Wednesday, 17th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ಅಭಿವೃದ್ಧಿಗಿರಲಿ ಮನ್ನಣೆ

Tuesday, 09.01.2018, 3:02 AM       No Comments

ರಾಜ್ಯ ಸರ್ಕಾರ ಸಾಲು-ಸಾಲಾಗಿ ಹಲವು ‘ಭಾಗ್ಯ’ ಯೋಜನೆಗಳನ್ನು ಪ್ರಕಟಿಸಿ ಭಾರಿ ಸುದ್ದಿ ಮಾಡಿದ್ದು ಗೊತ್ತೇ ಇದೆ. ಮತಬ್ಯಾಂಕ್​ಗಳನ್ನು ಕೇಂದ್ರವಾಗಿರಿಸಿಕೊಂಡು ಜಾರಿಗೆ ತಂದ ಈ ಯೋಜನೆಗಳಿಗೆ ಸರ್ಕಾರ ಸಾಕಷ್ಟು ಅನುದಾನವೇನೋ ನೀಡಿತು. ಆದರೆ, ಈ ‘ಭಾಗ್ಯ’ಗಳ ಭರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡದಿರುವುದು, ಹಣಕಾಸಿನ ವೆಚ್ಚ ಕಡಿಮೆಗೊಳಿಸಿರುವ ಸಂಗತಿ ಮಾತ್ರ ಕಳವಳಕರ. ಒಂದರ ಹಿಂದೊಂದರಂತೆ ಭಾಗ್ಯ ಯೋಜನೆಗಳನ್ನು ಪ್ರಕಟಿಸಿದಾಗಲೇ ಇದರಿಂದ ಇತರೆ ರಂಗಗಳಿಗೆ, ಅಭಿವೃದ್ಧಿ ಯೋಜನೆಗಳಿಗೆ ಪೆಟ್ಟು ಬೀಳುತ್ತದೆ ಎಂಬ ಆತಂಕ ಹೊರಹೊಮ್ಮಿತ್ತು. ಜನಪ್ರಿಯ ಯೋಜನೆಗಳು ಘೋಷಿಸುವುದು ರಾಜಕೀಯವಾಗಿ ಅನಿವಾರ್ಯ ಮತ್ತು ಅದರಿಂದ ಪಕ್ಷಗಳಿಗೆ ಒಂದಿಷ್ಟು ಮತಗಳು ಹರಿದು ಬರುತ್ತವೆ ಎಂಬುದು ನಿಜವಾದರೂ ಇವೇ ಮುಖ್ಯವಾಗಿ ಅಭಿವೃದ್ಧಿಯ ಕಡೆಗಣನೆ ಆಗಬಾರದು ಎಂಬ ವಿವೇಚನೆ ಆಳುವ ಸರ್ಕಾರಕ್ಕೆ ಮುಖ್ಯ. ಸರ್ಕಾರ ಬಜೆಟ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪ್ರತಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯುತ್ತಿದೆ. ಆದರೆ, ಅಭಿವೃದ್ಧಿಗೆ ಶ್ರಮಿಸಬೇಕಾದ 28 ಇಲಾಖೆಗಳು ಏಳು ತಿಂಗಳು ಕಳೆದರೂ ಶೇಕಡ 50ಕ್ಕಿಂತ ಕಡಿಮೆ ಅನುದಾನ ವೆಚ್ಚ ಮಾಡಿವೆ ಎಂದು ಯೋಜನಾ ಇಲಾಖೆಯ ದಾಖಲೆಗಳೇ ಹೇಳುತ್ತಿವೆ. ಕೃಷಿ ಶೇ.42.89, ಮಹಿಳೆ ಶೇ.41.15, ಜಲ ಸಂಪನ್ಮೂಲ ಶೇ.31.64, ನಗರಾಭಿವೃದ್ಧಿ ಶೇ.31.24, ಪ್ರವಾಸೋದ್ಯಮ ಶೇ.30.86, ಅರಣ್ಯ ಇಲಾಖೆ ಶೇ.28.95ರಷ್ಟು ಮಾತ್ರ ಅನುದಾನ ವೆಚ್ಚ ಮಾಡಿವೆ ಎಂಬ ಅಂಕಿಅಂಶಗಳೇ ಅಭಿವೃದ್ಧಿ ಯೋಜನೆಗಳ ದಯನೀಯ ಸ್ಥಿತಿಗೆ ಕೈಗನ್ನಡಿಯಾಗಿವೆ. ಎಷ್ಟೋ ಬಾರಿ ಇಲಾಖೆಗಳು ಅನುದಾನ ಬಿಡುಗಡೆಯಾಗಿಲ್ಲ ಎಂಬ ಸಬೂಬು ನೀಡುತ್ತವೆ. ಆದರೆ, ಬಿಡುಗಡೆಯಾದ ಅನುದಾನವನ್ನೂ ವೆಚ್ಚ ಮಾಡಲು ಸಾಧ್ಯವಾಗದಿರುವುದು ನಿರ್ಲಕ್ಷ್ಯದ ದ್ಯೋತಕವಲ್ಲದೆ ಮತ್ತೇನು? ಬಜೆಟ್ ಸಮೀಪಿಸುತ್ತಿದ್ದಂತೆ ಅನುದಾನ ಖರ್ಚು ಮಾಡಲು ಆತುರ ತೋರಲಾಗುತ್ತದೆ. ಕಳೆದ ಹಲವು ತಿಂಗಳುಗಳಲ್ಲಿ ಆಗದಷ್ಟು ಖರ್ಚನ್ನು ಕೆಲವೇ ದಿನಗಳಲ್ಲಿ ಮಾಡಲಾಗುತ್ತದೆ. ಅಂದರೆ, ಅಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ಮಾಯವಾಗಿರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನೇನು ಬಜೆಟ್ ದಿನಾಂಕ ಸಮೀಪಿಸುತ್ತಿರುವುದರಿಂದ ಆತುರದಲ್ಲಿ ಅನುದಾನ ಖರ್ಚು ಮಾಡುವ ಪ್ರಹಸನಗಳನ್ನು ಕಾಣಬಹುದು.

ಅಷ್ಟೆ ಅಲ್ಲದೆ, ಬಜೆಟ್​ನಲ್ಲಿ ಘೋಷಣೆಯಾಗಿರುವ ಕಾರ್ಯಕ್ರಮಗಳು, ಯೋಜನೆಗಳು ಕೂಡ ಕಾಲಮಿತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಇದು ಚುನಾವಣಾ ವರ್ಷ ಬೇರೆ. ಕೆಲ ತಿಂಗಳಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಪ್ರಚಾರದ ರಂಗು ಜೋರಾಗಿದೆ. ಎಲ್ಲ ಪಕ್ಷಗಳು ಜನರನ್ನು ಸೆಳೆಯಲು ತಮ್ಮದೇ ತಂತ್ರ ಹೂಡುತ್ತಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ಹೋದಲ್ಲಿ-ಬಂದಲೆಲ್ಲ ‘ಮತ್ತೆ ನಾವೇ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಚುನಾವಣೆ, ಪ್ರಚಾರದ ತಂತ್ರಗಳು ಏನಾದರೂ ಆಗಿರಲಿ, ಅಭಿವೃದ್ಧಿಯೇ ಹಿನ್ನಡೆ ಕಾಣುತ್ತಿರುವಾಗ ಮತ ಕೇಳುವುದಾದರೂ ಯಾವ ನೆಲೆಯಲ್ಲಿ ಎಂಬ ಬಗ್ಗೆ ಮುಖ್ಯಮಂತ್ರಿಗಳು ಯೋಚಿಸಬೇಕಿದೆ. ಈಗ ಕಾಲಾವಧಿ ಕಡಿಮೆ ಇದೆ ನಿಜ. ಆದರೂ, ಉಳಿದಿರುವ ಅವಧಿಯಲ್ಲಿ ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿ, ಮುಂದಿನ ದಿನಗಳಲ್ಲೂ ರಾಜ್ಯ ಬೆಳವಣಿಗೆಯತ್ತ ಸಾಗಲು ಪೂರಕ ವಾತಾವರಣ ಸೃಷ್ಟಿಸಬೇಕಿದೆ. ಅದನ್ನು ಬಿಟ್ಟು ಅಭಿವೃದ್ಧಿಯನ್ನೇ ನಿರ್ಲಕ್ಷಿಸಿದರೆ ಜನರ ಅಸಮಾಧಾನ ಎದುರಿಸಬೇಕಾಗುತ್ತದೆ ಎಂಬುದಂತೂ ದಿಟ.

Leave a Reply

Your email address will not be published. Required fields are marked *

Back To Top