Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಅತಿಮಾನಸ ಪ್ರಜ್ಞೆಯ ಅಧಿಷ್ಠಾತ್ರೀ ಶ್ರೀಮಾತಾ

Sunday, 13.08.2017, 3:00 AM       No Comments

ಪೂರ್ಣಯೋಗದ ಉಪಾಸಕಿಯಾಗಿ ಅರವಿಂದರ ಕಾಣ್ಕೆಯನ್ನು ಸಾಕ್ಷಾತ್ಕರಿಸಿದ ಮಹಾಯೋಗಿನಿ ಶ್ರೀಮಾತಾ ಸ್ವಾತಂತ್ರ್ಯಪೂರ್ವದಲ್ಲಿ ಭಾರತಕ್ಕೆ ಬಂದು, ಭಾರತೀಯತೆಯ ಹಿರಿಮೆಯನ್ನು ಜಗತ್ತಿಗೆ ಎತ್ತಿತೋರಿಸಿದ್ದು ಪವಾಡ ಸದೃಶವೇ ಸರಿ. ಭಾರತೀಯ ತತ್ತ್ವಶಾಸ್ತ್ರಕ್ಕೆ ಅರವಿಂದರು ಸೇರಿಸಿದ ‘ದಿವ್ಯಜೀವನ‘ದ ಹೊಸ ಅಧ್ಯಾಯವೊಂದು ಸಾಕ್ಷಾತ್ಕಾರವಾಗಿ ಪೂರ್ಣಗೊಂಡದ್ದು ಶ್ರೀಮಾತಾ ಅವರಲ್ಲಿ.

ಭಾರತದ ಅಧ್ಯಾತ್ಮಲೋಕಕ್ಕೆ ಪ್ರವೇಶಿಸಿದ ಪಾಶ್ಚಾತ್ಯ ಸಾಧಕಿಯರಲ್ಲಿ ಶ್ರೀಮಾತಾ ಒಬ್ಬರು. ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾ ನಮಗೆ ಹೆದ್ದಟ್ಟಾಗಿ ಕಾಣುತ್ತಾರೆ. ಶ್ರೀಲ ಪ್ರಭುಪಾದರ ಹರೇಕೃಷ್ಣ ಪಂಥಕ್ಕೆ ಪಶ್ಚಿಮದಿಂದ ಬಂದಂಥ ಸಾಧಕಿಯರನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿಯರನ್ನು ನಾವು ಗಮನಿಸಬೇಕು. ನಮ್ಮ ದೇಶದ ಬ್ರಹ್ಮವಾದಿನಿಯರ ಸಾಲಿಗೆ ಸೇರಬಹುದಾದವರು ಸೋದರಿ ನಿವೇದಿತಾ ಮತ್ತು ಶ್ರೀಮಾತಾ. ಭಾರತದಾದ್ಯಂತ ಸುತ್ತಿ ಜನಜಾಗೃತಿ ಮೂಡಿಸಿದ ಕೀರ್ತಿ ನಿವೇದಿತಾಗೆ ಸೇರಿದರೆ, ಪೂರ್ಣಯೋಗದ ಉಪಾಸಕಿಯಾಗಿ ಅರವಿಂದ ಮಹರ್ಷಿಗಳ ಕಾಣ್ಕೆಯನ್ನು ಸಾಕ್ಷಾತ್ಕರಿಸಿದ ಹೆಗ್ಗಳಿಕೆ ಮಹಾಯೋಗಿನಿ ಶ್ರೀಮಾತಾ ಅವರದ್ದು. ಇವರು ಸ್ವಾತಂತ್ರ್ಯಪೂರ್ವದಲ್ಲಿ ಭಾರತಕ್ಕೆ ಬಂದು, ಭಾರತೀಯತೆಯ ಮಂತ್ರಸಂಸ್ಪರ್ಶವನ್ನು ತಮ್ಮದಾಗಿಸಿಕೊಂಡು, ಅದರ ಹಿರಿಮೆಯನ್ನು ಜಗತ್ತಿಗೆ ಎತ್ತಿತೋರಿಸಿದ್ದು ಪವಾಡ ಸದೃಶವಾದುದೇ. ಭಾರತೀಯ ತತ್ತ್ವಶಾಸ್ತ್ರಕ್ಕೆ ‘ದಿವ್ಯಜೀವನ’ದ ಹೊಸ ಅಧ್ಯಾಯವೊಂದನ್ನು ಮಹರ್ಷಿ ಅರವಿಂದರು ಸೇರಿಸಿದರು. ಅದು ಸಾಕ್ಷಾತ್ಕಾರವಾಗಿ ಪೂರ್ಣಗೊಂಡದ್ದು ಶ್ರೀಮಾತಾ ಅವರಲ್ಲಿ. ಭಾರತೀಯ ಅಧ್ಯಾತ್ಮ ಮನಸ್ಸುಗಳನ್ನು ತಮ್ಮತ್ತ ಸೆಳೆದ ‘ಶ್ರೀಮಾತಾ’ ಅರೋವಿಲ್​ನ ದಾರ್ಶನಿಕ ಪ್ರತಿಭೆ.

ಜನನ-ಅಂತರ್ಮನನ: ಪ್ಯಾರಿಸ್​ನ ಆಗರ್ಭ ಶ್ರೀಮಂತ ಮನೆತನದಲ್ಲಿ 1878 ಫೆಬ್ರವರಿ 21ರಂದು ಒಂದು ಹೆಣ್ಣುಮಗು ಹುಟ್ಟಿತು. ಪಾಶ್ಚಾತ್ಯ ರೀತಿರಿವಾಜಿನಂತೆ ಅದಕ್ಕೆ ಎಂದು ಮೀರಾ ಹೆಸರಿಟ್ಟರು. ತಂದೆ ಮಾರಿಸ್ ಅಲ್ಪಾಸ್, ತಾಯಿ ಮಾತಿಲ್ದೆ ಅಲ್ಪಾಸ್. ಮೊದಲು ಈಜಿಪ್ಟ್​ನಲ್ಲಿ ವಾಸಿಸುತ್ತಿದ್ದ ಈ ದಂಪತಿ ನಂತರ ಪ್ಯಾರಿಸ್​ಗೆ ಬಂದು ನೆಲೆಸಿದರು. ಶಾಲೆಗೆ ಹೋಗುತ್ತಿದ್ದರೂ ಸ್ವಾವದಲ್ಲಿ ಉಳಿದವರಿಗಿಂತ ಭಿನ್ನಳಾಗಿದ್ದ ಐದುವರ್ಷದ ಮೀರಾ, ಆ ವಯಸ್ಸಿಗೇ ತನ್ನಷ್ಟಕ್ಕೆ ತಾನೇ ಚಿಂತಿಸುತ್ತ ಕೂರುತ್ತಿದ್ದಳು. ಒಮ್ಮೆ ತಾಯಿ ‘ಲೋಕದ ಹೊರೆ ಹೊತ್ತಂತೆ ಕುಳಿತುಕೊಂಡಿದ್ದೀಯಾ ಯಾಕೆ?’ ಎಂದು ಪ್ರಶ್ನಿಸಿದಾಗ ‘ಹೌದು, ಲೋಕದ ಹೊರೆಯನ್ನು ಹೊತ್ತಿದ್ದೇನೆ’ ಎಂದು ಪ್ರತ್ಯುತ್ತರಿಸಿದಳಂತೆ. ಸದಾ ಏಕಾಂತ ಬಯಸುತ್ತಿದ್ದ ಆಕೆ ನೀತಿಕತೆಗಳನ್ನು ಹೇಳುವುದರ ಜತೆಗೆ ಆಧ್ಯಾತ್ಮಿಕ ವಿಚಾರಗಳನ್ನು ರ್ಚಚಿಸುತ್ತಿದ್ದುದೂ ಉಂಟು. ಮೀರಾಳ ವ್ಯಕ್ತಿತ್ವ ರೂಪಿಸುವಲ್ಲಿ ಆಕೆಯ ತಾಯಿ, ಅಜ್ಜಿಯ ಪಾತ್ರ ಪ್ರಮುಖವಾಗಿತ್ತು. ಅಜ್ಜಿ ಉದಾರಿಯಾದರೆ, ತಾಯಿ ವಿಚಾರವಾದಿ ಹಾಗೂ ತೀಕ್ಷ್ಣಮತಿ. ಇವರು ಯಾವುದೇ ಜಾತಿ, ಮತ, ಪಂಥಗಳಿಗೆ ಕಟ್ಟುಬೀಳದೆ ಸಂಪೂರ್ಣ ಸ್ವತಂತ್ರ ಮನೋಧರ್ಮವನ್ನು ಹೊಂದಿದ್ದರು. ತಂದೆ ಶಕ್ತಿಶಾಲಿ, ಬುದ್ಧಿವಂತ, ಜತೆಗೆ ಸೌಂದರ್ಯೋಪಾಸಕ. ಆಗ 7 ವರ್ಷದವಳಾಗಿದ್ದ ಮೀರಾಳಲ್ಲಿ ಅನನ್ಯ ಶಕ್ತಿಯೊಂದು ತಾನೇತಾನಾಗಿ ಬೆಳೆಯುತ್ತಿತ್ತು. ಶಾಲೆಯಲ್ಲಿ ಗಣಿತ, ಚರಿತ್ರೆಗಳನ್ನು ಹೇಳಿದಾಕ್ಷಣ ಗ್ರಹಿಸುತ್ತಿದ್ದಳು. ಧ್ಯಾನ ಮತ್ತು ಪ್ರಾರ್ಥನೆಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಮೌನವು ಬುದ್ಧಿಶಕ್ತಿ ಹಾಗೂ ದೈಹಿಕಶಕ್ತಿಯನ್ನು ಹೆಚ್ಚಿಸುತ್ತದೆಂಬ ಅರಿವನ್ನು ಸ್ವಾಭಾವಿಕವಾಗಿಯೇ ಗ್ರಹಿಸಿದ್ದಳು. ಪ್ರಾಯಕ್ಕೆ ಬಂದಾಗಲೂ ‘ಜೀವನದಲ್ಲಿ ದೈವದೊಡನೆ ಒಂದಾಗುವುದೇ ಜೀವಿತದ ಪರಮ ಗುರಿ’ ಎಂಬ ಪ್ರಜ್ಞೆ ಆಕೆಯಲ್ಲಿ ಹೇಗೋ ಹರಿದುಕೊಂಡು ಬರುತ್ತಿತ್ತು.

ಆಗ ಪ್ಯಾರಿಸ್​ನಲ್ಲಿ ವಿವಿಧ ಸಾಧಕಿಯರು ಸೇರಿಕೊಂಡು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು. ಆ ಚರ್ಚಾಕೂಟದ ಕೇಂದ್ರಬಿಂದು ಮೀರಾಳೇ ಆಗಿದ್ದು ಅಚ್ಚರಿಯ ವಿಷಯವೇನಲ್ಲ! ಆಧ್ಯಾತ್ಮಿಕ ಲೋಕದಲ್ಲಿ ಬಹಳಷ್ಟು ದೂರ ಕ್ರಮಿಸಿಯೂ ಆಗಿದ್ದ ಆಕೆಗೆ ಸಹಜವಾಗಿ ಅಲೌಕಿಕಸಿದ್ಧಿ, ದರ್ಶನ, ಸಾಕ್ಷಾತ್ಕಾರಗಳು ಆಗತೊಡಗಿದ್ದುವು. ಆಗ ಮೀರಾ 13ರ ಪ್ರಾಯದ ಹುಡುಗಿಯಾಗಿದ್ದರೂ, ಮನಸ್ಸು ಅತೀಂದ್ರಿಯವಾದುದನ್ನು ಬಯಸುತ್ತಿತ್ತು. ಆಕೆಯ ಕನಸಿನಲ್ಲಿ ‘ಕೃಷ್ಣ’ ಕಾಣುತ್ತಿದ್ದನಂತೆ! ಭಾರತೀಯತೆಯ ಪರಿಚಯವೂ ಇಲ್ಲದ ಮೀರಾಳಿಗೆ ಮುಂದೆ ಅರವಿಂದರ ಮೂಲಕ ‘ಕೃಷ್ಣದರ್ಶನ’ ಆದದ್ದು ಯೋಗಾಯೋಗವೇ ಸರಿ! ಆಕೆ ಯೌಗಿಕ ದಿವ್ಯಪ್ರಭೆಯಲ್ಲಿ ಸದಾ ತೇಲುತ್ತಿದ್ದಳು.

ಮೀರಾಳಿಗೆ ಆಗ 20ರ ಪ್ರಾಯ. ಸ್ವಾಮಿ ವಿವೇಕಾನಂದರು ವಿದೇಶದಲ್ಲಿದ್ದರು. ‘ರಾಜಯೋಗ’ ಕುರಿತಾದ ಅವರ ಭಾಷಣಗಳ ಪುಸ್ತಕವೊಂದು ಮೀರಾಳಿಗೆ ಸಿಕ್ಕಿತು. 1895ರಲ್ಲಿ ಪ್ರಕಟಗೊಂಡಿದ್ದ ಈ ಕೃತಿಯನ್ನು ಓದುತ್ತ, ತನ್ನ ಅನುಭವಗಳನ್ನೇ ವಿವೇಕಾನಂದರು ಬರೆದಿದ್ದಾರೆಂದು ಆಕೆಗೆ ಅನಿಸಿತು. ಹೀಗೆ, ಮೀರಾ ರಾಜಯೋಗದ ದಾರಿಯಲ್ಲಿ ನಡೆಯುತ್ತಿರುವಾಗ 1897ರಲ್ಲಿ ಹೆನ್ರಿ ಮಾರಿಪೆಟ್ ಎಂಬ ಯುವಕನ ಪರಿಚಯವಾಗಿ ಮದುವೆಯಾಯಿತು. ಇವರಿಬ್ಬರನ್ನು ಹತ್ತಿರವಾಗಿಸಿದ್ದು ಚಿತ್ರಕಲೆ. ಆದರೆ, ಇವರ ವೈವಾಹಿಕ ಬದುಕು 1908ರ ಹೊತ್ತಿಗೆ ವಿಚ್ಛೇದನದಲ್ಲಿ ಕೊನೆಗೊಂಡಿತು. 11 ವರ್ಷಗಳ ದಾಂಪತ್ಯದ ಫಲ ಆಂಡ್ರೆ ಎಂಬ ಗಂಡುಮಗು ಜನಿಸಿತು. ಚಿತ್ರಕಲೆಯಲ್ಲಿ ಪರಿಪೂರ್ಣತೆ ಸಿಗದೆ ಹೋದುದರಿಂದ ಧ್ಯಾನದ ಕಡೆ ಆಕೆ ಹೆಚ್ಚಿನ ಆಸಕ್ತಿ ವಹಿಸಿದಳು. ಅಣ್ಣ ಮ್ಯಾಟ್ರಿಯೋ ಸೂಚನೆಯಂತೆ ಶಕ್ತಿಸಾಧನೆಯ ಮೂಲಕ ಹೆಚ್ಚಿನ ಸಿದ್ಧಿ ಪಡೆಯಲು ಹಂಬಲಿಸಿದಳು. ಮ್ಯಾಕ್​ಸತೆ ಆನ್ ಎಂಬ ಗುಹ್ಯವಿದ್ಯಾಪ್ರವೀಣ ಬರೆದಂಥ ‘ಟ್ರಡಿಶನ್ ಕಾಸ್ಮಿಕ್’ ಎಂಬ ಬರಹವನ್ನು ಓದಿದಳು. ಇದನ್ನು ಓದುತ್ತ ಹೋದಂತೆ ತನಗೆ ಇದುವರೆಗೆ ಆಗಿರುವ ಅನುಭವಗಳ ಬರಹರೂಪವೇ ಇದು ಎನಿಸತೊಡಗಿತು. ಆನ್ ಎಲ್ಲಿದ್ದಾನೆ? ಆತನ ವಯಸ್ಸೆಷ್ಟು? ಈ ಆಲೋಚನೆಗಳು ಮೀರಾಳಲ್ಲಿ ಮೂಡಿದ ಸಮಯದಲ್ಲೇ ಆನ್ ಪ್ಯಾರಿಸ್​ಗೆ ಬಂದ ಸುದ್ದಿ ತಿಳಿಯಿತು. ಆತನನ್ನು ಕಂಡೊಡನೆ ಚಿಕ್ಕಂದಿನಲ್ಲಿ ನೋಡಿದ ಭಾವಚಿತ್ರವೊಂದರ ನೆನಪಾಯಿತು. ಇಬ್ಬರೂ ಪರಿಚಯ ಮಾಡಿಕೊಂಡರು. ಮೀರಾಳನ್ನು ನೋಡಿದಾಕ್ಷಣ ಈಕೆ ಅಸಾಧಾರಣ ಶಕ್ತಿ ಪಡೆದವಳೆಂದು ಆನ್​ಗೆ ತಿಳಿಯಿತು! 1905ರಿಂದ 1907ರವರೆಗೆ 2 ವರ್ಷಗಳ ಕಾಲ ಆನ್ ಇದ್ದ ಟೆಲ್ಮಸನ್​ಗೆ ಮೀರಾ ಹೋದಳು. ಆನ್ ಹೆಂಡತಿಯೂ ಅತೀಂದ್ರಿಯ ಜ್ಞಾನಸಾಧನೆ ಮಾಡಿದ್ದವಳೇ. ಗಂಡನ ಗುಹ್ಯವಿದ್ಯೆಗೆ ಆಕೆ ನೆರವಾಗುತ್ತಿದ್ದಳು. ಇವರಿಬ್ಬರೂ ಮನಸ್ಸಿನಲ್ಲಿ ಇಚ್ಛಿಸಿ ಕಣ್ಣಿನಿಂದ ಸನ್ನೆ ಮಾಡಿದರೆ ಎಲ್ಲ ಕೆಲಸಗಳೂ ಆಗುತ್ತಿದ್ದುವು. ಒಂದು ರಾತ್ರಿ ಮಹಡಿಯ ಮೇಲೆ ಮಳೆಯ ಕೋಲ್ಮಿಂಚು ಬರುತ್ತಿರುವಾಗ ತಮ್ಮ ಕಣ್ಣಿನ ಶಕ್ತಿಯಿಂದ ಬೇರೆಡೆ ಹೋಗುವಂತೆ ಮಾಡಿದ್ದರು. ಇಂಥ ಅನೇಕ ಸಿದ್ಧಿಯನ್ನು ಆನ್ ದಂಪತಿಯಿಂದ ಮೀರಾ ಕಲಿತಳು.

ಪ್ಯಾರಿಸ್​ಗೆ ವಾಪಸಾದ ಮೇಲೆ, ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಿ ಸಾಧಕನಾಗಬಹುದು ಎಂಬ ಆತ್ಮಪ್ರತ್ಯಯ ಆಕೆಯಲ್ಲಿ ತುಂಬಿಕೊಂಡಿತು. ಮನುಷ್ಯನ ಜಡದೇಹದಲ್ಲಿ ಅಲೌಕಿಕ ಶಕ್ತಿಗಳು ಸುಪ್ತವಾಗಿ ಕುಳಿತಿರುತ್ತವೆ. ಆದರೆ, ಅವುಗಳನ್ನು ಬಡಿದೆಬ್ಬಿಸಿ ಕೈವಶ ಮಾಡಿಕೊಂಡು ಲೋಕೋದ್ಧಾರಕ್ಕೆ ಬಳಸಿಕೊಳ್ಳಬಹುದೆಂಬ ಸತ್ಯ ಮೀರಾಳಿಗೆ ಸ್ಪಷ್ಟವಾಯಿತು. ಮೀರಾ ತಾನು ಕಲಿತಂಥ ಗುಹ್ಯವಿದ್ಯೆಯಿಂದ ಬಿರುಗಾಳಿಯನ್ನು ತಡೆಗಟ್ಟುತ್ತಿದ್ದಳು, ವಿಷಜಂತುಗಳನ್ನು ದೃಷ್ಟಿಮಾತ್ರದಿಂದ ಪಳಗಿಸುತ್ತಿದ್ದಳು. ಊಟ ಮಾಡದೆಯೆ ಆಹಾರದಲ್ಲಿರುವ ಶಕ್ತಿಗಳನ್ನು ಶರೀರಕ್ಕೆ ಆಹ್ವಾನಿಸಿಕೊಳ್ಳುತ್ತಿದ್ದಳು. ಇದು ಆತ್ಮತತ್ತ್ವದ ಸಾಕ್ಷಾತ್ಕಾರಕ್ಕೆ ದಾರಿಯಾಗಬೇಕೆಂಬ ಹಂಬಲವೂ ಆಕೆಯಲ್ಲಿ ಬೆಳೆಯುತ್ತ ಹೋಯಿತು. ಜನರಲ್ಲಿ ಜಾಗೃತಿ ಮೂಡಿಸಲು ಪ್ಯಾರಿಸ್​ನಲ್ಲಿ ‘ಭಾವನಾಕೂಟ’ವೊಂದನ್ನು ಸ್ಥಾಪಿಸಿದಳು. ಅಲ್ಲಿ ಪ್ರತಿವಾರವೂ ಅಧ್ಯಾತ್ಮ ಸಂಬಂಧಿ ಚಟುವಟಿಕೆಗಳು ನಡೆಯಲಾರಂಭಗೊಂಡವು. ದೇಹಕ್ಕಂಟಿದ ಜಡವನ್ನು ಪರಿವರ್ತಿಸಿ, ಚೈತನ್ಯ ತುಂಬುವುದೇ ತನ್ನ ಜೀವನದ ಮುಖ್ಯಗುರಿ ಎಂದು ನಿರ್ಧರಿಸಿದಳು. ಇದೇ ವೇಳೆ ಪಾಲ್​ರಿಚರ್ಡ್ ಎಂಬ ಫ್ರೆಂಚ್ ತತ್ತ್ವಜ್ಞಾನಿಯ ಪರಿಚಯವಾಯಿತು. ಇವರಿಬ್ಬರ ವಿಚಾರಧಾರೆಯಲ್ಲಿ ಸಮಾನಾಂಶಗಳಿದ್ದವು. ಇಬ್ಬರೂ ಸರಳ ವಿವಾಹವಾದರು. ನಂತರ ಮೀರಾ-ರಿಚರ್ಡ್ ಜತೆಗೂಡಿ ಎಲ್ಲ ಧರ್ಮಗ್ರಂಥಗಳ ಆಳ ಅಧ್ಯಯನದಲ್ಲಿ ತೊಡಗಿದರು. ಆಗ ಪಾಂಡಿಚೆರಿಯು ಫ್ರೆಂಚ್ ವಸಾಹತು ಆಗಿತ್ತು. ಅಲ್ಲಿಗೆ ಕಾರ್ಯಾರ್ಥವಾಗಿ ಬಂದ ರಿಚರ್ಡ್ ತಮಗೆ ಸಮಸ್ಯೆಯಾಗಿ ಕಾಡಿದ್ದ ‘ಯೋಗಚಕ್ರ’ ಡೇವಿಡ್ ನಕ್ಷತ್ರ ಅಥವಾ ಸಾಲೊಮನ್ ಮುದ್ರೆಯ ರಹಸ್ಯ ಹೇಳಬಲ್ಲವರನ್ನು ಹುಡುಕುತ್ತಿದ್ದರು.

ಆಗ ಪಾಂಡಿಚೆರಿ ಸಾಮಾನ್ಯ ಪ್ರದೇಶ. ಶ್ರೀ ಅರವಿಂದರು ಶಂಕರ ಶೆಟ್ಟಿ ಎಂಬುವರ ಮನೆಯಲ್ಲಿದ್ದು ಸಾಧನೆ ಮಾಡುತ್ತಿದ್ದರು. ರಿಚರ್ಡ್​ಗೆ ಅರವಿಂದರ ಪರಿಚಯ ಹೇಗೋ ಒದಗಿತು. ಅರವಿಂದರ ಬಳಿ ಡೇವಿಡ್ ನಕ್ಷತ್ರದ ಬಗ್ಗೆ ಕೇಳಿದಾಗ ಅರವಿಂದರು ಅರೆಕ್ಷಣ ಕಣ್ಣುಮುಚ್ಚಿ ಅದರ ಸಂಕೇತ-ಅರ್ಥಗಳನ್ನು ವಿವರಿಸಿದರು. ಅರವಿಂದರ ಘನವಾದ ತೇಜಸ್ಸಿಗೆ ರಿಚರ್ಡ್ ಸಂಪೂರ್ಣ ಮರುಳಾದರು.

ದಿವ್ಯಯೋಗ: ಪ್ಯಾರಿಸ್​ಗೆ ಮರಳಿದ ಮೇಲೆ, ಅರವಿಂದರನ್ನು ಮತ್ತೊಮ್ಮೆ ಕಾಣಬೇಕೆಂಬ ಹಂಬಲ ರಿಚರ್ಡ್​ರಲ್ಲಿ ಉಂಟಾಯಿತು. 1914ರಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಪಾಂಡಿಚೆರಿಗೆ ಬರುವ ಅವಕಾಶವಾಯಿತು. ರಿಚರ್ಡ್ ಜತೆ ಮೀರಾ ಕೂಡಾ ಇದ್ದರು. ಭಾರತ ತನ್ನ ಜನ್ಮಭೂಮಿ ಎಂಬ ಭಾವವನ್ನು ಮೀರಾ ತಳೆದಿದ್ದರು. ಪಾಂಡಿಚೆರಿಯ ಕಡೆಗೆ ಪ್ರಯಾಣಿಸುತ್ತಿರುವಾಗಲೇ ಆಕೆಯಲ್ಲಿ ಅತೀಂದ್ರಿಯ ಅನುಭವಗಳಾದವು. ಇತ್ತ ಅರವಿಂದರೂ ‘ದೈವೀಶಕ್ತಿಯ ಅವತಾರ’ಗಳ ಬರುವಿಕೆಗಾಗಿ ಕಾಯುತ್ತಿದ್ದರು. ಅರವಿಂದರು ಸಾಮಾನ್ಯವಾದ ಮಹಡಿಮನೆಯ ಮೇಲೆ ವಾಸಿಸುತ್ತಿದ್ದರು. ಮೀರಾ ಪತಿಯೊಡನೆ 1914 ಮಾರ್ಚ್ 29ರಂದು ಪಾಂಡಿಚೆರಿಗೆ ತಲುಪಿದಾಕ್ಷಣ ಅರವಿಂದರನ್ನು ಕಾಣಲು ಅತಿಥಿಗೃಹದ ಕಡೆಗೆ ನಡೆದರು. ದಿವ್ಯಶಕ್ತಿಯ ಸಾಕಾರಮೂರ್ತಿಯಂತಿದ್ದ ಅವರನ್ನು ಕಂಡೊಡನೆ ಮೂಕವಿಸ್ಮಿತರಾಗಿ ದೀರ್ಘದಂಡ ನಮಸ್ಕಾರ ಮಾಡಿದರು. ಮೀರಾ ಅರವಿಂದರ ಪಾದಗಳ ಬಳಿ ಕುಳಿತುಬಿಟ್ಟರು. ಆಕೆಗೆ ಅನಂತಶಕ್ತಿಗಳು ಮೇಲಿನಿಂದ ಇಳಿದುಬಂದು ನೆಲೆಸಿದಂತೆ ಭಾಸವಾಯಿತು. ಅರವಿಂದರ ದಿವ್ಯದರ್ಶನದಿಂದ ಹೊಸದೊಂದು ದೈವೀಪ್ರೇರಣೆ ಆಯಿತು. ‘ಶ್ರೀಮಾತಾರವಿಂದ ಸಂದರ್ಶನ’ ಕೇವಲ ಆಕಸ್ಮಿಕವಾಗಿರಲಿಲ್ಲ. ಇವೆರಡೂ ಶಕ್ತಿಗಳಿಗೆ ಮನುಕುಲ-ವಿರೋಧಿ ಶಕ್ತಿಗಳನ್ನು ನಾಶಗೊಳಿಸಿ, ದೈವೀಶಕ್ತಿಯನ್ನು ಪ್ರತಿಷ್ಠಾಪನೆಗೊಳಿಸುವ ಪರಮೋದ್ದೇಶವಿತ್ತು. ಅರವಿಂದರು ಇವೆಲ್ಲವೂ ಯೋಗವೆಂದೇ ಭಾವಿಸಿದ್ದರು. ಇದು ಅವರ ಪ್ರಮುಖ ಉಪದೇಶವೂ ಆಗಿತ್ತು.

ಅರವಿಂದರ ಅಧ್ಯಾತ್ಮಯೋಗದ ಯಾತ್ರೆಯಲ್ಲಿ ಮೀರಾ ಸಂಪೂರ್ಣ ಮಗ್ನರಾದರು. ಆವರೆಗೂ ಕಲಿತ ವಿದ್ಯೆಗಳನ್ನೆಲ್ಲಾ ಬದಿಗಿಟ್ಟು ಅರವಿಂದರಲ್ಲಿ ಆತ್ಮಸಮರ್ಪಣೆ ಮಾಡಿಕೊಂಡರು, ಅವರಿಂದ ‘ಆತ್ಮವಿದ್ಯೆ’ಯ ಸಾಧನಾಕ್ರಮವನ್ನು ಕಲಿಯತೊಡಗಿದರು. ಬಂಗಾಲಿ, ಸಂಸ್ಕೃತ ಭಾಷೆಗಳನ್ನು ಕಲಿತರು. ಮೀರಾ-ಅರವಿಂದರ ದೃಷ್ಟಿಕೋನ, ಗುರಿ ಒಂದೇ ಆಗಿತ್ತು. ‘ಭೂಮಿಯ ಮೇಲೆ ಸ್ವರ್ಗವನ್ನು ಸ್ಥಾಪಿಸುವ’ ಕೈಂಕರ್ಯಕ್ಕೆ ಬೇಕಾದ ಸಮಗ್ರಸೂತ್ರಗಳನ್ನು ಕಂಡುಕೊಂಡಿದ್ದರು. ಇದನ್ನು ಕಾರ್ಯರೂಪಕ್ಕೆ ತರಲು ‘ನ್ಯೂಐಡಿಯಾ’ ಎಂಬ ಸಂಘವನ್ನು ರಿಚರ್ಡ್-ಮೀರಾ ದಂಪತಿ ಅಸ್ತಿತ್ವಕ್ಕೆ ತಂದರು. ಇಲ್ಲಿಗೆ ವಿಶ್ವದ ಎಲ್ಲ ಜನರು ಬಂದು ಸಾಧಕರಾಗಬೇಕೆಂಬುದು ಅವರ ಹಂಬಲವಾಗಿತ್ತು. ‘ಆರ್ಯ’ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಪ್ರಾರಂಭಿಸಿದರು. ವೇದ, ಉಪನಿಷತ್, ವಿವಿಧ ಯೋಗಪದ್ಧತಿಗಳ ಕುರಿತು ಅರವಿಂದರು ಬರೆದ ಲೇಖನಗಳು ಅದರಲ್ಲಿ ಪ್ರಕಟವಾಗತೊಡಗಿದುವು. ಆಗಸ್ಟ್ 15 ಅರವಿಂದರ ಜನ್ಮದಿನ. 1914ರ ಆ ದಿನದಂದು ಮೊದಲ ಸಂಚಿಕೆ ಹೊರಬಂದಿತು. ಇದು 6 ವರ್ಷ ನಿಯತವಾಗಿ ಪ್ರಕಟವಾಯಿತು. ಅರವಿಂದರ ‘ದಿವ್ಯಜೀವನ’ (ದಿ ಲೈಫ್ ಡಿವೈನ್), ‘ಯೋಗಸಮನ್ವಯ’ (ಸಿಂಥಸಿಸ್ ಆಫ್ ಯೋಗ) ಮುಂತಾದ ಕೃತಿಗಳು ಇದರಲ್ಲಿ ಬರಹರೂಪ ತಾಳಿದವು. ಸ್ವರ್ಗವನ್ನು ಭೂಮಿಯ ಮೇಲೆ ಇಳಿಸುವ ಶ್ರೀಮಾತಾರವಿಂದರ ಕನಸಿನ ಸಾಕ್ಷಾತ್ಕಾರಕ್ಕೆ ‘ನವಭಾವನಾ ಸಂಘ’ ಮತ್ತು ‘ಆರ್ಯ’ ಪತ್ರಿಕೆಗಳು ಪ್ರಾರಂಭಿಕ ಹೆಜ್ಜೆಗಳಾದವು. ಹಲವು ಕಾರಣಗಳಿಂದ ರಿಚರ್ಡ್ ದಂಪತಿ ಫ್ರಾನ್ಸಿಗೆ ಹಿಂದಿರುಗಬೇಕಾಯಿತು. 1915ರ ಫೆಬ್ರವರಿ 22ರಂದು ಅರವಿಂದರಿಗೆ ಪತ್ರಿಕೆಯ ಜವಾಬ್ದಾರಿ ವಹಿಸಿ ದಂಪತಿ ಹೊರಟರು. ಆದರೆ, ಶ್ರೀಮಾತಾರವಿಂದರು ನಡುವೆ ಪತ್ರವ್ಯವಹಾರ ನಿರಂತರವಾಗಿತ್ತು.

ಜಪಾನಿಗೆ ಹೋಗಿ ‘ಝೆನ್ ಬೌದ್ಧಧರ್ಮ’ದ ಬಗ್ಗೆ ಆಳ ಅಧ್ಯಯನ ಮಾಡಿ ನೂತನ ಅನುಭವ ಪಡೆದ ಮೀರಾ ಅಲ್ಲಿ 4 ವರ್ಷ ಇದ್ದರು. 1920ರ ಏಪ್ರಿಲ್ 24ರಂದು ರಿಚರ್ಡ್ ದಂಪತಿ ಭಾರತಕ್ಕೆ ಮರಳಿದರು. ಮೀರಾ ಅರವಿಂದರನ್ನು ಶ್ರೀಗುರುವೆಂದು ಭಾವಿಸಿದರು. ಮೀರಾ ಅರವಿಂದರಿಗೆ ಸಂಪೂರ್ಣ ಶರಣಾಗಿದ್ದು ಅಲ್ಲಿಯ ಸಾಧಕರಿಗೆಲ್ಲ ತಿಳಿಯತೊಡಗಿತು. ಕಾಲಕ್ರಮೇಣ ‘ಶ್ರೀಅರವಿಂದಾಶ್ರಮ’ ರೂಪುಗೊಳ್ಳತೊಡಗಿತು. ಮೀರಾ ಪಾಂಡಿಚೆರಿಗೆ ಬಂದ ಮೇಲೆ ಹತ್ತುವರ್ಷದಲ್ಲಿ ಮಾಡಬಹುದಾದ ಕೆಲಸಗಳನ್ನು ಒಂದೇ ವರ್ಷದಲ್ಲಿ ಕಾರ್ಯರೂಪಕ್ಕೆ ತಂದರು. ಅವರ ಕಾರ್ಯಗಳನ್ನು ಮೆಲುಕುಹಾಕುತ್ತಿರುವಾಗಲೇ ಸಾಕ್ಷಾತ್ ಜಗನ್ಮಾತೆಯೇ ಮೀರಾ ರೂಪದಲ್ಲಿ ಭೂಮಿಗೆ ಬಂದಿರುವುದೆಂಬ ‘ಅಭಯವಾಣಿ’ಯಾಯಿತು. ಅಂದಿನಿಂದ ಅರವಿಂದರು ಮೀರಾರನ್ನು ‘ಮಾತೆ’ (Mಟಠಿಜಛ್ಟಿ) ಎಂಬ ಅಭಿದಾನದಿಂದ ಕರೆಯತೊಡಗಿದರು. ಶ್ರೀಮಾತಾ ಅಂದಿನಿಂದ ಎಲ್ಲ ಸಾಧಕರ ಕರೆಗೆ ಓಗೊಡುತ್ತ ಸಮಸ್ಯೆಗಳನ್ನು ಪರಿಹರಿಸತೊಡಗಿದರು. 1922ರಿಂದ ಆಶ್ರಮದ ಸಮಸ್ತ ಜವಾಬ್ದಾರಿಯನ್ನು ಅರವಿಂದರು ಶ್ರೀಮಾತೆಗೆ ವಹಿಸಿಕೊಟ್ಟರು. ಅವರು ಅನೇಕ ಬದಲಾವಣೆಗಳನ್ನು ತಂದರು. 1926ರ ಸಂಜೆ 6 ಘಂಟೆಗೆ ಅದ್ಭುತ ಘಟನೆಯೊಂದು ನಡೆಯಿತು. ಅದು ಮೊದಲು ಶ್ರೀಮಾತೆಯವರ ಅನುಭವಕ್ಕೆ ಬಂದಿತು. ಅವರು ಸಾಧಕರನ್ನೆಲ್ಲಾ ಕರೆದು ಧ್ಯಾನಕ್ಕೆ ಕೂರುವಂತೆ ಸೂಚಿಸಿದರು. ಅಲ್ಲಿ ಗಾಢಮೌನವಿತ್ತು. ಅವರ್ಣನೀಯವಾದ ಜ್ಯೋತಿರ್ಧಾರೆ ಸುರಿಯತೊಡಗಿದ ಅನುಭವ ಕೆಲವರಿಗಾಯಿತು. ಅರ್ಧ ತೆರೆದ ಬಾಗಿಲ ಸಂದಿನಿಂದ ಅರವಿಂದ-ಮಾತಾಜಿ ಸಾಧಕರೆಲ್ಲರಿಗೆ ಕಂಡರು. ಮಾತಾಜಿ ಮೊದಲು ಹೊರಬಂದರು, ಅರವಿಂದರು ಅವರನ್ನು ಹಿಂಬಾಲಿಸಿದರು. ಅರವಿಂದರು ಸಣ್ಣಪೀಠದ ಮೇಲೆ ಕುಳಿತರು. ಸ್ವಲ್ಪ ಹೊತ್ತು ಧ್ಯಾನ ಜರುಗಿತು. ಒಬ್ಬೊಬ್ಬರೂ ಬಂದು ಮಾತಾಜಿಗೆ ನಮಸ್ಕರಿಸಿದರು. ಅರವಿಂದರು ಬಲಹಸ್ತವನ್ನು ಎತ್ತಿ ಆಶೀರ್ವದಿಸಿದರು. ನಂತರ ಧ್ಯಾನ ಮತ್ತೆ ಸಾಗಿತು. ಆಶೀರ್ವಾದ-ಧ್ಯಾನಗಳ ನಡುವೆ ಪ್ರತಿಯೊಬ್ಬರಿಗೂ ವಿಶಿಷ್ಟ ಅನುಭವಗಳಾವು. ಆದಿನ ಅಧಿಮಾನಸದ ಅವತರಣವಾಗಿತ್ತು. ಇದು ಮುಂದೆ ಸಂಭವಿಸಲಿದ್ದ ‘ಅತಿಮಾನಸ’ ಅವತರಣಕ್ಕೆ ಪೂರ್ವಪ್ರವೇಶವೂ ಆಗಿತ್ತು. ಶ್ರೀಕೃಷ್ಣನು ಅತಿಮಾನಸದ ಜ್ಯೋತಿ. ಅವನು ಮುಂದೆ ಅವತರಣಗೊಳ್ಳುತ್ತಾನೆಂದೂ ಇದಕ್ಕೆ ಶ್ರೀಮಾತಾ ಕಾರಣರಾಗುತ್ತಾರೆಂದೂ ಅರವಿಂದರು ಸಾಧಕರಿಗೆ ತಿಳಿಸಿದರು. ಅರವಿಂದಾಶ್ರಮದಲ್ಲಿ ಈಗಲೂ ನವೆಂಬರ್ 24ನ್ನು ‘ಸಿದ್ಧಿಯದಿನ’ ಎಂದೇ ಆಚರಿಸುತ್ತಾರೆ. ಅರವಿಂದರು ಅಂದಿನಿಂದ ಸಂಪೂರ್ಣ ಏಕಾಂತಪ್ರಿಯರಾದರು, ಉನ್ನತ ಯೋಗಸಾಧನೆಯಲ್ಲಿ ಮುಳುಗಿದರು.

ಬಾಳೆಲ್ಲ ಯೋಗ: ಆಶ್ರಮಕ್ಕೆ ಬರುವವರ ಸಂಖ್ಯೆ ದಿನೇದಿನೆ ಹೆಚ್ಚಾಯಿತು, ಆಶ್ರಮವಾಸಿಗಳ ಸಂಖ್ಯೆಯೂ ಬೆಳೆಯತೊಡಗಿತು. ಆಶ್ರಮಕ್ಕೆ ಬಂದವರು ಶ್ರೀಮಾತಾರವಿಂದರ ಪೂರ್ಣಾನುಗ್ರಹಕ್ಕೆ ಪಾತ್ರರಾಗತೊಡಗಿದರು. ಕವಿ ದ.ರಾ. ಬೇಂದ್ರೆ, ಮಧುರಚೆನ್ನ ಮುಂತಾದವರು ಅರವಿಂದರ ಪ್ರಭಾವಕ್ಕೆ ಒಳಗಾದರು. ಅರವಿಂದರ ಬರಹವನ್ನು ಓದಿ ತಮ್ಮ ‘ಧೀತೃಷ್ಣೆ’ ತೃಪ್ತಿಗೊಂಡಿತೆಂದು ಕವಿ ಕುವೆಂಪು ಯೋಗಿವರ್ಯನಿಗೆ ನಮನ ಸಲ್ಲಿಸಿದರು. ಶ್ರೀಮಾತಾ ಅಲ್ಲಿ ಅನೇಕ ಉದ್ಯಮಗಳನ್ನು ಸ್ಥಾಪಿಸಿದರು. ಕ್ರಮೇಣ ಶಾಲಾ-ಕಾಲೇಜುಗಳು ಸ್ಥಾಪನೆಗೊಂಡವು. ಅಲ್ಲಿ ಭವಿಷ್ಯದ ಮಾನವನನ್ನು ನಿರ್ವಿುಸಲು ಹೊಸ ಶಿಕ್ಷಣಕೇಂದ್ರವನ್ನು ಪ್ರಾರಂಭಿಸಲಾಯಿತು. ಭೌತಿಕ ಸಾಧನೆಗಳು ಯೋಗತತ್ತ್ವಕ್ಕೆ ಪೂರಕವಾಗುವಂತೆ ನಿರ್ವಣಗೊಂಡವು. ‘ದಿವ್ಯಜೀವನ’ದ ಸಾಧ್ಯತೆಗಳನ್ನು ಸಿದ್ಧಿಯಾಗಿ ಪರಿವರ್ತಿಸುವ ಸಮನ್ವಯಯೋಗವು ಅಲ್ಲಿ ನೆಲೆಗೊಂಡಿತು. ಶ್ರೀಮಾತಾ ಅನುಕ್ಷಣವೂ ‘ಅತಿಮಾನಸ’ದ ನೆಲೆಗಾಗಿಯೇ ತಪಿಸಿದರು. ಈ ನಡುವೆ 1950ರ ಡಿಸೆಂಬರ್ 5ರಂದು ಅರವಿಂದರು ಮಹಾಸಮಾಧಿ ಹೊಂದಿದರು. 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾಗುತ್ತದೆಂದು ಅರವಿಂದರು ಮೊದಲೇ ತಿಳಿಸಿದ್ದರು. ಆಗಸ್ಟ್ 15 ಅವರ ಜನ್ಮದಿನವೂ ಆಗಿತ್ತು. ಇವೆಲ್ಲ ಯೋಗಾಯೋಗ!

1960ಕ್ಕೆ ಶ್ರೀಮಾತೆಯವರು ಪಾಂಡಿಚೆರಿಗೆ ಬಂದು 40 ವರ್ಷಗಳಾದವು. 1962ರಲ್ಲಿ ಅವರಿಗೆ ಹೃದಯಾಘಾತವಾಗಿ, ಆರೋಗ್ಯ ಎಷ್ಟೇ ಕೆಟ್ಟರೂ ಯಾವುದೇ ಕೆಲಸವನ್ನು ನಿಲ್ಲಿಸಲಿಲ್ಲ! ವಿಶ್ವದ ಸಮಸ್ತರು ಬಂದು ನೆಲೆಗೊಳ್ಳಲು ಅರೋವಿಲ್ (ಉಷಾನಗರಿ) ಸ್ಥಾಪನೆಗೆ 1965ರಲ್ಲಿ ವಿಧ್ಯುಕ್ತವಾಗಿ ಘೊಷಿಸಿದರು. ಪಾಂಡಿಚೆರಿಗೆ ಹೊಂದಿಕೊಂಡಿದ್ದ 2000 ಎಕರೆ ಜಮೀನಿನಲ್ಲಿ 1968ರ ಫೆಬ್ರವರಿ 29ರಂದು ಅಡಿಗಲ್ಲು ಸಮಾರಂಭ ನೆರವೇರಿತು. 124 ರಾಷ್ಟ್ರಗಳ ಭಕ್ತರು ಅಲ್ಲಿ ಸೇರಿದರು. 1972ಕ್ಕೆ ಶ್ರೀಮಾತಾರಿಗೆ 94 ವರ್ಷ ತುಂಬಿದವು, ದೇಹ ಕ್ಷೀಣಿಸುತ್ತ ಬಂದಿತ್ತು. ಆ ವರ್ಷ ಭಕ್ತರು ಶ್ರೀಮಾತೆ ದರ್ಶನ ಪಡೆದರು. 1973ರ ನವೆಂಬರ್ 17ರಂದು ಶ್ರೀಮಾತೆ ದೇಹ ತ್ಯಜಿಸಿದರು. ಅವರ ಆದೇಶದಂತೆ ತೇಜೋಮಯ ಕಳೇಬರವನ್ನು ಶುಭ್ರಗೊಳಿಸಿ ಅಲ್ಲಿಯೇ ಮಲಗಿಸಿದರು. ಶ್ರೀಮಾತಾ ಇಚ್ಛೆಯಂತೆ ದೇಹವನ್ನು ಸಮಾಧಿ ಮಾಡಲಾಯಿತು. ಶ್ರೀಮಾತಾ 95 ವರ್ಷಗಳ ಕಾಲ ತುಂಬುಯೋಗದ ‘ದಿವ್ಯಜೀವನ’ ನಡೆಸಿದರು. ಫ್ರಾನ್ಸ್​ನಲ್ಲಿ ಹುಟ್ಟಿ-ಬೆಳೆದು, ಭಾರತದ ಪಾಂಡಿಚೆರಿಯನ್ನು ಯೋಗಭೂಮಿಯಾಸಿಕೊಂಡು ‘ಜೀವನವೆಲ್ಲಾ ಯೋಗ’ಎಂದು ಸಾರಿಹೇಳಿದ ಶ್ರೀಮಾತೆಯವರು ಮಹಾಮಾತೆ; ಭಾರತವು ಯೋಗಭೂಮಿ ಎಂದು ಜಗತ್ತಿಗೇ ಸಾರಿದ ಯೋಗಿನಿ. ಅವರು ಜನ್ಮಿಸಿ ಮುಂದಿನ ವರ್ಷಕ್ಕೆ 125 ವರ್ಷಗಳಾಗುತ್ತವೆ. ಗುಪ್ತಚೈತನ್ಯದ ಚಿಲುಮೆಯಾಗಿ ಅವರು ‘ಅರೋವಿಲ್‘ ಮೂಲಕ ಜಗತ್ತಿನ ಸಮಸ್ತರನ್ನು ಆಶೀರ್ವದಿಸುತ್ತಿದ್ದಾರೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top