Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಅಧಿವೇಶನ ಅರ್ಥಪೂರ್ಣವಾಗಿರಲಿ

Monday, 17.07.2017, 3:01 AM       No Comments

ಇಂದಿನಿಂದ (ಜು. 17) ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಈ ಹಿಂದಿನ ಅಧಿವೇಶನಗಳಂತೆ ಈ ಬಾರಿಯೂ ಕಲಾಪ ಸುಸೂತ್ರವಾಗಿ ನಡೆಯಲು ಬಿಡಕೂಡದು ಎನ್ನುವುದೇ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಒಂದಂಶದ ಕಾರ್ಯಸೂಚಿ ಆಗಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಶತಾಯಗತಾಯ ಈ ಅಧಿವೇಶನ ವ್ಯರ್ಥವಾಗದೆ, ಅರ್ಥಪೂರ್ಣ ಚರ್ಚೆಗಳಿಗೆ ವೇದಿಕೆಯಾಗಿಸಲು ಸಂಕಲ್ಪ ತೊಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಚಾರದ ಕುರಿತು ಪ್ರಶ್ನಿಸುವುದಕ್ಕೆ ಹಾಗೂ ವಿರೋಧಿಸುವುದಕ್ಕೆ ಅವಕಾಶವಿದ್ದೇ ಇರುತ್ತದೆ. ಅದೇ ರೀತಿ ಈ ಅಧಿವೇಶನದ ಸಂದರ್ಭದಲ್ಲೂ ಭಾರತ-ಚೀನಾ ಗಡಿ ಬಿಕ್ಕಟ್ಟು, ರೈತರ ಸರಣಿ ಆತ್ಮಹತ್ಯೆ, ಕಾಶ್ಮೀರದಲ್ಲಿ ಅಶಾಂತ ಪರಿಸ್ಥಿತಿ, ಅಮರನಾಥ ಯಾತ್ರಿಕರ ಮೇಲೆ ಉಗ್ರದಾಳಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿ ನಂತರದ ಸೂಕ್ಷ್ಮ ವಿಚಾರಗಳನ್ನು ಮುಂದುಮಾಡಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿಪಕ್ಷಗಳ ಕಾರ್ಯತಂತ್ರವಾಗಿದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಪಟ್ಟಂತೆ ಈ ಬಾರಿ ಮಹತ್ವಪೂರ್ಣ ಚರ್ಚೆಗಳು ನಡೆದರೆ ಸ್ವಾಗತಾರ್ಹವೇ. ಬದಲಿಗೆ ಲೋಕಸಭೆಯಲ್ಲಿ ಸಂಖ್ಯಾಬಲವಿಲ್ಲವೆಂಬ ಕಾರಣಕ್ಕೆ ಚರ್ಚೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಕೋಲಾಹಲವೆಬ್ಬಿಸಿ ಕಲಾಪ ಬಹಿಷ್ಕರಿಸುವುದು ಯಾವುದೇ ವಿಪಕ್ಷಗಳ ರಣತಂತ್ರ ಆಗಬಾರದು.

ಸಂಸತ್ತಿನಂಥ ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರಜೆಗಳ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಮಾಗೋಪಾಯಗಳ ಕುರಿತು ಚರ್ಚೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವುದಕ್ಕಿರುವ ವಾಮಮಾರ್ಗವಾಗಬಾರದು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿವೇಶನಗಳ ಸಂದರ್ಭದಲ್ಲಿ ವಿಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಇಂಥದೊಂದು ಅಭಿಪ್ರಾಯಕ್ಕೆ ಆಸ್ಪದ ಕಲ್ಪಿಸಿದೆ. ಕಳೆದ ಚಳಿಗಾಲದ ಅಧಿವೇಶನದ ವೇಳೆ ಕಾಂಗ್ರೆಸ್​ನಂಥ ರಾಷ್ಟ್ರೀಯ ಪಕ್ಷವೇ ಬೇಜವಾಬ್ದಾರಿಯುತವಾಗಿ ನಡೆದುಕೊಂಡು ಸದನದ ಘನತೆ ಕುಗ್ಗಿಸಿತು ಎಂದು ಹೇಳಲೇಬೇಕಾಗಿ ಬಂದಿದೆ. ಅಧಿಕ ಮುಖಬೆಲೆಯ ಹಳೆಯ ನೋಟುಗಳ ರದ್ದತಿಯ ವಿಷಯವನ್ನು ಯಾವ ನಿಯಮದಡಿ ರ್ಚಚಿಸಬೇಕು ಎಂಬುದನ್ನೇ ಆಡಳಿತ ಪಕ್ಷ ಮತ್ತು ವಿಪಕ್ಷಗಳು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿ ಪಟ್ಟುಹಿಡಿದ ಕಾರಣ, ಹುಯಿಲು-ಕೋಲಾಹಲ-ಸಭಾತ್ಯಾಗಗಳಿಗೆ ಆ ಅಧಿವೇಶನ ಸಾಕ್ಷಿಯಾಗುವಂತಾಯಿತು ಎಂಬುದನ್ನು ಮರೆಯಲಾಗದು. ಹೀಗಾಗಿ 21 ದಿನಗಳ ಕಾಲ ನಡೆದ ಲೋಕಸಭಾ ಕಲಾಪದಲ್ಲಿ 19 ಗಂಟೆ ಅವಧಿವರೆಗೆ ಮಾತ್ರ ಚರ್ಚೆ ನಡೆಯಿತು (ಅಂದರೆ ದಿನವೊಂದಕ್ಕೆ ಸರಾಸರಿ ಒಂದು ತಾಸಿಗೂ ಕಡಿಮೆ!) ಮತ್ತು ಉಳಿದ ಸಮಯವೆಲ್ಲ ಘೋಷಣೆ ಕೂಗುವ, ಕಲಾಪಕ್ಕೆ ಅಡ್ಡಿಪಡಿಸುವ, ಪ್ರತಿಭಟಿಸುವ ಪ್ರಹಸನಗಳಲ್ಲೇ ಪರ್ಯವಸಾನವಾಯಿತು. ಇನ್ನು ಅಧಿವೇಶನಕ್ಕೆ ಸಾಕಷ್ಟು ದಿನ ಗೈರುಹಾಜರಾದ, ಒಂದೊಮ್ಮೆ ಹಾಜರಾದರೂ ‘ವಿಷಯವನ್ನು ಇಲ್ಲಿ ರ್ಚಚಿಸುವುದಿಲ್ಲ, ಹೊರಗೆ ರ್ಚಚಿಸುವೆ‘ ಎಂಬ ಬಾಲಿಶ ನೆಪಗಳನ್ನು ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿಯವರ ವರ್ತನೆ ಹೊಣೆಗಾರಿಕೆಯದ್ದು ಎನ್ನಲಾದೀತೇ?

ಒಂದು ತಾಸು ಅವಧಿಯ ಸಂಸತ್ ಕಲಾಪ ನಡೆಸಲು ಸರ್ಕಾರಕ್ಕಾಗುವ ವೆಚ್ಚ 2 ಕೋಟಿ ರೂಪಾಯಿ. ಕಳೆದ ವರ್ಷದ ಸಂಸತ್ ಅಧಿವೇಶನಗಳು ನಡೆದ ಪರಿ ನೋಡಿದರೆ ಸರ್ಕಾರಿ ಬೊಕ್ಕಸಕ್ಕೆ ಆಗಿರುವ ನಷ್ಟದ ಅಂದಾಜು ಯಾರಿಗಾದರೂ ಸಿಗುತ್ತದೆ. ಇದು ಸಾರ್ವಜನಿಕರು ತೆರಿಗೆಯ ರೂಪದಲ್ಲಿ ನೀಡಿದ ದುಡ್ಡು, ಇದನ್ನು ವ್ಯರ್ಥಮಾಡಬಾರದು ಎಂಬ ಕಾಳಜಿಯೊಂದಿಗೆ ಈ ಬಾರಿಯ ಅಧಿವೇಶನವನ್ನು ಸುಸೂತ್ರವಾಗಿ ನಡೆಸಬೇಕಾದ್ದು ಎಲ್ಲ ಸಂಸದರ ಹೆಗಲ ಮೇಲಿನ ಹೊಣೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮಸೂದೆ, ಬ್ಯಾಂಕಿಂಗ್ ನಿಬಂಧನೆ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಹತ್ವದ ವಿಧೇಯಕಗಳು ಈ ಬಾರಿ ಮಂಡನೆಯಾಗುವ ನಿರೀಕ್ಷೆಯಿದೆ. ಹೀಗಾಗಿ, ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇದ್ದರೂ, ಮಸೂದೆ ಸಂಬಂಧಿತ ಚರ್ಚೆ ಹಾಗೂ ಇನ್ನಿತರ ಚರ್ಚಾವಿಷಯಗಳ ಕುರಿತಾದ ಚಿಂತನ-ಮಂಥನಗಳು ಘನತೆಯೊಂದಿಗೆ ನಡೆಯುವಂತಾಗಲು ಜನಪ್ರತಿನಿಧಿಗಳು ಸಂಕಲ್ಪಿಸಬೇಕಿದೆ.

Leave a Reply

Your email address will not be published. Required fields are marked *

Back To Top