Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಅಂತರ ನಿರ್ವಿುಸಿ, ಸಂಬಂಧ ಉಳಿಸಿ…

Saturday, 22.04.2017, 3:00 AM       No Comments

ಲವತ್ತೈದು ವರ್ಷ ದಾಟಿದ ಆಕೆ ನಮ್ಮ ಸೆಂಟರಿಗೆ ಬಂದು ನನ್ನ ಮುಂದೆ ಕೌನ್ಸೆಲಿಂಗ್​ಗೆ ಕುಳಿತಿದ್ದರು. ‘ಒಂದು ಫೋನ್ ಮಾಡಿ ಆಮೇಲೆ ನಿಮ್ಮ ಹತ್ರ ಮಾತಾಡಲಾ?’ ಅಂತ ಪರ್ವಿುಷನ್ ಕೇಳಿದರು. ನಾನುತ್ತರಿಸುವ ಮೊದಲೇ ಅವರು ಮೊಬೈಲಿನಲ್ಲಿ ಮುಳುಗಿದ್ದರು- ‘ಚಿನ್ನು ಮನೆಗೆ ಬಂದೆಯಾ ಪುಟ್ಟ? ಫ್ಲಾಸ್ಕಲ್ಲಿ ಹಾಲಿಟ್ಟಿದೀನಿ ತಗೋ. ಫ್ರಿಜ್​ನಲ್ಲಿ ತಿಂಡಿಯಿದೆ. ಓವನ್ನಿನಲ್ಲಿ ಬಿಸಿ ಮಾಡ್ಕೊಂಡು ತಿನ್ನು ಚಿನ್ನಿ. ಹಾಗೇ ತಿನ್ಬೇಡ ಗಂಟಲುನೋವು ಬರುತ್ತೆ ಬಂಗಾರ. ತಿಂಡಿ ತಿಂದಮೇಲೆ ಓದುತ್ತಾ ಕೂತ್ಕೋ. ಆಟಕ್ಕೆ ಹೋಗ್ಬೇಡ. ನಾನು ಇನ್ನು ಒಂದ್ ಗಂಟೇಲಿ ಮನೆಗೆ ಬರ್ತೀನಿ. ಆಮೇಲೆ ಬೇಕಾದ್ರೆ ಫ್ರೆಂಡ್ ಮನೆಗೆ ಹೋಗು. ಸರಿಯಾಗಿ ತಿಂಡಿ ತಿನ್ನಪ್ಪ ಮರೀ ಮರ್ತಬಿಡಬೇಡ’. ಹೀಗೇ ಸಲಹೆಗಳ ಸರಮಾಲೆ ಹದಿನೈದು ನಿಮಿಷ ಸಾಗುತ್ತಾ ಹೋಯಿತು. ಈ ಮಾತುಗಳನ್ನು ಆಗ ಕೇಳುತ್ತಿದ್ದ ನನಗೂ, ಈಗ ಓದುತ್ತಿರುವ ನಿಮಗೂ ಈ ಚಿನ್ನು, ಬಂಗಾರ, ಪುಟ್ಟ, ಮರಿ ಮುಂತಾದ ಸಂಬೋಧನೆಗಳಿಂದ ಪ್ರೖೆಮರಿ ಅಥವಾ ಮಿಡ್ಲ್​ಸ್ಕೂಲಿನಲ್ಲಿ ಓದುತ್ತಿರುವ ಹುಡುಗನ ಚಿತ್ರಣ ಕಣ್ಣಮುಂದೆ ಬರುತ್ತದೆ ಅಲ್ಲವೇ? ಆದರೆ ಆ ಚಿನ್ನು ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ಬಿ.ಇ. ಅಂತಿಮ ವರ್ಷದ ಪರೀಕ್ಷೆ ಮುಗಿಸಿ, ಕ್ಯಾಂಪಸ್ ಇಂಟರ್​ವ್ಯೂನಲ್ಲಿ ಮಲ್ಟಿ ನ್ಯಾಷನಲ್ ಕಂಪನಿಗೆ ಆಗಲೇ ಸೆಲೆಕ್ಟ್ ಆಗಿ, ಕೆಲವೇ ತಿಂಗಳಲ್ಲಿ ಮುಂಬೈಗೆ ನಂತರ ಅಮೆರಿಕಕ್ಕೆ ಹಾರಲಿರುವವನು! ಈತನ ತಾಯಿಗೆ ಮಗ ದೂರ ಹೋದಮೇಲೆ ತನ್ನ ಬದುಕು ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ‘ಈ ಕಾಲದಲ್ಲಿದು ಸಹಜ, ಅವನ ಆಸೆಗಳಿಗೆ ನಾವು ಅಡ್ಡಿ ಮಾಡಬಾರದು’ ಎಂದು ಗಂಡ ಎಷ್ಟೇ ಹೇಳಿದರೂ ಈಕೆಗೆ ಸಹಿಸಲಾಗುತ್ತಿಲ್ಲ. ನಿದ್ರೆಯಿಲ್ಲ, ಬೆನ್ನುನೋವು, ತಲೆನೋವು- ‘ಈ ಎಲ್ಲವೂ ಸೈಕೋಸೊಮ್ಯಾಟಿಕ್’ ಎಂದು ಈಕೆಯ ಮನೆವೈದ್ಯರು ಕೌನ್ಸೆಲಿಂಗ್ ಸೆಂಟರ್ ದಾರಿ ತೋರಿಸಿದ್ದಾರೆ!

ಮತ್ತೊಂದು ಗಂಡನದು ಇನ್ನೂ ವಿಚಿತ್ರ ನಡವಳಿಕೆ. ಹಾಗೆ ನೋಡಿದರೆ ಅವರದ್ದು ಆದರ್ಶ ದಾಂಪತ್ಯವೇ! ಇಬ್ಬರೂ ಉದ್ಯೋಗಸ್ಥರು. ಇಷ್ಟಪಟ್ಟು ಮದುವೆಯಾದವರು. ಅವಳ ಯಾವ ಆಸೆಯನ್ನೂ ಅವನು ತಿರಸ್ಕರಿಸುವುದಿಲ್ಲ, ಅವನ ಉದಾರ ಗುಣವನ್ನು ಅವಳೂ ಮೆಚ್ಚಿಕೊಳ್ಳುತ್ತಾಳೆ! ಒಂದು ವರ್ಷ ಕಾಲ ಬದುಕು ಸುಮಧುರವಾಗಿಯೇ ಇತ್ತು. ಈಗಲೂ ಚೆನ್ನಾಗಿಯೇ ಇದೆ. ಆದರೆ ಒಂದೇ ಒಂದು ಅಪಸ್ವರ ಏಳುತ್ತಿದೆ. ಮದುವೆಯಾದ ತಕ್ಷಣ ಇಬ್ಬರೂ ಲಂಡನ್ನಿನಲ್ಲಿ ಕೆಲಸದ ಮೇಲೆ ಹನ್ನೊಂದು ತಿಂಗಳಿದ್ದರು. ಅಲ್ಲಿದ್ದಾಗ ಬದುಕಿನಲ್ಲಿ ಯಾವ ತಂಟೆ ತಕರಾರೂ ಇರಲಿಲ್ಲ. ಇಲ್ಲಿಗೆ ಬಂದ ಮೇಲೆ ಸಣ್ಣ ಕಿರಿಕಿರಿ ಶುರುವಾಗಿದೆ. ‘ಮುಂದೆ ಏನುಗತಿ’ ಎನ್ನುವ ಚಿಂತೆ ಅವಳನ್ನು ಕಾಡುತ್ತಿದೆ. ಸಮಸ್ಯೆ ಇಷ್ಟೇ- ಅವಳು ಯಾವ ಕಾರಣಕ್ಕೂ ಒಂದು ನಿಮಿಷವೂ ಸೀರೆಯುಡಬಾರದು! ಅದಕ್ಕೆ ಅವನು ಕೊಡುವ ಕಾರಣಗಳು- ಸುಂದರಿಯೂ ನೀಳದೇಹಿಯೂ ಆದ ಅವಳಿಗೆ ಸೀರೆ ಚೆನ್ನಾಗಿ ಕಾಣುವುದಿಲ್ಲ. ಚೂಡೀದಾರ್, ಜೀನ್ಸ್ ಏನಾದರೂ ತೊಡಲಿ, ಸೀರೆ ಬೇಡ. ಮತ್ತೊಂದು ಕಾರಣ ಸೀರೆಯುಟ್ಟರೆ ಪಕ್ಕದಿಂದ ಸೊಂಟ, ಹೊಟ್ಟೆ ಕಾಣಿಸುತ್ತದೆ. ದಂತದ ಮೈಬಣ್ಣದ ಅವಳು ಹಾಗೆಲ್ಲಾ ಮೈ ತೋರಿಸಿಕೊಳ್ಳುವುದು ಅವನಿಗೆ ಇಷ್ಟವಿಲ್ಲ. ‘ಮೇಡಂ ಮದುವೆಯಲ್ಲಿ ನನ್ನತ್ತೆ ನನಗೆ ಹನ್ನೆರಡು ಭಾರಿ ಸೀರೆ ಕೊಟ್ಟಿದ್ದಾರೆ, ನನ್ನ ತಾಯಿಯಂತೂ ಒಬ್ಬಳೇ ಮಗಳೆಂದು ಬೀರುವಿನ ತುಂಬಾ ಸೀರೆ ಪೇರಿಸಿಟ್ಟಿದ್ದಾರೆ. ಇವನು ನೋಡಿದರೆ ಮದುವೆಮನೆಗೆ ಹೋಗಬೇಕಾದರೂ ಚೂಡೀದಾರೇ ಹಾಕ್ಕೋ ಅಂತ ತಗಾದೆ ತೆಗೆಯುತ್ತಾನೆ. ಅದಕ್ಕಾಗಿ ಹದಿನೈದು, ಇಪ್ಪತ್ತು, ಮೂವತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಗ್ರ್ಯಾಂಡ್ ಆಗಿರೋ ಚೂಡೀದಾರ್, ಗಾಗ್ರಾ ಮತ್ತು ಉದ್ದನೆಯ ಟಾಪ್​ಗಳನ್ನು ತಂದಿಟ್ಟಿದ್ದಾನೆ. ಸೀರೆಗಿರುವ ಲಕ್ಷಣ ಅವಕ್ಕೆಲ್ಲಾ ಇರುತ್ತಾ ಮೇಡಂ? ನನಗೂ ನನ್ನದೇ ಆದ ಇಷ್ಟ ಅಂತ ಇರುತ್ತಲ್ವಾ? ನನಗಂತೂ ಇವನನ್ನು ಪ್ರೀತಿಸಿ ಮದುವೆಯಾಗಿ ತಪ್ಪು ಮಾಡಿಬಿಟ್ಟಿದ್ದೀನಾ ಅನ್ನಿಸುತ್ತಿದೆ’ ಅಲವತ್ತುಕೊಳ್ಳುತ್ತಾಳೆ ಅವಳು. ಅವನಿಗೆ ಅನುಮಾನದ ಗೀಳು ರೋಗವೇನೂ ಇಲ್ಲ. ಅವಳು ತನ್ನ ಸಹೋದ್ಯೋಗಿಗಳನ್ನು ಮನೆಗೆ ಕರೆಯುತ್ತಾಳೆ. ಒಮ್ಮೊಮ್ಮೆ ಪಿಕ್​ನಿಕ್ ಹೋಗುತ್ತಾರೆ. ಅವಳ ಹಳೆಯ ಸ್ನೇಹಿತನೊಬ್ಬ ತಿಂಗಳಿಗೊಮ್ಮೆ ಬಂದು ಇವರ ಮನೆಯಲ್ಲೇ ಒಂದೆರಡು ದಿನವಿರುತ್ತಾನೆ. ಅವನ್ನೆಲ್ಲಾ ತುಂಬಾ ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸುವ ಈ ಮಹಾನುಭಾವ ಸೀರೆಗೆ ಮಾತ್ರ ತಗಾದೆ ತೆಗೆಯುತ್ತಾನೆ!

ಮೇಲಿನ ಎರಡೂ ಪ್ರಸಂಗಗಳಲ್ಲಿ ಒಂದು ಸಮಾನ ಅಂಶವಿದೆ. ಅದೆಂದರೆ ಸಂಬಂಧಗಳಲ್ಲಿ ಅಂತರವನ್ನು ಕಾಪಾಡಿಕೊಳ್ಳದೇ ಒಬ್ಬರ ಖಾಸಗಿ ವರ್ತಲದಲ್ಲಿ ಮತ್ತೊಬ್ಬರು ಅನವಶ್ಯಕವಾಗಿ ಅತಿಕ್ರಮಪ್ರವೇಶ ಮಾಡಿ ನುಗ್ಗುವುದು! ಮತ್ತು ತಮ್ಮ ಅಭಿಪ್ರಾಯವನ್ನು ಹೇರುವುದು! ಪ್ರತಿಯೊಬ್ಬ ವ್ಯಕ್ತಿಗೂ ಒಂದು ಪ್ರತ್ಯೇಕವಾದ ವ್ಯಕ್ತಿತ್ವ ಇರುತ್ತದೆ. ತಮ್ಮದೇ ಆದ ‘ಖಾಸಗಿತನ’ ಇರುತ್ತದೆ. ಅದರಲ್ಲಿ ‘ನಾನು’ ಎನ್ನುವ ಸ್ವಯಂಭು ಪ್ರತಿಷ್ಠಾಪಿತನಾಗಿರುತ್ತಾನೆ. ಅದರ ಸುತ್ತ ಖಾಸಗಿತನದ ‘ಆತ್ಮಪ್ರತಿಷ್ಠೆ’ ಜಾಗೃತವಾಗಿಯೇ ಇರುತ್ತದೆ. ಅದಕ್ಕೆ ಯಾರಿಂದಲಾದರೂ ಒತ್ತಡ ಬಂದರೆ ಬದುಕು ದುಸ್ತರವೆನಿಸುತ್ತದೆ. ಗಂಡ ಹೆಂಡತಿಯರಲ್ಲಾಗಲೀ, ಹೆತ್ತವರು ಮತ್ತು ಮಕ್ಕಳಲ್ಲಾಗಲೀ, ಅಕ್ಕ-ತಂಗಿ, ಅಣ್ಣ-ತಮ್ಮಂದಿರಲ್ಲಾಗಲೀ ಒಂದು ನಿಯಮ ಸಹಜವಾಗಿ ಏರ್ಪಟ್ಟಿರಬೇಕು. ಒಬ್ಬರನ್ನೊಬ್ಬರು ಆದರ ಮತ್ತು ಗೌರವಗಳಿಂದ ನಡೆಸಿಕೊಳ್ಳಬೇಕು. ಮತ್ತು ಆರೋಗ್ಯಕರವಾದ ಅಂತರವನ್ನು ಕಾಯ್ದುಕೊಳ್ಳಬೇಕು! ಒಬ್ಬರ ಇಷ್ಟವನ್ನು ಅನಿಸಿಕೆಗಳನ್ನು (ಅದು ಅವರ ಸ್ವಂತ ಬದುಕಿಗೆ ಸಂಬಂಧಪಟ್ಟಿದ್ದಾದರೆ) ಮತ್ತೊಬ್ಬರು ಗೌರವಿಸಬೇಕು. ಉದಾಹರಣೆಗೆ ನನ್ನ ಪರಿಚಿತರ ಮಗನೊಬ್ಬ ಕಾಲೇಜು ಹುಡುಗ; ಉದ್ದಕ್ಕೆ ಗಡ್ಡವನ್ನೂ ತಲೆ ಕೂದಲನ್ನು ಬೆಳೆಸಿದ. ಅವನ ಅಪ್ಪ-ಅಮ್ಮ ಇಬ್ಬರೂ ದಿನಬೆಳಗಾದರೆ ಮಹಾಪರಾಧ ಮಾಡಿದಂತೆ ಟೀಕಿಸಲು ಪ್ರಾರಂಭಿಸಿದರು. ಈ ವಯಸ್ಸಿನಲ್ಲಿ ಮಕ್ಕಳು ಯಾರುಯಾರನ್ನೋ ನೋಡಿ ಪ್ರಭಾವಿತರಾಗಿ ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಳ್ಳುವುದು ಸಹಜ. ಒಂದೆರಡು ತಿಂಗಳು ಸುಮ್ಮನಿದ್ದರೆ ಅವನಾಗಿಯೇ ಮೊದಲಿನ ಸ್ಥಿತಿಗೆ ಬರುತ್ತಿದ್ದ. ಆದರೆ ಈ ಜನ ಸುಮ್ಮನಿರಬೇಕಲ್ಲ? ರೋಸಿಹೋದ ಅವನು ಒಂದು ಬೆಳಗ್ಗೆ ಕೂದಲನ್ನೆಲ್ಲಾ ತೆಗೆಸಿ ಬೋಳನಾಗಿ ಬಂದು ನಿಂತ! ಇವರೋ ಮಹಾ ಸಂಪ್ರದಾಯಸ್ಥರು. ತಂದೆ ಬದುಕಿರುವಾಗ ಹಾಗೆ ತಲೆಗೂದಲನ್ನು ತೆಗೆಸಬಾರದಂತೆ! ಇವನು ಬೋಳು ಮಾಡಿಕೊಂಡನಲ್ಲ, ಅದಕ್ಕೆ ಮತ್ತೆ ಕಿರಿಕಿರಿ!

ಮಗು ತಾಯಿಯ ಹೊಟ್ಟೆಯಲ್ಲಿರುವಾಗ ಆಹಾರಕ್ಕೆ, ಉಸಿರಿಗೆ ಎಲ್ಲಕ್ಕೂ ತಾಯಿಯನ್ನೇ ಅವಲಂಬಿಸಿರುತ್ತದೆ. ಜನನವಾದ ನಂತರವೂ ಐದುವರ್ಷಗಳವರೆಗೆ ಎಲ್ಲಕ್ಕೂ ಹೆತ್ತವರ ಮೇಲೆ ಅವಲಂಬನೆ ಇದ್ದೇಇರುತ್ತದೆ. ಆ ನಂತರ ನಿಧಾನವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಂತ ವ್ಯಕ್ತಿತ್ವ ಬೆಳೆಯಲು ಪ್ರಾರಂಭವಾಗುತ್ತದೆ. ಹದಿನೆಂಟು ವಯಸ್ಸಿನ ವೇಳೆಗೆ ಅದು ಸಂಪೂರ್ಣವಾಗಿ ‘ಸ್ವತಂತ್ರ ವ್ಯಕ್ತಿತ್ವ’ ಆಗಿರುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಹದಿನಾರಕ್ಕೇ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಸಹ ಹೆತ್ತವರನ್ನು ಬಿಟ್ಟುಹೋಗಿ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಪ್ರಾರಂಭಿಸುತ್ತಾರೆ. ‘ಟ್ಯೂಸ್​ಡೇಸ್ ವಿತ್ ಮೋರಿ’, ‘ದಿ ಫೈವ್ ಪೀಪಲ್ ಯು ಮೀಟ್ ಇನ್ ಹೆವೆನ್’ ಮುಂತಾದ ಕಾದಂಬರಿಗಳನ್ನು ಬರೆದಿರುವ ಮಿಚ್ ಆಲ್ಬಂ ತಾವು ಹದಿನೆಂಟು ವಯಸ್ಸಾದರೂ ಹೆತ್ತವರ ಜತೆಯಲ್ಲೇ ಇದ್ದುದಕ್ಕೆ ಸ್ನೇಹಿತರಿಂದ ಗೇಲಿಗೊಳಪಡಬೇಕಾಯಿತು, ಅಷ್ಟೆ ಅಲ್ಲ ಅವರಮ್ಮನಿಗೂ ‘ನನ್ನ ಮಗನಿಗೇನೋ ಸಮಸ್ಯೆಯಿದೆ ಅದಕ್ಕೇ ನನ್ನ ಜತೆಗಿದ್ದಾನೆ’ ಎಂದು ಚಿಂತಿಸುವಂತೆ ಆಯಿತು ಎಂದು ಬರೆದುಕೊಳ್ಳುತ್ತಾರೆ!!

ಇಷ್ಟೊಂದು ಪ್ರತ್ಯೇಕತೆ ನಮ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ ಬಿಡಿ. ಹಾಗೆ ಮಕ್ಕಳು ಮನೆಬಿಟ್ಟು ಹೋಗಬೇಕಾಗಿಯೂ ಇಲ್ಲ. ನಮ್ಮದು ಇಡೀ ಜಗತ್ತಿನಲ್ಲೇ ಸುಭದ್ರ ಎನ್ನಿಸುವಂಥ ಕುಟುಂಬ ವ್ಯವಸ್ಥೆ! ಮಕ್ಕಳನ್ನು ಬೆಳೆಸುವ ಕ್ರಮದ ಬಗ್ಗೆ ಒಂದು ಚೆಂದದ ಸುಭಾಷಿತವೇ ಇದೆ. ಅದರ ಪ್ರಕಾರ ‘ಮೊದಲ ಐದು ವರ್ಷಗಳು ಮಗುವನ್ನು ದೇವರಂತೆ ಕಾಣಬೇಕು’ ಅಂದರೆ ದೇವರನ್ನು ಅದೆಷ್ಟು ಭಯ ಭಕ್ತಿಯಿಂದ ಅನುನಯಿಸುತ್ತೇವೋ ಹಾಗೆಯೇ ‘ಭಯ ಭಕ್ತಿ’ಯ ಜಾಗದಲ್ಲಿ ಪ್ರೀತಿಯನ್ನು ಅಳವಡಿಸಿಕೊಂಡು ಅಪಾರವಾದ ಪ್ರೀತಿಯನ್ನು ಕೊಡಬೇಕು! (ಅತಿಯಾದ ಪ್ರೀತಿಯನ್ನೇ ಭಕ್ತಿ ಎನ್ನುತ್ತಾರೆ). ‘ಐದರಿಂದ ಹದಿನಾರನೇ ವಯಸ್ಸಿನವರೆಗೆ ಶತ್ರುವಿನಂತೆ ಕಾಣಬೇಕು’. ಅಂದರೆ ಹೊಡೆದಾಟ ಬಡಿದಾಟಗಳಲ್ಲ, ಸದಾ ಸಂಶಯದ ಕಣ್ಣಿನಿಂದ ಗಮನಿಸುತ್ತಿರಬೇಕು. ಮಗು ದಾರಿತಪ್ಪದಂತೆ, ಮಗುವಿಗೂ ಗೊತ್ತಾಗದಂತೆ ಗಮನಿಸುವುದು. ‘ಹದಿನಾರರ ನಂತರ ಮಿತ್ರನಂತೆ ಭಾವಿಸಬೇಕು’. ಅಂದರೆ ಪರಸ್ಪರರಲ್ಲಿ ಸಂಕೋಚ, ದಾಕ್ಷಿಣ್ಯಗಳು ಮತ್ತು ಅಭಿಮಾನ ಗೌರವಗಳು ಕೊಟ್ಟುತೆಗೆದುಕೊಳ್ಳುವ ಪ್ರಕ್ರಿಯೆಗೆ ಒಳಗಾಗಬೇಕು. ಆಗ ಸಂಬಂಧಗಳು ಆರೋಗ್ಯವಾಗಿ, ಪರಸ್ಪರಲ್ಲಿ ನೆಮ್ಮದಿಯೂ ಉಂಟಾಗುತ್ತದೆ. ಎಲ್ಲ ಸ್ನೇಹಗಳೂ, ಎಲ್ಲ ಸಂಬಂಧಗಳೂ ಹಿತವಾದ ದಾರಿಯಲ್ಲಿ ನಡೆಯುತ್ತವೆ. ಈಗ ‘ಅಂತರ’ (ಇದಕ್ಕೆ ಮನೋವಿಜ್ಞಾನದಲ್ಲಿ ‘ಸ್ಪೇಸ್’ ಎನ್ನುತ್ತಾರೆ) ಎಂದರೆ ಏನು ಮತ್ತು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ಎಡ್ವರ್ಡ್ ಬುಲ್ಲೋ ಎನ್ನುವ ಕಾವ್ಯಮೀಮಾಂಸಕ ಮತ್ತು ಮನೋವಿಜ್ಞಾನಿ ‘ಸೈಕಿಕಲ್ ಡಿಸ್ಟೆನ್ಸ್’ ಎನ್ನುವ ಸಿದ್ಧಾಂತವನ್ನು ಹೇಳುತ್ತಾನೆ. ಇದು ಕಾವ್ಯಕ್ಕೂ ಅನ್ವಯಿಸುತ್ತದೆ ಮತ್ತು ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧಕ್ಕೂ ಅನ್ವಯಿಸುತ್ತದೆ. ಅವನು ಕೊಡುವ ಉದಾಹರಣೆ ಹೀಗಿದೆ. ‘‘ನಿಮಗೆ ತುಂಬಾ ಚಳಿಯಾಗುತ್ತಿದೆ. ಕೋಣೆಯ ಮೂಲೆಯಲ್ಲಿ ಕೆಂಡದ ಅಗ್ಗಿಷ್ಟಿಕೆ ಇದೆ. ನೀವು ಎಲ್ಲೋ ದೂರ ನಿಂತರೆ ಅದರ ಶಾಖ ನಿಮಗೆ ತಟ್ಟುವುದಿಲ್ಲ, ಚಳಿ ಕಡಿಮೆಯಾಗುವುದಿಲ್ಲ. ಹಾಗೆಂದು ಬೆಂಕಿಯ ಹತ್ತಿರಕ್ಕೇ ಹೋದರೆ ಶಾಖ ಜಾಸ್ತಿಯಾಗಿ ಚರ್ಮ ಸುಡುತ್ತದೆ. ಆದ್ದರಿಂದ ಹಿತವಾದ ಶಾಖ ಬರುವ ಒಂದು ಅಂತರವನ್ನು ಕಾಪಾಡಿಕೊಳ್ಳಬೇಕು. ಹಾಗೆಯೇ ‘ಇಂಟರ್ ಪರ್ಸನಲ್ ರಿಲೇಷನ್​ಶಿಪ್’ ಅಂದರೆ ‘ಬಾಂಧವ್ಯದ ಒಳಮುಖಗಳು’ ಹಿತವಾಗಿರಬೇಕಾದರೆ ಮಾನಸಿಕ ಅಂತರ ನಿರ್ವಿುಸಿಕೊಳ್ಳಬೇಕು. ಅತಿಪ್ರೀತಿ, ಅತಿನಿರೀಕ್ಷೆ ಎಲ್ಲವೂ ಘರ್ಷಣೆಯನ್ನುಂಟು ಮಾಡಿ ಸಂಬಂಧ ಅತಿಯಾದ ಶಾಖದಿಂದ ಒಡೆದು ಚೂರಾಗುತ್ತದೆ. ಹಾಗೆಂದು ತೀರಾ ದೂರವಾಗಿಬಿಟ್ಟರೆ ಪ್ರೀತಿಯ ಕೊಡುಕೊಳ್ಳುವಿಕೆಗಳು ಸಾಧ್ಯವೇ ಆಗುವುದಿಲ್ಲ. ಆದ ಕಾರಣ ಹಿತವಾದ ಅಂತರ ಅತಿಮುಖ್ಯ.

Leave a Reply

Your email address will not be published. Required fields are marked *

Back To Top