Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಅತಿರಥ ಮಹಾರಥರ ಧನ್ಯಮಿಲನ!

Friday, 21.04.2017, 3:04 AM       No Comments

| ಗಣೇಶ್ ಕಾಸರಗೋಡು

1983ರ ಸಮಯ. ಗೋಕಾಕ್ ಚಳವಳಿ ಮುಗಿಲು ಮುಟ್ಟಿದ ದಿನಗಳು. ವರನಟ ಡಾ. ರಾಜ್​ಕುಮಾರ್ ಖ್ಯಾತಿ ಉತ್ತುಂಗಕ್ಕೇರಿತ್ತು. ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮಾಡಿ ಕನ್ನಡ ಭಾಷೆ ಜಾಗೃತಿಯುಂಟು ಮಾಡಿದ ವೀರ ಕನ್ನಡಿಗ ಎನ್ನುವ ಹಿರಿಮೆ. ಇಡೀ ಚಿತ್ರರಂಗವೇ ಕನ್ನಡದ ಈ ಹಿರಿಯಣ್ಣನ ಜತೆ ಗೋಕಾಕ್ ಚಳವಳಿಗಾಗಿ ಹೆಗಲು ಕೊಟ್ಟಿತ್ತು. ಊರಿಂದೂರಿಗೆ ಪ್ರಯಾಣಿಸುತ್ತಿರುವಾಗ ಜನ ಜಾತ್ರೆ. ರಾಜ್​ಕುಮಾರ್ ಎಂದರೆ ಮನೆಮಾತು.

ಇಂಥ ಹೊತ್ತಿನಲ್ಲೇ ಹಿಂದಿ ಚಿತ್ರರಂಗದ ಪ್ರಾತಿನಿಧಿಕ ಪತ್ರಿಕೆಯೆಂಬ ಹೆಗ್ಗಳಿಕೆಗೆ ಪಾತ್ರವಾದ ‘ಟ್ರೇಡ್​ಗೈಡ್’ನಲ್ಲಿ ಸುದ್ದಿಯೊಂದು ಪ್ರಕಟವಾಯಿತು. ‘ರಾಜ್​ಕುಮಾರ್ ಸರ್ವಾಧಿಕಾರಿ’ ಎನ್ನುವ ಟೈಟಲ್​ನಡಿ ‘ಗೋಕಾಕ್ ವರದಿ ಜಾರಿಯ ಹಿನ್ನೆಲೆಯಲ್ಲಿ ನಡೆದ ಚಳವಳಿಯ ನೇತೃತ್ವ ವಹಿಸಿದ್ದ ಡಾ. ರಾಜ್​ಕುಮಾರ್ ಪರಭಾಷಾ ಚಿತ್ರಗಳಿಗೆ ಕಂಟಕಪ್ರಾಯರಾಗಿದ್ದಾರೆ ಮತ್ತು ಅವರು ಸರ್ವಾಧಿಕಾರಿ ಥರ ವರ್ತಿಸುತ್ತಿದ್ದಾರೆ ಎನ್ನುವುದು ಸುದ್ದಿಯ ಸಾರಾಂಶ! ಈ ಸುದ್ದಿಯ ಹಿನ್ನೆಲೆಯಲ್ಲಿ ಬಾಲಿವುಡ್ ಬಾದ್​ಷಾ ಅಮಿತಾಭ್ ಬಚ್ಚನ್ ಇದ್ದಾರೆ ಎನ್ನುವ ಮಟ್ಟಕ್ಕೆ ಜನ ಮಾತಾಡಿಕೊಂಡರು! ಮುಕ್ಕೋಟಿ ಕನ್ನಡಿಗರು ಎದ್ದು ನಿಂತರು. ಅಮಿತಾಭ್ ಪೋಸ್ಟರ್​ಗಳಿಗೆ ಸಗಣಿ ಬಿದ್ದವು, ಸಿನಿಮಾ ಬ್ಯಾನರ್ ಚಿಂದಿಯಾಯಿತು. ಚಿತ್ರ ಮಂದಿರಗಳಲ್ಲಿ ಅಮಿತಾಭ್ ಚಿತ್ರಗಳು ನಡೆಯದಂತೆ ತಡೆಹಿಡಿಯಲಾಯಿತು. ಎಲ್ಲೆಲ್ಲೂ ಅಮಿತಾಭ್ ವಿರುದ್ಧದ ಕೂಗು ಮುಗಿಲು ಮುಟ್ಟಿತು. ಕ್ರಮೇಣ ಇದು ಹಿಂದಿ ಚಿತ್ರಗಳನ್ನು ಬ್ಯಾನ್ ಮಾಡುವ ಮಟ್ಟಕ್ಕೆ ಬಂದು ಮುಟ್ಟಿತು. ಈ ಗಲಾಟೆಯ ಬಿಸಿ ಹಿಂದಿ ಚಿತ್ರರಂಗಕ್ಕೆ ತಟ್ಟತೊಡಗಿತು. ಮುಂಬೈ ಚಿತ್ರೋದ್ಯಮ ಜಾಗೃತವಾಯಿತು. ಮೊದಲ ಹಂತವಾಗಿ ಅವರವರಲ್ಲೇ ಮಾತುಕತೆ ನಡೆಯಿತು. ನಂತರ ಅಮಿತಾಭ್ ಅವರೇ ಈ ಸಮಸ್ಯೆಯನ್ನು ಪರಿಹರಿಸಲು ಮುಂದೆ ಇರಬೇಕು ಎನ್ನುವ ಒಮ್ಮತದ ನಿರ್ಧಾರಕ್ಕೆ ಬಾಲಿವುಡ್ ಬಂದಿತು.

ಆಗ ಎಂಟ್ರಿ ಕೊಟ್ಟವರೇ ರಾಮನಾಥನ್! ಈ ರಾಮನಾಥನ್ ಬೇರೆ ಯಾರೂ ಅಲ್ಲ, ‘ರಾಶಿ’ ಸೋದರರಲ್ಲಿ ಒಬ್ಬರು. ಅರ್ಥಾತ್, ‘ಶರಪಂಜರ’ ಶಿವರಾಮ್ ಅವರ ಸೋದರ! ಆಗ ಹಿಂದಿ ಚಿತ್ರರಂಗದಲ್ಲಿ ಇವರದ್ದು ದೊಡ್ಡ ಹೆಸರು. ನಿರ್ವಪಕರಾಗಿ, ನಿರ್ದೇಶಕರಾಗಿ ‘ಬಾಂಬೆ ಟು ಗೋವಾ’ ಚಿತ್ರದ ಮೂಲಕ ಅಮಿತಾಭ್ ಬಚ್ಚನ್ ಅವರಿಗೆ ತೀರಾ ಹತ್ತಿರದವರಾಗಿ ಬಿಟ್ಟಿದ್ದರು. ರಾಮನಾಥನ್ ಹೆಸರು ಕೇಳಿದರೆ ಸಾಕು ಅಮಿತಾಭ್ ಎದ್ದು ನಿಲ್ಲುತ್ತಿದ್ದ ಕಾಲವದು!

‘ಬಾಂಬೆ ಟು ಗೋವಾ’ ಹಿಂದಿ ಚಿತ್ರ ಸಿಲ್ವರ್ ಜ್ಯೂಬಿಲಿ ಕಂಡಿತ್ತು. ರಾಮನಾಥನ್ ನಿರ್ವಿುಸಿದ ‘ಗಂಗಾ ಜಮುನಾ ಸರಸ್ವತಿ’ ಚಿತ್ರದಲ್ಲಿ ಅಮಿತಾಭ್, ಮೀನಾಕ್ಷಿ ಶೇಷಾದ್ರಿ, ಮಿಥುನ್ ಚಕ್ರವರ್ತಿ, ಜಯಪ್ರದಾ ಮೊದಲಾದ ಅತಿರಥ ಮಹಾರಥರೆಲ್ಲಾ ನಟಿಸಿದ್ದರು. ಇಂಥ ಪ್ರತಿಷ್ಠಿತ ನಿರ್ವಪಕರೊಬ್ಬರು ಕನ್ನಡ ಮತ್ತು ಹಿಂದಿ ಚಿತ್ರರಂಗದ ರಾಯಭಾರಿಯಂತಿದ್ದುದರಿಂದ ಇವರನ್ನೇ ಈ ಭಾಷಾ ಸೂಕ್ಷ್ಮ ವಿಚಾರದ ಗೊಂದಲವನ್ನು ಶಮನಗೊಳಿಸಲು ಉಪಯೋಗಿಸಿಕೊಳ್ಳುವುದೆಂದು ಹಿಂದಿ ಚಿತ್ರರಂಗ ನಿರ್ಧರಿಸಿತು. ಇದು ಅಮಿತಾಭ್ ಅವರಿಗೂ ಒಪ್ಪಿಗೆಯಾಯಿತು. ರಾಮನಾಥನ್, ರಾಜ್ ಕುಟುಂಬವನ್ನು ಸಂರ್ಪಸಿದರು. ನಡೆದಿರುವ ಅನಾಹುತಕ್ಕೆ ವಿಷಾದ ವ್ಯಕ್ತಪಡಿಸಿದರು. ‘ಟ್ರೇಡ್​ಗೈಡ್ ಪತ್ರಿಕೆಗೆ ಅಮಿತಾಭ್ ಅವರಿಗೂ ಪರಸ್ಪರ ಸಂಬಂಧ ಇಲ್ಲವೆಂದು ಒತ್ತಿ ಹೇಳಿದರು. ಕಣ್ತಪ್ಪಿನಿಂದಾದ ಅನಾಹುತಕ್ಕೆ ಕ್ಷಮೆಯಾಚಿಸಿದರು. ಕೊನೆಯಲ್ಲಿ ರಾಜ್​ಕುಮಾರ್ ಅವರನ್ನು ಭೇಟಿ ಮಾಡುವ ಇಂಗಿತವನ್ನು ಅಮಿತಾಭ್ ವ್ಯಕ್ತ ಪಡಿಸಿದ್ದಾರೆ ಎನ್ನುವ ಸೂಕ್ಷ್ಮವನ್ನು ರಾಜ್ ಕುಟುಂಬಕ್ಕೆ ತಿಳಿಸಿದರು.

ರಾಮನಾಥನ್ ಅವರ ರಾಯಭಾರಿ ಕೆಲಸ ಯಶಸ್ವಿಯಾಯಿತು. ಅಮಿತಾಭ್ ಅವರನ್ನು ಭೇಟಿಯಾಗಲು ರಾಜ್ ಕುಟುಂಬ ಒಪ್ಪಿಕೊಂಡಿತು. ಈ ಅಮೋಘ ಭೇಟಿ ನಡೆಯುವುದು ಬೆಂಗಳೂರಿನ ಅರಮನೆಯಲ್ಲಿ ಎಂದು ನಿಗದಿಯಾಯಿತು. ಅಮಿತಾಭ್ ವಿಮಾನದಲ್ಲಿ ಹಾರಿ ಬಂದು ಅರಮನೆ ಸೇರಿಕೊಂಡರು. ಅದೇ ಹೊತ್ತಿಗೆ ಡಾ. ರಾಜ್, ಪಾರ್ವತಮ್ಮ, ರಾಮನಾಥನ್ ಮತ್ತು ಅಮಿತಾಭ್ ಕಟ್ಟಾ ಫ್ಯಾನ್ ಆಗಿದ್ದ ಪುನೀತ್ ಅಲ್ಲಿಗೆ ಬಂದು ಸೇರಿಕೊಂಡರು. ಅದೊಂದು ಧನ್ಯಮಿಲನ ಕಾರ್ಯಕ್ರಮ. ರಾಜ್ ಮತ್ತು ಅಮಿತಾಭ್ ಪರಸ್ಪರ ಕೈ ಕುಲುಕಿ ಹಾರ ಹಾಕಿಕೊಂಡರು. ಸಿಹಿ ಹಂಚಿ ತಿಂದರು. ಹೀಗೆ ಬೆಟ್ಟದಂತೆ ಬಂದ ಸಮಸ್ಯೆ ಮಂಜಿನಂತೆ ಕರಗಿತು.

Leave a Reply

Your email address will not be published. Required fields are marked *

Back To Top