Tuesday, 20th February 2018  

Vijayavani

ಹ್ಯಾರಿಸ್ ಪುತ್ರ ಆಯ್ತು ಮತ್ತೊಬ್ಬ ಕೈ ಮುಖಂಡನ ದರ್ಪ- ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ- ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಗೂಂಡಾಗಿರಿ        ನಾನು ಎರಚಿದ್ದು ಪೆಟ್ರೋಲ್ ಅಲ್ಲ, ನೀರು- ಕಿವಿಗೆ ಕಲರ್ ಕಲರ್ ಹೂವಿಟ್ಟ ನಾರಾಯಣಸ್ವಾಮಿ- ನಿಮ್ಮ ಏರಿಯಾದಲ್ಲಿ ನೀರಿಗೆ ಬಣ್ಣ ಇರುತ್ತಾ...?        ಸಿದ್ದರಾಮಯ್ಯ ಆಪ್ತನ ದರ್ಪ ಕಾಂಗ್ರೆಸ್‌ಗೆ ಕಾಣಿಸಲ್ವಾ- ಪರಮೇಶ್ವರ್‌ ಅವರೇ ಗೂಂಡಾನ ವಿರುದ್ಧ ಕ್ರಮ ಇಲ್ವಾ..?- ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಷ್ಟು ಸೇಫ್..?        ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಷಾ ದಂಡಯಾತ್ರೆ- ಕುಕ್ಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ- ಜ್ವರದ ನಡುವೆಯೂ ಹತ್ತು ಹಲವು ಕಾರ್ಯಕ್ರಮದಲ್ಲಿ ಭಾಗಿ        ಮೇಯ್ತಿದ್ದ ಮದಗಜ ಕೆಣಕಿದ ಶ್ವಾನ- ನಾಯಿ ತುಂಟಾಟಕ್ಕೆ ತಿರುಗಿ ಬಿದ್ದ ಆನೆ- ಮಡಿಕೇರಿಯ ಕಾಫಿತೋಟದಲ್ಲಿ ಆನೆ, ನಾಯಿ ಕಾಳಗ       
Breaking News

ಅದಕ್ಷರ ಮೇಲೆ ತೂಗುಗತ್ತಿ

Monday, 19.06.2017, 3:05 AM       No Comments

ನವದೆಹಲಿ: ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇತ್ತೀಚೆಗಷ್ಟೇ 129 ಅದಕ್ಷ ಅಧಿಕಾರಿಗಳ ರಾಜೀನಾಮೆಗೆ ಸೂಚಿಸುವಂತಹ ಮಹತ್ವದ ತೀರ್ಮಾನ ಕೈಗೊಂಡಿದ್ದ ಕೇಂದ್ರ ಸರ್ಕಾರವೀಗ ಮತ್ತೊಂದು ಸುತ್ತಿನ ಭರ್ಜರಿ ಸರ್ಜರಿಗೆ ಕೈ ಹಾಕಿದೆ. ಕರ್ತವ್ಯಲೋಪ, ಭ್ರಷ್ಟಾಚಾರ ಇನ್ನಿತರ ಕಾರಣಗಳಿಗಾಗಿ ಇಲಾಖಾ ತನಿಖೆ ಎದುರಿಸುತ್ತಿರುವ ಎ ಮತ್ತು ಬಿ ಶ್ರೇಣಿಯ ಸುಮಾರು 67 ಸಾವಿರ ನೌಕರರ ಸೇವಾವಧಿ ಕಡಿತದ ಬಗ್ಗೆ ಪರಿಶೀಲಿಸುವ ಕಾರ್ಯಕ್ಕೆ ಸದ್ದಿಲ್ಲದೆ ಚಾಲನೆ ನೀಡಿರುವ ಸರ್ಕಾರ, ನಿಷ್ಕ್ರಿಯ ನೌಕರರ ವಿರುದ್ಧ ಆರೋಪ ಸಾಬೀತಾದಲ್ಲಿ ಅವರನ್ನು ಮನೆಗೆ ಕಳುಹಿಸುವಂತಹ ಕಠಿಣ ಕ್ರಮಕೈಗೊಳ್ಳುವ ಸುಳಿವು ನೀಡಿದೆ.

ಸರ್ಕಾರದ ಆಡಳಿತದಲ್ಲಿ ದಕ್ಷತೆ ತರುವ ನಿಟ್ಟಿನಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತವನ್ನು ಜನಸ್ನೇಹಿಗೊಳಿಸುವಂತೆ ಎಲ್ಲ ಇಲಾಖೆಗಳಿಗೂ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ಆದೇಶದನ್ವಯ ಕಳಪೆ ಸಾಧನೆ (ಅಪ್ರೖೆಸಲ್) ತೋರಿದ ಮೈಗಳ್ಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗ ಪರಿಶೀಲನೆಯಲ್ಲಿರುವ ಸೇವಾಕಡತಗಳಲ್ಲಿ ಸುಮಾರು 67 ಸಾವಿರ ನೌಕರರ ಕಾರ್ಯಕ್ಷಮತೆ ಪರೀಕ್ಷಿಸಲಾಗುವುದು. ಅದರಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಪೊಲೀಸ್ ಸೇವೆ (ಐಪಿಎಸ್) ಹಾಗೂ ಕಂದಾಯ ಸೇವೆ

(ಐಆರ್​ಎಸ್)ಯಂತಹ ಉನ್ನತ ಹುದ್ದೆಗಳ ಅಧಿಕಾರಿಗಳೇ 25 ಸಾವಿರ ಇದ್ದಾರೆಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ಕಾರ್ಯಾಂಗದಿಂದ ಅತ್ಯುನ್ನತ ಮಟ್ಟದ ಕಾರ್ಯಕ್ಷಮತೆಯನ್ನು ನಿರೀಕ್ಷಿಸಿದೆ. ಭ್ರಷ್ಟಾಚಾರ ಸಹಿಸುವ ಪ್ರಶ್ನೆಯೇ ಇಲ್ಲ. ಇನ್ನೊಂದೆಡೆ ಉದ್ಯೋಗಸ್ನೇಹಿ ಪರಿಸರ ಸೃಷ್ಟಿಸಲು ಮತ್ತು ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಉತ್ತಮ ನೌಕರರನ್ನು ಗುರುತಿಸಿ ಬಹುಮಾನ ನೀಡಲಾಗುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಅಧಿಕಾರಿಗಳ ಕಾರ್ಯಕ್ಷಮತೆ, ಅರ್ಹತೆಯನ್ನು ವಸ್ತುನಿಷ್ಠವಾಗಿ ಪರಿಶೀಲಿಸಿ ಅಪ್ರೖೆಸಲ್ ವರದಿ ಸಿದ್ಧಪಡಿಸಲಾಗುತ್ತದೆ. ಉದ್ಯೋಗಿಯ 15 ಮತ್ತು 25ನೇ ವರ್ಷಗಳ ಸೇವಾವಧಿಯಲ್ಲಿ ಅವರ ದಕ್ಷತೆಯನ್ನು ಒರೆಗೆ ಹಚ್ಚಲಾಗುತ್ತದೆ ಎಂದೂ ಸಚಿವರು ಹೇಳಿದ್ದಾರೆ. -ಪಿಟಿಐ

 

ಉದ್ದೇಶವೇನು?

ಪ್ರಾಮಾಣಿಕ ಅಧಿಕಾರಿಗಳಿಗೆ ಮನ್ನಣೆ, ಅರ್ಹರಿಗೆ ಕೆಲಸಕ್ಕೆ ತಕ್ಕಂತೆ ಬಡ್ತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅದಕ್ಷರ ಮೇಲೆ ಕಣ್ಣಿಟ್ಟಿದೆ.

 

 

ಕೇಂದ್ರದ ಗುರಿ ಯಾರು?

ಇತ್ತೀಚೆಗಿನ ದಾಖಲೆಗಳ ಪ್ರಕಾರ ದೇಶಾದ್ಯಂತ 48.85 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ. ಈ ಪೈಕಿ 15 ಹಾಗೂ 25 ವರ್ಷಗಳ ಸೇವೆ ಪೂರೈಸಿರುವ ಅಧಿಕಾರಿಗಳ ಕಾರ್ಯದಕ್ಷತೆಯನ್ನು ಒರೆಗೆ ಹಚ್ಚುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.

 

ಅದಕ್ಷತೆ ಪತ್ತೆ ಹೇಗೆ?

ಹಣಕಾಸು ನಿರ್ವಹಣೆ, ನೀತಿ-ನಿಯಮಗಳ ಪಾಲನೆ, ತಂತಜ್ಞಾನ ಬಳಕೆ, ಅನುಷ್ಠಾನ ಮತ್ತು ನೀತಿ ನಿರೂಪಣೆಯಲ್ಲಿ ಅಧಿಕಾರಿಯ ಕಾರ್ಯವಿಧಾನ ತಾಳೆ ಹಾಕಿ ನೋಡಲಾಗುತ್ತದೆ. ಜತೆಗೆ ಸಂವಹನ ಕೌಶಲ, ಅಧಿಕಾರಿ ತನ್ನ ತಂಡದ ಸಹೋದ್ಯೋಗಿಗಳಿಗೆ ನೀಡುವ ಸ್ಪೂರ್ತಿ, ದೂರದೃಷ್ಟಿ, ಪರಾನುಭೂತಿ, ವಿನಯ, ಹಣಕಾಸು ವಿಷಯದಲ್ಲಿ ಶುದ್ಧತೆ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗುತ್ತದೆ.

 

ರಾಜ್ಯಗಳಲ್ಲೂ ನಿಷ್ಕ್ರಿಯ ನೌಕರರಿಗೆ ಚಾಟಿ

  • ರಾಜಸ್ಥಾನ-ರಾಜ್ಯದ ಯಾವುದೇ ಇಲಾಖೆಗಳಲ್ಲಿ 15 ವರ್ಷ ಸೇವೆ ಪೂರೈಸಿದ ಅಥವಾ 50 ವರ್ಷ ಮೇಲ್ಪಟ್ಟ ಅದಕ್ಷ ಅಧಿಕಾರಿಗಳು ಹಾಗೂ ನೌಕರರನ್ನು ಗುರುತಿಸಿ ಕೆಲಸದಿಂದ ತೆಗೆದು ಹಾಕುವಂತೆ ರಾಜಸ್ಥಾನ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜಸ್ಥಾನ ನಾಗರಿಕ ಸೇವಾ (ಪಿಂಚಣಿ) ನಿಯಮ 1996,ರ ನಿಯಮ 53 (1)ರ ಪ್ರಕಾರ, 15 ವರ್ಷಗಳ ಸೇವೆ ಪೂರೈಸಿದ ಅಥವಾ 50 ವರ್ಷ ದಾಟಿದ ನೌಕರರು ಅಥವಾ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅಥವಾ ಕೆಲಸ ತೃಪ್ತಿದಾಯಕವಾಗಿಲ್ಲದಿದ್ದಲ್ಲಿ ಅಂಥವರನ್ನು ತೆಗೆದು ಹಾಕುವ ಅಧಿಕಾರ ಸರ್ಕಾರಕ್ಕೆ ಇದೆ.
  •  ಉತ್ತರಪ್ರದೇಶ- ಯೋಗಿ ಆದಿತ್ಯನಾಥ ಸರ್ಕಾರ ಕೂಡ ನಿಷ್ಕ್ರಿಯ ಅಧಿಕಾರಿಗಳ ಮೇಲೆ ಕಣ್ಗಾವಲಿರಿಸಿದೆ. ಕೆಲಸದ ಅವಧಿಯನ್ನು ಕಟ್ಟುನಿಟ್ಟುಗೊಳಿಸಿರುವ ಸರ್ಕಾರ, ತಡವಾಗಿ ಕಚೇರಿಗೆ ಬರುವವರ ವಿರುದ್ಧ ಕ್ರಮದ ಎಚ್ಚರಿಕೆ ರವಾನಿಸಿದೆ. ಹಾಗೆಯೇ ಭ್ರಷ್ಟಾಚಾರದಂತಹ ಗಂಭೀರ ಆರೋಪಗಳಿಗೆ ಗುರಿಯಾಗುವ, ಸಾರ್ವಜನಿಕರ ಜತೆ ಸರಿಯಾಗಿ ವರ್ತಿಸದ ಅಧಿಕಾರಿಗಳ ವಿರುದ್ಧ ವಜಾಸ್ತ್ರ ಪ್ರಯೋಗಿಸುವ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *

Back To Top