Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಅಂತೂ ಇಂತು ಬಂತು ಬೊಫೋರ್ಸ್

Friday, 19.05.2017, 3:05 AM       No Comments

ದೇಶದಲ್ಲಿ 1986ರಲ್ಲಿ ನಡೆದ ಬೊಫೋರ್ಸ್ ಹಗರಣ ಕೇಂದ್ರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಗುವುದರ ಜತೆಗೆ ಸೇನೆಯ ಆಧುನೀಕರಣಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಹಗರಣ ನಡೆದು 30 ವರ್ಷ ಸಂದರೂ ಒಂದೇ ಒಂದು ಫಿರಂಗಿಯನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿರಲಿಲ್ಲ. ಇದೀಗ ಅಮೆರಿಕದಿಂದ ಎರಡು ಎಂ-777 ಫಿರಂಗಿಗಳನ್ನು ತರಿಸಲಾಗಿದ್ದು ಆ ಕೊರತೆಯನ್ನು ನೀಗಿದಂತಾಗಿದೆ.

ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿ ಭಾರತೀಯ ಸೇನೆಗೆ ಎರಡು ಹವಿಟ್ಜರ್(ಫಿರಂಗಿಗಳು) ಸೇರ್ಪಡೆಗೊಳಿಸಲಾಗಿದೆ. ಗುರುವಾರ ದೆಹಲಿಗೆ ಬಂದಿಳಿದಿರುವ ಎಂ-777 ಫಿರಂಗಿಗಳನ್ನು ರಾಜಸ್ಥಾನದ ಪೋಖರಣ್​ನಲ್ಲಿ ಪರೀಕ್ಷೆಗೊಳಪಡಿಸಲಾಗುವುದು. 2016ರ ನವೆಂಬರ್​ನಲ್ಲಿ ಭಾರತ ಸರ್ಕಾರ ಅಮೆರಿಕದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಭಾಗವಾಗಿ ಎಂ-777 ಅಲ್ಟ್ರಾ ಲೈಟ್ ಫಿರಂಗಿಗಳನ್ನು ಕಳುಹಿಸಿಕೊಡಲಾಗಿದೆ. 25 ಫಿರಂಗಿಗಳನ್ನು ಅಮೆರಿಕದ ಬಿಎಇ ಸಂಸ್ಥೆ ಮುಖ್ಯ ಘಟಕದಲ್ಲೇ ತಯಾರಿಸಿ ಕಳುಹಿಸಿಕೊಡಲಿದ್ದು, ಉಳಿದ 120 ಫಿರಂಗಿಗಳನ್ನು ಮಹಿಂದ್ರಾ ಸಂಸ್ಥೆ ಸಹಯೋಗದಲ್ಲಿ ಭಾರತದಲ್ಲಿಯೇ ತಯಾರಿಸಲಿದೆ. 2019ರ ಮಾರ್ಚ್ ನಂತರ ಈ ಪ್ರಕ್ರಿಯೆ ಇನ್ನಷ್ಟು ಚುರುಕು ಪಡೆದುಕೊಳ್ಳಲಿದೆ. ಆ ಬಳಿಕ ಪ್ರತಿ ತಿಂಗಳು ಭಾರತೀಯ ಸೇನೆಗೆ ಐದು ಫಿರಂಗಿಗಳ ಸೇರ್ಪಡೆ ನಡೆಯಲಿದ್ದು, 2021ರ ಜೂನ್ ಒಳಗಾಗಿ ಎಲ್ಲ 145 ಫಿರಂಗಿಗಳನ್ನು ಪೂರೈಸಲಾಗುವುದು ಎಂದು ಬಿಎಇ ಸಂಸ್ಥೆ ತಿಳಿಸಿದೆ.

ಭಾರತೀಯ ಸೇನೆ ಕಳೆದ 15 ವರ್ಷಗಳಿಂದಲೂ 155 ಎಂಎಂ/ 39 ಕ್ಯಾಲಿಬರ್​ನ ಅಲ್ಟ್ರಾಲೈಟ್ ಫಿರಂಗಿಗಳಿಗೆ ಬೇಡಿಕೆ ಇಡುತ್ತಿತ್ತು. ಇದು ಟೈಟಾನಿಯಮ್ಂದ ತಯಾರಿಸುವುದರಿಂದ ಇತರ ಫಿರಂಗಿಗಳಂತೆ ಭಾರಿ ತೂಕ ಹೊಂದಿರಲಾರದು. ಇಂತಹ ಫಿರಂಗಿಗಳು ಎತ್ತರದ ಪ್ರದೇಶಗಳಲ್ಲಿ ನಡೆಸುವ ಕಾರ್ಯಾಚರಣೆಗೆ ಹೆಚ್ಚು ಸಹಕಾರಿ ಎಂಬುದು ಸೇನೆಯ ಅಭಿಪ್ರಾಯವಾಗಿತ್ತು.

30 ವರ್ಷದಿಂದ ಸೇನೆಗೆ ಫಿರಂಗಿ ಸೇರ್ಪಡೆಯಿಲ್ಲ!

ಸ್ವೀಡನ್​ನ ಸಂಸ್ಥೆಯಿಂದ ಬೊಫೋರ್ಸ್ ಫಿರಂಗಿಗಳನ್ನು ಖರೀದಿಸುವ ಒಪ್ಪಂದಕ್ಕೆ 1986ರಲ್ಲಿ ಭಾರತ ಸಹಿ ಹಾಕಿತ್ತು. ಆದರೆ ಈ ಒಪ್ಪಂದಕ್ಕಾಗಿ ಸ್ವೀಡನ್​ನ ಕಂಪನಿ ಭಾರತದ ರಾಜಕಾರಣಿಗಳಿಗೆ 64.24 ಕೋಟಿ ರೂಪಾಯಿ ಲಂಚ ನೀಡಿದೆ ಎಂಬ ಸುದ್ದಿ ಸ್ವೀಡನ್​ನ ಪತ್ರಿಕೆಗಳಲ್ಲಿ ಪ್ರಕಟವಾದವು. ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಈ ಆರೋಪವನ್ನು ತಳ್ಳಿ ಹಾಕಿದ್ದರಾದರೂ ನಂತರ ಈ ಬಗ್ಗೆ ವಿವಾದಗಳು ಹೆಚ್ಚಿದ್ದರಿಂದ ಒಪ್ಪಂದವನ್ನು ಕೈಬಿಡಲಾಯಿತು. ಇದರೊಂದಿಗೆ ಭಾರತೀಯ ಸೇನೆಗೆ ಫಿರಂಗಿಗಳ ಸೇರ್ಪಡೆ ಕಾರ್ಯವೂ ಮೊಟಕಾಯಿತು. ಸೇನೆಯ ಶಸ್ತ್ರಾಸ್ತ್ರ ಬಲ ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧರಿಸಿದರೂ ಈ ಕಾರ್ಯ ನಿಧಾನಗತಿಯಲ್ಲಿ ನಡೆಯಿತು.

ಎಂ-777 ವಿಶೇಷತೆಗಳು

ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ: ಗುರುವಾರ ಎಂ-777 ಫಿರಂಗಿಗಳು ದೆಹಲಿ ತಲುಪಿದ್ದು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 25 ಫಿರಂಗಿಗಳನ್ನು ಅಮೆರಿಕ ಭಾರತಕ್ಕೆ ರವಾನಿಸಲಿದೆ. ಉಳಿದ 120 ಫಿರಂಗಿಗಳನ್ನು ಮೋದಿಯವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಮೂಲಕ ಭಾರತದಲ್ಲೆ ನಿರ್ವಿುಸಲಾಗುತ್ತದೆ. ಅಮೆರಿಕದ ಬಿಎಇ ಸಿಸ್ಟಮ್ ಮಹೀಂದ್ರ ಡಿಫೆನ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಫರೀದಾಬಾದ್​ನಲ್ಲಿರುವ ಮಹೀಂದ್ರಾದ ಘಟಕದಲ್ಲಿ ಉಳಿದ 120 ಫಿರಂಗಿಗಳ ಬಿಡಿಭಾಗಗಳ ಜೋಡಣೆ ಕಾರ್ಯ ನಡೆಯಲಿದೆ.

ಸಾಮರ್ಥ್ಯ: 155 ಎಂಎಂ/ 39 ಕ್ಯಾಲಿಬರ್​ನ ಫಿರಂಗಿಗಳು ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಸೇನೆಗೆ ನೆರವಾಗಲಿದೆ. ಪಶ್ಚಿಮಬಂಗಾಳದ ಪನಗಢದಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಮೌಂಟೆನ್ ಸ್ಟ್ರೈಕ್ ಕಾರ್ಪ್​ಗೆ ಇದನ್ನು ಒದಗಿಸುವ ಸಾಧ್ಯತೆಯಿದೆ. ಈಶಾನ್ಯ ರಾಜ್ಯಗಳ ಗಡಿ ಭಾಗದಲ್ಲಿ ಚೀನಾ ಸೇನೆಗೆ ಸೆಡ್ಡು ಹೊಡೆಯಲು ಇದನ್ನು ತರಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಸರ್ಕಾರ ನೂತನ ಮೌಂಟೆನ್ ಸ್ಟ್ರೈಕ್ ಕಾರ್ಪ್​ಗಾಗಿ 40,000 ಕೋಟಿ ರೂಪಾಯಿ ವ್ಯಯಿಸಲಿದ್ದು, 2025ರಲ್ಲಿ ಕಾರ್ಯಾಚರಣೆಗೆ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಲಿದೆ.

ತೂಕವೂ ಕಡಿಮೆ: 155 ಎಂಎಂ ಸಾಮರ್ಥ್ಯ ಫಿರಂಗಿಗಳು ಸಾಮಾನ್ಯವಾಗಿ 8ರಿಂದ 9 ಟನ್​ಗಳಷ್ಟು ತೂಕವಿರುತ್ತದೆ. ಆದರೆ ಎಂ-777 ಫಿರಂಗಿಗಳು ಟೈಟಾನಿಯಂ ಮತ್ತು ಅಲ್ಯೂಮಿನಿಯಂನಿಂದ ತಯಾರಿಸಲಾಗಿರುವುದರಿಂದ 4,218 ಕೆಜಿ ತೂಕವಿದೆಯಷ್ಟೆ. ಇದನ್ನು ಚಿನೂಕ್​ನಂತಹ ಹೆಲಿಕಾಪ್ಟರ್​ಗಳ ಮೂಲಕವೂ ಸಾಗಿಸಬಹುದಾಗಿದೆ.

ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ: ಎಂ-777 ಫಿರಂಗಿಗಳು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಖ್ಯಾತಿ ಪಡೆದಿವೆ. ವಿಶ್ವಾದ್ಯಂತ 1,090 ಎಂ-777ಗಳನ್ನು ಬಳಸಲಾಗುತ್ತಿದ್ದು. ಅಫ್ಘಾನಿಸ್ತಾನ ಮತ್ತು ಇರಾಕ್​ನಲ್ಲಿ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲೂ ಇದನ್ನು ಬಳಸಿತ್ತು. ಆಸ್ಟ್ರೇಲಿಯಾ, ಕೆನಡಾ ಸೇನೆ ಕೂಡಾ ಇದನ್ನು ಬಳಸುತ್ತಿದೆ.

 • ಎಂ-777 ಫಿರಂಗಿಗಳು ಲೇಸರ್ ಆರ್ಟಿಲರಿ ಪಾಯಿಂಟಿಂಗ್ ವ್ಯವಸ್ಥೆ ಹೊಂದಿದೆ. ನಿರ್ವಹಣೆ, ತರಬೇತಿ, ತರಬೇತಿಗೆ ಅಗತ್ಯ ಸಲಕರಣೆಗಳು, ತಾಂತ್ರಿಕ ಸಹಾಯ, ಇಂಜಿನಿಯರಿಂಗ್ ಮತ್ತು ಲಾಜಿಸ್ಟಿಕ್ ಸೇವೆಯನ್ನೂ ಒದಗಿಸಲಿದೆ.
 • ಎಂ-777 ಗನ್​ಗಳು ಅಮೆರಿಕದಲ್ಲಿ ತಯಾರಾಗಿದ್ದರೂ ಇವುಗಳನ್ನು ಭಾರತೀಯ ವಾತಾವರಣಕ್ಕೆ ಅನುಗುಣವಾಗಿ ಇಲ್ಲಿನ ಮದ್ದುಗುಂಡುಗಳನ್ನು ಸಿಡಿಸಲು ಅನುಕೂಲವಾಗುವಂತೆ ತಯಾರಿಸಲಾಗಿದೆ.

 ಬೊಫೋರ್ಸ್ ಹಗರಣದ ಹಾದಿ

 • 1986 ಮಾ 24: ಭಾರತ ಸರ್ಕಾರ ಹಾಗೂ ಸ್ವೀಡಿಷ್ ಶಸ್ತ್ರಾಸ್ತ್ರ ಕಂಪನಿ ಎಬಿ ಬೊಫೋರ್ಸ್ ನಡುವೆ 1,500 ಕೋಟಿ ಡಾಲರ್ ಮೌಲ್ಯದ ಒಪ್ಪಂದ – 400ಕ್ಕೂ ಹೆಚ್ಚು 155 ಎಂಎಂ ಹವಿಟ್ಜರ್ ಫೀಲ್ಡ್ ಗನ್ ಪೂರೈಕೆಗೆ ಬೋಫೋರ್ಸ್ ಕಂಪನಿ ಒಪ್ಪಿಗೆ.
 • 1987 ಏಪ್ರಿಲ್ 16: ಡೀಲ್ ಕುದುರಿಸುವುದಕ್ಕಾಗಿ ಬೊಫೋರ್ಸ್ ಕಂಪನಿಯು ಭಾರತದ ಪ್ರಮುಖ ರಾಜಕಾರಣಿಗಳಿಗೆ ಹಾಗೂ ರಕ್ಷಣಾ ಅಧಿಕಾರಿಗಳಿಗೆ ಕಿಕ್​ಬ್ಯಾಕ್ ನೀಡಿದೆ ಎಂದು ಸ್ವೀಡಿಷ್ ರೇಡಿಯೋ ವರದಿ ಮಾಡಿತ್ತು. ಆದರೆ, ಇದನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ನಿರಾಕರಿಸಿದ್ದರು.
 • 1987 ಆಗಸ್ಟ್ 6: ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಜಂಟಿ ಸಂಸದೀಯ ಸಮಿತಿ ರಚನೆ. ಎರಡು ವರ್ಷದ ಬಳಿಕ ವರದಿ ಸಲ್ಲಿಸಿದ ಸಮಿತಿ.
 • 1989 ನವೆಂಬರ್ : ಬೊಫೋರ್ಸ್ ಕಿಕ್​ಬ್ಯಾಕ್ ವಿಷಯ ಸಾರ್ವತ್ರಿಕ ಚುನಾವಣೆಯ ವಿಷಯವಾಯಿತು. ಪರಿಣಾಮ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
 • 1989 ಡಿಸೆಂಬರ್ 26: ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಸರ್ಕಾರ ಬೊಫೋರ್ಸ್ ಕಂಪನಿ ಜತೆಗಿನ ವ್ಯವಹಾರಕ್ಕೆ ನಿಷೇಧ ಹೇರಿತು.
 • 1990 ಜನವರಿ 22: ಪ್ರಕರಣದ ಕಿಕ್​ಬ್ಯಾಕ್ ಹಣ ಜಮಾಗೊಂಡಿತ್ತು ಎನ್ನಲಾದ ಸ್ವೆನಸ್ಕಾ ಮತ್ತು ಎಇ ಸರ್ವೀಸಸ್ ಎಂಬ ಕಂಪನಿಗಳ ಬ್ಯಾಂಕ್ ಖಾತೆಗಳನ್ನು ಸ್ವೀಡನ್ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡರು. ಇದರ ಬೆನ್ನಲ್ಲೇ, ಪ್ರಕರಣದ ವಿಚಾರಣೆಯನ್ನು ಸಿಬಿಐ ಕೈಗೆತ್ತಿಕೊಂಡಿತು.
 • 1991 ಮೇ 21: ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದಾಗಲೇ ರಾಜೀವ್ ಗಾಂಧಿ ಹತ್ಯೆ.
 • 1993 ಜುಲೈ 29,30: ಈ ಪ್ರಕರಣದ ಪ್ರಮುಖ ಪಾತ್ರಧಾರಿ ಇಟೆಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಕಿ ಬಂಧನ ಭೀತಿಯಿಂದಾಗಿ ಭಾರತದಿಂದ ಪರಾರಿ.
 • 1997 ಜನವರಿ 21: ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ ಸುಮಾರು 500ಕ್ಕಿಂತಲೂ ಹೆಚ್ಚು ಪುಟಗಳ ರಹಸ್ಯ ದಾಖಲೆಗಳನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದ ಸ್ವೀಡನ್ ಅಧಿಕಾರಿಗಳು.
 • 1997 ಜನವರಿ 30 : ವಿಶೇಷ ತನಿಖಾ ದಳವನ್ನು ರಚಿಸಿದ ಸಿಬಿಐ.
 • 1997 ಫೆಬ್ರವರಿ-ಡಿಸೆಂಬರ್: ಕ್ವಟ್ರೋಕಿ ಹಾಗೂ ಬೋಫೋರ್ಸ್​ನ ಮಾಜಿ ಏಜೆಂಟ್ ವಿನ್ ಛಡ್ಡಾ ಅವರ ಬಂಧಿಸಿ, ಭಾರತಕ್ಕೆ ಹಸ್ತಾಂತರಿಸುವಂತೆ ಆಗ್ರಹಿಸಿ ಮಲೇಷ್ಯಾ ಹಾಗೂ ಯುಎಇ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಿಬಿಐ. ಕ್ವಟ್ರೋಕಿ, ಛಡ್ಡಾ ಹಾಗೂ ರಕ್ಷಣಾ ಕಾರ್ಯದರ್ಶಿ ಎಸ್.ಕೆ.ಭಟ್ನಾಗರ್, ಬೊಫೋರ್ಸ್​ನ ಮಾಜಿ ಮುಖ್ಯಸ್ಥ ಮಾರ್ಟಿನ್ ಅಡ್ಬೋ ಮತ್ತು ಬೊಫೋರ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ. ರಾಜೀವ್ ಗಾಂಧಿ ಹೆಸರು ಆರೋಪಪಟ್ಟಿಯಲ್ಲಿತ್ತಾದರೂ, 1991ರಲ್ಲಿ ಅವರ ಹತ್ಯೆಯಾಗಿದ್ದರಿಂದ ವಿಚಾರಣೆ ನಡೆಸಲಾಗದು ಎಂಬ ಷರಾ ಬರೆದಿದ್ದರು ತನಿಖಾಧಿಕಾರಿಗಳು.
 • 2000 ಮಾರ್ಚ್ 18: ಭಾರತಕ್ಕೆ ಆಗಮಿಸಿದ ವಿನ್ ಛಡ್ಡಾ, ವಿಚಾರಣೆಗಾಗಿ ಸಿಬಿಐ ಎದುರು ಹಾಜರು.
 • 2000 ಡಿಸೆಂಬರ್ 20: ಮಲೇಷ್ಯಾದಲ್ಲಿ ಕ್ವಟ್ರೋಕಿ ಬಂಧನ, ಆದರೆ ಜಾಮೀನು ಪಡೆದ ಕ್ವಟ್ರೋಕಿಗೆ ಸ್ಥಳಬಿಡದಂತೆ ಆದೇಶಿಸಿದ ಅಲ್ಲಿನ ಸ್ಥಳೀಯ ಅಧಿಕಾರಿಗಳು.
 • 2001 ಆಗಸ್ಟ್-ಅಕ್ಟೋಬರ್: ಕ್ಯಾನ್ಸರ್​ನಿಂದಾಗಿ ಮಾಜಿ ರಕ್ಷಣಾ ಕಾರ್ಯದರ್ಶಿ ಭಟ್ನಾಗರ್ ನಿಧನ, ಹೃದಯಾಘಾತದಿಂದ ವಿನ್ ಛಡ್ಡಾ ನಿಧನ.
 • 2004 ಫೆಬ್ರವರಿ 4: ರಾಜೀವ್ ಗಾಂಧಿಗೆ ಕ್ಲೀನ್ ಚಿಟ್ ನೀಡಿದ ದೆಹಲಿ ಹೈಕೋರ್ಟ್.
 • 2007 ಫೆಬ್ರವರಿ 6: ಇಂಟರ್​ಪೋಲ್ ಲುಕ್​ಔಟ್ ನೋಟಿಸ್ ಆಧರಿಸಿ ಅರ್ಜೆಂಟೀನಾದಲ್ಲಿ ಕ್ವಟ್ರೋಕಿ ಬಂಧನ, ಬಳಿಕ ಬಿಡುಗಡೆ.
 • 2009 ಸೆಪ್ಟೆಂಬರ್ 29: ಕ್ವಟ್ರೋಕಿ ವಿರುದ್ಧದ ಪ್ರಕರಣ ಕೈಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್​ಗೆ ತನ್ನ ಅಭಿಪ್ರಾಯ ತಿಳಿಸಿದ ಕೇಂದ್ರ ಸರ್ಕಾರ.
 • 2010 ಡಿಸೆಂಬರ್ 14: ಕ್ವಟ್ರೋಕಿ ವಿರುದ್ಧದ ದೋಷಾರೋಪ ಕೈಬಿಡುವುದಕ್ಕೆ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್.
 • 2011 ಜನವರಿ 3: 23 ವರ್ಷಗಳ ಹಿಂದೆ ನಡೆದ ಬೋಫೋರ್ಸ್ ಗನ್ ಡೀಲ್ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ ಕ್ವಟ್ರೋಕಿ ಹಾಗೂ ಛಡ್ಡಾ ಅವರಿಗೆ ಹಣ ಪಾವತಿಸಿರುವುದರಿಂದಾಗಿ ದೇಶದ ಬೊಕ್ಕಸಕ್ಕೆ 41.24 ಕೋಟಿ ರೂಪಾಯಿ ನಷ್ಟವಾಗಿರುವುದಾಗಿ ಒಂದು ಐ-ಟಿ ಟ್ರಿಬ್ಯೂನಲ್ ತೀರ್ಪು ನೀಡಿತ್ತು.
 • 2011 ಮಾರ್ಚ್ 4: ಕ್ವಟ್ರೋಕಿ ವಿರುದ್ಧದ ಆರೋಪ ಕೈಬಿಡಲು ಸಿಬಿಐಗೆ ಅನುಮತಿ ನೀಡಿದ ದೆಹಲಿ ಕೋರ್ಟ್.
 • 2013 ಜುಲೈ 13: ಇಟಲಿಯ ಮಿಲಾನ್​ನಲ್ಲಿ ಹೃದಯಾಘಾತದಿಂದ ಒಟ್ಟಾವಿಯೋ ಕ್ವಟ್ರೋಕಿ ನಿಧನ.

 ಎಂ-777 ಒಪ್ಪಂದದ ಹಾದಿ

 • 2010ರ ಜನವರಿಯಲ್ಲಿ 647 ಮಿಲಿಯನ್ ಡಾಲರ್​ಗೆ 145 ಎಂ-777 ಫಿರಂಗಿಗಳ ಮಾರಾಟಕ್ಕೆ ಅಮೆರಿಕ ಯೋಜನೆ ಹಾಕಿತ್ತು.
 • ಆದರೆ ಭಾರಿ ಬೆಲೆ ಮತ್ತು ಡೆಲಿವರಿ ನಂತರದ ಸೇವೆಗಳನ್ನು ನೀಡದಿರುವ ಹಿನ್ನೆಲೆಯಲ್ಲಿ ಒಪ್ಪಂದ ಅಂತಿಮ ಹಂತ ತಲುಪಿರಲಿಲ್ಲ.
 • 2016ರ ನವೆಂಬರ್​ನಲ್ಲಿ 737 ಮಿಲಿಯನ್ ಡಾಲರ್(4,779 ಕೋಟಿ ರೂಪಾಯಿ)ಗೆ 145 ಫಿರಂಗಿಗಳ ಒದಗಿಸುವಿಕೆ ಒಪ್ಪಂದಕ್ಕೆ ಸಿಸಿಎಸ್ ಅನುಮತಿ ನೀಡಿತ್ತು.
 • ಮೊದಲ ಹಂತದಲ್ಲಿ 25 ಫಿರಂಗಿಗಳನ್ನು ಬಿಎಇ ಒದಗಿಸಲಿದೆ. ಉಳಿದ ಫಿರಂಗಿಗಳ ಬಿಡಿಭಾಗಗಳನ್ನು ಭಾರತಕ್ಕೆ ತಂದು ಇಲ್ಲಿನ ಘಟಕಗಳಲ್ಲಿಯೇ ಜೋಡಿಸಲಿದೆ.
 • 155ಎಂಎಂ/39 ಕ್ಯಾಲಿಬರ್​ನ ಫಿರಂಗಿಗಳು 24ರಿಂದ 40 ಕಿ.ಮೀ. ದೂರಕ್ಕೆ ಗುರಿಯಿಟ್ಟು ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ಸೇನೆಗೆ ಇನ್ನಷ್ಟು ಬಲ

ಎಂ-777 ಫಿರಂಗಿಗಳ ಬೆನ್ನಲ್ಲೇ ಲಾರ್ಸೆನ್ ಆಂಡ್ ಟೂಬ್ರೊ ಮತ್ತು ದಕ್ಷಿಣ ಕೊರಿಯಾದ ಹಾನ್ವಾ ಟೆಕ್​ವಿನ್ ಸಂಸ್ಥೆ ಕಳೆದ ಏಪ್ರಿಲ್ 21ರಂದು ಮಾಡಿಕೊಂಡಿರುವ 4,684 ಕೋಟಿ ರೂಪಾಯಿಯ ಒಪ್ಪಂದದಂತೆ 155ಎಂಎಂ/ 52 ಕ್ಯಾಲಿಬರ್​ನ ಆರ್ಟಿಲರಿ ಗನ್​ಗಳನ್ನು ತಯಾರಿಸಲಿವೆ. ಎಲ್ ಆಂಡ್ ಟಿ ಮಹಾರಾಷ್ಟ್ರದ ಪುಣೆಯ ತಾಲೆಗಾಂವ್​ನಲ್ಲಿರುವ ಘಟಕದಲ್ಲಿ 100 ಕೆ9 ವಜ್ರಾ-ಟಿ ಗನ್​ಗಳ ತಯಾರಿ ಕಾರ್ಯ ಆರಂಭಿಸಲಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಸೇನೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಎಚ್​ಟಿಡಬ್ಲ್ಯು ಕೆ9 ಥಂಡರ್ ಮತ್ತು ಕೆ9 ವಜ್ರಾ -ಟಿ ಸುಧಾರಿತ ಮಾದರಿಯನ್ನು ಭಾರತದ ಅವಶ್ಯಕತೆಗಳನ್ನು ಆಧರಿಸಿ ನಿರ್ವಿುಸಲು ನಿರ್ಧರಿಸಲಾಗಿದೆ.

ಫಿರಂಗಿಗಳಿಂದ ಬಲವರ್ಧನೆ

100 ಕೆ9 ವಜ್ರಾ-ಟಿ ಫಿರಂಗಿಗಳ ತಯಾರಿಕೆಗಾಗಿ ಎಲ್ ಆಂಡ್ ಟಿ ಸಂಸ್ಥೆಯೊಂದಿಗೆ ರಕ್ಷಣಾ ಸಚಿವಾಲಯ 4,366 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ದಕ್ಷಿಣ ಕೊರಿಯಾದ ಹಾನ್ವಾ ಟೆಕ್​ವಿನ್ ಸಹಭಾಗಿತ್ವದಲ್ಲಿ ಉತ್ಪಾದನೆ ಆರಂಭಿಸಲಿದೆ.

ಧನುಷ್ ಫಿರಂಗಿಗಳನ್ನು ಅಂತಿಮ ಹಂತದ ಪರೀಕ್ಷೆಗಳಿಗೆ ಒಳಪಡಿಸುತ್ತಿದ್ದು, ಸೇನೆ 1,260 ಕೋಟಿ ರೂಪಾಯಿಗೆ 114 ಗನ್​ಗಳ ಒದಗಿಸಲು ಒಪ್ಪಂದ ಮಾಡಿದೆ. ಸೇನೆಗೆ ಸದ್ಯ 414 ಗನ್​ಗಳ ಅಗತ್ಯವಿದೆ.

ಆಧುನೀಕರಣಕ್ಕೆ ಹಗರಣ ಅಡ್ಡಿ

 • 1986ರ ಬೊಫೋರ್ಸ್ ಹಗರಣದ ಬಳಿಕ 155 ಎಂಎಂ ಸಾಮರ್ಥ್ಯ ಫಿರಂಗಿಗಳನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ.
 • ಬೊಫೋರ್ಸ್ ನಂತರ 2005ರಲ್ಲಿ ನಡೆದ ದಕ್ಷಿಣ ಆಫ್ರಿಕಾ ಡೆನೆಲ್, 2009ರ ಸಿಂಗಾಪೂರ ಟೆಕ್ನಾಲಜಿ ಕೈನೆಟಿಕ್ಸ್ ಭ್ರಷ್ಟಾಚಾರ ಪ್ರಕರಣಗಳು ಸೇನೆಯ ಆಧುನೀಕರಣಕ್ಕೆ ಅಡ್ಡಿಯಾಗಿದ್ದವು.
 • 1 ಲಕ್ಷ ಕೋಟಿ ರೂಪಾಯಿ ಮೊತ್ತದಲ್ಲಿ ಮಾಡಲಿರುವ ಸೇನೆಯ ಪ್ರಮುಖ ಆಧುನೀಕರಣ ಯೋಜನೆ ‘ಪರ್ಸ್​ಪೆಕ್ಟಿವ್ ಆರ್ಟಿಲರಿ ಪ್ರೊಫೈಲ್ 2027’ ಇದೀಗ ಆರಂಭ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

Back To Top