Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಅನ್ನದ ಒಂದೊಂದು ಅಗುಳೂ ಜೀವದ್ರವ್ಯವೇ

Saturday, 18.02.2017, 7:51 AM       No Comments

ತಿನ್ನುವ ಅನ್ನದ ಮೂಲ ಗೊತ್ತಿಲ್ಲದೆ ಅದನ್ನು ಅನುಭವಿಸುವುದು, ಅದನ್ನು ಮಾರುಕಟ್ಟೆಯ ಚೌಕಟ್ಟಿನಲ್ಲಷ್ಟೇ ಪರಿಭಾವಿಸುವುದು ಇದೆಯಲ್ಲ ಇದು ಆಹಾರದ ಬಹುತ್ವಕ್ಕೆ ತುಂಬಾ ಅಪಾಯಕಾರಿ. ತಿನ್ನುವ ಯಾವುದೇ ಖಾದ್ಯ-ಪಾನೀಯವಿರಲಿ ಅದನ್ನು ಭೂಮಿಸಂಬಂಧದಿಂದಲೇ ನೋಡಬೇಕು. ಅದಕ್ಕಾಗಿ ರೈತ ಹರಿಸಿದ ಬೆವರು, ಶ್ರಮವನ್ನು ಅರಿಯಲು ಯತ್ನಿಸಬೇಕು. 

ಒಂದು ಸೊಗಸಾದ ಕತೆ ನೆನಪಾಗುತ್ತಿದೆ. ಗ್ರಾಮದಿಂದ ಮಹಾನಗರಕ್ಕೆ ಹೋಗಿ ಉದ್ಯೋಗ ಪಡೆದ ಶ್ರೀಮಂತ ಯುವಕ ಪ್ರತಿದಿನ ಹಣ್ಣಿನ ಮಾರುಕಟ್ಟೆಗೆ ಹೋಗಿ ಅಜ್ಜಿಯೊಬ್ಬಳಿಂದ ಕಿತ್ತಳೆ ಖರೀದಿಸುತ್ತಿದ್ದ. ದಿನಕ್ಕೊಂದು ಕೆ.ಜಿ. ಕಿತ್ತಳೆ. ಅಜ್ಜಿ ಆ ಟೆಕ್ಕಿಯ ಚೀಲಕ್ಕೆ ಕಿತ್ತಳೆ ತೂಗಿ ಸುರಿದ ಮೇಲೆ ಆತ ಅದರಿಂದ ಒಂದು ಕಿತ್ತಳೆಯನ್ನು ಸುಲಿದು ಸ್ವಲ್ಪ ಬಾಯಿಗಿಟ್ಟು, ‘ಅಜ್ಜಿ, ಇದು ತುಂಬಾ ಹುಳಿ, ನೀನೇ ತಿನ್ನು’ ಎಂದು ಹಿಂದಿರುಗಿಸಿ ಹೋಗುತ್ತಿದ್ದ. ಅವನ ಪ್ರತಿದಿನದ ಈ ಕ್ರಮ ಗಮನಿಸಿ ಗೆಳೆಯ, ‘ಯಾಕೋ ಹಾಗೆ? ದಿನಾ ಕಿತ್ತಳೆ ಹುಳಿಯಾ? ಒಂದು ದಿನವೂ ಸಿಹಿ ಇಲ್ಲವಾ?’ ಎಂದೆಲ್ಲಾ ಪ್ರಶ್ನಿಸುತ್ತಾನೆ. ಅದಕ್ಕವನು ಕೊಡುವ ಉತ್ತರ, ‘ಅಜ್ಜಿ ಕೊಡುವ ಕಿತ್ತಳೆ ಯಾವತ್ತೂ ಹುಳಿ ಇರುವುದೇ ಇಲ್ಲ. ಪ್ರತಿದಿನವೂ ಸಿಹಿಯೇ. ನಾನು ಹುಳಿಯ ನೆಪದಿಂದ ಹಣ್ಣನ್ನು ವಾಪಾಸು ಮಾಡುವ ಉದ್ದೇಶ, ಆ ಬಡಪಾಯಿ ಅಜ್ಜಿ ಆ ನೆಪದಿಂದಾದರೂ ದಿನಕ್ಕೊಂದು ಹಣ್ಣು ತಿನ್ನಲಿ ಎಂದು’.

ಕತೆ ಇಷ್ಟಕ್ಕೇ ಮುಗಿಯುವುದಿಲ್ಲ. ಅಜ್ಜಿ ಪಕ್ಕದಲ್ಲಿ ಕಿತ್ತಳೆ ಮಾರುವ ಮತ್ತೊಬ್ಬಾಕೆ ಅಜ್ಜಿಯನ್ನು ಕೇಳುತ್ತಾಳೆ- ‘ನಿನಗೆ ನಾಚಿಕೆಯಾಗಬೇಕು. ದಿನಾ ಆ ಯುವಕನಿಂದ ಕಿತ್ತಳೆ ತಿರುಗಿ ಪಡೆದು ತಿನ್ನುತ್ತೀಯಾ. ಅವನಿಗೆ ಕಿತ್ತಳೆ ನಷ್ಟವಲ್ಲವೇ?’. ಅದಕ್ಕೆ ಅಜ್ಜಿ ಕೊಡುವ ಉತ್ತರ- ‘ನನಗೆ ಗೊತ್ತಿದೆ, ಆತ ಹುಳಿಯ ನೆಪದಲ್ಲಿ ಕಿತ್ತಳೆಯೊಂದನ್ನು ವಾಪಾಸು ನೀಡುತ್ತಾನೆ ಎಂದು. ನಾನೇನು ಬಿಡುತ್ತೇನಾ, ನನಗೇಕೆ ಋಣ? ನಾನೂ ಹಾಗೆಯೇ ಕೊಡುವಾಗ, ಅಳೆದು ಸುರಿಯುವಾಗ ಒಂದು ಕಿತ್ತಳೆ ಹೆಚ್ಚೇ ಕೊಡುವೆ!’.

ಲೆಕ್ಕಾಚಾರಕ್ಕೆ ಮುಗಿಯದ ಸಂಬಂಧ: ಮಹಾನಗರ ಸೇರಿ ಅಜ್ಜಿಗೆ ಹುಳಿಯ ನೆಪದಲ್ಲಿ ಕಿತ್ತಳೆ ಹಿಂದಿರುಗಿಸುವ ಟೆಕ್ಕಿ ಯಾವುದೋ ಹಳ್ಳಿಯವನೇ ಇರಬೇಕು. ಇದು ಬರೀ ಗ್ರಾಮದ ಬೇರುಸಂಬಂಧವಲ್ಲ. ಮಾರುಕಟ್ಟೆಯಲ್ಲೂ ಇರುವ, ಬೆಸೆಯುವ ಬೇರುಸಂಬಂಧ. ಬಿಕರಿ, ಹಣ, ಅಳತೆ, ತೂಕ, ವ್ಯವಹಾರ ಇವೆಲ್ಲಾ ಬರೀ ಲೆಕ್ಕಾಚಾರಕ್ಕೆ ಮುಗಿದುಹೋಗುವುದಿಲ್ಲ. ಇಲ್ಲಿಯ ಯುವಕ ನನಗೆ ತುಂಬಾ ಮುಖ್ಯವಾಗುವುದು ತಾನು ಖರೀದಿಸುವ ಕಿತ್ತಳೆಯನ್ನು ಮನುಷ್ಯ ಮತ್ತು ಭೂಮಿಯ ಸಂಬಂಧ ಹಾಗೂ ಮನುಷ್ಯ ಮತ್ತು ಮನುಷ್ಯ ಸಂಬಂಧದಿಂದ ನೋಡುತ್ತಾನೆ. ಮನುಷ್ಯನಿಗೆ ಮಣ್ಣಿನ ಸಂಬಂಧ ಇದ್ದಾಗ ಮಾತ್ರ ಇಂಥ ಭಾವನೆಗಳು ಅರಳುತ್ತವೆ. ಮನುಷ್ಯ ಬರೀ ವ್ಯಾಪಾರಿಯಾಗದೆ, ಪರಿಧಿಗೆ ಸಲ್ಲದೆ ಕೇಂದ್ರಕ್ಕೆ ಬರುತ್ತಾನೆ.

ಗಾಂಧಿ ಇದನ್ನು ಬೇರೆಯೇ ರೀತಿ ವ್ಯಾಖ್ಯಾನಿಸುತ್ತಾರೆ. ತನ್ನ ನೆರೆಮನೆಯವರು ಅಕ್ಕಿ ಉತ್ಪಾದಿಸಿ ಗ್ರಾಹಕರಿಲ್ಲದೆ ಪರದಾಡುವಾಗ, ಅಲ್ಲೇ ಪಕ್ಕದ ಇನ್ನೊಬ್ಬ ಅಮೆರಿಕದ ಆಮದು ಆಹಾರ ತಿನ್ನುತ್ತಾನೆ. ಇಂಥ ಸ್ಥಿತಿಯಲ್ಲಿ ನಮ್ಮ ಸಮಾನ ನೆರೆಹೊರೆಯವರ ಬಗ್ಗೆ ನಮ್ಮ ಹೊಣೆಗಾರಿಕೆ ಏನು?

ಇಂದು ಎಲ್ಲೆಡೆ ನವಧಾನ್ಯಗಳ ಬಗ್ಗೆ, ಸಾವಯವ ಆಹಾರಗಳ ಬಗ್ಗೆ, ನಾಟೀನೆಲದ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಗರಕೇಂದ್ರಿತ ನೆಲೆಗಳಲ್ಲಿ ಆಂದೋಲನಗಳೇ ನಡೆಯುತ್ತಿವೆ. ಗ್ರಾಮದ ಶುದ್ಧ

ಮಾರುಕಟ್ಟೆ ನಗರಗಳಿಗೆ ವಿಸ್ತರಿಸುತ್ತಿವೆ. ಇಷ್ಟಾದರೂ ಯಾವುದೇ ಆಹಾರ ತಾನು ಪರಿಶುದ್ಧ, ತಾನು ಆರೋಗ್ಯವರ್ಧಕ, ತನ್ನಲ್ಲಿ ವಿಷವಿಲ್ಲ, ತಾಜಾ ಎಂದೆಲ್ಲಾ ಹೇಳುವುದಿಲ್ಲ. ಅದನ್ನು ನಿರ್ಧರಿಸುವುದು ರುಚಿಯ ಮಾರುಕಟ್ಟೆ. ರುಚಿಯ ಸಾರ್ವತ್ರೀಕರಣ ಅದನ್ನು ಪ್ರಧಾನ ಎಂಬಂತೆ ಬಿಂಬಿಸುತ್ತದೆ. ಇವತ್ತು ಕೋಲಾ, ಪೆಪ್ಸಿ, ಪಿಜ್ಜಾ, ಬರ್ಗರ್​ಗಳನ್ನು ಲೋಕವ್ಯಾಪ್ತಿಗೊಳಿಸುತ್ತಿರುವುದು ಅದರ ರುಚಿ ಮತ್ತು ಮಾರುಕಟ್ಟೆ ತಂತ್ರಗಳು ಮಾತ್ರ. ಅಮೆರಿಕ, ಯುರೋಪಿನ ಆಹಾರ ಗಡಿದಾಟಿ ವಿಶ್ವದಾದ್ಯಂತ ಪ್ರಚಾರ ಪಡೆಯುವುದಕ್ಕೆ, ನಮ್ಮ ರಾಗಿಮುದ್ದೆ, ಜೋಳದ ರೊಟ್ಟಿ ಇಲ್ಲೇ ಉಳಿಯುವುದಕ್ಕೆ ಇವೇ ಮಾರುಕಟ್ಟೆ ತಂತ್ರಗಳೇ ಕಾರಣ.

ರುಚಿ ಮತ್ತು ಮಾರುಕಟ್ಟೆಯ ಪ್ರಭಾವ ಹಾಗೂ ವೇಗ ಎಷ್ಟಿದೆ ಎಂದರೆ ಕೇಂದ್ರಸ್ಥಾನದಲ್ಲಿ ನಿಲ್ಲಬೇಕಾದ ಬಳಕೆದಾರ, ತೀರ್ವನಿಸಬೇಕಾದ ಅನುಭೋಗಿ ಪರಿಧಿಗೆ ಬರುತ್ತಾನೆ. ಯಾವ ಪಾನೀಯವನ್ನು, ಯಾವ ತಿಂಡಿಯನ್ನು ಕುಡಿಯಬೇಕು? ತಿನ್ನಬೇಕು? ಎಂಬುದನ್ನು ತೀರ್ವನಿಸುವ ಹಕ್ಕು ಬಳಕೆದಾರನ ಕೈಯಿಂದ ತಪ್ಪಿ ಕೋಲಾ-ಪೆಪ್ಸಿಯ ಬಾಟ್ಲಿ ಹಿಡಿದ ಸಿನಿಮಾತಾರೆ ಅಥವಾ ಕ್ರಿಕೆಟ್ ಆಟಗಾರರು ನಿರ್ಧರಿಸುತ್ತಾರೆ.

ಆಹಾರ-ಪಾನೀಯದ ಬಳಕೆಗೆ ಅವು ಹುಟ್ಟಿದ ನೆಲ, ಹವೆ, ಭೌಗೋಳಿಕತೆ ಮತ್ತು ಅವುಗಳನ್ನು ಬಳಸುವ ಬಳಕೆದಾರರೊಂದಿಗೆ ಒಂದು ಜೈವಿಕ ಸಂಬಂಧವಿದೆ. ಇದೇ ಆಹಾರದ ಬಹುತ್ವ. ಭಾರತದ ನೆಲಸಾಧ್ಯತೆಗಳು ಪ್ರತಿ 30-40 ಮೈಲುಗಳ ಅಂತರದಲ್ಲಿ ಬದಲಾಗುತ್ತಾ ಹೋಗುತ್ತವೆ. ಆಯಾಯ ಪ್ರಾಂತ್ಯದ ಜನ ಆಯಾಯ ಪ್ರದೇಶದ ಉತ್ಪನ್ನಗಳನ್ನೇ ಬಳಸುತ್ತಾರೆ. ಕೆಂಪಕ್ಕಿ, ಬಿಳಿಯಕ್ಕಿ, ರಾಗಿ, ರೊಟ್ಟಿ ಇತ್ಯಾದಿಗಳ ಬಳಕೆಯ ಹಿಂದೆ ಈ ಪ್ರಾದೇಶಿಕತೆ ತುಂಬಾ ಕೆಲಸ ಮಾಡುತ್ತದೆ.

ಕಾಣಿಸದ ರೈತರ ಶ್ರಮ: ಆದರೆ ಇಂದು ಗ್ರಾಹಕ ಜಗತ್ತಿನ ಯಾವುದೇ ಮೂಲೆಯಲ್ಲಿರಲಿ, ಅವನಿಗೆ ಪ್ರಪಂಚದ ಯಾವುದೇ ದೇಶದ, ಪ್ರದೇಶದ ಆಹಾರಗಳು ಸಿಗುತ್ತವೆ. ಹಾಗೆ ತಿನ್ನುವವನಿಗೆ ಇದೇ ಊರಿನ ರೈತನೊಬ್ಬನ ಬೆಳೆ ಯಾವುದು? ಯಾವ ಧಾನ್ಯ? ಯಾವ ತರಕಾರಿ? ಯಾವುದೂ ಗೊತ್ತಿರುವುದಿಲ್ಲ. ಆದಿಚುಂಚನಗಿರಿಯಲ್ಲಿ ಬಸ್ಸು ನಿಂತಾಗ ಪಕ್ಕದ ಡಾಬಾದಲ್ಲಿ ಪಿಜ್ಜಾ ತಿನ್ನುವವನಿಗೆ ಅಲ್ಲೇ ನೂರಡಿ ದೂರದಲ್ಲಿ ರೈತನೊಬ್ಬ ತನ್ನ ನೆಲದಲ್ಲಿ ಯಾವ ಬೆಳೆ ಬೆಳೆಯುತ್ತಾನೆ ಎಂಬುದು ಗೊತ್ತಿರುವುದಿಲ್ಲ. ಅವುಗಳನ್ನು ಬೆಳೆಯುವ ವಿಧಾನ, ಅವುಗಳ ಪೋಷಣೆ, ಬೀಜ, ನೀರು, ಕೊಯ್ಲು, ಅದಕ್ಕಾಗಿ ರೈತ ಹರಿಸಿದ ಬೆವರು, ಶ್ರಮ, ಹೋರಾಟ ಯಾವುದೂ ಕಾಣಿಸುವುದಿಲ್ಲ.

ರೈತ ಬೆಳೆದ ಟೊಮ್ಯಾಟೊಗಳಿಗೆ, ಬಟಾಟೆಗೆ ಬೆಲೆ ಸಿಗಲಿಲ್ಲ ಎಂದು ಅವುಗಳನ್ನು ತಂದು ರಸ್ತೆಗೆ ಸುರಿಯುವುದು, ಹುಟ್ಟುವಳಿಗೆ ಬೆಲೆಯಿಲ್ಲದೆ, ಬ್ಯಾಂಕು ಸಾಲ ಭರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದು ಕೂಡ ನಮಗೆ ತಟ್ಟುವುದಿಲ್ಲ. ಕಾರಣ ಅವನದ್ದೇ ಅನ್ನದ ಮೂಲಕ ನಮ್ಮ ಹೃದಯಕ್ಕೆ ಬರಬೇಕಾದ ಬೇನೆಯ ದಾರಿ, ವೇದನೆಯ ದಾರಿ ತಪ್ಪಿ ಇನ್ಯಾವುದೋ ದಾರಿಯಲ್ಲಿ ಅದು ತಲುಪುತ್ತಿರುವುದು. ಇಂಥ ದಾರಿ ಬಹುಮುಖಿ ಅಥವಾ ಬಹುತ್ವ ಅಲ್ಲವೇ ಅಲ್ಲ. ಅದು ಏಕಮುಖಿ ಸಂಸ್ಕೃತಿ.

ನಾನು ಈ ದಿನ ತಿಂದ ಅನ್ನ ನನಗೆ ಎಲ್ಲಿಂದ ಬಂದಿದೆ ಎಂದು ನನಗೆ ಗೊತ್ತಾಗುವುದು ಇದೆಯಲ್ಲ ಅದೇ ನಿಜವಾದ ಆಹಾರ ವೈವಿಧ್ಯತೆಯ ಅರಿವು. ನನಗೆ ಗೊತ್ತಿಲ್ಲದೆಯೇ ನಾನು ಆಹಾರವನ್ನು ಅನುಭವಿಸುವುದು ಇದೆಯಲ್ಲ, ನನಗೆ ಗೊತ್ತಿಲ್ಲದೆಯೇ ಒಂದು ಪಾನೀಯವನ್ನು ಕುಡಿಯುವುದು ಇದೆಯಲ್ಲ ಆಗ ನಾನು ಕೇವಲ ಜಾಗತಿಕ ಮಾರುಕಟ್ಟೆಯ ಒಬ್ಬ ಗ್ರಾಹಕನಾಗಿ ಇರುತ್ತೇನೆಯೇ ಹೊರತು ನಿಜವಾದ ಅರ್ಥದಲ್ಲಿ ಬಳಕೆದಾರನಲ್ಲ. ಆದ್ದರಿಂದ ಆಹಾರ ವೈವಿಧ್ಯತೆಯ ವಿಶಿಷ್ಟತೆ ಅಂದರೆ ಖಂಡಿತಾ ಆಹಾರದ ಏಕತೆಯಲ್ಲ. ಅದು ಕೇವಲ ಅಂತಾರಾಷ್ಟ್ರೀಯ ಮಾರುಕಟ್ಟೆಯಷ್ಟೇ.

ಈ ಪ್ರಕೃತಿಯಲ್ಲಿ ಆಹಾರವನ್ನು ಉತ್ಪಾದಿಸುವವನು ಮನುಷ್ಯ ಮಾತ್ರ. ಪ್ರಾಣಿಗಳು ಆಹಾರವನ್ನು ಹುಡುಕುತ್ತವೆ. ಮಂಗ ಬೇಸಾಯ ಮಾಡುವುದಿಲ್ಲ. ಕಾಗೆ ಕಬ್ಬು ನೆಡುವುದಿಲ್ಲ. ಪಾರಿವಾಳ ರೊಟ್ಟಿ ತಟ್ಟುವುದಿಲ್ಲ. ಮನುಷ್ಯ ಮಾತ್ರ ಇವೆಲ್ಲವನ್ನೂ ಮಾಡಬಲ್ಲ. ಕೆಲವೊಮ್ಮೆ ಹಣದಿಂದ ಖರೀದಿಸಬಲ್ಲ. ಬೆಳೆಸುವ ಮತ್ತು ಖರೀದಿಸುವ ಎರಡೂ ತನಗಳು ಅಹಂಗಳೇ. ತನಗೆ ಬೇಕಾಗಿ ಪಂಜಾಬಿನ ರೈತ ಗೋಧಿ ಬೆಳೆಸುತ್ತಾನೆ ಎಂದು ಭಾವಿಸುವ, ತನಗೆ ಬೇಕಾಗಿ ರೈತ ಕಾಫಿ ಬೆಳೆಸುತ್ತಾನೆ, ಇನ್ನೆಲ್ಲಿಯವನೋ ಚಹಾ ಬೆಳೆಸುತ್ತಾನೆ ಎಂದೆಲ್ಲ ಭ್ರಮಿಸುವ ಮತ್ತು ಅವೆಲ್ಲವನ್ನು ತಾನು ಕಿಸೆಯ ಕಾಸಿನಿಂದ ಖರೀದಿಸಬಲ್ಲೆನೆಂಬುದು ಬಳಕೆದಾರನೊಳಗೆ ತುಂಬುವ ಅಹಂ ಯಾವಾಗಲೂ ಸ್ಥಳೀಯ ಪರವಾಗಿರುವುದಿಲ್ಲ.

ಊರಿಗೆ ಬರಗಾಲ ಬಂದಾಗ ಅದರ ಅನುಭವ-ಯಾತನೆ ಬರೀ ರೈತನಿಗೆ ಮಾತ್ರ ಆಗುವುದು ಇಂಥ ಏಕಮುಖ ಸಂಬಂಧದಿಂದ. ಎಷ್ಟೇ ನವನಾಗರಿಕನಿರಲಿ ತಾನು ತಿನ್ನುವ ಅನ್ನದ ಮೂಲ ಗೊತ್ತಿಲ್ಲದೆ ಅದನ್ನು ಅನುಭವಿಸುವುದು ಇದೆಯಲ್ಲ, ತಿನ್ನುವ ಅನ್ನವನ್ನು ಬರೀ ಮಾರುಕಟ್ಟೆಯ ಚೌಕಟ್ಟಿನಲ್ಲಷ್ಟೇ ಪರಿಭಾವಿಸುವುದು ಇದೆಯಲ್ಲ ಇದು ಆಹಾರದ ಬಹುತ್ವಕ್ಕೆ ತುಂಬಾ ಅಪಾಯಕಾರಿ. ತಿನ್ನುವ ಯಾವುದೇ ಖಾದ್ಯ-ಪಾನೀಯವಿರಲಿ ಅದನ್ನು ಭೂಮಿಸಂಬಂಧದಿಂದಲೇ ನೋಡಬೇಕು. ಅಂಥವನಿಗೆ ಮಾತ್ರ ಬಟ್ಟಲಿನಾಚೆ ಬಿದ್ದ ಒಂದು ಅಗುಳು ಕೂಡ ಜೀವದ್ರವ್ಯವಾಗಿ ಕಾಣಿಸುತ್ತದೆ. ಮಹಾನ್ ನಟ ಡಾ. ರಾಜಕುಮಾರ್ ಅವರು ಊಟ ಮಾಡಿದ ಮೇಲೆ ತಟ್ಟೆ ತೊಳೆದಿಟ್ಟ ಹಾಗೆ ಹೊಳೆಯುತ್ತಿರುತ್ತಿತ್ತಂತೆ. ಅದು ಅವರಿಗೆ ಭೂಮಿಸಂಬಂಧದಿಂದ ಬಂದ ಋಣ-ಗುಣ. ಅದಕ್ಕಾಗಿಯೇ ಅವರು ನೆಲದ ಮಗ- ಬಂಗಾರದ ಮನುಷ್ಯ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top