Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಅಭಿವೃದ್ಧಿ ಮಂತ್ರದಿಂದ ಜನತಂತ್ರ ಸಬಲ

Thursday, 23.03.2017, 8:13 AM       No Comments

ಕರ್ನಾಟಕದಲ್ಲಿ ಮುಂದಿನ ವರ್ಷಾರಂಭದಲ್ಲಿ ಅಥವಾ ಅದಕ್ಕೂ ಮೊದಲೇ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಜನರೆಡೆಗೆ ಸಹಾನುಭೂತಿ ಹೊಂದಿರುವ ಒಂದು ದಕ್ಷ, ಪರಿಶುದ್ಧ ಮತ್ತು ಪಾರದರ್ಶಕ ಸರ್ಕಾರವನ್ನು ಚುನಾಯಿಸಬೇಕಾದ ಮಹತ್ವದ ಕರ್ತವ್ಯವನ್ನು ಕರ್ನಾಟಕದ ಜನತೆ ನೆರವೇರಿಸಬೇಕಿದೆ, ಅಭಿವೃದ್ಧಿಯ ಪರವಾಗಿ ಮತ ಚಲಾಯಿಸಬೇಕಿದೆ.

 ಉತ್ತರಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದಾಖಲಿಸಿದ ಭರ್ಜರಿ ವಿಜಯ, ಅದಕ್ಕೆ ಕಾರಣೀಭೂತವಾದ ಅಂಶಗಳ ಕುರಿತು ನಿನ್ನೆಯ ಕಂತಿನಲ್ಲಿ ಅವಲೋಕಿಸಿದೆವು. ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣಾ ಫಲಿತಾಂಶಗಳು ನಿರ್ವಿುಸಿದ ಡೋಲಾಯಮಾನ ಪರಿಸ್ಥಿತಿ ಮತ್ತು ಇತರ ಸಂಗತಿಗಳ ಕುರಿತು ಇಂದು ನೋಡೋಣ.

ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳೂ ಮಹತ್ವದ ಸಾಂವಿಧಾನಿಕ ಸಮಸ್ಯೆಯೊಂದನ್ನು ಸೃಷ್ಟಿಸಿದವು. ಉಭಯ ರಾಜ್ಯಗಳಲ್ಲೂ ಈ ಬಾರಿ ‘ಅತಂತ್ರ ವಿಧಾನಸಭೆ’ಗಳು ಸೃಷ್ಟಿಯಾಗಿದ್ದವು. ಅಂದರೆ ಯಾವುದೇ ರಾಜಕೀಯ ಪಕ್ಷಕ್ಕೂ (ಏಕೈಕ ಪಕ್ಷವಾಗಿ ಅಥವಾ ಚುನಾವಣಾ-ಪೂರ್ವ ಮೈತ್ರಿಕೂಟವಾಗಿ) ಸ್ಪಷ್ಟ ಬಹುಮತ ಲಭಿಸಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಸರ್ಕಾರ ರಚನೆಗೆ ಸಂವಿಧಾನದಲ್ಲಿ ಹೇಳಿರುವುದಕ್ಕೆ ಹೊರತಾದ ಸಂಪ್ರದಾಯಗಳನ್ನೂ ಪಾಲಿಸಲಾಗುತ್ತದೆ. ರಾಷ್ಟ್ರಪತಿಯಿಂದ ಪ್ರಧಾನಿಯ ನೇಮಕ ಮತ್ತು ರಾಜ್ಯದ ಮಟ್ಟದಲ್ಲಿ ರಾಜ್ಯಪಾಲರಿಂದ ಮುಖ್ಯಮಂತ್ರಿಯ ನೇಮಕ ಅಂತಹ ಸಂಪ್ರದಾಯಗಳಲ್ಲಿ ಒಂದು. ಇಂಗ್ಲೆಂಡಿನಲ್ಲಿ, ಬ್ರಿಟಿಷ್ ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ಕಾಮನ್ಸ್​ನಲ್ಲಿ (ನಮ್ಮ ಲೋಕಸಭೆಯಂತೆ) ಸ್ಪಷ್ಟ ಬಹುಮತ ಇಲ್ಲದೆ ಹೋದಾಗ, ಸದನದ ವಿಶ್ವಾಸ ಹೊಂದಿರುವ ವ್ಯಕ್ತಿಯೊಬ್ಬರನ್ನು ಅಲ್ಲಿನ ರಾಜಪ್ರಭುತ್ವವು ಪ್ರಧಾನಿಯಾಗಿ ನೇಮಿಸಬೇಕು. ಹೀಗೆ ಮಾಡುವಾಗ ನಿರ್ಗಮಿಸುತ್ತಿರುವ ಪ್ರಧಾನಿಯೊಂದಿಗೆ ಸಮಾಲೋಚಿಸಬೇಕು ಎಂದೂ ಸಂಪ್ರದಾಯಗಳು ಸಲಹೆಮಾಡುತ್ತವೆ. ಅದೇನೇ ಇರಲಿ, ಅನೇಕ ಬ್ರಿಟಿಷ್ ಸಂಪ್ರದಾಯಗಳನ್ನು ನಮ್ಮ ಸಂಸತ್ತು ಸ್ವೀಕರಿಸಿ ಅಳವಡಿಸಿಕೊಂಡಿಲ್ಲ. ಹೀಗಾಗಿ ನಾವು ನಮ್ಮ ಚಾರಿತ್ರಿಕ ವ್ಯವಸ್ಥೆಯತ್ತಲೇ ದೃಷ್ಟಿಹಾಯಿಸಿ ಉತ್ತರ ಕಂಡುಕೊಳ್ಳಬೇಕು. ಕನಿಷ್ಠ 3 ಚುನಾವಣೆಗಳಲ್ಲಿ (1989ರ 9ನೇ ಲೋಕಸಭಾ ಚುನಾವಣೆ, 1996ರ 11ನೇ ಮತ್ತು 1998ರ 12ನೇ ಲೋಕಸಭಾ ಚುನಾವಣೆ) ಅತಂತ್ರ ಲೋಕಸಭೆ ಹೊಮ್ಮಿದ್ದನ್ನು ನಾವು ಕಂಡಿದ್ದೇವೆ.

1989ರಲ್ಲಿ 545 ಸ್ಥಾನಗಳ ಪೈಕಿ 197ನ್ನು ಗೆದ್ದ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ಸರ್ಕಾರ ರಚಿಸಲು ಆಹ್ವಾನಿಸಿ, ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರು. ಆದರೆ, ಅಗತ್ಯ ಬೆಂಬಲ ಕ್ರೋಡೀಕರಿಸುವಲ್ಲಿ ಕಾಂಗ್ರೆಸ್ ವಿಫಲವಾದ ಹಿನ್ನೆಲೆಯಲ್ಲಿ, ಸರ್ಕಾರ ರಚಿಸುವಂತೆ ಜನತಾದಳ (ರಾಷ್ಟ್ರೀಯ ರಂಗ ಮೈತ್ರಿಕೂಟ)ವನ್ನು ಆಹ್ವಾನಿಸಲಾಯಿತು ಮತ್ತು ವಿ.ಪಿ. ಸಿಂಗ್ ಪ್ರಧಾನ ಮಂತ್ರಿಯಾದರು. ಹೀಗೆ ಮಾಡುವಲ್ಲಿ, ರಾಷ್ಟ್ರಪತಿ ಆರ್. ವೆಂಕಟರಾಮನ್ ‘ಅಂಕಗಣಿತ ಪರೀಕ್ಷೆ’ಯನ್ನು ಅನುಸರಿಸಿದರು; ಅಂದರೆ ಹೆಚ್ಚು ಸ್ಥಾನಗಳನ್ನು ಹೊಂದಿದ್ದ ಪಕ್ಷವನ್ನು ಮೊದಲು ಆಹ್ವಾನಿಸುವ ಪರಿಪಾಠಕ್ಕೆ ಮುಂದಾದರು.

1996ರ ಚುನಾವಣೆಯಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾದಾಗಲೂ, ಆಗಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಇದೇ ಪರಿಪಾಠವನ್ನು ಅನುಸರಿಸಿದರು. ಲೋಕಸಭೆಯಲ್ಲಿನ ದೊಡ್ಡಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚಿಸುವಂತೆ ಶರ್ಮಾ ಆಹ್ವಾನಿಸಿದರು. ಮೇ 15ರಂದು ಪ್ರಮಾಣವಚನ ಸ್ವೀಕರಿಸಿದ ಹೊಸ ಪ್ರಧಾನಿಗೆ, ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲು 2 ವಾರಗಳ ಅವಕಾಶ ನೀಡಲಾಯಿತು. ದುರದೃಷ್ಟವಶಾತ್, ಬಹುಮತ ಸಾಬೀತುಪಡಿಸಲಾಗದು ಎಂಬುದನ್ನರಿತು ಸೋಲೊಪ್ಪಿಕೊಂಡ ವಾಜಪೇಯಿ ವಿಶ್ವಾಸಮತ ಯಾಚನೆಯ ಬದಲಿಗೆ ಮೇ 28ರಂದು ರಾಜೀನಾಮೆ ನೀಡಬೇಕಾಗಿ ಬಂತು; 13 ದಿನಗಳ ಅವಧಿಯ ಅವರ ಸರ್ಕಾರ ಅಂತ್ಯವಾಗಿದ್ದು ಹೀಗೆ. ಇದು ಬಳಿಕ, ಎಚ್.ಡಿ.ದೇವೇಗೌಡ ಮತ್ತು ತರುವಾಯದಲ್ಲಿ ಐ.ಕೆ. ಗುಜ್ರಾಲ್ ನೇತೃತ್ವದ ಸಂಯುಕ್ತರಂಗ ಒಕ್ಕೂಟ ಸರ್ಕಾರ ಸ್ಥಾಪನೆಗೆ ದಾರಿಮಾಡಿಕೊಟ್ಟಿತು.

ಸಂಯುಕ್ತರಂಗ ಸರ್ಕಾರದ ಪತನ ಹಾಗೂ 11ನೇ ಲೋಕಸಭೆಯ ವಿಸರ್ಜನೆಯ ಪರಿಣಾಮವಾಗಿ, 12ನೇ ಲೋಕಸಭೆ ರಚನೆಗಾಗಿ 1998ರ ಸಾರ್ವತ್ರಿಕ ಚುನಾವಣೆ ನಡೆಯಿತು. ಆದರೆ ಯಾವುದೇ ಪಕ್ಷಕ್ಕಾಗಲೀ ಅಥವಾ ಚುನಾವಣಾ-ಪೂರ್ವ ಮೈತ್ರಿಕೂಟಕ್ಕಾಗಲೀ ಸ್ಪಷ್ಟ ಬಹುಮತ ಲಭಿಸದ ಕಾರಣ, ಮತ್ತೊಮ್ಮೆ ಡೋಲಾಯಮಾನ ಸನ್ನಿವೇಶ ನಿರ್ವಣವಾಯಿತು. ಆದಾಗ್ಯೂ, ಚುನಾವಣೆ ಬಳಿಕ ಬಿಜೆಪಿ ಪರವಾಗಿ ನೀಡಲಾದ ಬೆಂಬಲಸೂಚಕ ಪತ್ರಗಳನ್ನಾಧರಿಸಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಸರ್ಕಾರ ರಚಿಸುವಂತೆ ವಾಜಪೇಯಿಯವರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕೆ.ಆರ್. ನಾರಾಯಣನ್, ‘ಸಾಮಾನ್ಯವಾಗಿ, ಅತಿದೊಡ್ಡ ಪಕ್ಷದ ಅಥವಾ ಪಕ್ಷಗಳ ಮೈತ್ರಿಕೂಟದ ನಾಯಕನಿಗೆ ಸರ್ಕಾರ ರಚಿಸುವುದಕ್ಕೆ ಮೊದಲ ಅವಕಾಶ ನೀಡಬೇಕು; ಆದರೆ ಏಕೈಕ ದೊಡ್ಡಪಕ್ಷ ಅಥವಾ ಪಕ್ಷಗಳ ಮೈತ್ರಿಕೂಟಕ್ಕೆ ಸೇರಿರದ ಸಂಸದರು ಒಂದು ಸಮಷ್ಟಿ ಘಟಕವಾಗಿ, ‘ಏಕೈಕ ದೊಡ್ಡಪಕ್ಷ’ದ ಹಕ್ಕುದಾರಿಕೆಯವರಿಗಿಂತ ಸಂಖ್ಯಾಧಿಕ್ಯ ಹೊಂದಿರುವಂಥ ಸನ್ನಿವೇಶ ಹುಟ್ಟಿಕೊಳ್ಳಬಹುದಾದ್ದರಿಂದ, ಈ ಕಾರ್ಯವಿಧಾನ ಸಾರ್ವಕಾಲಿಕ ಸೂತ್ರವಾಗಲಾರದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಅತಿದೊಡ್ಡ ಪಕ್ಷದ ನಾಯಕ ಹೊಂದಿರುವ, ‘ಹಕ್ಕನ್ನು ರುಜುವಾತುಪಡಿಸಲಬಲ್ಲ ಸಾಮರ್ಥ್ಯ’ವನ್ನೇ ಪ್ರಧಾನ ಮಂತ್ರಿ ಆಯ್ಕೆಯು ಅವಲಂಬಿಸಿರುತ್ತದೆ ಎಂದೂ ನಾರಾಯಣನ್ ಹೇಳಿದ್ದರು.

ವಾಸ್ತವವಾಗಿ, 1954ರಲ್ಲಿ, ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ಬಳಿಕ, ಕಮ್ಯೂನಿಸ್ಟ್ ಪಕ್ಷವು ಏಕೈಕ ದೊಡ್ಡಪಕ್ಷವಾಗಿ ಹೊಮ್ಮಿದ್ದರೂ, ಸರ್ಕಾರ ರಚನೆಗೆ ಅದರ ನಾಯಕನನ್ನು ಆಹ್ವಾನಿಸಲಿಲ್ಲ. ಮೇಲಾಗಿ, ಕೇಂದ್ರ-ರಾಜ್ಯ ಬಾಂಧವ್ಯಗಳಿಗೆ ಸಂಬಂಧಿಸಿದ ಸರ್ಕಾರಿಯಾ ಆಯೋಗದ ವರದಿ ಕೂಡ, ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಸಂದರ್ಭದಲ್ಲಿ ರಾಜ್ಯಪಾಲರು ಈ ಕೆಳಗೆ ಸೂಚಿಸಲಾಗಿರುವ ಆದ್ಯತಾ ಕ್ರಮದ ಅನುಸಾರವಾಗಿ ಮತ್ತು ಸದರಿ ಆದ್ಯತಾಗುಂಪಿನಿಂದಲೇ ಮುಖ್ಯಮಂತ್ರಿಯನ್ನು ಆಯ್ಕೆಮಾಡಬೇಕು ಎಂದು ಶಿಫಾರಸುಮಾಡಿದೆ-

1. ಚುನಾವಣೆಗೆ ಮುಂಚಿತವಾಗಿ ರೂಪುಗೊಂಡಿದ್ದ ಪಕ್ಷಗಳ ಮೈತ್ರಿಕೂಟ;

2. ಪಕ್ಷೇತರರು ಸೇರಿದಂತೆ ಇತರರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಏಕೈಕ ದೊಡ್ಡಪಕ್ಷ;

3. ಮೈತ್ರಿಕೂಟದಲ್ಲಿನ ಎಲ್ಲ ಅಂಗಪಕ್ಷಗಳು ಸರ್ಕಾರವನ್ನು ಸೇರುವಂತಾಗುವ, ಪಕ್ಷಗಳ ಚುನಾವಣೋತ್ತರ ಮೈತ್ರಿಕೂಟ;

4. ಮೈತ್ರಿಕೂಟದಲ್ಲಿ ಕೆಲ ಪಕ್ಷಗಳು ಸರ್ಕಾರವನ್ನು ರಚಿಸುವ ಮತ್ತು ಪಕ್ಷೇತರರನ್ನೊಳಗೊಂಡಂತೆ ಉಳಿದ ಪಕ್ಷಗಳು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವಂತಾಗುವ, ಪಕ್ಷಗಳ ಚುನಾವಣೋತ್ತರ ಮೈತ್ರಿಕೂಟ.

ಪ್ರಸ್ತುತ, ಗೋವಾದಲ್ಲಿ ಉದ್ಭವಿಸಿದ ಸನ್ನಿವೇಶವನ್ನೇ ಪರಿಗಣಿಸುವುದಾದರೆ, ಕಾಂಗ್ರೆಸ್ ಏಕೈಕ ದೊಡ್ಡಪಕ್ಷವಾಗಿ ಹೊಮ್ಮಿದ್ದರೂ, ‘ಪಕ್ಷೇತರರನ್ನೊಳಗೊಂಡಂತೆ ಇತರರ ಬೆಂಬಲ’ ಅದಕ್ಕೆ ದಕ್ಕಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಯನ್ನು ಆಹ್ವಾನಿಸಿದ ರಾಜ್ಯಪಾಲರ ತೀರ್ವನವನ್ನು ಚಂದ್ರಕಾಂತ ಕಾವಳೇಕರ್ ಎಂಬ ಕಾಂಗ್ರೆಸ್ ನಾಯಕರು ಸವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಮಾರ್ಚ್ 14ರಂದು ಈ ತಕರಾರು ಅರ್ಜಿಯನ್ನು ಇತ್ಯರ್ಥಗೊಳಿಸಿ, ಮನೋಹರ ಪರಿಕ್ಕರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಲಯ, ‘ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲದ ವಾಗ್ದಾನ ನೀಡಿ, ಅದರೊಂದಿಗಿನ ತಮ್ಮ ನಿಷ್ಠೆಯನ್ನು ಅಭಿವ್ಯಕ್ತಿಸಿದ್ದಾರೆ; ಇಂಥ ಪ್ರಾತಿನಿಧ್ಯಗಳನ್ನು ಆಧರಿಸಿಯೇ ರಾಜ್ಯಪಾಲರು ಮನೋಹರ ಪರಿಕ್ಕರ್​ರನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ’ ಎಂದು ತೀರ್ಪನೀಡಿತು. ಬಿಜೆಪಿ ಪರವಾಗಿ ಹೊಮ್ಮಿರುವ ನಿಷ್ಠೆ ಹಾಗೂ ಬೆಂಬಲದ ವಿಷಯದಲ್ಲಿ ಯಾವುದೇ ನಿರ್ದಿಷ್ಟ ತಕರಾರಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತಂದುಕೊಂಡು, ಮುಖ್ಯಮಂತ್ರಿ ಬಹುಮತದ ಬೆಂಬಲ ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ನಿರ್ಣಯಿಸಲು ಆದಷ್ಟು ಬೇಗ ಸದನದಲ್ಲಿಯೇ ಬಹುಮತ ಪರೀಕ್ಷೆ ನಡೆಸುವಂತೆ ನಿರ್ದೇಶಿಸಿತು.

ಮಾರ್ಚ್ 16ರಂದು ಸದನದಲ್ಲಿ ಬಹುಮತ ಪರೀಕ್ಷೆ ನಡೆಯಿತು; ಒಟ್ಟು 40 ಶಾಸಕರ ಪೈಕಿ 22 ಮಂದಿಯ ಬೆಂಬಲ ಪಡೆಯುವಲ್ಲಿ ಪರಿಕ್ಕರ್ ಸಫಲರಾದರು. ಆಯಾ ರಾಜ್ಯಗಳ ರಾಜ್ಯಪಾಲರು ಸರ್ಕಾರ ರಚಿಸುವಂತೆ ಕಾಂಗ್ರೆಸ್ ಪಕ್ಷವನ್ನೇ ಮೊದಲಿಗೆ ಆಹ್ವಾನಿಸಬೇಕಿತ್ತೇ ಎಂಬುದೀಗ ಚರ್ಚಾಸ್ಪದ ವಿಷಯವಾಗಿದೆ. ಸರಳವಾಗಿ ಹೇಳುವುದಾದರೆ, ಸಾಕಷ್ಟು ಸದಸ್ಯರ ಬೆಂಬಲ ದಕ್ಕಿಸಿಕೊಳ್ಳುವಲ್ಲಿ ವಿಫಲವಾದ ಕಾಂಗ್ರೆಸ್, ‘ಕುದುರೆ ವ್ಯಾಪಾರ’ದ ಯತ್ನಗಳಲ್ಲೂ ಯಶಸ್ವಿಯಾಗಲಿಲ್ಲ.

ಈ ವಿಜಯದ ಮತ್ತೊಂದು ನೇರ ಪರಿಣಾಮವೇನೆಂದರೆ, ಮುಂಬರುವ ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿಯ ಅಸ್ತಿತ್ವ ಮತ್ತಷ್ಟು ಸದೃಢವಾಗಲಿದೆ; ರಾಜ್ಯಸಭೆಯಲ್ಲಿನ ನಿರ್ದಿಷ್ಟ ರಾಜ್ಯವೊಂದರ ಪ್ರತಿನಿಧಿಗಳನ್ನು ಆ ರಾಜ್ಯದ ವಿಧಾನಸಭಾ ಸದಸ್ಯರೇ ಚುನಾಯಿಸುತ್ತಾರೆ ಎಂಬುದೇ ಇದಕ್ಕೆ ಕಾರಣ. ವಾಸ್ತವವಾಗಿ, ಉತ್ತರಪ್ರದೇಶ ವಿಧಾನಸಭೆಯು ರಾಜ್ಯಸಭೆಗೆ 31 ಪ್ರತಿನಿಧಿಗಳನ್ನು ಕಳಿಸುತ್ತದೆ; ಬಿಜೆಪಿ ಈಗ ಗಳಿಸಿರುವ ಬಹುಮತವನ್ನೊಮ್ಮೆ ಅವಲೋಕಿಸಿದರೆ, ಈ ಸಂಖ್ಯೆಯಲ್ಲಿನ ಸಿಂಹಪಾಲು ಬಿಜೆಪಿಗೇ ದಕ್ಕಲಿದೆ. ಅಷ್ಟೇ ಅಲ್ಲ, ಗೋವಾ, ಉತ್ತರಾಖಂಡ, ಮಣಿಪುರ ವಿಧಾನಸಭಾ ಚುನಾವಣೆಗಳಲ್ಲೂ ಬಿಜೆಪಿ ವಿಜಯ ದಾಖಲಿಸಿರುವುದರಿಂದಾಗಿ, ಭವಿಷ್ಯತ್ತಿನಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರು ಹೆಚ್ಚೆಚ್ಚು ಕಾಣಿಸಲಿದ್ದಾರೆ; ಜತೆಗೆ ರಾಷ್ಟ್ರೀಯ ರಾಜಕಾರಣದಲ್ಲಿ ಈಗಾಗಲೇ ಕುಗ್ಗಿರುವ ಕಾಂಗ್ರೆಸ್ ಪ್ರಭಾವ, ಮತ್ತಷ್ಟು ತಗ್ಗಲಿದೆ. ನಿಜ ಹೇಳಬೇಕೆಂದರೆ, ಈಗ ಬಿಜೆಪಿಗೆ ಎದುರಾಳಿ ಎಂಬುದೇ ಇಲ್ಲ; ಸ್ವಯಂಕೃತಾಪರಾಧದಿಂದ ಕೆಳಗೆ ಬೀಳುವ ಪರಿಸ್ಥಿತಿ ತಂದುಕೊಳ್ಳದಿದ್ದಲ್ಲಿ 2019ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಗೆಲ್ಲುವುದು ನಿಶ್ಚಿತವೆಂದು ತೋರುತ್ತದೆ.

ದೇಶದ ಪಶ್ಚಿಮ, ಉತ್ತರ ಹಾಗೂ ಮಧ್ಯಭಾಗಗಳಲ್ಲಿ ಬಿಜೆಪಿಯ ಗರಿಷ್ಠ ಬೆಳವಣಿಗೆಯಾಗಿರುವುದರಿಂದಾಗಿ, ದಕ್ಷಿಣ ಮತ್ತು ಪೂರ್ವಭಾಗಗಳನ್ನು ‘ವಿಶೇಷ ಗಮನದ ಪ್ರದೇಶಗಳಾಗಿ’ ಬಿಜೆಪಿ ನಾಯಕತ್ವ ಪರಿಗಣಿಸಿದೆ. ಹೀಗಾಗಿ, ಬಿಜೆಪಿಯ ಮುಂದಿನ ನಡೆಯೀಗ ಸುಸ್ಪಷ್ಟ- ಅದೇ ‘ಮಿಷನ್ ಕರ್ನಾಟಕ 2018’. 15ನೇ ಕರ್ನಾಟಕ ವಿಧಾನಸಭಾ ಚುನಾವಣೆಯು ಮಂದಿನ ವರ್ಷಾರಂಭದಲ್ಲಿ ಅಥವಾ ಅದಕ್ಕೂ ಮುಂಚೆ ನಡೆಯುವ ಸಾಧ್ಯತೆಯಿದ್ದು, ದಕ್ಷಿಣ ಭಾರತದಲ್ಲಿ ‘ಆದ್ಯ ಪ್ರವರ್ತಕ’ನಾಗುವ ನಿಟ್ಟಿನಲ್ಲಿ ಇದು ಬಿಜೆಪಿಗೆ ಮಹಾದ್ವಾರವಾದರೆ ಅಚ್ಚರಿಯಿಲ್ಲ. ‘ಡೈರಿ ಗೇಟ್’ ಮತ್ತು ‘ಉಕ್ಕಿನ ಸೇತುವೆ ಹಗರಣ’ ಸೇರಿದಂತೆ, ಹಲವು ಕಳಂಕಗಳನ್ನು ಮೆತ್ತಿಕೊಂಡಿದೆ ಹಾಲಿ ಕಾಂಗ್ರೆಸ್ ಸರ್ಕಾರ; ಇಷ್ಟು ಸಾಲದೆಂಬಂತೆ, ಅತ್ಯಂತ ಮೂಲಭೂತ ನಾಗರಿಕ ಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲೂ ಅದು ತೀವ್ರ ನಿರ್ಲಕ್ಷ್ಯ ತೋರಿಸಿದೆ. ಇದರಿಂದಾಗಿ ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದು ದಿಟ. ಒಟ್ಟಿನಲ್ಲಿ, ಬಿಜೆಪಿಯ ವಿಜಯದ ಹಾದಿಯನ್ನು ಸ್ವತಃ ಕಾಂಗ್ರೆಸ್ ಸರ್ಕಾರವೇ ಸುಗಮಗೊಳಿಸಿಬಿಟ್ಟಿದೆ. ಜನರೆಡೆಗೆ ಸಹಾನುಭೂತಿ ಹೊಂದಿರುವ, ಜನರಿಗೆ ಉತ್ತರದಾಯಿಯಾಗಬಲ್ಲ ಒಂದು ದಕ್ಷ, ಪರಿಶುದ್ಧ ಮತ್ತು ಪಾರದರ್ಶಕ ಸರ್ಕಾರವನ್ನು ಚುನಾಯಿಸಬೇಕಾದ ಮಹತ್ವದ ಕರ್ತವ್ಯವನ್ನು ಕರ್ನಾಟಕದ ಜನತೆ ಮುಂದಿನ ವರ್ಷ ನೆರವೇರಿಸಬೇಕಿದೆ. ಇತ್ತೀಚಿನ ಚುನಾವಣೆಗಳಲ್ಲಿ ಹೊಮ್ಮಿದ ಮೇಲ್ಪಂಕ್ತಿಯನ್ನು ಅನುಸರಿಸುವ ಮೂಲಕ ಕರ್ನಾಟಕದ ಜನರು ಜಾತಿ ಮತ್ತು ಕೋಮು ರಾಜಕೀಯದ ವಿರುದ್ಧವಾಗಿ ಮತ್ತು ಅಭಿವೃದ್ಧಿಯ ಪರವಾಗಿ ಮತ ಚಲಾಯಿಸುತ್ತಾರೆಂದು ಆಶಿಸೋಣ.

Leave a Reply

Your email address will not be published. Required fields are marked *

Back To Top