Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಅಕ್ರಮ ವಲಸಿಗರ ವಿರುದ್ಧ ಆಕ್ಷನ್ ಮೋಡ್

Monday, 25.09.2017, 3:00 AM       No Comments

ಮ್ಯಾನ್ಮಾರ್​ನಿಂದ ಭಾರತಕ್ಕೆ ವಲಸೆ ಬರುತ್ತಿರುವ ರೋಹಿಂಗ್ಯಾ ಮುಸಲ್ಮಾನರಿಂದ ಭಾರತದ ಭದ್ರತೆಗೆ ಧಕ್ಕೆ ಇದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಮೂಲಕ ತಿಳಿಸಿದೆ. ಮತ್ತೊಂದೆಡೆ, ದೇಶದ ಹಲವು ಭಾಗಗಳಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಮುಂದಾಗಿರುವ ಸರ್ಕಾರ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೂ ನಿರ್ದೇಶನ ನೀಡಿದೆ. ಈ ಕುರಿತಾದ ವಿವರ ಇಲ್ಲಿದೆ. 

ಬಾಂಗ್ಲಾ ನುಸುಳುಕೋರರು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು, ಇವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಮಸ್ಯೆ ಹಲವು ದಶಕಗಳಷ್ಟು ಹಳೆಯದಾದರೂ ಈ ಬಾರಿ ಸಮಸ್ಯೆಗೆ ಶಾಶ್ವತ ಮದ್ದೆರೆಯುವ ಇರಾದೆ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ, ಎಲ್ಲ ರಾಜ್ಯಗಳಲ್ಲಿರುವ ಬಾಂಗ್ಲಾ ನುಸುಳುಕೋರರ ಪತ್ತೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಮಾತ್ರವಲ್ಲ, ಒಬ್ಬನೇ ಒಬ್ಬ ಬಾಂಗ್ಲಾ ನುಸುಳುಕೋರನಿಗೂ ಈ ದೇಶದಲ್ಲಿ ಇರಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಅಹೀರ್ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತ ಹೇಳಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ, ಅವರನ್ನು ಗಡಿಪಾರು ಮಾಡಲಾಗುವುದು ಎಂದೂ ಅಹೀರ್ ಹೇಳಿದ್ದಾರೆ. ಭಾರತ-ಬಾಂಗ್ಲಾ ಮಧ್ಯೆ ಭೂಗಡಿ ಒಪ್ಪಂದ ಏರ್ಪಟ್ಟ ನಂತರ ಬಾಂಗ್ಲಾದ ಒಂದಿಷ್ಟು ಹಳ್ಳಿಗಳು ಭಾರತಕ್ಕೆ, ಭಾರತದ ಒಂದಿಷ್ಟು ಗ್ರಾಮಗಳು ಬಾಂಗ್ಲಾಕ್ಕೆ ಹಸ್ತಾಂತರಗೊಂಡಿದ್ದವು. ಅದರಿಂದ ನುಸುಳುವಿಕೆ ಪ್ರಮಾಣ ಕೂಡ ತಗ್ಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಕ್ರಮ ಚಟುವಟಿಕೆ, ದೇಶವಿರೋಧಿ ಕೃತ್ಯಗಳಿಗಾಗಿಯೇ ಬಾಂಗ್ಲಾ ನಿವಾಸಿಗಳು ಭಾರತ ಪ್ರವೇಶಿಸುತ್ತಿದ್ದಾರೆ ಎಂಬ ಸಂಗತಿ ಆತಂಕಕ್ಕೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಗೃಹ ಸಚಿವಾಲಯ ಮುಂದಾಗಿದೆ. ಈ ಕುರಿತಂತೆ ಗಡಿ ಭದ್ರತಾ ಪಡೆ, ಸೇನಾ ಪಡೆ, ಅರೆ ಸೇನಾ ಪಡೆಗಳಿಗೂ ಸೂಕ್ತ ಸೂಚನೆ ನೀಡಲಾಗಿದೆ. ಅಲ್ಲದೆ, ಈ ವಿಷಯದ ಕುರಿತಂತೆ ಬಾಂಗ್ಲಾದೇಶ ಸರ್ಕಾರದ ಮೇಲೂ ಒತ್ತಡ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ದ್ವಿಪಕ್ಷೀಯ ಮಾತುಕತೆ ವೇಳೆ ಬಾಂಗ್ಲಾ ನುಸುಳುಕೋರರ ಸಮಸ್ಯೆಯನ್ನು ಪ್ರಮುಖವಾಗಿ ಬಿಂಬಿಸಲು ಚಿಂತನೆ ನಡೆಸಿದೆ.

ಇತ್ತೀಚೆಗೆ ಸಂಸತ್ತಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ನೀಡಿರುವ ಹೇಳಿಕೆ ಪ್ರಕಾರ ಭಾರತದಲ್ಲಿ 2 ಕೋಟಿ ಬಾಂಗ್ಲಾದೇಶಿ ವಲಸಿಗರು ಅಕ್ರಮವಾಗಿ ನೆಲೆಸಿದ್ದಾರೆ.

ಸರ್ಕಾರ ಕೈಗೊಂಡ ಕ್ರಮಗಳು

  • ನುಸುಳುವಿಕೆಗೆ ಕಡಿವಾಣ ಹಾಕಲು ಭಾರತ-ಬಾಂಗ್ಲಾ ಗಡಿಯಲ್ಲಿ ಗಸ್ತನ್ನು ಹೆಚ್ಚಿಸಿದೆ.
  • ಗಡಿಯನ್ನು ಬಂದ್ ಮಾಡುವ ಪ್ರಕ್ರಿಯೆಗೆ ವೇಗ ನೀಡಿದ್ದು, ಎಲ್ಲೆಲ್ಲಿ ತಂತಿಬೇಲಿ ಅಳವಡಿಸಿಲ್ಲವೋ ಅಲ್ಲೆಲ್ಲ ಗಡಿಯನ್ನು ಭದ್ರಪಡಿಸುವ ಕಾಮಗಾರಿ ನಡೆಯುತ್ತಿದೆ.
  • ಗಡಿಭಾಗದ ಹಲವು ಪ್ರದೇಶಗಳು ದಟ್ಟ ಕತ್ತಲು ಮತ್ತು ಸಂಕೀರ್ಣ ಭೌಗೋಳಿಕ ಸ್ಥಿತಿಯನ್ನು ಹೊಂದಿದ್ದು, ನುಸುಳುಕೋರರು ಈ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಿ, ಗಡಿಗ್ರಾಮಗಳಲ್ಲಿ ಬೆಳಕು ಹೆಚ್ಚಿಸಲು ಮುಂದಾಗಿದೆ.
  • ಹಲವು ಆಧುನಿಕ ಉಪಕರಣಗಳ ಅಳವಡಿಕೆ.

 

ಮತ್ತೆ ವಾಪಸ್ ಬರ್ತಾರೆ!

ಗಡಿಯ ಹಲವೆಡೆ ಬೇಲಿರಹಿತ ಪ್ರದೇಶಗಳು ಇದ್ದು, ಇದು ಭದ್ರತಾ ಪಡೆಗಳಿಗೆ ತಲೆನೋವಾಗಿದೆ. ನುಸುಳುಕೋರರನ್ನು ಪತ್ತೆ ಮಾಡಿ, ಅವರನ್ನು ವಾಪಸ್ ಬಾಂಗ್ಲಾಕ್ಕೆ ಕಳುಹಿಸಿದರೂ ಕೆಲವೇ ದಿನಗಳಲ್ಲಿ ಅವರು ಮತ್ತೆ ಭಾರತದೊಳಗೆ ನುಸುಳಿಬಿಡುತ್ತಿದ್ದಾರೆ. ಒಬ್ಬ ನುಸುಳುಕೋರನನ್ನು ಗಡಿಪಾರು ಮಾಡಿ ಬರಲು ಮೂರು ಪೇದೆಗಳು ಆತನ ಜತೆ ತೆರಳುತ್ತಾರೆ. ವಿಪರ್ಯಾಸವೆಂದರೆ, ದಾರಿಮಧ್ಯೆ ನುಸುಳುಕೋರ ಆರಾಮಾಗಿ ನಿದ್ರೆಗೆ ಜಾರಿದರೆ ಪೇದೆಗಳು ಅವನನ್ನು ಕಾವಲು ಕಾಯಬೇಕು. ಹೀಗೆ ಹರಸಾಹಸ ಮಾಡಿ ಗಡಿಪಾರು ಮಾಡಿದರೂ ಮತ್ತೆ ಪ್ರತ್ಯಕ್ಷರಾಗುವುದರಿಂದ ಭದ್ರತಾ ಪಡೆಗಳು ಪರಿಹಾರ ಕಾಣದೆ, ಕೈಚೆಲ್ಲಿವೆ. ಈ ಮಧ್ಯೆ, ರಾಜಸ್ಥಾನ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ 212 ಬಾಂಗ್ಲಾದೇಶಿಯರನ್ನು ಗಡಿಪಾರು ಮಾಡಿದೆ.

ಭಾರತಕ್ಕೆ ಯಾಕೆ ಬರ್ತಾರೆ?

ನುಸುಳುಕೋರರು ಭಾರತದ ಗಡಿ ಪ್ರವೇಶಿಸಲು ಇರುವ ಮುಖ್ಯ ಕಾರಣ- ಜಮೀನು ಲಪಟಾಯಿಸುವುದು. ಜಮೀನಿನ ಆಸೆಗಾಗಿ ಬಾಂಗ್ಲಾದಿಂದ ನಿರಂತರವಾಗಿ ನುಸುಳುವಿಕೆ ನಡೆಯುತ್ತಿದೆ. ಇಲ್ಲಿನ ಕೆಲ ಭೂಭಾಗವನ್ನು ಕಬಳಿಸಿಕೊಂಡು, ಇಲ್ಲಿಯ ನಿವಾಸಿಗಳಂತೆ ಇದ್ದುಬಿಡುವ ಉದ್ದೇಶ ಅವರದ್ದು. ಕೆಲವೆಡೆಯಂತೂ, ಕೃಷಿ ಭೂಮಿಯನ್ನೂ ಕಬಳಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ರಾಜ್ಯದಲ್ಲಿ 369 ಬಾಂಗ್ಲಾ ಪ್ರಜೆಗಳು

ರಾಜ್ಯದಲ್ಲಿ 2008ರಿಂದ 2017 ಮೇ ವರೆಗೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶಿಗರ ವಿರುದ್ಧ 108 ಪ್ರಕರಣಗಳನ್ನು ದಾಖಲಿಸಿ 369 ಜನರನ್ನು ಬಂಧಿಸಲಾಗಿದೆ. ಈ ಪೈಕಿ 53 ಬಾಂಗ್ಲಾದೇಶಿಗರನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ. ಅಲ್ಲದೆ, ಪಾಕಿಸ್ತಾನ ಪ್ರಜೆಗಳ ವಿರುದ್ಧ ಒಂದು ಪ್ರಕರಣ ದಾಖಲಾಗಿದ್ದು, 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪಾಯವೇಕೆಂದರೆ…

ಬಾಂಗ್ಲಾ ನುಸುಳುಕೋರರನ್ನು ತನ್ನ ದಾಳಕ್ಕೆ ಸಿಲುಕಿಸಿ, ಭಾರತವಿರೋಧಿ ಕಾರ್ಯಾಚರಣೆಗೆ ಬಳಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ತಂತ್ರ ಹೆಣೆಯುತ್ತಿದೆ. 2012ರಲ್ಲಿ ಹಲವು ಬಾಂಗ್ಲಾ ನುಸುಳುಕೋರರನ್ನು ಬಂಧಿಸಿದಾಗ ಅವರು ಐಎಸ್​ಐ ಸಂಪರ್ಕದಲ್ಲಿರುವುದು ದೃಢಪಟ್ಟಿತ್ತು. ಈಗಲೂ, ಐಎಸ್​ಐ ಇವರ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದೆ. ಹೀಗೇನಾದರೂ ಆದರೆ ಭಾರತದ ಭದ್ರತೆಗೆ ಅದು ಅಪಾಯವೇ ಸರಿ. ಅಷ್ಟೇ ಅಲ್ಲ, ಇತರೆ ಭಯೋತ್ಪಾದಕ ಸಂಘಟನೆಗಳ ಸಂಪರ್ಕಕ್ಕೂ ಬರುತ್ತಿದ್ದಾರೆ. ನಕಲಿ ನೋಟು ತಯಾರಿಕೆ, ಅಪಹರಣದಂಥ ಕೃತ್ಯಗಳಲ್ಲೂ ಶಾಮೀಲಾಗುತ್ತಿದ್ದಾರೆ. ಗಡಿ ಭದ್ರತಾ ಪಡೆ (ಬಿಎಸ್​ಎಫ್) ದಾಖಲಿಸಿರುವ ಒಟ್ಟು ಪ್ರಕರಣಗಳ ಪೈಕಿ ಶೇಕಡ 34ರಷ್ಟು ಪ್ರಕರಣಗಳು ಬಾಂಗ್ಲಾ ನುಸುಳುಕೋರರ ವಿರುದ್ಧವಾಗಿರುವಂಥವು. ಅಸ್ಸಾಂನಲ್ಲಿ ಶೇ.71 ಮತ್ತು ಮೇಘಾಲಯದಲ್ಲಿ ಶೇ.91ರಷ್ಟು ಪ್ರಕರಣಗಳು ಬಾಂಗ್ಲಾ ನುಸುಳುಕೋರರ ಮೇಲೆ ದಾಖಲಾಗಿವೆ. ಕೆಲ ನುಸುಳುಕೋರರು ಈಶಾನ್ಯ ರಾಜ್ಯಗಳನ್ನು ತ್ಯಜಿಸಿ ಪಶ್ಚಿಮ ಬಂಗಾಳಕ್ಕೆ ಬಂದು ನೆಲೆಸುತ್ತಿದ್ದಾರೆ.

ಹೆಚ್ಚು ನುಸುಳುವಿಕೆ ಎಲ್ಲಿ?

ಭಾರತ-ಬಾಂಗ್ಲಾದೇಶದ 1/3ರಷ್ಟು ಗಡಿಭಾಗ ನದಿತೀರ ಪ್ರದೇಶವನ್ನು ಹೊಂದಿದೆ. ಬ್ರಹ್ಮಪುತ್ರ ಸೇರಿದಂತೆ ಇತರೆ ಕೆಲ ನದಿಗಳಲ್ಲಿರುವ ಜಲಮಾರ್ಗಗಳ ಮೇಲೆ ಕಣ್ಗಾವಲು ಇರಿಸುವುದು ಭದ್ರತಾ ಪಡೆಗಳಿಗೆ ತೀರಾ ಸವಾಲಿನ ಕೆಲಸ. ಆದ್ದರಿಂದ, ಈ ಜಲಮಾರ್ಗಗಳನ್ನು ಬಳಸಿಕೊಂಡೇ ಹೆಚ್ಚಿನ ನುಸುಳುವಿಕೆ ನಡೆಯುತ್ತಿದೆ. ಮತ್ತೆ ಕೆಲವೆಡೆ ತಂತಿಗಳನ್ನು ಸುಲಭವಾಗಿ ಕತ್ತರಿಸಿಯೂ ನುಸುಳುಕೋರರು ಭಾರತದ ಗಡಿ ಪ್ರವೇಶಿಸುತ್ತಿದ್ದಾರೆ.

ವಲಸೆಯ ಕಥೆ-ವ್ಯಥೆ

ಬ್ರಿಟಿಷರ ವಸಹಾತು ಕಾಲದಲ್ಲಿ ಚಹಾ ತೋಟಗಳಿಗೆ ಬಿಹಾರಿಗಳು ಮತ್ತು ಬಂಗಾಳಿಗಳನ್ನು ಕೂಲಿಯಾಳುಗಳನ್ನಾಗಿ ತರಲಾಯಿತು. ಕ್ರಮೇಣ ಅವರು ಅಲ್ಲೇ ನೆಲಸಿದರು. ಭಾರತ ವಿಭಜನೆಯಾದಾಗ ಇಂದಿನ ಬಾಂಗ್ಲಾದಿಂದ (ಅಂದಿನ ಪೂರ್ವ ಪಾಕಿಸ್ತಾನ) ಭಾರೀ ಪ್ರಮಾಣದಲ್ಲಿ ನಿರಾಶ್ರಿತರು ಹರಿದು ಬಂದರು. 1970ರಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಬಾಂಗ್ಲಾದೇಶಿಯರ ಮೇಲೆ ದಬ್ಬಾಳಿಕೆ ಆರಂಭಿಸಿದಾಗ ಭಾರೀ ಪ್ರಮಾಣದಲ್ಲಿ ಬಂದ ನಿರಾಶ್ರಿತರು ಇಲ್ಲೇ ಬೀಡುಬಿಟ್ಟರು. ಬಾಂಗ್ಲಾದೇಶ ಪಾಕಿಸ್ತಾನದಿಂದ ಸ್ವತಂತ್ರಗೊಂಡರೂ ನಿರಾಶ್ರಿತರು ಮಾತ್ರ ಭಾರತದಿಂದ ಕದಲಲಿಲ್ಲ. ಅಧಿಕ ಪ್ರಮಾಣದಲ್ಲಿ ಬಾಂಗ್ಲಾದೇಶಿಯರು ಇಲ್ಲಿ ಬೀಡುಬಿಟ್ಟ ಪರಿಣಾಮ ಜನಸಂಖ್ಯೆ ಅನುಪಾತದಲ್ಲೂ ಏರುಪೇರಾಯಿತು. ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿಯೂ ಮೂಲನಿವಾಸಿ ಭಾರತೀಯರು ಅತಂತ್ರಕ್ಕೆ ಒಳಗಾದರು. ನಿರಂತರವಾಗಿ ಬಾಂಗ್ಲಾ ವಲಸಿಗರಿಗೆ ಮಣೆ ಹಾಕುತ್ತಲೇ ಬಂದ ರಾಜಕಾರಣಿಗಳ ತಂತ್ರದಿಂದಾಗಿ ಭಾರತೀಯರು ತಾವು ಅಲ್ಪಸಂಖ್ಯಾತರಾಗುತ್ತೇವೆ ಎಂಬ ಭೀತಿಗೆ ಮೊದಲಿಗೆ ಒಳಗಾಗಿದ್ದು 70ರ ದಶಕದಲ್ಲಿ. ಆ ವರ್ಷ ನಡೆದ ಚುನಾವಣೆಗೆ ಬಾಂಗ್ಲಾ ವಲಸಿಗರಿಗೆ ಮತದಾನದ ಹಕ್ಕು ನೀಡಲಾಯಿತು. ಆ ಕ್ಷಣದಿಂದಲೇ ಅಸ್ಸಾಮಿಗಳು ತಿರುಗಿ ಬೀಳಲು ಆರಂಭಿಸಿದರು. ಇನ್ನೊಂದೆಡೆ ಬಾಂಗ್ಲಾ ನುಸುಳುಕೋರರ ಸಂಖ್ಯೆಯೂ ಹೆಚ್ಚುತ್ತಲೇ ಹೋಯಿತು. ಆದರೆ, ಈ ಹಿಂದಿನ ಕೆಂದ್ರ ಸರ್ಕಾರಗಳು ಅಸ್ಸಾಮಿನ ಮೂಲನಿವಾಸಿಗಳ ಆತಂಕಕ್ಕೆ, ಆಕ್ರೋಶಕ್ಕೆ ಕಿವಿಗೊಡಲೇ ಇಲ್ಲ. ಪರಿಣಾಮ, ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ ಮತ್ತಷ್ಟು ಅಧ್ವಾನವಾಯಿತು. ಇವೆಲ್ಲದರ ಪರಿಣಾಮ ಇಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದಾಗುತ್ತಿಲ್ಲ. ಹೀಗಾಗಿ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತಿಲ್ಲ.

ನುಸುಳುಕೋರರದ್ದೇ ದರ್ಬಾರ್

ಅಲೆಗ್ಸಾಂಡರನ ಕಾಲದಿಂದಲೂ ಭಾರತಕ್ಕೆ ವಿವಿಧ ದೇಶಗಳಿಂದ ಜನ ವಲಸೆ ಬಂದಿದ್ದಾರೆ. ಪರ್ಷಿಯಾ (ಈಗಿನ ಇರಾನ್)ದಿಂದ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಬಂದರು. ಅದೇ ರೀತಿಯಲ್ಲಿ ಯಹೂದಿಗಳು, ಆಫ್ರಿಕನ್ನರು, ಟಿಬೆಟಿಯನ್ನರು, ಶ್ರೀಲಂಕಾ ತಮಿಳರು ವಲಸೆ ಬಂದವರಲ್ಲಿ ಪ್ರಮುಖರು. ಅಲೆಗ್ಸಾಂಡರ್ ಸೈನ್ಯದ ಜತೆ ಬಂದ ಗ್ರೀಕರೂ ಇಲ್ಲೇ ಉಳಿದರು. ಆದರೆ, ಬಾಂಗ್ಲಾ ವಲಸಿಗರು ಹಾಗಲ್ಲ. ಇಲ್ಲಿಗೆ ಬಂದಿದ್ದು ಮಾತ್ರವಲ್ಲದೆ, ಅಸ್ಸಾಂ, ಪಶ್ಚಿಮಬಂಗಾಳದಲ್ಲಿ ಬೇರುಬಿಟ್ಟರು, ಕ್ರಮೇಣ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋದರು. ಬಾಂಗ್ಲಾದಿಂದ ಈಗಲೂ ನುಸುಳಿ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಈಶಾನ್ಯ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಇವರೇ ಬಹುಸಂಖ್ಯಾತರಾಗಿದ್ದಾರೆ. ಸ್ಥಳೀಯ ಭಾರತೀಯ ಬುಡಕಟ್ಟು ವಾಸಿಗಳು ಮತ್ತು ಬಾಂಗ್ಲಾ ವಲಸಿಗ ಮುಸ್ಲಿಮರ ಮಧ್ಯೆ ಸಂಘರ್ಷ ಇಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ, ರಾಜಕಾರಣಿಗಳು ಮತದ ಆಸೆಗಾಗಿ ನುಸುಳುಕೋರರಿಗೆ ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಿದ್ದು ವಿಪರ್ಯಾಸ.

24 ಸಾವಿರ ಅಕ್ರಮ ವಿದೇಶಿಗರು

ಕರ್ನಾಟಕದಲ್ಲಿ 23,708 ವಿದೇಶಿಗರು ವಾಸವಿದ್ದು, ಬೆಂಗಳೂರಿನಲ್ಲೇ ವೀಸಾ ಅವಧಿ ಮುಗಿದಿರುವ 1,165 ವಿದೇಶಿಗರು ನೆಲೆಸಿದ್ದಾರೆ. ಅದರಲ್ಲಿ 33 ಅಫ್ಘಾನಿಸ್ತಾನ, 30 ಬಾಂಗ್ಲಾದೇಶಿಗರು, 100 ಕಾಂಗೋ, 100 ಐವರಿ ಕೋಸ್ಟ್, 212 ಸೂಡಾನ್, 13 ತಾಂಜೇನಿಯಾ, 39 ಉಗಾಂಡಾ, 99 ಯೆಮೆನ್, 54 ಇರಾಕ್, 55 ಇರಾನ್, 26 ಸೌತ್ ಸೂಡಾನ್, 22 ರುವಾಂಡಾ ಮತ್ತು 12 ಮಾಲ್ಡೀವ್ಸ್ ಪ್ರಜೆಗಳಿದ್ದಾರೆ.

ಹಜಾರಿಕಾ ವರದಿ ಎಚ್ಚರಿಸಿತ್ತು

ಅಕ್ರಮ ಬಾಂಗ್ಲಾದೇಶಿ ವಲಸಿಗರ ಕುರಿತಾದ ವಾಸ್ತವ ಚಿತ್ರಣ ಅರಿಯಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಏಕಸದಸ್ಯ ಆಯೋಗವು- ನುಸುಳುಕೋರರ ಅಪಾಯದ ಬಗ್ಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಉಪಮನ್ಯು ಹಜಾರಿಕಾ ಆಯೋಗ 2015ರ ನವೆಂಬರ್​ನಲ್ಲಿ ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿದ್ದು, ಈಶಾನ್ಯ ರಾಜ್ಯಗಳು ಅದರಲ್ಲೂ ಅಸ್ಸಾಂ ನುಸುಳುಕೋರರ ಸ್ವರ್ಗವಾಗಿದೆ. ಪರಿಣಾಮ, ಅಸ್ಸಾಂನ ಮೂಲನಿವಾಸಿಗಳು ತಮ್ಮ ನೆಲದಲ್ಲೇ ಅಲ್ಪಸಂಖ್ಯಾತರಾಗುವ ಅಪಾಯ ಎದುರಿಸುತ್ತಿದ್ದಾರೆ. ನುಸುಳುವಿಕೆಯ ಪ್ರಮಾಣ ಹೀಗೇ ಮುಂದುವರಿದರೆ 2047ರ ಹೊತ್ತಿಗೆ ಅಸ್ಸಾಂನಲ್ಲಿ ಬಾಂಗ್ಲಾ ನುಸುಳುಕೋರರೇ ಪಾರಮ್ಯ ಸಾಧಿಸಲಿದ್ದಾರೆ ಎಂದು ಹೇಳಿದೆ.

ವರದಿಯ ಇತರ ಮುಖ್ಯಾಂಶಗಳು

  • ನುಸುಳುವಿಕೆಯ ವಿಷಯ ಕೇವಲ ಅಸ್ಸಾಂಗೆ ಸೀಮಿತವಾಗದೆ ಭಾರತದ ಮಟ್ಟಿಗೆ ತುಂಬ ಗಂಭೀರ ಹಾಗೂ ಸೂಕ್ಷ್ಮವಾಗಿದೆ. ಇದನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ.
  • ನುಸುಳುವಿಕೆಯ ಸಮಸ್ಯೆ ಹಾಗೂ ಅದರ ಮೂಲ ಪತ್ತೆಗೆ ಸಮಗ್ರ ತನಿಖೆಯೊಂದರ ಅಗತ್ಯವಿದೆ. ಅಂಥದ್ದೊಂದು ತನಿಖೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆದರೆ ಉತ್ತಮ.
  • ಗಡಿಯನ್ನು ಇನ್ನಷ್ಟು ಭದ್ರಪಡಿಸಬೇಕಾಗಿದೆ. ಎಷ್ಟೋ ಕಡೆ ಗಡಿಗಳಿಗೆ ಅಳವಡಿಸಲಾದ ತಂತಿಯೇ ಕಿತ್ತುಹೋಗಿದ್ದರೆ, ಇನ್ನೂ ಕೆಲವಡೆ ತಂತಿ ಹಾಕದೆ ಹಾಗೇ ಬಿಡಲಾಗಿದೆ.
  • ಗಡಿಭಾಗದ ಬಹಳಷ್ಟು ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಕಾರಣ, ಇಲ್ಲಿ ಬಂಜರು ಭೂಮಿ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ, ‘ಬಂಜರು ಝೋನ್’ ನ್ನು ಗುರುತಿಸಿ ಅದರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು. ‘ಬಂಜರು ಝೋನ್’ನ್ನು ಗುರುತಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಸೇರಿ ಕೆಲಸ ಮಾಡಬೇಕು. ಅಷ್ಟೇ ಅಲ್ಲ, ಇಲ್ಲಿ ವಾಸಿಸುವ ಗ್ರಾಮೀಣಿಗರಿಗೆ ಗುರುತಿನ ಚೀಟಿ ನೀಡಬೇಕು.

Leave a Reply

Your email address will not be published. Required fields are marked *

Back To Top