Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಅನ್ನದ ಅನಂತತೆ ಮತ್ತು ಭಾರತೀಯ ಗ್ರಾಮಗಳು

Saturday, 02.09.2017, 3:05 AM       No Comments

ಕಾಡಿನಿಂದ ಹೊರಗೆ ನೆಲೆಸಿದ್ದರೂ ಪ್ರತಿಯೊಂದಕ್ಕೂ ಅರಣ್ಯವನ್ನೇ ನೆಚ್ಚಿ ಬದುಕುವ ಕೃಷಿಕರಿದ್ದಾರೆ. ಆರೋಗ್ಯ ಕೆಟ್ಟಾಗ ಕಾಡಿನಿಂದ ನಾರು-ಬೇರು ಅಗೆದು ಕಷಾಯ-ಮದ್ದು ಕುಡಿದು ಬದುಕುವ ಇಂಥವರ ಅರಣ್ಯಜ್ಞಾನ ಶ್ಲಾಘನೀಯ. ಆದರೆ ಇಂಥ ಅರಣ್ಯಾಶ್ರಯದ ಬದುಕು ಕೊನೆಗೊಂಡು ಮನುಷ್ಯ ನಾಗರಿಕ ಆದಹಾಗೆಯೇ ರೋಗಗಳು ಹೆಚ್ಚಾದವು.

ಈ ಭೂಮಿಯ ಮೇಲೆ ಈವರೆಗೆ ಮಂಗ ಭತ್ತ ಬೆಳೆಸಿಲ್ಲ, ನಾಯಿ ಬೆಂಡೆ ನೆಟ್ಟಿಲ್ಲ, ಆನೆ ಅಡಕೆ ಬೆಳೆದಿಲ್ಲ, ಬೆಕ್ಕು ಕಲ್ಲಂಗಡಿ ಬಿತ್ತಿಲ್ಲ. ಜೀವಜಗತ್ತಿನಲ್ಲಿ ಮನುಷ್ಯರನ್ನುಳಿದು ಬೇರೆ ಎಲ್ಲವೂ ಆಹಾರವನ್ನು ಹುಡುಕುತ್ತವೆ. ನೀರು, ಆಹಾರ ಹುಡುಕಿಕೊಂಡು ಅವು ಭೂಮಿಯ ಮೇಲೆ ಎಲ್ಲೆಂದರಲ್ಲಿ ಅಲೆಯುತ್ತವೆ. ಅವುಗಳಿಗೆ ಮನುಷ್ಯ ಸೃಷ್ಟಿಸಿದ ಭೂಪಟ, ಕ್ಯಾಲೆಂಡರ್, ಗಡಿಯಾರಗಳ ಹಂಗಿಲ್ಲ. ಅವುಗಳಿಗೆ ಇಂಡಿಯಾ-ಚೀನಾದ ಗಡಿರೇಖೆಗಳು ಗೊತ್ತಿಲ್ಲ. ಬರೀ ಹುಡುಕುತ್ತವೆ, ತಿನ್ನುತ್ತವೆ, ಮಲಗುತ್ತವೆ, ಮತ್ತೆ ಎದ್ದು ಅಲೆಯುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನು ಆಹಾರವನ್ನು ಉತ್ಪಾದಿಸುತ್ತಾನೆ. ಕರಾವಳಿಗರ ಚಪಾತಿಗೆ ಪಂಜಾಬಿನ ಗೋಧಿ, ಎಲ್ಲಿಯದೋ ಕಾಫಿ, ಇನ್ನೆಲ್ಲಿಯದೋ ಖರ್ಜೂರ, ಮತ್ತೆಲ್ಲಿಯದೋ ಚಹಾ- ಹೀಗೆ ದೇಶ-ಪ್ರಪಂಚದ ಮೂಲೆಮೂಲೆಯಲ್ಲಿ ಬೆಳೆದು ಹಣಕ್ಕೆ ಅವು ಬಿಕರಿಗೊಂಡು ಇರುವ ಕಡೆಯಿಂದ ಇಲ್ಲದ ಕಡೆಗೆ ಚಲಿಸುತ್ತವೆ.

ತಿನ್ನುವುದು ಅನ್ನವೇ ಇರಲಿ, ಮುದ್ದೆಯೇ ಇರಲಿ ಆ ಆಹಾರದೊಂದಿಗೆ ಅಂಟಿಕೊಂಡ ಪರಿಮಳಕ್ಕೆ ಒಂದು ಪ್ರಾದೇಶಿಕತೆಯ ಪ್ರಜ್ಞೆ ಇರುತ್ತದೆ. ಅನ್ನದ ರುಚಿ-ಸ್ವಾದದೊಂದಿಗೆ ಆ ಸ್ಥಳೀಯತೆಯ ಅನುಭವವಾಗಬೇಕಾದರೆ ನೆಲದಲ್ಲಿ ಬೇರೂರಿದ ಅನುಭವ ಇರಲೇಬೇಕು. ಭತ್ತ, ರಾಗಿ, ಗೋಧಿಯ ಮೂಲ ಗೊತ್ತಿಲ್ಲದವನಿಗೆ ಈ ನೆಲದ ಪರಿಮಳದ ಅನುಭವವೇ ಆಗದು. ನೆಲ ಮುಟ್ಟದೆ ಅನ್ನ ತಿನ್ನುವುದು, ಹಸು ನೋಡದೆಯೇ ಹಾಲು ಕುಡಿಯುವುದು ನೆಲ, ಕೃಷಿಯ ಆತ್ಮದಿಂದ ಆಚೆ ನಿಂತವರು.

ಭಾರತದ ಆತ್ಮಗಳಾದ ಗ್ರಾಮಗಳು ಕೂಡ ಇಂದು ಈ ಸುಖದಿಂದ ವಂಚಿತವಾಗುತ್ತಿವೆ. ನಾವು ಎಷ್ಟೇ ಕೃಷಿಕರು, ಹಸಿರುವಾಸಿಗಳು ಸಾಗುವಳಿದಾರರೆಂದರೂ ಬಹುಪಾಲು ಈ ದೇಶದ ಗ್ರಾಮ್ಯರಿಗೆ ಶೇ. 80ಕ್ಕೂ ಹೆಚ್ಚು ಆಹಾರ ಪರಿಕರಗಳು ಇಂದಿಗೂ ಪೇಟೆಯಿಂದಲೇ ಬರುತ್ತವೆ. ಆಹಾರದ ವಿಷಯದಲ್ಲಿ ನಾನು ನೂರಕ್ಕೆ ನೂರರಷ್ಟು ಸ್ವಾವಲಂಬಿ ಎಂಬ ಕೃಷಿಕರು ಇಲ್ಲವೇ ಇಲ್ಲ. ಇದ್ದರೂ ಶೇ. 2ರಿಂದ 5ರಷ್ಟು ಇರಬಹುದು. ಎಲ್ಲವನ್ನೂ ತನ್ನ ನೆಲದಲ್ಲೇ ಬೆಳೆಸಿ ಉಣ್ಣುವವರಿಗೆ ಮಾತ್ರ ನೆಲದ ಪರಿಮಳದ ಪ್ರಜ್ಞೆ ಚೆನ್ನಾಗಿ ಇರುತ್ತದೆ. ಆಚೆ ಮನೆಯಿಂದ ರಾಗಿ, ಈಚೆ ಮನೆಯಿಂದ ಹಸುವಿನ ಹಾಲು, ಪಕ್ಕದ ಮನೆಯಿಂದ ಬಾಳೆಹಣ್ಣು ತಂದು ಬದುಕುವವರಲ್ಲಿ ಒಂದು ಬಗೆಯ ಸ್ಥಳೀಯ ಸುಖ ಇರಬಹುದು. ಆದರೆ ಅದೆಲ್ಲ ಪೇಟೆಯಿಂದಲೇ ಬರುವ ಕ್ರಮದಲ್ಲಿ ನೆಲದವರ ಸುಖ ಸುಮ್ಮನೆ.

ಇದು ಬರೀ ನನ್ನ ದೇರ್ಲದ ಕತೆಯಲ್ಲ. ಎಲ್ಲೆಡೆ ಬದಲಾದ ರಾಷ್ಟ್ರೀಯ ಜೀವನಶೈಲಿ. ತಮಗೆ ಬೇಕಾಗುವ ತರಕಾರಿಗಳನ್ನು ಬೆಳೆಸುವ ನೆಲವನ್ನು, ಮನೆಯ ಹಿಂಭಾಗ-ಮುಂಭಾಗಗಳನ್ನು ನಾವು ಕಳೆದುಕೊಂಡದ್ದಷ್ಟೇ ಅಲ್ಲ, ನಗರ ಕೇಂದ್ರಿತ ಮಹಾಮನೆಗಳು ಇಂದು ಅಡುಗೆಕೋಣೆರಹಿತವಾಗುತ್ತಿವೆ. ಅರ್ಧ ಕೆ.ಜಿ. ಅನ್ನ, ಕಾಲು ಕೆ.ಜಿ. ಸಾಂಬಾರನ್ನು ದರ್ಶಿನಿಗಳಿಂದ ಖರೀದಿಸುವ ಮನಸ್ಥಿತಿಗಳು ನಗರಗಳಲ್ಲಿ ಹೆಚ್ಚಾಗುತ್ತಿವೆ. ಮೊನ್ನೆಮೊನ್ನೆಯವರೆಗೆ ಹೆಚ್ಚಿಟ್ಟ ತರಕಾರಿ, ಅರೆದಿಟ್ಟ ಮಸಾಲೆಯನ್ನು ತಂದು ಮನೆಯಲ್ಲೇ ಬೇಯಿಸುವ ಕ್ರಮವಿತ್ತು. ಈಗ ಶ್ರೀಮಂತ ಸಾಫ್ಟ್​ವೇರ್​ಗಳಿಗೆ ಅದೂ ಕಷ್ಟವಾಗುತ್ತಿದೆ.

ಹೀಗೆ ತುಂಬಿ ತರುವ ಆಹಾರ ಪೊಟ್ಟಣಗಳ ಲೇಬಲ್, ಚಿತ್ರವಿನ್ಯಾಸ, ಅದರೊಳಗಡೆಯ ರುಚಿ, ಬಣ್ಣ, ಸ್ವಾದಗಳೇ ನವನಾಗರಿಕರಿಗೆ ಮುಖ್ಯವಾಗುತ್ತವೆಯೇ ಹೊರತು ಅದರೊಳಗಡೆಯ ಮೆಣಸು ಬ್ಯಾಡಗಿಯದ್ದೋ, ತೆಂಗು ತಿಪಟೂರಿನದ್ದೋ, ಬಟಾಟೆ ಹಾಸನದ್ದೋ ಗೊತ್ತಾಗುವುದೇ ಇಲ್ಲ. ನಮ್ಮ ನಾಲಿಗೆಗಳೀಗ ರುಚಿಯನ್ನು ಕಂಡುಹಿಡಿಯುತ್ತವೆಯೇ ಹೊರತು ಮೂಲಬೇರುಗಳನ್ನಲ್ಲ.

ಈ ಪ್ರಕೃತಿಯಲ್ಲಿ ಸಮಗ್ರ ಸಸ್ಯ-ಜೀವಕೋಟಿಗಳನ್ನು ಕಟ್ಟಿಕೊಂಡ ನಿಸರ್ಗಕ್ಕೊಂದು ನಿಯಮವಿದೆ. ಈ ನಿಯಮ ಪ್ರಕೃತಿಯನ್ನು ಬಗೆದು ಅನುಭವಿಸುವ, ಬದುಕುವ ಎಲ್ಲ ಬಳಕೆದಾರನಿಗೂ ಅನ್ವಯವಾಗಲೇಬೇಕು. ದುರಂತವೆಂದರೆ ಇಂದು ಈ ಪ್ರಕೃತಿಯ ಮೇಲಿನ ಮಣ್ಣು, ಗಾಳಿ, ನೀರು, ಆಹಾರ, ಹಸಿರು ಎಲ್ಲವೂ ನಮ್ಮಿಂದಲೇ ಹಾಳಾಗಿ ನಿಸರ್ಗವೇ ನಮ್ಮ ಶತ್ರು ಎನ್ನುವ ಹಂತಕ್ಕೆ ತಲುಪಿದೆ. ಮನುಷ್ಯನೂ ಸೇರಿ ಎಲ್ಲ ಜೀವಜಂತುಗಳಿಗೂ ಬೇಕಾಗುವ ಆಹಾರವನ್ನು ಋತುಮಾನಕ್ಕೆ ಅನುಗುಣವಾಗಿ ಈ ನಿಸರ್ಗ ಸೃಷ್ಟಿಸುತ್ತದೆ. ಚಳಿಗೆ, ಗಾಳಿಗೆ, ಮಳೆಗೆ, ಬರಗಾಲಕ್ಕೆ ಹೀಗೆ ನೆಲಜ್ಞಾನವೇ ನಮ್ಮನ್ನು ಈವರೆಗೆ ಕಾಪಾಡಿಕೊಂಡು ಬಂದಿದೆ ಎಂಬ ಸತ್ಯ ನಿಧಾನವಾಗಿ ಮರೆಯುತ್ತಿದೆ.

ಇಂದಿಗೂ ನಮ್ಮ ದೇಶದಲ್ಲಿ ಬೇಟೆಯಾಡುತ್ತ, ಗೆಡ್ಡೆ-ಗೆಣಸು ತಿನ್ನುತ್ತ, ಅಲೆಮಾರಿಯಾಗಿ ಬದುಕುವ ಬುಡಕಟ್ಟು ಜನರಿದ್ದಾರೆ. ಸುಮಕೃಷಿ ಮಾಡುವ ಅಲೆಮಾರಿಗಳಿದ್ದಾರೆ. ಕಾಡಿನಿಂದ ಹೊರಗಿದ್ದರೂ ಪ್ರತಿಯೊಂದಕ್ಕೂ ಅರಣ್ಯವನ್ನೇ ಅವಲಂಬಿಸಿ ಬದುಕುವ ಕೃಷಿಕರಿದ್ದಾರೆ. ದೇಹಾರೋಗ್ಯ ಕೆಟ್ಟಾಗ ಅದೇ ಕಾಡಿನಿಂದ ನಾರು-ಬೇರು ಅಗೆದು ಕಷಾಯ-ಮದ್ದು ಕುಡಿದು ಬದುಕುವ ಇಂಥವರ ಅರಣ್ಯಜ್ಞಾನ ಗಮನೀಯ. ಇಂಥ ಅರಣ್ಯಾಶ್ರಯದ ಬದುಕು ಕೊನೆಗೊಂಡು ಮನುಷ್ಯ ನಾಗರಿಕ ಆದಹಾಗೆಯೇ ರೋಗಗಳು ಹೆಚ್ಚಾದವು. ಚಿಕಿತ್ಸಾಲಯ-ವೈದ್ಯಜಗತ್ತು ಉದ್ಯಮದ ರೂಪ ತಳೆಯತೊಡಗಿತು.

ನನಗೆ ಇದೆಲ್ಲ ನೆನಪಾದುದು ನಿನ್ನೆ ತೋಟಕ್ಕೆ ಮದ್ದು ಬಿಡುವ ದಾಮು ಫೋನಾಯಿಸಿ ಪತ್ರೋಡೆ ಮಾಡುವ ಕಾಡು ಮರಕೆಸುವು ಎಲೆ ಬೇಕೋ ಎಂದು ಕೇಳಿದಾಗ. ಆಷಾಢ-ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ಇಂಥ ನೆಲಮೂಲ ಆಹಾರಗಳ ಬಳಕೆ ಜಾಸ್ತಿ. ಕಣಿಲೆ, ತಜಂಕ್, ಪತ್ರೋಡೆ… ಹೀಗೆ ಸಾಂಪ್ರದಾಯಿಕ ಆಹಾರಗಳನ್ನು ಇತ್ತೀಚೆಗೆ ಸಾಮೂಹಿಕವಾಗಿ ಬಳಸುವುದೂ ಇದೆ. ಈ ತಿಂಗಳಿಡೀ ಕರಾವಳಿಯ ಅನೇಕ ಹೋಟೆಲುಗಳಲ್ಲಿ ಇಂಥ ತಿಂಡಿಗಳು ಲಭ್ಯವಿರುತ್ತವೆ. ಬೇರೆ ಬೇರೆ ಸಂಘಟನೆಗಳು ದಿನವಿಡೀ ಹಬ್ಬ ಮಾಡಿ ಸಾಂಘಿಕವಾಗಿ ಇವೆಲ್ಲವನ್ನೂ ಊಟಕ್ಕೆ ಬಡಿಸಿ ತಿನ್ನುತ್ತಾರೆ. ಹಾಲೆ ಮರದ ಕಹಿರಸವನ್ನು ಆಟಿ ಅಮಾವಾಸ್ಯೆಯ ದಿನ ಕರಾವಳಿಯ ಜನ ಮತ, ಧರ್ಮಗಳನ್ನು ಮರೆತು ಸಾಮೂಹಿಕವಾಗಿ ಕುಡಿಯುತ್ತಾರೆ. ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ವಿತರಿಸಲಾಗುತ್ತದೆ.

ಬುಡಕಟ್ಟು-ಮೂಲನಿವಾಸಿಗಳ ಮೂಲಕ ಆಧುನಿಕತೆಗೆ ಸರಿದು ಈಗಲೂ ಉಳಿದಿರುವ ಇಂಥ ನೆಲಮೂಲ ಆಹಾರ-ಪಾನೀಯಗಳ ವೈವಿಧ್ಯ, ಸತ್ವ-ಸಾಧ್ಯತೆಗಳ ಕುರಿತು ಸಂಶೋಧನೆಗಳಾಗಬೇಕು. ಕೇರಳ ಮತ್ತು ಉತ್ತರ ಭಾರತದ ಕಾಡುನಿಬಿಡ ರಾಜ್ಯಗಳ ಅನೇಕ ರೆಸಾರ್ಟ್​ಗಳಲ್ಲಿ ಇಂಥ ಅಡುಗೆ ಉತ್ಪನ್ನಗಳು ನಾಗರಿಕ ಪ್ರವಾಸಿಗಳ ಪ್ರಮುಖ ಆಕರ್ಷಣೆಗಳಾಗಿವೆ. ಮಲೆನಾಡು ಕೊಡಗಿನ ಅನೇಕ ಹೋಂಸ್ಟೇಗಳಲ್ಲಿ ಇಂಥ ತಿಂಡಿಗಳು ದುಬಾರಿ ಬೆಲೆಗಳನ್ನು ಹೊಂದಿ ಮಾಲೀಕರಿಗೆ ಆದಾಯದ ಮೂಲವಾಗಿವೆ. ಇಂಥ ಆಹಾರಕ್ರಮವನ್ನು ಕೇಂದ್ರೀಕರಿಸಿ ಬಳಕೆದಾರರ ಆರೋಗ್ಯದೃಢತೆಯ ಬಗ್ಗೆ ಅಧ್ಯಯನಗಳಾಗಬೇಕು.

ಪಾರಂಪರಿಕ ಜ್ಞಾನವಾಗಿ ಉಳಿದು ಬೆಳೆದು ಆಧುನಿಕರ ಕೈಗೆ ಬಂದ ಈ ಅರಣ್ಯಜ್ಞಾನವನ್ನು ಅರಣ್ಯವಾಸಿಗಳ ಜೀವನಾನುಭವದಲ್ಲೇ ಹುಡುಕಬೇಕು. ಹಸಿರು ಅವಲಂಬಿತರ ಜನಪದ, ಮೌಖಿಕ ಸಂಕಥನಗಳಲ್ಲಿ ಲಭ್ಯವಿರುವ ದಾಖಲಾತಿಗಳನ್ನು ಪರಿಶೀಲಿಸಿ ಪರಿಸರ-ಜಾನಪದ ಕೃಷಿಯಲ್ಲಿ ಕಾಡು ಆಹಾರದ ಮಹತ್ವವನ್ನು ವಿಶ್ಲೇಷಿಸಬೇಕು. ಇದರ ಫಲಿತಗಳು ವರ್ತಮಾನದ ಆಹಾರ ಮತ್ತು ಜೀವನವಿನ್ಯಾಸವನ್ನು ಹೊಸಬಗೆಯಲ್ಲಿ ಕಟ್ಟುವುದಕ್ಕೆ ನೆರವಾಗಲಿವೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top