Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಅಂತಃಶಕ್ತಿಯನ್ನು ಗುರುತಿಸುವತ್ತ ನಮ್ಮ ನೋಟವಿರಲಿ

Thursday, 23.03.2017, 8:28 AM       No Comments

ಮೊದಲಸಲ ಯಾರನ್ನು ಕಂಡಾಗಲೂ ಅವರ ಬಾಹ್ಯವ್ಯಕ್ತಿತ್ವ ಏನನ್ನೋ ಹೇಳುವಂತೆ ಪ್ರೇರೇಪಿಸಬಹುದು. ಆದರೆ ಹೇಳುವ ಮಾತುಗಳಿಗೆ ನಿಯಂತ್ರಣವಿರಬೇಕು. ಯಾಕೆಂದರೆ ನಮ್ಮ ತುಟಿಮೀರಿದ ಮಾತು ಅವರ ಜೀವನದ ಎಳೆಚಿಗುರನ್ನು ಮತ್ತೆಂದೂ ಅರಳದಂತೆ ಮುರುಟಿಸಿಬಿಡಬಹುದು. ಮಾತಿನಲ್ಲಿ ಸಂಯಮವಿದ್ದರೆ ಪರರಿಗೆ ನೋವಾಗದು.

 ಗೆಳತಿಯೊಬ್ಬಳನ್ನು ಮದುವೆಮನೆ ಒಂದರಲ್ಲಿ ಹಲವು ವರ್ಷದ ಬಳಿಕ ಭೇಟಿಯಾಗಿದ್ದೆ. ಜತೆಗೆ ಮಗಳನ್ನು ಕರೆದುಕೊಂಡು ಬಂದಿದ್ದಳು. ನನ್ನ ಪಕ್ಕವೇ ಅವಳನ್ನು ಕುಳ್ಳಿರಿಸಿ, ಯಾರೋ ಪರಿಚಿತರನ್ನು ಮಾತಾಡಿಸಲು ಹೋಗಿದ್ದಳು. ಅವಳು ದೂರದಿಂದ ಮಗಳ ಕಡೆಗೆ ಕೈತೋರಿಸಿ ಏನೋ ಹೇಳುತ್ತಿರುವುದು ಕಣ್ಣಿಗೆ ಬಿದ್ದು ‘ನೋಡು ನಿನ್ನಮ್ಮ ಅಲ್ಲಿ ಕೂಡಾ ನಿನ್ನ ಬಗ್ಗೆನೇ ಮಾತಾಡ್ತಿದ್ದಾಳೆ’ ಎಂದು ನಗೆಯಾಡಿದೆ. ಅದಕ್ಕವಳು ಸಂಕೋಚದ ಮುದ್ದೆಯಂತೆ ತಲೆತಗ್ಗಿಸಿ ಕುಳಿತುಬಿಟ್ಟಳು. ನಾನೇನು ತಪ್ಪು ಮಾತಾಡಿದೆ ಎಂದೇ ಅರ್ಥ ಆಗದೆ ಪೆಚ್ಚಾಗಿ ಕುಳಿತೆ. ಅಷ್ಟರಲ್ಲೇ ಹತ್ತಿರಬಂದ ಗೆಳತಿ ಸೊರಬರನೆ ಕಣ್ಣು-ಮೂಗು ತಿಕ್ಕುತ್ತಾ ‘ಇವಳನ್ನು ಕರ್ಕೆಂಡು ಬಂದಲ್ಲೆಲ್ಲಾ ಉತ್ತರ ಹೇಳಿಹೇಳಿ ನಂಗೆ ಸಾಕಾಗುತ್ತೆ’ ಎಂದು ಸಿಡುಕಿನ ಸ್ವರದಲ್ಲಿ ನುಡಿದಳು. ನನಗೆ ವಿಷಯ ಏನೆಂದೇ ಅರ್ಥ ಆಗದೆ ಅಯೋಮಯವಾಗಿ ಅವಳನ್ನೇ ನೋಡಿದೆ. ‘‘ಅಲ್ಲಾ ಏನು ಹೇಳಲಿ ಇವ್ರಿಗೆಲ್ಲಾ.. ಇವ್ಳನ್ನು ಯಾರು ಕಂಡರೂ ಸಾಕು ಶುರುಮಾಡ್ತಾರೆ- ‘ಮಗ್ಳಿಗೆ ಹುಡ್ಗ ನೋಡಿದ್ದೀಯಾ? ಎಷ್ಟುದ್ದ ಬೆಳ್ದಿದ್ದಾಳೆ’- ಅಂತೆಲ್ಲಾ… ಇವ್ಳಿನ್ನೂ 7ನೇ ಕ್ಲಾಸ್, ಸ್ವಲ್ಪ ಬೆಳವಣಿಗೆ ಹೆಚ್ಚು. ಉದ್ದ ಇದ್ದಾಳೆ ಅಂತ ಹೇಳಿದ್ರೆ ‘ಅಯ್ಯೋ ನಾನು ಡಿಗ್ರೀ-ಗಿಗ್ರೀ ಎಲ್ಲಾ ಮುಗ್ಸಿದಾಳೆ ಅಂದ್ಕೊಂಡಿದ್ದೆ’ ಅಂತ ಮರುಕ ಸೂಚಿಸ್ತಾರೆ. ಎಂತ ಮಾಡಿ ಸಾಯ್ಲಿ ಇವ್ರಿಗೆಲ್ಲಾ.. ’’.

‘ಅದಕ್ಯಾಕೆ ಸಿಟ್ಟು? ಮಗಳು ಉದ್ದ ಬೆಳ್ದಿದ್ದಾಳೆ ಅಂತ ಖುಷಿ ಪಡೋದ್ಬಿಟ್ಟು ಎಂತ ಮಾತಾಡ್ತೀಯಾ ನೀನು..’.

‘ಅಲ್ವೇ… ಹೋದೋರು ಬಂದೋರು ಕಂಡೋರೆಲ್ಲಾ ನಿನ್ನ ಮಗಳು ಎಷ್ಟುದ್ದ… ಮದ್ವೆ ಪ್ರಾಯ ಆಯ್ತಾ ಅಂತೆಲ್ಲಾ ಕೇಳಿದ್ರೆ ಸಿಟ್ಟು ಬರಲ್ವಾ? ಅದೂ ಅಲ್ಲದೆ, ಇವಳು ಬೇರೆ ಎಲ್ರೂ ಉದ್ದ ಅಂತಾರೆ ಅಂತ ತಲೆಬಗ್ಗಿಸಿ ನಡೆಯೋದಕ್ಕೆ ಹೋಗಿ ಬೆನ್ನು ಗೂನುಮಾಡ್ಕೊಂಡು ನಡೀತಾಳೆ. ಎಲ್ಲಿಗೆ ಬರೋದಿಕ್ಕೂ ಇಷ್ಟಪಡಲ್ಲ. ಹೀಗೆ ನಾನೇ ಒತ್ತಾಯದಲ್ಲಿ ಎಳ್ಕೊಂಡು ಬಂದ್ರೆ ಇಂಥದೆಲ್ಲಾ ಕೇಳ್ಬೇಕು ಗೊತ್ತಾ’.

‘ಮತ್ತಿನ್ನೇನು ಮಾಡ್ತಾಳೆ ನೀನು ಹೀಗಾಡಿದ್ರೆ? ಅದೇನೋ ಅವ್ಳು ಹಾಗೆ ಇರೋದೇ ತಪ್ಪು ಅನ್ನೋ ಥರ ನಿನ್ನ ವರ್ತನೆಯೂ ಇದ್ರೆ ಹಾಗೇ ಮಾಡ್ತಾಳಷ್ಟೇ. ಅವ್ಳು ಹೇಗೇ ಇದ್ರೂ ಯಾರೂ ಅದನ್ನು ಬದಲಾಯಿಸಲಿಕ್ಕೆ ಆಗೋದಿಲ್ಲ ಅಂತ ಒಪ್ತೀಯಾ ತಾನೇ? ಹೊರಗಿನವರು ಹೇಳ್ತಾರೆ ಅಂತ ನೀನೂ ಯಾಕೆ ಅದನ್ನೇ ಒಪ್ಪಿಕೊಂಡು ಅವಳು ಉದ್ದ ಇರೋದೇ ತೊಂದ್ರೆ ಅನ್ನೋಹಾಗೆ ನಡವಳಿಕೆಯಲ್ಲಿ ತೋರಿಸಿಕೊಳ್ತೀಯಾ? ನಿಂಗೆ ನಮ್ಮ ಲೀಲಾವತಿ ಮೇಡಂ ಅಷ್ಟು ಬೇಗ ಮರೆತುಹೋದ್ರಾ?’.

‘ನಮ್ಮ ಮ್ಯಾತ್ಸ್ ಮೇಡಂ ಅಲ್ವಾ.. ಅವ್ರನ್ನು ಹ್ಯಾಗೆ ಮರೀಲಿ. ಅದೂ ಅಲ್ಲದೆ ಗಣಿತದಲ್ಲಿ ನಾನೇ ಕ್ಲಾಸಿಗೆ ಟಾಪರ್ ಅನ್ನೋದು ನಿನಗೆ ಮರೆತಿದೆಯಾ ಹೇಗೆ? ಆದ್ರೆ ಇವ್ಳು ಉದ್ದ ಆಗಿರೋದಕ್ಕೆ ಅವ್ರ್ಯಾಕೆ ನೆನಪಾಗೋದು?’.

‘ನೀನು ಅವರ ಕ್ಲಾಸಿನಲ್ಲಿ ಬರೀ ಪಾಠ, ಪುಸ್ತಕದೊಳಗಿರೋ ಗಣಿತ ಮಾತ್ರ ಕಲಿತಿದ್ದು. ಅದರ ಹೊರತಾಗಿ ಮಾಡ್ತಿದ್ದ ಜೀವನದ ಲೆಕ್ಕಾಚಾರ ನಿನ್ನ ತಲೆಗಿಳೀಲಿಲ್ಲ ಅನ್ಸುತ್ತೆ. ಪಾಠ ಮುಗಿಸಿದ ಕೂಡಲೇ ಅವ್ರು ಮಾತಾಡ್ತಿದ್ದ ವಿಷಯಗಳು ಆಗ ಸುಮ್ಮನೆ ಭಾಷಣಗಳಂತೆ ತೋರಿದರೂ ಅದರೊಳಗಿನ ಸತ್ಯ ಅನುಭವಕ್ಕೆ ಬರುತ್ತಿದ್ದ ಹಾಗೇ ಅವು ಜೀವನದ ಮರೆಯಲಾರದ ಅಧ್ಯಾಯಗಳಾಗಿಬಿಟ್ಟವು. ನೆನಪಾಗ್ತಿದೆಯಾ..’.

ನನ್ನ ಜತೆಜತೆಗೆ ಅವಳೂ ನೆನಪಿನಾಳಕ್ಕೆ ಇಳಿದಳು.

‘ಸರ್ಕಲ್ ಅಂದರೇನು? ಸರ್ಕಲ್ ಅಂದರೆ ರೌಂಡ್ ಆಂಡ್ ರೌಂಡ್ ಆಂಡ್ ರೌಂಡ್ ಆಬ್ಜೆಕ್ಟ್ ಲೈಕ್ ಮಿ’- ಲೀಲಾವತಿ ಮೇಡಂ ತಮ್ಮ ಕಂಚಿನ ಕಂಠದಲ್ಲಿ ನಮ್ಮ ಪಿಯುಸಿ ಕ್ಲಾಸಿಗೆ ಪಾಠಮಾಡುತ್ತಾ ನಗಿಸುತ್ತಿದ್ದರೆ ನಮಗದು ಗಣಿತದ ತರಗತಿ ಎನ್ನುವುದೇ ಮರೆತುಹೋಗಿ ಘೂಳ್ಳನೆ ನಗುತ್ತಿದ್ದೆವು. ‘ನೋಡಿ ಮಕ್ಕಳೇ ಯಾರಾದ್ರೂ ಲೀಲಾವತಿ ಮೇಡಂ ಯಾವ ಕ್ಲಾಸಲ್ಲಿದ್ದಾರೆ ಅಂತ ಹುಡುಕಲು ಹೊರಟರೆ ಸುಲಭದಲ್ಲಿ ನನ್ನನ್ನು ಟ್ರೇಸ್ ಮಾಡಬಹುದು. ದೊಡ್ಡಸ್ವರ ಯಾವ ಕ್ಲಾಸಿನಿಂದ ಕೇಳ್ತಾ ಇದೆ ಅಂತ ಮೊದಲು ಹುಡುಕುತ್ತಾ ಹೋಗಿ. ಆ ಕ್ಲಾಸಿನಲ್ಲಿ ಬೋರ್ಡ್ ನೋಡಿದರೆ ಗಣಿತದ ಪ್ರಮೇಯಗಳು ಮತ್ತು ಪಾಠ ಮಾಡುವವರನ್ನು ನೋಡಿದರೆ ಸೊನ್ನೆಯಂತಿರುವವರು ಕಂಡರೆ ಅವರೇ ಲೀಲಾವತಿ ಅಂತ ಫಕ್ಕನೆ ಗುರುತು ಹಿಡಿಯಬಹುದು ಅಲ್ವಾ..’. ಮತ್ತೆ ನಗು ಹರಡಿಕೊಳ್ಳುತ್ತಿತ್ತು. ಆಗ ನನಗೆ ಆ ಮಾತಿನ ಹಿಂದಿರುವ ನೋವು ಅರಿವಾಗುತ್ತಿರಲಿಲ್ಲ ಮತ್ತು ಅದನ್ನವರು ದಾಟಿಬಂದ ರೀತಿ ತಿಳಿಯುತ್ತಿರಲಿಲ್ಲ. ಆದರೆ ಪಾಠ ಪುಸ್ತಕಗಳ ಲೋಕ ಬಿಟ್ಟು ನಿಜಜೀವನವನ್ನು ಎದುರಿಸುವಾಗ ಈ ಎಲ್ಲ ಅನುಭವಗಳು ನನ್ನದೇ ಆದಾಗ ಆ ನೋವಿನಾಳ ಕೈಗೆಟುಕಿತ್ತು.

ಆಗ ಅವರೇ ಹೇಳುತ್ತಿದ್ದ ಮಾತೊಂದು ಮಾಂತ್ರಿಕದಂಡದಂತೆ ಕೆಲಸಮಾಡಿತ್ತು- ‘ನಿಮ್ಮ ಬಗ್ಗೆ ನೀವೇ ಆಡಿಕೊಂಡು ನಕ್ಕುಬಿಡಿ. ಇದರಿಂದ ಬೇರೆಯವರು ನಿಮ್ಮನ್ನು ಅಪಹಾಸ್ಯ ಮಾಡುವ ಅವಕಾಶ ಕಳೆದುಕೊಳ್ಳುತ್ತಾರೆ’. ಆಗೆಲ್ಲ ಇದು ಹೇಗೆ ಸಾಧ್ಯ ಎಂದೆನಿಸುತ್ತಿತ್ತು. ಆದರೆ ಕಾಲ ಕಳೆದಂತೆ ಅವರ ಮಾತುಗಳು ಅನುಕರಣೀಯ ಎನ್ನುವುದು ನನ್ನರಿವಿಗೆ ಬಂದಿತ್ತು. ಅರ್ಧ ಅಡಿ ಎತ್ತರದ ಹಿಮ್ಮಡಿಯ ಚಪ್ಪಲಿ ಕಾಲಿಗೆ ಸಿಕ್ಕಿಸಿಕೊಂಡ ಮೇಲೂ ಐದಡಿಗಿಂತ ಒಂದೆರಡು ಇಂಚಷ್ಟೇ ಎತ್ತರ ಕಾಣಿಸುವ ನಾನು ಬೇರೆಯವರ ಲೇವಡಿಗೆ ಸುಲಭ ವಸ್ತುವಾಗಿಬಿಡುವ ಅಪಾಯವನ್ನು ನಿವಾರಿಸಿಕೊಂಡದ್ದು ಲೀಲಾವತಿ ಮೇಡಂ ಹೇಳಿಕೊಟ್ಟ ಮಾತುಗಳನ್ನನುಸರಿಸಿಯೇ. ನನ್ನನ್ನು ಕೀಳರಿಮೆಯತ್ತ ಕರೆದುಕೊಂಡು ಹೋಗುವುದನ್ನು ತಡೆದಿದ್ದು ಅವರ ಮಾತುಗಳೇ.

ಆಗಷ್ಟೇ ಮನೆಯ ರಿನೊವೇಷನ್ ಆಗುತ್ತಿತ್ತು. ಅಡುಗೆಮನೆಯ ಮೇಲಿನ ಶೆಲ್ಪ್ ಕೈಗೆಟುಕಲು ಕಾಲಡಿಗೆ ಮಣೆ ಇಟ್ಟರೂ ಕಾಲೆತ್ತರಿಸಬೇಕಾದ ಪರಿಸ್ಥಿತಿ ನನ್ನದು. ಮನೆ ನೋಡಲು ಬಂದವರೊಬ್ಬರು ಅಡುಗೆ ಕೋಣೆಯಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನನ್ನು ನೋಡಿ ಕೊಂಚ ವ್ಯಂಗ್ಯದಲ್ಲೇ ‘ಈ ಶೆಲ್ಪಿನಲ್ಲಿ ಏನಾದರೂ ಇಟ್ಟರೆ ನೀನು ಸರ್ಕಸ್ಸೇ ಮಾಡ್ಬೇಕಷ್ಟೇ’ ಎಂದು ನಗೆಯಾಡಿದರು. ನಾನು ಗುಟ್ಟಿನಲ್ಲಿ ಎಂಬಂತೆ ‘ನೋಡಿ, ಇದರಿಂದ ನಂಗೇ ತುಂಬಾ ಲಾಭ ಆಗಿದೆ. ಆ ಶೆಲ್ಪಿನಲ್ಲಿ ಏನೇ ಸಾಮಾನು ಇಟ್ಟಿದ್ರೂ ನಾನಂತೂ ತೆಗೆಯುವ ಗೋಜಿಗೇ ಹೋಗೋದಿಲ್ಲ. ಯಾರನ್ನಾದರೂ ಕರೆದು ಆ ಕೆಲ್ಸ ಅವ್ರು ಮಾಡುವಂತೆ ಮಾಡ್ತೀನಿ. ಒಂದು ಕೆಲ್ಸ ಉಳಿದದ್ದು ನಂಗೆ ಲಾಭವೇ ತಾನೇ’ ಎಂದೆ. ಅವರು ಪೆಚ್ಚುಪೆಚ್ಚಾಗಿ ‘ಹ್ಹೆ ಹ್ಹೆ’ ಎಂದು ಹೊರಹೋದರು.

ದೈಹಿಕ ಸೌಂದರ್ಯ ಮನುಷ್ಯನ ಮೊದಲನೋಟಕ್ಕೆ ಸಿಲುಕುವಂಥದ್ದು ಎಂಬ ಮಾತು ನಿಜ. ಆದರೆ ಅದೊಂದನ್ನು ಪಡೆದದ್ದೇ ಆದರೆ ಜೀವನ ಸಫಲ ಎಂಬ ಮಾತಂತೂ ಸುಳ್ಳು. ಉದ್ದ, ಗಿಡ್ಡ, ಕಪ್ಪು, ಬಿಳಿ, ದಪ್ಪ, ಸಪುರ ಇವುಗಳು ನಮ್ಮನ್ನು ಗುರುತಿಸುವ ಗುಣಗಳಾಗುವುದಕ್ಕಿಂತ ಮಿಗಿಲಾಗಿ ನಾವು ಬೆಳೆಯಬೇಕಿರುವುದು ಮುಖ್ಯ. ಇಂತಹ ಮಾತುಗಳನ್ನು ಮೇಲಿನಿಂದ ಮೇಲೆ ಕೇಳುತ್ತಾ ಹೋದಲ್ಲಿ ನಾವೇನು ಎಂಬ ಅರಿವಿಲ್ಲದ ವಯಸ್ಸಿನಲ್ಲಿ ಒಂದು ರೀತಿಯ ಹಿಂಜರಿಕೆ ಮನದೊಳಗೆ ಹುಟ್ಟಿಕೊಳ್ಳಬಹುದು. ಆದರೆ ಅದನ್ನು ನಿವಾರಿಸುವುದು ನಮ್ಮಿಂದ ಖಂಡಿತಾ ಸಾಧ್ಯ.

ಮುಖ್ಯವಾಗಿ ಮಕ್ಕಳನ್ನು ಇನ್ನೊಬ್ಬರ ಜತೆ ಹೋಲಿಸಿ ಇವಳು ಕಪ್ಪು, ಇವಳು ಬಿಳಿ, ಇವನು ದಪ್ಪ, ಇವಳು ಕಡ್ಡಿ ಎಂದೆಲ್ಲಾ ಬ್ರ್ಯಾಂಡ್ ಮಾಡುವುದನ್ನು ಬಿಡಬೇಕು. ನಮ್ಮ ಯೋಗ್ಯತೆ ಅಳೆಯಲ್ಪಡುವುದು ಬಾಹ್ಯ ನಿಲುವಿನಿಂದ ಖಂಡಿತಾ ಅಲ್ಲ. ಯಾವುದನ್ನು ಜಗತ್ತು ಸೌಂದರ್ಯ ಎಂದು ಒಪ್ಪಿಕೊಳ್ಳುತ್ತದೋ ಅದು ನಿಮ್ಮಲ್ಲೂ ಇದೆ ಎಂದರೆ ಸುಂದರ ಹೂವಿಗೆ ಇನ್ನಷ್ಟು ಸುಗಂಧ ಸೇರಿದಂತೆ ಮಾತ್ರವಷ್ಟೇ. ಕೇವಲ ಬಾಹ್ಯನೋಟವೊಂದೇ ನೀವಲ್ಲ, ನೀವಾಗಲೂಬಾರದು. ಅದರಿಂದ ಮಿಗಿಲಾದ ವಿಶೇಷತೆಯನ್ನು ಪ್ರಕಟಪಡಿಸಲು ಪ್ರತಿಯೊಬ್ಬನಲ್ಲೂ ಅಂತಃಶಕ್ತಿ ತುಂಬಿರುತ್ತದೆ. ಅದನ್ನು ಗುರುತಿಸುವತ್ತ ನಮ್ಮ ನೋಟವಿರಲಿ. ಮೊದಲಸಲ ಯಾರನ್ನು ಕಂಡಾಗಲೂ ಅವರ ಬಾಹ್ಯವ್ಯಕ್ತಿತ್ವ ಏನನ್ನೋ ಹೇಳುವಂತೆ ಪ್ರೇರೇಪಿಸಬಹುದು. ಆದರೆ ಹೇಳುವ ಮಾತುಗಳಿಗೆ ನಮ್ಮಲ್ಲೇ ನಿಯಂತ್ರಣವಿರಲಿ. ಯಾಕೆಂದರೆ ನಾವಾಡುವ ಒಂದು ಮಾತು ಕೂಡಾ ಅವರ ಜೀವನದ ಎಳೆಚಿಗುರನ್ನು ಮತ್ತೆಂದೂ ಅರಳದಂತೆ ಮುರುಟಿಸಿಬಿಡಬಹುದು. ಆ ಎಚ್ಚರಿಕೆ ನಮ್ಮಳೊಗಿದ್ದು ಮಾತು ಹೊರಬರುವ ಮೊದಲೊಂದಿಷ್ಟು ಸಂಯಮವೂ ಇದ್ದರೆ ನೋವಾಗುವುದನ್ನು ತಡೆಯಬಹುದು.

ನನ್ನ ಪರಿಚಿತರೊಬ್ಬರ ಮಡದಿ ಮದುವೆಯಾಗುವಾಗ ಇದ್ದ ಮುಖದ ಸೌಂದರ್ಯವನ್ನು ಬೆಂಕಿ ಆಕಸ್ಮಿಕದಿಂದ ಕಳೆದುಕೊಳ್ಳಬೇಕಾಯ್ತು. ಆದರೆ ಆಕೆ ಅದನ್ನು ಎದುರಿಸಿದ ರೀತಿ ಅನನ್ಯ. ಮನೆಯ ಕೋಣೆಯೊಳಗಿನ ಎದುರಿನ ಗೋಡೆಯಲ್ಲಿ ತನ್ನ ಮೊದಲಿನ ಫೋಟೋ ಒಂದನ್ನು ಹಾಕಿಸಿದ್ದರು. ಯಾರು ನುಗ್ಗಿದರೂ ಮೊದಲಿಗೆ ಆ ಫೋಟೋ ಕಣ್ಣಿಗೆ ಬೀಳುತ್ತಿತ್ತು. ಮೊದಲಸಲ ಯಾರಾದರೂ ಅವರನ್ನು ಭೇಟಿಯಾದ್ರೆ ಅವರು ‘ಇದು ನೋಡಿ ನನ್ನ ಹಿಂದಿನಜನ್ಮದ ಮುಖ; ನಿಮಗೆ ನನ್ನನ್ನು ಈಗ ನೋಡಲು ಕಷ್ಟವಾದರೆ ಇದನ್ನು ನೋಡುತ್ತಾ ಮಾತನಾಡಬಹುದು’ ಎಂದು ತುಟಿಗಳಲ್ಲಿ ನಗೆಯರಳಿಸುತ್ತಾ ಹೇಳುತ್ತಿದ್ದರು. ಎಲ್ಲಿಯೂ ವಿಷಾದದ ಛಾಯೆಯಿರುತ್ತಿರಲಿಲ್ಲ. ಅನುಕಂಪ ಸೂಚಿಸುವ ಮಾತುಗಳನ್ನು ಅವರು ಬಯಸುತ್ತಿರಲಿಲ್ಲ. ಇದರಿಂದಾಗಿ ಅವರನ್ನು ಭೇಟಿಯಾದವರಿಗೆ ಅವರ ಬಾಹ್ಯಸೌಂದರ್ಯದ ಬಗ್ಗೆ ಕಮೆಂಟ್ ಮಾಡುವ ಧೈರ್ಯ ಕಡಿಮೆಯಾಗುತ್ತಿತ್ತು. ಅವರ ಆತ್ಮವಿಶ್ವಾಸದ ಮಾತುಗಳೇ ಅವರ ಸೌಂದರ್ಯವಾಗಿತ್ತು.

ನಮ್ಮಲ್ಲಿನ ಕುಂದುಕೊರತೆಗಳನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಅದು ಇನ್ನೊಬ್ಬನ ಕಣ್ಣಿಗೆ ನಗಣ್ಯವಾಗಿ ಕಾಣುವಂತೆ ಅದನ್ನು ಮೀರಿ ಬದುಕಿಬಿಡಬೇಕು.

Leave a Reply

Your email address will not be published. Required fields are marked *

Back To Top