Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಅಪರಾಧ ತಡೆಗೆ ಬಂದೂಕು ಬಳಸುವ ಮುನ್ನ…

Thursday, 07.09.2017, 3:01 AM       No Comments

| ಸಜನ್​ ಪೂವಯ್ಯ

ಭಯೋತ್ಪಾದಕರು, ಮಾದಕವಸ್ತು ವ್ಯಾಪಾರಿಗಳು, ಕಳ್ಳಸಾಗಣೆದಾರರಂಥ ಅಪರಾಧಿಗಳಿರುವಲ್ಲಿ ಪೊಲೀಸರು ನಾಜೂಕಾಗಿ ಕಾರ್ಯನಿರ್ವಹಿಸಬೇಕಾಗುತ್ತದೆಯೆಂಬುದು ನಿಜ. ಆದರೆ, ಅಪರಾಧ ತಡೆಗೆ ಪ್ರತಿ ಸಲವೂ ಬಂದೂಕು-ಪ್ರಯೋಗಕ್ಕೆ ಮುಂದಾಗುವ ಬದಲು, ಪರಿಣಾಮಕಾರಿಯಾದ ಪರ್ಯಾಯ ಮಾಗೋಪಾಯ ಕಂಡುಕೊಳ್ಳಬೇಕಾದುದೂ ಅಷ್ಟೇ ಮುಖ್ಯ.

 

ಅನಿವಾರ್ಯ ಸಂದರ್ಭಗಳಲ್ಲಿ ಸಮಾಜಘಾತುಕ ಶಕ್ತಿಗಳು ಪೊಲೀಸ್ ಎನ್​ಕೌಂಟರ್​ಗೆ ಬಲಿಯಾಗುವ ಮತ್ತು ಕರ್ತವ್ಯ ನಿಭಾವಣೆಯ ಹಣೆಪಟ್ಟಿಯಡಿ ನಡೆವ ನಕಲಿ ಎನ್​ಕೌಂಟರ್​ಗೆ ಅಮಾಯಕರು ಅಸುನೀಗುವಂಥ ಎರಡು ಸಾಧ್ಯತೆಗಳು ಅಥವಾ ವೈರುದ್ಧ್ಯಳ ಕುರಿತಾದ ಹೊಳಹುಗಳನ್ನು ಹಿಂದಿನ ಕಂತಿನಲ್ಲಿ ಓದಿದೆವು. ಈ ಚರ್ಚಾವಿಷಯದ ಮುಂದುವರಿದ ಭಾಗವನ್ನು ಇಂದು ಅವಲೋಕಿಸೋಣ.

‘ಡಿ.ಕೆ. ಬಸು ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರ, (1997)‘ ಪ್ರಕರಣದಲ್ಲಿ ಆರಕ್ಷಕರಿಂದಾಗಿರುವ ಉಲ್ಲಂಘನೆಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಸವೋಚ್ಚ ನ್ಯಾಯಾಲಯವು ಕೆಲವೊಂದು ಖಡಕ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು: ‘ಪೊಲೀಸರ ವಶದಲ್ಲಿದ್ದಾಗ ಅಥವಾ ಲಾಕಪ್​ನಲ್ಲಿದ್ದಾಗ ಸಂಭವಿಸುವ ಸಾವು ಸಂವಿಧಾನದ 21ನೇ ವಿಧಿಯನ್ನು ಮಾತ್ರವಲ್ಲದೆ ಮೂಲಭೂತ ಮಾನವಹಕ್ಕುಗಳನ್ನೂ ಉಲ್ಲಂಘಿಸುತ್ತದೆ ಮತ್ತು ಕಾನೂನಿನ ನಿಯಮಕ್ಕೆ ಪೆಟ್ಟುನೀಡುತ್ತದೆ‘. ನ್ಯಾಯಾಲಯ ಮತ್ತೂ ಮುಂದುವರಿದು, ‘ಪೊಲೀಸರ ಸುಫರ್ದಿನಲ್ಲಿದ್ದಾಗ ಸಂಭವಿಸುವ ಕಾನೂನು/ನಿಯಮದ ಉಲ್ಲಂಘನೆಗಳು ನಾಗರಿಕ ಸಮಾಜದಲ್ಲಿನ ಅತಿಘೋರ ಅಪರಾಧಗಳಲ್ಲೊಂದು ಮಾತ್ರವೇ ಅಲ್ಲ, ಸರ್ಕಾರಿ-ಪ್ರಾಯೋಜಿತ ಭಯೋತ್ಪಾದನೆಯೂ ಹೌದು‘ ಎಂಬುದಾಗಿ ಹೊಸ ವ್ಯಾಖ್ಯಾನವನ್ನೇ ನೀಡಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳುವುದಾದರೆ, ‘ಖ್ಞಿಜಿಡಛ್ಟಿಠಚ್ಝ ಈಛ್ಚಿ್ಝ್ಟಠಿಜಿಟ್ಞ ಟ್ಛ ಏಞಚ್ಞ ್ಕಜಜಠಿಠ, 1948‘ನಲ್ಲಿ ಕಾನೂನುಬಾಹಿರವಾದ, ಸ್ವೇಚ್ಛಾನುಸಾರಿಯಾದ ಮತ್ತು ಕ್ಷಿಪ್ರಕ್ರಮದ ಹತ್ಯೆಗಳನ್ನು (ಇವು ಅವಶ್ಯವಾಗಿ ನಕಲಿ ಪೊಲೀಸ್ ಎನ್​ಕೌಂಟರ್ ಒಂದರ ಗುಣಲಕ್ಷಣಗಳಾಗಿರುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ) ಪರಿಣಾಮಕಾರಿಯಾಗಿ ತಡೆಗಟ್ಟುವುದಕ್ಕೆ ಹಾಗೂ ಆ ಕುರಿತಾದ ತನಿಖೆಗೆ ಸಂಬಂಧಿಸಿದ ಮೂಲಭೂತ ನಿಯಮಗಳಿವೆ. ಆ ನಿಯಮಗಳೆಂದರೆ:

1) ಸ್ವತಂತ್ರ ಸಂಸ್ಥೆಯೊಂದು ವಿಚಾರಣೆ ನಡೆಸುವಿಕೆ;

2) ಸ್ವತಂತ್ರವಾಗಿ ನಿರ್ಣಾಯಕ/ವಿಮರ್ಶಾತ್ಮಕ ವಿಶ್ಲೇಷಣೆಯನ್ನು ನಿರ್ವಹಿಸುವಿಕೆ;

3) ಸಾಕ್ಷಿ ಸಂರಕ್ಷಣೆಯ ರೂಪರೇಷೆ/ಯೋಜನೆಗಳನ್ನು ಹೊಂದಿರುವಿಕೆ;

4) ಬಲಿಪಶುವಿನ ಕುಟುಂಬಿಕರಿಗೆ ವಿಧಿಬದ್ಧ ಪ್ರಾತಿನಿಧ್ಯವನ್ನು ಒದಗಿಸುವುದಕ್ಕೆ ಹಾಗೂ ಪೊಲೀಸ್ ಎನ್​ಕೌಂಟರ್​ನಿಂದಾದ ಹತ್ಯೆಗಳ ಕುರಿತು ಪರಿಣಾಮಕಾರಿ ತನಿಖೆ ನಡೆಸುವುದಕ್ಕೆ ಅವಶ್ಯವಾದ ಆಯವ್ಯಯದ ಮತ್ತು ತಾಂತ್ರಿಕ ಸಂಪನ್ಮೂಲಗಳನ್ನು, ಇಂಥ ಯಾವುದೇ ತನಿಖೆಯನ್ನು ಕೈಗೆತ್ತಿಕೊಂಡಿರುವ ಯಾವುದೇ ಸಂಸ್ಥೆಯು ಸಿದ್ಧವಾಗಿಟ್ಟುಕೊಂಡಿರುವಿಕೆ. ಇಂಥ ಎನ್​ಕೌಂಟರ್​ಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರತೆರನಾದ ಖಂಡನೆ ವ್ಯಕ್ತವಾಗುತ್ತದೆ ಎಂಬುದನ್ನು ಈ ಮೂಲಭೂತ ನಿಯಮಗಳು ಸ್ಪಷ್ಟವಾಗಿ ಸೂಚಿಸುತ್ತವೆ.

ಭಾರತದಲ್ಲಿ ಇಂಥ ಎನ್​ಕೌಂಟರ್​ಗಳು ಚಿಗುರೊಡೆದು ವ್ಯಾಪಿಸಿರುವ ಕಾರಣದಿಂದಾಗಿ, ಉನ್ನತ ನ್ಯಾಯಾಂಗ ವ್ಯವಸ್ಥೆಯ ವರ್ತನೆಯೂ ಬದಲಾಗಿದೆ ಎನ್ನಲಡ್ಡಿಯಿಲ್ಲ. 2009 ಮತ್ತು 2013ರ ನಡುವಣ ಅವಧಿಯಲ್ಲೇ, ದೇಶದ ವಿವಿಧೆಡೆ 555 ನಕಲಿ ಎನ್​ಕೌಂಟರ್ ಪ್ರಕರಣಗಳು ದಾಖಲಾಗಿರುವುದನ್ನು ಸರ್ಕಾರಿ ಅಂಕಿ-ಅಂಶಗಳೇ ತೋರಿಸುತ್ತವೆ. ಈ ನಿಟ್ಟಿನಲ್ಲಿ ರಾಜ್ಯಗಳ ಕ್ರಮಾನುಗತ ಸ್ಥಾನ ಹೀಗಿದೆ: ಉತ್ತರಪ್ರದೇಶ (138), ಮಣಿಪುರ (62), ಅಸ್ಸಾಂ (52), ಪಶ್ಚಿಮ ಬಂಗಾಳ (35), ಜಾರ್ಖಂಡ್ (30), ಛತ್ತೀಸ್​ಗಢ (29), ಒಡಿಶಾ (27), ಜಮ್ಮು ಮತ್ತು ಕಾಶ್ಮೀರ (26), ತಮಿಳುನಾಡು (23) ಮತ್ತು ಮಧ್ಯಪ್ರದೇಶ (20).

ಆದ್ದರಿಂದ, ನಿಷ್ಕ್ರಿಯ ದೃಷ್ಟಿಕೋನದಿಂದ ಹೊರಬಂದು ನಕಲಿ ಪೊಲೀಸ್ ಎನ್​ಕೌಂಟರ್​ಗಳ ಕುರಿತಾಗಿ ನಿರ್ಣಾಯಕ ಗಮನ ಹರಿಸಿರುವ ನ್ಯಾಯಾಂಗವು, ಇಂಥ ಎನ್​ಕೌಂಟರ್​ಗಳಲ್ಲಿ ಸಂಭವಿಸುವ ಸಾವು ಹಾಗೂ ತೀವ್ರ ಪೆಟ್ಟಿನ ಎಲ್ಲ ಪ್ರಕರಣಗಳಲ್ಲಿ ಅನುಸರಿಸಬೇಕಾಗಿ ಬರುವ 16 ರೂಢಮಾದರಿಯ ನಡವಳಿಕೆಗಳನ್ನು ರೂಪಿಸಿದೆ. ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ವರ್ಸಸ್ ಮಹಾರಾಷ್ಟ್ರ ಸರ್ಕಾರ, (2014)‘ ಪ್ರಕರಣದಲ್ಲಿ, ಸಂವಿಧಾನದ 141ನೇ ವಿಧಿಯಡಿಯಲ್ಲಿನ ಕಾನೂನಾಗಿ ಇಂಥ ರೂಢಮಾದರಿಗಳು ಘೋಷಿಸಲ್ಪಟ್ಟವು. ಆ ಪೈಕಿಯ ಕೆಲ ರೂಢಮಾದರಿಗಳು ಹೀಗಿವೆ:

1). ಎನ್​ಕೌಂಟರ್​ನಿಂದಾದ ಸಾವುಗಳ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿ ಮ್ಯಾಜಿಸ್ಟ್ರೇಟರ ವಿಚಾರಣೆ/ತನಿಖೆಯಾಗಬೇಕಾದ್ದು ಕಡ್ಡಾಯ;

2). ಅಪರಾಧಿಕ ಚಟುವಟಿಕೆಗಳ ಕುರಿತಾದ ಸೂಕ್ಷ್ಮ ಎಚ್ಚರಿಕೆಗಳು ಬರಹದ ರೂಪದಲ್ಲಾಗಲೀ ಅಥವಾ ವಿದ್ಯುನ್ಮಾನ ಸಂಗ್ರಹದ ರೂಪದಲ್ಲಾಗಲೀ ದಾಖಲಿಸಲ್ಪಡಬೇಕು;

3). ಇಂಥ ಸೂಕ್ಷ್ಮ ಎಚ್ಚರಿಕೆಯೊಂದನ್ನು ಅನುಸರಿಸಿ ಪೊಲೀಸರು ಒಂದೊಮ್ಮೆ ಬಂದೂಕು ಬಳಸಿದಲ್ಲಿ ಮತ್ತು ಅದು ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾದಲ್ಲಿ, ಆಗ ಸೂಕ್ತ ಅಪರಾಧ ತನಿಖೆಗೆ ಚಾಲನೆ ನೀಡುವಂಥ ಎಫ್​ಐಆರ್ ಒಂದನ್ನು ದಾಖಲಿಸಬೇಕು;

4). ಇಂಥ ಸಾವಿಗೆ ಸಂಬಂಧಿಸಿದ ತನಿಖೆಯನ್ನು ಸ್ವತಂತ್ರ ಸಿಐಡಿ ತಂಡವೊಂದರಿಂದ ನಡೆಸಲಾಗುವುದು;

5). ಎನ್​ಕೌಂಟರ್​ನಿಂದಾದ ಸಾವಿನ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಥವಾ ಆಯಾ ರಾಜ್ಯದ ಮಾನವ ಹಕ್ಕುಗಳ ಆಯೋಗಕ್ಕೆ ತತ್​ಕ್ಷಣವೇ ಮಾಹಿತಿ ನೀಡಬೇಕು;

6). ನ್ಯಾಯಬಾಹಿರ ಎನ್​ಕೌಂಟರ್ ಕೈಗೊಂಡ ವಿಷಯದಲ್ಲಿ ತಪ್ಪಿತಸ್ಥರಾಗಿ ಕಂಡುಬಂದ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಂಡು ಅಮಾನತಿನಲ್ಲಿರಿಸಬೇಕು;

7). ಮಾರ್ಗದರ್ಶಿಸೂತ್ರಗಳನ್ನು ಅನುಸರಿಸಲಾಗಿಲ್ಲ ಎಂಬುದು ಎನ್​ಕೌಂಟರ್ ಬಲಿಪಶುವಿನ ಕುಟುಂಬದವರ ಗ್ರಹಿಕೆಯಾಗಿದ್ದಲ್ಲಿ, ಅವರು ಸೆಷನ್ಸ್ ನ್ಯಾಯಾಧೀಶರಿಗೆ ದೂರು ಸಲ್ಲಿಸಬಹುದು.

ಅಪರಾಧಿತ್ವ ಅಥವಾ ದಂಡಾರ್ಹತೆಯ ನಿರ್ಣಯವು ಒಂದು ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ವಿಚಾರಣೆಗೆ ಒಳಪಡುವ ಮತ್ತು ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವಾದ ಮಂಡಿಸುವ ಆಪಾದಿತರ ಹಕ್ಕಿಗೆ ಅವಕಾಶ ಒದಗಿಸುವುದನ್ನೂ ಅದು ಒಳಗೊಂಡಿದೆ. ಮೇಲಾಗಿ, ಯಾರೊಬ್ಬರೂ ತಮ್ಮದೇ ಹಿತಾಸಕ್ತಿಯಿರುವ ಪ್ರಕರಣವೊಂದರಲ್ಲಿ ನ್ಯಾಯಾಧೀಶರಾಗಿರುವುದು ಸಾಧ್ಯವಿಲ್ಲವಾದ್ದರಿಂದ, ಕಾನೂನುಕ್ರಮ ಜರುಗಿಸುವ ವಿಧಾಯಕಶಕ್ತಿಯು, ಓರ್ವ ಆಪಾದಿತನ ಮೇಲೆ ಯಶಸ್ವಿಯಾಗಿ ಅದನ್ನು ಜರುಗಿಸುವ ಸಂಪೂರ್ಣ ಅರ್ಹತೆ ಹೊಂದಿದ್ದರು ಕೂಡ, ಆಪಾದಿತರ ಅಪರಾಧಿತ್ವ ಅಥವಾ ದಂಡಾರ್ಹತೆಯನ್ನು ವಿಧ್ಯುಕ್ತವಾಗಿ ಹೇಳುವ ಅಥವಾ ಮಧ್ಯಪ್ರವೇಶಕ ನ್ಯಾಯಿಕ ಪ್ರಕ್ರಿಯೆಯಿಲ್ಲದೆಯೇ ಜೀವನಷ್ಟಕ್ಕೆ ಕಾರಣವಾಗುವ ಅಧಿಕಾರವನ್ನು ಹೊಂದಿರುವುದಿಲ್ಲ. ಇಂಥದೊಂದು ನ್ಯಾಯಿಕ ಪ್ರಕ್ರಿಯೆಯ ಅನುಪಸ್ಥಿತಿಯಲ್ಲಿ, ಜೀವನಷ್ಟ ಮತ್ತು ವೈಯಕ್ತಿಕ ಸ್ವಾತಂತ್ರ್ಯಹರಣದಂಥ ಯಾವುದೇ ಬಾಬತ್ತನ್ನೂ (ಇಂಥ ಯಾವುದೇ ‘ಕಸಿದುಕೊಳ್ಳುವಿಕೆ‘ಗೆ ಸಂಬಂಧಿಸಿದಂತೆ ವಿಕೋಪಕ್ಕೆ ಮುಟ್ಟಿದ ಸಂದರ್ಭಗಳು- ಉದಾಹರಣೆಗೆ ಆತ್ಮರಕ್ಷಣೆಯಂಥದು- ಇಲ್ಲದ ಹೊರತು) ಪೊಲೀಸರು ಕೈಗೆತ್ತಿಕೊಳ್ಳಲಾಗದು.

ಕಾನೂನಿನಿಂದ ಪ್ರಮಾಣೀಕರಿಸಲ್ಪಟ್ಟ ಕಾರ್ಯವಿಧಾನದಿಂದಾಗುವುದನ್ನು ಹೊರತುಪಡಿಸಿ, ವ್ಯಕ್ತಿಯೊಬ್ಬರ ಜೀವವನ್ನು ಕಸಿದುಕೊಳ್ಳಲಾಗದು ಎಂಬುದನ್ನು ಸಂವಿಧಾನದ 21ನೇ ವಿಧಿ ಖಾತ್ರಿಪಡಿಸುತ್ತದೆ ಮತ್ತು ಇಂಥ ಯಾವುದೇ ಕಾನೂನು ‘ಸಕಾರಣವಾಗಿ, ನ್ಯಾಯಸಮ್ಮತವಾಗಿ ಮತ್ತು ತರ್ಕಬದ್ಧ‘ವಾಗಿರಬೇಕೇ ವಿನಾ, ‘ಅವಾಸ್ತವಿಕ, ದಮನಕಾರಿ ಮತ್ತು ಸ್ವೇಚ್ಛಾನುಸಾರಿ‘ ಆಗಿರಬಾರದು ಎಂದು ಕೂಡ ಈ ವಿಧಿ ಒತ್ತಿಹೇಳುತ್ತದೆ. ಅಷ್ಟೇ ಅಲ್ಲ, 21ನೇ ವಿಧಿಯು ಗೌರವಾರ್ಹವಾದ ಮತ್ತು ಮಾನ್ಯತೆ ಪಡೆದಿರುವ ಹಕ್ಕೊಂದನ್ನು ಪ್ರದಾನಿಸುತ್ತದೆ ಹಾಗೂ ಮಾನವೀಯ ಘನತೆಯೊಂದಿಗೆ ಬದುಕುವ ಹಕ್ಕನ್ನೂ ಇದು ಒಳಗೊಂಡಿದೆ ಎಂದು ಸವೋಚ್ಚ ನ್ಯಾಯಾಲಯವು ಅನೇಕ ಸಂದರ್ಭಗಳಲ್ಲಿ ಅಭಿಪ್ರಾಯಪಟ್ಟಿದೆ. ಕಾನೂನಿನ ನಿಯಮದ ವಿಶ್ವಾಸಾರ್ಹತೆ ಮತ್ತು ಅಪರಾಧ ನ್ಯಾಯವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಪೊಲೀಸ್ ಎನ್​ಕೌಂಟರ್​ಗಳಲ್ಲಿನ ಸಾವುಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂಬುದನ್ನು ಅಲ್ಲಗಳೆಯಲಾಗದು. ಆದ್ದರಿಂದಲೇ, ‘ಬರೀ ಗುರಿತಲುಪುವುದು ಮಾತ್ರವಲ್ಲ, ಆ ಗುರಿಸಾಧನೆಯ ಮಾರ್ಗವೂ ಮುಖ್ಯ‘ ಎಂಬಂಥ ಸಾಂವಿಧಾನಿಕ ಪ್ರತಿಬಂಧಕವೊಂದರ ಅಸ್ತಿತ್ವವು ವ್ಯವಸ್ಥೆಯಲ್ಲಿದೆ ಎಂಬುದಿಲ್ಲಿ ಸ್ಪಷ್ಟ. ಮರದ ಬೇರುಗಳೇ ಅಸ್ವಸ್ಥವಾಗಿದ್ದರೆ, ನ್ಯೂನತೆಯಿಂದ ಕೂಡಿದ್ದರೆ ಅದು ಹಣ್ಣುಗಳಲ್ಲೂ ಅಭಿವ್ಯಕ್ತಗೊಳ್ಳುವುದು ಸಹಜವಲ್ಲವೇ?

ಅನೇಕ ಸಂದರ್ಭಗಳಲ್ಲಿ, ನಕಲಿ ಎನ್​ಕೌಂಟರ್​ಗಳು ಸಂಭವಿಸಿಬಿಡುವುದು ಮತ್ತು ಸರ್ಕಾರದ ವ್ಯವಸ್ಥೆಗಳು ವಿವಿಧ ತೆರನಾಗಿ ಇವನ್ನು ಮುಚ್ಚಿಹಾಕಿಬಿಡುವುದು ದುರದೃಷ್ಟಕರ ಸಂಗತಿಯೇ ಸರಿ. ವ್ಯಕ್ತಿಯೊಬ್ಬ ತೀವ್ರ ಅಪರಾಧಿಯಾಗಿದ್ದಾನೆ ಅಥವಾ ಘೋಷಿತ ತಪ್ಪಿತಸ್ಥನಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ, ಅವನನ್ನು ನಿರ್ದಯವಾಗಿ ಹಾಗೂ ಸಂವಿಧಾನದ ಉಪಬಂಧಗಳಿಗೆ ತೀವ್ರ ಅಗೌರವ ತೋರುವ ರೀತಿಯಲ್ಲಿ ಕೊಲ್ಲಲಾಗದು. ಅಷ್ಟೇ ಅಲ್ಲ, ಇಂಥ ಸಂದರ್ಭಗಳಲ್ಲಿ ಅನೇಕ ಮುಗ್ಧಜನರ ಜೀವನಷ್ಟವಾಗುವುದೂ ಇದೆ. ಎನ್​ಕೌಂಟರ್​ಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರತಿಯಾಗಿ, ಇಂಥ ಆಪಾದಿತರನ್ನು ಬಂಧಿಸಲು ಪೊಲೀಸರು ಯತ್ನಿಸಬೇಕು. ತೀವ್ರ ಅಪರಾಧಿಯು ಮಾರಣಾಂತಿಕ ಹಲ್ಲೆ ನಡೆಸಿದಾಗ ಅಥವಾ ಕರ್ತವ್ಯ ನಿರ್ವಹಿಸದಂತೆ ತಡೆದಾಗ ಮಾತ್ರವೇ, ಪೊಲೀಸರು ಪ್ರತೀಕಾರಕ್ಕೆ ಮುಂದಾಗಬೇಕಾಗಬಹುದು ಮತ್ತು ಆ ಯತ್ನದಲ್ಲಿ ಅಪರಾಧಿಯು ಕೊಲ್ಲಲ್ಪಡಬಹುದು.

ಭಾರತದಲ್ಲಿ ಪೊಲೀಸರು ತೀರಾ ಕಷ್ಟಕರವಾದ ಮತ್ತು ನಾಜೂಕಿನ ಕಾರ್ಯಭಾರಗಳನ್ನು ನಿಭಾಯಿಸಬೇಕಾಗಿಬರುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಅತಿರೇಕದ ಉಗ್ರಗಾಮಿಗಳು, ಭಯೋತ್ಪಾದಕರು, ಮಾದಕವಸ್ತು ವ್ಯಾಪಾರಿಗಳು, ಕಳ್ಳಸಾಗಣೆದಾರರು ಮತ್ತು ಕುಕೃತ್ಯಗಳನ್ನೆಸಗುವ ಸಂಘಟಿತ ಪಟಾಲಂಗಳಂಥ ಅನೇಕ ಅಪರಾಧಿಗಳು ಆಳವಾಗಿ ಬೇರುಬಿಟ್ಟಿರುವುದೂ ನಿಜವೇ. ಆದರೆ, ಅಪರಾಧ ತಡೆಗಟ್ಟುವ ಪ್ರತಿ ಯತ್ನದಲ್ಲೂ ಬರ್ಬರತೆ ಹಾಗೂ ಬಂದೂಕು-ಪ್ರಯೋಗಕ್ಕೆ ಮುಂದಾಗುವ ಬದಲು, ಸಮರ್ಥ ಹಾಗೂ ಪರಿಣಾಮಕಾರಿಯಾಗಿರುವ ಪರ್ಯಾಯ ಮಾಗೋಪಾಯ ಕಂಡುಕೊಳ್ಳುವುದು ಪೊಲೀಸರ ಹೊಣೆ; ಇಂಥ ಪರಿಪಾಠದಿಂದಾಗಿ ಕಾನೂನಿನ ನಿಯಮದ ಅನುಸರಣೆಯಾಗಿ, ಅಪರಾಧಿಗಳನ್ನು ನ್ಯಾಯಾಲಯದ ವಿಚಾರಣೆಗೆ ಒಳಪಡಿಸುವುದು ಸಾಧ್ಯವಾಗುತ್ತದೆ. ಕಾನೂನಿನ ನಿಯಮದ ಅಧಿಪತ್ಯವಿರುವ ಸಮಾಜವೊಂದರಲ್ಲಿ, ನ್ಯಾಯಬಾಹಿರ ಹತ್ಯೆಗಳ ತನಿಖೆಯನ್ನು ಸೂಕ್ತವಾಗಿ ಮತ್ತು ಸ್ವತಂತ್ರವಾಗಿ ನಿರ್ವಹಿಸುವುದು ಅನಿವಾರ್ಯವಾಗಿರುತ್ತದೆ. ಕಾರಣ, ನ್ಯಾಯಶೀಲ ನಡವಳಿಕೆಯನ್ನು ನಿರ್ವಹಿಸಿದರಷ್ಟೇ ಸಾಲದು, ಅದು ನೆರವೇರಿದೆ ಎಂಬುದು ಸ್ಪಷ್ಟವಾಗಿ ಮತ್ತು ನಿಸ್ಸಂಶಯವಾಗಿ ಕಾಣುವಂತಿರಬೇಕು.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top