Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಅಮೆರಿಕದ ಲಗಾಮು

Thursday, 21.09.2017, 3:00 AM       No Comments

ಉಗ್ರವಾದವನ್ನು ದಮನಿಸುವ ವಾಗ್ದಾನವಿತ್ತು ಅಮೆರಿಕದಿಂದ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ಪಡೆಯುತ್ತಿದ್ದ ಪಾಕಿಸ್ತಾನವೀಗ ಮಾತಿಗೆ ತಪ್ಪಿ ಉಗ್ರರ ಆಶ್ರಯದಾತನಾಗಿರುವುದು ಗೊತ್ತಿರುವ ಸಂಗತಿಯೇ. ಈ ವರ್ತನೆಯಿಂದ ಸಹಜವಾಗೇ ಕೆರಳಿರುವ ಅಮೆರಿಕ, ಪಾಕಿಸ್ತಾನಕ್ಕೆ ‘ಭಯೋತ್ಪಾದಕ ರಾಷ್ಟ್ರ’ ಎಂಬ ಹಣೆಪಟ್ಟಿ ಕಟ್ಟಲು ಸನ್ನದ್ಧವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅಮೆರಿಕ ಇಂಥ ನೇರಾನೇರ ಘೋಷಣೆಗೆ ಮುಂದಾಗುವುದೋ ಅಥವಾ ಹಲವು ನೆಲೆಗಟ್ಟುಗಳಲ್ಲಿ ನಿರ್ಬಂಧ ವಿಧಿಸಿ ಪಾಕಿಸ್ತಾನದ ಮೇಲೆ ಹತೋಟಿ ಸಾಧಿಸುವುದೋ ಎಂಬುದನ್ನು ಕಾದುನೋಡಬೇಕಿದೆ.

ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ವಿಶ್ವದೆಲ್ಲ ರಾಷ್ಟ್ರಗಳು ಕೈಜೋಡಿಸುವ ಅಗತ್ಯವಿದೆ ಎಂದು ಭಾರತ ಬಹಳ ವರ್ಷಗಳಿಂದಲೂ ಹೇಳಿಕೊಂಡೇ ಬಂದಿತ್ತು. ಆದರೆ ಈ ನಿಟ್ಟಿನಲ್ಲಿ ಅಷ್ಟೇನೂ ಉತ್ತೇಜನಾದಾಯಕ ವರ್ತನೆ ತೋರದಿದ್ದ ಅಮೆರಿಕ, ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಉಗ್ರದಾಳಿಯಾಗುತ್ತಿದ್ದಂತೆ, ಭಾರತದ ಈ ದನಿಯ ಹಿಂದೆ ಅಡಗಿರುವ ಅನಿವಾರ್ಯತೆಯ ತೀವ್ರತೆಯನ್ನು ಗ್ರಹಿಸಿತೆನ್ನಬೇಕು. ತರುವಾಯದಲ್ಲಿ, ಭಾರತದ ಗಡಿಭಾಗದಲ್ಲಿ ಮತ್ತು ಕಣಿವೆರಾಜ್ಯ ಕಾಶ್ಮೀರದಲ್ಲಿ ಪಾಕ್-ಪ್ರೇರಿತ ಹಿಂಸಾಚಾರ, ಭಯೋತ್ಪಾದಕ ಕೃತ್ಯಗಳು ತೀವ್ರಗೊಂಡಿದ್ದು ಜಾಗತಿಕ ಮಟ್ಟದಲ್ಲಿ ಅರಿವಿಗೆ ಬಂದಾಗ, ಉಗ್ರವಾದದ ದಮನದ ದನಿಗೆ ಅಮೆರಿಕ ಒತ್ತಾಸೆಯೂ ಸೇರಿಕೊಂಡಿತೆನ್ನಬೇಕು. ಹಾಗಂತ, ಅಮೆರಿಕ ನೇರವಾಗಿ ಪಾಕಿಸ್ತಾನವನ್ನು ಎದುರುಹಾಕಿಕೊಳ್ಳುವುದಿಲ್ಲ ಎಂಬುದು ಕೆಲ ರಾಜತಾಂತ್ರಿಕರ ಅಭಿಪ್ರಾಯ. ಇದಕ್ಕೆ ಕಾರಣ, ತನ್ನ ಹಿತಾಸಕ್ತಿಯನ್ನೂ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಅಮೆರಿಕ ಸಿಲುಕಿರುವುದು. ಅಫ್ಘಾನಿಸ್ತಾನ ನೆಲದಲ್ಲಿ ಅಮೆರಿಕ ನಡೆಸಿದ ಯುದ್ಧ 2014ರ ಡಿಸೆಂಬರ್ 28ರಂದು ಅಧಿಕೃತವಾಗಿ ಸಮಾಪನಗೊಂಡಿದ್ದರೂ, ಅಮೆರಿಕ ನೇತೃತ್ವದ ನ್ಯಾಟೊ-ಪಡೆಗಳ ಗಣನೀಯ ಭಾಗ ಇನ್ನೂ ಅಲ್ಲಿಯೇ ಬೀಡುಬಿಟ್ಟಿದೆ. ಆಫ್ಘನ್ ಸರ್ಕಾರಿ ಪಡೆಗಳಿಗೆ ತರಬೇತಿ ಮತ್ತು ಸಲಹೆ ನೀಡುವುದು ಇದರ ಹಿಂದಿನ ಉದ್ದೇಶ. ಈ ಪಡೆಗಳೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳಬೇಕೆಂದರೆ ಅಮೆರಿಕಕ್ಕೆ ಇರುವುದು ಪಾಕಿಸ್ತಾನ ಮೂಲಕದ ಮಾರ್ಗವೊಂದೇ. ಹೀಗಾಗಿ ಅದು ಪಾಕಿಸ್ತಾನವನ್ನು ನೇರಾನೇರವಾಗಿ ‘ಉಗ್ರರಾಷ್ಟ್ರ’ ಎಂದು ಘೋಷಿಸಲಾರದು ಎಂಬುದು ಮತ್ತೊಂದು ಲೆಕ್ಕಾಚಾರ.

ಒಂದೊಮ್ಮೆ ಅಮೆರಿಕ ಇಂಥ ಕಠೋರ ನಿಲುವಿಗೆ ಮುಂದಾದರೂ ಅಥವಾ ಹಿಂಬಾಗಿಲ ಮೂಲಕ ಪಾಕ್ ಮೇಲೆ ಹತೋಟಿ ಸಾಧಿಸಿದರೂ, ಏಷ್ಯಾ ವಲಯದಲ್ಲಿ ಶಾಂತಿ-ನೆಮ್ಮದಿಯ ವಾತಾವರಣ ನಿರ್ವಣವಾಗುವುದಕ್ಕೆ ಅದು ಪೂರಕವಾಗಿ ಪರಿಣಮಿಸಲಿರುವುದಂತೂ ದಿಟ. ಏಕೆಂದರೆ, ಪಾಕಿಸ್ತಾನ ಮತ್ತು ಚೀನಾ ಈಗಾಗಲೇ ಮಿತಿಮೀರಿದ ಆಕ್ರಮಣಶೀಲತೆ ತೋರುತ್ತಿರುವುದರ ಜತೆಗೆ ಪರಸ್ಪರ ಕೈಜೋಡಿಸಿವೆ. ಈ ಪೈಕಿ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮಣಿಸಿದರೆ ಅಥವಾ ಕಂಗೆಡಿಸಿದರೆ, ಸಹಜವಾಗಿಯೇ ಚೀನಾಕ್ಕೆ ಸಮರ್ಥ ಸಹಯೋಗಿ ಇಲ್ಲದಂತಾಗಿ, ಜಾಗತಿಕ ಪ್ರಾಬಲ್ಯ ಮೆರೆಯಲು ಹವಣಿಸುತ್ತಿರುವ ಅದರ ಕನಸು ಕಮರುತ್ತದೆ. ಪಾಕಿಸ್ತಾನದ ಮೇಲೆ ಆರ್ಥಿಕ ದಿಗ್ಬಂಧನದ ಹೇರಿಕೆಯಾಗಿಬಿಟ್ಟರಂತೂ, ಅಲ್ಲಿನ ಅರ್ಥವ್ಯವಸ್ಥೆ ಸಂಪೂರ್ಣ ಕುಸಿಯುವುದು ಖರೆ. ಅಮೆರಿಕ ತನ್ನ ನಿಲುವನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದಲ್ಲಿ, ವಿಶೇಷವಾಗಿ ಭಾರತದ ಪಾಲಿಗೆ ಅದು ವರದಾನವಾಗುವುದಂತೂ ದಿಟ. ಕಾರಣ, ಗಡಿಭಾಗದಲ್ಲಿ, ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಂತುಹೋಗಿ ಶಾಂತಿ ನೆಲೆಸುತ್ತದೆ. ಜತೆಗೆ ಅಮೆರಿಕವು ವಿವಿಧ ವಲಯಗಳಲ್ಲಿ ಸಹಭಾಗಿತ್ವಕ್ಕೆಂದು ಭಾರತದೆಡೆಗೆ ನೋಡುತ್ತಿರುವುದರಿಂದ, ಏಷ್ಯಾ ವಲಯದಲ್ಲಿ ಭಾರತದ ಪ್ರತಿಷ್ಠೆ ಮತ್ತು ಪ್ರಾಬಲ್ಯ ವರ್ಧಿಸುವುದರಲ್ಲಿ ಎರಡು ಮಾತಿಲ್ಲ.

 

Leave a Reply

Your email address will not be published. Required fields are marked *

Back To Top