Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಅಡುಗೆಮನೆ ಸೆರೆಯಿಂದ ಬಿಡುಗಡೆಗೊಂಡ ಹೆಣ್ಣುಹಕ್ಕಿ…

Thursday, 09.03.2017, 8:24 AM       No Comments

ಶತಶತಮಾನಗಳಿಂದ ಪ್ರತಿನಿತ್ಯ ಪ್ರತಿ ಮಹಿಳೆ ಕೇಳಿಕೊಂಡೇ ಬಂದಿರುವ ಪ್ರಶ್ನೆಯೊಂದಿದೆ: ‘ಇವತ್ತು ಏನಡುಗೆ?’. ಪ್ರಶ್ನೆಯೂ ನಿರಂತರ, ಉತ್ತರವೂ ವೈವಿಧ್ಯಮಯ. ಇಡೀ ಕುಟುಂಬದ ಸದಸ್ಯರ ಆಹಾರ ಪೂರೈಕೆಯ ಹೊಣೆಯೇನಿದ್ದರೂ ಮಹಿಳೆಯರದ್ದೇ. ‘ತಾಯಿಯ ಕೈತುತ್ತು’ ನಮ್ಮ ದೇಶದ ಮಟ್ಟಿಗಾದರೂ ಭಾವನಾತ್ಮಕ ಸ್ಥಾನ ಪಡೆದ ವಿದ್ಯಮಾನ. ಗಂಡ, ಮಕ್ಕಳು, ಹಿರಿಯರು, ನೆಂಟರು, ಆಳುಕಾಳುಗಳು… ಇವರನ್ನೆಲ್ಲ ಪೋಷಿಸುವ ಆಹಾರ ಸಿದ್ಧವಾಗುವುದು ಅಡುಗೆ ಮನೆಯಲ್ಲೇ. ನಿತ್ಯ ಬೆಳಗಾದೊಡನೆ ಪ್ರತಿ ಮಹಿಳೆ ಎದುರಿಸುವ ಮೊದಲ ಪ್ರಶ್ನೆ- ‘ಇಂದೇನಡುಗೆ’. ಒಂದು ದಿನದ ಮಟ್ಟಿಗೂ ತಪ್ಪಿಸಿಕೊಳ್ಳಲಾರದ ‘ಭಕ್ಷ್ಯ ಪ್ರಶ್ನೆ’ (ಯಕ್ಷಪ್ರಶ್ನೆಯಂತೇ!).

ಮಹಿಳೆಯರು ಉದ್ಯೋಗಕ್ಕೆ ತೆರೆದುಕೊಳ್ಳುವುದಕ್ಕೂ ಮೊದಲು, ಸಂಪಾದಿಸಿ ತರುವುದು ಗಂಡಿನ ಹೊಣೆ, ಬೇಯಿಸಿ ತಿನ್ನಿಸುವುದು ಹೆಣ್ಣಿನ ಜವಾಬ್ದಾರಿ ಎಂಬ ಸರಳ ಶ್ರಮವಿಭಜನೆ ಚಾಲ್ತಿಯಲ್ಲಿತ್ತು. ಮೇಲ್ನೋಟಕ್ಕೆ ಸಮಸ್ಯೆಯೇ ಇಲ್ಲ. ಆದರೆ ಈ ಅಡುಗೆಮನೆ ಮಹಿಳೆಗೆ ಸೆರೆಮನೆ ಅಂದೆನಿಸತೊಡಗಿದ್ದು ಆಕೆ ಶಿಕ್ಷಣಕ್ಕೆ ತೆರೆದುಕೊಂಡ ಮೇಲೇ. ದಿನದ ಹೆಚ್ಚಿನ ಸಮಯ ಅಡುಗೆ ಮಾಡುವುದರಲ್ಲಿ, ಪಾತ್ರೆ ತೊಳೆಯುವುದರಲ್ಲಿ, ಬಟ್ಟೆ ಒಗೆದಿಡುವುದರಲ್ಲಿ, ಬೇಳೆ-ಕಾಳು ಹಸನುಮಾಡುವುದರಲ್ಲಿ, ಗಂಡಿನ ಬಾಯ್ಚಪಲ ತೀರಿಸುವುದರಲ್ಲಿ ಕಳೆಯುತ್ತಿದೆ ಎಂದು ಅರಿವು ಮೂಡುವವರೆಗೂ, ಸ್ವಂತದ್ದೆನ್ನುವ ಸಮಯವೇ ಮಹಿಳೆಯರ ಪಾಲಿಗಿರಲಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಂತೂ ಅಡುಗೆಮನೆ ಎಂಬುದು ಮಹಿಳೆಯರ ಪಾಲಿಗೆ ಸೆರೆಮನೆಯೇ ಆಗಿತ್ತು. ಉರುವಲು ಕಟ್ಟಿಗೆಯಲ್ಲಿ ರೊಟ್ಟಿ ಬೇಯಿಸಿ, ಅನ್ನ ಮಾಡಿ, ಸಾರು ಕುದಿಸಿ, ಹೊಗೆಸೇವನೆ ಮಾಡುತ್ತ ಅತ್ಯಂತ ಅನಾರೋಗ್ಯಕರ ವಾತಾವರಣದಲ್ಲಿ ದಿನದ ಹೆಚ್ಚು ಸಮಯ ಕಳೆಯುವ ಗ್ರಾಮೀಣ ಬಡಮಹಿಳೆಯರ ಪಾಲಿಗೆ ಕಾಯಿಲೆಗಳೇ ಸಂಗಾತಿಗಳು. ನಗರ ಪ್ರದೇಶಗಳಲ್ಲಿ ಗಾಳಿ-ಬೆಳಕು ಸೌಲಭ್ಯದ ಅಡುಗೆಮನೆ, ಗ್ಯಾಸು-ಕುಕ್ಕರುಗಳೆಂಬ ಸಮಯಸ್ನೇಹಿ ಸುಧಾರಣೆಗಳು ಕೊಂಚ ಬಿಡುಗಡೆ ನೀಡತೊಡಗಿವೆಯಾದರೂ ಅಡುಗೆಮನೆಯೆಂಬ ಕಾರ್ಯಕ್ಷೇತ್ರದಿಂದ ಮಹಿಳೆಗೆ ವಿನಾಯಿತಿಯೇ ಇಲ್ಲ.

‘ಸುಶಿಕ್ಷಿತ ಪ್ರಜ್ಞಾವಂತ ಮಹಿಳೆಯರು ಸೆರೆಮನೆಯಾಗಿದ್ದ ಅಡುಗೆ ಮನೆಯನ್ನು ತಮ್ಮ ಸೃಜನಶೀಲತೆಯಿಂದ, ಸೃಷ್ಟಿಶೀಲ ಸಾಮರ್ಥ್ಯದಿಂದ ಉಲ್ಲಾಸದ ಉಕ್ಕುಬುಗ್ಗೆಗಳನ್ನಾಗಿ ಪರಿವರ್ತಿಸಿ ಅಡುಗೆ ಎಂಬುದನ್ನು ಬಿಡುಗಡೆಯೆಂದು ಪರಿಭಾವಿಸಿ ಮಾನಸಿಕ ಸಮತೋಲನ ಕೇಂದ್ರಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಅದು ಮಹಿಳೆಯರ ಪ್ರಯೋಗಶಾಲೆಯೂ ಹೌದು’- ಹೀಗೆಂದು ಅಭಿಪ್ರಾಯಪಟ್ಟವರು ಪದ್ಮಶ್ರೀ ಪ್ರಶಸ್ತಿ ವಿಜೇತೆ, ಅಂತಾರಾಷ್ಟ್ರೀಯ ಖ್ಯಾತಿಯ ಬಂಗಾಳಿ ಕವಯಿತ್ರಿ ಡಾ. ನಬನೀತಾ ದೇವ್ ಸೇನ್.

ಮಣಿಪಾಲ ವಿಶ್ವವಿದ್ಯಾಲಯದ ಭಾರತೀಯ ಸಾಹಿತ್ಯಪೀಠವು ಆಯೋಜಿಸಿದ್ದ, ಅಡುಗೆಮನೆ ಜಗತ್ತು ಕುರಿತ ಎರಡು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸುತ್ತ ಈ ಮಾತುಗಳನ್ನು ಆಡಿದ ಕವಯಿತ್ರಿ ನಬನೀತಾ ದೇವ್ ಸೇನ್, ತಮ್ಮ ಸುದೀರ್ಘ ಜೀವನಾನುಭವವನ್ನು ಹಂಚಿಕೊಂಡರು. ಅಡುಗೆಮನೆಯ ಜಗತ್ತಿನ ಸರ್ವತೋಮುಖ ಒತ್ತಡ, ಬದಲಾವಣೆ, ಬೆಳವಣಿಗೆಗಳ ಸುತ್ತಲೇ ಸಂಯೋಜನೆಗೊಂಡ ವಿಚಾರ ಸಂಕಿರಣದ ರೂವಾರಿ ಕನ್ನಡದ ಖ್ಯಾತ ಬರಹಗಾರ್ತಿ ವೈದೇಹಿ. ಅವರ ಜತೆ ಕೈಜೋಡಿಸಿದವರು ಹಲವರು. ಹೆಗ್ಗೋಡಿನ ಕೆ.ವಿ. ಅಕ್ಷರ, ವಿದ್ಯಾ, ಟಿ.ಪಿ. ಅಶೋಕ, ವರದೇಶ ಹಿರೇಗಂಗೆ, ದೀಪಾ ಗಣೇಶ ಅಂಥವರು. ಇವರೆಲ್ಲ ಸೇರಿ ಕನ್ನಡದ ವಿವಿಧ ಕ್ಷೇತ್ರಗಳ ಸಾಧಕರು, ಸಾಹಿತಿಗಳನ್ನೂ, ಸಂಗೀತ, ತಾಳಮದ್ದಲೆ, ಯಕ್ಷಗಾನ… ಹೀಗೆ ಎಲ್ಲ ಸೃಜನಶೀಲ ಪ್ರಕಾರಗಳ ‘ಅಥಾರಿಟಿ’ಗಳನ್ನೂ, ‘ಸೆಲೆಬ್ರಿಟಿ’ಗಳನ್ನೂ ಒಟ್ಟುಸೇರಿಸಿ ವಿಚಾರ ಸಂಕಿರಣದಲ್ಲಿ ಚಿಂತನೆ ನಡೆಸಿದರು. ಸಾಂತ್ವನ ಕಂಡುಕೊಂಡರು.

ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಸಭಾಂಗಣ ಕಳೆದ ವಾರ ಇಂಥ ಅಪರೂಪದ ವಿದ್ಯಮಾನವೊಂದಕ್ಕೆ ಸಾಕ್ಷಿಯಾಯಿತು. ಕಿಕ್ಕಿರಿದ ಸಭಾಂಗಣ. ಶಾಂತಿಯಿಂದ ಪ್ರೀತಿಯಿಂದ ಕೂತು ಕಾರ್ಯಕ್ರಮ ಸವಿದ ಶಿಷ್ಟ ಪ್ರೇಕ್ಷಕವರ್ಗ. ಕುಳಿತುಕೊಳ್ಳಲು ಸೀಟು ಸಿಕ್ಕದೆ, ನೆಲದ ಮೇಲೆ ಮೆಟ್ಟಿಲುಗಳ ಮೇಲೆ ಕುಳಿತು ಆಸ್ವಾದಿಸಿದರು. ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದ ರಂಗತಜ್ಞೆ ಅರುಂಧತಿ ನಾಗ್ ಅವರು, ‘ನನ್ನ ಮಾತೃಭಾಷೆ ಕನ್ನಡವಲ್ಲ; ಆದರೆ ನನ್ನ ಕಡುಕಷ್ಟದ ದಿನಗಳಲ್ಲಿ ಮಾತೃಪ್ರೀತಿ ತೋರಿ ಕೈಹಿಡಿದವರು ಕನ್ನಡಿಗರು. ಶಂಕರ್​ನಾಗ್ ತೀರಿಕೊಂಡ ದಿನಗಳಲ್ಲಿ ನನ್ನ ಅಡುಗೆಮನೆಯಲ್ಲಿ ದಾರುಣ ದಾರಿದ್ರ್ಯತ್ತು. ಬರಿಯ ಆಲೂಗಡ್ಡೆ-ಉಪ್ಪು ತಿಂದು ನನ್ನ ಮಗಳ ಜತೆ ಕಳೆದ ಕಾಲವನ್ನು ಎದುರಿಸುವ ಶಕ್ತಿಯನ್ನು ಕನ್ನಡ ನೆಲದಲ್ಲಿ ಕಂಡುಕೊಂಡೆ…’ ಎಂದು ನೆನಪಿಸಿಕೊಂಡರು.

ಈ ವಿಚಾರ ಸಂಕಿರಣದ ಮೂಲಕ ಮಹಿಳಾ ಜಗತ್ತಿನ ತಲ್ಲಣಗಳನ್ನು ವಿವಿಧ ಕೋನಗಳಿಂದ ವಿಶ್ಲೇಷಿಸುವ ಕನಸು ಕಂಡು ಧನ್ಯತೆ ಅನುಭವಿಸಿದವರು ಭಾರತೀಯ ಸಾಹಿತ್ಯಪೀಠದ ಅಧ್ಯಕ್ಷೆ ವೈದೇಹಿ ಅವರು. ಒಂದು ಕಾಲದಲ್ಲಿ ಮಹಿಳೆಯರ ಸಾಹಿತ್ಯ ಎಂದರೆ ಅಡುಗೆಮನೆ ಸಾಹಿತ್ಯ ಎಂಬುದು ಸಭೆ ಸಮಾರಂಭಗಳಲ್ಲಿ, ವೈಯಕ್ತಿಕ ಮಾತುಕತೆಯಲ್ಲಿ ಸಾರಾಸಗಟಾಗಿ ಕೇಳಿಬರುತ್ತಿದ್ದ ಟೀಕೆ- ಟಿಪ್ಪಣಿ ಆಗಿತ್ತು. ಮಹಿಳೆಯರು ಕೂಡ ತಾವು ಅಡುಗೆಮನೆಗೆ ಮಾತ್ರ ಮೀಸಲು ಎಂದು ತಮ್ಮನ್ನು ತಾವೇ ಜೀರಿಗೆ, ಕೊತ್ತಂಬರಿಗಳಲ್ಲಿ ಅಡಗಿಸಿಕೊಂಡಂತೆ ಇದ್ದರು. ಉಡುಪಿಯಲ್ಲಿ ವಾಸವಾಗಿದ್ದ ಹಿರಿಯ ಲೇಖಕಿ ಸರಸ್ವತಿಬಾಯಿ ರಾಜವಾಡೆಯವರು ಈ ಕುರಿತು ಗಮನ ಸೆಳೆದಿದ್ದು ವೈದೇಹಿಯವರ ಮೇಲೆ ಬೀರಿದ ಪ್ರಭಾವದ ಪರಿಣಾಮವೇ ಈ ವಿಚಾರ ಸಂಕಿರಣ.

ಹಿಂದೊಂದು ಕಾಲದ ಇಂಥ ಟೀಕೆ-ಟಿಪ್ಪಣಿ, ಅವಹೇಳನ, ಕೀಳಂದಾಜು, ಕೀಳರಿಮೆ ಮುಂತಾದ್ದನ್ನೆಲ್ಲ ಮೀರಿ ನಮ್ಮ ಕಾಲದ ಮಹಿಳೆಯರು (ಮತ್ತು ಪುರುಷರು ಕೂಡ) ಮುನ್ನಡೆದಿರುವ ಫಲವಾಗಿ ಅಡುಗೆಮನೆ ಸಾಹಿತ್ಯದ ಕುರಿತೇ ಎರಡು ದಿನದ ವಿಚಾರ ಸಂಕಿರಣ ನಡೆಸುವ ಯೋಜನೆ ಹಾಕಿಕೊಂಡೆವು ಎನ್ನುವ ವಿಚಾರ ಅದರ ರೂವಾರಿ ವೈದೇಹಿ ಅವರದ್ದು. ಅಡುಗೆಮನೆ ಸಾಹಿತ್ಯಕ್ಕೆ ಸೂಕ್ತವಾಗಿ ಅಭಿವ್ಯಕ್ತಿಯೊದಗಿಸುವ ಕಾರ್ಯಕ್ರಮ ಸಂಯೋಜನೆ. ಅವರ ಪ್ರಕಾರ- ಮಹಿಳೆ ಬಳಸುತ್ತಿದ್ದ ಅಡುಗೆ, ಊಟದ ಉಪಮೆ, ಪ್ರತಿಮೆಗಳು ಮತ್ತೂ ದೊಡ್ಡಲೋಕಕ್ಕೆ ಲಗ್ಗೆಹಾಕುವ ಮಾರ್ಗವಾಗಿದ್ದವು. ಮಹಿಳೆಗೆ ಅಡುಗೆಮನೆ ಎಂಬುದು- ಶಕ್ತಿ ಪಡೆಯುತ್ತಿದ್ದ ಸ್ಥಳ, ಯಜ್ಞಭೂಮಿ. ಬೆಂದು ಮಾಗಿ ಸ್ವತಂತ್ರಳಾಗುವ ಜಾಗ. ಒಂದು ಕಾಲಕ್ಕೆ ಇದು ಲಿಂಗ ರಾಜಕಾರಣದ ಕೇಂದ್ರವೂ ಆಗಿತ್ತು. ಆದರೆ ನಮ್ಮ ಪುರಾಣಗಳು ಹಾಗೂ ಗಾಂಧಿ ಮುಂತಾದ ಚಿಂತಕರು ಅಡುಗೆ ಆಹಾರಗಳನ್ನು ಲಿಂಗ ರಾಜಕೀಯದ ಆಚೆಗೂ ವಿಸ್ತರಿಸಿ ಅದಕ್ಕೆ ಹೆಣ್ತನದ ಪೋಷಣೆಯ, ಪ್ರೀತಿಯ ಗುಣ ಕೊಟ್ಟರು. ಈಗ ಲೋಕವೇ ಒಂದು ಅಡುಗೆಮನೆಯಾಗಿದೆ. ಇಲ್ಲಿ ಮಾರುಕಟ್ಟೆಯೂ ಇದೆ, ಸ್ಮೃತಿಯೂ ಇದೆ. ಹಳೆಯದನ್ನು ಉಳಿಸಿಕೊಳ್ಳಬೇಕೆಂಬ ಮನುಷ್ಯಹಂಬಲವನ್ನು ಮಾರುಕಟ್ಟೆ ಬಳಸಿಕೊಳ್ಳುತ್ತಿದೆ. ಅಡುಗೆಮನೆಯ ಈ ಪಯಣದಲ್ಲೇ ಈಗ ಜಾಗತಿಕ ರಾಜಕಾರಣ ಅಡಗಿದೆ ಎನ್ನುತ್ತಾರೆ.

ವೈದೇಹಿ ಅವರ ಈ ಆಶಯಕ್ಕೆ ತಕ್ಕಹಾಗೆ ವಿಚಾರ ಸಂಕಿರಣ ನಡೆಯಿತು. ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಸ್ತಿನಿಂದ, ಸೌಜನ್ಯದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೆಲ್ಪಿಯ ಹುಡುಗಾಟಗಳಿಲ್ಲದೆ ಗಂಭೀರವಾಗಿ ಚರ್ಚೆಗಳಲ್ಲಿ ಪಾಲ್ಗೊಂಡರು. ವೇದಿಕೆಯ ಮೇಲೆ ಕನ್ನಡದ ಖ್ಯಾತ ಚಿಂತಕರು (ಲಕ್ಷ್ಮೀಶ ತೋಳ್ಪಾಡಿ), ಕವಯಿತ್ರಿಯರು (ಪ್ರತಿಭಾ, ಸವಿತಾ, ಸಬೀಹಾ, ಸಬಿತಾ… ಆಹಾ!), ವಿದ್ವಾಂಸರು (ಉಮಾಕಾಂತ ಭಟ್, ಎಚ್.ವಿ. ನಾಗರಾಜ ರಾವ್), ಲೇಖಕ (ನಾಗೇಶ ಹೆಗಡೆ), ಸಿನಿಮಾ ನಿರ್ದೇಶಕರು (ಅಭಯ ಸಿಂಹ), ಪತ್ರಕರ್ತರು (ದೀಪಾ ಗಣೇಶ್), ಖಾದ್ಯೋದ್ಯಮಿ (ಡಾ. ಸದಾನಂದ ಮಯ್ಯ), ರಂಗಕರ್ವಿುಗಳು (ವಿದ್ಯಾ, ಸುಶೀಲಾ ಹೆಗ್ಗೋಡು), ರಂಗ ನಿರ್ದೇಶಕರು (ಕೆ.ವಿ. ಅಕ್ಷರ ಹೆಗ್ಗೋಡು), ವಿಮರ್ಶಕರು (ಟಿ.ಪಿ. ಅಶೋಕ), ಜಾನಪದ ತಜ್ಞರು (ಕೃಷ್ಣಮೂರ್ತಿ ಹನೂರು), ಸಮಾಜವಾದಿ ಚಿಂತಕರು (ಡಿ.ಎಸ್. ನಾಗಭೂಷಣ), ಲೇಖಕ-ಲೇಖಕಿಯರು (ನಾನು, ಬಾಬು ಪಾಂಗಾಳ, ಜ್ಯೋತಿ ಚೇಳ್ಸಾರು), ತಾಳಮದ್ದಲೆ, ಯಕ್ಷಗಾನ ಕಲಾವಿದರು, ಸಂಗೀತ ವಿದುಷಿ (ಸುಕನ್ಯಾ ರಾಮ್ೋಪಾಲ್)…. ಯಾರಿದ್ದರು ಯಾರಿಲ್ಲ? ಎಲ್ಲರನ್ನೂ ಪ್ರೀತಿಯಿಂದ ಕೇಳಿಸಿಕೊಂಡ ಪ್ರಬುದ್ಧ ಪ್ರೇಕ್ಷಕರು. ಇಷ್ಟೊಂದು ಸಂಖ್ಯೆಯ ಸಂಪನ್ಮೂಲ ವ್ಯಕ್ತಿಗಳನ್ನು ಪ್ರಸ್ತುತಪಡಿಸುವಾಗ ಎಲ್ಲಿಯೂ ಸಮತೋಲನ ತಪ್ಪದೇ ‘ಸಾವಕಾಶ ಊಟ ಮಾಡಿ’ ಎಂಬ ಉಪಚಾರದ ಮಾತಿನಂತೆ ಸಾವಧಾನವಾಗಿ ರಸಾಸ್ವಾದ ಮಾಡಲು ಸಾಧ್ಯವಾದುದು ಜನರಿಗಿರುವ ಸಾಂಸ್ಕೃತಿಕ ಸಾಹಿತ್ಯಿಕ ಹಸಿವಿನ ಪ್ರತೀಕದಂತಿತ್ತು.

ಘಟಂ ವಿದುಷಿ ಸುಕನ್ಯಾ ರಾಮ್ೋಪಾಲ್ ತಮ್ಮ ನಾಲ್ವರು ಶಿಷ್ಯರೊಂದಿಗೆ ನಡೆಸಿಕೊಟ್ಟ ‘ಅಡುಗೆಮನೆ ವಾದ್ಯಮೇಳ’ದಲ್ಲಿ ಮೊರ, ಜರಡಿ, ಸಟ್ಟುಗ, ಲಟ್ಟಣಿಗೆಗಳಂಥ ಅಡುಗೆಮನೆ ಪರಿಕರಗಳ ಮೂಲಕ ಲಯಬದ್ಧ ನಾದಗೋಷ್ಠಿಯೊಂದು ಸುಖಾಶ್ಚರ್ಯ ಸ್ಪುರಿಸಿತು. ನಾಗೇಶ ಹೆಗಡೆಯವರ ಕ್ಲಿಪಿಂಗ್​ಗಳು ಆಹಾರ ಪರಿಸರ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ವೈಜ್ಞಾನಿಕ ಬೆಳಕು ಚೆಲ್ಲಿದರೆ, ಪ್ರಸಿದ್ಧ ಖಾದ್ಯೋದ್ಯಮಿ ಡಾ. ಪಿ. ಸದಾನಂದ ಮಯ್ಯ ಅವರು ಅಡುಗೆ ಮನೆಯಿಂದಾಚೆ ಉದ್ಯಮದೆಡೆಗೆ ತಮ್ಮ ಸುದೀರ್ಘ ಪಯಣದ ಕತೆಯಲ್ಲಿ ಇಂದಿನ ಆಹಾರ ಪೊಟ್ಟಣ ಸಂಸ್ಕೃತಿಯತ್ತ ಸರಿಯುತ್ತಿದ್ದು ರೆಡಿಮೇಡ್ ಖಾದ್ಯಗಳ ತಯಾರಿಯಲ್ಲಿ ನ್ಯಾನೊ ಟೆಕ್ನಾಲಜಿ ಬಳಸಿ ಶುಚಿ ರುಚಿಯಾದ ಆಹಾರ ತಯಾರಿಕೆಯ ಸಾಧ್ಯತೆಯನ್ನು ವಿವರಿಸಿದರು. ಡಿ.ಎಸ್. ನಾಗಭೂಷಣ ಅವರದ್ದು ಆಹಾರದ ಕುರಿತ ಗಾಂಧೀಜಿ ಅವರ ವಿಚಾರಧಾರೆಯ ವಿಶ್ಲೇಷಣೆಯಾದರೆ, ರುಚಿಯ ರಾಜಕಾರಣಕ್ಕೆ ರಸದ ಪ್ರತಿರೋಧದ ನೆಲೆಯನ್ನು ವಿವರಿಸಿದವರು ಕೆ.ವಿ. ಅಕ್ಷರ. ಜಾನಪದ ಹಾಗೂ ವಚನ ಲೋಕದಲ್ಲಿಯ ಆಹಾರದ ಅರ್ಥಗಳು ಕೃಷ್ಣಮೂರ್ತಿ ಹನೂರರ ಸಂಗ್ರಹದಲ್ಲಿದ್ದರೆ, ಅಡುಗೆಮನೆಯ ಮಾರ್ಗದ ಕುರಿತು ಲಕ್ಷ್ಮೀಶ ತೋಳ್ಪಾಡಿ ಅವರ ಚಿಂತನೆಯೇ ಬೇರೆ ತೆರದಿತ್ತು. ದಕ್ಷಿಣ ಕನ್ನಡದ ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಆಹಾರ-ವಿಹಾರಗಳ ಸ್ವಾರಸ್ಯವನ್ನು, ನೋವು-ನಲಿವನ್ನು ತೆರೆದಿಟ್ಟವರು ಬಾಬು ಪಾಂಗಾಳ. ತುಳುವಿನಲ್ಲಿ ಅಡುಗೆಮನೆಯ ಸುತ್ತ ಇರುವ ಸ್ವಾರಸ್ಯಕರ ಗಾದೆಗಳನ್ನು ಜ್ಯೋತಿ ಚೇಳ್ಸಾರು ಪ್ರಸ್ತುತಪಡಿಸಿದರು. ಉತ್ತರಕನ್ನಡ ಜಿಲ್ಲೆಯ ಹವ್ಯಕ ಸಮುದಾಯದ ಆಹಾರ ಪದ್ಧತಿ, ಗಾದೆಮಾತುಗಳನ್ನು ವಿವರಿಸಲು ನಾನಂತೂ ನನ್ನ ಹಾಸ್ಯಮಾರ್ಗವನ್ನೇ ಬಳಸಿಕೊಂಡೆ. ಇಡೀ ಸಭಾಂಗಣ ಅಲುಗಾಡಿ ನಕ್ಕಿತು.

ಎಲ್ಲ ರಸಗಳನ್ನೂ ಹದವಾಗಿ ಬೆರೆಸಿದ ಪಾಕಶಾಲೆ ಈ ವಿಚಾರಗೋಷ್ಠಿ. ಪಾಕದ ಹದ ಬಲುದಿನದ ತನಕ ಮೆಲುಕಾಡಲು ಯೋಗ್ಯವಾಗಿದೆ.

Leave a Reply

Your email address will not be published. Required fields are marked *

Back To Top