Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಅಮಾನವೀಯ ಪದ್ಧತಿ ನಿಲ್ಲಲಿ

Monday, 08.01.2018, 3:03 AM       No Comments

ಒಂದೆಡೆ ಮಾಹಿತಿ-ತಂತ್ರಜ್ಞಾನದ ಭರಾಟೆ, ಮತ್ತೊಂದೆಡೆ ತ್ಯಾಜ್ಯ ಘಟಕ ಶುಚಿಗೊಳಿಸಲು ಮಾನವರನ್ನೇ ಗುಂಡಿಗೆ ಇಳಿಸುತ್ತಿರುವ ದುರಂತ. ರಾಜ್ಯದಲ್ಲಿ ಈ ಹಿಂದೆ ಹಲವು ಅವಘಡಗಳು ಸಂಭವಿಸಿದರೂ ಸರ್ಕಾರ ಎಚ್ಚೆತ್ತುಕೊಳ್ಳದ ಪರಿಣಾಮ ಭಾನುವಾರ ರಾಜಧಾನಿ ಬೆಂಗಳೂರು ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಯಿತು. ತ್ಯಾಜ್ಯ ಸಂಸ್ಕರಣ ಘಟಕ ಶುಚಿಗೊಳಿಸಲು ಇಳಿದಿದ್ದ ಮೂವರು ಕಾರ್ವಿುಕರು ಉಸಿರುಗಟ್ಟಿ ದುರ್ಮರಣಕ್ಕೀಡಾದ ಘಟನೆ ಎಚ್​ಎಸ್​ಆರ್ ಲೇಔಟ್ ಸಮೀಪದ ಬಂಡೇಪಾಳ್ಯದ ಎನ್​ಡಿ ಸಫೆಲ್ ಅಪಾರ್ಟ್​ವೆುಂಟ್​ನಲ್ಲಿ ನಡೆದಿದೆ.

ಮಲಗುಂಡಿ ಸ್ವಚ್ಛತೆಗೆ ವಿಶೇಷ ಯಂತ್ರಗಳು ಬಂದಿರುವ ಈ ಯಾಂತ್ರಿಕ ಯುಗದಲ್ಲೂ ಸರ್ಕಾರದ ನಿರ್ಲಕ್ಷ್ಯ, ಕಠಿಣ ಕಾನೂನಿನ ಕೊರತೆಯಿಂದಾಗಿ ಕೇವಲ 250-400 ರೂ.ಗಳಿಗೆ ಮನುಷ್ಯ ಜೀವ ಮಲದ ಗುಂಡಿಗೆ ಬಲಿಯಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಮಲ ಹೊರುವ ಪದ್ಧತಿ ವಿರುದ್ಧ ಈ ಹಿಂದೆ ನ್ಯಾಯಾಲಯವೂ ಚಾಟಿಯೇಟು ಬೀಸಿದ್ದರೂ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬುದು ಕರಾಳ ವಾಸ್ತವ. ಎಲ್ಲ ಅಭಿವೃದ್ಧಿ ಕಾಮಗಾರಿಗಳು ಯಂತ್ರಗಳ ಸಹಾಯದಿಂದ ನಡೆಯುತ್ತಿರುವುದು ಗೊತ್ತೇ ಇದೆ. ಹೀಗಿರುವಾಗ ಮಲಗುಂಡಿ ಸ್ವಚ್ಛತೆ ವಿಷಯದಲ್ಲಿ ಯಂತ್ರಗಳ ಬಳಕೆಗೆ ಸರ್ಕಾರ ಹಿಂದೇಟು ಹಾಕಲು ಕಾರಣವೇನು? ಸ್ಥಳೀಯ ಸಂಸ್ಥೆಗಳಿಗೆ ಇಂಥ ಯಂತ್ರಗಳ ಖರೀದಿಗೆ ಸರ್ಕಾರವೇ ಸೂಕ್ತ ಅನುದಾನ ನೀಡಿದರೆ ಸಮಸ್ಯೆ ಇರುವುದಿಲ್ಲ. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಕಾರ್ವಿುಕರ ಜೀವಗಳು ಬಲಿಯಾಗುತ್ತಿರುವುದು ಖಂಡನೀಯ.

ಸಮಸ್ಯೆಯ ವಾಸ್ತವ ಸ್ವರೂಪವನ್ನು ಅರಿತು ಅದರ ಪರಿಹಾರಕ್ಕೆ ಮುಂದಾಗುವುದನ್ನು ಬಿಟ್ಟು ‘ರಾಜ್ಯಾದ್ಯಂತ ಮಲಹೊರುವ ಪದ್ಧತಿ ಇಳಿಮುಖವಾಗುತ್ತಿದೆ’ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ಸರ್ಕಾರಕ್ಕೆ ವರದಿ ನೀಡಿ, ದಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. 2011ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಪ್ರಕಾರ ರಾಜ್ಯದಲ್ಲಿ 15,375 ರಷ್ಟಿದ್ದ ಮಲಹೊರುವ ಕಾರ್ವಿುಕರ ಸಂಖ್ಯೆ ಈಗ ಸರ್ಕಾರ ನಡೆಸಿದ ಸಮೀಕ್ಷಾ ವರದಿಯಲ್ಲಿ ದಿಢೀರನೆ 427ಕ್ಕೆ ಇಳಿದಿದೆ! ವಾಸ್ತವದಲ್ಲಿ ಮಲಹೊರುವ ಕಾರ್ವಿುಕರ ಸಂಖ್ಯೆ ಕಡಿಮೆಯಾಗಿದ್ದರೆ, ಈ ಅಮಾನವೀಯ ಪದ್ಧತಿ ಕೊನೆಗೊಳ್ಳುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದಿತ್ತು. ಆದರೆ, ಸತ್ಯಾಂಶ ಬೇರೇಯೇ ಇದೆ. ರಾಜಧಾನಿ ಬೆಂಗಳೂರು ಸೇರಿದಂತೆ 12 ಜಿಲ್ಲೆ, ಹತ್ತಾರು ತಾಲೂಕುಗಳಲ್ಲಿ ಮಲಹೊರುವ ಪದ್ಧತಿ ಇಂದಿಗೂ ಜೀವಂತವಾಗಿದೆ.

ಗುಜರಾತ್, ಹರಿಯಾಣ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ವಚ್ಛತೆಗೆ ಸಂಪೂರ್ಣವಾಗಿ ಯಂತ್ರಗಳನ್ನೇ ಅವಲಂಬಿಸಿವೆ ಎಂಬುದು ಗಮನಿಸಬೇಕಾದ ಸಂಗತಿ. ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ಸಾಧನೆ ಮಾಡಿರುವ ಕರ್ನಾಟಕದಲ್ಲಿ ಇಂಥ ಯಂತ್ರಗಳ ಅಳವಡಿಕೆ ಕಷ್ಟವೇನಲ್ಲ. ಆದರೆ, ಸರ್ಕಾರ ಈ ವಿಷಯದಲ್ಲಿ ಏಕೆ ಕಣ್ತೆರೆಯುತ್ತಿಲ್ಲ ಎಂಬುದು ಅರ್ಥವಾಗದ ಸಂಗತಿ. ಇನ್ನೆಷ್ಟು ಕಾರ್ವಿುಕರು ಇಂಥ ದುರಂತಗಳಿಗೆ ಜೀವ ಬಲಿಕೊಡಬೇಕು? ಬೇರೆ ರಾಜ್ಯಗಳಿಂದ, ಊರುಗಳಿಂದ ಬಂದ ಕಾರ್ವಿುಕರು ಕೆಲವೇ ಗಂಟೆಗಳಲ್ಲಿ ಮ್ಯಾನ್​ಹೋಲ್ ಸ್ವಚ್ಛಗೊಳಿಸಿ ದಿನದ ಕೂಲಿ ಪಡೆಯಬಹುದು ಎಂಬ ಆಸೆಯಿಂದ ಇಂಥ ಕೆಲಸಕ್ಕೆ ಮುಂದಾಗುತ್ತಾರೆ. ಆದರೆ, ಯಾವುದೇ ಸುರಕ್ಷತಾ ಕ್ರಮಗಳು ಅಳವಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಬೇಕಿದೆ. ಕಾರ್ವಿುಕರ ಮೂಲಕ ಇಂಥ ಕೆಲಸ ಮಾಡಿಸುವುದು ತಪು್ಪ ಎಂಬ ಅರಿವು ಬಿತ್ತಬೇಕಿದೆ. ಒಟ್ಟಾರೆ, ಮಲಹೊರುವ ಪದ್ಧತಿ ಅಂತ್ಯಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಸಮರೋಪಾದಿಯಲ್ಲಿ ಕೈಗೊಂಡು, ಮತ್ತೊಮ್ಮೆ ಬೆಂಗಳೂರಿನಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.

Leave a Reply

Your email address will not be published. Required fields are marked *

Back To Top