಗೆ ತೈಲ ಹಾಗೂ ಅನಿಲದ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಬೇಕು ಎಂದಾಗಿತ್ತು. ಆದರೆ ಸಾಮಾನ್ಯ ಜನತೆ ಸಂಕಷ್ಟಕ್ಕೀಡಾಗುತ್ತಾರೆ ಎನ್ನುವ ಕಾರಣಕ್ಕೆ ತೈಲ ಹಾಗೂ ಅನಿಲದ ಪೂರೈಕೆಯ ನಿಲುಗಡೆಗೆ ಚೀನಾ ಮತ್ತು ರಷಿಯಾ ಸಮ್ಮತಿಸಲಿಲ್ಲ. ಅವುಗಳ ಮಾತಿಗೆ ಸಮ್ಮತಿಸದಿದ್ದರೆ ಇಡೀ ಆರ್ಥಿಕ ದಿಗ್ಬಂಧನ ಮಸೂದೆಯೇ ಬಿದ್ದುಹೋಗುವ ಅಪಾಯವನ್ನು ಮನಗಂಡ ಅಧ್ಯಕ್ಷ ಟ್ರಂಪ್ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾದರು. ಅದರ ಪರಿಣಾಮವಾಗಿ ಸರಳೀಕೃತಗೊಂಡ ಆರ್ಥಿಕ ದಿಗ್ಬಂಧನ ಮಸೂದೆ ಮೊನ್ನೆ ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅಂಗೀಕೃತವಾಯಿತು. ಅದರ ಪ್ರಕಾರ ಉತ್ತರ ಕೊರಿಯಾದ ರಫ್ತುಗಳ ಮೇಲೆ ಸಂಪೂರ್ಣ ನಿಷೇಧವಿರುತ್ತದೆ. ಆದರೆ, ಆ ದೇಶಕ್ಕೆ ತೈಲ ಹಾಗೂ ಅನಿಲದ ಪೂರೈಕೆ ಮೇಲೆ ನಿರ್ದಿಷ್ಟ ಪ್ರಮಾಣದ ನಿರ್ಬಂಧವನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ಹೇರಿದೆ.

ಈ ಆರ್ಥಿಕ ದಿಗ್ಬಂಧನದಿಂದ ಯಾವ ಪ್ರಯೋಜನವೂ ಆಗದು ಎಂದು ಈವರೆಗಿನ ಅನುಭವಗಳೇ ಸಾರುತ್ತವೆ. ಉತ್ತರ ಕೊರಿಯಾದ ಹಲವು ಸರಕುಗಳ ರಫ್ತಿನ ಮೇಲೆ ಕಳೆದ ಎಂಟು ವರ್ಷಗಳಿಂದಲೂ ಒಂದಲ್ಲಾ ಒಂದು ದಿಗ್ಬಂಧನವನ್ನು ವಿಶ್ವಸಂಸ್ಥೆ ಜಾರಿಗೊಳಿಸುತ್ತಲೇ ಇದೆ. ಆದರೆ ಆ ಯೋಜನೆಗಳೆಲ್ಲವೂ ಅದೇ ವಿಶ್ವಸಂಸ್ಥೆಯ ಪ್ರಮುಖ ಸದಸ್ಯರುಗಳಿಂದಲೇ ವಿಫಲಗೊಳ್ಳುತ್ತಿವೆ. ವಿಶ್ವಸಂಸ್ಥೆಯ ಸಮಿತಿಯೊಂದರ ಪ್ರಕಾರ ಕಳೆದ ಆರುತಿಂಗಳಲ್ಲೇ ಚೀನಾ, ಇಂಡಿಯಾ, ಮಲೇಶಿಯಾ ಸೇರಿದಂತೆ ಹಲವಾರು ದೇಶಗಳು ಕಳ್ಳಮಾರ್ಗದ ಮೂಲಕ 297 ದಶಲಕ್ಷ ಡಾಲರ್ ಮೌಲ್ಯದ ನಿರ್ಬಂಧಿತ ವಸ್ತುಗಳನ್ನು ಉತ್ತರ ಕೊರಿಯಾದಿಂದ ಖರೀದಿಸಿವೆ! ತೈಲ, ಅನಿಲದ ಪೂರೈಕೆಯ ನಿಲುಗಡೆಗೆ ಚೀನಾ ಹಾಗೂ ರಷಿಯಾ ಸಮ್ಮತಿಸದ್ದಕ್ಕೂ ಅವುಗಳದೇ ಸ್ವಾರ್ಥವಿದೆ. ಉತ್ತರ ಕೊರಿಯಾಗೆ ಆ ಅತ್ಯಗತ್ಯ ಇಂಧನಗಳನ್ನು ಪೂರೈಸುತ್ತಿರುವುದು ಪ್ರಮುಖವಾಗಿ ಆ ಎರಡು ದೇಶಗಳೇ.

ಆದರೆ ಅಧ್ಯಕ್ಷ ಟ್ರಂಪ್​ಗೆ ಆಯ್ಕೆಗಳು ಸೀಮಿತ. ಉತ್ತರ ಕೊರಿಯಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಅದರ ಅಣ್ವಸ್ತ್ರ ಹಾಗೂ ಕ್ಷಿಪಣಿಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸುವುದು ಸಾಧ್ಯವಿಲ್ಲ. ಉತ್ತರ ಕೊರಿಯಾವನ್ನು ಇರಾಕ್ ಅಥವಾ ಲಿಬಿಯಾಗಳಿಗೆ ಹೋಲಿಸಲಾಗುವುದಿಲ್ಲ. ಕಿಮ್ ಸರ್ಕಾರ ಶಸ್ತ್ರಾಸ್ತ್ರಗಳನ್ನು ಪರ್ವತಮಯ ದೇಶದ ಉದ್ದಗಲಕ್ಕೂ ಅಡಗಿಸಿಟ್ಟುಬಿಟ್ಟಿದೆ. ಅವುಗಳನ್ನೆಲ್ಲಾ ಹುಡುಕಿ ತೆಗೆಯುವ ಹೊತ್ತಿಗೆ ಅಮೆರಿಕಾ ಅಲ್ಲದಿದ್ದರೂ ಜಪಾನ್ ಹಾಗೂ ದಕ್ಷಿಣ ಕೊರಿಯಾ ಅಣ್ವಸ್ತ್ರ ದಾಳಿಗೆ ಒಳಗಾಗಿರುತ್ತವೆ, ಲಕ್ಷಾಂತರ ಜನರ ಮಾರಣಹೋಮವಾಗಿರುತ್ತದೆ. ಅಧ್ಯಕ್ಷ ಟ್ರಂಪ್ ಉತ್ತರ ಕೊರಿಯಾವನ್ನು ಹದ್ದುಬಸ್ತಿನಲ್ಲಿಡಲು ಮಾರ್ಗೇಪಾಯಗಳನ್ನು ತರಾತುರಿಯಲ್ಲಿ ಹುಡುಕುತ್ತಿದ್ದಾರೆ. ಜತೆಗೆ, ಪಾಕಿಸ್ತಾನಕ್ಕೆ ಧನಸಹಾಯ ನಿಲ್ಲಿಸಿ ಆ ದೇಶದ ಕೈಗಳನ್ನು ಕಟ್ಟಿಹಾಕಲೂ ನೋಡುತ್ತಿದ್ದಾರೆ. ಅವರ ಕೃತ್ಯಗಳು ದೀರ್ಘಸಮಯವನ್ನು ವ್ಯರ್ಥವಾಗಿ ಕಳೆದ ಶಾಲಾಬಾಲಕನೊಬ್ಬ ಕೊನೇಗಳಿಗೆಯಲ್ಲಿ ಹೋಮ್ ವರ್ಕ್ ಮಾಡಹೊರಟಂತೆ ಕಾಣುತ್ತಿದೆ. ಅಂತಹ ಬಾಲಕನ ತಲೆ ಆತಂಕ, ಆತುರ, ನಿಸ್ಸಹಾಯಕತೆ, ಅವೆಲ್ಲವೂ ಮೇಳೈಸಿದ ಅಗಾಧ ಗೊಂದಲಗಳ ಗೂಡಾಗಿಹೋಗಿರುತ್ತದೆ. ಅಧ್ಯಕ್ಷ ಟ್ರಂಪ್ ಅವರಲ್ಲಿ ನಾವೀಗ ಕಾಣುತ್ತಿರುವುದು ಅದೇ. ಆದರೆ, ಅಣ್ವಸ್ತ್ರ ಯುದ್ಧಕ್ಕೆ ಬಲಿಯಾದ ಲಕ್ಷಾಂತರ ಅಮಾಯಕರಿಗಾಗಿ ಮರುಕ ಪಡಬೇಕಾದ ದುರಂತ ಗಳಿಗೆ ಎಂದೂ ಬಾರದಿರಲಿ ಎಂದಷ್ಟೇ ನಾವೀಗ ಆಶಿಸಬೇಕಾಗಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top