Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ಅಭ್ಯರ್ಥಿ ಆಯ್ಕೆ ಹಣೆಬರಹ ಷಾ ಕೈನಲ್ಲಿ!

Sunday, 13.08.2017, 3:05 AM       No Comments

ಬೆಂಗಳೂರು: ರಾಜ್ಯದ ಪ್ರತಿ ಕ್ಷೇತ್ರ, ಜಿಲ್ಲೆ ಹಾಗೂ ಪಕ್ಷದ ಮುಖಂಡರ ಜಾತಕದೊಂದಿಗೆ ಕರ್ನಾಟಕ ಚುನಾವಣಾ ಅಖಾಡಕ್ಕೆ ಇಳಿದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರತಿಯೊಬ್ಬ ಅಭ್ಯರ್ಥಿ ಹಣೆಬರಹವೂ ದೆಹಲಿಯಲ್ಲಿ ನಿರ್ಧಾರವಾಗಲಿದೆ ಎಂದು ಎಚ್ಚರಿಸಿದ್ದಾರೆ. ಜತೆಗೆ ಪಕ್ಷದ ಸ್ಥಳೀಯ ಒಡಕಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ರಾಜ್ಯ ನಾಯಕರಿಗೆ ಷಾ ಪರೋಕ್ಷ ಸಂದೇಶ ನೀಡಿದ್ದಾರೆ.

ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ, ಶಾಸಕರು, ಸಂಸದರ ಸಭೆ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ‘ಮಿಷನ್-150‘ ಕುರಿತ ಸುದೀರ್ಘ ಮಾರ್ಗಸೂಚಿಯನ್ನು ಷಾ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲನೇ ಹಂತದ ನಾಯಕರಿಗೆ ಬಿಸಿ ಮುಟ್ಟಿಸಿದ್ದರೆ, ಪಕ್ಷದ ಬೆನ್ನೆಲುಬಾಗಿರುವ ಇತರ ನಾಯಕರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.

‘ಪಕ್ಷ ಸಂಘಟನೆಗೆ ಸಂಬಂಧಿಸಿ ಯಾರೊಬ್ಬರೂ ಹೆದರುವ ಪ್ರಶ್ನೆಯಿಲ್ಲ. ನಿಮ್ಮ ಸಂಘಟನಾ ಚತುರತೆಗೆ ಪಕ್ಷ ಬಹುಮಾನ ನೀಡಲಿದೆ. ರಾಜ್ಯದಲ್ಲಿನ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಅನ್ನು ರಾಷ್ಟ್ರೀಯ ಚುನಾವಣೆ ಸಮಿತಿಯೇ ಆಯ್ಕೆ ಮಾಡಲಿದೆ. ಬೆಂಗಳೂರಿನಲ್ಲಿ ಯಾರೊಬ್ಬರ ಹಣೆಬರಹ ನಿರ್ಧಾರವಾಗುವುದಿಲ್ಲ. ನಮ್ಮ ಕಾರ್ಯಸೂಚಿ ಪ್ರಕಾರ ನಡೆದುಕೊಳ್ಳದಿದ್ದರೆ ನಿಮ್ಮನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ‘ ಎಂದು ಪದಾಧಿಕಾರಿಗಳ ಸಭೆಯಲ್ಲಿ ಷಾ ಸ್ಪಷ್ಟಪಡಿಸಿದ್ದಾರೆ.

ಟಿಕೆಟ್ ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗುತ್ತದೆ ಎಂದು ಯಾವುದೇ ನಾಯಕರು ಗೊಂದಲದಲ್ಲಿರುವ ಅಗತ್ಯವಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಜವಾಬ್ದಾರಿ ನಿರ್ವಹಿಸಿದರೆ ನಾವು ನಡೆಸುವ ಸಮೀಕ್ಷೆಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಪದಾಧಿಕಾರಿಗಳಿಗೆ ವಿಶ್ವಾಸ ತುಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಾಸ್ಕ್ ನೀಡಿದ ಹೆಡ್​ವಾಸ್ಟರ್

ಯಾವುದೇ ಮೋರ್ಚಾ ಅಥವಾ ಪದಾಧಿಕಾರಿಗಳಿಂದ ದೂರು ಕೇಳುವ ಬದಲಿಗೆ, ನಿರ್ದಿಷ್ಟ ಗುರಿಯನ್ನು ಅವರಿಂದಲೇ ಹೇಳಿಸಲು ಅಮಿತ್ ಷಾ ಸಫಲರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ನೀವು ಗೆಲ್ಲುವುದರ ಜತೆಗೆ, ಇನ್ಯಾವ ಕ್ಷೇತ್ರಗಳನ್ನು ಗೆಲ್ಲಿಸಲು ಶ್ರಮ ಪಡಬಹುದು. ಪಕ್ಷದ ಟಿಕೆಟ್ ಬಯಸದೆ ನೇರವಾಗಿ ಬೇರೆ ಅಭ್ಯರ್ಥಿ ಗೆಲುವಿಗೆ ಸ್ಪಂದಿಸಬಹುದು ಎಂಬ ಪಟ್ಟಿ ತಯಾರಿಸಿಕೊಳ್ಳಿ. ಮುಂದಿನ ಸಭೆಯಷ್ಟರೊಳಗೆ ಈ ಕ್ಷೇತ್ರಗಳಲ್ಲಿನ ನಿರ್ದಿಷ್ಟ ಕಾರ್ಯತಂತ್ರದೊಂದಿಗೆ ಬನ್ನಿ ಎಂದು ಷಾ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಂಸದ, ಶಾಸಕ, ಮಾಜಿ ಶಾಸಕ ಹಾಗೂ ಪದಾಧಿಕಾರಿಗಳು ಶೀಘ್ರವೇ ಚುನಾವಣೆ ಕಾರ್ಯತಂತ್ರದೊಂದಿಗೆ ಬರಬೇಕಿದೆ. ಬಿಎಸ್​ವೈ

ಸಿಎಂ ಅಭ್ಯರ್ಥಿ

ಯಡಿಯೂರಪ್ಪ ಅವರೇ ಸಿಎಂ ಅಭ್ಯರ್ಥಿ ಎಂದು ಅಮಿತ್ ಷಾ ಮತ್ತೊಮ್ಮೆ ಹೇಳಿದ್ದಾರೆ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದರು.

ರಾಷ್ಟ್ರೀಯ ತಂಡದ ಸರಣಿ ಸಭೆ

ನಿಮ್ಮ ಪ್ರತಿ ಕಾರ್ಯತಂತ್ರ ಹಾಗೂ ಸಂಘಟನಾ ಕಾರ್ಯದ ಬಗ್ಗೆ ನಾವು ನಿಗಾ ಇಟ್ಟಿರುತ್ತೇವೆ. ಚುನಾವಣೆ ಮುಗಿಯುವರೆಗೂ ನಾನು ಹಾಗೂ ರಾಷ್ಟ್ರೀಯ ಬಿಜೆಪಿಯ ನಾನಾ ನಾಯಕರು ಬರುತ್ತಲೇ ಇರುತ್ತಾರೆ. ಈಗ ನೀಡಿರುವ ಗುರಿ ನಿರ್ವಹಣೆಯನ್ನು ಈ ನಾಯಕರು ಮಾಡುತ್ತಿರುತ್ತಾರೆ. ಈ ವರದಿ ಆಧರಿಸಿಯೇ ಪಕ್ಷವು ಚುನಾವಣೆಗೆ ತನ್ನ ಕಾರ್ಯತಂತ್ರ ನಿಗದಿ ಮಾಡಲಿದೆ ಎಂದು ಅಮಿತ್ ಷಾ ಸಭೆಗೆ ತಿಳಿಸಿದ್ದಾರೆ. ಗುಜರಾತ್ ಚುನಾವಣೆ ಬಳಿಕ ತಾವೇ ಖುದ್ದು ಚುನಾವಣೆ ಉಸ್ತುವಾರಿ ನಡೆಸುವುದಾಗಿಯೂ ಭರವಸೆ ನೀಡಿದ್ದಾರೆ.

ತಲೆ ತಗ್ಗಿಸದಂತೆ ಮಾಡಿ

ಜನರ ಬಳಿ ತೆರಳಿ ಮತ ಕೇಳಬೇಕಾದವನು ಕಾರ್ಯಕರ್ತ. ನಮ್ಮದು ಸಿದ್ಧಾಂತದ ಆಧಾರದಲ್ಲಿ ನಡೆಯುವ ಪಕ್ಷ. ಅಕ್ರಮ, ಅನೈತಿಕ ಮಾರ್ಗದಲ್ಲಿ ನಡೆದು ವರ್ಚಸ್ಸು ಕೆಡಿಸಿಕೊಳ್ಳಬೇಡಿ. ಕೆಳಮಟ್ಟದ ಕಾರ್ಯಕರ್ತ ಜನರೆದುರು ತಲೆತಗ್ಗಿಸಿ ನಡೆಯುವಂತಹ ಕೆಟ್ಟ ವಾತಾವರಣ ನಿರ್ವಿುಸಬೇಡಿ. ಇಷ್ಟರ ನಂತರವೂ ತಮ್ಮದೇ ಮಾರ್ಗದಲ್ಲಿ ನಡೆಯುವವರು ‘ತುಮ್ಹಾರಾ ಖಾನಾ ತುಮ್ ಖಾವೋಗೆ (ಮಾಡಿದ್ದುಣ್ಣೋ ಮಹರಾಯ) ಎನ್ನುವಂತೆ ಪರಿಸ್ಥಿತಿಯನ್ನು ಎದುರಿಸಿ ಎಂದು ಅಮಿತ್ ಷಾ ಎಚ್ಚರಿಕೆ ನೀಡಿದರು. ಪ್ರತಿ ಕ್ಷೇತ್ರ, ಪದಾಧಿಕಾರಿಗಳು, ಪ್ರಕೋಷ್ಠಗಳ ಕಾರ್ಯನಿರ್ವಹಣೆ ಕುರಿತು ಷಾ ಹೊಂದಿರುವ ಅಗಾಧ ಮಾಹಿತಿ ಹಾಗೂ ಮಾತಿನಲ್ಲಿರುವ ಸ್ಪಷ್ಟತೆ ಕಂಡು ಕೆಲವರು ದಂಗಾದರು ಎಂದು ಮೂಲಗಳು ಹೇಳಿವೆ.

ಮಾತು ಕೇಳದಿದ್ದರೆ ಪರಿಣಾಮ ಎದುರಿಸಿ

ಉತ್ತರ ಪ್ರದೇಶದಲ್ಲಿ ಸೂಚನೆಯಂತೆ ನಡೆದಿದ್ದಕ್ಕೇ ಅಭೂತಪೂರ್ವ ಜಯ ಸಿಕ್ಕಿತು. ಕರ್ನಾಟಕದವರಂತೆಯೇ ಗೋವಾದಲ್ಲೂ ತಮ್ಮದೇ ದಾರಿಯಲ್ಲಿ ಸಾಗಿದ ಕಾರಣ ಅತಂತ್ರ ಸರ್ಕಾರ ರಚನೆಯಾಯಿತು ಎಂದು ಷಾ ಚಾಟಿ ಬೀಸಿದರು. ಇದು ನನ್ನ ಕ್ಷೇತ್ರ ಎಂದು ಅಲ್ಲಿಗೇ ಸೀಮಿತವಾಗುವ ಅವಶ್ಯಕತೆಯಿಲ್ಲ. ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಓಡಾಟ ನಡೆಸಿ ಸಂಘಟನೆಯನ್ನು ಭದ್ರಗೊಳಿಸಿ. ಯಾರಿಗೇ ಟಿಕೆಟ್ ಸಿಕ್ಕರೂ ದುಡಿಯುವ ಸಂಕಲ್ಪ ಮಾಡಿ ಎಂದರು. ಈ ಮೂಲಕ ಯಾವ ಕ್ಷೇತ್ರದಲ್ಲಿ ಬೇಕಾದರೂ ಟಿಕೆಟ್ ಕೊಡಬಹುದು, ಕೊಡದೆಯೂ ಇರಬಹುದು ಎಂಬ ಸಂದೇಶವನ್ನು ರವಾನಿಸಿದರು.

ಮಿಷನ್-150 ಅಸಾಧ್ಯವಲ್ಲ

ರಾಜ್ಯ ಬಿಜೆಪಿ ನಾಯಕರ ಆಲಸ್ಯದಿಂದ ಪಕ್ಷದ ವೇದಿಕೆಯಲ್ಲಿ ಮತ್ತೆ ಸರ್ಕಾರ ರಚನೆ ಬಗ್ಗೆ ಗೊಂದಲ ಮೂಡಿತ್ತು. ಯಾವುದೇ ವಿಚಾರಗಳನ್ನು ಪಕ್ಷವು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಅಳಕು ಪದಾಧಿಕಾರಿಗಳ ಸಭೆಯಲ್ಲಿಯೂ ಪರೋಕ್ಷವಾಗಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಸುದೀರ್ಘ ಸಭೆಯಲ್ಲಿ ಪದಾಧಿಕಾರಿಗಳ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಸಂಘಟನೆ ಕುರಿತಂತೆ ಅಮಿತ್ ಷಾ ಮಾತನಾಡಿದ್ದಾರೆ.

ಪ್ರತಿಯೊಂದು ಮೋರ್ಚಾ, ಜಿಲ್ಲೆಯ ಕುರಿತ ಮಾಹಿತಿಗಳನ್ನು ಕೇಳಿ ಪಡೆದ ಷಾ, ಮುಂದೇನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ. ಯಾವುದೇ ಮುಖಂಡರು ಹಾರಿಕೆ ಉತ್ತರ ನೀಡದಂತೆಯೂ ಎಚ್ಚರಿಕೆ ವಹಿಸಿದ್ದಾರೆ. ಚುನಾವಣೆಗೆ ಹೇಗೆ ತಯಾರಾಗಬಹುದು ಎನ್ನುವ ಸ್ಪಷ್ಟ ದಾರಿ ಜತೆಗೆ, ನಿರ್ದಿಷ್ಟ ಗುರಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.

ಪಕ್ಷದ ಸಂಘಟನೆಯ್ಲಲಿ ಕೆಲ ಲೋಪಗಳಾಗಿದ್ದರೂ, ಮಿಷನ್-150 ಅಸಾಧ್ಯದ ಮಾತಲ್ಲ. ಈ ಹಿಂದೆ 2008ರಲ್ಲಿ ಗೆದ್ದ ಕ್ಷೇತ್ರಗಳ ಜತೆಗೆ, ಆ ಸಂದರ್ಭದಲ್ಲಿ ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳನ್ನು ಕೇಂದ್ರೀಕರಿಸಿದರೆ ಗೆಲುವು ಸುಲಭ ಎಂದು ಪದಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ನಾನು ಹೇಳಿದ್ನ ನೋಟ್ ಮಾಡ್ಕೊಳಿ

‘ಸಭೆಗೆ ಆಗಮಿಸುವಾಗ ಕೈನಲ್ಲಿ ಒಂದು ನೋಟ್​ಪುಸ್ತಕ, ಡೈರಿ ಜತೆಗೆ ಪೆನ್ನು ತರಬೇಕು. ನಾನು ಹೇಳಿದ್ದನ್ನು ಚಾಚೂತಪ್ಪದೆ ನೋಟ್ ಮಾಡಿಕೊಂಡು ಮನನ ಮಾಡಿಕೊಳ್ಳಬೇಕು’. ಹೀಗೆಂದು ತಣ್ಣಗೆ ಗದರಿದ್ದು ಅಮಿತ್ ಷಾ. ಮೊದಲ ಸಾಲಿನಲ್ಲಿ ಕುಳಿತಿದ್ದವರೂ ಸೇರಿ ಅನೇಕ ಜನಪ್ರತಿನಿಧಿಗಳಿಗೆ ಒಂದೊಂದು ನೋಟ್ ಪುಸ್ತಕ ಕೊಡಿಸಿದರು.

ನವಭಾರತಕ್ಕಾಗಿ ಕರ್ನಾಟಕ ಬದಲಿಸೋಣ

ದೀನದಯಾಳ್ ಉಪಾಧ್ಯಾಯ ಜನ್ಮಶತಮಾನೋತ್ಸವ ನಿತ್ತ ಮೂರು ದಿನದ ಸಭೆ ಎಂದರೂ ಬಹುತೇಕ ಚುನಾವಣಾ ಪ್ರಾರಂಭಿಕ ಸಭೆಯಂತಿದ್ದ ಮೊದಲ ದಿನದಲ್ಲಿ ವಿಶೇಷ ಚರ್ಚೆಯೊಂದು ನಡೆಯುತ್ತಿತ್ತು. ರಾಜ್ಯ ಬಿಜೆಪಿ ಕಚೇರಿ ಎದುರು ಹಾಕಲಾಗಿದ್ದ ಸಣ್ಣ ವೇದಿಕೆ ಹಿಂದಿನ ಫ್ಲೆಕ್ಸ್​ನಲ್ಲಿ ‘ಲೆಟ್ಸ್ ಟ್ರಾನ್ಸ್​ಫಾಮ್ರ್ ಕರ್ನಾಟಕ ಫಾರ್ ಎ ಬೆಟರ್ ಇಂಡಿಯಾ‘ (ನವಭಾರತಕ್ಕಾಗಿ ಕರ್ನಾಟಕ ಬದಲಿಸೋಣ) ಎಂಬ ಘೋಷವಾಕ್ಯ ಹಾಕಲಾಗಿತ್ತು. ಮುಂದಿನ ಚುನಾವಣೆಗೆ ಕರ್ನಾಟಕ ಬಿಜೆಪಿ ಇದೇ ಘೋಷವಾಕ್ಯ ಇರಿಸಿಕೊಳ್ಳುವುದೇ ಎಂಬ ಕುತೂಹಲ ಮೂಡಿತ್ತು. ಇದಕ್ಕೆ ಸರಿಯೆಂಬಂತೆ ಕಚೇರಿಯಲ್ಲಿ ಅನೌಪಚಾರಿಕ ಮಾತನಾಡುತ್ತಿದ್ದಾಗ ಈ ವಾಕ್ಯದ ಬಗ್ಗೆ ಹಿರಿಯ ನಾಯಕರಲ್ಲಿ ಅಭಿಪ್ರಾಯವನ್ನೂ ಅಮಿತ್ ಷಾ ಕೇಳಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸರ್ಕಾರದಿಂದ ಹದಗೆಟ್ಟಿರುವ ರಾಜ್ಯವನ್ನು ಬದಲಿಸಬೇಕು ಎಂಬ ಸಂದೇಶ ನೀಡುವ ಈ ವಾಕ್ಯವೇ ಅಂತಿಮವಾದರೂ ಅಚ್ಚರಿಯಿಲ್ಲ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ದುರಾಡಳಿತವೇ ಚುನಾವಣೆ ಅಜೆಂಡಾ

ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಅಪಸ್ವರವಿರುವುದು ಸಮೀಕ್ಷೆಯಲ್ಲಿ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಗರಣ, ಆರೋಪಿತ ಸಚಿವರು, ಜನ ವಿರೋಧಿ ನಿರ್ಣಯಗಳ ಮೂಲಕವೇ ಜನರ ಬಳಿಗೆ ಹೋಗಬೇಕು. ರಾಜ್ಯ ಕಾಂಗ್ರೆಸ್​ನ ತಂತ್ರಗಳಿಗೆ ಇದು ಮಾತ್ರ ಪ್ರತಿಯಾಗಬಲ್ಲದು. ಅಕ್ಟೋಬರ್ ಒಳಗೆ ಇದಕ್ಕೆ ಅಗತ್ಯವಿರುವ ಎಲ್ಲ ಮಾಹಿತಿ ಕಲೆಹಾಕಿಕೊಳ್ಳಬೇಕು ಎಂದು ಅಮಿತ್ ಷಾ ಗುರಿ ನೀಡಿದ್ದಾರೆ ಎನ್ನಲಾಗಿದೆ.

ಮೋರ್ಚಾಗಳ ಕಿವಿಹಿಂಡಿದ ಷಾ

ಯುವ ಮೋರ್ಚಾ, ಹಿಂದುಳಿದ ಮೋರ್ಚಾ ಸೇರಿ ಎಲ್ಲ ಮೋರ್ಚಾಗಳ ನಾಯಕರ ಕಾರ್ಯವೈಖರಿಗೆ ಅಮಿತ್ ಷಾ ಕಿಡಿಕಾರಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಪ್ರತಿಯೊಂದು ಲೋಪಗಳನ್ನು ದಾಖಲೆ ಸಮೇತ ಪಟ್ಟಿ ಮಾಡಿಕೊಳ್ಳಬೇಕು. ಹಾಗೆಯೇ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಜನರಿಗೆ ತಲುಪಬೇಕು. ಇವೆರಡು ಕಾರ್ಯವನ್ನು ಮೋರ್ಚಾ ಪದಾಧಿಕಾರಿಗಳು ಬೂತ್ ಮಟ್ಟದವರೆಗೂ ತಲುಪಿಸಬೇಕು ಎಂದು ಷಾ ಫರ್ವನು ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಜತೆ ಸಭೆ

ಮೂರು ದಿನಗಳ ಪ್ರವಾಸಕ್ಕೆ ಅಮಿತ್ ಷಾ ಕೈ ಬೀಸಿಕೊಂಡು ಬಂದಿರಲಿಲ್ಲ. ಪ್ರತಿ ಕ್ಷೇತ್ರ ಹಾಗೂ ಜಿಲ್ಲೆಯ ಮಾಹಿತಿಗಳನ್ನು ತಯಾರಿಸಿಕೊಂಡು ಸಭೆಯಲ್ಲಿ ಪಾಲ್ಗೊಂಡಿದ್ದರು. ಜತೆಗೆ ಬಹುತೇಕ ನಾಯಕರ ಜಾತಕವನ್ನೂ ಷಾ ತಂಡ ತಯಾರಿಸಿಕೊಂಡಿತ್ತು. ಈ ಕಾರಣದಿಂದ ಅನವಶ್ಯಕ ದೂರು ಹಾಗೂ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಷಾ ಇರಲಿಲ್ಲ.

ಹಿರಿಯರಿಗೂ ಬೆವರಿಳಿಸಿದ ಚಾಣಕ್ಯ

ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೆ ಅಮಿತ್ ಷಾ ಶನಿವಾರ ಬೆವರಿಳಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಚಕಾರವೆತ್ತದ ರಾಜ್ಯದ ಮೊದಲ ಹಂತದ ನಾಯಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸು ವದನ್ನು ಕಲಿಯಿರಿ ಎಂದು ಚಾಟಿ ಬೀಸಿದ್ದಾರೆ. ಪಕ್ಷದ ನಿಲುವನ್ನು ಹೇಗೆ ಸಾರ್ವಜನಿಕರಿಗೆ ಮುಟ್ಟಿಸುತ್ತೀರಿ ಎಂದು ಷಾ ಕಿವಿಹಿಂಡಿದ್ದಾರೆ.

ಯಾವುದೇ ವಿಚಾರ ಪ್ರಸ್ತಾಪಿಸಿದರೂ ಅಂಕಿ ಸಂಖ್ಯೆ ಹಾಗೂ ಪ್ರಶ್ನೆ ಕೇಳಿದವರು ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿಯನ್ನು ಕೇಳಿ ಪಡೆದುಕೊಳ್ಳಲು ಷಾ ಮುಂದಾಗಿದ್ದಾರೆ. ಇದರಿಂದ ಬಹುತೇಕರು ಪ್ರಶ್ನೆ ಕೇಳಲು ಮುಂದಾಗಲಿಲ್ಲ. ಚಿಂತಕರ ಸಭೆಯಲ್ಲಿ ಗುಡುಗಿದ ಅಮಿತ್ ಷಾ ನನ್ನ ರಾಜಕೀಯ ಜೀವನದಲ್ಲಿ ಕಂಡಂಥ ಅತ್ಯಂತ ಭ್ರಷ್ಟ ಹಾಗೂ ನಾಚಿಕೆಗೇಡಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಿರಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಏಕೆ ಜಾರಿಗೊಳಿಸುತ್ತಿಲ್ಲವೆಂಬ ಲೆಕ್ಕ ಕೇಳಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಶನಿವಾರ ಕರೆ ನೀಡಿದರು.

ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಚಿಂತನಶೀಲರ ಸಭೆಯಲ್ಲಿ ವಿವಿಧ ಕ್ಷೇತ್ರದ 1500ಕ್ಕೂ ಹೆಚ್ಚು ಗಣ್ಯರನ್ನುದ್ದೇಶಿಸಿ ಮಾತನಾಡಿದರು. 1 ಗಂಟೆ ನಿರರ್ಗಳವಾಗಿ ಮಾತನಾಡಿದ ಷಾ, ಸೋನಿಯಾ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷರು ಯಾರಾಗುತ್ತಾರೆ? ಎಂದು ಷಾ ಕೇಳಿದ ಪ್ರಶ್ನೆಗೆ ಸಭಿಕರು ಒಕ್ಕೊರಲಿನಿಂದ ರಾಹುಲ್ ಗಾಂಧಿ ಎಂದಿತು. ನನ್ನ ನಂತರ ಬಿಜೆಪಿ ಅಧ್ಯಕ್ಷರು ಯಾರಾಗುತ್ತಾರೆ? ಎಂದು ಕೇಳಿದಾಗ ಯಾರೂ ಉತ್ತರಿಸಲಿಲ್ಲ. ಇದೇ ನಮಗೂ ಕಾಂಗ್ರೆಸ್​ಗೂ ಇರುವ ವ್ಯತ್ಯಾಸ ಎಂದರು.

ಭಾಷಣದ ಅಂತಿಮದಲ್ಲಿ ರಾಜ್ಯ ಕಾಂಗ್ರೆಸ್ ವಿಚಾರ ಪ್ರಸ್ತಾಪಿಸಿದ ಷಾ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. 3 ವರ್ಷದಲ್ಲಿ ಸರಾಸರಿ 15 ದಿನಕ್ಕೊಂದರಂತೆ ಕೇಂದ್ರ ಸರ್ಕಾರ 106 ಯೋಜನೆಗಳನ್ನು ನೀಡಿದೆ. ಕರ್ನಾಟಕದ ಜನರು ಸಿದ್ದರಾಮಯ್ಯ ಸರ್ಕಾರದ ಲೆಕ್ಕ ಕೇಳಬೇಕು ಎಂದರು.

ಭಾಗವಹಿಸಿದ್ದ ಗಣ್ಯರು

ಹಿರಿಯ ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ, ಮಾಜಿ ರಾಜ್ಯಪಾಲ ನ್ಯಾ. ಎಂ. ರಾಮಾಜೋಯಿಸ್, ಸಾಹಿತಿ ಡಾ. ಸುಮತೀಂದ್ರ ನಾಡಿಗ, ಶಿಕ್ಷಣ ತಜ್ಞ ಕೃ. ನರಹರಿ, ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಸಂಪತ್​ರಾಮನ್, ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಸೇರಿ ವಕೀಲರು, ವೈದ್ಯರು, ವಿವಿಧ ಕಂಪನಿಗಳ ಮುಖ್ಯಸ್ಥರು ಸಭೆಯಲ್ಲಿದ್ದರು.

ಡಿಕೆಶಿ ರಾಜೀನಾಮೆ ಪುರಾಣ

ಐಟಿ ದಾಳಿಗೊಳಗಾಗಿ ಸುದ್ದಿಯಾಗಿದ್ದ ಸಚಿವ ಡಿ.ಕೆ.ಶಿವಕುಮಾರ್ ರಾಜೀನಾಮೆ ವಿಚಾರವು ಬಿಜೆಪಿಯ ಆಂತರಿಕ ಹಾಗೂ ಬಹಿರಂಗ ಸಭೆಯಲ್ಲಿ ಮೊದಲ ಬಾರಿಗೆ ಚರ್ಚೆಗೆ ಬಂದಿತು. ಐಟಿ ದಾಳಿ ನಡೆದು ಎರಡು ವಾರವಾದರೂ ಯಾವೊಬ್ಬ ರಾಜ್ಯ ಬಿಜೆಪಿ ನಾಯಕರು ಡಿಕೆಶಿ ರಾಜೀನಾಮೆ ಕೇಳಿರಲಿಲ್ಲ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಗಮನದ ಬಳಿಕ ಮೊದಲ ಬಾರಿಗೆ ಈ ಕುರಿತ ಚರ್ಚೆ ಆರಂಭವಾಗಿದೆ. ಐಟಿ ದಾಳಿ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ ಹೋರಾಟ ನಡೆಸದಿದ್ದಕ್ಕೆ ಬೆಳಗ್ಗೆ ಹಾಗೂ ರಾತ್ರಿ ನಡೆದ ಕೋರ್​ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು. ಹಾಗೂ ರಾಜ್ಯ ನಾಯಕರಿಗೆ ಬಿಜೆಪಿ ವರಿಷ್ಠ ಅಮಿತ್ ಷಾ ತರಾಟೆ ತೆಗೆದುಕೊಂಡರು. ಆದರೆ ಚಿಂತಕರ ಸಭೆಯಲ್ಲಿ ಡಿಕೆಶಿ ಹೆಸರು ಪ್ರಸ್ತಾಪಿಸದೇ ರಾಜ್ಯ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಅವರು, ಐಟಿ ದಾಳಿಯಾದರೂ ರಾಜೀನಾಮೆ ಕೇಳದೇ ಭ್ರಷ್ಟರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬೆಳಗ್ಗೆಯಿಂದ ಸಂಜೆವರೆಗೆ

  • ಬೆ.10.45- ನವದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ
  • ಬೆ.11.00- ಸಾದರಳ್ಳಿ ಗೇಟ್ ಬಳಿ ಸ್ವಾಗತ
  • ಬೆ.11.40- ರಾಜ್ಯ ಬಿಜೆಪಿ ಕಚೇರಿ ಮುಂಭಾಗ ಸನ್ಮಾನ, ಭಾಷಣ
  • ಮ.12.00- ನಾನಾಜಿ ದೇಶಮುಖ್ ಇ-ಲೈಬ್ರರಿ ಉದ್ಘಾಟನೆ
  • ಮ.1.00- ಕೋರ್ ಕಮಿಟಿ ಸಭೆ
  • ಮ.2.00- ಶಾಸಕರು, ಸಂಸದರ ಸಭೆ
  • ಸಂ.4.00- ಪದಾಧಿಕಾರಿಗಳ ಸಭೆ
  • ಸಂ.5.00- ಶಾಸಕರು, ಜಿಲ್ಲಾಧ್ಯಕ್ಷರ ಜತೆ ಸಭೆ
  • ಸಂ.6.50- ಚಿಂತಕರೊಂದಿಗೆ ಸಭೆ
  • ರಾತ್ರಿ. 9- ರಾಜ್ಯ ಪ್ರಮುಖರೊಂದಿಗೆ ಸಮಾಲೋಚನೆ

ಇಂದು ಎಲ್ಲಿ ಷಾ ಪ್ರವಾಸ?

ಎರಡನೇ ದಿನದ ಪ್ರವಾಸದಲ್ಲಿ ಬೆಳಗ್ಗೆ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಆನಂತರ ಮಾರ್ಗಮಧ್ಯೆ ಜಿಂದಾಲ್ ನಗರದಲ್ಲಿ, ಪ್ರಮುಖ ವಿಸ್ತಾರಕರೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಆನಂತರ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡುತ್ತಾರೆ.

ಇ ಲೈಬ್ರರಿ ಉದ್ಘಾಟನೆ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯ 2ನೇ ಮಹಡಿಯಲ್ಲಿ ಸ್ಥಾಪಿಸಲಾಗಿರುವ ‘ನಾನಾಜಿ ದೇಶಮುಖ್ ಇ-ಲೈಬ್ರರಿ’ ಯನ್ನು ಅಮಿತ್ ಷಾ ಶನಿವಾರ ಉದ್ಘಟಿಸಿದರು.

Leave a Reply

Your email address will not be published. Required fields are marked *

Back To Top