Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಅಂತರ್ಜಾಲ ತಾಟಸ್ಥ್ಯ ಮತ್ತು ಅದರ ಪರಿಣಾಮಗಳು

Wednesday, 13.12.2017, 3:05 AM       No Comments

ಅಂತರ್ಜಾಲ ತಾಟಸ್ಥ್ಯವಿಲ್ಲದೆ ಹೋದಲ್ಲಿ, ಏಕಸ್ವಾಮ್ಯತೆಯ ವರ್ತನೆಗಿರುವ ಪ್ರತಿಬಂಧಕಗಳು ಇಲ್ಲದಂತಾಗಿ, ಪ್ರತಿಸ್ಪರ್ಧಿಗಳನ್ನು ತಡೆಯುವ ನಿಟ್ಟಿನಲ್ಲಿ ದೊಡ್ಡ ಕಂಪನಿಗಳು ಸಶಕ್ತವಾಗಿಬಿಡುತ್ತವೆ. ಹೊಸ ವ್ಯವಹಾರ ಸಂಸ್ಥೆಗಳ ಹುಟ್ಟುವಿಕೆಗೆ ಇದು ತಡೆಯೊಡ್ಡುತ್ತದೆ. ಹೊಸ ಮದ್ದುಗಳು ಕಡಿಮೆ ಬೆಲೆಯಿರುವ ಔಷಧಗಳ ಸುದ್ದಿಯೇಳದಂತೆ ಮಾಡುವಲ್ಲಿ ಔಷಧ ಕಂಪನಿಗಳಿಗೆ ಬಲ ಬರಬಹುದು.

‘ವರ್ಲ್ಡ್ ವೈಡ್ ವೆಬ್ ಅನ್ನು ನಾನು ಆವಿಷ್ಕರಿಸಿದಾಗ, ಯಾರೊಬ್ಬರ ಅನುಮತಿಯನ್ನೂ ನಾನು ಕೇಳಬೇಕಾಗಿ ಬರಲಿಲ್ಲ. ಈಗ ಕೋಟ್ಯಂತರ ಮಂದಿ ಅದನ್ನು ಉಚಿತವಾಗಿಯೇ ಬಳಸುತ್ತಿದ್ದಾರೆ. ಅಂತರ್ಜಾಲ ತಾಟಸ್ಥ್ಯವು ಅಂತ್ಯವಾಗುವುದರೊಂದಿಗೆ ಈ ಸೌಲಭ್ಯವೂ ಕೊನೆಗೊಳ್ಳುವುದೇ ಎಂದು ನನಗೆ ಆತಂಕವಾಗಿದೆ’ ಎಂದಿದ್ದಾರೆ ಅಂತರ್ಜಾಲ ಮಾಧ್ಯಮದಲ್ಲಿ ಪರಸ್ಪರ ಸಂವಹಿಸಲು ಬಳಕೆಯಾಗುವ ಪ್ರಾಥಮಿಕ ಸಾಧನವಾದ ‘ವರ್ಲ್ಡ್ ವೈಡ್ ವೆಬ್’ (WWW)ನ ಸೃಷ್ಟಿಕರ್ತ ಟಿಮ್ ಬೆರ್ನರ್ಸ್-ಲೀ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಆರಂಭಿಕ ವರ್ಷಗಳಲ್ಲಿ ಇಂಥದೊಂದು ಪರಿಸ್ಥಿತಿಯಿತ್ತು- ಅದೆಂದರೆ, ನಿಮಗೆ ಬೇಕಾದ ದೂರವಾಣಿ ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿ ಆ ತುದಿಯಲ್ಲಿರುವ ಸಂಬಂಧಪಟ್ಟವರೊಂದಿಗೆ ಮಾತಾಡಬೇಕೆಂದರೆ, ನಿಮ್ಮ ಫೋನೆತ್ತಿಕೊಂಡು ಇಂಥದೊಂದು ಸಂಪರ್ಕ ಕಲ್ಪಿಸಿಕೊಡುವಂತೆ ದೂರವಾಣಿ ಆಪರೇಟರ್​ಗೆ

ಕರೆಮಾಡಿ, ಅವರ ದನಿಗಾಗಿ ಕಾಯಬೇಕಾಗಿ ಬರುತ್ತಿತ್ತು. ಆ ಆಪರೇಟರ್ ಕೂಡ, ದೂರವಾಣಿ ವಿನಿಮಯ ಕೇಂದ್ರವೊಂದರಲ್ಲಿ ಅಳವಡಿಸಲಾಗಿರುವ ದೂರವಾಣಿ ಸ್ವಿಚ್​ಬೋರ್ಡಗಳನ್ನು ಸ್ವತಃ ನಿರ್ವಹಿಸುವ ಮೂಲಕ ದೂರವಾಣಿ ಮಾಧ್ಯಮದ ನೆರವಿನಿಂದ ಜನ-ಜನರ ನಡುವೆ ಸಂಪರ್ಕ ಕಲ್ಪಿಸುವ ಹೊಣೆಹೊತ್ತ ಇಂಥ ಅನೇಕ ಸಿಬ್ಬಂದಿಯ ಪೈಕಿ ಒಬ್ಬರಾಗಿರುತ್ತಿದ್ದರು. ಇಂಥ ಸನ್ನಿವೇಶದಲ್ಲಿ, ಓರ್ವ ಅಂಪೈರ್ ರೀತಿಯಲ್ಲಿ ವರ್ತಿಸುವುದು, ತನ್ನ ಕರ್ತವ್ಯವು ಪಕ್ಷಪಾತರಹಿತವಾಗಿ ಹಾಗೂ ನ್ಯಾಯಸಮ್ಮತವಾಗಿರುವಂತೆ ಖಾತ್ರಿಪಡಿಸುವುದು ಆಪರೇಟರ್ ಎನಿಸಿಕೊಂಡಾತನ ಹೊಣೆಗಾರಿಕೆಯಾಗಿರುತ್ತಿತ್ತು. ಇಷ್ಟೇ ಅಲ್ಲ, ನದಿಯ ಎರಡೂ ದಡಗಳನ್ನು ಸಂರ್ಪಸುವ ಸೇತುವೆಯಂತೆ, ತನ್ನ ಎರಡೂ ತುದಿಯಲ್ಲಿರುವ ಜನರನ್ನು ಬೆಸೆಯುವ ಸಂವಹನಾ ಸಾಧನವಾಗಿ ಟೆಲಿಫೋನ್ ಮಾರ್ಗವು ಕಾರ್ಯನಿರ್ವಸುತ್ತಿತ್ತು; ಮತ್ತು ಇದು ಸಮರ್ಥವಾಗಿ ನೆರವೇರುವಂತಾಗುವ ನಿಟ್ಟಿನಲ್ಲಿ ಆಪರೇಟರ್ ಆದವನು ನ್ಯಾಯಸಮ್ಮತ ರೀತಿಯಲ್ಲಿ ವರ್ತಿಸಬೇಕಾಗುತ್ತಿತ್ತು.

ಸಾರ್ವಜನಿಕ ಸೇತುವೆಯೊಂದರ ಆಪರೇಟರ್ ಆದಾತ, ಜನರ ಉಪಯೋಗಕ್ಕೆಂದು ಮೀಸಲಾದ ಇಂಥ ಸೌಲಭ್ಯವನ್ನು ಬಳಸ ಬಯಸುವ ಜನರಲ್ಲಿ ಸ್ವೇಚ್ಛಾನುಸಾರವಾಗಿ ಭೇದ ಕಲ್ಪಿಸುವುದು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ ದೂರವಾಣಿ ಆಪರೇಟರ್ ಕೂಡ ಯಾವುದೇ ನಿರ್ದಿಷ್ಟ ವ್ಯಕ್ತಿಗೆ ‘ಆದ್ಯತಾ ಉಪಚಾರ’ವನ್ನು ನೀಡುವ ಹಾಗಿರಲಿಲ್ಲ. ಸಾಗಾಣಿಕಾ ವೆಚ್ಚದ ವಿಷಯಕ್ಕೆ ಬಂದಾಗ, ರೈಲುಮಾರ್ಗದ ನಿಯಂತ್ರಕರು, ಅಕ್ಕಿಯ ವಿತರಣೆಗಾರನಿಗೆ ನೀಡಲಾದ ದರಕ್ಕಿಂತ ಉತ್ತಮ ದರವನ್ನು ಗೋಧಿಯ ವಿತರಣೆಗಾರನಿಗೆ ನೀಡುವುದು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ ಇಬ್ಬರು ಗೆಳೆಯರ ನಡುವಿನ ದೂರವಾಣಿ ಕರೆಯೊಂದು ಇಬ್ಬರು ರಹಸ್ಯ ಏಜೆಂಟ್​ಗಳ ನಡುವಿನ ದೂರವಾಣಿ ಕರೆಯಷ್ಟೇ ಮಹತ್ವದ್ದಾಗಿರುತ್ತದೆ. ಮನುಷ್ಯರು ನಿರ್ವಹಿಸುತ್ತಿದ್ದ ದೂರವಾಣಿ ವಿನಿಮಯ ಕೇಂದ್ರಗಳನ್ನು ಯಂತ್ರಗಳು ನಿರ್ವಹಿಸುವಂತಾಗಿರುವ ಇಂದಿನ ‘ಸ್ವಯಂಚಾಲನಾ ಯುಗ’ದಲ್ಲೂ ಈ ಮೂಲಭೂತ ತತ್ತ್ವದ ಅನ್ವಯಿಕೆ ಮುಂದುವರಿದಿದೆ ಎಂಬುದು ಗಮನಿಸಬೇಕಾದ ಸಂಗತಿ. ದೂರವಾಣಿ, ಸಾಗಾಣಿಕೆ, ಕೊಳವೆಮಾರ್ಗಗಳಂಥ ಕೆಲವೊಂದು ವ್ಯವಹಾರಗಳು ಮತ್ತು ಚಟುವಟಿಕೆಗಳು, ಸಾರ್ವಜನಿಕರ ಕ್ಷೇಮ, ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅದೆಷ್ಟು ಬದ್ಧವಾಗಿವೆ, ಆರ್ಥಿಕತೆಯ ಸಮರ್ಪಕ ಕಾರ್ಯಚಟುವಟಿಕೆಗೆ ಅದೆಂಥ ಮಹತ್ವದ ಸಾಧನ-ಸಲಕರಣೆಗಳಾಗಿವೆಯೆಂದರೆ, ಇಂಥ ವ್ಯವಹಾರ ಮತ್ತು ಚಟುವಟಿಕೆಗಳು ನಿರ್ವಹಿಸಲ್ಪಡುತ್ತಿರುವುದು ಖಾಸಗಿ ಸಂಸ್ಥೆಗಳಿಂದ ಎಂಬುದನ್ನೂ ಲೆಕ್ಕಿಸದೆ ಎಲ್ಲರಿಗೂ ಸಮಾನರೀತಿಯಲ್ಲಿ ಸೇವೆ ಸಲ್ಲಿಸುವ ಕರ್ತವ್ಯಬದ್ಧತೆಯನ್ನು ಅವು ಹೊಂದಿರುತ್ತವೆ ಎಂಬ ಗ್ರಹಿಕೆಯಿಂದ ಈ ನ್ಯಾಯಸಮ್ಮತತೆ ಮತ್ತು ಪಕ್ಷಪಾತರಾಹಿತ್ಯದಂಥ ತತ್ತ್ವಗಳು ಹೊಮ್ಮಿವೆಯೆನ್ನಬೇಕು. ಆದ್ದರಿಂದ, ಇಂಥ ವ್ಯವಹಾರ ಸಂಸ್ಥೆಗಳು ಸಾರ್ವಜನಿಕರಿಗೆ ಯಾವುದೇ ಪಕ್ಷಪಾತವಿಲ್ಲದೆ ಸೇವೆ ಒದಗಿಸುವುದು ಅಗತ್ಯವಾಗಿರುತ್ತದೆ; ಎಲ್ಲರಿಗೂ ಸೇವೆ ಸಲ್ಲಿಸುವ, ಅದು ಸಮಾನವಾಗಿರುವಂತೆ ನೋಡಿಕೊಳ್ಳುವ ಕರ್ತವ್ಯ ಅವುಗಳದ್ದಾಗಿರುತ್ತದೆ.

ಬದಲಾದ ದೂರಸಂಪರ್ಕ ಕ್ಷೇತ್ರ: ವರ್ಷಗಳು ಉರುಳಿದಂತೆ, ದೂರವಾಣಿ ಸೇವೆಗಳು ಸಾಗಣೆಸೇವೆಯಷ್ಟೇ ಮಹತ್ತರವೆನಿಸಿಬಿಟ್ಟಿವೆ. 1850ರ ದಶಕದಲ್ಲಿ ಟೆಲಿಗ್ರಾಫ್ ವ್ಯವಸ್ಥೆಯ ಪರಿಚಯವಾಗುವುದರೊಂದಿಗೆ, ಭಾರತದಲ್ಲಿ ದೂರಸಂಪರ್ಕ ವ್ಯವಸ್ಥೆ/ಸೇವೆಗಳಿಗೆ ಅಸ್ತಿಭಾರ ಬಿತ್ತೆನ್ನಬೇಕು. 1880ರ ದಶಕದಲ್ಲಿ, ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತು ಅಹ್ಮದಾಬಾದ್​ಗಳಲ್ಲಿ ದೂರವಾಣಿ ವಿನಿಮಯ ಕೇಂದ್ರಗಳನ್ನು ತೆರೆಯಲೆಂದು ಇಂಗ್ಲೆಂಡ್​ನ ‘ಓರಿಯೆಂಟಲ್ ಟೆಲಿಫೋನ್ ಕಂಪನಿ ಲಿಮಿಟೆಡ್’ಗೆ ಪರವಾನಗಿಗಳನ್ನು ನೀಡಲಾಯಿತು. 1960ರಲ್ಲಿ, ಮೊಟ್ಟಮೊದಲ ‘ಚಂದಾದಾರ ಟ್ರಂಕ್ ಡಯಲಿಂಗ್ ಮಾರ್ಗ’ವು ಲಖನೌ ಮತ್ತು ಕಾನ್ಪುರಗಳ ನಡುವೆ ಕಾರ್ಯಾರಂಭಮಾಡಿದರೆ, 1995ರಲ್ಲಿ, ಮೊದಲ ಮೊಬೈಲ್ ದೂರವಾಣಿ ಸೇವೆಗೆ ಚಾಲನೆ ಸಿಕ್ಕಿತು. ಅಂತರ್ಜಾಲ ವ್ಯವಸ್ಥೆಯ ಪರಿಚಯವಾಗಿದ್ದೂ 1995ರಲ್ಲೇ. ಕಾಲ ಉರುಳಿದಂತೆ, ಭಾರತದ ದೂರಸಂಪರ್ಕ ಜಾಲವು ದೂರವಾಣಿ ಬಳಕೆದಾರರ (ಸ್ಥಿರ ಮತ್ತು ಸಂಚಾರಿ ಫೋನುಗಳೆರಡನ್ನೂ ಪರಿಗಣಿಸಿದಾಗ) ಸಂಖ್ಯೆಯ ವಿಷಯದಲ್ಲಿ ವಿಶ್ವದಲ್ಲೇ ಎರಡನೇ ಅತಿದೊಡ್ಡದು ಎನ್ನುವಷ್ಟರ ಮಟ್ಟಿಗೆ ಬೆಳೆದುನಿಂತಿದೆ; 2017ರ ಸೆಪ್ಟೆಂಬರ್ 30ರವರೆಗಿನ ಲಭ್ಯಮಾಹಿತಿಯಂತೆ ನಮ್ಮಲ್ಲಿ 1.206 ಶತಕೋಟಿ ಚಂದಾದಾರರಿರುವುದೇ ಇದಕ್ಕೆ ಸಾಕ್ಷಿ. ವಿಶ್ವದಲ್ಲಿನ ಅತಿಕಡಿಮೆ ಕರೆ ದರಪಟ್ಟಿಗಳಲ್ಲಿ ಭಾರತದ್ದೂ ಒಂದೆನಿಸಿದೆ. ವಿಶ್ವದ ಎರಡನೇ ಅತಿದೊಡ್ಡ ಅಂತರ್ಜಾಲ ಬಳಕೆದಾರ-ನೆಲೆ ಇರುವುದೂ ಭಾರತದಲ್ಲೇ; 2017ರ ಸೆಪ್ಟೆಂಬರ್ 30ರ ವೇಳೆಗೆ ಇದ್ದಂತೆ ಭಾರತದಲ್ಲಿ 324.89 ದಶಲಕ್ಷ ಅಂತರ್ಜಾಲ ಚಂದಾದಾರರಿರುವುದು ಈ ಮಾತಿಗೆ ಪುಷ್ಟಿ ಒದಗಿಸುತ್ತದೆ.

ಪಕ್ಷಪಾತರಹಿತ ಸೇವೆ ಅಗತ್ಯ: ದೂರವಾಣಿ ಸೇವೆಗಳು ಸಹಜ ಪ್ರಗತಿ ಕಂಡು, ಅಂತರ್ಜಾಲ ಸೇವೆ ಒದಗಿಸುವಷ್ಟು ಬೆಳವಣಿಗೆ ಕಾಣುವುದರೊಂದಿಗೆ, ‘ಸರ್ವೆಸಾಮಾನ್ಯ ವಾಹಕ ನಿಯಮಗಳು’ ಸೇರಿದಂತೆ ದೂರವಾಣಿ ಸೇವೆಗಳನ್ನು ನಿಯಂತ್ರಿಸುತ್ತಿದ್ದ ನಿಯಮಗಳು ಮತ್ತು ತತ್ತ್ವಗಳನ್ನು ಅಂತರ್ಜಾಲ ಸೇವಾ ಪೂರೈಕೆದಾರರು ನಿಸ್ಸಂಶಯವಾಗಿ ಅಳವಡಿಸಿಕೊಂಡರು. ಆದ್ದರಿಂದ, ಅಂತರ್ಜಾಲ ವ್ಯವಸ್ಥೆಯಲ್ಲಿನ ಎಲ್ಲ ದಟ್ಟಣೆಯನ್ನು, ಅಂತರ್ಜಾಲ ಪ್ರವೇಶಾವಕಾಶ ಒದಗಿಸುವ ಕಂಪನಿಗಳು ಸಮಾನವಾಗಿಯೇ ಪರಿಗಣಿಸಬೇಕು. ಹೆಚ್ಚುವರಿ ಹಣ ಪಾವತಿಸುವ ಯಾವುದೋ ಒಂದು ‘ವಿಷಯ ಸರಬರಾಜುಗಾರ’ (Content Provider) ಸಂಸ್ಥೆಯ ಪರವಾಗಿ ಪಕ್ಷಪಾತ ತೋರುವುದಕ್ಕೆ ಇಲ್ಲಾವ ಅವಕಾಶವೂ ಇಲ್ಲ. ಕಾರ್ಯಾಚರಣೆಗೆ ಅಂತರ್ಜಾಲ ಮಾಧ್ಯಮವನ್ನೇ ನೆಚ್ಚಿರುವ ಸಾವಿರಾರು ವಿಭಿನ್ನ ಬಗೆಯ ಸೇವೆಗಳಿವೆ ಎಂಬುದು ಗೊತ್ತಿರುವ ಸಂಗತಿಯೇ. ಆದ್ದರಿಂದ, ಪಕ್ಷಪಾತರಾಹಿತ್ಯದ ಪರಿಕಲ್ಪನೆ ಹೆಚ್ಚು ವ್ಯಾಪಕವಾಗಿ ಅನ್ವಯವಾಗುತ್ತದೆ ಎನ್ನಲಡ್ಡಿಯಿಲ್ಲ. ನ್ಯಾಯಸಮ್ಮತತೆ ಮತ್ತು ಪಕ್ಷಪಾತರಹಿತದಂಥ ಸರ್ವೆಸಾಮಾನ್ಯ ವಾಹಕ ನಿಯಮಗಳನ್ನೀಗ ‘ಅಂತರ್ಜಾಲ ತಾಟಸ್ಥ್ಯ’ ಎಂಬುದಾಗಿ ಉಲ್ಲೇಖಿಸಬೇಕಾಗಿಬಂದಿದ್ದು ಇಲ್ಲಿನ ಏಕೈಕ ವ್ಯತ್ಯಾಸವೆನ್ನಬೇಕು.

ಟ್ರಾಯ್ ವರದಿ: ಭಾರತೀಯ ಗ್ರಾಹಕರಿಗೆ ಕೆಲವೊಂದು ಆಯ್ದ ಅಂತರ್ಜಾಲ ಸೇವೆಗಳಿಗಷ್ಟೇ ಪ್ರವೇಶಾವಕಾಶವನ್ನು ಕೈಗೆಟುಕಿಸುವ ಚಿಂತನೆಯನ್ನು ಫೇಸ್​ಬುಕ್ ಇತ್ತೀಚೆಗೆ ಚರ್ಚೆಗೆ ತಂದಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ‘ಫ್ರೀಬೇಸಿಕ್ಸ್’ ಎಂಬಂತೆ ವಿನ್ಯಾಸಗೊಳಿಸಲಾದ ಆತ್ಮಸಮರ್ಥಕ ಜಾಹೀರಾತು ಕಾರ್ಯಾಚರಣೆಗಳಿಗೆ ಚಾಲನೆ ನೀಡಲಾಯಿತು. ಇದು ನಿಮ್ಮಲ್ಲಿ ಬಹುತೇಕರಿಗೆ ನೆನಪಿರಬಹುದು. ಆದರೆ, ದೇಶದ ದೂರಸಂಪರ್ಕ ಕಾವಲುಸಂಸ್ಥೆಯಾದ ‘ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ’ (ಖ್ಕಅಐ) ಇಂಥ ಯಾವುದೇ ಯೋಜನೆಯನ್ನು ಪರಿಚಯಿಸದಂತೆ 2016ರಲ್ಲಿ ನಿಷೇಧಿಸಿತು. ಅಂತರ್ಜಾಲದ ಮೂಲಕ ಪೂರೈಸಲಾಗುವ ವಿಷಯವನ್ನಾಧರಿಸಿ ಸೇವಾ ಪೂರೈಕೆದಾರ ಸಂಸ್ಥೆಯೊಂದು ವಿಭಿನ್ನ ದತ್ತಾಂಶ ಸೇವೆಗಳಿಗೆ ವ್ಯತ್ಯಾಸಾತ್ಮಕ ದರಗಳನ್ನು ವಿಧಿಸುವಂತಿಲ್ಲ ಎಂದು ಟ್ರಾಯ್ ಅಭಿಪ್ರಾಯಪಟ್ಟಿತು. ಅಷ್ಟೇ ಅಲ್ಲ, ದತ್ತಾಂಶ ಸೇವೆಗಳಿಗಾಗಿ ವ್ಯತ್ಯಾಸಾತ್ಮಕ ದರಗಳನ್ನು ವಿಧಿಸುವುದಕ್ಕೆ ಅನುವುಮಾಡಿಕೊಡುವ ಯಾವುದೇ ವ್ಯವಸ್ಥೆ/ಯೋಜನೆ ಅಥವಾ ಒಡಂಬಡಿಕೆಗೆ ಯಾವ ಸೇವಾ ಪೂರೈಕೆದಾರರೂ ಮುಂದಾಗುವಂತಿಲ್ಲ ಎಂದು ಅದು ನಿರ್ಬಂಧ ವಿಧಿಸಿತು.

ಸರ್ವೆಸಾಮಾನ್ಯ ವಾಹಕ ನಿಯಮಗಳ ಅತಿ ಕಟ್ಟುನಿಟ್ಟಿನ ಜಾರಿಗೆ, ಸಮಕಾಲೀನ ಕಾಲಘಟ್ಟದಲ್ಲಿ ಅತೀವ ಮಹತ್ವವಿದೆ ಎನ್ನಲಡ್ಡಿಯಿಲ್ಲ. ಉದಾಹರಣೆಗೆ, ವಾಟ್ಸಾಪ್, ಫೇಸ್​ಬುಕ್, ಸ್ಕೈಪ್, ಗೂಗಲ್ ಹ್ಯಾಂಗ್​ಔಟ್ಸ್​ನಂಥ ವೇದಿಕೆಗಳು ಮತ್ತು ಮೊಬೈಲ್ ಅಪ್ಲಿಕೇಷನ್​ಗಳ ಆಗಮನದಿಂದಾಗಿ, ದೂರಸಂಪರ್ಕ ಕಂಪನಿಗಳ ಸಾಂಪ್ರದಾಯಿಕ ಆದಾಯದ ಹರಿವುಗಳು (ಅಂತರ್ಜಾಲ ಸೇವಾ ಪೂರೈಕೆದಾರರ ರೀತಿಯಲ್ಲೇ ಇವೂ ದ್ವಿಗುಣಗೊಳ್ಳುವಂಥವು) ಕುಗ್ಗಲಾರಂಭಿಸಿವೆ. ಸಮಂಜಸವೆನ್ನಬಹುದಾದ ಬೆಲೆಯುಳ್ಳ ಮೊಬೈಲ್ ಅಂತರ್ಜಾಲ ದತ್ತಾಂಶ ಪ್ಯಾಕೇಜ್ ಒಂದರ ಅಥವಾ ವೈ-ಫೈ ವ್ಯವಸ್ಥೆಯ ಸುಲಭ ಚಂದಾದಾರಿಕೆಯೊಂದಿಗೆ, ಗ್ರಾಹಕರು ಧ್ವನಿಕರೆ ಮತ್ತು ವಿಡಿಯೋ ಕರೆಗಳನ್ನು ಉಚಿತವಾಗಿ ಮಾಡಲು ಸಾಧ್ಯವಿದೆ; ಅಷ್ಟೇಕೆ, ಪಠ್ಯ ಮತ್ತು ಮಲ್ಟಿಮೀಡಿಯಾ ಸಂದೇಶಗಳನ್ನು ಉಚಿತವಾಗಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ; ಇದು ಹೆಚ್ಚುವರಿ ವೆಚ್ಚವಿಲ್ಲದೆಯೇ ಇಂಥ ಮೊಬೈಲ್ ಅಪ್ಲಿಕೇಷನ್​ಗಳ ಬಳಕೆಯಿಂದ ಒದಗುವ ಸವಲತ್ತು. ಸಾಂಪ್ರದಾಯಿಕ ದೂರವಾಣಿ ಆಯ್ಕೆಗಳ ಮೂಲಕ ಲಭ್ಯವಿರುವ ಇಂಥ ಸಂವಹನಾ ವಿಧಾನಗಳ ಬಳಕೆಯ ವೆಚ್ಚಕ್ಕೆ ಹೋಲಿಸಿದಾಗ, ಮೊಬೈಲ್ ಅಪ್ಲಿಕೇಷನ್​ಗಳು ಹಾಗೂ ಮೊಬೈಲ್ ಅಂತರ್ಜಾಲ ದತ್ತಾಂಶ ಪ್ಯಾಕೇಜ್​ನ ಜಂಟಿವೆಚ್ಚವು ಗಮನಾರ್ಹವಾಗಿ ಕಡಿಮೆಯಿರುತ್ತದೆ ಎಂಬುದು ಅಲ್ಲಗಳೆಯಾಗದ ಸಂಗತಿ. ಅಂತರ್ಜಾಲವು ಸಾರ್ವತ್ರಿಕವಾಗಿ ಮತ್ತು ಇಂಥ ಅಪ್ಲಿಕೇಷನ್​ಗಳು ನಿರ್ದಿಷ್ಟವಾಗಿ ಬೀರಿರುವ ಪ್ರಭಾವದ ಅರಿವು ಹೊಂದಿರುವ ದೂರಸಂಪರ್ಕ ಕಂಪನಿಗಳು (ಇವು ಕೂಡ ಅಂತರ್ಜಾಲ ಸೇವಾ ಪೂರೈಕೆದಾರರ ರೀತಿಯಲ್ಲಿ ದ್ವಿಗುಣಗೊಳ್ಳುವಂಥವು), ಅಂತರ್ಜಾಲ ಸೇವಾ ಪೂರೈಕೆದಾರರಾಗಿ ತಮ್ಮ ಹೆಚ್ಚುವರಿ ಪಾತ್ರದ ಅನುಚಿತ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಹಾಗೂ ‘ಬ್ಯಾಂಡ್​ವಿಡ್ತ್ ನಿಯಂತ್ರಿಸುವಿಕೆ’ಯಂಥ (ಅಂದರೆ, ಅಂತರ್ಜಾಲ ಸೇವಾ ಪೂರೈಕೆದಾರರು ಅಂತರ್ಜಾಲ ಸೇವೆಯನ್ನು ಉದ್ದೇಶಪೂರ್ವಕವಾಗಿ ತಗ್ಗಿಸುವಿಕೆ ಅಥವಾ ವರ್ಧಿಸುವಿಕೆ) ಚತುರೋಪಾಯಗಳನ್ನು ನೆಚ್ಚುವುದಕ್ಕೆ ಚಿಂತನೆ ನಡೆಸಬಹುದು.”XYZ’ ಎಂಬ ಕಂಪನಿಯ ಮೊಬೈಲ್ ಸಂಖ್ಯೆಯೊಂದನ್ನು ಬಳಸುವ ಗ್ರಾಹಕನೊಬ್ಬ ಬೇರಾವುದೇ ಕಂಪನಿಯಿಂದ ಒದಗುವ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಆಯ್ದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಅಂತರ್ಜಾಲ ಸೇವಾ ಪೂರೈಕೆದಾರ ಎಂಬ ಹೆಚ್ಚುವರಿ ಸಾಮರ್ಥ್ಯವನ್ನೂ ಹೊಂದಿರುವ “XYZ’ ಕಂಪನಿಯು ವಾಟ್ಸಾಪ್ ಅಪ್ಲಿಕೇಷನ್​ನ ವೇಗವನ್ನು ಉದ್ದೇಶಪೂರ್ವಕವಾಗಿ ತಗ್ಗಿಸಬಹುದು; ಹೀಗೆ ಮಾಡುವುದರಿಂದ ಸದರಿ ಅಪ್ಲಿಕೇಷನ್ ‘ಸ್ಪರ್ಧಾತ್ಮಕವಲ್ಲದ್ದು’ ಎನಿಸಿಕೊಳ್ಳುವುದರ ಜತೆಗೆ ಅದರ ಬಳಕೆಯನ್ನು ಕೈಬಿಡುವಂಥ ಹಾಗೂ “XYZ’ ಕಂಪನಿಗೆ ಆದಾಯ ಹರಿಸಬಲ್ಲ ಸಾಂಪ್ರದಾಯಿಕ ದೂರವಾಣಿ ಆಯ್ಕೆಗಳನ್ನು ಬಳಸಬೇಕಾಗುವಂಥ ನಿರ್ಬಂಧಕ್ಕೆ ಬಳಕೆದಾರ ಒಳಗಾಗುತ್ತಾನೆ. ಅಂತರ್ಜಾಲ ತಾಟಸ್ಥ್ಯವಿಲ್ಲದೆ ಹೋದಲ್ಲಿ, ಏಕಸ್ವಾಮ್ಯತೆಯ ವರ್ತನೆಗಿರುವ ಪ್ರತಿಬಂಧಕಗಳು ಇಲ್ಲದಂತಾಗಿ, ಪ್ರತಿಸ್ಪರ್ಧಿಗಳನ್ನು ತಡೆಯುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಅಗಾಧ ಪಾವತಿ ಸಾಮರ್ಥ್ಯವು ದಕ್ಕಿಬಿಡುತ್ತದೆ. ಹೊಸ ವ್ಯವಹಾರ ಸಂಸ್ಥೆಗಳ ಹುಟ್ಟುವಿಕೆಗೆ ಇದು ತಡೆಯೊಡ್ಡುತ್ತದೆ. ಅಂತರ್ಜಾಲ ತಾಟಸ್ಥ್ಯವಿಲ್ಲದೆ ಹೋದಲ್ಲಿ, ಹೊಸ ಮದ್ದುಗಳು/ಚಿಕಿತ್ಸಾ ವಿಧಾನಗಳು, ಪರ್ಯಾಯವಾಗಿರುವ ಮತ್ತು ಕಡಿಮೆ ಬೆಲೆಯಿರುವ ಔಷಧಗಳ ಸುದ್ದಿಯೇಳದಂತೆ ಮಾಡುವಲ್ಲಿ ಔಷಧ ಕಂಪನಿಗಳಿಗೆ ಬಲ ಬರಲೂಬಹುದು. ನ್ಯಾಯೋಚಿತವಲ್ಲದ ಮತ್ತು ಸ್ಪರ್ಧಾತ್ಮಕತೆಗೆ ವಿರುದ್ಧವಾಗಿರುವ ಇಂಥ ಪರಿಪಾಠಗಳನ್ನು ತಡೆಯಲು, ಅಂತರ್ಜಾಲ ತಾಟಸ್ಥ್ಯವನ್ನು ನಿರಂತರವಾಗಿ ಜಾರಿಯಲ್ಲಿಟ್ಟಿರಬೇಕು.

( ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top