Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಅಧ್ಯಾತ್ಮ-ತತ್ತ್ವಕಲೆಗಳ ಸಂಗಮ ಡಾ. ಆನಂದ ಕುಮಾರಸ್ವಾಮಿ

Sunday, 08.10.2017, 3:05 AM       No Comments

ಭಾರತೀಯ ಸಂಸ್ಕೃತಿಯ ‘ಚಿರಂತನ ತತ್ತ್ವದರ್ಶನ’ವನ್ನು ಆಯ್ದುಕೊಂಡು ಕಲಾಮೀಮಾಂಸೆ, ತತ್ತ್ವಮೀಮಾಂಸೆ ಮತ್ತು ಧರ್ಮಮೀಮಾಂಸೆಗಳನ್ನು ಜಗತ್ತಿಗೆ ಸಾರಿದ ಮಹಾಮನೀಷಿ- ಡಾ. ಆನಂದ ಕುಮಾರಸ್ವಾಮಿ. ಅವರು ಅಧ್ಯಾತ್ಮದ ಅನುಸಂಧಾನ ಮತ್ತು ಧ್ಯಾನದಲ್ಲೇ ತಮ್ಮ ಕೊನೆಯ ದಿನಗಳನ್ನು ಕಳೆದವರು. ಅವರ ಚಿಂತನೆಗಳು ಈಗಲೂ ಆಸಕ್ತರ ಪಾಲಿನ ದಾರಿದೀಪಗಳಾಗಿವೆ.

 ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಪಶ್ಚಿಮ ಜಗತ್ತಿಗೆ ಮೊದಲು ತೋರಿಸಿ ಕೊಟ್ಟವರು ಡಾ. ಆನಂದ ಕುಮಾರಸ್ವಾಮಿ. ಭಾರತೀಯ ಸಂಸ್ಕೃತಿಯ ಸಮಗ್ರತೆಯನ್ನು ಬಹುಮುಖಿ ದೃಷ್ಟಿಯಿಂದ ತೋರಿಸಿಕೊಟ್ಟ ಋಷಿಕಲ್ಪರು ಇವರೇ. ವೇದಮೀಮಾಂಸೆ, ಕಲಾಮೀಮಾಂಸೆ, ಬೌದ್ಧಮೀಮಾಂಸೆಗಳ ಕುರಿತು ಚಿಂತಿಸುತ್ತ, ಲೇಖನಗಳನ್ನು ಬರೆಯುತ್ತ, ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆದ ಇವರು ಜೀವನದುದ್ದಕ್ಕೂ ತಪಸ್ವಿಯಂತೆ ಬದುಕಿದ ಮಹಾಮನೀಷಿ!

ಜನನ-ವಿದ್ಯಾಭ್ಯಾಸ-ಪದವಿ: ಆನಂದರು 1877ರ ಆಗಸ್ಟ್ 22ರಂದು ಕೊಲಂಬೊ ನಗರದಲ್ಲಿ ಜನಿಸಿದರು. ತಂದೆ ಮುತ್ತು ಕುಮಾರಸ್ವಾಮಿ, ತಾಯಿ ಇಂಗ್ಲೆಂಡಿನ ಕೆಂಟಿಷ್ ನಗರದ ಎಲಿಜಬೆತ್ ಕ್ಲೀ ಬೀಬಿ. ಇವರು ಹುಟ್ಟಿದಾಗ ಜೋಯಿಸರು ‘ಆನಂದ’ ಎಂಬ ಹೆಸರು ಸೂಚಿಸಿದರಂತೆ. ಇವರ ಮನೆದೇವರು ಕುಮಾರಸ್ವಾಮಿ. ಹೀಗೆ ಆನಂದ ಕೆಂಟಿಷ್ ಕುಮಾರಸ್ವಾಮಿ ಆದರು. ಇವರ ಮನೆತನ ತಮಿಳರದ್ದು. ಇವರು ಮುದಲಿಯಾರ್ ಸಮುದಾಯಕ್ಕೆ ಸೇರಿದವರು. ತಮಿಳುನಾಡಿನಿಂದ ವಲಸೆ ಬಂದು ಜಾಫ್ನಾ ಬಳಿಯ ಮಣಿಪೆಯ್ ಎಂಬ ಗ್ರಾಮದಲ್ಲಿ ನೆಲೆಸಿದ್ದವರು. ಇವರ ತಾತ ಚಿದಂಬರಂ ಕಡೆಯ ಆರುಮುಗಂ ಮುದಲಿಯಾರ್ ಎಂಬ ಉದ್ಯಮಿ. ಇವರಿಗೆ ಇಬ್ಬರು ಗಂಡುಮಕ್ಕಳು. ದೊಡ್ಡವರೇ ಆನಂದ ಕುಮಾರಸ್ವಾಮಿಯ ತಂದೆ ಮುತ್ತು ಕುಮಾರಸ್ವಾಮಿ. 1874ರಲ್ಲಿ ಬ್ರಿಟಿಷ್​ರಾಣಿ ವಿಕ್ಟೋರಿಯಾ ಇವರಿಗೆ ‘ನೈಟ್​ಹುಡ್’ ಪ್ರಶಸ್ತಿ ನೀಡಿದ್ದಳು. ಈ ಗೌರವ ಪಡೆದ ಮೊಟ್ಟಮೊದಲ ಪ್ರಾಚ್ಯದೇಶೀಯ ಇವರೇ. ಮುತ್ತು ಕುಮಾರಸ್ವಾಮಿಗೆ ಸಂಸ್ಕೃತ, ಪಾಲಿ, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಉತ್ತಮ ಪರಿಶ್ರಮವಿತ್ತು. ಇವರ ಕೆಲವು ಗ್ರಂಥಗಳು ಲಂಡನ್ನಿನಲ್ಲಿ ಪ್ರಕಟವಾಗಿದ್ದುವು. ಪಾಲಿಯಿಂದ ‘ದಾಠಾವಂಸ’ (ದಂಷ್ಟ್ರವಂಶ) ಎಂಬ ಗ್ರಂಥವನ್ನು ಅನುವಾದಿಸಿದ್ದರು. ಇದು ಬುದ್ಧನ ಸ್ಮಾರಕವಾಗಿ ಅವನ ಹಲ್ಲೊಂದು ಸಿಂಹಳ ದ್ವೀಪಕ್ಕೆ ಬಂದ ವೃತ್ತಾಂತವನ್ನು ತಿಳಿಸುವ ಪುರಾಣರೂಪದ ಗ್ರಂಥ. ಬುದ್ಧ ಪ್ರವಚನ ನೀಡಿದ ‘ಸುತ್ತನಿಪಾತ’ವನ್ನು 1874ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇವರು 1875ರಲ್ಲಿ ಇಂಗ್ಲೆಂಡಿಗೆ ಹೋದಾಗ ಎಲಿಜಬೆತ್ ಕ್ಲೇ ಬೀಬಿ ಎಂಬಾಕೆಯನ್ನು ಪ್ರೀತಿಸಿ ಮಾರ್ಚ್ 18ರಂದು ಅಲ್ಲಿಯೇ ಮದುವೆಯಾದರು. ಮರುವರ್ಷ ಕೊಲಂಬೊಕ್ಕೆ ಬಂದು ಕೊಲ್ಲುಪಿತಿಯ ಎಂಬ ಪ್ರದೇಶದಲ್ಲಿ ಮನೆಕಟ್ಟಿಕೊಂಡರು. ಇಲ್ಲಿಯೇ ಆನಂದರು ಜನಿಸಿದ್ದು. ಆನಂದ ಎರಡು ವರ್ಷದವನಾಗಿದ್ದಾಗ ತಾಯಿಯೊಡನೆ ಇಂಗ್ಲೆಂಡಿಗೆ ಹೋಗಬೇಕಾಯಿತು. ಸಿಂಹಳದ ಹವೆ ಹಿಡಿಸದೆ ಇರುವುದು ಒಂದಾದರೆ, ಗಂಡ-ಹೆಂಡಿರ ವಿರಸವೂ ಇದಕ್ಕೆ ಕಾರಣವೆಂದು ಕೆಲವರು ಹೇಳುತ್ತಾರೆ. ಕೊಲಂಬೊದಲ್ಲಿ ತಂದೆ ಒಬ್ಬರೇ ಉಳಿದರು. 4 ವರ್ಷಗಳ ತರುವಾಯ 1879ರ ಮೇ 4ರಂದು ಸರ್ ಮುತ್ತು ಕುಮಾರಸ್ವಾಮಿ ಗತಪ್ರಾಣರಾದರು. ಆಗ ಎಲಿಜಬೆತ್​ಗೆ ಮೂವತ್ತರ ಪ್ರಾಯ. ಆನಂದರಿಗೆ 2 ವರ್ಷ. ಎಲಿಜಬೆತ್ ಮರುಮದುವೆಯಾಗದೆ ತವರೂರು ಕೆಂಟ್​ನಲ್ಲಿ ಸಣ್ಣಮನೆಯೊಂದನ್ನು ಬಾಡಿಗೆಗೆ ಹಿಡಿದು ಮಗನನ್ನು ಓದಿಸಿ-ಬೆಳೆಸಿದರು.

ಆನಂದ ಓದಿನಲ್ಲಿ ಬುದ್ಧಿವಂತನಾಗಿದ್ದ. ಚಿಕ್ಕಂದಿನಲ್ಲೇ ವಿಜ್ಞಾನದಲ್ಲಿ ಅತ್ಯಾಸಕ್ತಿ. ಇಂಗ್ಲೆಂಡಿನ ವೈಕ್ಲಿಪ್ ಶಾಲೆಯಲ್ಲಿ 1889ರಿಂದ 6 ವರ್ಷ ಓದಿ ಎಲ್ಲ ಉಪಾಧ್ಯಾಯರ ಆದರಕ್ಕೆ ಪಾತ್ರನಾಗಿದ್ದ. ಭೂವಿಜ್ಞಾನ ಈತನ ಆಸಕ್ತಿಯ ಕ್ಷೇತ್ರವಾಯಿತು. ಲಂಡನ್ನಿನ ಯೂನಿವರ್ಸಿಟಿ ಕಾಲೇಜು ಸೇರಿ ಪ್ರಥಮ ಶ್ರೇಣಿಯಲ್ಲಿ ಬಿ.ಎಸ್​ಸಿ. ಮುಗಿಸಿದ. ಈ ನಡುವೆ ತಾಯಿಯೊಂದಿಗೆ ಸಿಂಹಳದ್ವೀಪಕ್ಕೆ ಹೋಗಿದ್ದುಂಟು. ಸಿಂಹಳದ ಭೂ ಹಾಗೂ ಸಸ್ಯಸಂಪತ್ತು ವಿಚಾರವಾಗಿ ಅಧ್ಯಯನ ನಡೆಸಿದ ಪರಿಣಾಮ, ಲಂಡನ್ನಿನ ಯೂನಿವರ್ಸಿಟಿ ಕಾಲೇಜು ‘ಫೆಲೊ’ ಎಂದು ಇವರನ್ನು ನೇಮಿಸಿಕೊಂಡಿತು. 1902ರ ಜೂನ್ 9ರಂದು ಎತೆಲ್ ಮೈರೆ ಎಂಬಾಕೆಯನ್ನು ಆನಂದರು ಮದುವೆಯಾದರು. ಆಕೆಗೆ ಭಾರತ ಸಂಸ್ಕೃತಿಯ ಬಗ್ಗೆ ಆದರಾಭಿಮಾನವಿತ್ತು. ಫೋಟೋಗ್ರಫಿ ಕಲೆಯೂ ಗೊತ್ತಿತ್ತು. ಅವರದು ಅನುಕೂಲವಾದ ದಾಂಪತ್ಯ. ಆನಂದರು ಸಿಂಹಳದ ಭೂಸಂಪತ್ತನ್ನು ಕುರಿತು ಪ್ರೌಢಲೇಖನಗಳನ್ನು ಬರೆದರು. ಖನಿಜಶಾಸ್ತ್ರ ಕುರಿತಾದ ಇವರ ಪ್ರಬಂಧಗಳಿಗೆ ಲಂಡನ್ ವಿಶ್ವವಿದ್ಯಾಲಯ 1906ರಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿತು!

ಖನಿಜದಿಂದ ಕಲೆಯ ಕಡೆಗೆ: ಎತೆಲ್​ವೆುೖರೆ ಕರಕುಶಲಕಲೆಗಳ ಬಗೆಗೆ ಆಸಕ್ತಿ ಇದ್ದವಳೆ. ಆನಂದರು ಬಹುಕಾಲ ಖನಿಜ ಸಂಪತ್ತಿನ ಸರ್ವೆಕ್ಷಣದಲ್ಲಿಯೇ ಹೊರಗಡೆ ಇರುತ್ತಿದ್ದರು. ಬ್ರಿಟಿಷ್ ಸರ್ಕಾರ ಸರ್ವೆಕ್ಷಣ ವಿಭಾಗವನ್ನು ತೆರೆದು, ಅದರ ನಿರ್ದೇಶಕರಾಗಿ ಇವರನ್ನು ನೇಮಿಸಿತ್ತು. ಗಂಡ ಹೊರಗಡೆ ಇರುವಾಗ ಎತೆಲ್​ವೆುೖರೆ ಸಾಂಪ್ರದಾಯಿಕ ಕಸೂತಿಕಲೆಯ ಅಧ್ಯಯನಕ್ಕೆ ತೊಡಗಿದಳು. ಆ ಕುರಿತು ‘ಸಿಲೋನ್ ನ್ಯಾಷನಲ್ ರಿವ್ಯೂ’ ಪತ್ರಿಕೆಯಲ್ಲಿ ಲೇಖನವೊಂದು 1906ರ ಜೂನ್​ನಲ್ಲಿ ಪ್ರಕಟವಾಯಿತು. ಈಕೆ ಮುಂದೆ ‘ಕರಕುಶಲಕಲೆ’ ಕುರಿತಂತೆ ಹಲವಾರು ಗ್ರಂಥಗಳನ್ನು ಬರೆದಳು. ಎತೆಲ್​ವೆುೖರೆ 6-7 ವರ್ಷ ಆನಂದರ ಜತೆ ಇದ್ದು, ತರುವಾಯ ವಿಚ್ಛೇದನ ಮಾಡಿಕೊಂಡಳಾದರೂ, ಸಾಯುವವರೆಗೆ ಆನಂದರ ಜತೆ ಪತ್ರವ್ಯವಹಾರ ಇರಿಸಿಕೊಂಡಿದ್ದಳು. ಆನಂದರಿಗೆ ಕಲೆಗಳ ಕುರಿತ ಆಸಕ್ತಿ ಬೆಳೆಯಲು ಎತೆಲ್​ವೆುೖರೆ ಬರೆದ ಲೇಖನಗಳೇ ಕಾರಣವಾದವು.

ಭಾರತೀಯ ಕಲೆಗಳ ಮಹತಿಯನ್ನು ಕಂಡ ಮೇಲೆ ಭೂ-ವಿಜ್ಞಾನದಿಂದ ಕಲೆಯ ಕಡೆಗೆ ಅವರ ಆಸಕ್ತಿ ಹರಿಯಿತು. ಒಮ್ಮೆ ಸರ್ವೆಕ್ಷಣ ಮಾಡುತ್ತಿರುವಾಗ ಆಂಡಸ್ ಪೀಕ್ ಎಂಬಲ್ಲಿ ತಂಗಿದ್ದರು. ಅಲ್ಲಿನ ಒಂದು ಪ್ರಸಂಗ ‘ಸ್ವದೇಶಿ’ ತತ್ತ್ವದ ಕಡೆ ಇವರನ್ನು ತಿರುಗುವಂತೆ ಮಾಡಿತು. ಸಿಂಹಳೀಯ ಹೆಂಗಸೊಬ್ಬಳು ಐರೋಪ್ಯ ಉಡುಪು ಧರಿಸಿ ಮಗನ ಜತೆ ಹೆಮ್ಮೆಯಿಂದ ಹೋಗುತ್ತಿದ್ದಳು. ಆಕೆ ತನ್ನ ಧರ್ಮವನ್ನು ಬಿಟ್ಟು ಕ್ರೈಸ್ತಧರ್ಮವನ್ನು ಹಿಡಿದಿದ್ದಳು. ಆಕೆಯ ಮೈಮೇಲೆ ಪರದೇಶದ ಉಡುಪಿರುವುದು ಆನಂದರಿಗೆ ಯಾಕೋ ಸಹ್ಯವಾಗಲಿಲ್ಲ. ಹೊರದೇಶದ ಸಂಸ್ಕೃತಿಯೊಂದು ಸ್ಥಳೀಯ ಸಾಂಪ್ರದಾಯಿಕತೆಯ ನಾಶಕ್ಕೆ ಕಾರಣವಾಗುತ್ತಿರುವುದರ ಪೂವೋತ್ತರ ಚಿತ್ರಗಳು ಅವರ ಕಣ್ಣಮುಂದೆ ನಿಂತಂತಾಯಿತು!

ಈ ಪ್ರಸಂಗವು ಆನಂದರ ಬಾಳಿಗೆ ಹೊಸತೊಂದು ನೆಲೆಯನ್ನು ತಂದುಕೊಟ್ಟಿತು. ಅವರು ಭಾರತ ಹಾಗೂ ಸಿಂಹಳದ ದೇವ-ದೇವತೆಗಳ ಪುರಾಣಕತೆಗಳು, ಪೂಜಾಪದ್ಧತಿಗಳನ್ನು ಚೆನ್ನಾಗಿ ಅರಿತಿದ್ದರು. ಐರೋಪ್ಯ ಸಂಸ್ಕೃತಿಯು ಸ್ಥಳೀಯ ಸಾಂಪ್ರದಾಯಿಕ ಸಂಸ್ಕೃತಿಯ ಮೇಲೆ ಉಂಟು ಮಾಡುತ್ತಿದ್ದ ಪ್ರಭಾವ ಆನಂದರನ್ನು ಅಧಿರನನ್ನಾಗಿಸಿತು. ಐರೋಪ್ಯ ಸಂಸ್ಕೃತಿಯ ಬಗೆಗೆ ಒಂದು ಬಗೆಯ ಜಿಗುಪ್ಸೆ ಮೊಳೆಯುವಂತಾಯಿತು. ಸ್ಥಳೀಯ ಸಂಸ್ಕೃತಿಯನ್ನು ತಿಳಿಯಲು ಸಂಸ್ಕೃತ, ಪಾಲಿ ಮತ್ತು ಸಿಂಹಳಿ ಭಾಷೆಗಳನ್ನು ಆಳವಾಗಿ ಅಭ್ಯಾಸ ಮಾಡತೊಡಗಿದರು. ತಂದೆಯಿಂದ ಬಂದ ತಮಿಳು ಬಳುವಳಿ ಬಳಸಿಕೊಂಡು ಶೈವಸಿದ್ಧಾಂತದ ಮೂಲಗ್ರಂಥಗಳನ್ನೆಲ್ಲಾ ಓದತೊಡ ಗಿದರು. ಸಿಂಹಳದಲ್ಲಿ ನೆಲೆಯೂರಿದ್ದ ಬೌದ್ಧಧರ್ಮ ಅವರ ಆಸಕ್ತಿಯನ್ನು ಸೆಳೆಯಿತು. 1906ರಲ್ಲಿ ನಿರ್ದೇಶಕನ ಅವಧಿ ಮುಗಿದ ಮೇಲೆ ಭಾರತಕ್ಕೆ ಬಂದು ಹಲವು ತಿಂಗಳು ಸುತ್ತಾಡಿದರು. ಭಾರತೀಯ ಸಂಸ್ಕೃತಿಯ ಆಳ ಪರಿಚಯ ಮಾಡಿಕೊಂಡರು. ಸಿಂಹಳ ದ್ವೀಪದ ಕಲೆಗಳ ಬಗೆಗೆ ಮಾಡಿಕೊಂಡಿದ್ದ ಟಿಪ್ಪಣಿಗಳಿಗೆ ಪುಸ್ತಕರೂಪ ನೀಡಿದರು. ಅದು 1908ರಲ್ಲಿ Medieval Sinhalese Art (ನಡುಯುಗದ ಸಿಂಹಳೀಕಲೆ) ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಅನಿಬೆಸೆಂಟರ ಸೂಚನೆಯಂತೆ ಆನಂದರು ಥಿಯೋಸಾಫಿಕಲ್ ಸೊಸೈಟಿಯಲ್ಲಿ ಕೆಲಕಾಲ ಇದ್ದರು. 1907ರಲ್ಲಿ ಕೆಲಕಾಲ ವಾರಣಾಸಿಯಲ್ಲಿಯೂ ಇದ್ದರು. ಭಾರತದಲ್ಲಿ 1916ರ ಸುಮಾರಿಗೆ ಸ್ವದೇಶಿ ಚಳವಳಿ, ಸ್ವಾತಂತ್ರ್ಯಸಂಗ್ರಾಮ ಗರಿಗೆದರಿಕೊಂಡಾಗ ಭಾರತದಲ್ಲಿಯೇ ಇದ್ದರು. ಆಗ ಬಾಲಗಂಗಾಧರ ಟಿಳಕ, ಗೋಪಾಲಕೃಷ್ಣ ಗೋಖಲೆ, ಅರವಿಂದ ಘೊಷ್, ಬಿಪಿನಚಂದ್ರ ಪಾಲ, ಸುರೇಂದ್ರನಾಥ ವಂದ್ಯೋಪಾಧ್ಯಾಯ ಮುಂತಾದವರ ಗಾಢ ಪರಿಚಯ ಒದಗಿತು.

ಸಂಸ್ಕೃತಿಯ ಅನುಸಂಧಾನ: ಈ ನಡುವೆ ಅವರ ಮನಸ್ಸನ್ನು ಭಾರತೀಯ ಕಲೆ ಆವರಿಸಿ ಕೊಂಡಿತು. ಇದರ ಅಧ್ಯಯನಕ್ಕಾಗಿ ಅವರು ಹಲವಾರು ಬಾರಿ ಭಾರತಕ್ಕೆ ಬಂದದ್ದುಂಟು. ಆಗ ಸುಪ್ರಸಿದ್ಧ ಕಲಾವಿದರಾಗಿದ್ದ ಅವನೀಂದ್ರನಾಥ ಟ್ಯಾಗೋರ್, ನಂದಲಾಲ ಬೋಸ್, ಅರ್ಧೆಂದುಕುಮಾರ್ ಗಂಗೂಲಿ ಮುಂತಾದವರ ಗೆಳೆತನವನ್ನು ಸಂಪಾದಿಸಿಕೊಂಡರು. ಕವಿ ರವೀಂದ್ರನಾಥ ಟ್ಯಾಗೋರರ ಸಖ್ಯಕ್ಕೂ ಕಲೆಯೇ ಕಾರಣವಾಯಿತು. ಆನಂದರ ಕಲಾಚಿಂತನೆಯನ್ನು ರವೀಂದ್ರರು ಮೆಚ್ಚಿಕೊಂಡರು. 1907ರಲ್ಲಿ ಕಲ್ಕತ್ತದಲ್ಲಿ ಕಲಾಶಾಲೆಯೊಂದು ಸ್ಥಾಪನೆಗೊಂಡಿತು. ಇದರ ಸ್ಥಾಪನೆಯಲ್ಲಿ ಆನಂದರ ಪ್ರಮುಖಪಾತ್ರ ಇತ್ತು. ಆಗ ತಂತ್ರಸಾಹಿತ್ಯದ ಅಧ್ವರ್ಯು ಸರ್ ಜಾನ್ ವುಡ್ರೋಪ್, ಸ್ವಾಮಿ ವಿವೇಕಾನಂದರ ಶಿಷ್ಯೆ ನಿವೇದಿತಾ, ವಿಜ್ಞಾನಿ ಜಗದೀಶ ಚಂದ್ರಬೋಸ್, ಅರುಣಾಚಲದ ಶ್ರೀರಮಣರು ಹೀಗೆ ಹಲವರನ್ನು ಭೇಟಿಯಾಗಿ ಭಾರತದ ಉನ್ನತಸಂಸ್ಕೃತಿಯ ಅಂತರಂಗವನ್ನು ಧ್ಯಾನಸ್ಥಗೊಳಿಸಿಕೊಂಡರು. ಉತ್ತರದತ್ತ ಹಬ್ಬಿರುವ ಹಿಮಾಲಯ, ದಕ್ಷಿಣದ ತುತ್ತತುದಿಯಲ್ಲಿರುವ ಕನ್ಯಾಕುಮಾರಿ- ಅವರ ವಿಶ್ಲೇಷಣೆಗೆ ಪರ್ಯಾಯವಾಗಿ ಕಾರಣವಾದವು. ಕಾಶಿ, ಬಂಗಾಲ, ಹಿಮಾಲಯದ ಪರ್ವತಶ್ರೇಣಿಗಳಲ್ಲಿ ಬಹುಕಾಲ ಅಲೆದಾಡಿದರು. ಕಾಶ್ಮೀರ, ಬಂಗಾಳ, ಎಲ್ಲೋರ, ಸಾಂಚಿ, ಭೂಪಾಲ, ವಾರಾಣಸಿ, ತಂಜಾವೂರು, ಮಧುರೆ, ರಾಮೇಶ್ವರ ಮೊದಲಾದ ಸ್ಥಳಗಳನ್ನು ಸುತ್ತಾಡಿ, ಭಾರತೀಯ ಕಲೆಯ ವೈಶಿಷ್ಟ್ಯವನ್ನು ಕಂಡರು. ಇದನ್ನೆಲ್ಲ ನೋಡುವಾಗ ಭಾರತೀಯರು ಯಾಂತ್ರಿಕವಾಗಿ ಪಾಶ್ಚಾತ್ಯಸಂಸ್ಕೃತಿಯ ಕಡೆಗೆ ಒಲಿಯುತ್ತಿರುವುದರ ಬಗೆಗೆ, ‘ಸ್ವದೇಶಿ’ ಭಾವನೆ ಬಿಟ್ಟು ‘ಪರದೇಶಿ’ಗಳಾಗುತ್ತಿರುವುದರ ಬಗೆಗೆ ಬೇಸರವಾಯಿತು. ಅವರು ಸ್ವದೇಶಿಭಾವನೆಯಲ್ಲಿ ಆಧ್ಯಾತ್ಮಿಕತೆ ಇರುವುದನ್ನು ಭಾರತೀಯರಿಗೆ ತೋರಿಸಿಕೊಟ್ಟ ಆಚಾರ್ಯಪುರುಷ!

Art and Swadeshi ಕೃತಿಯಲ್ಲಿ ‘ಸ್ವದೇಶಿಯೆಂಬುದು ಬರಿಯ ರಾಜಕೀಯ ಅಸ್ತ್ರವಲ್ಲ; ಅದಕ್ಕೆ ಧಾರ್ವಿುಕ, ಕಲಾತ್ಮಕ ಆದರ್ಶಗಳೂ ಇರಬೇಕು. ಅದೊಂದು ಬದುಕುವ ಬಗೆ’ ಎಂದು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಿಂಹಳದಿಂದ ಹಿಂದಿರುಗಿದ ಮೇಲೆ 1911ರಲ್ಲಿ Indian Drawings ಎಂಬ 2 ಬೃಹತ್ ಸಂಪುಟಗಳಲ್ಲಿ ಭಾರತೀಯ ಚಿತ್ರಕಲೆಯ ಔನ್ನತ್ಯವನ್ನು ಪಶ್ಚಿಮದವರಿಗೆ ಪರಿಚಯಿಸಿದ್ದು ಸಕಾಲಿಕವಾಗಿತ್ತು. ಅದೇ ವರ್ಷ ದುಗ್ಗಿರಾಲ ಗೋಪಾಲಕೃಷ್ಣಯ್ಯ ಜತೆಗೂಡಿ The Mirror of Gesture ಹೊರತಂದರು. ನೂರಾರು ಉತ್ಕೃಷ್ಟ ಮೊಘಲ್ ಮತ್ತು ರಜಪೂತ ಚಿತ್ರಗಳನ್ನು ಅವರು ಸಂಗ್ರಹಿಸಿದ್ದರು. ರಾಜಸ್ಥಾನದ ವರ್ಣಚಿತ್ರಗಳಿಗೆ ಲೋಕದ ಹಿರಿಮೆ ತಂದುಕೊಟ್ಟ ಕೀರ್ತಿ ಆನಂದರಿಗೆ ಸಲ್ಲಬೇಕು. ಇದರ ಫಲವಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ 1910ರಲ್ಲಿ ಪ್ರಕಟವಾದ Rajput Paintings 2 ಸಂಪುಟಗಳು ಇಂದಿಗೂ ಆಕರಗ್ರಂಥಗಳಾಗಿ ಉಳಿದಿವೆ. ಅವರು ಭಾರತಾದ್ಯಂತ ಸುತ್ತಾಡಿ ವರ್ಣಚಿತ್ರ, ಪ್ರತಿಮೆ, ಶಿಲ್ಪ, ಉಪಕರಣಗಳು ಮುಂತಾದ ಕಲಾಕೃತಿಗಳನ್ನು ಸಂಗ್ರಹಿಸಿ ಅವುಗಳ ವಿಷಯಗಳನ್ನೆಲ್ಲಾ ಕ್ರಮಬದ್ಧವಾಗಿ ಕ್ರೋಡೀಕರಿಸಿದರು.

ಭಾರತೀಯ ಕಲಾಮೀಮಾಂಸೆ ಕುರಿತ ಅವರ ಕೃತಿಗಳು, ಲೇಖನಗಳು ಈಗಲೂ ಮೌಲ್ಯ ನಿರ್ದೇಶನ ಮಾಡುತ್ತವೆ. Introduction to Art, Buddhist Art, The Indian Craftsman, Visvakarma: Examples of Indian architecture, Sculpture, Painting, handicraft, Early Indian Architecture: Cities and City gates, The Dance Of Shiva ಮುಂತಾದ ಬರಹಗಳಲ್ಲಿ ಅವರ ಶೋಧನೆಯ ಸತ್ಯಮಾರ್ಗಗಳಿವೆ. ಇವು ಭಾರತೀಯ ಕಲಾಹಿರಿಮೆಯನ್ನು ಎತ್ತಿ ತೋರಿಸುವ ಬರಹಗಳಾಗಿವೆ. ಭಾರತೀಯರು ಕಲೆಯ ಔನ್ನತ್ಯದ ವಿಸ್ಮೃತಿಯಲ್ಲಿದ್ದಾಗ, ಕಲೆ ಮತ್ತು ಬದುಕು, ಕಲೆ ಮತ್ತು ಸಾಹಿತ್ಯ, ಕಲೆ ಮತ್ತು ಅಧ್ಯಾತ್ಮ, ಕಲೆ ಮತ್ತು ಸಮಾಜ ಇವುಗಳ ನಡುವಿನ ಅನನತ್ಯೆಯನ್ನು ಎತ್ತಿತೋರಿಸಿ ಭಾರತೀಯರ ಕಣ್ಣನ್ನು ತೆರೆಸಿದ್ದು ಆನಂದರ ಹಿರಿಮೆ-ಗರಿಮೆ ಮಾತ್ರವಲ್ಲ; ಎತ್ತರ-ಬಿತ್ತರಗಳೂ ಅಲ್ಲುಂಟು!

ಭಾರತದ ಆಕರ್ಷಣೆ: ಆನಂದರ ಮನಸ್ಸನ್ನು ಅಪಾರವಾಗಿ ಸೆಳೆದದ್ದು ಬೌದ್ಧಕಲೆ. Buddhist Art, The living thoughts of Goutama Buddha, The origin of the Buddha Images  ಮುಂತಾದ ತಮ್ಮ ಕೃತಿಗಳಲ್ಲಿ ಬುದ್ಧನ ತತ್ತ್ವಬೋಧೆ ಹಾಗೂ ಬೌದ್ಧಮೀಮಾಂಸೆಯನ್ನು ಎತ್ತಿಹಿಡಿದು ಅವುಗಳ ಅನನ್ಯತೆಯನ್ನು ಲೋಕಕ್ಕೆ ಸಾರಿದರು. ಅವರ ತಂದೆ ‘ಸುತ್ತನಿಪಾತ’ವನ್ನು ಇಂಗ್ಲಿಷಿಗೆ ಅನುವಾದಿಸಿದ್ದು ಸರಿಯಷ್ಟೆ. ಆ ಪರಂಪರೆಯನ್ನು ಆನಂದರು ಇನ್ನೊಂದು ಬಗೆಯಲ್ಲಿ ಮುಂದುವರಿಸಿದರು. ಸಿಂಹಳವು ಬೌದ್ಧಸಂಸ್ಕೃತಿಯ ನೆಲೆವೀಡಾಗಿದ್ದೊಂದು ವಿಶೇಷ. ಆನಂದರ ಆಸಕ್ತಿ ಬಹುಮುಖವಾಗಿತ್ತು. ಅವರು ಒಂದು ವಿಷಯದ ಆಳ ಅಧ್ಯಯನಕ್ಕಾಗಿ ಹಲವು ಭಾಷೆಗಳನ್ನು ಕಲಿತರು. ಬೌದ್ಧ ತ್ರಿಪಿಟಕಗಳ ಅಧ್ಯಯನಕ್ಕಾಗಿ ಪಾಲಿ ಭಾಷೆ, ವೇದಾಂತದ ಅಧ್ಯಯನಕ್ಕಾಗಿ ಸಂಸ್ಕೃತ, ಜೈನ ಆಗಮ ಗ್ರಂಥಗಳನ್ನು ಪರಿಚಯ ಮಾಡಿಕೊಳ್ಳಲೆಂದು ಪ್ರಾಕೃತವನ್ನು ಅಭ್ಯಾಸ ಮಾಡಿದರು. ಅವರಿಗೆ ವೈದಿಕ-ಅವೈದಿಕ, ಶಿಷ್ಟ-ಪರಿಶಿಷ್ಟ, ಮಾರ್ಗ-ದೇಶಿ ಎಂಬ ಭೇದಗಳು ಇರಲಿಲ್ಲ; ಎಲ್ಲ ವಿಷಯಗಳ ಮೇಲೂ ಆಸಕ್ತಿ, ಕುತೂಹಲಗಳನ್ನು ಇರಿಸಿಕೊಂಡಿದ್ದರು.

ಪಂಜಾಬಿ ಮತ್ತು ಕಾಶ್ಮೀರಿ ಜಾನಪದ ಗೀತೆಗಳನ್ನು ಸಂಗ್ರಹಿಸಿ ಇಂಗ್ಲಿಷಿಗೆ ಅನುವಾದಿಸಿದ್ದರು. ಅವರು ಭಾರತೀಯ ಸಂಗೀತವನ್ನು ಒಪ್ಪಿಕೊಂಡಿದ್ದರಷ್ಟೆ. ಅದಾಗಲೇ ಕಣ್ಮರೆಯಾಗುತ್ತಿದ್ದ ಗೇಯಪ್ರಕಾರಗಳನ್ನು ಉಳಿಸುವುದು ಅಗತ್ಯವೆಂಬ ಅಂಶ ಅರಿಕೆಗೆ ಬಂದಿತ್ತು. ಆನಂದರು ಅದಾಗಲೇ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದರು. ಲಂಡನ್ನಿನಲ್ಲಿ ಆಲಿಸ್ ರಿಚರ್ಡ್​ಸನ್ ಎಂಬಾಕೆಯ ಪರಿಚಯ ಇದೇ ಸಂದರ್ಭದಲ್ಲಿ ಆಯಿತು. ಆಕೆಗೆ ನೃತ್ಯ-ಸಂಗೀತದಲ್ಲಿ ಅಪಾರ ಆಸಕ್ತಿಯಿತ್ತು. ಆಕೆಯನ್ನು 1911ರಲ್ಲಿ ಮದುವೆಯಾಗಿ ಮತ್ತೆ ಭಾರತದ ಪ್ರವಾಸ ಕೈಗೊಂಡರು. ಅವರು ಬಂದು ನೆಲೆಸಿದ್ದು ವಿದ್ವತ್ತಿನ ನೆಲೆಯಾದ ಕಾಶ್ಮೀರದಲ್ಲಿ. ಉಸ್ತಾದ್ ಅಬ್ದುಲ್ ರಹೀಮ್ ಎಂಬುವರ ಬಳಿ ಅಲಿಸ್ ಹಿಂದೂಸ್ತಾನಿಯನ್ನು ಕಲಿತಳು, ತನ್ನ ಹೆಸರನ್ನು ರತ್ನದೇವಿ ಎಂದು ಮಾರ್ಪಡಿಸಿಕೊಂಡಳು. ಆಕೆ ಭಾರತದಿಂದ ಇಂಗ್ಲೆಂಡಿಗೆ ಮರಳುವಾಗ ತಂಬೂರಿಯನ್ನು ತೆಗೆದುಕೊಂಡು ಹೋದದ್ದು ವಿಶೇಷ. ರತ್ನದೇವಿ ಇಂಗ್ಲೆಂಡಿನ ಹಲವು ಸಭೆಗಳಲ್ಲಿ ಸಂಗೀತ ಕಾರ್ಯಕ್ರಮ ಕೊಡುತ್ತಿದ್ದಾಗ, ಆನಂದರು ಸಂಗೀತದ ಕುರಿತು ಪ್ರಸ್ತಾವನೆಯಾಗಿ ಮಾತನಾಡುತ್ತಿದ್ದರು. ಕವಿ ರವೀಂದ್ರರು ರತ್ನದೇವಿಯ ಹಾಡಿಗೆ ಮಂತ್ರಮುಗ್ಧರಾಗಿದ್ದರಂತೆ. ಡಬ್ಯ್ಲು.ಬಿ. ಯೇಟ್ಸ್​ನಂಥ ಕವಿ ಭಾರತೀಯ ಸಂಗೀತಕ್ಕೆ ಮಾರುಹೋಗಲು ರತ್ನದೇವಿ ಕಾರಣಳಾದಳು. ಈ ನಡುವೆ ಆನಂದರು Thirty Indian Songs from Punjab and Kashmir ಎಂಬ ಗ್ರಂಥವನ್ನು ಪ್ರಕಟಿಸಿದರು. ಇದರ ಎಲ್ಲ ಗೀತೆಗಳಿಗೂ ರತ್ನದೇವಿ ಸ್ವರಪ್ರಸ್ತಾರ ಹಾಕಿದಳು. ನಾರದ ಎಂಬ ಮಗ ಹುಟ್ಟಿದ. ಆದರೆ, ಅಲೆಮಾರಿಯಾಗಿ ಮರೆಯಾಗಿ ಹೋದ. ಒಬ್ಬ ಮಗಳಿದ್ದಳು. ಆಕೆಯ ಹೆಸರು ರೋಹಿಣಿ.

ಆನಂದರಿಗೆ ಭಾರತದಲ್ಲಿ ನೆಲೆನಿಲ್ಲಬೇಕೆಂಬ ಅಪೇಕ್ಷೆಯೇನೊ ಇತ್ತು. ಕಾಶಿ ವಿಶ್ವವಿದ್ಯಾಲಯದಲ್ಲಿ ಅದಕ್ಕಾಗಿ ಯತ್ನಗಳಾದವು. ಆದರೆ, ಬ್ರಿಟಿಷರ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸಿದ್ದುದರಿಂದ ಇದು ಸಾಧ್ಯವಾಗಲಿಲ್ಲ. ಭಾರತದಲ್ಲೊಂದು ‘ರಾಷ್ಟ್ರೀಯ ಮ್ಯೂಸಿಯಂ’ ಮಾಡಬೇಕೆಂಬ ಅವರ ಕನಸು ಹಾಗೆಯೇ ಕಮರಿತು. ಇಂಥ ನಿರಾಶೆಯ ಸಮಯದಲ್ಲಿ ಅಮೆರಿಕದೆಡೆ ಅವರ ಮನಸ್ಸು ತಿರುಗಿತು. ಅಲ್ಲಿನ ಕಲಾವಿದ್ವಾಂಸ ರಾಸ್​ನ ಭೇಟಿಯಾಯಿತು. ಆನಂದರು ತಮ್ಮಲ್ಲಿದ್ದ ಸಾವಿರಾರು ರಾಜಸ್ಥಾನೀ ಮೊಘಲ್ ವರ್ಣಚಿತ್ರಗಳನ್ನು, ಶಿಲ್ಪ ಹಾಗೂ ಲೋಹದ ಪ್ರತಿಮೆಗಳನ್ನು ಮ್ಯೂಸಿಯಂಗೆ ಕೊಟ್ಟರು. ಅದನ್ನು ‘ರಾಸ್-ಕುಮಾರಸ್ವಾಮಿ ಸಂಗ್ರಹ’ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ಇರಿಸಲಾಯಿತು. ‘ಬೋಸ್ಟನ್ ಮ್ಯೂಸಿಯಂ’ನಲ್ಲಿ ಅವರು ಸಂಗ್ರಹಿಸಿದ್ದ ಕಲಾಕೃತಿಗಳು ನೆಲೆಗೊಂಡವು. ರಾಸ್​ನ ಆಸಕ್ತಿಯಿಂದಾಗಿ 1917ರಲ್ಲಿ ಭಾರತೀಯ ಕಲಾಕೃತಿಗಳ ವಿಭಾಗವೊಂದನ್ನು ಅಲ್ಲಿ ತೆರೆಯಲಾಯಿತು. ‘ಕೀಪ್ ಆಫ್ ಇಂಡಿಯನ್ ಆರ್ಟ್ಸ್’ ಎಂಬ ಹುದ್ದೆಗೆ ನೇಮಕಗೊಂಡ ಆನಂದರು, 1917ರಿಂದ 1947ರವರೆಗೆ ಬೋಸ್ಟನ್ ಮ್ಯೂಸಿಯಂನ ಅನೇಕ ಯೋಜನೆಗಳಲ್ಲಿ ಪಾಲ್ಗೊಂಡರು. ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಮ್ಯೂಸಿಯಂನ ಫೆಲೋ ಆಗಿ ‘ವಿಶ್ವಸ್ತಸಮಿತಿ’ ಇವರನ್ನು ಆಯ್ಕೆಮಾಡಿ ಗೌರವಿಸಿ ಕೃತಜ್ಞತೆ ವ್ಯಕ್ತಪಡಿಸಿತು.

ಬೋಸ್ಟನ್ ಬ್ರಾಹ್ಮಣ: ಆನಂದರು 1917ರಲ್ಲಿ ಇಂಗ್ಲೆಂಡಿನಿಂದ ಬಂದು ಅಮೆರಿಕೆಯಲ್ಲಿ ನೆಲೆಸಿದಾಗ ಎರಡನೆಯ ಹೆಂಡತಿ ರತ್ನದೇವಿ ಜತೆ ವಿರಸ ಮೂಡಿ ಮುಂದೆ ಒಂದೆರಡು ವರ್ಷಗಳಲ್ಲಿಯೇ ವಿಚ್ಛೇದನವಾಯಿತು. ಆಗ ವಿವಾಹ-ಪ್ರೇಮದ ಕುರಿತಾದ ಇವರ ನಿಲುವು ಬದಲಾಯಿತು. ‘ಹೆಂಗಸಿನ ಪ್ರೀತಿಗಿಂತ ಜ್ಞಾನದ ಪ್ರೀತಿ ದೊಡ್ಡದು. ವೈವಾಹಿಕ ಜೀವನ ಅನುಕೂಲಕ್ಕಾಗಿ ಮಾತ್ರ’ ಎಂಬ ಭಾವನೆ ಅವರಲ್ಲಿ ಸ್ಥಿರಗೊಂಡಿತು. ಅದೇ ಸಮಯದಲ್ಲಿ 17 ವರ್ಷದ ಸ್ಟೆಲ್ಲಾಬ್ಲಾಜ್ ಎಂಬಾಕೆಯನ್ನು ಮೆಚ್ಚಿಕೊಂಡು ಆಕೆಯ ಒಡನಾಟದಲ್ಲಿದ್ದರು. ಈಕೆ ನೃತ್ಯಪ್ರವೀಣೆ, 1922ರಲ್ಲಿ ಇವರಿಬ್ಬರ ಮದುವೆ ಆಯಿತು. ಆದರೆ, ಈ ಮದುವೆಯೂ ಸ್ಥಿರವಾಗಲಿಲ್ಲ. 1930ರಲ್ಲಿ ದಾಂಪತ್ಯ ಕೊನೆಗೊಂಡಿತು. ಆನಂದರು ಸ್ವಲ್ಪ ದಿನದಲ್ಲೇ, ಯಹೂದಿ ಹಿನ್ನೆಲೆಯ ದೋನಾ ಲೂಯಿಸ್ ಎಂಬಾಕೆಯನ್ನು ಮದುವೆಯಾದರು. ಈಕೆ ವಿಶೇಷ ಪ್ರತಿಭೆಯಿದ್ದವಳಲ್ಲ; ಆದರೆ, ಆನಂದರನ್ನು ಚೆನ್ನಾಗಿ ನೋಡಿಕೊಳ್ಳುವುದರಲ್ಲಿ ಸಂತೋಷಪಟ್ಟವಳು. ಇವರಿಗೆ ರಾಮ ಪೊನ್ನಂಬಲಂ ಕುಮಾರಸ್ವಾಮಿ ಎಂಬ ಮಗ ಹುಟ್ಟಿದ. ಈತ ವೈದ್ಯನಾಗಿ ಅಮೆರಿಕದಲ್ಲೇ ನೆಲೆಸಿದ. ದೋನಾ-ಕುಮಾರಸ್ವಾಮಿ ಇಬ್ಬರದೂ ಅನುಕೂಲ ದಾಂಪತ್ಯ.

ಆನಂದರು ಕಲೆಯ ಮೂಲಕವೇ ಅಧ್ಯಾತ್ಮ ಜಗತ್ತನ್ನು ಪ್ರವೇಶಿಸಿದವರು. ಅನೇಕ ಅಧ್ಯಾತ್ಮ ಗ್ರಂಥಗಳ ವ್ಯಾಸಂಗ ಮಾಡಿದವರು. ಅದರ ಅನುಸಂಧಾನ ಮತ್ತು ಧ್ಯಾನದಲ್ಲೇ ತಮ್ಮ ಕೊನೆಯ ದಿನಗಳನ್ನು ಕಳೆದವರು. ಅರೇಬಿಕ್, ಅವೆಸ್ತನ್, ಪರ್ಷಿಯನ್, ಗ್ರೀಕ್, ಲ್ಯಾಟಿನ್, ಫ್ರೆಂಚ್, ಇಟಾಲಿಯನ್, ಸ್ಪಾನಿಷ್ ಭಾಷೆಗಳನ್ನು ಕಲಿತು ಎಲ್ಲ ಮೂಲಗ್ರಂಥಗಳನ್ನು ಮನನ ಮಾಡಿಕೊಂಡರು. ಕಲೆಯಿಂದ ಕಲಾತತ್ತ್ವಚಿಂತನೆಯ ಕಡೆಗೆ ಮನಸ್ಸು ಹರಿದು, ಅನಂತರ ವೇದ-ವೇದಾಂತಗಳ ಅನುಸಂಧಾನಕ್ಕೆ ತೊಡಗಿದರು. ಅದಕ್ಕೆ ಸಂಬಂಧಿಸಿದಂತೆ ಹತ್ತಾರು ಲೇಖನ, ಪುಸ್ತಕಗಳನ್ನು ಬರೆದರು. ಉತ್ತಮ ರೇಖಾಚಿತ್ರಗಳನ್ನೂ ಬರೆಯುತ್ತಿದ್ದರು. ಅವರು ಯಾವ ರೋಗದಿಂದಲೂ ನರಳದೆ ಪ್ರಸಿದ್ಧ ಕೃತಿ The Dance of Shivaದ ಪರಿಷ್ಕೃತ ಮುದ್ರಣ ಮುಗಿಸಿ 1947ರ ಸೆಪ್ಟೆಂಬರ್ 9ರಂದು ಇಹದ ಬದುಕನ್ನು ಮುಗಿಸಿದರು. ಅವರ ಚಿಂತನೆಗಳು ಈಗಲೂ ನಮ್ಮೆಲ್ಲರ ಕೈಹಿಡಿದು ನಡೆಸುತ್ತಿವೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top